samachara
www.samachara.com
ಕಣ್ಣಲ್ಲಿ ಹೃದಯ ಇಟ್ಟುಕೊಂಡ ನೇತ್ರರಾಜು & ವೈರಲ್‌ ಆದ ದಸರಾ ಫೊಟೋ ಹಿಂದಿನ ನೋವಿನ ಕತೆ!
FEATURE STORY

ಕಣ್ಣಲ್ಲಿ ಹೃದಯ ಇಟ್ಟುಕೊಂಡ ನೇತ್ರರಾಜು & ವೈರಲ್‌ ಆದ ದಸರಾ ಫೊಟೋ ಹಿಂದಿನ ನೋವಿನ ಕತೆ!

ಭಿನ್ನ ಆಲೋಚನೆ, ಜತೆಗಿಷ್ಟು ಅಂತಃಕರಣ; ಪರಿಣಾಮ ಮೈಸೂರ ದಸರಾದ ವೈರುಧ್ಯವನ್ನು ಅರ್ಥವತ್ತಾಗಿ ಜನರಿಗೆ ತಲುಪಿಸಿದ ಚಿತ್ರ ಸೆರೆಯಾಗುತ್ತದೆ.

‘ಚಿತ್ರಗಳು ಕಥೆ ಹೇಳುತ್ತವೆ’ ಎಂಬುದು ಅತಿಶಯೋಕ್ತಿಯಲ್ಲ. ಅದಕ್ಕೆ ಕಣ್ಣ ಮುಂದಿರುವ ಲೇಟೆಸ್ಟ್ ಉದಾಹರಣೆ ಮೈಸೂರು ದಸರಾ ಹಿನ್ನೆಲೆಯಲ್ಲಿ ಛಾಯಾಗ್ರಾಹಕ ನೇತ್ರ ರಾಜು ಅವರು ತೆಗೆದಿರುವ ಮೇಲಿನ ಚಿತ್ರ. ಹೀಗೊಂದು ಚಿತ್ರ ಹುಟ್ಟಿದ್ದು, ಅದರ ಹಿನ್ನೆಲೆಯಲ್ಲಿ ನಡೆದ ಬೆಳವಣಿಗೆಗಳು ಕುತೂಹಲಕಾರಿ ಮತ್ತು ಸ್ವಾರಸ್ಯಕರವಾಗಿವೆ.

“ಮೂರು ದಿನಗಳ ಹಿಂದೆಯೇ ನಾನು ಈ ಚಿತ್ರವನ್ನು ಸೆರೆ ಹಿಡಿದಿದ್ದೆ. ಟೈಮ್ಸ್ ಆಫ್ ಇಂಡಿಯಾದ ಫೋಟೋಗ್ರಾಫರ್ ಆಗಿ ನಿವೃತ್ತನಾಗಿರುವ ನಾನು ನನ್ನ ಸೀಮಿತ ಅವಕಾಶದಲ್ಲಿ ಪತ್ರಿಕೆಯೊಂದರಲ್ಲಿ ಈ ಚಿತ್ರ ಬರಲಿ ಎಂದುಕೊಂಡಿದ್ದೆ. ಹಾಗೆಯೇ ನನ್ನ ಗೆಳೆಯರಿಗೆ ಕಳುಹಿಸಿಕೊಟ್ಟೆ. ಆದರೆ ಫೋಟೋ ಚೆನ್ನಾಗಿದೆ ಎಂದರೇ ವಿನಃ ಯಾರೂ ಪ್ರಕಟಿಸುವ ಮನಸ್ಸು ಮಾಡಲಿಲ್ಲ,” ಎಂದು ಸ್ವತಃ ನೇತ್ರ ರಾಜು ಚಿತ್ರದ ಹಿಂದಿನ ಕತೆಯನ್ನು ‘ಸಮಾಚಾರ’ಕ್ಕೆ ವಿವರಿಸುತ್ತಾ ಹೋದರು.

ಸಾಮಾಜಿಕ ಜಾಲತಾಣಗಳಲ್ಲಿ ಇವತ್ತು ದೊಡ್ಡ ಸಂಖ್ಯೆ ಜನರಿಂದ ಪ್ರಶಂಸೆಗೆ ಕಾರಣವಾದ ಚಿತ್ರವನ್ನು ಯಾಕೆ ಯಾವ ಪತ್ರಿಕೆಯೂ ಪ್ರಕಟಿಸಲಿಲ್ಲ? ಉತ್ತರವನ್ನು ನೀವೇ ಊಹಿಸಿಕೊಳ್ಳಬೇಕು. ಮೈಸೂರು ದಸರಾ, ಅದರ ವೈಭವ ಮತ್ತು ದೀಪಾಲಂಕಾರದ ಪಕ್ಕದ ಕತ್ತಲನ್ನು ಸೆರೆ ಹಿಡಿದ ಚಿತ್ರ ಸಮಾಜದ ವೈರುಧ್ಯವನ್ನು ಎತ್ತಿ ಹಿಡಿಯುತ್ತಿದೆ. ಹೀಗೊಂದು ಚಿತ್ರವನ್ನು ಸೆರೆ ಹಿಡಿದ ನೇತ್ರ ರಾಜು ಪತ್ರಿಕೆಗಳಲ್ಲಿ ಬರಲಿ ಎಂದು ಕಳುಹಿಸಿ ಸುಮ್ಮನಾದರು. ಆದರೆ ಎರಡು ದಿನ ಕಳೆದರೂ ಎಲ್ಲಿಯೂ ಪ್ರಕಟವಾಗದ ಹಿನ್ನೆಲೆಯಲ್ಲಿ, ಸ್ನೇಹಿತರೊಬ್ಬರಿಗೆ ವಾಟ್ಸಾಪ್‌ ಮಾಡಿದರು.

ಕಣ್ಣಲ್ಲಿ ಹೃದಯ ಇಟ್ಟುಕೊಂಡ ನೇತ್ರರಾಜು & ವೈರಲ್‌ ಆದ ದಸರಾ ಫೊಟೋ ಹಿಂದಿನ ನೋವಿನ ಕತೆ!

“ಅದನ್ನೂ ಕೂಡ ನಾನು ನಿರೀಕ್ಷೆ ಇಟ್ಟುಕೊಂಡೇನೂ ಮಾಡಲಿಲ್ಲ. ಉಡಾಫೆಯಿಂದ ‘ಸುಮ್ಮನೆ ಇರಲಿ’ ಎಂದು ನಾನು ವಾಟ್ಸಾಪ್ ಮಾಡಿದೆ. ಕೆಲವೇ ಹೊತ್ತಿನಲ್ಲಿ ನನಗೆ ಕರೆಗಳು ಬರಲು ಆರಂಭವಾಯಿತು,” ಎಂದು ನೇತ್ರ ರಾಜು ತಮ್ಮ ಅದ್ಭುತ ಚಿತ್ರ ಬೆಳಕಿಗೆ ಬಂದ ಬಗೆಯನ್ನು ನೆನಪಿಸಿಕೊಂಡರು.

"ನಾನು ಈ ಚಿತ್ರ ಇಷ್ಟೊಂದು ವೈರಲ್ ಆಗುತ್ತದೆ ಎಂದುಕೊಂಡಿರಲಿಲ್ಲ. ನಾನದನ್ನು ನನ್ನ ಫೇಸ್ಬುಕ್ ಖಾತೆಗೂ ಹಾಕಿರಲಿಲ್ಲ. ಕೊನೆಗೆ ನೋಡಿದರೆ ಈ ಚಿತ್ರವನ್ನು ಜನ ನನಗೇ ಕಳುಹಿಸಿದ್ದರು,’’ ಎಂದು ನಗುತ್ತಾರೆ. ಜತೆಗೆ, ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಹೇಗೆ ಮುಖ್ಯವಾಹಿನಿಯ ಮಾಧ್ಯಮಗಳ ಜಾಣ ಕುರುಡಿಗೆ ಹೇಗೆಲ್ಲಾ ಮದ್ದು ಅರೆಯಲಾಗುತ್ತದೆ ಎಂಬುದಕ್ಕೆ ಅವರು ಸಾಕ್ಷಿಯಾದರು ಕೂಡ.

ಚಿತ್ರಗಳ ಮೂಲಕ ತಾನೇನು ಹೇಳಬೇಕೆಂದಿದ್ದೆ ಎಂಬುದನ್ನು ಜನ ಸಾಮನ್ಯರು ಅರ್ಥ ಮಾಡಿಕೊಂಡಿದ್ದಾರೆ ಎಂಬ ಸಂತೃಪ್ತಿ ಭಾವ ಅವರ ಮಾತಿನಲ್ಲಿ ಇಣುಕುತ್ತಿತ್ತು. ಹೀಗೊಂದು ಚಿತ್ರವನ್ನು ಸೆರೆ ಹಿಡಿಯಬೇಕು ಎಂಬುದು ನನ್ನ ಬಹು ದಿನಗಳ ಕನಸಾಗಿತ್ತು ಎನ್ನುತ್ತಾರೆ ಅವರು. ಅದಕ್ಕಾಗಿ ಅವರು ನಡೆಸಿದ ಪ್ರಯತ್ನಗಳನ್ನು ಅವರ ಫೇಸ್ಬುಕ್ ಖಾತೆಯಲ್ಲಿರುವ ಚಿತ್ರಗಳು ಸಾರಿ ಹೇಳುತ್ತವೆ. ಆದರೆ ಬೇರೆ ಬೇರೆ ಕಾರಣಗಳಿಗೆ ಇಂಥಹದ್ದೊಂದು ಚಿತ್ರ ನನಗೆ ಸಿಕ್ಕಿರಲೇ ಇಲ್ಲ ಎನ್ನುತ್ತಾರೆ ಅವರು.

2013ರಲ್ಲೇ ಮಾವುತರ ಕುಟುಂಬಗಳು ಮತ್ತು ಅರಮನೆ ಇಟ್ಟುಕೊಂಡು ತೆಗೆದ ಚಿತ್ರಗಳು
2013ರಲ್ಲೇ ಮಾವುತರ ಕುಟುಂಬಗಳು ಮತ್ತು ಅರಮನೆ ಇಟ್ಟುಕೊಂಡು ತೆಗೆದ ಚಿತ್ರಗಳು
/ನೇತ್ರ ರಾಜು ಫೇಸ್ಬುಕ್

ಅರಮನೆ ಮತ್ತು ಅಲ್ಲಿನ ಮಾವುತರ ಜೀವನದ ನಡುವಿನ ಅಂತರವನ್ನು ಸೆರೆ ಹಿಡಿಯುವುದು ನೇತ್ರ ರಾಜು ಅವರ ಆಲೋಚನೆಯಾಗಿತ್ತು. ಅದಕ್ಕಾಗಿ ಸರ್ಕಸ್ ಮಾಡುತ್ತಲೇ ಬಂದಿದ್ದರು. “ನಾನು ಹಲವು ವರ್ಷಗಳಿಂದ ಈ ಮಾವುತರ ಜೀವನವನ್ನು ನೋಡುತ್ತಾ ಬಂದಿದ್ದೇನೆ. ದಸರಾ ಸಂದರ್ಭದಲ್ಲಿ ಅರಮನೆ ಮುಂಭಾಗ ಸುಮಾರು 30 ಕುಟುಂಬಗಳಿಗೆ ಬೃಹತ್ ಟೆಂಟ್ ನಿರ್ಮಾಣ ಮಾಡುತ್ತಾರೆ. ಮನೆಯಲ್ಲಿರುವ ಗಂಡು ಮಕ್ಕಳು ಆನೆಗಳ ಕೆಲಸದಲ್ಲಿ ತೊಡಗಿಸಿಕೊಂಡರೆ, ಹೆಣ್ಣು ಮಕ್ಕಳು ಸಂಜೆಯಾಗುತ್ತಿದ್ದಂತೆ ಮನೆ ಕೆಲಸದಲ್ಲೇ ನಿರತರಾಗಿರುತ್ತಾರೆ. ಕೂಗಳತೆ ದೂರದಲ್ಲಿ ಅರಮನೆ ಇದ್ದರೂ ಅವರು ಆ ಕಡೆ ಹೋಗುವುದಿಲ್ಲ. ಅರಮನೆಗೂ ಅವರಿಗೂ ಅಂತರವಿದೆ,” ಎಂಬ ಅಭಿಪ್ರಾಯ ಮುಂದಿಡುತ್ತಾರೆ ನೇತ್ರ ರಾಜು.

“ನನಗೆ ಮಕ್ಕಳು, ಬಾಲ ಕಾರ್ಮಿಕರ ಸುತ್ತ ಚಿತ್ರಗಳನ್ನು ತೆಗೆಯುವ ಹುಚ್ಚಿದೆ. ಅದೇ ರೀತಿ ಚಿತ್ರ ತೆಗೆಯಲೆಂದು ಹೋದೆ. ಆದರೆ ಕ್ಯಾಮೆರಾ ಕಂಡಿದ್ದೇ ಅವರು ಜಾಗ್ರತರಾಗಿ ತಮ್ಮ ಫೋಟೋ ಸೆರೆ ಹಿಡಿಯಲಿ ಎನ್ನುವಂತೆ ಪೋಸ್ ನೀಡುತ್ತಿದ್ದರು. ಆಕೆ ತಾಯಿ ಮಗುವನ್ನು ಎತ್ತಿಕೊಳ್ಳುವುದು, ಪಕ್ಕದಲ್ಲಿ ನಿಲ್ಲಿಸುವುದು ಹೀಗೆಲ್ಲಾ ಮಾಡುತ್ತಿದ್ದರು. ಕ್ಯಾಮೆರಾ ಕೈಲಿತ್ತು, ಆದರೆ ನನಗೆ ಐಡಿ ಕಾರ್ಡ್ ಬೇರೆ ಇರಲಿಲ್ಲ. ಹೀಗಾಗಿ ನಾನು ಏನು ಸೆರೆ ಹಿಡಿಯುತ್ತಿದ್ದೇನೆ ಎಂಬ ಬಗ್ಗೆ ಅವರಿಗೂ ಕುತೂಹಲವಿತ್ತು,” ಎಂದು ಚಿತ್ರ ಸೆರೆಯಾಗುವ ಕೆಲ ಸಮಯ ಮುಂಚೆ ನಡೆದಿದ್ದು ಏನು ಎಂಬುದನ್ನು ನೇತ್ರ ರಾಜು ವಿವರಿಸುತ್ತಾರೆ.

“ಸುಮಾರು ಹೊತ್ತು ಅಲ್ಲೇ ಇದ್ದಾಗ ಯಾವುದೋ ಒಂದು ಕ್ಷಣದಲ್ಲಿ ತಾಯಿ ಮಗ ಅರಮನೆ ನೋಡುತ್ತಾ ನಿಂತರು. ಮೊದಲಿಗೆ ಚಿತ್ರ ಸೆರೆ ಹಿಡಿದಾಗ ಅವರಿಬ್ಬರೇ ಕಾಣಿಸುತ್ತಿದ್ದರು. ಅರಮನೆ ಕಾಣಿಸುತ್ತಿರಲಿಲ್ಲ. ನನಗೆ ಅರಮನೆ ಬರಬೇಕಾಗಿತ್ತು. ಸಾಕಷ್ಟು ಸರ್ಕಸ್ ಮಾಡಿದ ನಂತರ ಕೊನೆಗೂ ಸೆರೆ ಹಿಡಿದು ನಿಟ್ಟಿಸುರು ಬಿಟ್ಟೆ,” ಎಂದು ವೃತ್ತಪರ ಛಾಯಾಗ್ರಾಹಕ ನೇತ್ರ ರಾಜು ತಮ್ಮ ಕೆಲಸ ನೀಡಿದ ಆತ್ಮತೃಪ್ತಿಯನ್ನು ಬಿಚ್ಚಿಟ್ಟರು.

ನೇತ್ರ ರಾಜು ಪರಿಚಯ:

ಮೈಸೂರು ಭಾಗಗಳಲ್ಲಿ ಹಾಗೂ ಪತ್ರಿಕೋದ್ಯಮದಲ್ಲಿ ನೇತ್ರ ರಾಜು ಅವರದ್ದು ಪರಿಚಿತ ಹೆಸರು. ಮೊನ್ನೆ ಮೊನ್ನೆವರೆಗೂ ಅವರು ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಫೊಟೋಗ್ರಾಫರ್ ಆಗಿದ್ದರು. ಸದ್ಯ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಆದರೆ ಕ್ಯಾಮೆರಾ ಸಹವಾಸ ಮಾತ್ರ ಇನ್ನೂ ನಿಂತಿಲ್ಲ.

ನೇತ್ರ ರಾಜು
ನೇತ್ರ ರಾಜು
/ಫೇಸ್‌ಬುಕ್‌

"ನೇತ್ರ ರಾಜು ಮಾತು ಕಡಿಮೆ. ಅವರ ಕೆಲಸದ ಕೌಶಲ್ಯ ಅರ್ಥವಾಗಬೇಕು ಅಂದರೆ ರಂಗಾಯಣ ನಡೆಸುವ ಮಕ್ಕಳ ಬೇಸಿಗೆ ಶಿಬಿರ ಹಾಗೂ ಬಹುರೂಪಿ ನಾಟಕೋತ್ಸವದ ಚಿತ್ರಗಳನ್ನು ಗಮನಿಸಬೇಕು. ಅವರು ಇಡುವ ಫ್ರೇಮ್‌ಗಳು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಅವರ ಕಣ್ಣಿನೊಳಗೆ ಹೃದಯ ಇಟ್ಟುಕೊಂಡು ಚಿತ್ರಗಳನ್ನು ತೆಗೆಯುತ್ತಾರೆ. ಬರೀ ಫೊಟೋಗ್ರಫಿ ಮಾತ್ರವಲ್ಲ, ಅವರ ಬದುಕು ಕೂಡ ಹಾಗೆಯೇ. ಅನಾಥ ಮಕ್ಕಳಿಗಾಗಿ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಒಡನಾಡಿ ಸಂಸ್ಥೆ ಜತೆ ಕೆಲಸ ಮಾಡುತ್ತಿದ್ದಾರೆ,’’ ಎನ್ನುತ್ತಾರೆ ನೇತ್ರ ರಾಜು ಅವರನ್ನು ಕಾಲೇಜಿನ ದಿನಗಳಿಂದಲೇ ಬಲ್ಲ ಪತ್ರಕರ್ತ ಎಚ್. ಎಸ್. ಅವಿನಾಶ್.

ನೇತ್ರ ರಾಜು ಅವರ ವೃತ್ತಿಪರತೆ ಇತರರಿಗಿಂತ ವಿಶೇಷವಾಗಿತ್ತು ಎಂಬುದಕ್ಕೆ ಹೀಗೊಂದು ಘಟನೆಯನ್ನು ಅವಿನಾಶ್ ನೆನಪು ಮಾಡಿಕೊಳ್ಳುತ್ತಾರೆ. “ಅಬ್ದುಲ್ ಕಲಾಂ ಮೈಸೂರಿಗೆ ಬಂದಿದ್ದರು. ಸುತ್ತೂರು ಮಠಕ್ಕೆ ಅವರ ಭೇಟಿ ಕಾರ್ಯಕ್ರಮ ಇತ್ತು. ಮೈಸೂರಿನ ಪತ್ರಕರ್ತರು ವಾರ್ತಾ ಇಲಾಖೆ ವಾಹನದಲ್ಲಿ ರಾಷ್ಟ್ರಪತಿ ವಾಹನವನ್ನು ಹಿಂಬಾಲಿಸುತ್ತಿದ್ದೆವು. ಆದರೆ ನೇತ್ರ ರಾಜು ಮಾತ್ರ ಬೈಕ್‌ನಲ್ಲಿ ಫಾಲೋ ಮಾಡುತ್ತಿದ್ದರು. ಡಿಫರೆಂಟ್ ಆದ ಫೊಟೋ ಸಿಗುತ್ತೆ ಅನ್ನೋದು ಅದಕ್ಕೆ ಕಾರಣ. ಒಂದು ಹಂತದಲ್ಲಿ ನೇತ್ರ ರಾಜು ಪ್ರೆಸಿಡೆಂಟ್ ಇದ್ದ ಕಾರನ್ನೇ ಓವರ್ ಟೇಕ್ ಮಾಡಿದರು. ಇದು ಪ್ರೊಟೋಕಾಲ್ ಉಲ್ಲಂಘನೆ. ಸಹಜವಾಗಿಯೇ ವಾತಾವರಣ ಗಲಿಬಿಲಿಗೊಂಡಿತ್ತು. ಆದರೆ ನೇತ್ರ ಅವರ ವೃತ್ತಿ ಬದ್ಧತೆ ಗೊತ್ತಿದ್ದ ಕಾರಣಕ್ಕೆ ಸಮಸ್ಯೆಯಾಗಲಿಲ್ಲ,’’ ಎಂದು ನೆನಪಿಸಿಕೊಳ್ಳುತ್ತಾರೆ ಅವಿನಾಶ್.

ಭಿನ್ನ ಆಲೋಚನೆ, ಜತೆಗಿಷ್ಟು ಅಂತಃಕರಣ; ಪರಿಣಾಮ ಮೈಸೂರ ದಸರಾದ ವೈರುಧ್ಯವನ್ನು ಅರ್ಥವತ್ತಾಗಿ ಜನರಿಗೆ ತಲುಪಿಸಿದ ಮೇಲಿನ ಚಿತ್ರ ಸೆರೆಯಾಗುತ್ತದೆ. ಕ್ಯಾಮೆರಾ ಕೈಲಿರುವ ಪ್ರತಿಯೊಬ್ಬರು ಇದನ್ನು ಅರ್ಥ ಮಾಡಿಕೊಂಡರೆ, ನೇತ್ರ ರಾಜು ಅವರ ಆಶಯ ಇನ್ನೊಂದಿಷ್ಟು ದಿನ ಜೀವಂತವಾಗಿಡಲು ಸಾಧ್ಯವಾಗುತ್ತದೆ.