samachara
www.samachara.com
ಪತ್ರಿಕೋದ್ಯಮ & ರಾಜಕೀಯದ ನಡುವೆ ಸರಸವಾಡಿಕೊಂಡೇ ಬೆಳೆದ ಎಂ. ಜೆ. ಅಕ್ಬರ್ ನಡೆದು ಬಂದ ಹಾದಿ ಇಲ್ಲಿದೆ...
FEATURE STORY

ಪತ್ರಿಕೋದ್ಯಮ & ರಾಜಕೀಯದ ನಡುವೆ ಸರಸವಾಡಿಕೊಂಡೇ ಬೆಳೆದ ಎಂ. ಜೆ. ಅಕ್ಬರ್ ನಡೆದು ಬಂದ ಹಾದಿ ಇಲ್ಲಿದೆ...

ಇಂದು ಬಿಜೆಪಿಯಲ್ಲಿರುವ ಅಕ್ಬರ್‌ ಹಿಂದೊಮ್ಮೆ ಕಟ್ಟಾ ಕಾಂಗ್ರೆಸ್ಸಿಗರಾಗಿದ್ದರು. ಅಕ್ಬರ್‌ ಬರೆದ ನೆಹರೂ ಜೀವನ ಚರಿತ್ರೆ ಪುಸ್ತಕದ ಹೆಸರು ‘ನೆಹರೂ: ದಿ ಮೇಕಿಂಗ್‌ ಆಫ್‌ ಇಂಡಿಯಾ’.

ಮಾಜಿ ಪತ್ರಕರ್ತ, ಮಾಜಿ ಕಾಂಗ್ರೆಸಿಗ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ಮೊಬಷರ್‌ ಜಾವೇದ್‌ ಅಕ್ಬರ್‌ (ಎಂ.ಜೆ. ಅಕ್ಬರ್‌) ಲೈಂಗಿಕ ಕಿರುಕುಳದ ಆರೋಪದ ಮೇಲೆ ಸಚಿವ ಸ್ಥಾನದಿಂದ ಕೆಳಗಿಳಿದಿದ್ದಾರೆ. ಈ ಮೂಲಕ ಭಾರತದಲ್ಲಿ ದೊಡ್ಡ ಸದ್ದು ಮಾಡುತ್ತಿರುವ #Me Too ಅಭಿಯಾನ ಮೋದಿ ಸಂಪುಟದಿಂದಲೇ ಮೊದಲ ತಲೆದಂಡ ಪಡೆದಂತಾಗಿದೆ.

ಇವತ್ತು ಲೈಂಗಿಕ ಕಿರುಕುಳದ ಆರೋಪದ ಮೇಲೆ ರಾಜೀನಾಮೆ ಕೊಟ್ಟು ಸರಕಾರದಿಂದ ಹೊರಬಂದಿರುವ ಎಂ. ಜೆ. ಅಕ್ಬರ್ ಹಿನ್ನೆಲೆ ಕೂಡ ಸ್ವಾರಸ್ಯರಕರವಾಗಿದೆ. ಮೂರು ವರ್ಷಗಳ ಹಿಂದೆ ಪೂರ್ಣಾವಧಿ ರಾಜಕೀಯಕ್ಕೆ ಬರುವ ಮುನ್ನ ಎಂ. ಜೆ. ಅಕ್ಬರ್ ‘ಒಬ್ಬ ಅತ್ಯುತ್ತಮ ಪತ್ರಕರ್ತ- ಬರಹಗಾರ’ ಎಂಬ ಹೆಸರು ಪಡೆದುಕೊಂಡಿದ್ದವರು. ಈ ಹಿನ್ನೆಲೆಯಲ್ಲಿ, ಅಕ್ಬರ್ ಯಾರು? ಅವರು ಈವರೆಗೆ ನಡೆದು ಬಂದ ಹಾದಿ ಹೇಗಿತ್ತು ಎಂಬುದನ್ನು ‘ಸಮಾಚಾರ’ ಇಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದೆ.

ರಾಜಕೀಯ ಪ್ರವೇಶ:

2015ರ ಜುಲೈನಲ್ಲಿ ಜಾರ್ಖಂಡ್‌ನಿಂದ ರಾಜ್ಯಸಭೆಗೆ ಆಯ್ಕೆಯಾದ ಅಕ್ಬರ್‌, 2016ರ ಜುಲೈ 5ರಂದು ನರೇಂದ್ರ ಮೋದಿ ಸಂಪುಟ ಸೇರಿದರು. ಮೋದಿ ಸಂಪುಟದಲ್ಲಿ ರಾಜ್ಯ ಖಾತೆಯ ಸಚಿವ ಸ್ಥಾನ ಪಡೆದಿದ್ದ ಅಕ್ಬರ್‌ ಬಿಜೆಪಿ ಸೇರುವ ಮೊದಲು ಲೋಕಸಭಾ ಸದಸ್ಯರಾಗಿದ್ದು ಕಾಂಗ್ರೆಸ್‌ ಗುರುತಿನಿಂದ. ಬಿಹಾರದ ಕೃಷ್ಣಗಂಜ್‌ ಕ್ಷೇತ್ರದಿಂದ 1989ರಲ್ಲಿ 9ನೇ ಲೋಕಸಭೆಗೆ ಆಯ್ಕೆಯಾಗಿದ್ದರು ಅಕ್ಬರ್‌. 1991ರ ಚುನಾವಣೆಯಲ್ಲಿ ಅಕ್ಬರ್‌ ಚುನಾವಣೆಯಲ್ಲಿ ಸೋತರೂ 1991ರಿಂದ 1993ರವರೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದರು.

ಆ ಬಳಿಕ ರಾಜಕೀಯದಿಂದ ದೂರಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ಅಕ್ಬರ್‌ 2014ರ ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿ ಸೇರಿವ ಮೂಲಕ ಮತ್ತೆ ರಾಜಕೀಯಕ್ಕೆ ರಿಎಂಟ್ರಿ ಪಡೆದರು. ಪಕ್ಷ ಸೇರಿದ ಅಕ್ಬರ್‌ ಅವರಿಗೆ ಬಿಜೆಪಿ ರಾಷ್ಟ್ರೀಯ ವಕ್ತಾರರ ಸ್ಥಾನ ನೀಡಿತ್ತು.

ಇಂದು ಬಿಜೆಪಿಯಲ್ಲಿರುವ ಅಕ್ಬರ್‌ ಹಿಂದೊಮ್ಮೆ ಕಟ್ಟಾ ಕಾಂಗ್ರೆಸ್ಸಿಗರಾಗಿದ್ದರು. ಅಕ್ಬರ್‌ ಬರೆದ ನೆಹರೂ ಜೀವನ ಚರಿತ್ರೆ ಪುಸ್ತಕದ ಹೆಸರು ‘ನೆಹರೂ: ದಿ ಮೇಕಿಂಗ್‌ ಆಫ್‌ ಇಂಡಿಯಾ’. ಇದೇ ಅಕ್ಬರ್‌ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರಿಗೆ ಆಪ್ತರಾಗಿದ್ದರು. ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅವರ ಅಧಿಕೃತ ವಕ್ತಾರರಾಗಿ ಕೆಲಸ ಮಾಡಿದ್ದ ಅಕ್ಬರ್‌ ದಶಕಗಳ ಬಳಿಕ ಬಿಜೆಪಿ ಪಕ್ಷದ ವಕ್ತಾರಿಕೆ ವಹಿಸಿಕೊಂಡರು.

ಪ್ರಯಾಗ್ ಎಂಬ ಹಿಂದೂ ಅಜ್ಜ:

ಬಿಹಾರ ಮೂಲದ ಅಕ್ಬರ್‌ ಅಜ್ಜ ಪ್ರಯಾಗ್‌ ಹಿಂದೂ ಆಗಿದ್ದವರು. ಕೋಮು ದಂಗೆಗಳ ಸಂದರ್ಭದಲ್ಲಿ ಪ್ರಯಾಗ್‌ ತಂದೆ ತಾಯಿಯನ್ನು ಕಳೆದುಕೊಂಡ ನಂತರ ಮುಸ್ಲಿಂ ಕುಟುಂಬವೊಂದು ಅವರನ್ನು ಸಲಹಿತ್ತು. ನಂತರ ಪ್ರಯಾಗ್ ತಮ್ಮ ಹೆಸರನ್ನು ರೆಹಮತ್‌ ಉಲ್ಲ್ಆ ಎಂದು ಬದಲಿಸಿಕೊಂಡಿದ್ದರು. ಕೋಲ್ಕತ್ತಾ ಬಾಲಕರ ಶಾಲೆಯಲ್ಲಿ ಓದಿದ ಅಕ್ಬರ್‌ ಪ್ರೆಸಿಡೆನ್ಸಿ ಕಾಲೇಜಿಲ್ಲಿ ಇಂಗ್ಲಿಷ್‌ ಪ್ರಧಾನ ವಿಷಯವಾಗಿ ಬಿಎ ಹಾನರ್ಸ್‌ ಪದವಿ ಪಡೆದವರು. 1971ರಲ್ಲಿ ಟ್ರೈನಿ ಪತ್ರಕರ್ತರಾಗಿ ‘ಟೈಮ್ಸ್‌ ಆಫ್‌ ಇಂಡಿಯಾ’ ಸೇರಿದ್ದ ಅಕ್ಬರ್‌, ಸ್ವಲ್ಪ ಸಮಯದಲ್ಲೇ ‘ದಿ ಇಲ್ಲಸ್ಟ್ರೇಡೆಡ್‌ ವೀಕ್ಲಿ ಆಫ್‌ ಇಂಡಿಯಾ’ಗೆ ಬಂದರು. ಟೈಮ್ಸ್‌ ಆಫ್‌ ಇಂಡಿಯಾದಲ್ಲಿರುವಾಗಲೇ ಸಹೋದ್ಯೋಗಿಯಾಗಿದ್ದ ಮಲ್ಲಿಕಾ ಜೋಸೆಫ್‌ ಅವರನ್ನು ಅಕ್ಬರ್‌ ವಿವಾಹವಾಗಿದ್ದರು.

“ಅದು 1975 ಇರಬಹುದು. ಅವರು ಆಗಷ್ಟೆ ಹೊಸತಾಗಿ ಮದುವೆಯಾಗಿದ್ದರು. ಮಲ್ಲಿಕಾ ನನ್ನ ಸಹೋದ್ಯೋಗಿ ಅಗಿದ್ದ ಕಾರಣಕ್ಕೆ ಮನೆಯಲ್ಲಿ ಇಟ್ಟುಕೊಂಡಿದ್ದ ಪಾರ್ಟಿಗೆ ಅಹ್ವಾನ ನೀಡಿದ್ದರು. ಈ ಸಮಯದಲ್ಲಿ ಎಂ. ಜೆ. ಅಕ್ಬರ್‌ ಭೇಟಿ ಆಗಿದ್ದೆ,’’ ಎಂದು ಹಳೆಯ ನೆನಪುಗಳನ್ನು ಮಾಡಿಕೊಳ್ಳುತ್ತಾರೆ ಬೆಂಗಳೂರು ಮೂಲದ ಹಿರಿಯ ಪತ್ರಕರ್ತ ತ್ಯಾಗರಾಜ್ ಶರ್ಮಾ.

1973ರಲ್ಲಿ ‘ಫ್ರೀ ಪ್ರೆಸ್‌ ಜರ್ನಲ್‌’ ಸಮೂಹದ ‘ಆನ್‌ಲುಕರ್‌’ ನಿಯತಕಾಲಿಕೆಯ ಸಂಪಾದಕ, 1976ರಲ್ಲಿ ಆನಂದ್‌ ಬಜಾರ್‌ ಪತ್ರಿಕಾ ಸಮೂಹದ ‘ಸಂಡೇ’ ಸಂಪಾದಕ, 1982ರಲ್ಲಿ ‘ದಿ ಟೆಲಿಗ್ರಾಫ್‌’ ಸಂಪಾದಕ – ಹೀಗೆ ದೇಶದ ಹಲವು ಪ್ರಮುಖ ಪತ್ರಿಕೆಗಳ ಸಂಪಾದಕ ಹುದ್ದೆ ನಿರ್ವಹಿಸಿದ ಅಕ್ಬರ್‌ 1989ರ ಹೊತ್ತಿಗೆ ರಾಜಕೀಯಕ್ಕೆ ಬಂದರು.

1993ರಲ್ಲಿ ರಾಜಕೀಯದಿಂದ ಮತ್ತೆ ಪತ್ರಿಕೋದ್ಯಮಕ್ಕೆ ಬಂದ ಅಕ್ಬರ್‌ 2008ರ ಹೊತ್ತಿಗೆ ‘ದಿ ಏಷ್ಯನ್‌ ಏಜ್‌’ ಮತ್ತು ‘ಡೆಕ್ಕನ್‌ ಕ್ರಾನಿಕಲ್‌’ನಿಂದ ಹೊರಬಿದ್ದರು. ಸಂಪಾದಕೀಯ ನಿಲುವಿನ ಕಾರಣಕ್ಕೆ ಈ ಪತ್ರಿಕೆಗಳ ಮಾಲೀಕರೊಂದಿನ ಭಿನ್ನಾಭಿಪ್ರಾಯದ ಕಾರಣಕ್ಕೆ ಅಕ್ಬರ್‌ ಕೆಲಸ ಕಳೆದುಕೊಳ್ಳಬೇಕಾಯಿತು ಎಂದು ಆಗ ವರದಿಯಾಗಿತ್ತು.

2010ರ ಜನವರಿಯಲ್ಲಿ ಹೊಸ ಪತ್ರಿಕೆ ಆರಂಭಿಸಿದ ‘ದಿ ಸಂಡೇ ಗಾರ್ಡಿಯನ್‌’ ಆರಂಭಿಸಿದ ಅಕ್ಬರ್‌ 2010ರ ಸೆಪ್ಟೆಂಬರ್‌ ಹೊತ್ತಿಗೆ ‘ಇಂಡಿಯಾ ಟುಡೆ’ ಪತ್ರಿಕೆ ಮತ್ತು ‘ಹೆಡಲೈನ್ಸ್‌ ಟುಡೆ’ ವಾಹಿನಿಯ ಸಂಪಾದಕೀಯ ನಿರ್ದೇಶಕರಾದರು. 2012ರ ಅಕ್ಟೋಬರ್‌ನಲ್ಲಿ ಅಕ್ಬರ್‌ ಅಲ್ಲಿಂದಲೂ ಹೊರ ಬಂದರು.

ಹೀಗೆ ರಾಜಕೀಯ – ಪತ್ರಿಕೋದ್ಯಮ ಮತ್ತೆ ರಾಜಕೀಯಕ್ಕೆ ಓಡಾಡುತ್ತಲೇ ಬಂದ ಅಕ್ಬರ್‌ ವಿರುದ್ಧ ಅವರ ಮಾಜಿ ಸಹೋದ್ಯೋಗಿಗಳಾದ ಪ್ರಿಯಾ ರಮಣಿ ಮತ್ತು ಘಜಲಾ ವಹಾಬ್‌ ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಇವರಿಬ್ಬರ ಆರೋಪಗಳೆಲ್ಲವೂ ಸುಳ್ಳು ಎಂದಿದ್ದ ಅಕ್ಬರ್‌ ಇವರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದರು. ಆದರೆ, ಹೆಚ್ಚಿದ ಒತ್ತಡ ಅವರ ಸ್ಥಾನಕ್ಕೆ ರಾಜೀನಾಮೆಯನ್ನು ಪಡೆದುಕೊಂಡಿದೆ. ಈ ಮೂಲಕ ಹೊಸ ತಲೆಮಾರಿಗೆ ಅತ್ಯುತ್ತಮ ಪತ್ರಕರ್ತನೊಬ್ಬ, ಕಳಂಕ ಹೊತ್ತುಕೊಂಡು ನೇಪಥ್ಯಕ್ಕೆ ಸರಿಯುವಂತಾಗಿದೆ.