samachara
www.samachara.com
#MeToo: ರೂಢಿಗತ ವ್ಯವಸ್ಥೆಗೆ ಅಪ್ಪಳಿಸಿದ ಶಾಕ್ ವೇವ್ ಇದು!
FEATURE STORY

#MeToo: ರೂಢಿಗತ ವ್ಯವಸ್ಥೆಗೆ ಅಪ್ಪಳಿಸಿದ ಶಾಕ್ ವೇವ್ ಇದು!

ಮೀಟೂ ಆಂದೋಲನದಿಂದ ಎದ್ದ ಅಲೆಯು ಅಷ್ಟಕ್ಕೇ ನಿಲ್ಲದೆ ದಿನನಿತ್ಯ ಅತ್ಯಾಚಾರಕ್ಕೊಳಗಾಗಿಯೂ ಕತ್ತಲ ಮೂಲೆಯಲ್ಲೆ ಉಳಿಯುವ ಕೋಟ್ಯಂತರ ಭಾರತೀಯ ಹೆಣ್ಣುಮಕ್ಕಳ ನೋವನ್ನು ತಲುಪುವವರೆಗೂ ಮುಂದೆ ಸಾಗಲಿ ಎಂಬ ಆಶಯವಿದೆ.

‘ಸಮಾಚಾರ’ #ಮೀಟೂ ಹೆಸರಿನಲ್ಲಿ ಹಿಂಸೆಗೆ ಗುರಿಯಾದವರ ಅನುಭವಗಳನ್ನು ಪ್ರಕಟಿಸುತ್ತಿದೆ. ಇದನ್ನು ಇನ್ನಷ್ಟು ವಿಸ್ತರಿಸುವ ದೃಷ್ಟಿಯಿಂದ, ಎರಡು ಪ್ರಮುಖ ಪ್ರಶ್ನೆಗಳನ್ನು ಇಟ್ಟುಕೊಂಡು ನಾಡಿನ ಮಹಿಳಾವಾದಿಗಳು, ಸಾಮಾಜಿಕ ಕಾರ್ಯಕರ್ತೆಯರು, ಸಾಹಿತಿಗಳು, ಸಾಮಾನ್ಯ ಮಹಿಳೆಯರನ್ನು ಎದುರುಗೊಂಡಿತು. ಈ ಸಮಯದಲ್ಲಿ ಸಾಕಷ್ಟು ಜನ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಕಳುಹಿಸಿದ್ದಾರೆ. ಇದು ಅದರ ಐದನೇ ಕಂತು. ಸಾಮಾಜಿಕ ಕಾರ್ಯಕರ್ತೆ ಮಲ್ಲಿಗೆ ಸಿರಿಮನೆ ಅಭಿಪ್ರಾಯಗಳನ್ನಿಲ್ಲಿ ದಾಖಲಿಸಿದ್ದಾರೆ.

*

ಕೆಲವೊಮ್ಮೆ ಕೆಲವು ವಿಚಾರಗಳು ರೂಢಿಗತ ಚೌಕಟ್ಟಿನ ಗಟ್ಟಿಯಾದ ಚಿಪ್ಪುಗಳನ್ನು ಒಡೆದು ಹೊರಬರಬೇಕಾದರೆ ಬಲವಾದ ಗುದ್ದು ಬೇಕಾಗುತ್ತದೆ. ಒಂದು ರೀತಿಯಲ್ಲಿ Shock waves ಅನ್ನುತ್ತಾರಲ್ಲ ಅಂತಹವು.....! ಆ ರೀತಿಯಲ್ಲಿ #ಮೀಟೂ ಅಭಿಯಾನವನ್ನು ಅಂತಹ ಒಂದು ಗಟ್ಟಿಯಾದ ಗುದ್ದು ಎಂದು ನಾನು ಭಾವಿಸುತ್ತೇನೆ. ಇದರ ಸುತ್ತ ಈಗ ಒಂದು ಬಗೆಯ ಗೊಂದಲಮಯ ರಾಜಕೀಯದ ವಾತಾವರಣವನ್ನು ಸೃಷ್ಟಿಸಲಾಗಿದೆ; ವಿಚಾರಕ್ಕೆ ಒಂದಷ್ಟು ಸಂಬಂಧಿಸಿರುವ, ಬಹಳಷ್ಟು ಸಂಬಂಧವೇ ಇಲ್ಲದ ಸಂಗತಿಗಳನ್ನು ತಳಕುಹಾಕುತ್ತಾ ಅದನ್ನು ರಾಡಿಗೊಳಿಸಲು ನೋಡುತ್ತಿದ್ದಾರೆ. ಆದರೆ, ಅದೇನೆ ಇದ್ದರೂ ಮೀಟೂ ತನ್ನ ಕೆಲಸವನ್ನು ತಾನು ಮಾಡಿದೆ ಎಂದೇ ಹೇಳಬೇಕು.

ಹಿಂದೆಲ್ಲ ಈ ರೀತಿಯ ದೌರ್ಜನ್ಯಗಳನ್ನು ನಡೆಸಿದವರು ಅದನ್ನು ತಮ್ಮ ಹೆಗ್ಗಳಿಕೆಯೆಂಬಂತೆ ಸಾಧಕರ ಪೋಸು ಕೊಟ್ಟರೆ, ಸಮಾಜ ಅವರುಗಳನ್ನು ವೈಭವೀಕರಿಸಿ ಮೆರೆಸಿದ್ದಿತ್ತು. ರಾಜಸ್ಥಾನದ ಆರೋಗ್ಯ ಸಹಾಯಕಿ ಭಂವರೀದೇವಿ ತನ್ನ ಕರ್ತವ್ಯ ನಿರ್ವಹಿಸಿದ ಕಾರಣಕ್ಕೆ ಮೇಲ್ಜಾತಿ ಬಲಾಢ್ಯರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದಾಗ, ಆಕೆಯ ಅಪರಾಧಿಗಳಿಗೆ ಜಾಮೀನು ಸಿಕ್ಕಿದ ತಕ್ಷಣ ಅವರನ್ನು ತೆರೆದ ಜೀಪಿನಲ್ಲಿ ಹಾರ ತುರಾಯಿಗಳೊಂದಿಗೆ ಮೆರವಣಿಗೆ ಮಾಡಲಾಗಿತ್ತು. ನಂತರವೂ ಅಂತಹವು ನಡೆದಿವೆ.

ನೊಂದವರು ದೈಹಿಕ, ಮಾನಸಿಕ ಮಾತ್ರವಲ್ಲ ಸಾಮಾಜಿಕ ಅವಮಾನದಿಂದ ಕುಗ್ಗಿ ತಾವೇ ಅಪರಾಧಿಗಳೇನೋ ಎಂಬಂತೆ ಕುಗ್ಗಿಹೋಗುವಂತಹ ವಾತಾವರಣ ಸೃಷ್ಟಿಸಲಾಗುತ್ತಿತ್ತು. ಈಗಲೂ ಆ ಪ್ರಯತ್ನ ನಡೆದಿದೆಯಾದರೂ, ಈ ಸಂದರ್ಭದಲ್ಲಿ ನೊಂದವರು (ಭಂವರೀದೇವಿಯೂ ಸಹಾ ಹೋರಾಟ ನಿಲ್ಲಿಸಲಿಲ್ಲ) ಕುಗ್ಗಲು ನಿರಾಕರಿಸುತ್ತಿದ್ದಾರೆ; ಅವರ ದನಿಗೆ ಹೆಚ್ಚೆಚ್ಚು ಮಾರ್ದನಿಗಳು ಜೊತೆಗೂಡುತ್ತಿವೆ.

ಖಂಡಿತವಾಗಿ ಇದೊಂದು ಮಹಿಳಾ ಹೋರಾಟದ ಹೆಜ್ಜೆಯೇ ಎಂದು ನಾನು ಭಾವಿಸುತ್ತೇನೆ. ಇನ್ನೊಂದೆಡೆ, ಸಮಾಜದ ದುರ್ಬಲ ವರ್ಗಗಳ ಮಹಿಳೆಯರಿಗೆ, ದಲಿತ ದಮನಿತ ಅಕ್ಕತಂಗಿಯರಿಗೆ ಹೀಗಾದಾಗ ಸಮಾಜ ಇದೇ ರೀತಿ ಸ್ಪಂದಿಸುತ್ತದೆಯೇ ಎಂಬ ಪ್ರಶ್ನೆಯೂ ಕಾಡುತ್ತದೆ. ಆದರೆ, ನಾನು ಅವೆರಡೂ ವಿಚಾರಗಳನ್ನು ಒಂದಕ್ಕೊಂದು ವಿರುದ್ಧವಾಗಿ ಎದುರು ಬದುರು ನಿಲ್ಲಿಸಲಾರೆ. ಮೀಟೂ ಆಂದೋಲನದಿಂದ ಎದ್ದ ಅಲೆಯು ಅಷ್ಟಕ್ಕೇ ನಿಲ್ಲದೆ ದಿನನಿತ್ಯ ಅತ್ಯಾಚಾರಕ್ಕೊಳಗಾಗಿಯೂ ಕತ್ತಲ ಮೂಲೆಯಲ್ಲೆ ಉಳಿಯುವ ಕೋಟ್ಯಂತರ ಭಾರತೀಯ ಹೆಣ್ಣುಮಕ್ಕಳ ನೋವನ್ನು ತಲುಪುವವರೆಗೂ ಮುಂದೆ ಸಾಗಲಿ ಎಂಬ ಆಶಯವಿದೆ. ಅಲ್ಲಿ ತಲುಪುವವರೆಗೂ ಅದನ್ನು ಮುಂದೊಯ್ಯಬೇಕು ಎಂಬ ದೃಢ ನಿರ್ಧಾರವೂ ಕೂಡಾ!