samachara
www.samachara.com
ಚೈನಾ ಗೇಮಿಂಗ್ ಲೋಕದಲ್ಲಿ ಬಿರುಗಾಳಿ: ಟೆನ್ಸೆಂಟ್ ಕೇರ್ ಆಫ್ ಪಬ್‌ಜಿ ಷೇರು ಕುಸಿತ!
FEATURE STORY

ಚೈನಾ ಗೇಮಿಂಗ್ ಲೋಕದಲ್ಲಿ ಬಿರುಗಾಳಿ: ಟೆನ್ಸೆಂಟ್ ಕೇರ್ ಆಫ್ ಪಬ್‌ಜಿ ಷೇರು ಕುಸಿತ!

ಚೀನಾದಲ್ಲಿ ವಿಡಿಯೋ ಗೇಮ್‌ಗಳಿಗೆ ನಿಯಂತ್ರಣ ಹೇರಲು ಸರಕಾರ ಮುಂದಾಗುತ್ತಿದ್ದಂತೆ ಬೃಹತ್‌ ಕಂಪನಿಗಳು ನೆಲಕಚ್ಚುತ್ತಿವೆ. ಅವುಗಳಲ್ಲಿ ಮೊದಲ ಸಾಲಿನಲ್ಲಿ ನಿಂತಿರುವುದು ಪಬ್ಜ್‌ ಖ್ಯಾತಿಯ ಟೆನ್ಸೆಂಟ್‌.

ಸರಕಾರದ ನೀತಿಗಳೇ ಹಾಗೆ. ಒಂದು ಉದ್ಯಮವನ್ನು ಬೆಳೆಸುವ, ಕ್ಷಣ ಮಾತ್ರದಲ್ಲಿ ಹೊಸಕಿ ಹಾಕುವ ಶಕ್ತಿಗಳು ಅದಕ್ಕಿರುತ್ತವೆ. ಇಲ್ಲಾಗಿದ್ದೂ ಅದೇ. ಚೀನಾ ಹೇಳಿ ಕೇಳಿ ಜಗತ್ತಿನ ಅತೀ ದೊಡ್ಡ ವಿಡಿಯೋ ಗೇಮ್‌ ಮಾರುಕಟ್ಟೆ. ಅದಕ್ಕೆ ತಕ್ಕಂತೆ ಜಗತ್ತಿನ ದೈತ್ಯ ವೀಡಿಯೋ ಗೇಮ್‌ಗಳನ್ನು ಉತ್ಪಾದಿಸುವ ಕಂಪನಿಗಳು ಇಲ್ಲಿವೆ.

ಸದ್ಯ ದೇಶದಲ್ಲಿ ವಿಡಿಯೋ ಗೇಮ್‌ಗಳಿಗೆ ನಿಯಂತ್ರಣ ಹೇರಲು ಸರಕಾರ ಮುಂದಾಗುತ್ತಿದ್ದಂತೆ ಈ ಬೃಹತ್‌ ಕಂಪನಿಗಳು ನೆಲಕಚ್ಚುತ್ತಿವೆ. ಅವುಗಳಲ್ಲಿ ಮೊದಲ ಸಾಲಿನಲ್ಲಿ ನಿಂತಿರುವುದು ಟೆನ್ಸೆಂಟ್‌. ಕೇರ್ ಆಫ್ ಪಬ್‌ಜಿ!

ಟೆನ್ಸೆಂಟ್‌ ಜಗತ್ತಿನ ಅತಿ ದೊಡ್ಡ ವಿಡಿಯೋ ಗೇಮ್‌ಗಳನ್ನು ಉತ್ಪಾದಿಸುವ ಕಂಪನಿ. ವಿಡಿಯೋ ಗೇಮ್‌ ಮಾತ್ರವಲ್ಲದೆ ಹಲವು ಮನರಂಜನೆಯ ಸರಕುಗಳನ್ನೂ ಇದು ತಯಾರಿಸುತ್ತದೆ. ಇತ್ತೀಚೆಗೆ ವಿಡಿಯೋ ಗೇಮ್‌ ಜಗತ್ತಿನಲ್ಲಿ ಭಾರೀ ಸದ್ದು ಮಾಡುತ್ತಿರುವ ಪಬ್‌ಜಿ ಹಿಂದೆಯೂ ಈ ಕಂಪನಿಯ ಕೈವಾಡವಿದೆ. ಚೀನಾ ತನ್ನ ವಿಡಿಯೋ ಗೇಮ್‌ಗಳ ಮೇಲೆ ನಿಯಂತ್ರಣ ಹೇರಲು ಆರಂಭಿಸಿದ ನಂತರ ಕಂಪನಿಯ ಷೇರುಗಳ ಮೌಲ್ಯ ಶೇಕಡಾ 40ರಷ್ಟು ಕುಸಿದಿವೆ. ಪರಿಣಾಮ ಕಂಪನಿಯ ಮಾರುಕಟ್ಟೆ ಮೌಲ್ಯ ಜನವರಿಯಿಂದ ಇಲ್ಲಿಯವರೆಗೆ ಸುಮಾರು 16.9 ಲಕ್ಷ ಕೋಟಿ ರೂಪಾಯಿಯಷ್ಟು ಕಡಿಮೆಯಾಗಿದೆ. ಬೆನ್ನಿಗೆ ಜಗತ್ತಿನ ಟಾಪ್‌ 10 ಡಿಜಿಟಲ್ ಕಂಪನಿಗಳ ಪಟ್ಟಿಯಿಂದಲೂ ಟೆನ್ಸೆಂಟ್‌ ಹೊರ ಬಿದ್ದಿದೆ.

ಇತ್ತೀಚೆಗೆ ಅಂದರೆ ಮಾರ್ಚ್‌ನಲ್ಲಿ ಬೃಹತ್‌ ಜಾಗತಿಕ ಕಂಪನಿಗಳ ಸಾಲಿನಲ್ಲಿ ಟೆನ್ಸೆಂಟ್‌ ಐದನೇ ಸ್ಥಾನದಲ್ಲಿತ್ತು. ಬರ್ಕ್‌ಶೈರ್‌ ಹಾಥ್‌ವೇ, ಫೇಸ್‌ಬುಕ್‌, ಜೆಪಿ ಮಾರ್ಗನ್‌ ಚೇಸ್‌ನಂಥ ಕಂಪನಿಗಳೇ ಹಿಂದಿಕ್ಕಿ ಟೆನ್ಸೆಂಟ್‌ ಎತ್ತರದ ಸ್ಥಾನದಲ್ಲಿತ್ತು. ಆದರೆ ಇದೀಗ ಕಂಪನಿಯ ಮೌಲ್ಯ ವಿಪರೀತ ಕುಸಿದಿದ್ದು 11ನೇ ಸ್ಥಾನದಲ್ಲಿ ನೆಲೆ ನಿಂತಿದೆ. ಹಾಗಂತ ಈ ಕುಸಿತ ಇಲ್ಲಿಗೇ ನಿಲ್ಲುವಂತೆ ಕಾಣಿಸುತ್ತಿಲ್ಲ. ಬದಲಾಗಿ ಕಂಪನಿ ಮತ್ತಷ್ಟು ನೆಲಕಚ್ಚುವ ಸಾಧ್ಯತೆಗಳು ಕಾಣಿಸುತ್ತಿವೆ. ಈ ಬೆಳವಣಿಗೆಗಳು ವಿಡಿಯೋ ಗೇಮಿಂಗ್‌ ಲೋಕದಲ್ಲಿ ತಲ್ಲಣ ಮೂಡಿಸುತ್ತಿದೆ. ಇದಕ್ಕೆಲ್ಲಾ ಕಾರಣ ಚೀನಾದ ನೀತಿಗಳು.

ಮುಂದಿನ ವರ್ಷದವರೆಗೆ ವಿಡಿಯೋ ಗೇಮ್‌ಗಳಿಗೆ ಪರವಾನಿಗೆ ನೀಡದಿರಲು ಚೀನಾ ಸರಕಾರ ನಿರ್ಧರಿಸಿದೆ. ಇದು ವಿಶ್ವದ ಅತೀ ದೊಡ್ಡ ಗೇಮಿಂಗ್‌ ಕಂಪನಿಗೆ ನಡುಕ ಹುಟ್ಟಿಸಿದೆ. ಈಗಾಗಲೇ ಒಂದೇ ವಾರದಲ್ಲಿ ಹಾಂಕಾಂಗ್‌ನಲ್ಲಿ ಕಂಪನಿಯ ಮೌಲ್ಯ ಶೇಕಡಾ 2ರಷ್ಟು ಕುಸಿತವಾಗಿದೆ. ಸದ್ಯದ ಅಂದಾಜು ಪ್ರಕಾರ ಮೂರನೇ ತ್ರೈಮಾಸಿಕದಲ್ಲಿ ಕಂಪನಿ ಮೊಬೈಲ್‌ ಗೇಮ್‌ ಆದಾಯದಲ್ಲಿ ಶೇಕಡಾ 20ರಷ್ಟು ಕಳೆದುಕೊಂಡಿದೆ.

ಒಂದು ಕಡೆ ಮುಂದಿನ ವಿಡಿಯೋ ಗೇಮ್‌ಗೆ ಚೀನಾ ಸರಕಾರ ಯಾವಾಗ ಅನುಮತಿ ನೀಡಲಿದೆ ಎಂಬುದು ತಿಳಿಯದೇ ಟೆನ್ಸೆಂಟ್‌ ಕಂಗಾಲಾಗಿದ್ದರೆ, ಇನ್ನೊಂದು ಕಡೆದ ಚೀನಾದ ಜನರು ಚಿಂತಿತರಾಗಿದ್ದಾರೆ. ಇದಕ್ಕೆ ಕಾರಣ ‘ವಿಚಾಟ್‌’. ಚೀನಾದ ಅತ್ಯಂತ ಜನಪ್ರಿಯ ಮೆಸೇಜಿಂಗ್‌ ಆಪ್‌ ವೀಚಾಟ್‌, ಟೆನ್ಸೆಂಟ್‌ ಒಡೆತನದಲ್ಲಿದ್ದು ಕಂಪನಿಯ ಸಂಕಷ್ಟ ಇದರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಇದು ಸುಮಾರು 100 ಕೋಟಿ ವಿಚಾಟ್‌ ಬಳಕೆದಾರರನ್ನು ಆತಂಕಕ್ಕೆ ತಳ್ಳಿದೆ.

ಸಮೀಪ ದೃಷ್ಟಿಯ ಸಮಸ್ಯೆ ಮತ್ತು ಶಿಕ್ಷಣ ಇಲಾಖೆಯ ನಿಯಂತ್ರಣ ಕ್ರಮ

ವಿಡಿಯೋ ಗೇಮ್‌ಗಳ ಮೇಲೆ ನಿಯಂತ್ರಣ ಹೇರುವ ಇಂಥಹದ್ದೊಂದು ನಿರ್ಧಾರ ಹಿಂದೆ ಇರುವುದು ಚೀನಾದ ಶಿಕ್ಷಣ ಇಲಾಖೆ. ಚೀನಾದ ಮಕ್ಕಳು ಮತ್ತು ಹದಿಹರೆಯದವರು ಗೇಮ್‌ಗಳ ಗೀಳು ಅಂಟಿಸಿಕೊಂಡಿದ್ದು, ಸಮೀಪದೃಷ್ಟಿಯ ಸಮಸ್ಯೆಗಳನ್ನು ತಂದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗೇಮ್‌ಗಳಿಗೆ ನಿಯಂತ್ರಣ ಹೇರಲು ಈ ನಿರ್ಧಾರಕ್ಕೆ ಬಂದಿರುವುದಾಗಿ ಅಲ್ಲಿನ ಶಿಕ್ಷಣ ಇಲಾಖೆ ಹೇಳಿದೆ. ಈ ಸಂಬಂಧ ಅಗಸ್ಟ್‌ನಲ್ಲಿ ಪ್ರಕಟಣೆ ಹೊರಡಿಸಿರುವ ಇಲಾಖೆ, ಆನ್‌ಲೈನ್‌ ಜಗತ್ತಿಗೆ ಬರುವ ಗೇಮ್‌ಗಳ ಮೇಲೆ ನಿಯಂತ್ರಣ ಹೇರಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಜತೆಗೆ ಯಾವ ವಯೋಮಾನದವರು ಯಾವ ಆಟಗಳನ್ನು ಆಡಬಹುದು ಎಂಬುದನ್ನು ಬಳಕೆದಾರರಿಗೆ ತಿಳಿಸುವ ವ್ಯಸ್ಥೆಯನ್ನು ಸ್ಥಾಪಿಸಲಾಗುವುದು ಎಂದು ಹೇಳಿದೆ.

ಇದರ ಒಟ್ಟು ಪರಿಣಾಮ ಟೆನ್ಸೆಂಟ್‌ ಲಾಭದಲ್ಲಿ ಇಳಿಕೆಯಾಗಿದೆ. ಕಂಪನಿ ಹೀಗೊಂದು ಕನಿಷ್ಠ ಲಾಭವನ್ನು ಕಾಣುತ್ತಿರುವುದು ಇದೇ ಮೊದಲು. ‘ಇದಕ್ಕೆ ಚೀನಾ ಸರಕಾರದ ನಿಯಂತ್ರಣ ಕ್ರಮಗಳೇ ಕಾರಣ, ಹೊಸ ಗೇಮ್‌ಗಳಿಗೆ ಸರಕಾರ ಅನುಮತಿ ನೀಡುತ್ತಿಲ್ಲ,’ ಎಂದು ಕಂಪನಿ ಹೇಳಿಕೊಂಡಿದೆ.