#MeToo: ಎಲ್ಲಾ ಪುರುಷರನ್ನೂ ಅಪರಾಧಿಗಳನ್ನಾಗಿಸಲ್ಲ; ನಿರಪರಾಧಿಗಳು ಹೆದರಬೇಕಿಲ್ಲ!
FEATURE STORY

#MeToo: ಎಲ್ಲಾ ಪುರುಷರನ್ನೂ ಅಪರಾಧಿಗಳನ್ನಾಗಿಸಲ್ಲ; ನಿರಪರಾಧಿಗಳು ಹೆದರಬೇಕಿಲ್ಲ!

ಅಭಿಯಾನವನ್ನು ಸಮಾಜ ಹಗುರವಾಗಿ ಪರಿಗಣಿಸುವುದು ಸರಿಯಲ್ಲ. ಉದ್ಯೋಗಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳವು ಹೂವೊಳಗಿನ ಹಾವಂತೆ.

‘ಸಮಾಚಾರ’ #ಮೀಟೂ ಹೆಸರಿನಲ್ಲಿ ಹಿಂಸೆಗೆ ಗುರಿಯಾದವರ ಅನುಭವಗಳನ್ನು ಪ್ರಕಟಿಸುತ್ತಿದೆ. ಇದನ್ನು ಇನ್ನಷ್ಟು ವಿಸ್ತರಿಸುವ ದೃಷ್ಟಿಯಿಂದ, ಎರಡು ಪ್ರಮುಖ ಪ್ರಶ್ನೆಗಳನ್ನು ಇಟ್ಟುಕೊಂಡು ನಾಡಿನ ಮಹಿಳಾವಾದಿಗಳು, ಸಾಮಾಜಿಕ ಕಾರ್ಯಕರ್ತೆಯರು, ಸಾಹಿತಿಗಳು, ಸಾಮಾನ್ಯ ಮಹಿಳೆಯರನ್ನು ಎದುರುಗೊಂಡಿತು. ಈ ಸಮಯದಲ್ಲಿ ಸಾಕಷ್ಟು ಜನ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಕಳುಹಿಸಿದ್ದಾರೆ. ಇದು ಅದರ ನಾಲ್ಕನೇ ಕಂತು. ಭಾರತೀಯ ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷೆ ಜ್ಯೋತಿ ಎ. ತಮ್ಮ ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

*

#Me_too ಅಭಿಯಾನವನ್ನು ಸಮಾಜ ಹಗುರವಾಗಿ ಪರಿಗಣಿಸುವುದು ಸರಿಯಲ್ಲ. ಉದ್ಯೋಗಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳವು ಹೂವೊಳಗಿನ ಹಾವಂತೆ. ಈ ಭೀಕರ ಸಮಸ್ಯೆಯನ್ನು ಸೂಕ್ಷ್ಮ ಸಂವೇದನೆಗಳೊಂದಿಗೆ ಅರ್ಥೈಸಿಕೊಳ್ಳಬೇಕು. ಏಕೆಂದರೆ ಮಹಿಳೆಯ ಬದುಕು ಅವಳ ಆರ್ಥಿಕ ಸ್ವಾವಲಂಬನೆಯನ್ನು ಅವಲಂಬಿಸಿದ್ದು, ಮಹಿಳೆ ಆರ್ಥಿಕವಾಗಿ ಸ್ವಾವಲಂಬಿಗಳಾಗಿ, ಸ್ವತಂತ್ರರಾಗಲು ಹೋರಾಟ ನಡೆಸುತ್ತಾ ತನ್ನ ಅಸ್ಮಿತೆಯನ್ನು ಕಂಡುಕೊಳ್ಳಲು ಯತ್ನಿಸುತ್ತಿದ್ದಾಳೆ. ಹೀಗುರುವಾರ ಪುರುಷಪ್ರಧಾನ ವ್ಯವಸ್ಥೆಯೊಳಗೆ ಅವಳನ್ನು ಪುನಃ ನಾಲ್ಕು ಗೋಡೆಗಳೊಳಗೆ ಸೀಮಿತಗೊಳಿಸುವ, ತನ್ನ ಅಡಿಯಾಳಾಗಿಸಿಕೊಳ್ಳಬೇಕೆನ್ನುವ ಹುನ್ನಾರಗಳಿನ್ನೂ ನಿಂತಿಲ್ಲ.

ಮಹಿಳೆಯನ್ನು ಅವಳ ದೇಹದಿಂದಲೇ ನೋಡುವ, ಅವಳನ್ನು (ಸಂ)ಭೋಗದ ಸರಕಾಗಿಯೇ ಪರಿಗಣಿಸುವ ಹೇಯ ಮನಸ್ಥಿತಿ ಹೊಂದಿರುವ ಪುರುಷರು ಕೆಲಸದ ಸ್ಥಳದಲ್ಲಿನ ತಮ್ಮ ಅಧಿಕಾರವನ್ನು ಮತ್ತು ತಮ್ಮ ಸಾಮಾಜಿಕ ಸ್ಥಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡುವುದು ಬಹಳಷ್ಟು ಸಂದರ್ಭಗಳಲ್ಲಿ ಆ ಮಹಿಳೆಯರ ಪಾಲಿಗೆ ಮೌನ ವೇದನೆ/ ರೋದನೆಯಾಗಿರುತ್ತದೆ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಕಾರಣಗಳಿಂದಾಗಿ ಸಂತ್ರಸ್ತೆಯರು ತಮ್ಮ ಮೇಲಿನ ಕಿರುಕುಳ, ಹಿಂಸೆಗಳನ್ನು ಮೌನವಾಗಿ ಸಹಿಸುತ್ತಾ ಬಂದಿದ್ದಾರೆ. ಇಂತಹ ಶೋಷಣೆಯನ್ನಾಗಲೀ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯನ್ನೇ ಸಮಾಜ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವುದನ್ನಾಗಲೀ ನಾವಿನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಸಮಾಜಕ್ಕೆ ಈ ಅಭಿಯಾನ ರವಾನಿಸುತ್ತಿದೆ.

#Me_too ಅಭಿಯಾನ ಕಪೋಲಕಲ್ಪಿತವೂ ಅಲ್ಲ, ಸಮಾಜ ವಿಭಜಕವೂ ಅಲ್ಲ. ಇದು ಪ್ರತಿನಿತ್ಯ ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳಕ್ಕೆ ಬಲಿಯಾಗಿ ಬಳಲುತ್ತಿರುವ ಮಹಿಳೆಯರ ಪರ ಮೊಳಗಿಸುತ್ತಿರುವ ದಿಟ್ಟ, ಗಟ್ಟಿ ದನಿಯಾಗಿದೆ. ಲೈಂಗಿಕ ಕಿರುಕುಳಕ್ಕೆ ಮೌನವಾಗಿ ಬಲಿಯಾಗುತ್ತಾ ಸುಟ್ಟು ಬೂದಿಯಾಗುತ್ತಿರುವ ಮಹಿಳೆಯರಿಗೆ ಧೈರ್ಯ ಕೊಡುವ ಅಭಿಯಾನವಾಗಿದೆ. ಅಷ್ಟೇ ಅಲ್ಲ, ಲೈಂಗಿಕ ಕಿರುಕುಳ ನೀಡುವ ಕಾಮಪಿಶಾಚಿಗಳಿಗೆ ಎಚ್ಚರಿಕೆಯಾಗಿದೆ, ಸಾಮಾಜಿಕ ಶಿಕ್ಷೆಯಾಗಿದೆ. ಇದು ಹಲವು 'ಪ್ರತಿಷ್ಠಿತರ' ನೀಚತನವನ್ನು ಬಯಲಿಗೆಳೆದಿದೆ. ಈ ಅಭಿಯಾನ ಸಮಾಜದಲ್ಲಿ ಎಲ್ಲಾ ಪುರುಷರನ್ನೂ ಅಪರಾಧಿಗಳನ್ನಾಗಿ ನಿಲ್ಲಿಸುವ ಉದ್ದೇಶ ಹೊಂದಿಲ್ಲ; ನಿರಪರಾಧಿಗಳು ಹೆದರಬೇಕಿಲ್ಲ.

ಉದ್ಯೋಗದಿಂದ ವಿಮುಖವಾಗುವ, ಮಾನಸಿಕವಾಗಿ ಕುಗ್ಗಿಹೋಗುವ ಲೈಂಗಿಕ ಕಿರುಕುಳಕ್ಕೆ ಬಲಿಯಾದ ಮಹಿಳೆಯರಿಗೆ ಅನ್ಯಾಯದ ವಿರುದ್ಧ ಎದ್ದು ನಿಲ್ಲಲು ಈ ಅಭಿಯಾನ ಶಕ್ತಿ ತುಂಬಿದೆಯಾದರೂ ಅಸಂಘಟಿತ ಕ್ಷೇತ್ರದಲ್ಲಿ ದುಡಿಯುತ್ತಿರುವ ಸೇವಾಭದ್ರತೆ ಎಂದರೇನೆಂದೇ ಅರಿಯದ ದೇಶದ ಬಹುಸಂಖ್ಯಾತ ಮಹಿಳೆಯರಿಗೆ #MeToo ಎನ್ನುವಷ್ಟು ಧೈರ್ಯವನ್ನು ವ್ಯವಸ್ಥೆ ತುಂಬಬೇಕಿದೆ. ಮಹಿಳೆಯರ ಉದ್ಯೋಗದ ಹಕ್ಕು ಮತ್ತು ಸ್ವಾವಲಂಬನೆಯ ಹಕ್ಕುಗಳನ್ನು ಎತ್ತಿಹಿಡಿಯುವ #MeToo ಅಭಿಯಾನ ಮಹಿಳೆಯರೊಳಗೆ ಲೈಂಗಿಕ ಕಿರುಕುಳದ ವಿರುದ್ಧ ಪ್ರತಿರೋಧದ ಅಲೆಗಳನ್ನು ಹುಟ್ಟುಹಾಕಿರುವ ಸ್ವಾಭಿಮಾನಿ ಚಳವಳಿ ಎಂದೇ ಹೇಳಬಹುದು.