#MeToo: ಅತ್ಯಾಚಾರಗಳ ಬಗೆಗೆ ಸಮಾಜದ ಜಾಣ ಕುರುಡಿಗೆ ಇದು ಚಿಕಿತ್ಸೆ...
FEATURE STORY

#MeToo: ಅತ್ಯಾಚಾರಗಳ ಬಗೆಗೆ ಸಮಾಜದ ಜಾಣ ಕುರುಡಿಗೆ ಇದು ಚಿಕಿತ್ಸೆ...

ಪುಣ್ಯಕ್ಕೆ ಈ ಅಭಿಯಾನ ಸ್ತ್ರೀ ಪುರುಷರನ್ನೊಳಗೊಂಡು ನಡೀತಿದೆ ಅನ್ನೋದು ಸಮಾಧಾನದ ವಿಷಯ.

‘ಸಮಾಚಾರ’ #ಮೀಟೂ ಹೆಸರಿನಲ್ಲಿ ಹಿಂಸೆಗೆ ಗುರಿಯಾದವರ ಅನುಭವಗಳನ್ನು ಪ್ರಕಟಿಸುತ್ತಿದೆ. ಇದನ್ನು ಇನ್ನಷ್ಟು ವಿಸ್ತರಿಸುವ ದೃಷ್ಟಿಯಿಂದ, ಎರಡು ಪ್ರಮುಖ ಪ್ರಶ್ನೆಗಳನ್ನು ಇಟ್ಟುಕೊಂಡು ನಾಡಿನ ಮಹಿಳಾವಾದಿಗಳು, ಸಾಮಾಜಿಕ ಕಾರ್ಯಕರ್ತೆಯರು, ಸಾಹಿತಿಗಳು, ಸಾಮಾನ್ಯ ಮಹಿಳೆಯರನ್ನು ಎದುರುಗೊಂಡಿತು. ಈ ಸಮಯದಲ್ಲಿ ಸಾಕಷ್ಟು ಜನ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಕಳುಹಿಸಿದ್ದಾರೆ. ಇದು ಅದರ ಮೂರನೇ ಕಂತು. ನಟಿ, ಕವಯಿತ್ರಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಜಯಲಕ್ಷ್ಮಿ ಪಾಟೀಲ್ ಅಭಿಪ್ರಾಯಗಳನ್ನಿಲ್ಲಿ ದಾಖಲಿಸಿದ್ದಾರೆ.

1. ಸದ್ಯ ಭಾರತದಲ್ಲಿ ಕಂಪನ‌ ಎಬ್ಬಿಸಿರುವ #MeToo ಅಭಿಯಾನವನ್ನು ನೀವು ಹೇಗೆ ಎದುರುಗೊಳ್ಳುತ್ತಿದ್ದೀರಾ?

ಸ್ವಾಗತಿಸುತ್ತಿರುವೆ. ಲೈಂಗಿಕ ಕಿರುಕುಳ, ಅತ್ಯಾಚಾರವೆಂಬ ಪಿಡುಗಿಗೆ ಕುರುಡಾಗಿರುವ ಜಗತ್ತಿಗೆ, ಅದರ ಜಾಣ ಕಿವುಡುತನಕ್ಕೆ ಈ #MeToo ಅಭಿಯಾನ ಸರಿಯಾದ ಚಿಕಿತ್ಸೆಯನ್ನು ನೀಡುವಂತಾಗಲಿ.

2. ಮಹಿಳಾ ಸಮುದಾಯಕ್ಕಾಗಿ ಕೆಲಸ ಮಾಡಿದ ಹಿನ್ನೆಲೆಯಲ್ಲಿ, ನೀವು ಈ ಅಭಿಯಾನವನ್ನು ಈ ಕಾಲಘಟ್ಟದ ಮಹಿಳಾವಾದದ ಭಾಗ ಅಂತ ಭಾವಿಸುತ್ತೀರಾ?

ಯಾಕೆ ಮಹಿಳಾವಾದದ ಭಾಗ ಮಾತ್ರವಾಗಬೇಕಿದು? ಯಾಕೆ ಇದು ಸ್ತ್ರೀ ಪುರುಷ ಎನ್ನದೆ ಎಲ್ಲರ ಭಾಗವಾಗಬಾರದು? ಪುಣ್ಯಕ್ಕೆ ಈ ಅಭಿಯಾನ ಸ್ತ್ರೀ ಪುರುಷರನ್ನೊಳಗೊಂಡು ನಡೀತಿದೆ ಅನ್ನೋದು ಸಮಾಧಾನದ ವಿಷಯ.

ಯಾವತ್ತೋ ಮನೆಮನೆಗೂ, ಮುಖಮುಖಕ್ಕೂ ಅಪ್ಪಳಿಸಬೇಕಿದ್ದ ಅಲೆ ಇದು. ಇನ್ನಷ್ಟು ತೀವ್ರವಾಗಬೇಕಾದ ಜರೂರತ್ತಿದೆ. ಹಾಗಂತ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ವಿರುದ್ಧ ಇದೇ ಮೊದಲ ಹೋರಾಟವೇನೂ ಅಲ್ಲ. ಈಗಾಗಲೇ ಬೇಕಾದಷ್ಟು ನಡೆದಿವೆ. ಆ ಗುರುತಿನ ದಾರಿ ಈ ಅಭಿಯಾನವನ್ನು ನಡೆಸಲು ಅನುಕೂಲ ಮಾಡಿಕೊಟ್ಟಿರುವುದು ಸುಳ್ಳಲ್ಲ. ಈ ವಿಷಯವಾಗೇ ಕಳೆದ ಐದು ವರ್ಷಗಳಿಂದ ಜನಜಾಗೃತಿ ಮೂಡಿಸುವ ಮೂಲಕ ನಿರ್ಮೂಲ ಮಾಡಲು ಹೊರಟಿರುವ ನಮ್ಮ 'ಜನದನಿ' ಜನರನ್ನು ತಲುಪುವಲ್ಲಿ ಯಶಸ್ವಿಯಾಗುತ್ತಿದೆ ಅನ್ನುವುದೇ ನಮಗೆ ಸಮಾಧಾನ ಮತ್ತು ಸ್ಥೈರ್ಯ ತುಂಬುತ್ತಿರುವ ಸಂಗತಿ. ಜನದನಿಯ ಸದಸ್ಯರಲ್ಲಿ ಸ್ತ್ರೀ ಪುರುಷರ ಸಂಖ್ಯೆ ಸಮನಾಗಿದೆ ಎನ್ನುವುದು,

ಸ್ತ್ರೀ ಪುರುಷರಿಬ್ಬರೂ ಪರಸ್ಪರರ ವಿರುದ್ಧವಲ್ಲ, ಜೊತೆ ಜೊತೆಯಾಗಿ ಜನ ಪಿಡುಗಿನ ವಿರುದ್ಧ ಹೋರಾಡಬೇಕೆನ್ನುವ ಸಂದೇಶ ಸ್ಪಷ್ಟವಾಗಿದೆ. ಹೆಣ್ಣು ಹೀನ ಮನಸಿನವರಿಂದ ಸೇಫ್ ಆಗಿರಲು ಏನೆಲ್ಲ ಎಚ್ಚರಿಕೆ ತೆಗೆದುಕೊಳ್ಳಬೇಕು ಎನ್ನುವ ಪಾಠ ಈಗ ಎಲ್ಲೆಡೆ ನಡೆಯುತ್ತಿದೆ. ಇದರ ಜೊತೆಗೇನೇ ಗಂಡು ಹೆಣ್ಣಿನ ಕುರಿತು ಹೇಗೆ ಯೋಚಿಸಬೇಕು, ನಡೆದುಕೊಳ್ಳಬೇಕು ಎನ್ನುವುದನ್ನೂ ಆರೋಗ್ಯಕರವಾಗಿ ಕಲಿಸುವ ತುರ್ತಿದೆ. ಜನದನಿ ಶುರುವಿನಿಂದಲೇ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.