samachara
www.samachara.com
ಸೂಜಿಗಳ ಅವಾಂತರದಿಂದ ನೆಗೆದು ಬಿದ್ದ  3,000 ಕೋಟಿ ಸ್ಟ್ರಾಬೆರಿ ಉದ್ಯಮದ ದುರಂತ ಕಥೆ!
FEATURE STORY

ಸೂಜಿಗಳ ಅವಾಂತರದಿಂದ ನೆಗೆದು ಬಿದ್ದ 3,000 ಕೋಟಿ ಸ್ಟ್ರಾಬೆರಿ ಉದ್ಯಮದ ದುರಂತ ಕಥೆ!

ಆಸ್ಟ್ರೇಲಿಯಾದ ಸದೃಢ ಸ್ಟ್ರಾಬೆರಿ ಮಾರುಕಟ್ಟೆ ರಾತೋ ರಾತ್ರಿ ಒಡೆದು ಚೂರು ಚೂರಾಗಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಪೈಸೆ ಲೆಕ್ಕದಲ್ಲಿ ಸಿಗುವ ಸೂಜಿಗಳು ಎಂದರೆ ನೀವು ನಂಬಲೇ ಬೇಕು!

ಆಸ್ಟ್ರೇಲಿಯಾ ಹಣ್ಣಿನ ಬೆಳೆಗಳಿಗೆ ಹೆಸರಾದ ದೇಶ. ಇಲ್ಲಿ ಬೆಳೆಯುವ ಪ್ರಮುಖ ಹಣ್ಣುಗಳಲ್ಲಿ ಕೆಂಪು ಬಣ್ಣದ ಸ್ಟ್ರಾಬೆರಿ ಕೂಡ ಒಂದು. ಅಕ್ಟೋಬರ್‌ನಿಂದ ಆಸ್ಟ್ರೇಲಿಯಾದಲ್ಲಿ ಸ್ಟ್ರಾಬೆರಿ ಋತು ಆರಂಭವಾಗುತ್ತದೆ. ಪಶ್ಚಿಮ ಆಸ್ಟ್ರೇಲಿಯಾ ಮತ್ತು ಕ್ವೀನ್ಸ್‌ಲ್ಯಾಂಡ್‌ನಲ್ಲಿ ಮಾತ್ರ ಜೂನ್‌ನಲ್ಲೇ ಸ್ಟ್ರಾಬೆರಿ ಬೆಳೆ ಬರಲು ಶುರುವಾಗುತ್ತದೆ. ಹೀಗೆ ಜೂನ್‌ನಿಂದ ಆರಂಭವಾದರೆ ಅಕ್ಟೋಬರ್‌ ವೇಳೆಗೆ ಬರಪೂರ ಹಣ್ಣುಗಳು ಆಸ್ಟ್ರೇಲಿಯಾದಲ್ಲಿ ಮಾರುಕಟ್ಟೆಗೆ ಬರುತ್ತವೆ. ಮುಂದೆ ಮೇವರೆಗೂ ಕಾಂಗರೂಗಳ ನಾಡಲ್ಲಿ ಸ್ಟ್ರಾಬೆರಿಯ ಕೊಯಿಲು ನಡೆಯುತ್ತದೆ.

ಹೀಗೆ, ಬೆಳೆದ ಹಣ್ಣುಗಳು ಪಕ್ಕದ ನ್ಯೂಜಿಲ್ಯಾಂಡ್‌, ಯುರೋಪ್‌ ದೇಶಗಳು ಮತ್ತು ಏಷ್ಯಾಕ್ಕೆ ಮಾರಾಟವಾಗುತ್ತವೆ. ಅದರಲ್ಲೂ ಸಮೀಪದಲ್ಲೇ ಇರುವ ನ್ಯೂಜಿಲ್ಯಾಂಡ್‌ನ ಮಧ್ಯವರ್ತಿಗಳು ಆಸ್ಟ್ರೇಲಿಯಾದಿಂದ ಹಣ್ಣು ಖರೀದಿಸಿ ಹಲವು ದೇಶಗಳಿಗೆ ಇದನ್ನು ತಲುಪಿಸುವ ಕಾಯಕವನ್ನು ಮಾಡಿಕೊಂಡು ಬಂದಿದ್ದಾರೆ. ಹೀಗೆ ಅಲ್ಲಿನ ಸ್ಟ್ರಾಬೆರಿಗಳು ಭಾರತಕ್ಕೂ ಬರುತ್ತವೆ. ಇಂಥಹದ್ದೊಂದು ವಿಸ್ತೃತ, ಗಟ್ಟಿ ಮಾರುಕಟ್ಟೆಯನ್ನು ಅಲ್ಲಿನ ಬೆಳೆಗಾರರು, ಮಧ್ಯವರ್ತಿಗಳು, ಮಾರಾಟಗಾರರು ಸೃಷ್ಟಿಸಿಕೊಂಡಿದ್ದರು. ಇಂಥಹ ಸದೃಢ ಮಾರುಕಟ್ಟೆ ಈಗ ಒಡೆದು ಚೂರು ಚೂರಾಗಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಪೈಸೆ ಲೆಕ್ಕದಲ್ಲಿ ಸಿಗುವ ಸೂಜಿಗಳು ಎಂದರೆ ನೀವು ನಂಬಲೇ ಬೇಕು!

ಆಗಿದ್ದಿಷ್ಟೇ; ಸೆಪ್ಟೆಂಬರ್‌ ಮೊದಲ ವಾರದಲ್ಲಿ ಆಸ್ಟ್ರೇಲಿಯಾದ ಅತೀ ಹೆಚ್ಚು ಸ್ಟ್ರಾಬೆರಿ ಬೆಳೆಯುವ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಹಣ್ಣಿನೊಳಗಡೆ ಮೊದಲ ಬಾರಿಗೆ ಸೂಜಿ ಪತ್ತೆಯಾಗಿತ್ತು. ಹಲವರು ತಮಗೆ ಸ್ಟ್ರಾಬೆರಿಯಲ್ಲಿ ಸೂಜಿ ಸಿಕ್ಕಿದೆ ಎಂದು ಈ ಸಂದರ್ಭದಲ್ಲಿ ಅಳಲು ತೋಡಿಕೊಂಡಿದ್ದರು. ಮುಂದೆ ಇದು ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಂಡಿತು. ಸೂಜಿ ಸಹಿತ ಸ್ಟ್ರೇಬೆರಿ ತಿಂದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ದಾಖಲಾದರು. ಮಕ್ಕಳು ಹಣ್ಣು ತಿನ್ನುವ ಭರದಲ್ಲಿ ಬಾಯಿಗೆ ಗಾಯ ಮಾಡಿಕೊಂಡರು. ಅಷ್ಟೊತ್ತಿಗೆ ‘ಸ್ಟ್ರಾಬೆರಿಯಲ್ಲಿ ಸೂಜಿ ಇದೆ’ ಎಂಬುದು ಗಾಳಿ ಸುದ್ದಿಯ ರೂಪ ಪಡೆದುಕೊಂಡು ಕ್ವೀನ್ಸ್‌ಲ್ಯಾಂಡ್‌, ವಿಕ್ಟೋರಿಯಾ, ಸೌತ್‌ ವೇಲ್ಸ್‌ ರಾಜ್ಯಗಳಿಗೆ ಹಬ್ಬಿಕೊಂಡಿತು. ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ಮಾರುಕಟ್ಟೆಯಿಂದ ಸ್ಟ್ರಾಬೆರಿ ಹಿಂತೆಗೆದುಕೊಂಡವು.

ಕೆಲವೇ ಕೆಲವು ದಿನಗಳಲ್ಲಿ ಸ್ಟ್ರಾಬೆರಿ ತಿಂದವರು ಗಾಯ ಮಾಡಿಕೊಂಡ ಸುದ್ದಿಗಳು ಮೇಲಿಂದ ಮೇಲೆ ವರದಿಯಾದವು. ನೋಡ ನೋಡುತ್ತಲೇ ಆಸ್ಟ್ರೇಲಿಯಾದ ಆರೂ ರಾಜ್ಯಗಳಲ್ಲಿ ಸ್ಟ್ರಾಬೆರಿ ಮಾರಾಟ ನಿಂತು ಹೋಯಿತು. ಪ್ರಮುಖ ಆರು ಬ್ರ್ಯಾಂಡ್‌ಗಳ ಸ್ಟ್ರಾಬೆರಿಗಳು ಮಾರಾಟ ನಿಲ್ಲಿಸಿದವು. ಮಾಲ್‌ಗಳು ಈ ಹಣ್ಣಿನ ಮಾರಾಟದ ಉಸಾಬರಿಯೇ ಬೇಡ ಎಂದು ಕಿತ್ತೆಸೆದವು. ಇಷ್ಟಾಗುವಾಗ ಆಸ್ಟ್ರೇಲಿಯಾದಿಂದ ಬರುವ ಸ್ಟ್ರಾಬೆರಿಗೆ ನ್ಯೂಜಿಲ್ಯಾಂಡ್‌ ನಿಷೇಧ ಹೇರಿತು. ಇದನ್ನೇ ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ಅನುಸರಿಸಿದವು.

ಸ್ಟ್ರಾಬೆರಿಗಳ ಮಾರಣ ಹೋಮ
ಸ್ಟ್ರಾಬೆರಿಗಳ ಮಾರಣ ಹೋಮ

ನೆಗೆದು ಬಿದ್ದ ಮಾರುಕಟ್ಟೆ:

ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಕೆಲವೇ ಕೆಲವು ದಿನ ಮೊದಲು ಜಗತ್ತಿನಲ್ಲೆಡೆ ಮಾರಾಟವಾಗುತ್ತಿದ್ದ ಸ್ಟ್ರಾಬೆರಿ ಯಾರಿಗೂ ಬೇಡವಾಗಿತ್ತು. ದೊಡ್ಡ ದೊಡ್ಡ ಹಿಡುವಳಿದಾರರು ಬಲಿತು ಹಣ್ಣಾಗಿದ್ದ ಸ್ಟ್ರಾಬೆರಿಯನ್ನು ಗುಂಡಿ ತೋಡಿ ಹೂಳಬೇಕಾಗಿ ಬಂತು. ಕೆಲವು ಮಾರಾಟಗಾರರು ಮೆಟಲ್‌ ಡಿಟೆಕ್ಷರ್‌ಗಳನ್ನೆಲ್ಲಾ ಇಟ್ಟು ಸರ್ಕಸ್‌ ಮಾಡಿದರು. ಆದರೆ ಕೊಳ್ಳುವವರಿಗೆ ಧೈರ್ಯವಿರಲಿಲ್ಲ. ಕಣ್ಣೆದುರಲ್ಲೇ ಸುಮಾರು 3,000 ಕೋಟಿ ರೂಪಾಯಿ ಮೌಲ್ಯದ ಸ್ಟ್ರಾಬೆರಿ ಮಾರುಕಟ್ಟೆ ಕುಸಿದು ಬಿತ್ತು.

ಕಂಗಾಲದ ಆಸ್ಟ್ರೇಲಿಯಾದ ಆರೋಗ್ಯ ಸಚಿವ ಗ್ರೆಗ್‌ ಹಂಟ್‌ ಇದನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ ಪೊಲೀಸರಿಗೆ ತನಿಖೆ ನಡೆಸುವಂತೆ ಆದೇಶಿಸಿದರು. ಬೆನ್ನಿಗೆ 100 ಜನರ ತಂಡ ಸಿದ್ಧವಾಯಿತು. ಆರೋಪಿ ಪತ್ತೆ ಹಚ್ಚಿದವರಿಗೆ 50 ಲಕ್ಷ ರೂಪಾಯಿಗಳ ಇನಾಮು ಘೋಷಣೆಯೂ ಹೊರಬಿತ್ತು. ಆದರೆ ಏನೂ ಆಗಲಿಲ್ಲ.

ಇಷ್ಟೆಲ್ಲಾ ಬೆಳವಣಿಗೆಗಳು ನಡೆದು ತಿಂಗಳು ಕಳೆದಿದೆ. ಅಲ್ಲಿಂದ ಇಲ್ಲಿವರೆಗೆ ತನಿಖೆ ನಡೆಸಿದ್ದೇ ಬಂತು. ಅಪರಾಧಿಗಳಿರಲಿ ಆರೋಪದ ಮೂಲ ಪತ್ತೆ ಮಾಡುವುದೂ ಪೊಲೀಸರಿಗೆ ಸಾಧ್ಯವಾಗಲಿಲ್ಲ. ಇವತ್ತು ನಿಂತು ನೋಡಿದರೆ 100 ಜನ ಪೊಲೀಸ್‌ ಅಧಿಕಾರಿಗಳ ತಂಡ ಪ್ರಕರಣದಲ್ಲಿ ಸಣ್ಣ ಸುಳಿವೂ ಸಿಗದೆ ಮತ್ತೆ ಬೇರೆ ಕೆಲಸತ್ತ ಹೊರಟು ಹೋಗಿದ್ದಾರೆ. ಒಬ್ಬರೇ ಒಬ್ಬರು ಅಧಿಕಾರಿ ಉಳಿದಿದ್ದು ಎಲ್ಲಾದರೂ ಸುಳಿವು ಸಿಗಬಹುದೇ ಎಂದು ಅಕ್ಕಿಯಲ್ಲಿ ಬಿಳಿ ಕಲ್ಲು ಹುಡುಕುತ್ತಿದ್ದಾರೆ. ಇದರಾಚೆಗೆ ತನಗೆ ಲಾಭ ತಂದುಕೊಡುತ್ತಿದ್ದ ಸ್ಟ್ರಾಬೆರಿ ಬೆಳೆಗಾರರಿಗೆ ಆಸ್ಟ್ರೇಲಿಯಾ ಸರಕಾರ ಪರಿಹಾರ ನೀಡಬೇಕಾಗಿ ಬಂದಿದೆ. ಹೀಗೆ ವರ್ಷಗಳ ಕಾಲ ಕಟ್ಟಿ ಬೆಳೆಸಿದ್ದ ಸ್ಟ್ರಾಬೆರಿ ಮಾರುಕಟ್ಟೆಯೊಂದು ಮಕಾಡೆ ಮಲಗುವಂತಾಗಿದೆ. ಒಂದು ಸಣ್ಣ ಸೂಜಿ ಮಾಡಿದ ಪರಿಣಾಮಗಳಿವೆ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಾಗಿಲ್ಲ.