samachara
www.samachara.com
#MeToo: ಅಪಹಾಸ್ಯ ಮಾಡುವವರು ನಿಮ್ಮದೇ ಮನೆಯ ಹೆಂಗಸರನ್ನು ಅನುನಯಿಸಿ ಕೇಳಿನೋಡಿ...
FEATURE STORY

#MeToo: ಅಪಹಾಸ್ಯ ಮಾಡುವವರು ನಿಮ್ಮದೇ ಮನೆಯ ಹೆಂಗಸರನ್ನು ಅನುನಯಿಸಿ ಕೇಳಿನೋಡಿ...

ಅಧಿಕಾರದ ಶ್ರೇಣಿಯಲ್ಲಿ ನೀವು ನಮಗಿಂತ ಎತ್ತರದಲ್ಲಿದ್ದ ಮಾತ್ರಕ್ಕೆ ನೀವು ಬೇಟೆಗಾರನ ಗುಣಲಕ್ಷಣಗಳನ್ನು ಹೊಂದಿರಬೇಕಿಲ್ಲ ಎಂದು ಗಟ್ಟಿದನಿಯಲ್ಲಿ ಹೇಳುವ ಪ್ರಯತ್ನ ಆಗುತ್ತಿದೆ.

‘ಸಮಾಚಾರ’ #ಮೀಟೂ ಹೆಸರಿನಲ್ಲಿ ಹಿಂಸೆಗೆ ಗುರಿಯಾದವರ ಅನುಭವಗಳನ್ನು ಪ್ರಕಟಿಸುತ್ತಿದೆ. ಇದನ್ನು ಇನ್ನಷ್ಟು ವಿಸ್ತರಿಸುವ ದೃಷ್ಟಿಯಿಂದ, ಎರಡು ಪ್ರಮುಖ ಪ್ರಶ್ನೆಗಳನ್ನು ಇಟ್ಟುಕೊಂಡು ನಾಡಿನ ಮಹಿಳಾವಾದಿಗಳು, ಸಾಮಾಜಿಕ ಕಾರ್ಯಕರ್ತೆಯರು, ಸಾಹಿತಿಗಳು, ಸಾಮಾನ್ಯ ಮಹಿಳೆಯರನ್ನು ಎದುರುಗೊಂಡಿತು. ಈ ಸಮಯದಲ್ಲಿ ಸಾಕಷ್ಟು ಜನ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಕಳುಹಿಸಿದ್ದಾರೆ. ಇದು ಅದರ ಎರಡನೇ ಕಂತು.

ಲೇಖಕಿ ಸಂಧ್ಯಾರಾಣಿ, #ಮೀಟೂ ಅಭಿಯಾವನ್ನು ಹೇಗೆ ಎದುರುಗೊಳ್ಳುತ್ತಿದ್ದಾರೆ ಮತ್ತು ಅದರ ಭವಿಷ್ಯವನ್ನು ಹೇಗೆ ನೋಡುತ್ತಿದ್ದಾರೆ ಎಂದಿಲ್ಲಿ ವಿವರಿಸಿದ್ದಾರೆ.

# Me Too ಅಭಿಯಾನದ ಬಗ್ಗೆ ಮೂಡುತ್ತಿರುವ ಎಚ್ಚರದ ಬಗ್ಗೆ ಮೆಚ್ಚುಗೆಯ ಜೊತೆಜೊತೆಯಲ್ಲಿಯೇ ಅದರ ಬಗ್ಗೆ ಕೆಲವರು ಮಾಡುತ್ತಿರುವ ಅಪಹಾಸ್ಯ ನನ್ನನ್ನು ಕಳವಳಕ್ಕೂ ಈಡು ಮಾಡುತ್ತಿದೆ. ಹಾಗೆ ಅಪಹಾಸ್ಯ ಮಾಡುವವರಿಗೆ ನಾನು ಹೇಳುವುದು ಇಷ್ಟೇ; ದಯವಿಟ್ಟು ಮನೆಗೆ ಹೋಗಿ, ನಿಮ್ಮ ಅಮ್ಮ, ಅಕ್ಕ, ತಂಗಿ, ಮಗಳು, ಸ್ನೇಹಿತೆ, ಕೆಲಸದ ಹೆಣ್ಣು ಯಾರನ್ನಾದರೂ ಕೂರಿಸಿಕೊಂಡು ಅವರ ಜೀವನದಲ್ಲಿ ಎಂದಾದರೂ ಇಂತಹ ಘಟನೆ ನಡೆದಿದೆಯೇ ಎಂದು ಅನುನಯಿಸಿ ಕೇಳಿ. ಅವರ ಉತ್ತರ ನಿಮಗೆ ಆಘಾತವನ್ನು ನೀಡುತ್ತದೆ. ಇದು ನೀವು ವಿಂಗಡಣೆ ಮಾಡಿ ಗುರುತಿಸುವ ’ಮಹಿಳಾವಾದಿ’ಗಳಿಗೆ ಮಾತ್ರ ಅಥವಾ ’ಬಾಯಾಳಿ’ಗಳು ಮಾತ್ರ ಅನುಭವಿಸಿದ ಅಥವಾ ಅನುಭವಿಸುವ ಸಂಕಟವಲ್ಲ.

ಅಧಿಕಾರದ ತಕ್ಕಡಿಯಲ್ಲಿ ತೂಕವೇ ಇಲ್ಲದ ತಟ್ಟೆಯಲ್ಲಿ ಕೂತವರೆಲ್ಲರೂ ಆಚೆಬದಿ ತಟ್ಟೆಯಲ್ಲಿ ಕೂತವರ ಮರ್ಜಿ ಕಾದೇ ಬದುಕಬೇಕಾದ ಅನಿವಾರ್ಯತೆ ಇರುತ್ತದೆ. ಇದರ ಜೊತೆಗೆ ಆಚೆ ಬದಿ ಕೂತವರು ಗಂಡಾಗಿದ್ದರಂತೂ ತನ್ನ ಹಿಂಜರಿಕೆಯ ದನಿಯ ಸಂಕಟಕ್ಕಿಂತ ಆಚೆಕಡೆಯವರ ಮಾತಿಗೆ ಮತ್ತು ಅಧಿಕಾರಕ್ಕೆ ಹೆಚ್ಚು ಮಹತ್ವ ಇರುತ್ತದೆ ಎನ್ನುವುದು ಸಮಾಜ ನಮಗೆ ಶತಮಾನಗಳಿಂದ ಕಲಿಸಿದ ಪಾಠ. ಈ ಆಚರಣೆಯನ್ನು ಈ ಅಭಿಯಾನ ಪ್ರಶ್ನಿಸುತ್ತಿದೆ ಎನ್ನುವುದರಲ್ಲಿ ನನಗೆ ಸಮಾಧಾನ ಇದೆ. ನಿಸ್ಸಂಶಯವಾಗಿ ನಾನು ಇದರ ಜೊತೆಯಲ್ಲಿದ್ದೇನೆ.

*

ಹೌದು, ಇದು ಖಂಡಿತವಾಗಿ ಮಹಿಳಾವಾದದ ಒಂದು ಭಾಗವೇ ಸರಿ. ಹೆಣ್ಣಿಗೆ ಸಮಾನ ಅವಕಾಶ, ಸಮಾನ ಹಕ್ಕು ಕೊಡಬೇಕಾದ ಸಮಾಜ, ಶೈಕ್ಷಣಿಕ ಸಂಸ್ಥೆಗಳು, ಕಾನೂನು ಎಲ್ಲವೂ ಹೆಣ್ಣಿನ ರಕ್ಷಣೆಗೆ ಅವಳನ್ನು ಮಾತ್ರ ಹೊಣೆಗಾರಳನ್ನಾಗಿಸಿ, ನೀನು ಇಂತಹ ಬಟ್ಟೆ ಹಾಕಬೇಡ, ಇಷ್ಟು ಹೊತ್ತಿಗೆ ಮನೆಯಿಂದ ಹೊರಗೆ ಹೆಜ್ಜೆ ಇಡಬೇಡ, ಇಷ್ಟು ನಗಬೇಡ, ಇಷ್ಟು ಮಾತನಾಡಬೇಡ, ಇಂತಹ ಕೆಲಸಕ್ಕೆ ಹೋಗಬೇಡ, ಹಾಗೊಂದು ವೇಳೆ ಮಾಡಿದರೆ, ಮೊದಲೇ ಹೇಳಿದ್ದೇನೆ, ನಾನು ಹೊಣೆ ಅಲ್ಲ’ ಎಂದು ‘ಬೇಡ’ಗಳ ಸಂಕೋಲೆಯನ್ನು ಹಾಕುತ್ತಲೇ ಬಂದಿವೆ. ಪುರುಷಪ್ರಧಾನ ವ್ಯವಸ್ಥೆ ಬಿತ್ತಿದ ಈ ನಂಬಿಕೆಯನ್ನು ಎಲ್ಲವೂ, ಎಲ್ಲರೂ ಪೋಷಿಸುತ್ತಲೇ ಬಂದಿದ್ದಾರೆ. ಈಗೀಗ ಅದನ್ನು ಪ್ರಶ್ನಿಸಲಾಗುತ್ತಿದೆ. ಹೊರಗಡೆ ಕೆಲಸ ಮಾಡಲು ಬಂದ ಮಾತ್ರಕ್ಕೆ, ಸಾಮಾಜಿಕ, ಆರ್ಥಿಕ, ರಾಜಕೀಯ, ಕಲಾಮಾಧ್ಯಮ, ಪತ್ರಿಕೋದ್ಯಮದ ಅಧಿಕಾರದ ಶ್ರೇಣಿಯಲ್ಲಿ ನೀವು ನಮಗಿಂತ ಎತ್ತರದಲ್ಲಿದ್ದ ಮಾತ್ರಕ್ಕೆ ನೀವು ಬೇಟೆಗಾರನ ಗುಣಲಕ್ಷಣಗಳನ್ನು ಹೊಂದಿರಬೇಕಿಲ್ಲ ಎಂದು ಗಟ್ಟಿದನಿಯಲ್ಲಿ ಹೇಳುವ ಪ್ರಯತ್ನ ಆಗುತ್ತಿದೆ. ಆ ನಿಟ್ಟಿನಲ್ಲಿ ಇದನ್ನು ಮಹಿಳಾವಾದದ ಭಾಗವಾಗಿಯೇ ನೋಡಬೇಕು.

*

ಇದರ ದುರುಪಯೋಗ ಆಗಬಹುದೆ? ಹೌದು ಆಗಬಹುದು, ಅದರ ನಿವಾರಣೆಗೆ ಬೇಕಾದ ಕ್ರಮಗಳನ್ನು ಹುಡುಕೋಣ, ಅದನ್ನು ಬಿಟ್ಟು ಈ ಅಭಿಯಾನವನ್ನೇ ಒಂದು ಜೋಕ್ ಎಂದು ನೋಡುವುದು ಸೈಡ್ ಎಫೆಕ್ಟ್ ಹೆದರಿಕೆಯಲ್ಲಿ ಡಾಕ್ಟರ ಬಳಿ ಹೋಗುವುದನ್ನೇ ನಿರಾಕರಿಸಿದಂತೆ.