‘ವಿಜ್ಞಾನದ ಬೆಳವಣಿಗೆ’: ಬೆಳಕಿನ ಚಲನೆಯನ್ನೂ ಸೆರೆ ಹಿಡಿಯಬಲ್ಲ ಹೊಸ ಕ್ಯಾಮೆರಾ ಆವಿಷ್ಕಾರ!
FEATURE STORY

‘ವಿಜ್ಞಾನದ ಬೆಳವಣಿಗೆ’: ಬೆಳಕಿನ ಚಲನೆಯನ್ನೂ ಸೆರೆ ಹಿಡಿಯಬಲ್ಲ ಹೊಸ ಕ್ಯಾಮೆರಾ ಆವಿಷ್ಕಾರ!

ಈ ಕ್ಯಾಮೆರಾದ ಸಹಾಯದಿಂದ ಟಾರ್ಚ್‌ನಿಂದ ಹೊರಟ ಲೇಸರ್‌ ಬೆಳಕಿನ ಚಲನೆಯನ್ನೂ ಸ್ಲೋ ಮೋಷನ್‌ನಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.

ಲೇಸರ್‌ ಲೈಟಿನ ಸ್ವಿಚ್ಚನ್ನು ನೀವು ಅದುಮುತ್ತೀರಿ ಎಂದಿಟ್ಟುಕೊಳ್ಳಿ. ನೀವು ಅದುಮಿದ ಮುಂದಿನ ಕ್ಷಣಕ್ಕೆ ಅದು ಅನತಿ ದೂರದಲ್ಲಿರುವ ಗೋಡೆಯನ್ನು ತಲುಪುತ್ತದೆ. ಅದುಮಿದ್ದು ಯಾವಾಗ ತಲುಪಿದ್ದು ಯಾವಾಗ ಎಂಬುದು ನಿಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಇದನ್ನು ನೋಡಲೆಂದೇ ವಿಜ್ಞಾನಿಗಳು ಹೊಸ ಕ್ಯಾಮೆರಾವೊಂದನ್ನು ಆವಿಷ್ಕರಿಸಿದ್ದಾರೆ.

ಸೆಕೆಂಡಿಗೆ ಜಗತ್ತಿನಲ್ಲೇ ಅತೀ ಹೆಚ್ಚು ಫ್ರೇಮ್‌ಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಇದಕ್ಕಿದೆ. ಇದು ಸೆಕೆಂಡಿಗೆ ಬರೋಬ್ಬರಿ 10 ಲಕ್ಷ ಕೋಟಿ (10 ಟ್ರಿಲಿಯನ್‌) ಫ್ರೇಮ್‌ಗಳನ್ನು ಸೆರೆ ಹಿಡಿಯುತ್ತದೆ. ಈ ಕ್ಯಾಮೆರಾದ ಸಹಾಯದಿಂದ ನಿಮ್ಮ ಟಾರ್ಚ್‌ನಿಂದ ಹೊರಟ ಲೇಸರ್‌ ಬೆಳಕಿನ ಚಲನೆಯನ್ನೂ ಸ್ಲೋ ಮೋಷನ್‌ನಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.

10 ಟ್ರಿಲಿಯನ್‌ ಎಂದರೆ ಎಷ್ಟಾಗಬಹುದು ಎಂಬ ಊಹೆ ನಿಮಗಿರಲಿಕ್ಕಿಲ್ಲ. ಉದಾಹರಣೆಯನ್ನು ನೀಡುವುದಾದರೆ ಸಾಮಾನ್ಯ ಎಚ್‌ಡಿ ಟಿವಿಯೊಂದರಲ್ಲಿ ವಿಡಿಯೋ ಪ್ರಸಾರವಾಗಬೇಕಾದರೆ ಸೆಕೆಂಡಿಗೆ 60 ಫ್ರೇಮ್‌ಗಳು ಬೇಕು. ‘ಕ್ಯಾನಾನ್‌ 5ಡಿ ಮಾರ್ಕ್‌ 4’ ನಂಥ ಸ್ವಲ್ಪ ದುಬಾರಿ ಕ್ಯಾಮೆರಾಗಳು ಸೆಕೆಂಡಿಗೆ 120 ಫ್ರೇಮ್‌ಗಳನ್ನಷ್ಟೇ ಸೆರೆ ಹಿಡಿಯುತ್ತವೆ. ಹೀಗೆ ಹೆಚ್ಚಿನ ಫ್ರೇಮ್‌ಗಳನ್ನು ಸೆರೆ ಹಿಡಿದಾಗ ಎಡಿಟಿಂಗ್‌ ಸಮಯದಲ್ಲಿ ವಿಡಿಯೋಗಳನ್ನು ಸ್ಲೋ ಮೋಷನ್‌ ಮಾಡಲು ಸಾಧ್ಯವಾಗುತ್ತದೆ.

ಹಾಗಿರುವಾಗ ಈ ಕ್ಯಾಮೆರಾ 10 ಟ್ರಿಲಿಯನ್‌ ಫ್ರೇಮ್‌ಗಳನ್ನು ಸೆಕೆಂಡೊಂದಕ್ಕೆ ಸೆರೆ ಹಿಡಿಯುತ್ತದೆ. ಹೀಗಿರುವಾಗ ಕಂಡು ಕೇಳರಿಯದಷ್ಟು ನಿಧಾನಗತಿಯಲ್ಲಿ ವಿಡಿಯೋವನ್ನು ವೀಕ್ಷಣೆ ಮಾಡಬಹುದಾಗಿದೆ. ಎಷ್ಟು ನಿಧಾನ ಎಂದರೆ ಸೆಕೆಂಡ್‌ಗೆ ಮೂರು ಲಕ್ಷ ಕಿಲೋಮೀಟರ್‌ ವೇಗದಲ್ಲಿ ಧಾವಿಸುವ ಬೆಳಕಿನ ಚಲನೆಯನ್ನೂ ಇದರಲ್ಲಿ ಕಾಣಬಹುದು.

ಇಂಥಹದ್ದೊಂದು ತಂತ್ರಜ್ಞಾನಕ್ಕೆ ಕಂಪ್ರೆಸ್‌ಡ್‌ ಅಲ್ಟ್ರಾಫಾಸ್ಟ್‌ ಫೋಟೋಗ್ರಫಿ (CAP) ಎನ್ನಲಾಗುತ್ತದೆ. ಇದು ಟ್ರಿಲಿಯನ್‌ ಚಿತ್ರಗಳನ್ನು ಸೆಕೆಂಡಿಗೆ ಸೆರೆ ಹಿಡಿಯುವುದರಿಂದ ಇದಕ್ಕೆ ಟ್ರಿಲಿಯನ್‌ - ಕಂಪ್ರೆಸ್‌ಡ್‌ ಅಲ್ಟ್ರಾಫಾಸ್ಟ್‌ ಫೋಟೋಗ್ರಫಿ (T-CAP) ಎಂದು ಹೆಸರಿಡಲಾಗಿದೆ. ಈ ತಂತ್ರಜ್ಞಾನವನ್ನು ಕ್ಯಾಲ್‌ಟೆಕ್‌ ಮತ್ತು ಕ್ಯೂಬೆಕ್‌ ವಿಶ್ವವಿದ್ಯಾನಿಲಯದ ಸಂಶೋಧಕರು ಕಂಡು ಹಿಡಿದಿದ್ದಾರೆ. ಹೀಗೊಂದು ಕ್ಯಾಮೆರಾ ತಯಾರಿಸಿದ್ದೇವೆ ಎಂದು ಸೋಮವಾರ ಪ್ರಕಟವಾದ ‘ಲೈಟ್‌: ಸೈನ್ಸ್‌ ಆಂಡ್‌ ಅಪ್ಲಿಕೇಶನ್ಸ್‌ ಜರ್ನಲ್‌’ ಎಂಬ ಸಂಶೋಧನಾ ನಿಯತಕಾಲಿಕದಲ್ಲಿ ಪ್ರಕಟಿಸಿದ್ದಾರೆ.

ಈ ಹಿಂದೆ 2015ರಲ್ಲಿ ಸೆಕೆಂಡಿಗೆ 4.4 ಟ್ರಿಲಿಯನ್‌ ಶಾಟ್‌ಗಳನ್ನು ಸೆರೆ ಹಿಡಿಯುವ ಕ್ಯಾಮೆರಾವನ್ನು ಕಂಡು ಹಿಡಿಯಲಾಗಿತ್ತು. ಸದ್ಯ ಅದರ ದುಪ್ಪಟ್ಟಿಗಿಂತ ಹೆಚ್ಚು ವೇಗದ ಕ್ಯಾಮೆರಾವನ್ನು ಕಂಡು ಹಿಡಿಯಲಾಗಿದೆ. ಹೀಗೊಂದು ಅತ್ಯಾಧುನಿಕ, ಅಪರೂಪದ ಕ್ಯಾಮೆರಾದ ಉಪಯೋಗವೇನು ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ.

ಬಯೋ ಮೆಡಿಕಲ್‌ ಮತ್ತು ಮೆಟೇರಿಯಲ್‌ ರಿಸರ್ಚ್‌ನಲ್ಲಿ ಇದನ್ನು ಬಳಸಲಾಗುತ್ತದೆ. ‘ಸದ್ಯ ನಾವು ಈ ಸಾಧನೆ ಮಾಡಿದ್ದೇವೆ’ ಎನ್ನುತ್ತಾರೆ ಸಂಶೋಧನಾ ಲೇಖನದ ಪ್ರಮುಖ ಬರಹಗಾರ ಜಿನ್ಯಾಂಗ್‌ ಲಿಯಾಂಗ್‌. ಕ್ಯಾಲ್‌ಟೆಕ್‌ ಆಪ್ಟಿಕಲ್‌ ಇಮ್ಯಾಜಿಂಗ್‌ ಲ್ಯಾಬೊರೇಟರಿ ನಿರ್ದೇಶಕಾರದ ಅವರು. “ನಾವು ಈಗಾಗಲೇ ಸೆಕೆಂಡಿಗೆ ಕ್ವಾಂಡ್ರಿಲಿಯನ್‌ ಫ್ರೇಮ್‌ಗಳನ್ನು ಸೆರೆ ಹಿಡಿಯುವ ಕ್ಯಾಮೆರಾದ ಸಾಧ್ಯತೆಗಳನ್ನು ಕಂಡುಕೊಂಡಿದ್ದೇವೆ,” ಎಂದಿದ್ದಾರೆ.

ಒಂದೊಮ್ಮೆ ಈ ಕ್ಯಾಮೆರಾವೂ ಬಂದರೆ ಬೆಳಕನ್ನು ಇನ್ನೂ ನಿಧಾನಗತಿಯಲ್ಲಿ ನೋಡಲು ಸಾಧ್ಯವಾಗುತ್ತದೆ. ತಂತ್ರಜ್ಞಾನಗಳು ದಿನದಿಂದ ದಿನಕ್ಕೆ ಬೆಳೆಯುತ್ತಿವೆ. ಮತ್ತು ಅವು ಬೆಳೆಯುತ್ತಿರುವ ವೇಗ ದಂಗುಬಡಿಸುವಂತಿದೆ. ಅದಕ್ಕೆ ತಾಜಾ ಉದಾಹರಣೆಯೇ ಈ ಸೆಕೆಂಡಿಗೆ ಟ್ರಿಲಿಯನ್‌ ಫ್ರೇಮ್‌ಗಳನ್ನು ಸೆರೆ ಹಿಡಿಯುವ ಈ ಕ್ಯಾಮೆರಾ.