samachara
www.samachara.com
#MeToo: ಸೆಲೆಬ್ರಿಟಿಗಳು ಮಾತ್ರವಲ್ಲ, ಸಾಮಾನ್ಯ ಮಹಿಳೆಯರ ನೋವಿಗೂ ದನಿಯಾಗಬೇಕು...
FEATURE STORY

#MeToo: ಸೆಲೆಬ್ರಿಟಿಗಳು ಮಾತ್ರವಲ್ಲ, ಸಾಮಾನ್ಯ ಮಹಿಳೆಯರ ನೋವಿಗೂ ದನಿಯಾಗಬೇಕು...

ನಾಡಿನ ಮಹಿಳಾವಾದಿಗಳು, ಸಾಮಾಜಿಕ ಕಾರ್ಯಕರ್ತೆಯರು, ಸಾಹಿತಿಗಳು, ಸಾಮಾನ್ಯ ಮಹಿಳೆಯರಿಂದ ಉತ್ತರವನ್ನು ಬಯಸಿತು. ಅದರ ಭಾಗವಾಗಿ ಸಾಕಷ್ಟು ಜನ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಕಳುಹಿಸಿದ್ದಾರೆ. ಇದು ಅದರ ಮೊದಲ ಕಂತು.

#ಮೀಟೂ ಹೆಸರಿನ ಹ್ಯಾಶ್ ಟ್ಯಾಗ್ ಕಳೆದ ಒಂದು ವರ್ಷದ ಅಂತರದಲ್ಲಿ ಸುದ್ದಿಕೇಂದ್ರದಿಂದ ಮರೆಯಾಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಅಮೆರಿಕಾದಲ್ಲಿ ಪುನರ್‌ಜನ್ಮ ಪಡೆದ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಹೊರಹಾಕುವ ಈ ಅಭಿಯಾನ ಇವತ್ತು ಕರ್ನಾಟಕದಲ್ಲಿಯೂ ಸದ್ದು ಮಾಡುತ್ತಿದೆ. ಈವರೆಗೆ ಗ್ಲಾಮರ್‌ರಸ್ ಕ್ಷೇತ್ರದಿಂದ ಆರಂಭವಾಗಿ ಪತ್ರಿಕೋದ್ಯಮದವರೆಗೆ, ಯಕ್ಷಗಾನದಂತಹ ಕಲಾಕ್ಷೇತ್ರಗಳಿಂದ ಹಿಡಿದು ನ್ಯಾಯಾಂಗ ವ್ಯವಸ್ಥೆಯೊಳಗೆ; ವೃತ್ತಿಪರ ಮಹಿಳೆಯರು ಸಹೊದ್ಯೋಗಿಗಳಿಂದ, ‘ಬಾಸ್‌’ಗಳಿಂದ ಅನುಭವಿಸುವ ಲೈಂಗಿಕ ಹಿಂಸೆಗಳು ಬಯಲಾಗುತ್ತಿವೆ.

ಈ ಹಿನ್ನೆಲೆಯಲ್ಲಿ, ‘ಸಮಾಚಾರ’ #ಮೀಟೂ ಹೆಸರಿನಲ್ಲಿ ಹಿಂಸೆಗೆ ಗುರಿಯಾದವರ ಅನುಭವಗಳನ್ನು ಪ್ರಕಟಿಸುತ್ತಿದೆ. ಇದನ್ನು ಇನ್ನಷ್ಟು ವಿಸ್ತರಿಸುವ ದೃಷ್ಟಿಯಿಂದ, ಎರಡು ಪ್ರಮುಖ ಪ್ರಶ್ನೆಗಳನ್ನು ಇಟ್ಟುಕೊಂಡು ನಾಡಿನ ಮಹಿಳಾವಾದಿಗಳು, ಸಾಮಾಜಿಕ ಕಾರ್ಯಕರ್ತೆಯರು, ಸಾಹಿತಿಗಳು, ಸಾಮಾನ್ಯ ಮಹಿಳೆಯರನ್ನು ಎದುರುಗೊಂಡಿತು. ಈ ಸಮಯದಲ್ಲಿ ಸಾಕಷ್ಟು ಜನ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಕಳುಹಿಸಿದ್ದಾರೆ. ಇದು ಅದರ ಮೊದಲ ಕಂತು.

ಸಾಮಾಜಿಕ ಕಾರ್ಯಕರ್ತೆ ಮತ್ತು ಲೇಖಕಿಯೂ ಆಗಿರುವ ಸೌಮ್ಯಾ ಕೆ.ಆರ್, ಮೀಟೂ ಅಭಿಯಾವನ್ನು ಹೇಗೆ ಎದುರುಗೊಳ್ಳುತ್ತಿದ್ದಾರೆ ಮತ್ತು ಅದರ ಭವಿಷ್ಯವನ್ನು ಹೇಗೆ ನೋಡುತ್ತಿದ್ದಾರೆ ಎಂದಿಲ್ಲಿ ವಿವರಿಸಿದ್ದಾರೆ.

*

1. ಸದ್ಯ ಭಾರತದಲ್ಲಿ ಕಂಪನ‌ ಎಬ್ಬಿಸಿರುವ #MeToo ಅಭಿಯಾನವನ್ನು ನೀವು ಹೇಗೆ ಎದುರುಗೊಳ್ಳುತ್ತಿದ್ದೀರಾ?

#MeToo ವೇದಿಕೆ ಮಹಿಳೆಯರು ಕೆಲಸಮಾಡುತ್ತಿರುವ ಜಾಗದಲ್ಲಿ ನಡೆಯುತ್ತಿರುವ ದೈಹಿಕ ಹಿಂಸೆ, ಮಾನಸಿಕ ಹಿಂಸೆ ಹಾಗೂ ಭೌತಿಕವಾಗಿ ಹಿಂಸೆ ಅನುಭವಿಸಿದ್ದ ನೋವುಗಳನ್ನು ಹೊರಹಾಕುವ, ಇನ್ನೊಂದು ಅರ್ಥದಲ್ಲಿ ಹಿಂಸೆಗೆ ಪ್ರತಿರೋಧ ಒಡ್ಡುವ ವೇದಿಕೆಯಾಗಿದೆ. ಈ ವೇದಿಕೆ ಸೆಲಬ್ರಿಟಿಗಳ ಧ್ವನಿಯನ್ನು ಮಾತ್ರ ಎತ್ತಿಹಿಡಿಯುತ್ತಿದೆ. ಆದರೆ ಈ ವೇದಿಕೆಯಲ್ಲಿ ಪ್ರತಿರೋಧದ ಧ್ವನಿ ಎಲ್ಲಾ ವಲಯದಲ್ಲಿ ಎಲ್ಲಾ ಸಮುದಾಯದ ಮಹಿಳೆಯರು ಕೂಡ ಧ್ವನಿ ಎತ್ತಿಹಿಡಿಯಬೇಕಿದೆ. ಹಾಗೆಯೇ ಕಾನೂನಿನ ನೆಲೆಯಲ್ಲೂ ಯೋಚಿಸಬೇಕು. ತಪ್ಪು ಮಾಡಿದ ವ್ಯಕ್ತಿಯ ಬರೀ 'ಸಾರಿ' ಗೆ ಮಣಿಯದೇ ಕಾನೂನಿನ ಅಡಿಯಲ್ಲಿ ಶಿಕ್ಷೆಯಾಗುವಂತೆ ಮಾಡಬೇಕಾಗಿದೆ.

ಈಗಾಗಲೇ ನಡೆದಿರುವ ಘಟನೆಗಳನ್ನು #ಮೀಟೂ ಅಡಿಯಲ್ಲಿ ಇವತ್ತು ಪ್ರಶ್ನಿಸುತ್ತಿದ್ದಾರೆ. ಇದು ಕೂಡ ಒಂದು ಇಬ್ಬಂದಿತನ ಅನ್ನಬಹುದು. ಯಾಕೆ ಮಹಿಳೆ ಆ ಕ್ಷಣದಲ್ಲಿ ಎದುರಿಸಿದ್ದ ನೋವು, ಹಿಂಸೆಯನ್ನು ಆ ಕ್ಷಣದಲ್ಲಿ ಪ್ರಶ್ನಿಸಿಲ್ಲ? ಹೀಗ ಇಷ್ಟು ವರ್ಷಗಳ ನಂತರ ಧ್ವನಿ ಎತ್ತಿರುವುದು ಒಂದಷ್ಟು ಜನರಿಗೆ ಅನುಮಾನಕ್ಕೆ ಕಾರಣವಾಗಬಹುದು.

ಆದರೆ ಆಶಯಾತ್ಮವಾಗಿ ನೋಡಿದರೆ, ಈಗಲೂ ಮುಕ್ತವಾಗಿ ನಮಗೆ ಆಗಿರುವ ಅನ್ಯಾಯಗಳನ್ನು ಪ್ರಶ್ನಿಸದೇ ಹೋದಲ್ಲಿ ಈ ರೀತಿಯ ಘಟನೆಗಳು ಇನ್ನು ಜಾಸ್ತಿಯಾಗುತ್ತವೆ ಎಂದು ಮನಗೊಂಡು ಈ ವೇದಿಕೆ ಮೂಲ ಧ್ವನಿ ಜೋರಾಗಿ ಕೇಳಿಬರುತ್ತಿರಬಹುದು.

ಇಲ್ಲಿ ಬಹಳ ಮುಖ್ಯವಾಗಿ ಮನೆಕೆಲಸ, ಗಾರ್ಮೆಂಟ್ಸ್ ಕೆಲಸ, ಬೀದಿ ಬದಿ ವ್ಯಾಪರ ಈ ಎಲ್ಲಾ ಕ್ಷೇತ್ರದಲ್ಲಿಯೂ ಈ ರೀತಿ ಘಟನೆಗಳು ಆಗುತ್ತಲೇ ಇರುತ್ತವೆ. ಆದರೆ ಎಲ್ಲಯೂ ಇಷ್ಟು ವ್ಯಾಪಕವಾಗಿ ಚರ್ಚಿಸಿಲ್ಲ ಅನ್ನುವುದು ಕೂಡ ಗಮನಿಸಬೇಕು. ಈ ವೇದಿಯಲ್ಲೂ ಎಲ್ಲಾ ವಲಯದಲ್ಲಿರುವ ಮಹಿಳೆಯರು ಧ್ವನಿಎತ್ತಿ ಪ್ರಶ್ನಿಸಿ ಕಾನೂನಿನ ಮೂಲಕ ನ್ಯಾಯಪಡೆಯುವ ನಿಟ್ಟಿನಲ್ಲಿ ಯೋಚಿಸಬೇಕು.

ದೊಡ್ಡ ಸಂಸ್ಥೆಗಳಿಂದ ಹಿಡಿದು ಸಣ್ಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ ಸುರಕ್ಷೆಯಾಗಿ ಯೋಚಿಸಬೇಕು. ಕೇವಲ ಕೆಲಸ ಮಾಡುವ ಜಾಗಗಳಲ್ಲದೇ ಕುಟುಂಬ ವ್ಯವಸ್ಥೆಯ ಒಳಗೋಡೆ ನಡುವೆ ಕೂಡ ಈ ರೀತಿಯ ಘಟನೆಗಳು ಆಗುತ್ತಲೆ ಇರುತ್ತವೆ. ಇವೂ ಕೂಡ ಮುಕ್ತವಾಗಿ ಹಂಚಿಕೊಳ್ಳಬೇಕು.

2. ಮಹಿಳಾ ಸಮುದಾಯಕ್ಕಾಗಿ ಕೆಲಸ ಮಾಡಿದ ಹಿನ್ನೆಲೆಯಲ್ಲಿ, ನೀವು ಈ ಅಭಿಯಾನವನ್ನು ಈ ಕಾಲಘಟ್ಟದ ಮಹಿಳಾವಾದದ ಭಾಗ ಅಂತ ಭಾವಿಸುತ್ತೀರಾ?

#MeToo ವೇದಿಕೆಯಲ್ಲಿ ಇಂದು ಸಿನಿಮಾ, ಪತ್ರಕರ್ತರ ಕ್ಷೇತ್ರದಲ್ಲಿ ಹೆಚ್ಚು ಮಹಿಳೆಯರು ಈ ರೀತಿಯ ಘಟನೆಗಳನ್ನು ಮುಕ್ತವಾಗಿ ಪ್ರಶ್ನಿಸುತ್ತಿದ್ದಾರೆ. ಇದು ಎಲ್ಲಾ ಸಮುದಾಯ ಹೆಣ್ಣುಮಕ್ಕಳ ಧ್ವನಿಯಾಗಬೇಕು. ಕೇವಲ ಸೆಲಬ್ರಿಟಿಗಳ ಧ್ವನಿ ಮಾತ್ರ ಅಲ್ಲ. #MeToo ವೇದಿಕೆಯಲ್ಲಿ ಹೆಣ್ಣುಮಕ್ಕಳು ಅವರಿಗಾದ ನೋವನ್ನು, ಹಿಂಸೆಯನ್ನು ಹೇಳಿಕೊಳ್ಳುತ್ತಿದ್ದರೆ. ಅದನ್ನು ವ್ಯಂಗ್ಯ ಮಾಡುವ, ಅಪಹಾಸ್ಯ ಮಾಡಿ ಕೊಂಕುಮಾತುಗಳಿಂದಲೇ ಚರ್ಚಿಸುವುದನ್ನು ನಾವು ಸಾಮಜಿಕ ಜಾಲತಾಣಗಳಲ್ಲಿ ನೋಡುತ್ತೇವೆ. #MeToo ವೇದಿಕೆ ಪುರುಷ ದ್ವೇಷ ಅಲ್ಲ. ಆದರೆ ಚಪಲರನ್ನು ಪ್ರಶ್ನಿಸುವ, ಮತ್ತಷ್ಟು ಚಪಲಚನ್ನಿಗರಿಗೆ ಎಚ್ಚರಿಕೆ ನೀಡುವ ವೇದಿಕೆಯಾಗಿದೆ. ಮಹಿಳೆ ಕೆಲಸಮಾಡುವ ಜಾಗದಲ್ಲಿ ಸುರಕ್ಷಿತವಾಗಿರಬೇಕು ಎಂದು ಹೇಳುವುದು ಕೂಡ ಈ ವೇದಿಕೆಯ ಮುಖ್ಯ ಉದ್ದೇಶವೂ ಆಗಿರಬಹುದು.

ಹಿಂದಿನ ದಿನಗಳನ್ನು ಗಮನಿಸಿದರೆ ಇವತ್ತಿಗೂ ಕೂಡ ತಳ ಸಮುದಾಯದಲ್ಲಿ ಹೆಚ್ಚು ಈ ರೀತಿ ಘಟನೆಗಳು ನಡೆಯುತ್ತಿವೆ; ಆದರೆ ಸುದ್ದಿಯಾಗುವುದಿಲ್ಲ. ಸುದ್ದಿ ಆದರೂ ಅದನ್ನ ಅಲ್ಲೇ ಮೊಟುಕುಗೊಳಿಸಿ ತೀರ್ಮಾನ ಮಾಡುತ್ತಾರೆ. #MeToo ವೇದಿಕೆ, ಮೊದಲೇ ಹೇಳಿದಂತೆ ಇದು ಸೆಲಬ್ರಿಟಿ ಧ್ವನಿ ಮಾತ್ರವೇ ಆಗಬಾರದು. ಸುರಕ್ಷಿತ ಜಾಗದಲ್ಲಿ ನಿಂತು ಧ್ವನಿ ಮಾಡುತ್ತಿದ್ದಾರೆ. ಆದರೆ ಎಷ್ಟೋ ಸಮುದಾಯಗಳು ಪ್ರತಿಭಟಿಸುವ ಶಕ್ತಿ ಇದ್ದರೂ, ಪ್ರತಿಭಟಿಸುವುದಕ್ಕೆ ಆಗುತ್ತಿಲ್ಲ. ಅದಕ್ಕೆ ಈ ವ್ಯವಸ್ಥೆಯು ಕಾರಣ. ಒಂದೊಮ್ಮೆ ಪ್ರತಿಭಟಿಸಿದರೂ ಸಾರ್ಥಕತೆಯಿಲ್ಲ ಅನ್ನುವುದು ಗಮನಿಸಬೇಕು.

ದಿನ ಕಳೆದಂತೆ ಎಲ್ಲಾ ರಂಗಗಳಲ್ಲಿ ಮಹಿಳೆಯರ ಉದ್ಯೋಗದ ಅಂಕಿ ಅಂಶ ಜಾಸ್ತಿಯಾಗುತ್ತಿದೆ. ಮಹಿಳೆ ತನ್ನ ಬದುಕನ್ನ ಕಟ್ಟಿಕೊಳ್ಳಲು, ಆರ್ಥಿಕವಾಗಿ ಸಬಲೀಕರಣ ಆಗುದಕ್ಕೂ ಕೆಲಸಮಾಡುತ್ತಾಳೆ. ಆದರೆ ಈ ವ್ಯವಸ್ಥೆ ಹೆಣ್ಣನ್ನು ಕೇವಲ ದೇಹದ ಐಡೆಂಟಿಟಿಯಿಂದ ನೋಡುತ್ತದೆಯೇ ವಿನಃ, ಆಕೆಯ ಪ್ರಾಮಾಣಿಕತೆ, ನೈತಿಕತೆ, ಪ್ರತಿಭೆ ಇವೆಲ್ಲವೂ ಕೂಡ ಗಮನಿಸುವುದಿಲ್ಲ.

ಒಟ್ಟಾರೆ ಇದು ಎಲ್ಲಾ ವಲಯಗಳಲ್ಲಿಯೂ ಮಹಿಳೆಯರು ನಮಗಾಗಿರುವ ಅನ್ಯಾಯವನ್ನು ಹೇಳಬೇಕು. ಈ ಮೂಲಕ ಚಪಲ ತೋರ್ಪಡಿಸುವವರಿಗೆ ಎಚ್ಚರಿಕೆ ರವಾನಿಸಬೇಕಿದೆ.