ಗಿಂಡಿ ಮಾಣಿ ಕಿಂಡಿಯಲ್ಲಿ ಕಂಡ ರಾಸಲೀಲೆ; ಸರ್ಕಾರಿ ಬಾಬಾ ಆಸ್ಪತ್ರೆಯಿಂದ ಆರಂಭ...
FEATURE STORY

ಗಿಂಡಿ ಮಾಣಿ ಕಿಂಡಿಯಲ್ಲಿ ಕಂಡ ರಾಸಲೀಲೆ; ಸರ್ಕಾರಿ ಬಾಬಾ ಆಸ್ಪತ್ರೆಯಿಂದ ಆರಂಭ...

ಆಗಸ್ಟ್ 25ರಂದು “EXPLOSIVE: ರಾಘವೇಶ್ವರ ಸ್ವಾಮಿ ‘ಸ್ಟಾರ್ ವಿಟ್ನೆಸ್’ ಬತ್ತಳಿಕೆಯಲ್ಲಿ ಚೊಚ್ಚಲ ಕಾದಂಬರಿಯ ಅಸ್ತ್ರ” ಎಂಬ ವರದಿಯನ್ನು ‘ಸಮಾಚಾರ’ ಪ್ರಕಟಿಸಿತ್ತು. ಅದರ ಮುಂದುವರಿದ ಬೆಳವಣಿಗೆ ಇಲ್ಲಿದೆ. 

ಕೆಲವು ದಿನಗಳ ಹಿಂದೆ ಕಾದಂಬರಿಯೊಂದನ್ನು ಬರೆಯುತ್ತಿರುವುದಾಗಿ ಹೇಳಿದ್ದ, 27 ವರ್ಷದ ಅಭಿರಾಮ್ ಜಿ ಹೆಗಡೆ ಎಂಬ ವ್ಯಕ್ತಿತ್ವವನ್ನು ಪರಿಚಯಿಸಿದ್ದೆವು. ಹೊಸನಗರದ ರಾಮಚಂದ್ರಾಪುರ ಮಠದ ಹಲವು ಪ್ರಕರಣಗಳಲ್ಲಿ ‘ಸ್ಟಾರ್ ವಿಟ್ನೆಸ್’ ಆಗಿದ್ದ, ಒಂದು ದಶಕ ಮಠದಲ್ಲಿ ‘ಗಿಂಡಿ ಮಾಣಿ’ಯಾಗಿ ದುಡಿದಿದ್ದ ಅಭಿರಾಮ್ ಕತೆ ಹಲವು ಆಯಾಮಗಳಲ್ಲಿ ಹೊರಬರಲಿದೆ. ಅದರ ಮೊದಲ ಭಾಗ ಇಲ್ಲಿದೆ. ಓದಿ ಮತ್ತು ಇವತ್ತಿನ ಯಾವುದೇ ಘಟನೆಗೆ, ಸ್ಥಳಗಳಿಗೆ, ವ್ಯಕ್ತಿಗಳಿಗೆ ಸಂಬಂಧವನ್ನು ಕಲ್ಪಿಸಬೇಡಿ. ಇದು ಸಂಪೂರ್ಣ ಕಾಲ್ಪನಿಕ.

ಅಂದಹಾಗೆ ಕಾದಂಬರಿಯ ಹೆಸರು; ‘ಬಯಾಕ- ONE ಆಸಿಡ್ ಟ್ರಿಪ್’. ಇಲ್ಲಿರುವುದು ಅದರ ಅಧ್ಯಾಯ 1.

ಅಭಿರಾಮ್ ಜಿ ಹೆಗಡೆ. 
ಅಭಿರಾಮ್ ಜಿ ಹೆಗಡೆ. 
/ಫೇಸ್‌ಬುಕ್. 

ಅಪ್ಪ ಬೆಂಗಳೂರಿನ 'ಸರ್ಕಾರಿ ಬಾಬಾ ಆಸ್ಪತ್ರೆ'ಯ ಐಸಿಯುನಲ್ಲಿ ಮಲಗಿದ್ದರು. ಪಕ್ಕದಲ್ಲಿ ನಾನಿದ್ದೆ. "ಡ್ಯೂಟಿ ಡಾಕ್ಟರ್ ಕರಿತಿದಾರೆ" ಅಂತ ನರ್ಸ್ ಬಂದು ತಿಳಿಸಿದಾಗ ನಾನು ಮತ್ತೆ ವಾಸ್ತವಕ್ಕೆ ಮರಳಿದೆ.

ಅಪ್ಪನನ್ನು ರಾತ್ರಿ ಎಂಟುವರೆ ಹೊತ್ತಿಗೆ ಮೊದಲ ಮಹಡಿಯಲ್ಲಿರುವ ಐಸಿಯುಗೆ ಶಿಫ಼್ಟ್ ಮಾಡಲಾಗಿತ್ತು. ಸಂಜೆ ಹೊತ್ತಿಗೆ ಮನೆಯಲ್ಲೇ ಅವರಿಗೆ ಅಸ್ತಮಾ ಶುರುವಾಗಿತ್ತು. ಡಾಕ್ಟರ್‌ನ್ನು ಕರೆದುಕೊಂಡು ಬಂದಾಗ, ತುರ್ತಾಗಿ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದರು. ತಕ್ಷಣ ಆಂಬುಲೆನ್ಸ್ ಕರೆಸಿ, ಸರ್ಕಾರಿ ಬಾಬಾ ಆಸ್ಪತ್ರೆಯ ತುರ್ತು ನಿಗಾ ಘಟಕದ ಮುಂದೆ ಬಂದಿಳಿದಾಗ, ಅಪ್ಪ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಸ್ಟ್ರೆಚರ್ ಮೇಲೆಯೇ ಐವಿ, ಸಿಪಿಆರ್‌ ಮುಗಿಸಿದ ಡ್ಯೂಟಿ ಡಾಕ್ಟರ್ ಐಸಿಯುಗೆ ಶಿಫ್ಟ್‌ ಮಾಡಿಸಿದ್ದರು. ಹಾಗೆ ಸುಮಾರು ಎರಡು ಗಂಟೆ ವಿಚಿತ್ರವಾದ ಪರಿಸರದ ನಡುವೆ ಕಷ್ಟಪಟ್ಟು ಉಸಿರು ಎಳೆದುಕೊಳ್ಳುತ್ತ ಮಲಗಿದ್ದ ಅಪ್ಪನ ಮುಖ ನೋಡಿಕೊಂಡು ಕುಳಿತಿದ್ದೆ. ನರ್ಸ್ ಕರೆದಾಗ ಎದ್ದು ಹೊರಗೆ ಹೊರಟೆ.

ಐಸಿಯುನ ಕೌಂಟರ್ ಮುಂದೆ ಜನ ನಿಂತಿದ್ದರು. ನಾಲ್ಕಡಿ ಎತ್ತರದ, ಮೂರೂವರೆ ಅಡಿ ಅಗಲದ ಸ್ವಾಗತಕಾರರ ಡೆಸ್ಕ್‌ ಅದು. ಹೊದಿಸಿದ್ದ ಗ್ರಾನೈಟ್ ಕಲ್ಲಿನ ಮೇಲೆ ಒಂದು ರಿಜಿಸ್ಟ್ರಿ, ಸ್ಯಾನಿಟೈಸರ್, ಇಂಜೆಕ್ಷನ್ ಮತ್ತಿತರ ವಸ್ತುಗಳನಿಟ್ಟ ಟ್ರೇ ಕಾಣಿಸುತ್ತಿತ್ತು. ಎದುರಿಗೆ ಬಂದು ನಿಂತಾಗ ಕುಳಿತಿದ್ದ ಸಿಸ್ಟರ್ ಎದ್ದು ನಿಂತು, "ಸಾರ್ ಅಲ್ಲಿ ಡಾಕ್ಟರ್ ಕೂತಿದಾರೆ ಹೋಗಿ,'' ಎಂದು ಕೈತೋರಿಸಿದರು. ಅತ್ತ ಹೆಜ್ಜೆ ಹಾಕಿದೆ. ಮಾರು ದೂರದಲ್ಲಿ ಕುಳಿತಿದ್ದ ಡಾಕ್ಟರ್ ನಾನು ಬರುವುದನ್ನು ಗಮನಿಸಿದರು. "ಕರೆದ್ರಂತೆ," ಅಂತ ಕೇಳಿದಾಗ ಎದುರಿಗೆ ನಿಂತಿದ್ದೆ. "ಹೆಸರೇನ್ರಿ?" ಅಂತ ಕೇಳಿದರು. "ಅಭಿ… ಅಭಿಮನ್ಯು," ಅಂದೆ.

"ನಿಮ್ಮ ಹೆಸರಲ್ಲರೀ, ಪೇಷೆಂಟ್ ಹೆಸರು," ಅಂದರು ಡಾಕ್ಟರ್. "ಓ ಸಾರ್, ಹೆಗಡೆ ಅಂತ ಇರುತ್ತೆ ನೋಡಿ," ಅಂದೆ ತಲೆ ಕೆರೆದುಕೊಳ್ಳುತ್ತ. "ಅದೇ ಬೆಡ್ ನಂಬರ್ 18 ಅಲ್ವಾ? ನಿಮ್ಮ ಕಡೆಯವರನ್ನೆಲ್ಲಾ ಬಂದು ನೋಡಿಕೊಂಡು ಹೋಗುವಂತೆ ಹೇಳಿ. ಅವರಿಗೆ ಹಾರ್ಟ್ ಫೆಲ್ಯೂರ್ ಆಗಿದೆ. ಮಲ್ಟಿಪಲ್ ಆರ್ಗನ್ಸ್ ಕೂಡ ಫೆಯಿಲ್ಯೂರ್ ಆಗಿವೆ. ಕ್ರಿಯಾಟಿನ್ ಲೆವೆಲ್ ಜಾಸ್ತಿ ಆಗಿದೆ..." ಒಟ್ನಲ್ಲಿ ಅಪ್ಪ ಬದುಕಲ್ಲ ಅಂತ ಅವರ ಭಾಷೆಯಲ್ಲಿ ವಿವರಿಸುತ್ತಿದ್ದರು. ದೂರದಿಂದಲೇ ನರ್ಸೊಬ್ಬಳು, "ಸಾರ್ ಈಗ ಯಾಕೆ ಹೇಳ್ತಿದೀರಾ? ಬೆಳಗ್ಗೆ ಹೇಳಿ. ಇಲ್ಲಾ ಅಂದ್ರೆ ಈಗ್ಲೇ ಎಲ್ಲ ಸಂಬಂಧಿಕರು ಬಂದು ಗಲಾಟೆ ಮಾಡೋಕೆ ಶುರುಮಾಡ್ತಾರೆ. ಬೇರೆಯವರಿಗೆ ತೊಂದರೆ ಆಗುತ್ತೆ,'' ಎನ್ನುವುದು ಕೇಳಿಸುತ್ತಿತ್ತು.

ನಾನು ಅವಳನ್ನೇ ನೋಡ್ತಾ ಇದ್ದೆ. ಮೊದಲೆಲ್ಲಾ ಆಗಿದ್ದರೆ ತೀರಾ ಸಣ್ಣ ಸಣ್ಣ ವಿಷಯಕ್ಕೂ ಗಲಾಟೆ, ಜಗಳ ಮಾಡ್ತಿದ್ದೆ. 'ಅಪ್ಪ ಸಾಯ್ತಾನೆ. ಆದರೆ ಅದನ್ನು ಈಗ ಹೇಳೋಕೆ ಹೋಗ್ಬೇಡಿ, ಬೆಳಗ್ಗೆಯೇ ಹೇಳಿ' ಅಂತ ಯಾರೋ ಎದುರಿಗೆ ಇದ್ದವರು ಹೇಳುತ್ತಿದ್ದಾರೆ. ಆದರೆ ಸಿಟ್ಟು ಎಂಬುದು ಬರಲೇ ಇಲ್ಲ. ಎದುರಿಗಿದ್ದ ಡಾಕ್ಟರ್‌ನ್ನೇ ಮತ್ತೆ ಕೇಳಿದೆ, "ಇನ್ನು ಎಷ್ಟು ಸಮಯ ಇದೆ?" ಅಂತ. ಅದಕ್ಕೆ ಕಾರಣವೂ ಇತ್ತು. ಅಕ್ಕ ಇರೋದು ಫ್ರಾನ್ಸ್‌ನಲ್ಲಿ. ಇನ್ನೊಬ್ಬಳು ಕುಂಟಾದಲ್ಲಿ. ಮತ್ತೊಬ್ಬಳು ಸಿರಸಿಯಲ್ಲಿ. ಈಗ ಹೇಳಿದರೂ ಅವರು ಮೂವರು ಬರೋದು ನಾಳೆ ಸಂಜೆನೇ ಆಗುತ್ತೆ.

ಎದುರಿಗೆ ಇದ್ದ ಡಾಕ್ಟರ್‌ಗೆ ಇದ್ಯಾವುದೂ ಬೇಕಾಗಿರಲಿಲ್ಲ. "ಆದಷ್ಟು ಬೇಗ ಕರೆಸಿ. ನಾಳೆ ಬೆಳಗ್ಗೆ ಎಚ್‌ಓಡಿ ಬಂದು ವಿವರಿಸುತ್ತಾರೆ. ಸದ್ಯ ವೆಂಟಿಲೇಟರ್‌ನಲ್ಲಿ ಇಟ್ಟಿದ್ದೀವಿ,'' ಎಂದು ಸಾಗ ಹಾಕಿದ.

*

ಆತನಿಗಿರುವ ವೃತ್ತಿ ಬಗೆಗಿನ ಆಶಾಡಭೂತಿತನವನ್ನು ಹಿಂದೆ ಬಿಟ್ಟು ಐಸಿಯು ದಾಟಿ, ಲಿಫ್ಟಲ್ಲಿಳಿದು ಎಮರ್ಜೆನ್ಸಿ ಗೇಟಿನಿಂದ ಹೊರಬಂದೆ. ಬಲಕ್ಕೆ ಒಂದು ನಂದಿನಿ ಬೂತ್ ಇತ್ತು. ಎಡಕ್ಕೆ ಹೊರಳಿಕೊಂಡು ಮೇನ್‌ ಗೇಟ್‌ದಾಟಿ ಮುಖ್ಯರಸ್ತೆ. ಅಲ್ಲಿಗೆ ಬಂದು ಸಿಗರೇಟು ಹಚ್ಚಿದೆ. ಒಂದಾಯಿತು. ಎರಡಾಯಿತು. ಮೂರು... ನಾಲ್ಕು... ಐದನೇ ಸಿಗರೇಟು ಖಾಲಿ ಆಯ್ತು. ಬ್ಲಾಂಕ್ ಆದಂತಾಗಿರುವ ತಲೆ ಮಂಕಾಗಿಯೇ ಕುಳಿತಿದೆ. ಮೈಯಲ್ಲಿ ಶಕ್ತಿಯೇ ಇಲ್ಲವೇನೋ ಎಂಬ ಭಾವನೆ. 'ಏನ್ ಮಾಡ್ಲಿ? ಕೈಯಲ್ಲಿ ದುಡ್ಡಿಲ್ಲ. ಆದರೆ ದುಡ್ಡು ಹೊಂದಿಸೋದು ಕಷ್ಟ ಆಗಲಾರದು. ಆದರೆ ಹೊರಗೆ ಅಪ್ಪನ ಸಾವು ದೊಡ್ಡ ಸುದ್ದಿಯಾಗುತ್ತದೆ. ನಾನು ಸ್ವಾಮ್ಗಳ ವಿರೋಧಿಸಿದ್ದಕ್ಕೆ ಹೀಗಾಯ್ತು ಅಂತ ಜನ ಮಾತಾಡೋಕೆ ಶುರುಮಾಡ್ತಾರೆ. ಹದಿನೈದು ದಿನ ಹಿಂದೆ ಮನೆ ಹತ್ತಿರ ಹಣತೆ, ಕುಂಕುಮ, ನಿಂಬೆ ಹಣ್ಣು ಸಿಕ್ಕಿತ್ತು. ಆದರೆ ಅದನ್ನು ನಮ್ ಜೋಯಿಸರ ಹತ್ತಿರ ಕೇಳಿಸಿದಾಗ, ಈ ಸಾರಿಯ ಕೆಲಸ ಸ್ವಾಮ್ಗಳದ್ದಲ್ಲ ಅಂತ ಹೇಳಿದ್ದರು. ಇವತ್ತು ನೋಡಿದರೆ ಅಪ್ಪನೇ ಬದುಕೊಲ್ಲ ಅಂತಿದಾರೆ…', ತಲೆಯಲ್ಲಿ ಯೋಚನೆಗಳು ಓಡುತ್ತಿದ್ದವು.

ತಕ್ಷಣ ಯಾರ ಬಳಿಯಾದರೂ ಮಾತನಾಡುವುದು ಉಳಿದಿರುವ ದಾರಿ. ಫೋನ್ ಕೈಗೆತ್ತಿಕೊಂಡೆ. ಅತ್ತ ಕಡೆಯಿಂದ ಅಣ್ಣ, 'ಹಲೋ...' ಅಂದ. "ಅಣ್ಣಾ, ಅಪ್ಪಂಗೆ ಹಾರ್ಟ್ ಫೇಯಿಲ್ಯೂರ್ ಆಗಿದೆ. ಬದುಕೊಲ್ಲ, ಎಲ್ಲಾರಿಗೂ ಕರಿರಿ ಅಂತ ಡಾಕ್ಟರ್ ಹೇಳ್ತಾ ಇದಾರೆ,'' ಅಂತ ಒಂದೇ ಸಮನೆ ನಡೆದಿದ್ದನ್ನು ವಿವರಿಸಿದೆ. ಅಣ್ಣ ಅಂದರೆ ಶಿವ. ನನಗಿಂತ ವಯಸ್ಸಿನಲ್ಲಿ 10 ವರ್ಷ ದೊಡ್ಡವನು. ಆದರೆ ನನಗೆ ಸ್ನೇಹಿತ. ಕಷ್ಟಕಾಲದಲ್ಲಿ ಜತೆಗಿರುವವನು. ಇವತ್ತೂ ಅಪ್ಪನ ಈ ಪರಿಸ್ಥಿತಿಯಲ್ಲೂ ಜತೆಗೆ ನಿಂತಿದ್ದ. "ಧೈರ್ಯವಾಗಿರು. ಮೊದಲು ಅಕ್ಕಂದಿರಿಗೆ ಫೋನ್ ಮಾಡು," ಅಂದ. ನಾನು ನನ್ನ ಗೊಂದಲವನ್ನೆಲ್ಲಾ ಅವನ ಮುಂದಿಟ್ಟೆ. ಈ ಸೂಳೆ ಮಕ್ಕಳು ಊರಿಗೆ ಹೋಗೋದಕ್ಕೆ ಬಿಡ್ತಾರೋ ಇಲ್ವೋ?. ಅಲ್ಲಿಗೆ ಬಾಡಿ ಹಾಕ್ಕೊಂಡು ಹೋದರೆ ಕಾಂಪ್ಲಿಕೇಶನ್ ಆದರೂ ಆಗಬಹುದು. ಅದರ ಹಿಂದೆ ದೊಡ್ಡ ಕತೆನೇ ಇದೆ. ಅದು ಶಿವಂಗೂ ಗೊತ್ತಿದೆ. ಅವನೂ ಎಲ್ಲಾ ಸಾಧ್ಯತೆಗಳನ್ನು ವಿವರಿಸಿದ. ಕೊನೆಗೆ, ತುರ್ತಾಗಿ ಅಕ್ಕಂದಿರಿಗೆ ಕಾಲ್ ಮಾಡೋಕೆ ನೆನಪಿಸಿದ.

ಮೊದಲ ಅಕ್ಕಂಗೆ ಕಾಲ್ ಮಾಡೋಕೆ ಹೊರಟೆ. ಆದರೆ ಏನು ಅಂತ ಹೇಳೋದು ಅಂತ ಯೋಚನೆ ಮಾಡುತ್ತಿದ್ದೆ. ಪಟೇಲ್ರ ಕರೆ ಬಂತು. ಅಪ್ಪನ ಆಸ್ಪತ್ರೆಗೆ ಅಡ್ಮಿಟ್ ಮಾಡಿಸಿದ್ದು ಅವನಿಗೆ ಗೊತ್ತಿತ್ತು. ಅದಕ್ಕಾಗಿ ಹುಡುಕಿಕೊಂಡು ಬಂದಿದ್ದ. "ಇಲ್ಲೇ ಗೇಟ್ ಹತ್ತಿರ ಇದೀನಿ,'' ಅಂದೆ. ಅವನು ಬರೋವಷ್ಟರಲ್ಲಿ ಮತ್ತೆರಡು ಸಿಗರೇಟು ಖಾಲಿ ಆದವು. ಪಟೇಲ ಬಂದ ಮೇಲೆ ಎಲ್ಲ ವಿವರಿಸಿ ಮತ್ತೆ ಸರ್ಕಾರಿ ಬಾಬಾ ಆಸ್ಪತ್ರೆಯ ಎಮರ್ಜೆನ್ಸಿ ಬಾಗಿಲು ದಾಟಿ ಐಸಿಯುಗೆ ಬಂದೆ.

ಆಸ್ಪತ್ರೆಯಲ್ಲಿ ನಾನಾ ವಿಭಾಗಗಳು ಇರುತ್ತವೆ. ಆದರೆ ಐಸಿಯು ಮಾತ್ರ ಬೇರೇನೇ ಫೀಲ್ ಕೊಡುತ್ತೆ; ಅದೊಂದು ವಿಚಿತ್ರ ಅನುಭವ. ಒಂದು ಕಡೆ ಅಪ್ಪನ ಹಾರ್ಟ್ ಬೀಟ್, ಪಲ್ಸ್ ಶಬ್ಧಗಳು ಮಾನಿಟರ್‌ನ ಮೂಲಕ ಬೀಪ್... ಬೀಪ್... ಬೀಪ್... ಅಂತ ಕೇಳ್ತಾ ಇದ್ದವು. ಇಡೀ ಐಸಿಯುನಲ್ಲಿ ಇದೊಂದೇ ಶಬ್ದ. ಬೀಪ್, ಬೀಪ್ ಮತ್ತು ಬೀಪ್. ಕೆಲವೊಮ್ಮೆ ಪಕ್ಕದ ಬೆಡ್‌ನ ಪೇಷೆಂಟ್‌ಗೆ ಹಾಕಿದ ಮಾನಿಟರ್‌ಗಳು ಜೋರಾಗಿ ಹೊಡೆದುಕೊಳ್ಳಲು ಆರಂಭಿಸುತ್ತವೆ. ಡಾಕ್ಟರ್‌ಗಳು, ನರ್ಸ್‌ಗಳೆಲ್ಲಾ ಓಡೋಡಿ ಬರುವುದು ಕಾಣಿಸುತ್ತದೆ. ನಮ್ಮ ಬೆಡ್‌ ಎದುರಿಗೆ ಹಾಕಿದ್ದ ಪರದೆ ಎಳೆಯುತ್ತಾರೆ. ಅವರೆಲ್ಲಾ ಬೀಪ್ ಬೀಪ್‌ ಅಂತ ಹೊಡೆದುಕೊಳ್ಳುವ ಬೆಡ್‌ ಮುಂದೆ ಹೋಗಿ ನಿಲ್ಲುತ್ತಾರೆ. ಕೆಲ ಹೊತ್ತಿಗೆ ಎಲ್ಲರ ನಿಟ್ಟುಸಿರುಗಳು ಕೇಳಿಸುತ್ತವೆ. ಇನ್ನು ಕೆಲ ಹೊತ್ತಿಗೆ ಆಗಷ್ಟೆ ಜೀವ ಹೋದ ದೇಹವನ್ನು ಹೊತ್ತ ಸ್ಟ್ರಚರ್‌ಗಳು ಐಸಿಯು ದಾಟಿ ಮುಂದೆ ಹೋಗುತ್ತವೆ. ಬಾಗಿಲು ಮುಚ್ಚುತ್ತದೆ. ಮತ್ತೆ ಬೀಪ್ ಬೀಪ್ ಮತ್ತು ಬೀಪ್ ಅಷ್ಟೆ...

ನನಗೆ ಆಸ್ಪತ್ರೆ ಯಾವತ್ತಿಗೂ ಹೊಸತಲ್ಲ. ಸ್ವಾಮ್ಗಳ ಜೊತೆ ಇದ್ದಾಗ ಮನೆಗೆ, ಶಿವನ ಮನೆಗೆ ಹೋಗಬೇಕು ಅನ್ನಿಸೋದು. ಆಗೆಲ್ಲಾ ಹುಷಾರಿಲ್ಲ ಅಂತ ಹೇಳಿ ಆಸ್ಪತ್ರೆಗೆ ಹೋಗಿ ಅಡ್ಮಿಟ್ ಆಗ್ಬಿಟ್ತಿದ್ದೆ. ಅಲ್ಲೊಂದೆರಡು ದಿನ ಇದ್ದು ಆಮೇಲೆ ಶಿವನ ಮನೆಗೆ ಹೋಗ್ತಿದ್ದೆ. ಅದೊಂತರ ಆಸ್ಪತ್ರೆ ಜೀವನನೇ ಆಗಿ ಹೋಗಿತ್ತು. ಆದರೆ ಇವತ್ತು ಹಾಗಿಲ್ಲ. ಇದು ಆಸ್ಪತ್ರೆಯೇ ಆದರೂ, ಬೇರೆಯದೇ ಫೀಲ್‌ ಕೊಡ್ತಿದೆ ಐಸಿಯು.

ತಲೆ ಆಲೋಚನೆಗಳ ಗುಂಗಿನಲ್ಲಿ ಚಿಟ್ಟು ಹಿಡಿದು ಹೋಗಿತ್ತು. ಎಚ್ಚರವಾಗೇ ಇದ್ದೆಯಾದರೂ, ಮನಸ್ಸು ಕವಿದುಕೊಂಡಿತ್ತು. ಪಕ್ಕದಲ್ಲಿ ಅಪ್ಪ ಕರೆದಿದ್ದು ಕೇಳಿಸಿತು. 'ನೀರು ಕುಡಿಸು...' ಅಂತ ಸನ್ನೆ ಮಾಡಿದರು. ಯಾಕೋ ಅಪ್ಪ ಬದುಕಲ್ಲ ಅಂತ ಮೊದಲ ಸಾರಿಗೆ ಅನ್ನಿಸಿತು. ಮನಸ್ಸಿನಲ್ಲಿ ಅಳೋಕೂ ಜಾಗ ಇರಲಿಲ್ಲ. "ಸಣ್ಣ ಅಟ್ಯಾಕ್ ಅಂದರು ಡಾಕ್ಟರ್. ಮೂರ್ನಾಲ್ಕು ದಿನದಲ್ಲಿ ಡಿಸ್ಚಾರ್ಜ್ ಮಾಡ್ತಾರಂತೆ," ಅಂತ ಅಪ್ಪನೇ ಅಂದರು. ಅವರು ಒಳಗೆ ಹೆದರಿಕೆ ಅದುಮಿಟ್ಟುಕೊಂಡು ಈ ಮಾತುಗಳನ್ನು ಹೇಳುತ್ತಿದ್ದಾರೆ ಅಂತ ಗೊತ್ತಿತ್ತು. "ಮಲ್ಕ್ಯಾ ಅರಾಮಾಗಿ. ಏನ್ ತೊಂದ್ರೆ ಇಲ್ಲೆ ಹೇಳಿದ್ದ," ಅಂದೆ. ಗಂಟಲು ಬಿಗಿದಂತಾಯ್ತು. ಎದ್ದು ಹೊರಬಂದೆ.

*

ಹೊರಗಿನ ಗೇಟ್ ಹತ್ರ ಹೋಗೋಕೆ ಅಂತ ಹೊರಟೆ. ಐಸಿಯು ಹೊರಗಡೆ ಇದ್ದ ಸೆಕ್ಯುರಿಟಿ ಮಾತಿಗೆಳೆದ. "ಸಾರ್ ಎಷ್ಟೊತ್ತಾಯ್ತು ಕರ್ಕಂಬಂದು? ತುಂಬಾ ಸೀರಿಯಸ್ಸು ಅನ್ಸುತ್ತೆ. ಇಲ್ಲಿಗೆಲ್ಲಾ ಅದೇತರ ಪೇಷಂಟ್ ಕಳ್ಸೋದು. ಐಸಿಯು ಒಂದು ಅಂದ್ರೆ ಹಂಗೆಯ. ನೀವು ಧೈರ್ಯವಾಗಿ ಇರಿ ಸಾರ್. ದೇವ್ರಿದಾನೆ ಅಂದ," ನನ್ನ ಕಣ್ಣಲ್ಲಿ ನೀರು ತುಂಬಿಕೊಳ್ತಿತ್ತು ಅಂತ ಆಗ ಗೊತ್ತಾಯ್ತು. 500 ರೂಪಾಯಿ ತೆಗೆದು, ಸೈಡಿಗೆ ಕರೆದು ಕೊಟ್ಟೆ. "ನಾಳೆ ಜನ ಬರ್ತಾರೆ. ಸ್ವಲ್ಪ ನೋಡೋಕೆ ಮಾತಾಡ್ಸೊಕೆ ಹೆಲ್ಪ್ ಮಾಡಿ. ಬೆಳಿಗ್ಗೆ ಡ್ಯುಟಿಗೆ ಬರೋರಿಗೆ ನೀವೇ ಕೊಟ್ಬಿಡಿ," ಅಂದೆ. 3 ಬಾಗಿಲು ದಾಟುವ ಹೊತ್ತಿಗೆ 1500 ರೂಪಾಯಿ ಖಾಲಿ ಆಗಿತ್ತು. ಬೆಳಗ್ಗೆ ನಡೆಯಬೇಕಿರುವ ಘಟನೆಗಳಿಗೆ ನಾನು ಈಗಲೇ ನನ್ನ ನೀಲನಕ್ಷೆ ತಯಾರಿಸಿಕೊಂಡು ಕೆಲಸ ಆರಂಭಿಸಿದ್ದೆ. ಎಷ್ಟಾದರೂ ನಾನು ಸ್ವಾಮ್ಗಳ ಜತೆ ಇಂತಹ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವುದನ್ನು ಕಲೆತವನು ಬೇರೆ.

ಸಂಬಂಧಿಗಳು, ನೆಂಟರು, ಸ್ನೇಹಿತರು, ಯಾರ್ಯಾರನ್ನ ಅಂತ ಕರೀಲಿ. ತಲೆಯಲ್ಲಿ ಚಿಕ್ಕಪ್ಪಂದಿರು, ದೊಡ್ಡಪ್ಪ, ಅತ್ತೆ ಹೀಗೆ ಲಿಸ್ಟ್ ಓಡುತ್ತಿತ್ತು. ಇದರಲ್ಲಿ ಅಪ್ಪನ ತಂಗಿ ಸಾವಿತ್ರಿ ಬರೋವಾಗ ಮಾತ್ರ ನಾನು ಎದುರಿಗೆ ಇರಬಾರದು. ನಾನು ಇಲ್ಲದೆ ಇರುವ ಸಮಯದಲ್ಲಿ ಆಕೆ ಬಂದು ಹೋದರೇನೇ ಒಳ್ಳೆಯದು. ಅದೇ ರೀತಿ ಅಮ್ಮನ ತಂಗಿ ಸುಮಿತ್ರ ಬಂದಾಗಲೂ ನಾನು ಮುಖ ನೋಡಬಾರದು. ಯಾಕೋ ಈ ಎರಡು ಕ್ಯಾರೆಕ್ಟರ್‌ಗಳ ಎದುರಿಗೆ ನಂಗೆ ನಿಲ್ಲೋಕೆ ಇಷ್ಟ ಆಗಲ್ಲ. ಇಂತಹ ಸಮಯದಲ್ಲೂ ಅವರ ಬಗೆಗೆ ಇದ್ದ ಈ ಭಾವನೆ ಹೋಗಲಿಲ್ಲ. ಇದರ ಜತೆಗೆ, ಅಜ್ಜನ ಮನೆಕಡೆಯವರಿಗೂ ಹೇಳ್ಬೇಕು. ಅಪ್ಪನ ಜತೆ ಕೆಲಸ ಮಾಡಿದವರಿಗೆ ಹೇಳಬೇಕು. ಅಪ್ಪ ಇದ್ದದ್ದು ಸರಕಾರಿ ನೌಕರಿಯಲ್ಲಿ. ಅವರ ಕೊಲೀಗ್ಸ್ ಸಂಖ್ಯೆ ದೊಡ್ಡದಿದೆ. ಅವರಿಗೆಲ್ಲಾ ಚಿಕ್ಕಪ್ಪನಿಗೆ ಹೇಳಿದರೆ, ಸುದ್ದಿ ಮುಟ್ಟುಸ್ತಾರೆ...

ಇಷ್ಟೊತ್ತಿಗೆ ಆಸ್ಪತ್ರೆ ಕಾಂಪೌಂಟ್ ದಾಟಿ ರಸ್ತೆ ಪಕ್ಕದ ಫೂಟ್‌ಪಾತ್ ಮೇಲೆ ನಿಂತಿದ್ದೆ. ಹೊರಗೆ ಎರಡು ಲೈನ್ ರಸ್ತೆಯಲ್ಲಿ ವಾಹನಗಳು ಓಡಾಡುತ್ತಿದ್ದವು. ಎದುರಿಗಿದ್ದ ಅಕ್ಸಿ ಒನ್ ಸಾಫ್ಟ್‌ವೇರ್ ಕಂಪನಿಯ ಶಿಫ್ಟ್ ಮುಗಿದಿತ್ತು. ಹುಡುಗ ಹುಡುಗಿಯರು ಮನೆಗೆ ಹೋಗಲು ಕೈಲಿರುವ ಮೊಬೈಲ್‌ನಲ್ಲಿ ದಾರಿ ನೋಡುತ್ತಿದ್ದರು. ಕಳೆದ ಐದಾರು ಗಂಟೆಗಳಲ್ಲಿ ಎಷ್ಟೆಲ್ಲಾ ನಡೆದು ಹೋಯಿತು. ಇಷ್ಟೊತ್ತಾದರೂ ನಾನೊಂದು ಜಾಯಿಂಟ್ ಹಚ್ಚಿಲ್ಲ ಎಂಬುದು ನೆನಪಾಯಿತು. ಜೇಬಿಗೆ ಕೈ ಹಾಕಿದೆ. ರಿಝಿಲಾ ಒಂದು ಅಂಗೈಗೆ ಬಂದು ಕುಳಿತಿತು. ಲೈಟರ್ ತೆಗೆದು ಲಿಟ್ ಮಾಡಿ, ಜಾಯಿಂಟ್ ಬಾಯಿಗಿಟ್ಟೆ. ಬಾಯೊಳಗೆ ಧಿಗ್‌ ಅಂತ ಸೊಪ್ಪಿನ ಹೊಗೆ ತುಂಬಿಕೊಂಡಿತು.

(ಇದನ್ನು ಪ್ರತ್ಯೇಕವಾಗಿ ಪ್ರಕಟಿಸುವ ಮುನ್ನ ಲೇಖಕರ ಅನುಮತಿ ಕಡ್ಡಾಯ)