samachara
www.samachara.com
ಸಿನಿಮಾ, ಸಮಾಜ ಸೇವೆ ಮತ್ತು ಲೈಂಗಿಕ ದೌರ್ಜನ್ಯದ ಆರೋಪ; ಯಾರು ಈ ನಾನಾ ಪಾಟೇಕರ್‌?
FEATURE STORY

ಸಿನಿಮಾ, ಸಮಾಜ ಸೇವೆ ಮತ್ತು ಲೈಂಗಿಕ ದೌರ್ಜನ್ಯದ ಆರೋಪ; ಯಾರು ಈ ನಾನಾ ಪಾಟೇಕರ್‌?

ಇಲ್ಲಿಯವರೆಗೆ ಸಿನಿಮಾ ಪ್ರಪಂಚ ಮತ್ತು ಸಮಾಜದೊಳಗೆ ಹಿರಿಯ ನಟ ನಾನಾ ಪಾಟೇಕರ್ ಕಟ್ಟಿಕೊಂಡಿದ್ದ ಇಮೇಜ್‌ಗೆ ದೊಡ್ಡ ಹೊಡೆತ ನೀಡಿದ್ದಾರೆ ತನುಶ್ರೀ ದತ್ತಾ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ರಂಗಭೂಮಿ ವೇದಿಕೆಯ ಚೌಕಟ್ಟು ಮತ್ತು ಬೆಳ್ಳಿ ಪರದೆಯ ಅಂಚುಗಳನ್ನು ಮೀರಿ ಬೆಳೆದ ಕೆಲವೇ ನಟರಲ್ಲಿ ನಾನಾ ಪಾಟೇಕರ್‌ ಕೂಡ ಒಬ್ಬರು. ಮರಾಠಿ ರಂಗಭೂಮಿಯ ಹಿನ್ನೆಲೆ, ಹಿಂದಿ ಮತ್ತು ಮರಾಠಿ ಸಿನಿಮಾ ಸೇರಿದಂತೆ ದೇಶದ ನಾನಾ ಭಾಷೆಗಳಲ್ಲಿ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿದವರು ಅವರು. ಈ ಅಭಿಮಾನಿ ವರ್ಗವಲ್ಲದೇ ತಮ್ಮ ಸಮಾಜ ಸೇವಾ ಚಟುವಟಿಕೆಗಳಿಂದ ದೊಡ್ಡ ಮಟ್ಟಕ್ಕೆ ಹೊಗಳಿಕೆಗಳನ್ನು ಬೆನ್ನಿಗೇರಿಸಿಕೊಂಡಿದ್ದರು ಪಾಟೇಕರ್‌.

67 ದಾಟಿದ್ದರೂ ಕಟ್ಟುಮಸ್ತಾದ ದೇಹ, ಎಂಥಹ ಪಾತ್ರಗಳನ್ನೂ ಲೀಲಾಜಾಲವಾಗಿ ಅಭಿನಯಿಸುವ ಕಲೆ ಅವರನ್ನು ಚಿತ್ರರಂಗದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದಿತ್ತು. ಇದರ ಜತೆಗೆ ತಮ್ಮ ‘ನಾಮ್‌ ಫೌಂಡೇಷನ್‌’ ಮೂಲಕ ಮಹಾರಾಷ್ಟ್ರದ ರೈತರ ಸಹಾಯಕ್ಕೆ ಧಾವಿಸಿದ್ದರು ನಾನಾ ಪಾಟೇಕರ್‌. ಗ್ರಾಮಗಳ ದತ್ತು, ಆತ್ಮಹತ್ಯೆಗೆ ಶರಣಾದ ರೈತ ಕುಟುಂಬಗಳಿಗೆ ಧನ ಸಹಾಯ, ರೈತರಿಗೆ ತರಬೇತಿ ಕಾರ್ಯಕ್ರಮಗಳು, ಉದ್ಯೋಗಾವಕಾಶಗಳು, ಹುತಾತ್ಮ ಸೈನಿಕರ ಕುಟುಂಬಗಳಿಗೆ ಧನ ಸಹಾಯ ಹೀಗೆ ನಾನಾ ರೀತಿಯಲ್ಲಿ ಚಟುವಟಿಕೆಗಳಲ್ಲಿ ಅವರ ಸರಕಾರೇತರ ಸಂಸ್ಥೆ ಗುರುತಿಸಿಕೊಂಡಿತ್ತು. ಅವರ ಈ ಸಮಾಜ ಸೇವೆ ಮತ್ತು ಉಳಿದ ನಟರಿಗೆ ಭಿನ್ನವಾಗಿ ಮುಕ್ತವಾಗಿ ರಾಜಕೀಯ ಹೇಳಿಕೆಗಳನ್ನು ನೀಡುತ್ತಿದ್ದ ಅವರ ನಡೆಗಳು ಆಗಾಗ ಸುದ್ದಿ ಕೇಂದ್ರವನ್ನು ಆಕ್ರಮಿಸಿಕೊಳ್ಳುತ್ತಿದ್ದವು.

ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ನಾನಾ ಪಾಟೇಕರ್
ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ನಾನಾ ಪಾಟೇಕರ್

1978ರಲ್ಲಿ ತೆರೆ ಕಂಡ ತಮ್ಮ ಮೊದಲ ಸಿನಿಮಾ ‘ಗಮನ್‌’ನಿಂದ ಆರಂಭಿಸಿ ಇಲ್ಲಿಯವರೆಗೆ ವಿಲನ್‌ನಿಂದ ಹಿಡಿದು ನಾಯಕ ನಟನವರೆಗೆ ಹಲವು ವಿಭಿನ್ನ ಪಾತ್ರಗಳನ್ನು ನಾನಾ ಪಾಟೇಕರ್‌ ನಿಭಾಯಿಸಿದ್ದಾರೆ. ಬ್ರಿಟನ್‌ ಧಾರಾವಾಹಿ ‘ಲಾರ್ಡ್‌ ಮೌಂಟ್‌ಬ್ಯಾಟನ್‌: ದಿ ಲಾಸ್ಟ್‌ ವೈಸ್‌ರಾಯ್‌’ನಲ್ಲಿ ಅವರು ‘ನಾಥುರಾಮ್‌ ಗೋಡ್ಸೆ’ಯಾಗಿ ನಟಿಸಿದ್ದರು. ಹುಡುಕುತ್ತಾ ಹೊರಟರೆ ಪಾಟೇಕರ್‌ ಅಭಿನಯಿಸಿದ ಇಂಥಹ ಹತ್ತು ಹಲವಾರು ನೆನಪಿನಲ್ಲಿ ಉಳಿಯುವಂಥ ಪಾತ್ರಗಳು ಸಿಗುತ್ತವೆ.

ಇವುಗಳಿಗೆ ಅರ್ಹವಾಗಿಯೇ ಅವರು ನಟನಾಗಿ ಮೂರು ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರು. ನಾಯಕ ನಟನಾಗಿ ಒಮ್ಮೆ ಮತ್ತು ಸಹ ನಟನಾಗಿ ಎರಡು ಬಾರಿ ಪದಕಕ್ಕೆ ಕೊರಳೊಡ್ಡಿದ್ದರು ನಾನಾ ಪಾಟೇಕರ್‌. . ಸಿನಿಮಾ ಮತ್ತು ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ಪದ್ಮಶ್ರೀ ಪುರಸ್ಕಾರವೂ ಸಂದಿತ್ತು.

ಹೀಗೆ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದ ನಾನಾ ವಿರುದ್ಧ 2008ರಲ್ಲಿ ಆರೋಪವೊಂದು ಕೇಳಿ ಬಂತ್ತು. ಗಂಭೀರತೆಯಿಂದ ಕೂಡಿದ ಲೈಂಗಿಕ ದೌರ್ಜನ್ಯದ ಆರೋಪವದು. ಈ ಆರೋಪ ಮಾಡಿದವರು ಮಿಸ್‌ ಇಂಡಿಯಾ ಮಾಡೆಲ್ ಮತ್ತು ಬಾಲಿವುಡ್ ನಟಿ ತನುಶ್ರೀ ದತ್ತಾ. ‘ಹಾರ್ನ್‌ ಒಕೆ ಪ್ಲೀಸ್‌’ ಸಿನಿಮಾದ ಹಾಡೊಂದರ ಚಿತ್ರೀಕರಣದ ವೇಳೆ ನಾನಾ ಪಾಟೇಕರ್‌ ತಮ್ಮನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂಬುದು ಅವರ ಆರೋಪವಾಗಿತ್ತು. ಇದರ ಬಗ್ಗೆ ಆಕೆ ಅಂದೇ ಸಿನಿ ಮತ್ತು ಟೆಲಿವಿಷನ್‌ ಕಲಾವಿದರ ಸಂಘಕ್ಕೆ ದೂರು ನೀಡಿದ್ದರು. ಆದರೆ ಪತ್ರಿಕಾಗೋಷ್ಟಿಯಲ್ಲಿ ನಾನಾ ಪಾಟೇಕರ್‌ ಸ್ಪಷ್ಟನೆ ನೀಡುವುದರೊಂದಿಗೆ ಮತ್ತು ಹಾಡಿಗೆ ತನುಶ್ರೀ ಜಾಗಕ್ಕೆ ರಾಖಿ ಸಾವಂತ್‌ ಕರೆ ತರುವುದರೊಂದಿಗೆ ಈ ವಿವಾದ ಅಂತ್ಯ ಕಂಡಿತ್ತು. ಇದೀಗ ಹತ್ತು ವರ್ಷಗಳ ನಂತರ ‘ಝೂಮ್‌’ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಂದಿನ ವಿಷಯಗಳನ್ನು ಮತ್ತೆ ಪ್ರಸ್ತಾಪಿಸಿರುವ ದತ್ತಾ ನಾನಾ ಪಾಟೇಕರ್‌ ವಿರುದ್ಧ ಕಿಡಿಕಾರಿದ್ದಾರೆ.

ಹೇಮಲ್ಕಾಸ ಎಂಬ ಸಿನಿಮಾದಲ್ಲಿ ನಾನಾ ಪಾಟೇಕರ್‌ ಮತ್ತು ಸೊನಾಲಿ ಕುಲಕರ್ಣಿ
ಹೇಮಲ್ಕಾಸ ಎಂಬ ಸಿನಿಮಾದಲ್ಲಿ ನಾನಾ ಪಾಟೇಕರ್‌ ಮತ್ತು ಸೊನಾಲಿ ಕುಲಕರ್ಣಿ

ಜತೆಗೆ ಅವರ ಸಮಾಜಮುಖಿ ಕಾರ್ಯಗಳನ್ನು ಮುಖವಾಡಗಳು ಎಂದು ಕರೆದಿದ್ದಾರೆ. “ನಾನಾ ಪಾಟೇಕರ್ ಮಹಿಳೆಯರನ್ನು ಅಗೌರದಿಂದ ನೋಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಅವರು ನಟಿಯರಿಗೆ ಹೊಡೆದಿದ್ದಾರೆ, ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದೆಲ್ಲಾ ಉದ್ಯಮದ ಮಂದಿಗೆ ತಿಳಿದಿದೆ. ಮಹಿಳೆಯರೊಂದಿಗಿನ ಅವರ ನಡವಳಿಕೆ ಯಾವತ್ತೂ ಕೆಟ್ಟದಾಗಿರುತ್ತದೆ. ಆದರೆ ಈ ಬಗ್ಗೆ ಯಾವುದೇ ಮಾಧ್ಯಮಗಳು ವರದಿ ಮಾಡಿಲ್ಲ,” ಎಂದು ದೂರಿದ್ದಾರೆ.

ಮುಂದುವರಿದು ಮಾತನಾಡಿರುವ ಅವರು, “ನೀವು ಉದ್ಯಮದಲ್ಲಿರುವಾಗ ಈ ನಟರ ಬಗ್ಗೆ ಅನೇಕ ಕಥೆಗಳನ್ನು ಕೇಳುತ್ತೀರಿ. ಆದರೆ ಪಿಆರ್‌ ಮ್ಯಾನೇಜ್‌ಮೆಂಟ್‌ಗಳನ್ನು ಚೆನ್ನಾಗಿ ಮಾಡುವುದರಿಂದ ಇವು ಯಾವತ್ತೂ ಹೊರಗೆ ಬರುವುದೇ ಇಲ್ಲ. ಅವರು ಕೆಲವು ಬಡ ರೈತರಿಗೆ ಸ್ವಲ್ಪ ಹಣವನ್ನು ಕೊಡುತ್ತಾರೆ. ಅವರು ಎಷ್ಟು ಸಮಾಜ ಸೇವೆ ಮಾಡುತ್ತಾರೆ ಎಷ್ಟು ಬಿಡುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಕೇವಲ ಪ್ರದರ್ಶನಕ್ಕಾಗಿ ಇದೆಲ್ಲವನ್ನೂ ನಡೆಸುತ್ತಾರೆ,” ಎಂದು ದತ್ತಾ ಹರಿಹಾಯ್ದಿದ್ದಾರೆ.

ಈ ಮೂಲಕ ಇಲ್ಲಿಯವರೆಗೆ ಸಿನಿಮಾ ಪ್ರಪಂಚ ಮತ್ತು ಸಮಾಜದೊಳಗೆ ನಾನಾ ಪಾಟೇಕರ್ ಕಟ್ಟಿಕೊಂಡಿದ್ದ ಇಮೇಜ್‌ಗೆ ದೊಡ್ಡ ಹೊಡೆತ ನೀಡಿದ್ದಾರೆ ತನುಶ್ರೀ ದತ್ತಾ. ಈ ಆರೋಪಗಳಿಂದ ನಾನಾ ಪಾಟೇಕರ್‌ ಹೇಗೆ ಹೊರಗೆ ಬರುತ್ತಾರೆ ಎಂಬುದು ಅವರ ಇಮೇಜ್‌ನ ಭವಿಷ್ಯವನ್ನು ನಿರ್ಧರಿಸಲಿದೆ.