ಸುದ್ದಿ ಮನೆಗೆ ಸ್ಟಾರ್‌ ನಟರ ಎಂಟ್ರಿ:  ಸರಕಾರ ಉಳಿಸಿದ ದುನಿಯಾ ವಿಜಯ್‌, ದರ್ಶನ್‌!
FEATURE STORY

ಸುದ್ದಿ ಮನೆಗೆ ಸ್ಟಾರ್‌ ನಟರ ಎಂಟ್ರಿ: ಸರಕಾರ ಉಳಿಸಿದ ದುನಿಯಾ ವಿಜಯ್‌, ದರ್ಶನ್‌!

ರಾಜ್ಯ ಸರಕಾರವನ್ನು ಉರುಳಿಸಿಯೇ ಬಿಡುವ ಪಣತೊಟ್ಟಂತೆ ನಡೆದುಕೊಂಡ ವಾಹಿನಿಗಳು ಭಾನುವಾರದಿಂದ ಏಕಾಏಕಿ ಸಂಪೂರ್ಣ ಬದಲಾಗಿ ಬಿಟ್ಟಿವೆ. ಇನ್ನೇನು ಬಿದ್ದೇ ಹೋಗುತ್ತಿದ್ದ ಸರಕಾರವನ್ನು ದುನಿಯಾ ವಿಜಯ್‌ ಮತ್ತು ದರ್ಶನ್‌ ರಕ್ಷಿಸಿದ್ದಾರೆ!

ರಾಜ್ಯದಲ್ಲಿ ಸುಮಾರು ಹದಿನೈದು ದಿನಗಳಿಂದ ನಡೆಯುತ್ತಿದ್ದ ಸಮ್ಮಿಶ್ರ ಸರಕಾರ ಉರುಳಿಸುವ ನಾಟಕದ ವೇದಿಕೆಗೆ ಈಗ ಸ್ಟಾರ್‌ ನಟರ ಎಂಟ್ರಿಯಾಗಿದೆ. ಎರಡು ವಾರಗಳಿಂದ ರಾಜಕೀಯ ಸುದ್ದಿಗಳೇ ತುಂಬಿರುತ್ತಿದ್ದ ವಾಹಿನಿಗಳ ಪರದೆಯನ್ನು ಈಗ ದುನಿಯಾ ವಿಜಯ್‌, ದರ್ಶನ್‌ ಆಕ್ರಮಿಸಿಕೊಂಡಿದ್ದಾರೆ. ಭಾನುವಾರ ಬೆಳಿಗ್ಗೆಯಿಂದ ಆರಂಭವಾದ ಈ ಹೊಸ ಪ್ರಹಸನ ಸೋಮವಾರವೂ ಮುಂದುವರಿದಿದೆ. ಇಷ್ಟರ ಮಟ್ಟಿಗೆ ದುನಿಯಾ ವಿಜಯ್‌ ಮತ್ತು ದರ್ಶನ್‌ ವಾಹಿನಿಗಳಲ್ಲಿ ಇನ್ನೇನು ಬಿದ್ದೇ ಹೋಗುತ್ತಿದ್ದ ಸರಕಾರವನ್ನು ಉಳಿಸಿದ್ದಾರೆ.

ಬೆಳಗಾವಿಯ ಸ್ಥಳೀಯ ರಾಜಕೀಯ ಮುನಿಸಿನ ಕಾರಣದಿಂದ ಹುಟ್ಟಿಕೊಂಡು ಬೆಳೆದು ಬಂದ ರಾಜಕೀಯ ಹೈಡ್ರಾಮಾ ಹದಿನೈದು ದಿನಗಳ ಮಟ್ಟಿಗೆ ಸುದ್ದಿವಾಹಿನಿಗಳಿಗೆ ಆಹಾರವಾಗಿತ್ತು. ಬಹುತೇಕ ವಾಹಿನಿಗಳಲ್ಲಿ ಇನ್ನೇನು ಸಮ್ಮಿಶ್ರ ಸರಕಾರ ಬಿದ್ದೇ ಹೋಯಿತು, ಅಗತ್ಯವಿರುವಷ್ಟು ಶಾಸಕರನ್ನು ಕೊಂಡುಕೊಂಡಿರುವ ಬಿಜೆಪಿ ಸರಕಾರ ರಚನೆಗೆ ಮುಂದಾಗೇ ಬಿಟ್ಟಿತು ಎಂಬ ಸುದ್ದಿಗಳು ಹರಿದಾಡಿದವು. ವಾಹಿನಿಗಳಲ್ಲಿ ಯಡಿಯೂರಪ್ಪ ಪ್ರಮಾಣ ವಚನಕ್ಕೆ ವೇದಿಕೆಯೂ ಸಿದ್ಧವಾಗಿತ್ತು. ದಿನಾಂಕವೂ ನಿಗಧಿಯಾಗಿತ್ತು. ಅಷ್ಟರಲ್ಲಿ ದುನಿಯಾ ವಿಜಯ್‌ ಮತ್ತು ದರ್ಶನ್‌ ಪ್ರಕರಣಗಳು ಸುದ್ದಿವಾಹಿನಿಗಳ ಅಂಗಳಕ್ಕೆ ಬಂದು ಬೀಳುತ್ತಿದ್ದ ಸಮ್ಮಿಶ್ರ ಸರಕಾರವನ್ನು ರಕ್ಷಿಸಿವೆ.

ಶನಿವಾರ ರಾತ್ರಿ ವಸಂತನಗರದ ಅಂಬೇಡ್ಕರ್‌ ಭವನದಲ್ಲಿ ನಡೆಯುತ್ತಿದ್ದ ದೇಹದಾರ್ಢ್ಯ ಸ್ಪರ್ಧೆಯ ವೇಳೆ ಜಿಮ್‌ ಟ್ರೈನರ್‌ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿ ಎಂಬುವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಟ ದುನಿಯಾ ವಿಜಯ್‌ ಸೇರಿದಂತೆ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಭಾನುವಾರ ಬೆಳಿಗ್ಗೆಯ ಹೊತ್ತಿಗೆ ಕನ್ನಡದ ಬಹುತೇಕ ಎಲ್ಲಾ ಸುದ್ದಿವಾಹಿನಿಗಳಲ್ಲೂ ದುನಿಯಾ ವಿಜಯ್‌ ಸುದ್ದಿಯೇ ರಾರಾಜಿಸುತ್ತಿತ್ತು. ಭಾನುವಾರ ಇಡೀ ದಿನ ವಾಹಿನಿಗಳು ದುನಿಯಾ ವಿಜಯ್ ‘ಸಿನಿಮಾ’ವನ್ನು ಹಲವು ಬಣ್ಣ, ಹಲವು ರುಚಿಗಳೊಂದಿಗೆ ಸ್ವಾದಿಷ್ವವಾಗಿ ಬಡಿಸಿದವು.

ಭಾನುವಾರ ಒಂದು ದಿನದ ಮಟ್ಟಿಗೆ ವಾಹಿನಿಗಳಲ್ಲಿ ಸರಕಾರ ಬೀಳುವುದನ್ನು ದುನಿಯಾ ವಿಜಯ್‌ ರಕ್ಷಿಸಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳು ಶುರುವಾಗಿದ್ದವು. ಭಾನುವಾರ ದುನಿಯಾ ವಿಜಯ್‌ ಸರಕಾರ ರಕ್ಷಿಸಿದರೆ, ಸೋಮವಾರ ವಾಹಿನಿಗಳ ದಾಳಿ ನಡೆಯುವ ನಿಟ್ಟಿನಲ್ಲಿ ಸರಕಾರದ ನೆರವಿಗೆ ಬಂದಿದ್ದು ದರ್ಶನ್‌. ಮೈಸೂರಿನಲ್ಲಿ ದರ್ಶನ್‌ ಕಾರು ಅಪಘಾತವಾಗಿ ಅವರ ಕೈಗೆ ವೈದ್ಯರು ಸಣ್ಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆದರೆ, ವಾಹಿನಿಗಳ ಮಟ್ಟಿಗೆ ಇದು ಸೋಮವಾರದ ಬಹುದೊಡ್ಡ ಸುದ್ದಿ.

ದರ್ಶನ್‌ ಕಾರು ಅಪಘಾತವಾಗಿದ್ದೇಕೆ ಮತ್ತು ಹೇಗೆ, ಭಾನುವಾರ ದರ್ಶನ್ ಯಾವೆಲ್ಲಾ ಪ್ರಾಣಿಗಳ ಜೊತೆಗೆ ಹೇಗೆಲ್ಲಾ ಕಾಲ ಕಳೆದಿದ್ದರು, ಅಪಘಾತವಾದ ಸಮಯದಲ್ಲಿ ದರ್ಶನ್‌ ತಮ್ಮ ಹೆಂಡತಿಯೊಂದಿಗೆ ಜಗಳವಾಗಿದ್ದರೇ, ದರ್ಶನ್‌ ಕೈಯಲ್ಲಿರುವ ಬೆಳ್ಳಿಯ ಬಳೆ ಅಪಘಾತದಲ್ಲಿ ಎಷ್ಟು ಚೂರಾಗಿದೆ, ಆ ಬಳೆಯ ಇತಿಹಾಸವೇನು, ವೈದ್ಯರು ಎಲ್ಲೆಲ್ಲಿ ಎಷ್ಟೆಷ್ಟು ಹೊಲಿಗೆ ಹಾಕಿದ್ದಾರೆ, ದರ್ಶನ್‌ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಯಾರೆಲ್ಲಾ ಬರುತ್ತಿದ್ದಾರೆ… ಹೀಗೆ ದರ್ಶನ್‌ ಅಪಘಾತದ ‘ಎಳೆಎಳೆಯ’ ಮಾಹಿತಿಯನ್ನು ವಾಹಿನಿಗಳು ಸೋಮವಾರ ಹಿಂಜುತ್ತಾ ಕೂತಿವೆ. ಸಾಕ್ಷಿ ಎಂಬಂತೆ, ದುನಿಯಾ ವಿಜಯ್‌ ಇರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಹಾಗೂ ದರ್ಶನ್‌ ಚಿಕಿತ್ಸೆ ಪಡೆಯುತ್ತಿರುವ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಮುಂದೆ ಬೀಡು ಬಿಟ್ಟಿರುವ ವಾಹಿನಿಗಳ ಕ್ಯಾಮೆರಾಗಳು ಎರಡೂ ಕಡೆಯಿಂದ ಪೈಪೋಟಿ ಮೇಲೆ ನೇರಪ್ರಸಾರ ಮಾಡುತ್ತಿವೆ.

ಅಂದ ಹಾಗೆ, ಸರಕಾರ ಬೀಳುತ್ತದೆ ಎಂಬ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದ ರಾಜ್ಯ ರಾಜಕೀಯ ಬೆಳವಣಿಗೆಗಳ ಸುದ್ದಿಗಳನ್ನೇ ಕೈ ಬಿಟ್ಟು ವಾಹಿನಿಗಳು ದುನಿಯಾ ವಿಜಯ್‌ ಹಾಗೂ ದರ್ಶನ್‌ ಸುದ್ದಿಗಳನ್ನು ಹೈಪ್‌ ಮಾಡುತ್ತಿರುವುದೇಕೆ? ಬೆಂಗಳೂರು ಸೇರಿದಂತೆ ರಾಜ್ಯದ 30 ಜಿಲ್ಲೆಗಳ ಇತರೆ ಸುದ್ದಿಗಳೆಲ್ಲವೂ ಹಿಂದೆ ಸರಿದು ಈ ಸುದ್ದಿಗಳು ವಾಹಿನಿಗಳಲ್ಲಿ ಪ್ರಾಮುಖ್ಯ ಪಡೆಯಲು ಕಾರಣವೇನು? ಸಿನಿಮಾ ನಟರ ‘ಗದ್ದಲ’ದ ಸುದ್ದಿಗಳು ಟಿಆರ್‌ಪಿ ತಂದುಕೊಡುತ್ತವೆ ಎಂಬ ಕಾರಣಕ್ಕೆ ಈ ಸುದ್ದಿಗಳನ್ನು ಎಳೆಯಲಾಗುತ್ತಿದೆಯೇ ಅಥವಾ ಈ ಸುದ್ದಿಗಳನ್ನು ಹೀಗೆ ಹಿಂಜುವುದೇ ವಾಹಿನಿಗಳ ಸಂಪಾದಕೀಯ ನೀತಿಯೋ?

“ಹಾಗೆ ನೋಡಿದರೆ ಈಗಿನ ಬಹುತೇಕ ಸುದ್ದಿವಾಹಿನಿಗಳಿಗೆ ಸಂಪಾದಕೀಯ ನೀತಿ ಎಂಬುದೇ ಇಲ್ಲ. ವಾಹಿನಿಗಳಲ್ಲಿ ಆಯಕಟ್ಟಿನ ಜಾಗಗಳಲ್ಲಿ ಕುಳಿತಿರುವ ಬಹುತೇಕರು ಎನ್‌ಡಿಎ ಸರಕಾರ ಹಾಗೂ ಹಿಂದುತ್ವಕ್ಕೆ ನಿಷ್ಠರಾಗಿರುವವರು. ಅವರಿಗೆ ಇಷ್ಟು ದಿನ ಸಮ್ಮಿಶ್ರ ಸರಕಾರ ಬಿದ್ದು, ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದು ಬೇಕಿತ್ತು. ಆದರೆ, ಈಗ ಏಕಾಏಕಿ ವಿಜಯ್‌, ದರ್ಶನ್‌ ಸುದ್ದಿಗಳನ್ನೇ ದೊಡ್ಡದು ಮಾಡುವ ಮೂಲಕ ವಾಹಿನಿಗಳು ಜನಕ್ಕೆ ಏನನ್ನು ತಿಳಿಸಲು ಹೋಗುತ್ತಿವೆಯೋ ಗೊತ್ತಾಗುತ್ತಿಲ್ಲ. ವಾಹಿನಿಗಳಿಗೆ ಬದ್ಧತೆ ಇಲ್ಲದಿರುವುದರ ಫಲ ಇದು” ಎನ್ನುತ್ತಾರೆ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಹೇಶಚಂದ್ರ ಗುರು.

ಸುದ್ದಿವಾಹಿನಿಗಳ ಈ ನಡೆ ವಾಹಿನಿಗಳ ಒಳಗಿರುವವರಿಗೇ ರೇಜಿಗೆ ತರಿಸಿದೆ. “ವಾಹಿನಿಗಳಲ್ಲಿ ಇದು ಯಾಕೆ ಹೀಗಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ” ಎಂದು ಬೇಸರಿಸುತ್ತಾರೆ ಕನ್ನಡದ ಪ್ರಮುಖ ಸುದ್ದಿವಾಹಿನಿಯೊಂದರ ಹಿರಿಯ ವರದಿಗಾರರೊಬ್ಬರು. ಅವರ ಪ್ರಕಾರ ಎರಡು ದಿನಗಳ ಮಟ್ಟಿಗೆ ವಾಹಿನಿಗಳ ರಾಜಕೀಯ ವರದಿಗಾರರಿಗೆ ಬೇಡಿಕೆ ಇಲ್ಲ, ಈಗ ಬೇಡಿಕೆ ಇರುವುದು ಸಿನಿಮಾ ಹಾಗೂ ಕ್ರೈಂ ಬೀಟ್‌ ವರದಿಗಾರರಿಗೆ.

“ರಾಜಕೀಯ ಹಿತಾಸಕ್ತಿ, ಟಿಆರ್‌ಪಿ, ವ್ಯವಹಾರವನ್ನು ಮೀರಿ ಜನರ ವಿಶ್ವಾಸಾರ್ಹತೆ ಉಳಿಸಿಕೊಳ್ಳುವ ಕಡೆಗೂ ವಾಹಿನಿಗಳು ಗಮನ ಕೊಡಬೇಕು. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ ಒಂದು ಚಾನೆಲ್‌ ಮಾಡುವ ಕೆಲಸವನ್ನೇ ಎಲ್ಲಾ ಚಾನೆಲ್‌ಗಳೂ ಮಾಡುತ್ತಿವೆ. ಇದು ಹೀಗೆಯೇ ಮುಂದುವರಿದರೆ ಈಗಾಗಲೇ ಒಂದಷ್ಟು ಜನರ ನಂಬಿಕೆ ಕಳೆದುಕೊಂಡಿರುವ ಚಾನೆಲ್‌ಗಳು ಪೂರ್ತಿಯಾಗಿ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ. ಸುದ್ದಿವಾಹಿನಿಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಕಾಲ ಇದು. ಈಗಲೂ ಪಾಠ ಕಲಿಯದಿದ್ದರೆ ಕಷ್ಟ” ಎನ್ನುತ್ತಾರೆ ಅವರು.

ಸುದ್ದಿ ವಾಹಿನಿಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಹಲವು ಸಂದರ್ಭಗಳು ಈಗಾಗಲೇ ಬಂದು ಹೋಗಿವೆ. ಆದರೂ ವಾಹಿನಿಗಳ ಮಾರ್ಗ ಬದಲಾಗುತ್ತಿಲ್ಲ. ಅಂತಿಮವಾಗಿ ‘ವೀಕ್ಷಕ ಪ್ರಭು’ವಿನ ಕೈಯಲ್ಲಿ ರಿಮೋಟ್‌ ಎಂಬುದಿದೆ ಎಂದು ಸುದ್ದಿ ವಾಹಿನಿಗಳಿಗೆ ಯಾವಾಗ ಅರಿವಾಗುತ್ತದೆಯೋ ಗೊತ್ತಿಲ್ಲ.