samachara
www.samachara.com
ಸಿದ್ದರಾಮಯ್ಯ ಎಂಬ ‘ಸೂಪರ್ ಸಿಎಂ’ ಆದ ನಾನು...
FEATURE STORY

ಸಿದ್ದರಾಮಯ್ಯ ಎಂಬ ‘ಸೂಪರ್ ಸಿಎಂ’ ಆದ ನಾನು...

ಅಧಿಕಾರ ಕಳೆದುಕೊಂಡ ನಾಲ್ಕು ತಿಂಗಳ ನಂತರ ‘ಸೂಪರ್‌ ಸಿಎಂ’ ರೂಪದಲ್ಲಿ ಮೇಲೆದ್ದು ಬಂದಿದ್ದಾರೆ. ಸದ್ಯಕ್ಕೆ ಲೋಕಸಭೆ ಚುನಾವಣೆ ಮುಗಿಯುವವರೆಗೂ ಕರ್ನಾಟಕದ ಪಾಲಿಗೆ ಸಿದ್ದರಾಮಯ್ಯ ಸೂಪರ್‌ ಸಿಎಂ ಆಗಿಯೇ ಇರುವ ಸಾಧ್ಯತೆ ಇದೆ.

12 ಮೇ 2018..

ಸಂಜೆಯಾಗಿತ್ತು. ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದಿತ್ತು. ರಾಷ್ಟ್ರೀಯ ವಾಹಿನಿಗಳೂ ಸೇರಿದಂತೆ ಕನ್ನಡ ವಾಹಿನಿಗಳೆಲ್ಲಾ ತಮ್ಮ ಮತದಾನೋತ್ತರ ಸಮೀಕ್ಷೆ ಮುಗಿಸಿ ಜನರ ಮುಂದಿಡಲು ಆರಂಭಿಸಿದ್ದರು. ಎಲ್ಲಾ ವಾಹಿನಿಗಳು ಬಿಜೆಪಿ ಅಧಿಕಾರದ ಸಮೀಪಕ್ಕೆ ಅಥವಾ ಅಧಿಕಾರಕ್ಕೆ ಬರುವ ಮುನ್ಸೂಚನೆಯನ್ನು ನೀಡುತ್ತಿದ್ದವು. ಆದರೆ ಇದಕ್ಕೆ ವಿರುದ್ಧವಾದ ಅಂಕಿ ಅಂಶಗಳನ್ನು ನೀಡಿತ್ತು ‘ಇಂಡಿಯಾ ಟುಡೇ’ ಸಮೀಕ್ಷೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂಬ ತನ್ನ ಸಮಿಕ್ಷೆಯನ್ನು ಭಿತ್ತರಿಸಲು ಆರಂಭಿಸಿತ್ತು. ಈ ಸಂದರ್ಭದಲ್ಲಿ ‘ಇಂಡಿಯಾ ಟುಡೇ’ ಲೈವ್‌ಗೆ ಬಂದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತಪಡಿಸಿದರು. ಅವರಿಗಿದ್ದ ತುಂಬು ವಿಶ್ವಾಸ ಟಿವಿ ಪರದೆ ಮೇಲೆ ರಾರಾಜಿಸುತ್ತಿತ್ತು.

ಹಾಗೆ ನಾಲ್ಕು ದಿನ ಕಳೆದವು...

ಸಿದ್ದರಾಮಯ್ಯ ಅಂದು ತೋರಿಸಿದ ವಿಶ್ವಾಸ ಬಾಳಿಕೆ ಬರುವಂತದ್ದಾಗಿರಲಿಲ್ಲ. ಮೇ 16 ರಂದು ಮತ ಎಣಿಕೆ ಆರಂಭವಾದಾಗ ಆರಂಭಿಕ ಹಂತದಿಂದಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡು ಬಂತು. ಒಂದು ಹಂತದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಬಿಟ್ಟಿತು ಎಂಬ ಪರಿಸ್ಥಿತಿ ಸೃಷ್ಟಿಯಾಯಿತಾದರೂ ಅಂತಿಮ ಹಂತದಲ್ಲಿ ಕೆಲವೇ ಸ್ಥಾನಗಳ ಕೊರತೆಯಿಂದ ಮ್ಯಾಜಿಕ್‌ ನಂಬರ್‌ನಿಂದ ದೂರವೇ ಉಳಿಯುವ ಲಕ್ಷಣಗಳು ಕಾಣಿಸಿಕೊಂಡವು.

ಈ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾದರು ಸಿದ್ದರಾಮಯ್ಯ. ನಿರಾಶೆಯ ಮುಖಭಾವ ಹೊತ್ತು ಕೈ ಕಟ್ಟಿಕೊಂಡು ಬಂದು ನಿಂತ ಸಿದ್ದರಾಮಯ್ಯ ಬಲ ಭಾಗದಲ್ಲಿ ಡಾ. ಜಿ. ಪರಮೇಶ್ವರ್‌, ಎಡ ಭಾಗದಲ್ಲಿ ಎಚ್‌.ಡಿ. ಕುಮಾರಸ್ವಾಮಿ ನಿಂತಿದ್ದರು. ಹಿಂದೆ ಮುಂದೆ ರಾಜಕೀಯ ನಾಯಕರ ದಂಡೇ ನೆರೆದಿತ್ತು. ಸೋತ ಹತಾಶೆಯಲ್ಲಿ ತಲೆ ತಗ್ಗಿಸಿಕೊಂಡು, ‘ಕಾಂಗ್ರೆಸ್‌ ಜೆಡಿಎಸ್‌ಗೆ ಷರತ್ತು ರಹಿತ ಬೆಂಬಲ ನೀಡಲಿದೆ’ ಎಂದು ಘೋಷಿಸಿದರು ಸಿದ್ದರಾಮಯ್ಯ.

ಕೈಕಟ್ಟಿಕೊಂಡು ಮಾಧ್ಯಮಗಳ ಮುಂದೆ ನಿರಾಶೆಯ ಮುಖ ಹೊತ್ತು ಬಂದಿದ್ದ ಸಿದ್ದರಾಮಯ್ಯ. 
ಕೈಕಟ್ಟಿಕೊಂಡು ಮಾಧ್ಯಮಗಳ ಮುಂದೆ ನಿರಾಶೆಯ ಮುಖ ಹೊತ್ತು ಬಂದಿದ್ದ ಸಿದ್ದರಾಮಯ್ಯ. 
/ಡೆಕ್ಕನ್ ಕ್ರಾನಿಕಲ್

ತಮ್ಮ ಬೆಂಬಲದೊಂದಿಗೆ ಸರಕಾರ ರಚಿಸಲು ಅನುಮತಿ ಕೋರಿ ರಾಜಭವನಕ್ಕೆ ಹೋದಾಗಲೂ ಸಿದ್ದರಾಮಯ್ಯ ಮೂಲೆಯಲ್ಲಿ ಕೈ ಕಟ್ಟಿ, ತಲೆ ಕೆಳಗು ಮಾಡಿ ಕುಳಿತುಕೊಂಡಿದ್ದರು. ಐದು ವರ್ಷಗಳ ಕಾಲ ತಾನು ನಡೆದದ್ದೇ ಹಾದಿ ಎಂದು ಮೆರೆದಿದ್ದ, ಪ್ರಚಾರದ ವೇಳೆ ಘರ್ಜಿಸುತ್ತಿದ್ದ ಸಿದ್ದರಾಮಯ್ಯ ತಣ್ಣಗಾಗಿ ಹೋಗಿದ್ದರು.

ಈ ಎಲ್ಲಾ ಘಟನಾವಳಿಗಳು ನಡೆದು ಇಂದಿಗೆ ನಾಲ್ಕು ತಿಂಗಳುಗಳು ಕಳೆದಿವೆ. ಈ ಅಲ್ಪ ಅವಧಿಯಲ್ಲಿ ಹಲವು ಬೆಳವಣಿಗಗಳು ನಡೆದಿವೆ. ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್ ಸಮ್ಮಿಶ್ರ ಸರಕಾರ ರಚನೆಯಾಗಿ ಎಚ್‌. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಸಿದ್ದರಾಮಯ್ಯನವರಿಗೆ ಎರಡೂ ಪಕ್ಷಗಳನ್ನು ಹೊಂದಿಸಿಕೊಂಡು ಹೋಗುವ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ರಾಜ್ಯ ರಾಜಕಾರಣದಿಂದ ಕಾಂಗ್ರೆಸ್‌ ಹೈಕಮಾಂಡ್‌ ಮಟ್ಟಕ್ಕೆ ಸಿದ್ದರಾಮಯ್ಯ ಬಡ್ತಿ ಪಡೆದಿದ್ದಾರೆ.

ಇವೆಲ್ಲದರ ಮಧ್ಯದಲ್ಲಿ ತಮ್ಮ ವಿಶಿಷ್ಟ ನಡವಳಿಕೆಗಳ ಕಾರಣಕ್ಕೆ ರಾಜ್ಯದಲ್ಲಿ ಎಚ್‌.ಡಿ. ರೇವಣ್ಣ ‘ಸೂಪರ್‌ ಸಿಎಂ’ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಅದಕ್ಕೆಲ್ಲಾ ಪೂರ್ಣ ವಿರಾಮ ಹಾಕಿದೆ ಶುಕ್ರವಾರದ ಇದೊಂದು ಫೊಟೋ.

ಸಿದ್ದರಾಮಯ್ಯ ತಾವೊಬ್ಬರೇ ಘನ ಗಾಂಭಿರ್ಯದಿಂದ ಕಾಲ ಮೇಲೆ ಕಾಲು ಹಾಕಿ ಕುಳಿತಿದ್ದರೆ, ಸುತ್ತ ಮುತ್ತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಸಚಿವ ಡಿ. ಕೆ. ಶಿವಕುಮಾರ್‌ ಕುಳಿತು ಆಲಿಸುತ್ತಿರುವುದು ಚಿತ್ರದಲ್ಲಿ ಸೆರೆಯಾಗಿದೆ. ಈ ಒಂದು ಚಿತ್ರದ ಮೂಲಕ ಸದ್ಯದ ಅಧಿಕಾರದಲ್ಲಿ ತಮ್ಮ ಪ್ರಭಾವ ಹೇಗಿದೆ ಎಂಬುದನ್ನು ಸಿದ್ದರಾಮಯ್ಯ ಸಾರಿ ಹೇಳಿದ್ದಾರೆ.

ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಗಂಭೀರ ಸಭೆ..
ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಗಂಭೀರ ಸಭೆ..

ಒಂದು ಕಡೆ ಈ ಫೋಟೋ, ಇನ್ನೊಂದು ಕಡೆ ವಿದೇಶ ಪ್ರವಾಸದಿಂದ ಸಿದ್ದರಾಮಯ್ಯ ಬರುತ್ತಿದ್ದಂತೆ ತಣ್ಣಗಾದ ಅಸಾಧಾನ ಮತ್ತು ವಿಫಲವಾದ ಸರಕಾರ ಉರುಳಿಸುವ ತಂತ್ರಗಳು ಅವರ ಶಕ್ತಿ ಸಾಮರ್ಥ್ಯವನ್ನು ಪ್ರಚುರಪಡಿಸಿವೆ.

ಜತೆಗೆ, ಶುಕ್ರವಾರದ ತಮ್ಮ ಕಾವೇರಿ ನಿವಾಸದ ಸಭೆಯಲ್ಲಿ ‘ಸಂಯಮದಿಂದ ಇರುವಂತೆ ಕುಮಾರಸ್ವಾಮಿಗೆ ಸಲಹೆ ನೀಡಿದ್ದಾರೆ. ಜಾರಕಿಹೊಳಿ ಸೋದರರ ಜತೆ ಜಿದ್ದಿಗೆ ಬೀಳದಂತೆ ಡಿ. ಕೆ ಶಿವಕುಮಾರ್‌ಗೆ ಸೂಚಿಸಿದ್ದಾರೆ. ಅಲ್ಲಿದ್ದ ನಾಯಕರು ಸರಕಾರ ಹೇಗೆ ನಡೆಸಬೇಕು ಎಂಬ ಪಾಠವನ್ನೂ ಮಾಡಿದ್ದಾರೆ’ ಎಂಬ ವರದಿಗಳು ಬಂದಿವೆ. ಒಟ್ಟಿನಲ್ಲಿ ಮಾರ್ಗದರ್ಶನಕ ರೀತಿಯಲ್ಲಿ ನಡೆದುಕೊಂಡಿದ್ದಾರೆ ಸಿದ್ದರಾಮಯ್ಯ.

ಕಾಲ ಚಕ್ರ..

ಇದಕ್ಕೂ ಕೆಲವು ದಿನ ಮೊದಲು ಸರಕಾರ ಇನ್ನೇನು ಉರುಳಲಿದೆ ಎಂಬ ಗುಲ್ಲು ಹರಡಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸರಕಾರ ಉಳಿದಿರುವುದೇ ಸಿದ್ದರಾಮಯ್ಯರಿಂದ ಎಂದಿದ್ದರು. ಇದಕ್ಕೂ ಸ್ವಲ್ಪ ದಿನ ಮೊದಲು ಹಾಸನದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, “ರಾಜಕೀಯ ನಿಂತ ನೀರಲ್ಲ. ಹರಿಯೋ ನೀರು. ಹಾಗಾಗಿ ಬದಲಾವಣೆ ಆಗಲೇ ಬೇಕು. ಚಕ್ರ ಉರುಳಿದರೆ ಮೇಲ್ಗಡೆ ಇರುವವರು ಕೆಳಗೆ ಬರಲೇಬೇಕು. ಕೆಳಗೆ ಇರುವವರು ಮೇಲೆ ಹೋಗಲೇಬೇಕು,” ಎಂದಿದ್ದರು.

ಅವರದೇ ಮಾತಿನಂತೆ ನಾಲ್ಕು ತಿಂಗಳ ಹಿಂದೆ ನೆಲ ನೋಡುತ್ತಿದ್ದ ಸಿದ್ದರಾಮಯ್ಯ ಮತ್ತೆ ತಲೆ ಎತ್ತಿ ನಿಂತಿದ್ದಾರೆ. ಅಧಿಕಾರ ಕಳೆದುಕೊಂಡ ನಾಲ್ಕು ತಿಂಗಳ ನಂತರ ‘ಸೂಪರ್‌ ಸಿಎಂ’ ರೂಪದಲ್ಲಿ ಮೇಲೆದ್ದು ಬಂದಿದ್ದಾರೆ. ಸದ್ಯಕ್ಕೆ ಲೋಕಸಭೆ ಚುನಾವಣೆ ಮುಗಿಯುವವರೆಗೂ ಕರ್ನಾಟಕದ ಪಾಲಿಗೆ ಸಿದ್ದರಾಮಯ್ಯ ಸೂಪರ್‌ ಸಿಎಂ ಆಗಿಯೇ ಇರುವ ಸಾಧ್ಯತೆ ಇದೆ. ನಂತರ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮೈತ್ರಿ ಸರಕಾರ ಮಾತ್ರ ಅಲ್ಲ, ಸಿದ್ದರಾಮಯ್ಯ ಅವರ ಬದುಕೂ ಹೊಸ ತಿರುವುದು ಪಡೆದುಕೊಳ್ಳಲಿದೆ. ಅದೇ ರಾಜಕೀಯ ಮತ್ತು ಆ ಕಾರಣಕ್ಕೆ ಅದು ವರ್ಣರಂಜಿತ.