samachara
www.samachara.com
‘ಜನ- ನುಡಿ- ಸಿರಿ’: ಇವು ಜಾಣ- ಜಾಣೆಯರ ನಿರರ್ಥಕ ಟೀಕೆ- ಟಿಪ್ಪಣಿಗಳು!
FEATURE STORY

‘ಜನ- ನುಡಿ- ಸಿರಿ’: ಇವು ಜಾಣ- ಜಾಣೆಯರ ನಿರರ್ಥಕ ಟೀಕೆ- ಟಿಪ್ಪಣಿಗಳು!

ಮೂರು ವರ್ಷಗಳಿಂದ ಅಹ್ವಾನಿತರೇ ವಿವಾದ ಕೇಂದ್ರವಾಗುವ ಮೂಲಕ ಅಗತ್ಯವೇ ಇಲ್ಲದಿದ್ದರೂ ನುಡಿ ಸಿರಿ ಸುತ್ತ ಚರ್ಚೆಯೊಂದು ಹುಟ್ಟಿಕೊಳ್ಳುತ್ತದೆ.

Team Samachara

ದಕ್ಷಿಣ ಕನ್ನಡದ ಶಿಕ್ಷಣ ವ್ಯಾಪಾರಿ ಮೋಹನ್ ಆಳ್ವ ಆಯೋಜಿಸಿಕೊಂಡು ಬಂದ ನುಡಿ ಸಿರಿ ಹಾಗೂ ಅದಕ್ಕೆ ಪರ್ಯಾಯವಾಗಿ ಹುಟ್ಟಿಕೊಂಡ ಜನ ನುಡಿಗಳ ನಡುವಿನ ವಿವಾದ ಈ ವರ್ಷವೂ ಸದ್ದು ಮಾಡುತ್ತಿದೆ.

ಸುಮಾರು 25 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಸಂಸ್ಥೆ, ಮೂಡುಬಿದರೆಯಲ್ಲಿ ಪ್ರತಿ ವರ್ಷ ‘ನುಡಿ ಸಿರಿ’ ಹೆಸರಿನಲ್ಲಿ ಆಡಂಬರದ ಜಾತ್ರೆಯೊಂದನ್ನು ನಡೆಸುತ್ತದೆ. ಇದಕ್ಕೆ ನಾಡಿನ ಸಾಹಿತಿಗಳನ್ನು, ಖ್ಯಾತನಾಮರನ್ನು ಸೈದ್ಧಾಂತಿಕ ಚೌಕಟ್ಟುಗಳ ಆಚೆಗೆ ಅಹ್ವಾನಿಸುವುದು ಇದರ ಸಂಪ್ರದಾಯವಾಗಿದೆ. ಮತ್ತು, ಕಳೆದ ಮೂರು ವರ್ಷಗಳಿಂದ ಅಹ್ವಾನಿತರೇ ವಿವಾದd ಕೇಂದ್ರವಾಗುವ ಮೂಲಕ ಅಗತ್ಯವೇ ಇಲ್ಲದಿದ್ದರೂ ನುಡಿ ಸಿರಿ ಸುತ್ತ ಚರ್ಚೆಯೊಂದು ಹುಟ್ಟಿಕೊಳ್ಳುತ್ತದೆ.

ಹಾಗಂತ ಇಲ್ಲಿ ಕೇವಲ ಚರ್ಚೆ ಮಾತ್ರವೇ ನಡೆದುಕೊಂಡು ಬಂದಿಲ್ಲ. ಮೋಹನ್ ಆಳ್ವ ನೇತೃತ್ವದ ನುಡಿ ಸಿರಿಗೆ ಪರ್ಯಾಯವೊಂದನ್ನು ಹುಟ್ಟುಹಾಕುವ ಪ್ರಯತ್ನ ಆರಂಭವಾಗಿದ್ದು ಮೂರು ವರ್ಷಗಳ ಹಿಂದೆ. ದಕ್ಷಿಣ ಕನ್ನಡ ಮೂಲದ ಪತ್ರಕರ್ತ, ಸದ್ಯ ಬಿಟಿವಿಯಲ್ಲಿ ವರದಿಗಾರರಾಗಿರುವ ನವೀನ್ ಸೂರಿಂಜೆ ಮನೆಯಲ್ಲಿ ಪರ್ಯಾಯದ ಅಲೋಚನೆಯೊಂದು ಮೊಳೆತಿತ್ತು. ಸಾಂಕೇತಿಕವಾಗಿಯಾದರೂ ನುಡಿ ಸಿರಿಗೆ ಪರ್ಯಾಯ ಕಟ್ಟಲು ಹೊರಟ ನವೀನ್ ಹಾಗೂ ಸಂಗಡಿಗರು ಎರಡು ವರ್ಷ ಮಂಗಳೂರಿನಲ್ಲಿ ‘ಜನ ನುಡಿ’ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಮೂರನೇ ವರ್ಷ ಜನ ನುಡಿ ನಡೆದಿರಲಿಲ್ಲ. ಅದಕ್ಕೆ ಅವರದ್ದೇ ಕಾರಣಗಳಿವೆ.

ಇಂತಹದೊಂದು ಹಿನ್ನೆಲೆಯ ಮೂಲಕ ಸದ್ಯ ನುಡಿ ಸಿರಿಗೆ ಹೊರಟು ನಿಂತಿರುವ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿ ಮಲ್ಲಿಕಾ ಘಂಟಿ ಸುತ್ತ ಎದ್ದಿರುವ ಅಸಮಾಧಾನ, ವಿವಾದಕ್ಕೆ ಪ್ರವೇಶ ಪಡೆದುಕೊಳ್ಳಬೇಕಿದೆ.

ಸಿದ್ಧಾಂತ ಭೇದ, ಶಿಕ್ಷಣದ ವ್ಯಾಪಾರ, ಸಾಹಿತ್ಯದ ಆಡಂಬರದ ಪರಿಚಾರಿಕೆ, ವಿರೋಧ, ಪರ್ಯಾಯ ಹಾಗೂ ಇವೆಲ್ಲವನ್ನೂ ಅರ್ಥ ಪಡಿಸುವ ಪ್ರಯತ್ನದಲ್ಲಿ ನಡೆಸುವ ಸಂವಾದದ ರೂಪಗಳ ಹಲವು ಆಯಾಮಗಳಿವೆ ಇಲ್ಲಿ ಕಾಣಸಿಗುತ್ತವೆ.

ನುಡಿ- ಸಿರಿ- ಬದುಕು:

ಆಳ್ವಾಸ್ ನುಡಿ ಸಿರಿಯಲ್ಲಿ ಹುಲಿವೇಷದ ಸಂಕೇತ. 
ಆಳ್ವಾಸ್ ನುಡಿ ಸಿರಿಯಲ್ಲಿ ಹುಲಿವೇಷದ ಸಂಕೇತ. 
/ಆಳ್ವಾಸ್ ನುಡಿಸಿರಿ ಫೇಸ್‌ಬುಕ್ ಪೇಜ್. 

ಮೋಹನ್ ಆಳ್ವ ಅವರ ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಲಾಭ ರಹಿತ ಸರಕಾರೇತರ ಸಂಸ್ಥೆ ಅಡಿಯಲ್ಲಿ ನೋಂದಣಿಯಾಗಿವೆ. ಅವರು ತಮ್ಮ ಡೀಡ್‌ನಲ್ಲಿ ಹೇಳಿಕೊಂಡ ಪ್ರಕಾರ, ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಉದ್ದೇಶ ಹಣ ಅಲ್ಲ. ಹೆಚ್ಚು ಕಡಿಮೆ ಎಲ್ಲಾ ಸರಕಾರೇತರ ಸಂಸ್ಥೆಗಳ ರೀತಿಯಲ್ಲಿಯೇ ಆಳ್ವಾಸ್ ಶಿಕ್ಷಣ ಸಂಸ್ಥೆಗಳೂ ಕಾರ್ಯನಿರ್ವಹಿಸುತ್ತಿವೆ. ಲಾಭ ಉದ್ದೇಶ ಇದರ ಹಿಂದೆ ಇಲ್ಲ ಅಂತ ಹೇಳಿಕೊಂಡರೂ ಜನ ನಂಬಲು ಸಾಕ್ಷಿಗಳು ಸಿಗುತ್ತಿಲ್ಲ. ಆಳ್ವಾಸ್ ಎಜುಕೇಶನ್ ಟ್ರಸ್ಟ್ ಹೆಸರಿನಲ್ಲಿರುವ ಸಂಸ್ಥೆಯ ಅಧ್ಯಕ್ಷರು ಮಿಜಾರು ಮೋಹನ್ ಆಳ್ವ ಹಾಗೂ ಟ್ರಸ್ಟಿ ವಿವೇಕ್ ಮೋಹನ್ ಆಳ್ವ.

ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಅಲ್ಲಿ ನಡೆಯುವ ವಿದ್ಯಾರ್ಥಿಗಳ ಅಸಹಜ ಸಾವುಗಳ ಕಾರಣಕ್ಕೆ ಕುಖ್ಯಾತಿ ಗಳಿಸಿದೆ. ಡೊನೇಷನ್, ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ, ವ್ಯಾಪಾರಿ ಮನೋಭಾವಗಳ ಜತೆಗೆ ದಕ್ಷಿಣ ಕನ್ನಡವನ್ನು ಹಿಂದುತ್ವದ ಪ್ರಯೋಗಶಾಲೆ ಮಾಡಲು ಹೊರಟ ಬಲಪಂಥೀಯ ಶಕ್ತಿಗಳ ಜತೆಗಿನ ಒಡನಾಟದ ಕಾರಣಕ್ಕೆ ಮೋಹನ್ ಆಳ್ವ ಕರ್ನಾಟಕ ವಿಚಾರವಂತ ವರ್ಗದಿಂದ ವಿರೋಧಗಳನ್ನು ಎದುರಿಸುತ್ತಲೇ ಬಂದಿದ್ದಾರೆ. ಆದರೆ ಇವೆಲ್ಲವನ್ನೂ ಅವರು ನುಡಿ ಸಿರಿಯ ಹೆಸರಿನಲ್ಲಿ ಅಳಿಸಿ ಹಾಕುವ ಪ್ರಯತ್ನವೊಂದನ್ನು ಜಾರಿಯಲ್ಲಿಟ್ಟಂತೆ ಕಾಣಿಸುತ್ತದೆ. ಅದಕ್ಕಾಗಿ ವರ್ಷಕ್ಕೊಮ್ಮೆ ಆಡಂಬರದ ಕಾರ್ಯಕ್ರಮ ಹಾಗೂ ದೊಡ್ಡ ಮಟ್ಟದ ಪ್ರಚಾರ ನಡೆಸಿಕೊಂಡು ಬರಲಾಗುತ್ತಿದೆ.

“ನುಡಿ ಸಿರಿ ಎಂಬುದು ಸಾಹಿತ್ಯದ ಪರಿಚಾರಿಕೆ ಅಲ್ಲ. ತಮ್ಮ ಶಿಕ್ಷಣ ವ್ಯಾಪಾರವನ್ನು ಇನ್ನಷ್ಟು ಬೆಳೆಸಲು ಒಂದು ಸಾಧನ,’’ ಎನ್ನುತ್ತಾರೆ ಆಳ್ವರನ್ನು ವಿರೋಧಿಸುವವರು. ಹೀಗಿದ್ದೂ, ಪ್ರತಿ ವರ್ಷ ಮೋಹನ್ ಆಳ್ವರ ಈ ಪರಿಚಾರಿಕೆಗೆ ಸರಕಾರ ಹಣ ನೀಡುತ್ತ ಬಂದಿದೆ. ವ್ಯಾಪಾರಿಗಳು ಸಾಹಿತ್ಯ ಪರಿಚಾರಿಕೆ ನಡೆಸಬಾರದು ಎಂಬ ಕಾನೂನು ಇಲ್ಲದ ಕಾರಣ, ಆಳ್ವರನ್ನು ಕೇವಲ ಸಾಹಿತ್ಯ- ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಯ ಕಾರಣಕ್ಕೆ ವಿರೋಧಿಸುವುದು ಎಲ್ಲಾ ಆಯಾಮಗಳಲ್ಲೂ ಒಪ್ಪಲು ಕಷ್ಟವಾಗುತ್ತದೆ. ಆದರೂ, ಈ ಹಿಂದೆ ನುಡಿ ಸಿರಿಯಲ್ಲಿ ಭಾಗವಹಿಸಿದ್ದ ಹಲವು ಹಿರಿಯ ಸಾಹಿತಿಗಳು ನಂತರ ವಿರೋಧಿಸಿದ್ದಾರೆ. ಈ ಮೂಲಕ ನೈತಿಕ ನೆಲಗಟ್ಟಿನಲ್ಲಿ ಆಳ್ವರನ್ನು ಚೌಕಟ್ಟಿಗೆ ಒಳಪಡಿಸುವ ಪ್ರಯತ್ನ ಮಾಡಿದ್ದಾರೆ.

ಅಷ್ಟೆ ಅಲ್ಲ, ನುಡಿ ಸಿರಿಯ ಸಮಯಕ್ಕೆ ಜನ ನುಡಿ ಹೆಸರಿನಲ್ಲಿ ಪರ್ಯಾಯ ಸಾಹಿತ್ಯ- ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದಕ್ಷಿಣ ಕನ್ನಡ ಮೂಲದ ಬುದ್ಧಿಜೀವಿಗಳು ಆಯೋಜಿಸಿಕೊಂಡು ಬಂದಿದ್ದಾರೆ. ಇದು ಸ್ಥಳೀಯ ವ್ಯಾಪಾರಿಯೊಬ್ಬನ ವಿರುದ್ಧ ಹುಟ್ಟಿಕೊಂಡು ಸಾತ್ವಿಕ ಸಿಟ್ಟಿನ ಪ್ರತಿರೋಧ ಮತ್ತು ಇದಕ್ಕಿರುವ ಹಿನ್ನೆಲೆ ಮೂರು ವರ್ಷಗಳು. ಇದರ ಮುಂದುವರಿದ ಭಾಗವೇ ಮಲ್ಲಿಕಾ ಘಂಟಿ ಅವರ ಭಾಗೀದಾರಿಕೆಯ ಬಗೆಗೆ ಹುಟ್ಟಿದ ಪ್ರಶ್ನೆ, ವಿವಾದ.

ಸಂವಾದದ ಮಾದರಿಗಳು:

ಮಂಗಳೂರಿನಲ್ಲಿ 2016ರಲ್ಲಿ ಆಯೋಜನೆಗೊಂಡ ಜನ ನುಡಿ ಕಾರ್ಯಕ್ರಮದ ಒಂದು ನೋಟ. 
ಮಂಗಳೂರಿನಲ್ಲಿ 2016ರಲ್ಲಿ ಆಯೋಜನೆಗೊಂಡ ಜನ ನುಡಿ ಕಾರ್ಯಕ್ರಮದ ಒಂದು ನೋಟ. 
/ಜನನುಡಿ ಫೇಸ್‌ಬುಕ್ ಪೇಜ್. 

ಇಲ್ಲಿ ಗಮನಿಸಬೇಕಿರುವುದು, ಮಲ್ಲಿಕಾ ಘಂಟಿ ನುಡಿ ಸಿರಿಯಲ್ಲಿ ಭಾಗವಹಿಸಬಾರದು ಎಂಬ ಬಗೆಗೆ ಅಭಿಪ್ರಾಯ ನೀಡುವ ಕೆಲಸ ಹೇಗೆ ನಡೆಯಿತು ಎಂಬುದು? ‘ಮಲ್ಲಿಕಾ ಘಂಟಿ ಅವರನ್ನು ಹಂಪಿ ಕನ್ನಡ ವಿವಿಗೆ ಉಪಕುಲಪತಿಯನ್ನಾಗಿ ನೇಮಕ ಮಾಡಲು ಗೌರಿ ಲಂಕೇಶ್ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಶಿಫಾರಸು ಮಾಡಿದ್ದರು’ ಎಂಬ ವಿಚಾರವನ್ನು ಪತ್ರಕರ್ತ ನವೀನ್ ಸೂರಿಂಜೆ ಮುಂದಿಟ್ಟರು. ಇದು ಒಟ್ಟಾರೆ ಚರ್ಚೆಯ ದಾಟಿಯನ್ನೇ ವೈಯಕ್ತಿಕ ನೆಲೆಗೆ ಇಳಿಸಿತು. ಸಹಜವಾಗಿಯೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮಲ್ಲಿಕಾ ಘಂಟಿ, ಸ್ಟೇಟ್ ನ್ಯೂಸ್‌ ವೆಬ್‌ಸೈಟ್‌ಗೆ ನೀಡಿದ ಹೇಳಿಕೆಯಲ್ಲಿ, ಪರ- ವಿರೋಧದ ಚೌಕಟ್ಟನ್ನು ವಿಸ್ತರಿಸಿದರು. ಅವರ ಒಟ್ಟಾರೆ ಹೇಳಿಕೆಯಲ್ಲಿ ಪ್ರಮುಖ ಅಂಶಗಳಿವು:

1. ತಾವು ಉಪಕುಲಪತಿಯಾದ ಮೇಲೆ ಕೆಲವು ಸೋ- ಕಾಲ್ಡ್ ಹೋರಾಟಗಾರರು ನಿದ್ದೆ ಕೆಡಿಸಿಕೊಂಡಿದ್ದಾರೆ.

2. ನಡು ರಸ್ತೆಯಲ್ಲಿ ಬಾಯಿ ಬಡಿದುಕೊಳ್ಳುವವರು ಜಾತಿವಾದಿಗಳು.

3. ಗೌರಿ ಲಂಕೇಶ್‌ ಹೆಸರಿನಲ್ಲಿ ಕೆಲವು ಕೈಗೂಲಿ ಚಳವಳಿಗಾರರು ಆಕೆಯನ್ನು ಕೆಲಸ ಕೊಡಿಸುವ ಏಜೆಂಟ್‌ಳಂತೆ ಬಿಂಬಿಸಿದ್ದಾರೆ.

4. ದಾದಾಗಿರಿಗೆ ಒಳಗಾದವರಿಂತ, ದಾದಾಗಿರಿ ಮಾಡಿದವರಿಗೇ ನಷ್ಟ.

ಮತ್ತು;

5. ನಾನು ಚಳವಳಿ ಆರಂಭಿಸಿದಾಗ ಇನ್ನೂ ಹುಟ್ಟಿರದ ಯಾರಿಗೂ ಈ ಬಗ್ಗೆ ಮಾತನಾಡಲು ಅರ್ಹತೆ ಇಲ್ಲ.

ನುಡಿ ಸಿರಿ ಹಾಗೂ ಅದನ್ನು ಆಯೋಜನೆ ಮಾಡಿಕೊಂಡು ಬಂದ ಮೋಹನ್ ಆಳ್ವರ ಸುತ್ತ ನಡೆಯಬೇಕಿದ್ದ ಚರ್ಚೆಯೊಂದು ದಾರಿ ತಪ್ಪಿ ಇಲ್ಲಿಗೆ ಬಂದು ನಿಂತಿದೆ. ಅಂತಿಮವಾಗಿ ಜನ ನುಡಿ ಆಯೋಜಕರಾಗಲಿ, ಮಲ್ಲಿಕಾ ಘಂಟಿ ಅವರಾಗಲೀ ಏನನ್ನು ಹೇಳಲು ಹೊರಟಿದ್ದಾರೆ? ಇದರಿಂದ ನಾಡಿನ ಸಾಹಿತ್ಯ, ಸಾಂಸ್ಕೃತಿಕ, ನೈತಿಕ ವಿಚಾರಗಳಲ್ಲಿ ಮಾದರಿ ಹೇಗೆ ಸೃಷ್ಟಿಯಾಗುತ್ತದೆ?

ಈ ಹೊತ್ತಿಗೆ ಮೂರು ದಿನಗಳಿಂದ ಮಂಡನೆಯಾದ ಅಷ್ಟೂ ವಿಚಾರಗಳನ್ನು ಎದುರಿಗೆ ಇಟ್ಟಿಕೊಂಡು ನೋಡಿದರೆ- ವಿರೋಧಕ್ಕೊಂದು ವಿರೋಧ, ಪರವಾಗಿದ್ದರೆ ಅನುಮೋದನೆ. ಒಂದು ರೋಧ- ಮತ್ತೊಂದು ಪ್ರತಿರೋಧ ಅಷ್ಟೆ. ಪರಿಣಾಮ, ಮೋಹನ್ ಆಳ್ವರ ಪರಿಚಾರಿಕೆ ವಿಸ್ತಾರವಾಗುತ್ತಿದೆ. ಪ್ರತಿರೋಧದ ನೆಲೆ ವಿಭಜನೆಗೊಂಡು ಇನ್ನಷ್ಟು ಕ್ಷೀಣವಾಗುತ್ತಿದೆ.