ದ್ವೇಷ ಭಾಷಣ: ಯೋಗಿ ಆದಿತ್ಯನಾಥ್‌ಗೆ ಮಗ್ಗಲ ಮುಳ್ಳಾದ ಮಾಜಿ ಸಹಾಯಕನ ‘ಸ್ಟಾರ್‌ ವಿಟ್ನೆಸ್‌’
FEATURE STORY

ದ್ವೇಷ ಭಾಷಣ: ಯೋಗಿ ಆದಿತ್ಯನಾಥ್‌ಗೆ ಮಗ್ಗಲ ಮುಳ್ಳಾದ ಮಾಜಿ ಸಹಾಯಕನ ‘ಸ್ಟಾರ್‌ ವಿಟ್ನೆಸ್‌’

ಆದಿತ್ಯನಾಥ್‌ ತಮ್ಮ ಭಾಷಣ ಮುಗಿಸುವ ಮುನ್ನ ಸಭೆಯ ಮುಂಭಾಗದಲ್ಲಿದ್ದ ಹೋಟೆಲ್‌ ಅನ್ನು ಜನರ ಗುಂಪು ಧ್ವಂಸ ಮಾಡಿ ಅಲ್ಲಿಂದ ವಸ್ತುಗಳನ್ನು ಲೂಟಿ ಮಾಡಿತ್ತು. ಈ ಹೋಟೆಲ್‌ ಸ್ಥಳೀಯ ಮುಸ್ಲಿಂ ಸಮುದಾಯದವರೊಬ್ಬರಿಗೆ ಸೇರಿತ್ತು.

ರಾಘವೇಶ್ವರ ಸ್ವಾಮಿ ಅತ್ಯಾಚಾರ ಪ್ರಕರಣದಲ್ಲಿ ಅವರ ಮಾಜಿ ಸಹಾಯಕನೇ ಪ್ರಮುಖ ಸಾಕ್ಷಿಯಾಗಿ ಗುರುತಿಸಿಕೊಂಡಿದ್ದರು. ಇದು ಸ್ವಾಮಿ ಪಾಲಿಗೆ ಮಗ್ಗಲ ಮುಳ್ಳಾಗಿ ಪರಿಣಮಿಸಿತ್ತು. ಇದೀಗ ಹೆಚ್ಚು ಕಡಿಮೆ ಅಂಥದ್ದೇ ಪರಿಸ್ಥಿತಿಯಲ್ಲಿದ್ದಾರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌. ದ್ವೇಷ ಭಾಷಣ ಮಾಡಿದ ಪ್ರಕರಣವೊಂದರಲ್ಲಿ ಅವರ ಮಾಜಿ ಸಹಾಯಕರೇ ಅವರ ವಿರುದ್ಧ ಸಾಕ್ಷಿ ನುಡಿಯಲು ನಿಂತಿರುವುದು ಯೋಗಿ‌ಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಅದು 27 ಜನವರಿ 2017...

ಜಿಲ್ಲಾಡಳಿತದ ನಿರ್ಬಂಧವಿದ್ದರೂ ಗೋರಖಪುರದಲ್ಲಿ ಕಿಚ್ಚು ಹಚ್ಚುವ ಭಾಷಣ ಮಾಡಿದ್ದರು ಇಂದಿನ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಈ ಭಾಷಣದಲ್ಲಿ ಅವರು, ಗೋರಖಪುರದಲ್ಲಿ ಮೊಹರಂ ಸಂದರ್ಭದಲ್ಲಿ ನಡೆದಿದ್ದ ಗುಂಪುಗಳ ಘರ್ಷಣೆಯಲ್ಲಿ ಸಾವನ್ನಪ್ಪಿದ ಹಿಂದೂ ಯುವಕನ ಸಾವಿಗೆ ಪ್ರತೀಕಾರ ತೆಗೆದುಕೊಳ್ಳುವಂತೆ ಕರೆ ನೀಡಿದ್ದರು. ಅಂದ ಹಾಗೆ ಆಗ ಅವರು ಗೋರಖಪುರದ ಸಂಸದರಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿಯಲ್ಲಿ ಆದೇಶ ನೀಡಿದ್ದ ಅಲಹಾಬಾದ್‌ ಹೈಕೋರ್ಟ್‌ ಆದಿತ್ಯನಾಥ್‌ ವಿರುದ್ಧ ತನಿಖೆ ಕೈಬಿಡುವ ರಾಜ್ಯ ಸರಕಾರದ ನಿರ್ಧಾರಕ್ಕೆ ಒಪ್ಪಿಗೆ ನೀಡಿತ್ತು. ಆದರೆ ಆಗಸ್ಟ್‌ 20ರಂದು ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ದ್ವೇಷ ಭಾಷಣ ಪ್ರಕರಣದಲ್ಲಿ ಯೋಗಿ ಆದಿತ್ಯನಾಥ್‌ ವಿರುದ್ಧ ಯಾಕೆ ತನಿಖೆ ನಡೆಸಬಾರದು ಎಂಬುದನ್ನು ವಿವರಿಸುವಂತೆ ಉತ್ತರ ಪ್ರದೇಶ ಸರಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ. ಈ ಪ್ರಕರಣ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಮುನ್ನ ಹೇಳಿಕೆ ನೀಡಿದ್ದ ಆದಿತ್ಯನಾಥ್‌ರ ಮಾಜಿ ಬಲಗೈ ಬಂಟ ಸುನಿಲ್‌ ಸಿಂಗ್‌ ‘ಧ್ವೇಷ ಭಾಷಣದ ಆರೋಪ ನಿಜ’ ಎಂದಿದ್ದರು.

ಯೋಗಿ ಆದಿತ್ಯನಾಥ್‌ ಪಕ್ಕದಲ್ಲಿ ನಿಂತಿರುವ ಕೆಂಪು ಮುಂಡಾಸಿನ ವ್ಯಕ್ತಿ ಸುನಿಲ್‌ ಸಿಂಗ್‌
ಯೋಗಿ ಆದಿತ್ಯನಾಥ್‌ ಪಕ್ಕದಲ್ಲಿ ನಿಂತಿರುವ ಕೆಂಪು ಮುಂಡಾಸಿನ ವ್ಯಕ್ತಿ ಸುನಿಲ್‌ ಸಿಂಗ್‌
/ಕ್ಯಾರವಾನ್

ಈ ಸಂಬಂಧ ಕ್ಯಾರವಾನ್‌ ಪತ್ರಕರ್ತನ ಜತೆ ಸೆಪ್ಟೆಂಬರ್‌ 10 ರಂದು ಮಾತನಾಡಿದ ಸಿಂಗ್‌, “ಉದ್ರೇಕಕಾರಿ ವಾತಾವರಣದಲ್ಲಿ ಅಂದಿನ ಸಂಜೆಯ ಸಮಾವೇಶ ನಡೆಯಿತು,” ಎಂದು ವಿವರಿಸಿದ್ದಾರೆ. ಗೋರಖಪುರ ರೈಲ್ವೇ ನಿಲ್ದಾಣದ ಪ್ರವೇಶ ದ್ವಾರದ ಮುಂಭಾಗದಲ್ಲಿರುವ ಮಹಾರಾಣಾ ಪ್ರತಾಪ್‌ ಪ್ರತಿಮೆ ಸಮೀಪ ಈ ಸಭೆ ನಡೆಯಿತು. ಸಾವನ್ನಪ್ಪಿದ್ದ ಹಿಂದೂ ಯುವಕನ ಸ್ಮರಣಾರ್ಥ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. “ಆದಿತ್ಯನಾಥ್‌ ಭಾಷಣಕ್ಕೂ ಮುನ್ನ ಅಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ನಾನು ಮಾತನಾಡಿದೆ. ಅದರ ವಿಡಿಯೋ ರೆಕಾರ್ಡಿಂಗ್‌ ಇದ್ದು ಅದನ್ನು ಕೋರ್ಟ್‌ಗೆ ನೀಡಲಾಗಿದೆ. ನಾನು ಆ ಜಾಗದಲ್ಲಿ ಅಂದು ಇದ್ದೆ," ಎನ್ನುತ್ತಾರೆ ಸಿಂಗ್‌.

ಸಿಂಗ್‌ ಹೇಳುವ ಪ್ರಕಾರ ಆದಿತ್ಯನಾಥ್‌ ಭಾಷಣ ನಡೆಯುತ್ತಿರುವಾಗಲೇ ಹಿಂಸಾಚಾರ ಆರಂಭವಾಗಿತ್ತು. “ಆದಿತ್ಯನಾಥ್‌ ತಮ್ಮ ಭಾಷಣ ಮುಗಿಸುವ ಮುನ್ನ ಸಭೆಯ ಮುಂಭಾಗದಲ್ಲಿದ್ದ ಹೋಟೆಲ್‌ ಅನ್ನು ಜನರ ಗುಂಪು ಧ್ವಂಸ ಮಾಡಿ ಅಲ್ಲಿಂದ ವಸ್ತುಗಳನ್ನು ಲೂಟಿ ಮಾಡಿತ್ತು. ಈ ಹೋಟೆಲ್‌ ಸ್ಥಳೀಯ ಮುಸ್ಲಿಂ ಸಮುದಾಯದವರೊಬ್ಬರಿಗೆ ಸೇರಿತ್ತು. ಈ ಪ್ರಕಣದಲ್ಲಿ ನಾನೂ ಓರ್ವ ಆರೋಪಿ. ಅಲ್ಲಿಂದ ಗಲಭೆ ಗೋರಖಪುರದಾದ್ಯಂತ ಹಬ್ಬಿತು” ಎಂದು ವಿವರಿಸುತ್ತಾರೆ ಅವರು.

ಈ ಗಲಭೆಯಲ್ಲಿ ಇಬ್ಬರು ಸಾವನ್ನಪ್ಪಿದರೆ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿಗೆ ಹಾನಿಯಾಯಿತು. ಮರುದಿನ ಅಂದರೆ ಜನವರಿ 28ರಂದು ಯೋಗಿ ಆದಿತ್ಯನಾಥ್‌ ಮತ್ತು ಅವರು 2002ರಲ್ಲಿ ಹುಟ್ಟುಹಾಕಿದ ತೀವ್ರವಾದಿಗಳ ಗುಂಪು ‘ಹಿಂದೂ ಯುವ ವಾಹಿನಿ’ ಕಾರ್ಯಕರ್ತರು ಗೋರಖಪುರದ ಉದ್ವಿಗ್ನ ಪ್ರದೇಶಗಳಿಗೆ ಯಾತ್ರೆ ಹೊರಟಿದ್ದರು. ಈ ಸಂದರ್ಭದಲ್ಲಿ ಆದಿತ್ಯನಾಥ್‌ ಮತ್ತು ಅವರ ಸಹಚರರನ್ನು ಬಂಧಿಸಲಾಯಿತು. ನಾನೂ ಬಂಧನಕ್ಕೆ ಒಳಗಾಗಿದ್ದೆ ಎಂದು ಮಾಹಿತಿ ನೀಡುತ್ತಾರೆ ಸಿಂಗ್‌. “11 ದಿನಗಳ ನಂತರ ಜೈಲಿನಿಂದ ಆದಿತ್ಯನಾಥ್‌ ಬಿಡುಗಡೆಯಾದರೆ ನಾನು ಸುಮಾರು 66 ದಿನಗಳ ಕಾಲ ಜೈಲಿನಲ್ಲಿದ್ದೆ.”

ಅವತ್ತು ಯೋಗಿ ಆದಿತ್ಯನಾಥ್‌ ಪಾಲಿನ ನಂಬಿಕಸ್ಥ ಬಂಟನಾಗಿದ್ದ ಸಿಂಗ್‌ ‘ಹಿಂದೂ ಯುವ ವಾಹಿನಿ’ಯ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. 2017ರವರೆಗೂ ಈ ಹುದ್ದೆಯನ್ನು ನಿರ್ವಹಿಸಿದ್ದ ಅವರನ್ನು ಮುಂದೆ ಆದಿತ್ಯನಾಥ್‌ ಆದೇಶ ಮೀರಿ ಯುವ ವಾಹಿನಿಯಿಂದ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಕ್ಕಾಗಿ ಸಂಘಟನೆಯಿಂದಲೇ ಹೊರ ಹಾಕಲಾಯಿತು.

ಹೀಗಿದ್ದೂ 2017ರಲ್ಲಿ ಯೋಗಿ ಆದಿತ್ಯನಾಥ್‌ ಮುಖ್ಯಮಂತ್ರಿ ಹುದ್ದೆಗೇರಿದ ನಂತರವೂ ಅವರ ನೆರಳಿನಂತೆಯೇ ಹಿಂಬಾಲಿಸಿದ್ದರು ಸಿಂಗ್‌. ಜತೆಗೆ ರಾಜ್ಯಾಧ್ಯಕ್ಷ ಹುದ್ದೆ ತೊರೆದರೂ ಸಂಘಟನೆಯ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರತಿನಿಧಿಗಳ ಜತೆ ಸಿಂಗ್‌ ಸತತ ಸಂಪರ್ಕ ಇಟ್ಟುಕೊಂಡಿದ್ದರು. ಕಾರಣ ಅವರನ್ನೆಲ್ಲಾ ಸ್ವತಃ ಸಿಂಗ್‌ ಸಂಘಟನೆಯೊಳಕ್ಕೆ ಎಳೆದು ತಂದವರಾಗಿದ್ದರು.

2017ರಲ್ಲಿ ಮೊದಲ ಬಾರಿಗೆ ಸಿಂಗ್‌ರಿಗೆ ನಾಯಕತ್ವ ನೀಡುವಂತೆ ಸಂಘಟನೆಯಲ್ಲಿ ಒತ್ತಡ ಸೃಷ್ಟಿಯಾಗುತ್ತಿದ್ದಂತೆ ಆರ್‌ಎಸ್‌ಎಸ್‌ನ್ನು ಸಮಾಧಾನ ಪಡಿಸಲು ತಾವೇ ಕಟ್ಟಿ ಬೆಳೆಸಿದ ಸಂಘಟನೆಯನ್ನೇ ಅಲಕ್ಷಿಸಿದರು ಯೋಗಿ. ಎಷ್ಟೋ ಜಿಲ್ಲಾ ಘಟಕಗಳ ವಿಸರ್ಜನೆಯೂ ನಡೆಯಿತು. ಮುಖ್ಯಮಂತ್ರಿಯಾಗಿ ತಮ್ಮ ಸಂಘಟನೆಯ ಆಶಯಗಳು ಬಿಜೆಪಿಯ ಜತೆ ಸಂಘರ್ಷಕ್ಕೀಡು ಮಾಡಬಾರದು ಎಂಬ ಉದ್ದೇಶದಿಂದ ಅವರು ಈ ತೀರ್ಮಾನಕ್ಕೆ ಬಂದಿದ್ದರು. ವಿಚಿತ್ರವೆಂದರೆ ಬಿಜೆಪಿ ಟಿಕೆಟ್‌ನಿಂದಲೇ ಆದಿತ್ಯನಾಥ್‌ ಸ್ಪರ್ಧಿಸುತ್ತಿದ್ದರೂ ಅವರ ಸಂಘಟನೆ ಮಾತ್ರ ಸಂಘ ಪರಿವಾರದ ತೆಕ್ಕೆಯಿಂದ ಹೊರಗಿತ್ತು.

ಈ ಸಂದರ್ಭದಲ್ಲಿ ಬಂಡಾಯವೆದ್ದ ಗುಂಪೊಂದು ಹಿಂದೂ ಯುವ ವಾಹಿನಿ (ಭಾರತ್) ಹೆಸರಿನಲ್ಲಿ ಮರು ಸಂಘಟನೆಗೊಂಡಿತು. ಲಕ್ನೋದಲ್ಲಿ ಸಭೆ ಸೇರಿದ ಈ ಗುಂಪು ಸುನಿಲ್‌ ಸಿಂಗ್‌ರನ್ನು ತಮ್ಮ ರಾಷ್ಟ್ರೀಯ ಅಧ್ಯಕ್ಷ ಎಂದು ಘೋಷಿಸಿತು. ಅಲ್ಲಿಂದ ಎರಡೂ ವೈರಿ ಗುಂಪುಗಳ ನಡುವೆ ಕೆಸರೆರೆಚಾಟ ಆರಂಭವಾಯಿತು. ಇದರ ಮುಂದುವರಿದ ಭಾಗವಾಗಿ ಜುಲೈ 31ರಂದು ಗೋರಖಪುರದ ರಾಜಘಾಟ್‌ ಠಾಣೆ ಪೊಲೀಸರು ಸುನಿಲ್‌ ಸಿಂಗ್‌ ಮತ್ತು ಇತರರನ್ನು ಬೇರೆ ಬೇರೆ ಆರೋಪಗಳ ಮೇಲೆ ಬಂಧಿಸಿದರು. ನಂತರ ಅವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಜತೆಗೆ ಲಕ್ನೋ ಕೇಂದ್ರ ಕಾರಾಗೃಹಕ್ಕೂ ಅವನ್ನು ತಳ್ಳಲಾಯಿತು.

“ಅವರ ವಿರುದ್ಧದ ಪ್ರಕರಣದಲ್ಲಿ ನಾನು ಸಾಕ್ಷಿಯಾಗಬಹುದು ಎಂಬುದನ್ನು ಅರ್ಥ ಮಾಡಿಕೊಂಡ ಯೋಗಿ ಆದಿತ್ಯನಾಥ್‌ ನನಗೆ ಕಿರುಕುಳ ನೀಡಲು ಆರಂಭಿಸಿದರು,” ಎನ್ನುತ್ತಾರೆ ಸಿಂಗ್. ಗೋರಖಪುರದ ರೈಲ್ವೇ ನಿಲ್ದಾಣದ ಹೊರಗೆ ಬೆಂಕಿ ಹಚ್ಚುವ ಉಗ್ರ ಭಾಷಣವನ್ನು ಯೋಗಿ ಆದಿತ್ಯನಾಥ್‌ ಮಾಡುತ್ತಿದ್ದ ವೇಳೆ ನಾನು ಅಲ್ಲಿ ಉಪಸ್ಥಿತನಿದ್ದೆ ಎಂದು ವಿವರಿಸುತ್ತಾರೆ ಸಿಂಗ್‌.

ಆದರೆ ಆದಿತ್ಯನಾಥ್‌ ಜತೆ ಸಂಬಂಧ ಹಳಸಿದ್ದರೂ ಸಿಂಗ್‌ ಇದನ್ನೆಲ್ಲಾ ಎಂದೂ ಹೊರಗಡೆ ಬಾಯಿ ಬಿಟ್ಟಿರಲಿಲ್ಲ. ಪ್ರಕರಣದಲ್ಲಿ ತಾವು ಅನುಮೋದಕರಾಗುವುದು ಅವರಿಗೆ ಇಷ್ಟವಿರಲಿಲ್ಲ. ಆದರೆ ಈಗ ಆಗುತ್ತೇನೆ ಎನ್ನುತ್ತಾರೆ ಅವರು. “ಈ ಹಿಂದೆ ಆದಿತ್ಯನಾಥ್‌ ಜತೆಗೆ ನನ್ನ ಭಿನ್ನಾಭಿಪ್ರಾಯವಿದ್ದುದು ರಾಜಕಿಯ ಕಾರಣಗಳಿಗೆ ಮಾತ್ರ. ಆದರೆ ನಾನು ಈಗ ಎಲ್ಲಾ ರೀತಿಯ ಹಿಂಸೆಯನ್ನೂ ಜೈಲಿನಲ್ಲಿ ಅನುಭವಿಸಿದ್ದೇನೆ. ಇದು ಎಲ್ಲವನ್ನೂ ಬದಲಾಯಿಸಿದೆ. ಈಗ ಭಿನ್ನಭಿಪ್ರಾಯಗಳು ವೈಯಕ್ತಿಕ ಮಟ್ಟಕ್ಕಿಳಿದಿವೆ. ಈ ಕಾರಣಕ್ಕೆ ಅವಕಾಶ ನೀಡಿದರೆ ನ್ಯಾಯಾಲಯಕ್ಕೆ ಸತ್ಯ ಹೇಳುವ ಆಯ್ಕೆ ಮಾತ್ರ ನನಗೆ ಉಳಿದಿದೆ,” ಎನ್ನುತ್ತಾರೆ ಅವರು.

ಕೃಪೆ: ಧೀರೇಂದ್ರ ಕೆ ಝಾ, ಕ್ಯಾರವಾನ್‌