samachara
www.samachara.com
ತೈಲ ಬೆಲೆಗಳ ಹಿಂದೆ ‘ಸೀಕ್ರೆಟ್ ಆಫ್ ಸೆವೆನ್ ಸಿಸ್ಟರ್ಸ್’: ಭಾರತ್ ಬಂದ್ ಆಚೆಗೆ ನೀವು ಗಮನಿಸಬೇಕಿರುವುದೇನು?
FEATURE STORY

ತೈಲ ಬೆಲೆಗಳ ಹಿಂದೆ ‘ಸೀಕ್ರೆಟ್ ಆಫ್ ಸೆವೆನ್ ಸಿಸ್ಟರ್ಸ್’: ಭಾರತ್ ಬಂದ್ ಆಚೆಗೆ ನೀವು ಗಮನಿಸಬೇಕಿರುವುದೇನು?

ನೀವು ಇವತ್ತು ಬಂದ್ ಪರವಾಗಿರಿ ಅಥವಾ ವಿರುದ್ಧ ನೆಲೆಯಲ್ಲಿಯೇ ಇರಿ; ಅದು ಸಮಸ್ಯೆ ಅಲ್ಲ. ಬದಲಿಗೆ, ಬಂದ್ ನೆಪದಲ್ಲಾದರೂ, ಅಂತಾರಾಷ್ಟ್ರೀಯ ತೈಲೋದ್ಯಮದ ಬಗೆಗೆ ಹೊಸ ಅರಿವನ್ನು ಹೆಚ್ಚಿಸಿಕೊಳ್ಳಿ.

samachara

samachara

ನೂರರ ಗಡಿಯತ್ತ ಪೆಟ್ರೋಲ್ ಬೆಲೆ, ಹೆಚ್ಚುತ್ತಿರುವ ಡೀಸೆಲ್ ಪ್ರೈಸ್, ಅಡುಗೆ ಅನಿಲ ದುಬಾರಿ, ಡಾಲರ್ ಎದುರಿಗೆ ಕುಸಿಯುತ್ತಿರುವ ರೂಪಾಯಿ... ಕೊನೆಗೊಂದು ‘ಭಾರತ್ ಬಂದ್’. ಹೆಚ್ಚು ಕಡಿಮೆ 2012ರಲ್ಲಿ ನಡೆದ ಘಟನಾವಳಿಗಳ ಪುನರಾವರ್ತನೆ ಇದು.

ಡಾಲರ್, ರೂಪಾಯಿಗಳನ್ನು ಕೊಂಚ ಪಕ್ಕಕ್ಕಿಡಿ. ಇಂಧನ ಬೆಲೆ ಭಾರತದಲ್ಲಿ ಎಚ್ಚರಿಕೆ ಗಂಟೆಯಂತೆ ಮೊಳಗುತ್ತಿದೆ. ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಬಿಜೆಪಿ ಹೊರತು ಪಡಿಸಿ ಇತರೆ ಪಕ್ಷಗಳು ಸೋಮವಾರ ಕರೆ ನೀಡಿದ್ದ ಬಂದ್ ಬಹುತೇಕ ಯಶಸ್ವಿಯಾಗಿದೆ. ದೇಶಾದ್ಯಂತ ಪರಿಣಾಮಗಳನ್ನು ಬೀರಿದೆ. ಜತೆಗೆ, ಹಿಂದೆ ಯಾವತ್ತೂ ಕಾಣದ, ಇಂತಹ ಬಂದ್ ವಿರೋಧಿಸುವ ದನಿಗಳೂ ಇಲ್ಲೀಗ ಕೇಳಿಬರುತ್ತಿವೆ.

ದುರಂತ ಏನೆಂದರೆ, ಬಂದ್‌ಗೂ ಮೊದಲು, ಬಂದ್ ದಿನ ಹಾಗೂ ಬಂದ್ ನಂತರ ಇಂಧನ ಬೆಲೆ ಏರಿಕೆ ಸುತ್ತ ನಮ್ಮ ಅಲೋಚನೆಗಳು ಸೀಮಿತ ಚೌಕಟ್ಟಿನೊಳಗೇ ಇವೆ. ಇಂಧನ ಬೆಲೆಯಲ್ಲಿ ಕೇಂದ್ರದ ಪಾಲೆಷ್ಟು, ರಾಜ್ಯದ ಪಾಲೆಷ್ಟು?, ಹಿಂದಿನ ಸರಕಾರಕ್ಕೂ ಇವತ್ತಿನ ಸರಕಾರಕ್ಕೂ ಬೆಲೆ ಏರಿಕೆ- ಇಳಿಕೆಯಲ್ಲಿ ವ್ಯತ್ಯಾಸ ಏನು? ನೆರೆಯ ನೇಪಾಳದಲ್ಲಿ ಇಂಧನ ಬೆಲೆ ಎಷ್ಟಿದೆ? ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಾಗುತ್ತಿರುವುದು ಏಕೆ? ಇದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತಗಳು ಹೇಗಾಗುತ್ತವೆ? ಇವು ನಮಗೆ ಕಳೆದ ಒಂದು ವಾರದಿಂದ ನಮ್ಮ ಮುಖ್ಯವಾಹಿನಿ ಮಾಧ್ಯಮಗಳು ನೀಡಿದ ಮಾಹಿತಿ. ಸಾಮಾಜಿಕ ಜಾಲತಾಣಗಳಲ್ಲಿಯೂ ಇದರ ಆಚೆಗೆ ಇಂಧನ ಬೆಲೆ, ತೈಲೋದ್ಯಮದ ಬಗೆಗೆ ಗಮನ ಸೆಳೆಯುವ ಅಂಶಗಳು ಕಾಣಿಸುತ್ತಿಲ್ಲ.

ಸಾಮಾನ್ಯವಾಗಿ ಬಂದ್, ಧರಣಿ, ಹರತಾಳು ನಡೆಯುವುದು ಪ್ರಜಾಪ್ರಭುತ್ವ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಗಳು. ಬಂದ್ ನಡೆದ ತಕ್ಷಣ ಆಡಳಿತ ಪಕ್ಷ ಬಿದ್ದು ಹೋದ ಉದಾಹರಣೆಗಳಿಲ್ಲ, ಪ್ರತಿ ಪಕ್ಷ ಬಂದ್ ನಡೆಸಿದ ಮಾತ್ರಕ್ಕೆ ಜನಪರವಾಗಿದೆ ಎಂಬ ಅರ್ಥವೂ ಅಲ್ಲ. ಇವು ಸಾಂಕೇತಿಕ ಅಷ್ಟೆ. ಇಂತಹ ಪರ ವಿರೋಧಗಳ ಆಚೆಗೆ, ಬಂದ್, ಪ್ರತಿಭಟನೆಗಳು ನಿರ್ದಿಷ್ಟ ವಿಚಾರಗಳ ಬಗೆಗೆ ಜನರ ಸಾಮೂಹಿಕ ಅರಿವನ್ನು ಹೆಚ್ಚಿಸುವ ಪ್ರಕ್ರಿಯೆಗಳು. ಈ ಹಿನ್ನೆಲೆಯಲ್ಲಿ ಇಂಧನ ಬೆಲೆ ವಿಚಾರದಲ್ಲಿ ಭಾರತದಲ್ಲಿ ಕಳೆದ ಒಂದು ದಶಕದ ಅವಧಿಯಲ್ಲಿ ಸಾಕಷ್ಟು ‘ಭಾರತ್ ಬಂದ್’ ನಡೆದಿವೆ. ಆದರೆ, ಪ್ರತಿ ಬಾರಿಯೂ ಈಗ ಕಾಣಿಸುತ್ತಿರುವ ದೃಶ್ಯಾವಳಿಗಳೇ ಪುನರಾವರ್ತನೆಯಾಗಿವೆ. ಇಂಧನ ಬೆಲೆ ಏರಿಕೆ ವಿಚಾರದಲ್ಲಿ ಜನರ ಅರಿವಿನ ವಿಸ್ತಾರ ಕೂಡ ಮೇಲಿನ ಅಂಶಗಳಿಗೇ ಸೀಮಿತವಾಗಿದೆ.

ನೀವು ಇವತ್ತು ಬಂದ್ ಪರವಾಗಿರಿ ಅಥವಾ ವಿರುದ್ಧ ನೆಲೆಯಲ್ಲಿಯೇ ಇರಿ; ಅದು ಸಮಸ್ಯೆ ಅಲ್ಲ. ಬದಲಿಗೆ, ಬಂದ್ ನೆಪದಲ್ಲಾದರೂ, ಅಂತಾರಾಷ್ಟ್ರೀಯ ತೈಲೋದ್ಯಮದ ಬಗೆಗೆ ಹೊಸ ಅರಿವನ್ನು ಹೆಚ್ಚಿಸಿಕೊಳ್ಳಿ. ಈ ನಿಟ್ಟಿನಲ್ಲಿ ‘ಸಮಾಚಾರ’ ಕನ್ನಡದಲ್ಲಿ ಮೊದಲ ಬಾರಿಗೆ ‘ಸೀಕ್ರೇಟ್ ಆಫ್ ಸೆವೆನ್ ಸಿಸ್ಟರ್ಸ್’ನ್ನು ನಿಮಗಿಲ್ಲಿ ಪರಿಚಯಿಸುವ ಪ್ರಯತ್ನ ಮಾಡುತ್ತಿದೆ.

ಅವು ಸಪ್ತ ಸಹೋದರಿಯರು:

ಭಾರತದಲ್ಲಿ ಸೆವೆನ್ ಸಿಸ್ಟರ್ಸ್ ಅಥವಾ ಸಪ್ತ ಸಹೋದರಿಯರು ಎಂದು ಈಶಾನ್ಯ ಭಾರತದ ರಾಜ್ಯಗಳು ಕರೆಸಿಕೊಳ್ಳುತ್ತವೆ. ಅದೇ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಜಗತ್ತಿನ ತೈಲ ಮಾರುಕಟ್ಟೆಯನ್ನು 1940ರಿಂದ 1970ರ ನಡುವೆ ಆಳಿದ ಏಳು ಬಹುರಾಷ್ಟ್ರೀಯ ಕಂಪನಿಗಳನ್ನು ‘ಸೆವೆನ್ ಸಿಸ್ಟರ್ಸ್’ ಎಂದು ಕರೆಯಲಾಗುತ್ತದೆ.

ಬ್ರಿಟಿಷ್ ಪೆಟ್ರೋಲಿಯಂ (ಬಿಪಿ), ಗಲ್ಫ್ ಆಯಿಲ್, ರಾಯಲ್ ಡಚ್ ಶೆಲ್ (ಶೆಲ್), ಶೆವ್ರಾನ್, ಎಕ್ಸಾನ್, ಮೊಬಿಲ್ ಹಾಗೂ ಟೆಕ್ಸಿಕೋ ಎಂಬ ಕಂಪನಿಗಳು ಕೇವಲ ಐವತ್ತು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದವು. 19ನೇ ಶತಮಾನದ ಮಧ್ಯ ಭಾಗದಲ್ಲಿ ಅರಬ್ ದೇಶಗಳಲ್ಲಿ ನಡೆದ ಅಷ್ಟೂ ರಾಜಕೀಯ ಬದಲಾವಣೆಗಳು, ಯುದ್ಧಗಳು, ಆಂತರಿಕ ಸಂಘರ್ಷಗಳು, ಸದ್ದಾಂ ಹುಸೇನ್‌ ಅಂತ್ಯದಿಂದ ಹಿಡಿದು, ಅಮೆರಿಕಾದಲ್ಲಿ ಇಂಧನ ಇಲ್ಲದೆ ಸ್ಥಬ್ಧಗೊಂಡ ಜನಜೀವನದವರೆಗೆ ನಡೆದ ಒಂದೊಂದು ರೋಚಕ ಐತಿಹಾಸಿಕ ಘಟನೆಗಳ ಹಿಂದೆ ಇರುವುದು ಇದೇ ಸಪ್ತ ಸಹೋದರಿಯರ ತೈಲ ವ್ಯಾಪಾರದ ದಾಹ.

ನಂತರ ದಿನಗಳಲ್ಲಿ ಇವುಗಳಿಗೆ ಸಡ್ಡು ಹೊಡೆದು ಹುಟ್ಟಿಕೊಂಡಿದ್ದು ತೈಲ ಉತ್ಪಾದನಾ ರಾಷ್ಟ್ರಗಳ ಒಕ್ಕೂಟ ಅರ್ಥಾತ್ ಒಪೆಕ್. ರಷ್ಯಾ ಮತ್ತು ಚೈನಾದ ದೊಡ್ಡ ಕಂಪನಿಗಳು ತೈಲೋದ್ಯಮಕ್ಕೆ ಇಳಿಯುವ ಮೂಲಕ ಸಪ್ತ ಸಹೋದರಿಯರ ಪ್ರಾಬಲ್ಯಕ್ಕೆ ಆ ಮೂಲಕ ಅಮೆರಿಕಾ ತೈಲ ಮಾರುಕಟ್ಟೆಯ ಮೇಲೆ ಹೊಂದಿದ್ದ ಹಿಡಿತ ಸಡಿಲಗೊಂಡಿತು. ಇದು ಕೂಡ ಇತಿಹಾಸ ದಾಖಲಿಸಿಕೊಂಡ ಮತ್ತೊಂದು ರೋಚಕ ಕಥಾನಕ.

ಈ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಆಂಥೋನಿ ಸಂಪ್ಸನ್ (ಈತ ನೆಲ್ಸನ್ ಮಂಡೆಲಾ ಆತ್ಮಕತೆಯ ಲೇಖಕ ಕೂಡ) ‘ಸೆವೆನ್ ಸಿಸ್ಟರ್ಸ್- ದಿ ಗ್ರೇಟ್ ಆಯಿಲ್ ಕಂಪನೀಸ್ ಅಂಡ್ ವರ್ಲ್ಡ್‌ ದೆ ಮೇಡ್’ ಎಂಬ ಪುಸ್ತಕ ನೆರವಾಗುತ್ತದೆ.

ಇದೇ ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ‘ಆಲ್‌ ಜಝೀರಾ’ ವಾಹಿನಿ ‘ಸೀಕ್ರೆಸ್ ಆಫ್ ಸೆವೆನ್ ಸಿಸ್ಟರ್ಸ್’ ಎಂಬ ಡಾಕ್ಯುಮೆಂಟರಿಯೊಂದನ್ನು ನಾಲ್ಕು ಕಂತುಗಳಲ್ಲಿ ರೂಪಿಸಿದೆ. ಅದರ ಯೂ- ಟ್ಯೂಬ್ ಲಿಂಕ್ ಇಲ್ಲಿದೆ.

ತೈಲ ಬೆಲೆ ವಿಚಾರಕ್ಕೆ ಬಂದರೆ ಕಂಟೆಂಟ್ ಇಲ್ಲದೆ ಪರದಾಡುತ್ತಿರುವ ಕನ್ನಡ ಸುದ್ದಿ ವಾಹಿನಿಗಳು ಇದನ್ನು ಕನ್ನಡದ ವೀಕ್ಷಕರಿಗೆ ನೀಡಬಹುದು. ಈ ಮೂಲಕ ದಶಕಗಳ ಕಾಲ ತೈಲ ಬೆಲೆ ಏರಿಕೆ ಸುತ್ತ ಸೃಷ್ಟಿಯಾಗಿರುವ ಮೀಡಿಯಾ ಮನಾಟನಿಯಿಂದ ಹೊರಬರಲು ಅವಕಾಶವಿದೆ.

ಭಾರತದ ತೈಲ ಮಾರುಕಟ್ಟೆ ವಿಚಾರಕ್ಕೆ ಬಂದರೆ, 90ರ ದಶಕದ ನಂತರ ಸ್ಥಳೀಯ ತೈಲ ಮಾತುಕಟ್ಟೆಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿವೆ. ಈ ಕುರಿತು ಪರಂಜೊಯ್ ಗುಹಾ ತಾಕುರ್ತಾ ಹಾಗೂ ಸುಭೀರ್ ಘೋಷ್ ಬರೆದ ‘ಗ್ಯಾಸ್ ವಾರ್ಸ್- ಕ್ರೋನಿ ಕ್ಯಾಪಿಟಲಿಸಂ ಅಂಡ್ ದಿ ಅಂಬಾನೀಸ್’ ಎಂಬ ಪುಸ್ತಕವೊಂದು ಇಂಗ್ಲಿಷ್‌ನಲ್ಲಿ ಲಭ್ಯ ಇದೆ.

ಇಂಧನ ಬೆಲೆ ಹೆಚ್ಚಳ, ಜನ ಜೀವನ ದುಬಾರಿ ವಿಚಾರಗಳು ಬಂದಾಗೆಲ್ಲಾ ಸೀಮಿತ ಆಲೋಚನೆಗಳೇ ಈವರೆಗೆ ಜನರನ್ನು ಮುನ್ನಡೆಸಿಕೊಂಡು ಬಂದಿವೆ. ಈ ಬಾರಿಯ ಭಾರತ್ ಬಂದ್ ಕೂಡ ಇದಕ್ಕೆ ಹೊರತಾಗಿಲ್ಲ. ನೀವು ಬಂದ್ ಪರವಾಗಿಯಾದರೂ ಇರಿ, ವಿರೋಧವಾಗಿಯಾದರೂ ಇರಿ, ಮೊದಲು ತೈಲ ಮಾರುಕಟ್ಟೆಯನ್ನು ಅದರ ಅಂತಾರಾಷ್ಟ್ರೀಯ ಆಯಾಮದಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಿ. ಇಲ್ಲದಿದ್ದರೆ, ಮತ್ತೊಂದು ಸರಕಾರ, ಮತ್ತೊಮ್ಮೆ ಬೆಲೆ ಏರಿಕೆ, ಮತ್ತೊಂದು ಭಾರತ್ ಬಂದ್‌ ಹಾಗೂ ಅದದೇ ಘಟನಾವಳಿಗಳ ಪುನರಾವರ್ತನೆಗೆ ನೀವು ಕೊರಳು ಒಡ್ಡುತ್ತಲೇ ಇರಬೇಕಾಗುತ್ತದೆ. ತಲೆಮಾರು ಮಾತ್ರ ಬದಲಾಗುತ್ತದೆ, ಅಷ್ಟೆ.

Also read: 'ಗುಜರಾತ್ ಪೆಟ್ರೋಲಿಯಂ ಸ್ಕ್ಯಾಮ್': ಪ್ರಧಾನಿ ಮೋದಿ ಮೇಲೆ ಭ್ರಷ್ಟಾಚಾರದ ಬೋಣಿಗೆ