samachara
www.samachara.com
ಅಂತರ್‌ರಾಷ್ಟ್ರೀಯ ಥ್ರೋ ಬಾಲ್ ಆಟಗಾರ್ತಿಯೀಗ ಮಡಿಕೇರಿಯ ಪರಿಹಾರ ಕೇಂದ್ರದಲ್ಲಿ ನಿರಾಶ್ರಿತೆ
FEATURE STORY

ಅಂತರ್‌ರಾಷ್ಟ್ರೀಯ ಥ್ರೋ ಬಾಲ್ ಆಟಗಾರ್ತಿಯೀಗ ಮಡಿಕೇರಿಯ ಪರಿಹಾರ ಕೇಂದ್ರದಲ್ಲಿ ನಿರಾಶ್ರಿತೆ

ಸದ್ಯ ಮನೆಯನ್ನೂ ಕಳೆದುಕೊಂಡ, ಮನೆ ಮಗನನ್ನೂ ಕಳೆದುಕೊಂಡ ಕುಟುಂಬ ನಿರ್ವಹಣೆಯ ಹೊಣೆ ತಶ್ಮಾ ಹೆಗಲೇರಿದೆ. ಆಕೆಯೀಗ ಮಡಿಕೇರಿಯ ಮೆಡಿಕಲ್ ಕಾಲೇಜಿನಲ್ಲಿ ಕಂಪ್ಯೂಟರ್ ಸಹಾಯಕಿಯಾಗಿ ಅಲ್ಪಾವಧಿ ಉದ್ಯೋಗಕ್ಕೆ ಸೇರಿಕೊಂಡಿದ್ದಾರೆ.

ಕೊಡಗು ಕಂಡ ಈ ಶತಮಾನದ ಭೀಕರ ದುರಂತದಲ್ಲಿ ನೂರಾರು ಜನ ಮನೆ ಹಾಗೂ ಜೀವನಾಧಾರಕ್ಕಿದ್ದ ತೋಟ-ಗದ್ದೆಗಳನ್ನು ಕಳೆದುಕೊಂಡಿದ್ದಾರೆ. ಸಾವಿರಾರು ಜನ ಆಸ್ತಿ-ಪಾಸ್ತಿಗಳ ನಷ್ಟ ಅನುಭವಿಸಿದ್ದಾರೆ. ಜೀವನಾಧಾರಕ್ಕಿದ್ದ ಏಕೈಕ ಮನೆಯನ್ನೂ ಕಳೆದುಕೊಂಡು ಬೀದಿಗೆ ಬಿದ್ದವರ ಬದುಕು ನಿಜಕ್ಕೂ ಶೋಚನೀಯವಾಗಿದೆ.

ಹೀಗೆ ಮನೆ ಕಳೆದುಕೊಂಡವರಲ್ಲಿ ಮಡಿಕೇರಿ ಸಮೀಪದ ಎರಡನೇ ಮೊಣ್ಣಂಗೇರಿ ಗ್ರಾಮದ ನಿವಾಸಿ ಮುತ್ತಪ್ಪ ಕುಟುಂಬವೂ ಒಂದು. ಮುತ್ತಪ್ಪರದು ಸಣ್ಣ, ಬಡ ಕುಟುಂಬ. ಪತ್ನಿ ಗಿರಿಜಾ ಮತ್ತು ಪುತ್ರಿ ತಶ್ಮಾ (23) ಅವರನ್ನೊಳಗೊಂಡ ಮೂರು ಜನರ ಸಂಸಾರವನ್ನು ಅದು ಹೇಗೋ ಮುತ್ತಪ್ಪ ನಡೆಸಿಕೊಂಡು ಹೋಗುತ್ತಿದ್ದರು. ಅವರು ಮಡಿಕೇರಿಯ ಹೋಂ ಸ್ಟೇ ಒಂದರಲ್ಲಿ ಕೆಲಸ ಮಾಡಿ ಒಂದಷ್ಟು ಸಂಪಾದನೆ ಮಾಡಿದರೆ, ಪತ್ನಿ ಮನೆಗೆಲಸ ಮಾಡಿ ಗಂಡನಿಗೆ ನೆರವಾಗುತ್ತಿದ್ದರು. ಆದರೆ ಆಗಸ್ಟ್‌ 17ರಂದು ಜರುಗಿದ ಭೀಕರ ಭೂಕುಸಿತ ಅವರ ಈ ಬಡ ಕುಟುಂಬವನ್ನೂ ಬೀದಿಗೆ ತಂದು ನಿಲ್ಲಿಸಿದೆ. ಪರಿಣಾಮ ಅವರೀಗ ನಿರಾಶ್ರಿತರು.

ಈ ಬಡ ಕುಟುಂಬದಲ್ಲಿ ಜನಿಸಿದ ತಶ್ಮಾ ಪ್ರಾಥಮಿಕ ಶಾಲಾ ಹಂತದಿಂದಲೂ ಕ್ರೀಡಾ ಸ್ಪರ್ಧೆಗಳಲ್ಲಿ ಮುಂಚೂಣಿಯಲ್ಲಿದ್ದವರು. ಭಾಗವಹಿಸಿದ ಸ್ಪರ್ಧೆಗಳಲ್ಲಿ ಪದಕ ಕಟ್ಟಿಟ್ಟ ಬುತ್ತಿ ಎಂಬಂತಾಗಿತ್ತು ಅವರ ಕ್ರೀಡಾ ಸಾಧನೆ. ಹೈಸ್ಕೂಲ್‌ನಲ್ಲೇ ಉತ್ತಮ ಥ್ರೋ ಬಾಲ್ ಕ್ರೀಡಾಪಟು ಆಗಿ ಗುರುತಿಸಿಕೊಂಡಿದ್ದ ತಶ್ಮಾ ಶ್ರೀಲಂಕಾ ಮತ್ತು ಮಲೇಷ್ಯಾದಲ್ಲಿ ನಡೆದ ಮಹಿಳಾ ಥ್ರೋ ಬಾಲ್ ಸ್ಪರ್ಧೆಯಲ್ಲೂ ಭಾಗಿಯಾಗಿದ್ದರು.

ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದ ಅವರು 6 ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ದೇಶ ಚಾಂಪಿಯನ್‌ ಆಗಿ ಹೊರಹೊಮ್ಮಲು ಪ್ರಮುಖ ಕಾರಣರಾಗಿದ್ದರು. ಅವರ ಈ ಸಾಧನೆ ಜಿಲ್ಲೆ, ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿತ್ತು. ಹೀಗೊಂದು ಸಾಧನೆ ಮಾಡಿಯೂ ತಶ್ಮಾ ಇಂದಿಗೂ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ.

ಈಕೆಯ ಏಕೈಕ ಸಹೋದರ ಎರಡು ತಿಂಗಳ ಹಿಂದಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದ. ಜೀವನಾಧಾರಕ್ಕಿದ್ದ ಆತನೂ ಸಾವನ್ನಪ್ಪಿದ್ದರಿಂದ ಪೂರ್ತಿ ಮನೆಯ ಮುಂದಿನ ಜವಾಬ್ದಾರಿ ತಶ್ಮಾಳದ್ದೇ ಆಗಿತ್ತು. ಇದರ ಮೇಲೆ ನಡೆದಿದ್ದು ಆಗಸ್ಟ್ 17 ರ ಘೋರ ದುರಂತ.

ಅದು ಆಗಸ್ಟ್‌ 17:

ಅಂದಿನ ದುರ್ಘಟನೆಯನ್ನು ಅಳು ಮುಖದಲ್ಲೇ ನೆನಪು ಮಾಡಿಕೊಂಡರು ತಶ್ಮಾ. “ನಮ್ಮ ಮನೆ ಪಕ್ಕದಲ್ಲಿದ್ದ ಶೀನ ಅವರ ಮನೆಯ ಮೇಲಿನಿಂದ ಗುಡ್ಡ ಕುಸಿಯುವ ಸಾಧ್ಯತೆ ಇದೆ. ಎಲ್ಲರೂ ಮನೆ ಖಾಲಿ ಮಾಡಿ ಹೋಗುತ್ತಿದ್ದಾರೆ. ಸುಮ್ಮನೆ ಸಮಯ ವ್ಯರ್ಥ ಮಾಡಬೇಡಿ, ನೀವೂ ನಮ್ಮ ಜತೆಗೆ ಹೊರಟು ಬನ್ನಿ ಎಂದು ಸುತ್ತ ಮುತ್ತಲಿನ ಮನೆಯವರೆಲ್ಲಾ ಹೇಳಿದರು. ಕೂಡಲೇ ಕೈಗೆ ಸಿಕ್ಕ ಸಾಮಾನುಗಳನ್ನು ಒಂದು ಬ್ಯಾಗಿನಲ್ಲಿ ತುಂಬಿಕೊಂಡು 4 ಕಿಲೋ ಮೀಟರ್ ನಡೆದು ಚೇರಂಬಾಣೆ ತಲುಪಿದೆವು. ಅಲ್ಲಿ ಸರಕಾರದವರು ನಿರಾಶ್ರಿತರ ಕೇಂದ್ರ ತೆರೆದಿದ್ದರು…” ಎಂದು ವಿವರಿಸುತ್ತಾ ಹೋದರು ತಶ್ಮಾ.

ಅವತ್ತು ರಾತ್ರಿ ಜಡಿ ಮಳೆ ಸುರಿಯಿತು. “ಮರು ದಿನ ಯಾರೋ ಬಂದು ‘ನೀವಿದ್ದ ಮನೆ ಜತೆಗೆ ಅಕ್ಕ ಪಕ್ಕದ 8 ಮನೆಗಳು ಕೆಸರಿನೊಳಗೆ ಮುಳುಗಿವೆ’ ಎಂದರು.” ಅಲ್ಲಿಗೆ ತಶ್ಮಾ ಕುಟುಂಬಕ್ಕಿದ್ದ ಏಕೈಕ ಸೂರು ಮಣ್ಣುಪಾಲಾಗಿತ್ತು. “ನಾವು ಇಲ್ಲಿಯವರೆಗೂ ಅಲ್ಲಿಗೆ ಹೋಗಿಲ್ಲ. ಇದ್ದ ಮನೆಯನ್ನೂ ಕಳೆದುಕೊಂಡು ಅಲ್ಲಿಗೆ ಹೋಗಿ ಮಾಡುವುದಾದರೂ ಏನು?” ಎಂದು ಪ್ರಶ್ನಿಸುತ್ತಾರೆ ಅವರು.

ಕೆಸರಿನಲ್ಲಿ ಮನೆ ಕೊಚ್ಚಿ ಹೋದ ನೋವು ಒಂದು ಕಡೆಯಾದರೆ ಮನೆಯ ಜತೆಗೇ ತಶ್ಮಾ ಇಷ್ಟು ವರ್ಷ ಕಷ್ಟಪಟ್ಟು ಮಾಡಿದ ಸಾಧನೆಯೂ ಮಣ್ಣುಪಾಲಾಗಿದೆ. ಮನೆಯಲ್ಲಿದ್ದ ಅಮೂಲ್ಯವಾದ ಸರ್ಟಿಫಿಕೇಟ್ ಗಳು, ಪದಕಗಳೆಲ್ಲವೂ ನೆಲ ಸಮಾಧಿ ಆಗಿರುವುದು ಈಕೆಯನ್ನು ಚಿಂತೆಗೀಡು ಮಾಡಿದೆ. ಇದೀಗ ಆಕೆ ಮನೆಯನ್ನೂ ಕಳೆದುಕೊಂಡ, ಮನೆ ಮಗನನ್ನೂ ಕಳೆದುಕೊಂಡ ಕುಟುಂಬ ನಿರ್ವಹಣೆ ಹೊಣೆ ಹೊತ್ತು ಮಡಿಕೇರಿಯ ಮೆಡಿಕಲ್ ಕಾಲೇಜಿನಲ್ಲಿ ಕಂಪ್ಯೂಟರ್ ಸಹಾಯಕಿಯಾಗಿ ಅಲ್ಪಾವಧಿ ಉದ್ಯೋಗಕ್ಕೆ ಸೇರಿಕೊಂಡಿದ್ದಾರೆ.

ಇದರ ನಡುವೆಯೇ ಜಿಲ್ಲಾಡಳಿತ ನಿರಾಶ್ರಿತರಿಗೆ ಸೂಕ್ತ ವಸತಿ ಕಲ್ಪಿಸಲು ನಿವೇಶನಕ್ಕಾಗಿ ಸ್ಥಳ ಗುರುತಿಸಿದೆ. ಮನೆ ನಿರ್ಮಾಣ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಒಂದು ಪಕ್ಷ ಈ ಬಡ ಕುಟುಂಬಕ್ಕೆ ಮನೆ ದೊರೆತರೂ, ಕಳೆದುಕೊಂಡಿರುವ ಪದಕ ಮತ್ತು ಸರ್ಟಿಫಿಕೇಟ್ ಗಳು ಸಿಗುವುದಿಲ್ಲ. ಈ ಚಿಂತೆ ತಶ್ಮಾಳನ್ನು ಕಾಡುತ್ತಿದೆ.

ನಮ್ಮ ಸರ್ಕಾರಗಳು ಮತ್ತು ಜನತೆ ಕ್ರಿಕೆಟ್ ಕ್ರೇಜ್‌ನಲ್ಲೇ ಮುಳುಗೇಳುತ್ತಿರುವಾಗ ಇತರ ಕ್ರೀಡೆಗಳಲ್ಲೂ ಅಧ್ಬುತ ಸಾಧನೆ ಮಾಡಿರುವ ಎಲೆ ಮರೆಯ ಕಾಯಿಗಳು ಕಣ್ಣಿಗೆ ಕಾಣುವುದು ಕಷ್ಟವೇ. ಇದರ ಮಧ್ಯೆಯೇ ತನಗೊಂದು ಉದ್ಯೋಗ ಕೊಡಿಸಲಿ ಎಂದು ಬಯಸುತ್ತಿದ್ದಾರೆ ತಶ್ಮಾ. ಈ ಹೊಳಪು ಕಂಗಳ ಬಾಲೆಯ ಈ ಆಶಯ ನನಸಾಗಲಿ ಎಂಬುದಷ್ಟೇ ನಮ್ಮ ಹಾರೈಕೆ.