samachara
www.samachara.com
ಮಡ್ಗಾಂವ್‌ ಬಾಂಬ್‌ ಸ್ಪೋಟ
FEATURE STORY

‘ಸ್ಟೋರಿ ಆಫ್‌ ಸನಾತನ ಸಂಸ್ಥಾ’- 2: ಮಡ್ಗಾಂವ್‌ & ಸರಣಿ ಬಾಂಬ್‌ ಸ್ಫೋಟಗಳ ಕರಾಳ ಇತಿಹಾಸ

‘ಸದ್ಯಕ್ಕೆ ಸಂಸ್ಥೆಯು (ಸನಾತನ ಸಂಸ್ಥೆ) ಭಯೋತ್ಪಾದನಾ ಸಂಸ್ಥೆಯಾಗಿ ರೂಪುಗೊಳ್ಳುತ್ತಿರುವಂತೆ ಕಾಣಿಸುತ್ತಿದೆ’ ಎನ್ನುತ್ತದೆ 2010ರಲ್ಲಿ ತಯಾರಿಸಿದ ಗೋವಾ ಪೊಲೀಸರ ವರದಿ. ವಿವರಗಳು ಸ್ಟೋರಿಯಲ್ಲಿವೆ. 

ಮೂಲ: ಧೀರೇಂದ್ರ ಕೆ. ಝಾ / ಕನ್ನಡಕ್ಕೆ: ಎನ್. ಸಚ್ಚಿದಾನಂದ.

Also read: ‘ಸ್ಟೋರಿ ಆಫ್‌ ಸನಾತನ ಸಂಸ್ಥಾ’-1: ಗದ್ದೆಯಲ್ಲಿ ಸಿಕ್ಕ ಕಾಂಡೋಮ್‌ಗಳು & ಜನರ ಪ್ರತಿರೋಧ

ಮಡ್ಗಾಂವ್‌ ಸ್ಫೋಟದವರೆಗೂ ಗ್ರಾಮಸ್ಥರು ಸನಾತನ ಸಂಸ್ಥೆಯನ್ನು ಧ್ವೇಷದಿಂದ ನೋಡುತ್ತಿದ್ದರಾದರೂ ಸಂಸ್ಥೆ ಇಷ್ಟೊಂದು ಪ್ರಬಲ ಮತ್ತು ಅಪಾಯಕಾರಿ ಸಂಸ್ಥೆ ಎಂದು ತಿಳಿದಿರಲಿಲ್ಲ. ಈ ಸಂಸ್ಥೆಯನ್ನು ತಡೆಯುವುದು ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಬಂದರು ಅವರು. ಅವರಿಗೆ ಸಂಸ್ಥೆ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಉದಾಹರಣೆಗೆ ಸಂಸ್ಥೆ ನಡೆಸಿದ ಮೊದಲ ಸ್ಫೋಟ ಇದು ಎಂದು ಅವರು ನಂಬಿದ್ದರು. ಈ ಹಿಂದೆಯೂ ಸಂಸ್ಥೆಯ ಸದಸ್ಯರು ಬೇರೆ ಸ್ಫೋಟ ಪ್ರಕರಣಗಳಲ್ಲಿಯೂ ಪಾಲ್ಗೊಂಡಿದ್ದರು ಎಂಬ ಮಾಹಿತಿ ಗ್ರಾಮಸ್ಥರಿಗಿರಲಿಲ್ಲ.

ಥಾಣೆ ಮತ್ತು ವಾಸಿಯಲ್ಲಿ ಬಾಂಬ್‌ ಇಟ್ಟ ಆರೋಪದ ಮೇಲೆ 2008ರ ಮಧ್ಯ ಭಾಗದಲ್ಲಿ ಮಹಾರಾಷ್ಟ್ರ ಪೊಲೀಸರು ಸಂಸ್ಥೆಯ ಹಲವು ಸದಸ್ಯರನ್ನು ಬಂಧಿಸಿದರು. ಜೂನ್‌ 4ರಂದು ಥಾಣೆಯ ‘ಗಡ್ಕರಿ ರಂಗಾಯಟನ್‌ ಅಡಿಟೋರಿಯಂ’ ಪಾರ್ಕಿಂಗ್‌ ಪ್ರದೇಶದಲ್ಲಿ ಬಾಂಬ್‌ ಸ್ಫೋಟಗೊಂಡು 7 ಜನ ಗಾಯಗೊಂಡರು. ಸಂಸ್ಥೆಯ ಸದಸ್ಯರು ಮರಾಠಿ ನಾಟಕ ‘ಅಮ್ಹಿ ಪಚ್ಪುಟೆ’ಯನ್ನು ಮೇಲ್ನೋಟಕ್ಕೆ ವಿರೋಧಿಸುತ್ತಿದ್ದರು. ಹಿಂದೂ ದೇವ ದೇವತೆಗಳನ್ನು ಈ ನಾಟಕ ಕೀಳಾಗಿ ಬಿಂಬಿಸುತ್ತದೆ ಎನ್ನುವುದು ಸನಾತನ ಸಂಸ್ಥೆಯವರ ಆರೋಪವಾಗಿತ್ತು. ಇದಕ್ಕೂ ಕೆಲವು ದಿನ ಮೊದಲು ಅಂದರೆ ಮೇ 31ರಂದು ವಾಶಿಯ ‘ವಿಷ್ಣುದಾಸ್‌ ಭವೆ ಅಡಿಟೋರಿಯಂ’ನಲ್ಲಿ ಕಡಿಮೆ ತೀವ್ರತೆಯ ಎರಡು ಬಾಂಬ್‌ಗಳು ಸ್ಪೋಟಗೊಂಡಿದ್ದವು. ಈ ಥಾಣೆ ಮತ್ತು ವಾಶಿ ಸ್ಫೋಟಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯ ಆಗಸ್ಟ್‌ 2011ರಲ್ಲಿ ವಿಕ್ರಮ್‌ ಭವೆ ಮತ್ತು ರಮೇಶ್‌ ಗಡ್ಕರಿ ಎಂಬ ಸನಾತನದ ವ್ಯಕ್ತಿಗಳಿಗೆ 10 ವರ್ಷಗಳ ಕಠಿಣ ಸೆರೆಮನೆ ವಾಸದ ಶಿಕ್ಷೆ ವಿಧಿಸಿತು.

ಥಾಣೆಯ ‘ಗಡ್ಕರಿ ರಂಗಾಯಟನ್‌ ಅಡಿಟೋರಿಯಂ’ ಪಾರ್ಕಿಂಗ್‌ ಪ್ರದೇಶದಲ್ಲಿ ನಡೆದ ಬಾಂಬ್‌ ಸ್ಫೋಟ. 
ಥಾಣೆಯ ‘ಗಡ್ಕರಿ ರಂಗಾಯಟನ್‌ ಅಡಿಟೋರಿಯಂ’ ಪಾರ್ಕಿಂಗ್‌ ಪ್ರದೇಶದಲ್ಲಿ ನಡೆದ ಬಾಂಬ್‌ ಸ್ಫೋಟ. 
/ಸಬರಂಗ್‌ ಇಂಡಿಯಾ

ಈ ಎಲ್ಲಾ ಪ್ರಕರಣಗಳಲ್ಲಿ ಸಂಸ್ಥೆಯ ಪ್ರತಿಕ್ರಿಯೆ ಏನಾಗಿರುತ್ತಿತ್ತು ಎಂದರೆ, ವ್ಯಕ್ತಿಗಳು ಬಂಧಿತರಾಗುತ್ತಿದ್ದಂತೆ ಅವರಿಗೂ ನಮಗೂ ಸಂಬಂಧವಿಲ್ಲ ಎಂದು ಬಿಡುತ್ತಿತ್ತು.

ಸರಳವಾಗಿ ಅವರ ಕಾರ್ಯಚಟುವಟಿಕೆಗಳಿಗೆ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಸಂಸ್ಥೆ ನಿರಾಕರಿಸುತ್ತಿತ್ತು. ಮಡ್ಗಾಂವ್‌ ಸ್ಫೋಟದ ನಂತರ ಕೆಲವೇ ತಿಂಗಳಲ್ಲಿ ಗೋವಾ ಪೊಲೀಸರು ಸಂಸ್ಥೆಯ ನೈಜ ಅಂತರಂಗವನ್ನು ಬಿಚ್ಚಿಟ್ಟರೂ, ಸಂಸ್ಥಾ ಮಾತ್ರ ಇದೇ ತಂತ್ರವನ್ನು ಅನುಸರಿಸುತ್ತಿತ್ತು. ‘ಸದ್ಯಕ್ಕೆ ಸಂಸ್ಥೆಯು (ಸನಾತನ ಸಂಸ್ಥೆ) ಭಯೋತ್ಪಾದನಾ ಸಂಸ್ಥೆಯಾಗಿ ರೂಪುಗೊಳ್ಳುತ್ತಿರುವಂತೆ ಕಾಣಿಸುತ್ತಿದೆ’ ಎನ್ನುತ್ತದೆ 2010ರಲ್ಲೇ ತಯಾರಿಸಿದ ಗೋವಾ ಪೊಲೀಸರ ವರದಿ. ಮತ್ತು ‘ಶಾಂತಿಯುತ ರಾಜ್ಯದಲ್ಲಿ ಇದನ್ನು ಹೀಗೇ ಬೆಳೆಯಲು ಬಿಟ್ಟಲ್ಲಿ ರಾಜ್ಯ ಮತ್ತು ದೇಶದ ಜೀವ, ಆಸ್ತಿ ಮತ್ತು ಧಾರ್ಮಿಕ ಸಾಮರಸ್ಯಕ್ಕೆ ಅಪಾಯ ಒದಗಿ ಬರಲಿದೆ’ ಎಂದು ಇದು ಎಚ್ಚರಿಸಿತ್ತು.

2011ರಲ್ಲಿ ಸಂಸ್ಥೆಯ ಮೇಲೆ ನಿಷೇಧ ಕೋರಿ ಕೇಂದ್ರ ಗೃಹ ಇಲಾಖೆಗೆ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ ಸಾವಿರ ಪುಟಗಳ ಪ್ರಸ್ತಾವನೆಗೂ ಈ ಮಾಹಿತಿ ಆಧಾರವಾಗಿತ್ತು . ಆದರೆ ಕೇಂದ್ರ ಮತ್ತು ರಾಜ್ಯ ಸರಕಾರದ ನಡುವೆ ಭಿನ್ನಾಭಿಪ್ರಾಯ ತಲೆದೋರಿದ್ದರಿಂದ ಈ ಇಡೀ ವರದಿಯೇ ನಿರರ್ಥಕವಾಯ್ತು. ಹೀಗಾಗಿ ಸಂಸ್ಥೆಯ ವಿರುದ್ಧ ಯಾವುದೇ ಕ್ರಮಗಳು ಜಾರಿಯಾಗಲಿಲ್ಲ.

ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಪೃಥ್ವಿರಾಜ್‌ ಚವಾಣ್‌ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲವೋ ಅಥವಾ ಕೇಂದ್ರ ಗೃಹ ಸಚಿವರಾಗಿದ್ದ ಸುಶೀಲ್‌ ಕುಮಾರ್‌ ಶಿಂಧೆ ಸಂಸ್ಥೆಯನ್ನು ನಿಷೇಧಿಸುವ ಸಂಬಂಧ ತಣ್ಣಗಾದರೋ ಸ್ಪಷ್ಟ ಮಾಹಿತಿಗಳಿಲ್ಲ. 4 ವರ್ಷಗಳ ತರುವಾಯ 2015ರಲ್ಲಿ ಕೇಂದ್ರ ಮತ್ತು ರಾಜ್ಯ ಎರಡೂ ಕಡೆಗಳಲ್ಲಿ ಕಾಂಗ್ರೆಸ್ ಸರ್ಕಾರದ ಜಾಗದಲ್ಲಿ ಬಿಜೆಪಿ ಬಂದು ಕುಳಿತುಕೊಂಡಿತು. ಈ ಸಂದರ್ಭದಲ್ಲಿ ಮತ್ತೆ ನಿಷೇಧದ ಮಾತುಗಳು ಕೇಳಿ ಬಂದವು. ನಿಷೇಧ ವಿಚಾರದಲ್ಲಿ ಚವಾಣ್‌ ಗಂಭೀರತೆ ತೋರಲಿಲ್ಲ ಎಂದು ದೂರಿದರು ಶಿಂಧೆ. ಇದಕ್ಕೆ ಮುಂದೆ ಪ್ರತಿಕ್ರಿಯೆ ನೀಡಿದ ಪೃಥ್ವಿರಾಜ್‌ ಚವಾಣ್‌ 'ನನ್ನ ಪಕ್ಷದ ಹಿರಿಯ ಸಹೋದ್ಯೋಗಿ ನೀಡಿದ ಹೇಳಿಕೆಯಿಂದ ನನಗೆ ನೋವಾಗಿದೆ. ನಾನು ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಇದು (ಶಿಂಧೆ ಹೇಳಿಕೆ) ನಗು ತರಿಸುವಂತಿದೆ’ ಎಂದಿದ್ದರು.

ದಾಖಲೆಗಳನ್ನು ಕೆದಕಿದರೆ 1991ರಲ್ಲಿ ಮುಂಬೈನಲ್ಲಿ ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ ಎಂಬ ಹೆಸರಿನಲ್ಲಿ ಸನಾತನ ಸಂಸ್ಥೆ ಚಾರಿಟೇಬಲ್‌ ಟ್ರಸ್ಟ್‌ ಅಡಿಯಲ್ಲಿ ನೋಂದಣಿಯಾಗಿದೆ. ಪ್ರವಚನಗಳು, ಉಪನ್ಯಾಸಗಳು, ಶಿಬಿರಗಳನ್ನು ಏರ್ಪಡಿಸುವ ಮೂಲಕ ಆಧ್ಯಾತ್ಮದ ಹಿಂದಿನ ವೈಜ್ಞಾನಿಕ ಸತ್ಯವನ್ನು ಜನರಿಗೆ ತಿಳಿಯಪಡಿಸುವುದೇ ತನ್ನ ಉದ್ದೇಶ ಎಂದು ಸಂಸ್ಥೆ ತನ್ನ ಡೀಡ್‌ನಲ್ಲಿ ಹೇಳಿಕೊಂಡಿದೆ.

ಈ ಮಾಹಿತಿಯನ್ನು ಅರ್ಥ ಮಾಡಿಕೊಳ್ಳುವಂತೆ ಜನರಿಗೆ ಉತ್ತೇಜನ ನೀಡುವುದು ಮತ್ತು ‘ಗುರು’ವನ್ನು ಭೇಟಿ ಮಾಡುವವರೆಗೆ ಅವರಿಗೆ ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡುತ್ತೇವೆ ಎಂದು ಹೇಳಿಕೊಂಡಿತ್ತು ಸಂಸ್ಥೆ. ಈ ಡೀಡ್‌ಗೆ ಸಂಸ್ಥೆಯ ‘ಗುರು’ ಡಾ. ಜಯಂತ್‌ ಬಾಲಾಜಿ ಅಠಾವಳೆ ನಾಲ್ವರೊಂದಿಗೆ ಸಹಿ ಹಾಕಿದ್ದಾರೆ. ಉಳಿದ ಮೂವರು ಟ್ರಸ್ಟಿಗಳೆಂದರೆ ಡಾ. ಕುಂದ ಜಯಂತ್‌ ಅಠಾವಳೆ ಮತ್ತು ಅವರ ಶಿಷ್ಯರಾದ ವಿಜಯ್‌ ನೀಲಕಂಠ ಭವೆ ಮತ್ತು ವಿನಯ್‌ ನೀಲಕಂಠ ಭವೆ.

ಗುರು ಡಾ. ಜಯಂತ್‌ ಬಾಲಾಜಿ ಅಠಾವಳೆ. 
ಗುರು ಡಾ. ಜಯಂತ್‌ ಬಾಲಾಜಿ ಅಠಾವಳೆ. 
/ಸನಾತನ ಡಾಟ್‌ ಆರ್ಗ್

ಸಂಸ್ಥೆಯ ನವಿರಾದ ಕಾರ್ಯವೈಖರಿ ಮುಂದಿನ ದಿನಗಳಲ್ಲಿ ಬಯಲಾಗುತ್ತಾ ಬಂತು. ಸಮಯ ಕಳೆದಂತೆ ಸಂಸ್ಥೆಯ ಹಲವು ಉಪ ಸಂಘಟನೆಗಳು ಹುಟ್ಟುಕೊಂಡವು. ಇಲ್ಲಿಯವರೆಗೂ ಈ ಸಂಸ್ಥೆಗಳು ಅಠಾವಳೆ ಜತೆ ಸಂಬಂಧ ಇರುವುದನ್ನು ನಿರಾಕರಿಸುತ್ತಾ ಬಂದಿವೆ ಮತ್ತು ತಮ್ಮನ್ನು ತಾವು ಸ್ವತಂತ್ರ ಸಂಸ್ಥೆಗಳೆಂದು ಇವು ಕರೆದುಕೊಂಡಿವೆ.

ಇವುಗಳಲ್ಲಿ ಗೋವಾದ ಪೋಂಡಾದಲ್ಲಿರುವ ಸನಾತನ ಸಂಸ್ಥೆಯ ಆಶ್ರಮ ತೀರಾ ತಡವಾಗಿ ನೋಂದಣಿಗೊಂಡ ಸಂಸ್ಥೆಗಳಲ್ಲಿ ಒಂದು. ಸಂಸ್ಥೆಯ ಇತರ ಆಶ್ರಮಗಳಾದ ಮಹಾರಾಷ್ಟ್ರದ ಪನ್ವೇಲ್‌ ಮತ್ತು ಮೀರಜ್‌ನಲ್ಲಿರುವ ಆಶ್ರಮಗಳು ಪ್ರತ್ಯೇಕ ಟ್ರಸ್ಟ್‌ಗಳಾಗಿ ನೋಂದಣಿಗೊಂಡಿವೆ. ಇದು ಹಿಂದೂ ಜನಜಾಗೃತಿ ಸಮಿತಿ, ಧರ್ಮಶಕ್ತಿ ಸೇನೆ ಮತ್ತು ಸನಾತನ ಪ್ರಭಾತ್‌ ಪತ್ರಿಕೆಗಳಿಗೂ ಅನ್ವಯಿಸುತ್ತದೆ.

ಸಂಸ್ಥೆ ಮತ್ತು ಅಠಾವಳೆಗೆ ಸೇರಿದ ಸ್ವತಂತ್ರ ಸಂಸ್ಥೆಗಳು ತಾವೆಲ್ಲಾ ಆಧ್ಯಾತ್ಮಿಕ ಕ್ಷೇತ್ರಕ್ಕೆ ಸೀಮೀತ ಅನನ್ಯ ಸಂಘಟನೆಗಳು ಎಂದು ಬಿಂಬಿಸಿಕೊಳ್ಳಲು ಬೇಕಾದ ಎಲ್ಲವನ್ನೂ ಮಾಡುತ್ತಲೇ ಬಂದಿವೆ. ಅಠಾವಳೆಯ ಶಿಷ್ಯರು (ಸಾಧಕರು ಮತ್ತು ಸಾಧಿಕರು) ಪ್ರತಿ ದಿನ 6 ಗಂಟೆಗೆ ತಮ್ಮ ದಿನವನ್ನು ಯೋಗ ಮತ್ತು ಪ್ರಾರ್ಥನೆಯೊಂದಿಗೆ ಆರಂಭಿಸುತ್ತಾರೆ. ಸುಮಾರು 2 ಗಂಟೆಗಳವರೆಗೆ ಇದು ನಡೆಯುತ್ತದೆ. ಅದಾದ ನಂತರ ಸಸ್ಯಾಹಾರಿ ಉಪಹಾರ ಮತ್ತು ಸನಾತನ ಪ್ರಭಾತ್‌ನ ಓದು ನಡೆಯುತ್ತದೆ.

ಇದೆಲ್ಲಾ ಮುಗಿದ ಬಳಿಕ 2013ರಿಂದ ಹಾಸಿಗೆ ಹಿಡಿದಿರುವ ಅಠಾವಳೆಯನ್ನು ಸಮೀಪವರ್ತಿಗಳ ಸಣ್ಣ ತಂಡ ಭೇಟಿಯಾಗುತ್ತದೆ. ಈ ತಂಡ ಹೇಗಿದೆ ಎಂದರೆ, ತಮ್ಮಲ್ಲೇ ಸಂವಹನ ನಡೆಸಿಕೊಂಡು ಮುಂದಡಿ ಇಡಲು ಇವರು ಶಕ್ತರಾಗಿದ್ದಾರೆ. ನಂತರ ಅವರೆಲ್ಲಾ ಆಶ್ರಮದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಾರೆ. ಮರಾಠಿ, ಇಂಗ್ಲಿಷ್‌, ಹಿಂದಿ, ಕನ್ನಡ ಮತ್ತು ಇತರ ಕೆಲವು ಭಾಷೆಗಳಲ್ಲಿ ಪವಿತ್ರ ಅಕ್ಷರಗಳನ್ನು ಕೆತ್ತುವ ಕೆಲಸವನ್ನೂ ಇವರು ಮಾಡುತ್ತಾರೆ. ಮೂರ್ತಿಗಳ ವಿನ್ಯಾಸ ಮಾಡುವುದು, ದೇವತೆಗಳ ಚಿತ್ರಗಳನ್ನು ಬಿಡಿಸುವುದು, 8 ಭಾಷೆಗಳ ಪಂಚಾಂಗವನ್ನು ತಯಾರಿಸುವುದು, ಧಾರ್ಮಿಕ ಶಿಕ್ಷಣವನ್ನು ಹೇಗೆ ನೀಡಬೇಕು ಮತ್ತು ಹಬ್ಬಗಳನ್ನು ಹೇಗೆ ಆಚರಣೆ ಮಾಡಬೇಕು ಎಂಬ ವಿಡಿಯೋಗಳನ್ನು ನಿರ್ಮಿಸುವುದು, ‘ಸನಾತನ ಪ್ರಭಾತ್‌’ಗಾಗಿ ಬರೆಯುವುದು, ಅವುಗಳನ್ನು ಸಂಪಾದನೆ ಮಾಡುವುದು, ಸಂಸ್ಥೆಗೆ ಸಂಬಂಧಿಸಿದ ಬೇರೆ ಬೇರೆ ವೆಬ್‌ಸೈಟ್‌ಗಳನ್ನು ನಿರ್ವಹಣೆ, ಧರ್ಮ ಬೋಧನೆಗೆ ಹೊರಟ ಧರ್ಮ ಗುರುಗಳಿಗೆ ಮಾರ್ಗದರ್ಶನ ನೀಡುವ ಚಟುವಟಿಕೆಗಳು ದಿನಪೂರ್ತಿ ನಡೆಯುತ್ತವೆ.

ಅಧೀನ ಸಂಘಟನೆಗಳನ್ನು ಸ್ವತಂತ್ರ ಎಂದು ಬಿಂಬಿಸುವುದರ ಹಿಂದೆ ಜಾಣ ತಂತ್ರ ಇದ್ದಂತೆ ಕಾಣಿಸುತ್ತದೆ. ಒಂದೊಮ್ಮೆ ಈ ಸಂಸ್ಥೆಗಳು ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಆರೋಪಕ್ಕೆ ಗುರಿಯಾದರೆ ಅಥವಾ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದರೆ ಅಠಾವಳೆ ತನ್ನನ್ನು ರಕ್ಷಿಸಿಕೊಳ್ಳಲು ಈ ಮಾದರಿ ಅನುಸರಿಸಿರುವಂತಿದೆ. ಒಂದೇ ಪೋಷಕ ಸಂಸ್ಥೆಯ ಅಡಿಯಲ್ಲಿ ಶಾಖೆಗಳನ್ನು ತೆರೆಯುವ ಬದಲು ಅಠಾವಳೆ ಕಾನೂನಿನ ಲಾಭವನ್ನು ದಕ್ಕಿಸಿಕೊಳ್ಳಲು ಹೀಗೆ ಸಂಘಟನೆಗಳ ಜಾಲವನ್ನು ಕಟ್ಟುವ ನಿರ್ಧಾರಕ್ಕೆ ಬಂದಿರುವಂತಿದೆ.

ಎಲ್ಲಾ ಸಂದರ್ಭಗಳಲ್ಲೂ ಅಠಾವಳೆಯ ಸಿದ್ಧಾಂತ ಭಾರತೀಯ ಸಂವಿಧಾನಕ್ಕೆ ಬದ್ಧವಾಗಿಯೇ ಕೆಲಸ ಮಾಡುವಂತೆ ಭಾಸವಾಗುತ್ತದೆ. ಆತನ ಧಾರ್ಮಿಕ ಉಪನ್ಯಾಸ ಅಪಾಯಕಾರಿಯಲ್ಲದೆ ಇರಬಹುದು, ಆದರೆ ರಾಜಕೀಯ ಪಾಠಗಳು ಅಪಾಯಕಾರಿಯಾಗಿವೆ. ಸನಾತನ್‌ ಪ್ರಭಾತ್‌ನ ಹಲವು ಸಂಚಿಕೆಗಳು 2023ಕ್ಕೆ ಹಿಂದೂ ರಾಷ್ಟ್ರ ನಿರ್ಮಾಣ ಮಾಡುವ ಉದ್ಧೇಶವನ್ನು ಸಂಸ್ಥೆ ಹೊಂದಿದೆ ಎಂದು ಹೇಳಿಕೊಂಡಿವೆ. ಬರಹಗಳಲ್ಲಿ ಮತ್ತು ಅವುಗಳ ತಲೆ ಬರಹದಲ್ಲಿ ಮುಸ್ಲಿಂ, ಕ್ರಿಶ್ಚಿಯನ್‌, ಪ್ರಗತಿಪರರು ಮತ್ತು ಕಮ್ಯೂನಿಷ್ಟ್‌ರ ವಿರುದ್ಧ ನಿರಂತರವಾಗಿ ದಾಳಿ ನಡೆಸುತ್ತಾ ಬರಲಾಗಿದೆ.

ಮತ್ತು, ಇವರನ್ನು ದುಷ್ಕರ್ಮಿಗಳು ಎಂದೂ ಹಲವು ಸಂದರ್ಭದಲ್ಲಿ ಕರೆಯಲಾಗಿದೆ. 2007ರಲ್ಲಿ ‘ಸನಾತನ್‌ ಪ್ರಭಾತ್‌’ ಅಠಾವಳೆಯ ಹೇಳಿಕೆಯೊಂದನ್ನು ಪ್ರಕಟಿಸುತ್ತದೆ. ಅದರಲ್ಲಿ ಅಠಾವಳೆ, ‘ನೀವು ಸೊಳ್ಳೆಯೊಂದನ್ನು ಕೊಂದಾಗ ಜಯಶಾಲಿಯಾದ ಖುಷಿಯನ್ನು ಅನುಭವಿಸುವಿರಿ. ಹಾಗಿದ್ದರೆ ದುಷ್ಕರ್ಮಿಯೊಬ್ಬನನ್ನು ಕೊಂದಾಗ ಇದರ ಅನುಭವ ಹೇಗಿರಬಹುದು?’ ಎಂದು ಪ್ರಶ್ನಿಸುತ್ತಾರೆ. ಮುಂದುವರಿದು 29 ಫೆಬ್ರವರಿ 2008ರಲ್ಲಿ ‘ಸನಾತನ್ ಪ್ರಭಾತ್‌’ ಪತ್ರಿಕೆ ಅಠಾವಳೆಯ ಅನುಯಾಯಿಗಳಿಗೆ ಬಸ್‌, ಖಾಸಗಿ ವಾಹನಗಳಿಗೆ ಯಾವುದೇ ಹಾನಿ ಮಾಡಬೇಡಿ. ಬದಲು ಮಾವೋವಾದಿಗಳ ರೀತಿ ಪೊಲೀಸರ ವಿರುದ್ಧ ಕೆಲಸ ಮಾಡಿ ಎಂದು ಕರೆ ನೀಡಿತ್ತು. ಈ ಕಾರಣಕ್ಕೆ ತರಬೇತಿ ನೀಡಲು ಪತ್ರಿಕೆ ಮೊಬೈಲ್‌ ಸಂಪರ್ಕ ಸಂಖ್ಯೆಯನ್ನೂ ಪ್ರಕಟಿಸಿತ್ತು.

(ಇದು ಲೇಖಕ ಧೀರೇಂದ್ರ ಕೆ. ಝಾ ಬರೆದ ‘ಶ್ಯಾಡೋ ಆರ್ಮೀಸ್’ ಪುಸ್ತಕದ ಎರಡನೇ ಅಧ್ಯಾಯ. ಇನ್ನೂ ಮೂರು ಕಂತುಗಳಲ್ಲಿ ‘ಸನಾತನ ಸಂಸ್ಥಾ’ ಬಗೆಗಿನ ಅಧ್ಯಾಯ ಪ್ರಕಟವಾಗಲಿದೆ. )

Also read: ಸ್ಟೋರಿ ಆಫ್‌ ಸನಾತನ ಸಂಸ್ಥಾ- 3: ವಿಷ್ಣುವಿನ ಅವತಾರ ಪುರುಷ ಅಠಾವಳೆ & ಪ್ರಗತಿಪರರ ಬಗ್ಗೆ ಹುಟ್ಟಿಕೊಂಡ ಹಗೆತನ

Also read: ‘ಸ್ಟೋರಿ ಆಫ್‌ ಸನಾತನ ಸಂಸ್ಥಾ’- 4: ದಾಭೋಲ್ಕರ್, ಪನ್ಸಾರೆ, ಕಲ್ಬುರ್ಗಿ ಹತ್ಯೆಗಳು; ಆರೋಪಿ ಸ್ಥಾನದಲ್ಲಿ ಅಠಾವಳೆ ‘ಸಾಧಕರು’!