samachara
www.samachara.com
‘ಸ್ಟೋರಿ ಆಫ್‌ ಸನಾತನ ಸಂಸ್ಥಾ’-1:  ಗದ್ದೆಯಲ್ಲಿ ಸಿಕ್ಕ ಕಾಂಡೋಮ್‌ಗಳು & ಜನರ ಪ್ರತಿರೋಧ
FEATURE STORY

‘ಸ್ಟೋರಿ ಆಫ್‌ ಸನಾತನ ಸಂಸ್ಥಾ’-1: ಗದ್ದೆಯಲ್ಲಿ ಸಿಕ್ಕ ಕಾಂಡೋಮ್‌ಗಳು & ಜನರ ಪ್ರತಿರೋಧ

ಈ ಕಾಂಡೋಮ್‌ಗಳ ಮೂಲ ಯಾವುದು ಎಂಬುದು ನಿಗೂಢವಾಗಿತ್ತಾದರೂ ಜನರು ಇದರ ಆರೋಪವನ್ನು ‘ಸನಾತನ ಸಂಸ್ಥೆ’ಯ ಆಶ್ರಮದ ಮೇಲೆ ಹೊರಿಸಿದರು. ಅದಕ್ಕೆ ಕಾರಣವೂ ಇತ್ತು.

ಮೂಲ: ಧೀರೇಂದ್ರ ಕೆ. ಝಾ / ಕನ್ನಡಕ್ಕೆ: ಎನ್. ಸಚ್ಚಿದಾನಂದ.

ಅದು ವಿಶಾಲವಾದ ಮುಖ ಮಂಟಪವನ್ನು ಹೊಂದಿರುವ ಚೈನಾ ವೈಟ್‌ ಬಣ್ಣದ ಭವ್ಯ ಮಹಲು. ಹಚ್ಚ ಹಸಿರಿನ ಗೋವಾದ ಗ್ರಾಮವೊಂದರಲ್ಲಿದ್ದ ಈ ಮಹಲಿನ ಪ್ರವೇಶ ದ್ವಾರದ ಸುತ್ತಾ ಆಕಾಶ ನೀಲಿನ ಬಣ್ಣದ ಸಮವಸ್ತ್ರ ತೊಟ್ಟಿದ್ದ ಭದ್ರತಾ ಸಿಬ್ಬಂದಿಗಳು ಪಹರೆ ಕಾಯುತ್ತಿದ್ದರು. ಇದು ಇಲ್ಲಿನ ರಾಮನಾಥಿಯಲ್ಲಿರುವ ‘ಸನಾತನ ಸಂಸ್ಥೆ’ಯ ಆಶ್ರಮ. ಇಲ್ಲಿ ಇದರ ಸ್ವಘೋಷಿತ ದೇವ ಮಾನವ ಡಾ. ಜಯಂತ್‌ ಬಾಲಾಜಿ ಅಠಾವಳೆ ಉಳಿದುಕೊಳ್ಳುತ್ತಾರೆ. ಗ್ರಾಮದ ನಡುವೆ ಕಾಣಲು ಮೂರು ಮಹಡಿಯ ಈ ಕಟ್ಟಡ ಕಟ್ಟಿರುವಂತೆ ಭಾಸವಾಗುತ್ತದೆ. ಆದರೆ ಪ್ರತಿ ಬಾರಿ ನೀವು ಈ ಆಶ್ರಮದ ಹೆಸರೆತ್ತಿದಾಗಲೂ ಇಲ್ಲಿನವರ ಕಣ್ಣಲ್ಲಿ ಅಸಮಧಾನ ಮತ್ತು ದೌರ್ಜನ್ಯದ ಕಿಡಿಗಳು ಸ್ಫೋಟಗೊಳ್ಳುತ್ತವೆ.

ಪ್ರತಿ ದಿನ ಬೆಳಿಗ್ಗೆ 100ಕ್ಕೂ ಹೆಚ್ಚು ಜನ ಯುವಕ ಮತ್ತು ಯುವತಿಯರು ಸಂಸ್ಥೆಯ ಕೇಸರಿ ಬಟ್ಟೆ ತೊಟ್ಟು ಹಣೆಗೆ ತಿಲಕವಿಟ್ಟು ಆಶ್ರಮಕ್ಕೆ ಆಗಮಿಸುತ್ತಾರೆ. ಅಠಾವಳೆಯ ನೂರಾರು ಶಿಷ್ಯರೂ ಆಶ್ರಮದಲ್ಲೇ ಇಡೀ ದಿನ ಉಳಿದುಕೊಂಡು ಸಂಜೆ ನಂತರ ಗ್ರಾಮದಲ್ಲಿರುವ ತಮ್ಮ ಮನೆಗಳಿಗೆ ವಾಪಾಸಾಗುವ ಪರಿಪಾಠಗಳನ್ನು ಇಟ್ಟುಕೊಂಡಿದ್ದಾರೆ. ಇವರ ಸಂಖ್ಯೆಯೂ ಸುಮಾರು ನೂರರಷ್ಟಾಗುತ್ತದೆ.

ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ಆಶ್ರಮ
ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ಆಶ್ರಮ

ಮಹಲಿನ ಎದುರಿನಲ್ಲಿರುವ ರಸ್ತೆಯಾಚೆಗೆ ಇಳಿಜಾರು ಭೂಮಿ ಇದೆ. ಇದು ಗ್ರಾಮದ ಉತ್ತರ ಗಡಿ ಪ್ರದೇಶ. ಕಳೆದ ಕೆಲವು ವರ್ಷಗಳವರೆಗೂ ಪ್ರತಿ ಕೃಷಿ ಹಂಗಾಮಿನಲ್ಲಿಯೂ ಈ ಭೂಮಿಯಲ್ಲಿ ಬೆಳೆ ಬೆಳೆಯಲಾಗುತ್ತಿತ್ತು.

ಆದರೆ 2008ರ ಮುಂಗಾರಿನ ಆರಂಭದ ಒಂದು ದಿನ ಕೃಷಿ ಭೂಮಿಯಲ್ಲಿ ನೆರೆ ನೀರು ನಿಂತು ಗಬ್ಬು ವಾಸನೆ ಬರಲಾರಂಭಿಸಿತು. ಈ ವಾಸನೆ ಎಷ್ಟು ಅಸಹ್ಯವಾಗುತ್ತೆಂದರೆ ಸಹಿಸಲಾಗದೆ ಗ್ರಾಮಸ್ಥರೆಲ್ಲಾ ಮನೆ ಬಿಟ್ಟು ಬಂದರು. ನಿಂತ ನೀರಿನಲ್ಲಿ ನೂರಾರು, ಸಾವಿರಾರು ಬಳಸಿ ಬಿಸಾಡಿದ ಕಾಂಡೋಮ್‌ಗಳು ತೇಲುತ್ತಿದ್ದವು.

‘ಅವು ಆ ಪ್ರದೇಶವನ್ನು ನರಕವಾಗಿಸಿದ್ದವು’ ಎನ್ನುತ್ತಾರೆ ಗ್ರಾಮದ ಕೇಂದ್ರದಲ್ಲಿರುವ ರಾಮನಾಥ ದೇವಸ್ಥಾನದ ಮುಖ್ಯ ಅರ್ಚಕರಾದ ಬಸಂತ್‌ ಭಟ್‌. ಆ ವರ್ಷ ಜನರು ಗದ್ದೆಯನ್ನು ಸ್ವಚ್ಛಗೊಳಿಸಿ ಮತ್ತೆ ಉಳುಮೆ ಮಾಡಲು ಯಾವುದೇ ಟಿಲ್ಲರ್‌ನ್ನು ಕರೆಸಲಿಲ್ಲ. ಕಾಂಡೋಮ್‌ಗಳನ್ನು ಅಸಹ್ಯವೆಂದು ಪರಿಗಣಿಸಿದ ಜನ ಈ ಕೃಷಿ ಪ್ರಕ್ರಿಯೆಯಿಂದಲೇ ದೂರ ಉಳಿದು ಬಿಟ್ಟರು. ಈ ಕಾಂಡೋಮ್‌ಗಳ ಮೂಲ ಯಾವುದು ಎಂಬುದು ನಿಗೂಢವಾಗಿತ್ತಾದರೂ ಜನರು ಇದರ ಆರೋಪವನ್ನು ಆಶ್ರಮದ ಮೇಲೆ ಹೊರಿಸಿದರು. ಅದಕ್ಕೆ ಕಾರಣವೂ ಇತ್ತು.

2002ರಲ್ಲಿ ಗ್ರಾಮಕ್ಕೆ ಬಂದ ನಂತರ ಅಠಾವಳೆ ಮತ್ತವರ ಶಿಷ್ಯರ ಬಳಗ ಒಂದಿಲ್ಲೊಂದು ವಿವಾದಗಳನ್ನೇ ಸೃಷ್ಟಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಈ ತಿರ್ಮಾನಕ್ಕೆ ಬಂದಿರುವ ಸಾಧ್ಯತೆ ಇದೆ.

ರಾಮನಾಥಿಗೆ ಬರುವ ಎರಡು ವರ್ಷದ ಮೊದಲೇ ಸಂಸ್ಥೆ ಪಾರ್ವತಿವಾಡ ಗ್ರಾಮದಲ್ಲಿ ಆಶ್ರಮ ಕಟ್ಟಲು ಮುಂದಾಗಿತ್ತು. ಆದರೆ ಅಲ್ಲಿನ ಗ್ರಾಮಸ್ಥರು ತಮ್ಮ ಪ್ರತಿರೋಧವನ್ನು ಯಶಸ್ವೀಯಾಗಿ ದಾಖಲಿಸಿದ್ದರಿಂದ ಅಲ್ಲಿ ಆಶ್ರಮ ಸ್ಥಾಪಿಸುವ ಆಸೆ ಕೈಗೂಡಿರಲಿಲ್ಲ. ‘ಪಾರ್ವತಿವಾಡದಲ್ಲಿ ಆಶ್ರಮ ಕಟ್ಟುವ ಯತ್ನ ವಿಫಲವಾದ ನಂತರ ಅವರು ರಾಮನಾಥಿಗೆ ತಮ್ಮ ನೆಲೆ ಬದಲಾಯಿಸಿದರು. ಅಲ್ಲಿ ಅವರು ಆಶ್ರಮ ಸ್ಥಾಪಿಸುವಲ್ಲಿ ಯಾಶಸ್ವಿಯಾದರು’ ಎನ್ನುತ್ತಾರೆ ಪಾರ್ವತಿವಾಡದ ಹಿರಿಯ ನಾಗರೀಕರಾದ ಶೇಖರ್ ನಾಯ್ಕ್. ಅವರು ಈ ಹಿಂದೆ ಎರಡೂ ಗ್ರಾಮಗಳನ್ನು ಒಳಗೊಂಡ ಬಂಡೋರಾ ಗ್ರಾಮ ಪಂಚಾಯತ್‌ನ ಸರ್ಪಂಚ್‌ (2002-2004) ಆಗಿದ್ದವರು.

ರಾಮನಾಥಿಯಲ್ಲಿರುವ ಬಹುತೇಕ ಜನ, ಸನಾತನ ಸಂಸ್ಥಾ ಲೈಂಗಿಕ ಕೃತ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸುತ್ತಲೇ ಬಂದಿದ್ದಾರೆ. ಆದರೆ ಅದಕ್ಕೆ ಬೇಕಾದ ಪುರಾವೆಗಳು ಯಾವುದೂ ಇಲ್ಲ. ಸಂಸ್ಥೆಯೂ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸುತ್ತಲೇ ಬಂದಿದೆ. ಹೀಗಿದ್ದೂ ಗದ್ದೆಗಳಲ್ಲಿ ಸಿಕ್ಕ ಕಾಂಡೋಮ್‌ಗಳು ಈ ಜನರ ಅನುಮಾನವನ್ನು ಗಟ್ಟಿಗೊಳಿಸಿದವು.

ಹೀಗೆ ಸಂಸ್ಥೆ ಬಗ್ಗೆ ಇದ್ದ ಕೆಟ್ಟ ಅಭಿಪ್ರಾಯಗಳು 16 ಅಕ್ಟೋಬರ್‌ 2009ರಲ್ಲಿ ಮತ್ತಷ್ಟು ಸ್ಪಷ್ಟ ರೂಪಗಳನ್ನು ಪಡೆದುಕೊಂಡಿತು. ಅವತ್ತು ಮಡ್ಗಾವ್‌ನಲ್ಲಿ ಬಾಂಬ್‌ ಸ್ಪೋಟಗೊಂಡ ಕೆಲವೇ ಗಂಟೆಗಳ ತರುವಾಯ ಗೋವಾ ಪೊಲೀಸರು ರಾಮನಾಥಿಯಲ್ಲಿದ್ದ ಸಂಸ್ಥೆಯ ಆಶ್ರಮದೊಳಕ್ಕೆ ನುಗ್ಗಿದ್ದರು.

ಡಾ. ಜಯಂತ್‌ ಬಾಲಾಜಿ ಅಠಾವಳೆ
ಡಾ. ಜಯಂತ್‌ ಬಾಲಾಜಿ ಅಠಾವಳೆ

ಪೊಲೀಸ್ ದಾಖಲೆಗಳ ಪ್ರಕಾರ ಗೋವಾದಲ್ಲಿ ದೀಪಾವಳಿಯ ದಿನದಲ್ಲಿ ಆಚರಿಸುವ ಜನಪ್ರಿಯ ‘ನರಕಾಸುರ ದಹನ’ ಹಬ್ಬಕ್ಕೆ ಸಂಸ್ಥೆ ವಿರೋಧ ವ್ಯಕ್ತಪಡಿಸುತ್ತಿತ್ತು. ಇದೇ ದಿನ 2009ರ ಅಕ್ಟೋಬರ್‌ 16ರಂದು ಸಂಸ್ಥೆಯ ಇಬ್ಬರು ಸದಸ್ಯರಾದ ಮಲ್ಗೊಂಡ ಪಾಟೀಲ್ ಮತ್ತು ಯೋಗೇಶ್‌ ನಾಯ್ಕ್‌ ಮಡ್ಗಾವ್‌ನ ಸ್ಪರ್ಧಾ ಸ್ಥಳದಲ್ಲಿ ಬಾಂಬ್‌ ಇಡಲು ಅದನ್ನು ತಮ್ಮ ಸ್ಕೂಟರ್‌ ಮೇಲೆ ಒಯ್ಯುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಬಾಂಬ್‌ ಮೊದಲೇ ಸ್ಫೋಟಗೊಂಡು ಇಬ್ಬರೂ ಸಾವನ್ನಪ್ಪಿದರು.

ಈ ‘ಘಟನೆಯಿಂದ ನಾವೆಲ್ಲಾ ಆಘಾತಕ್ಕೆ ಒಳಗಾದೆವು’ ಎಂದು ನೆನಪು ಮಾಡಿಕೊಳ್ಳುತ್ತಾರೆ ರಾಮನಾಥಿಯ ನಿವಾಸಿ ಮತ್ತು ಸ್ಥಳೀಯ ಹೋರಾಟಗಾರರಾದ ಸೌರಭ್‌ ಲೊಟ್ಲಿಕರ್. ಅದೇ ದಿನ ಸಂಜೆ ಒಟ್ಟಾದ ಒಂದಷ್ಟು ಗ್ರಾಮಸ್ಥರು ಸಮಿತಿಯೊಂದನ್ನು ಹುಟ್ಟುಹಾಕಿದರು. ಅಕಕ್ಕೆ ‘ಜನ ಜಾಗೃತಿ ಮಂಚ್‌’ ಎಂದು ಹೆಸರಿಟ್ಟರು. ಬಸಂತ್‌ ಭಟ್‌ ಇದರ ಅಧ್ಯಕ್ಷರಾದರೆ, ಶೇಖರ್‌ ನಾಯ್ಕ್‌ ಕಾರ್ಯದರ್ಶಿಗಳು. ಗ್ರಾಮದಿಂದ ಸನಾತನ ಸಂಸ್ಥೆಯನ್ನು ಒದ್ದೋಡಿಸುವುದೇ ದ್ಯೇಯವಾಗಿಸಿಕೊಂಡು ಮಂಚ್‌ ಕಾರ್ಯಾರಂಭ ಮಾಡಿತು.

ಈ ಹೊಸ ಗುಂಪು ಮರುದಿನ ಸಭೆ ಕರೆಯಿತು. ಸಭೆಗೆ ಕೆಲವೇ ಬೆರಳೆಣಿಕೆಯಷ್ಟು ಜನರು ಮಾತ್ರ ಆಗಮಿಸಿದರು. ‘ಆದರೆ ನಾವು ನಮ್ಮ ವಿರೋಧ ಮುಂದುವರಿಸಿದೆವು. ದಿನ ಕಳೆದಂತೆ ನಮ್ಮ ಸುತ್ತಲಿದ್ದ ಜನರ ಸಂಖ್ಯೆ ಹೆಚ್ಚಾಗಲು ಆರಂಭವಾಯಿತು.ನಂತರ ನಾವು ಅಕ್ಟೋಬರ್‌ 20ರಂದು ಸಾರ್ವಜನಿಕ ಸಭೆ ಕರೆದೆವು. ಈ ಸಭೆಗೆ ದೊಡ್ಡ ಮಟ್ಟಕ್ಕೆ ಜನರು ಹರಿದು ಬಂದರು. ರಾಮನಾಥಿ ಗ್ರಾಮದಿಂದ ಮಾತ್ರವಲ್ಲ ಇಡೀ ಪೋಂಡ ಉಪವಿಭಾಗದಿಂದ ಜನರು ಬಂದಿದ್ದರು,’ ಎನ್ನುತ್ತಾರೆ ಬಸಂತ್‌ ಭಟ್‌.

’ನಾವು 400 ಕ್ಕಿಂತ ಹೆಚ್ಚಿನ ಜನರು ಬರಬಹುದು ಎಂದೆಣಿಸಿರಲಿಲ್ಲ. ಹೀಗಿದ್ದೂ, 2 ಸಾವಿರಕ್ಕೂ ಅಧಿಕ ಜನರು ಇದರಲ್ಲಿ ಭಾಗವಹಿಸಿದ್ದರು. ನಂತರ ಸತಾನತ ಸಂಸ್ಥಾ ವಿರುದ್ಧ ನಾವು ಜಾಥಾವನ್ನು ಹಮ್ಮಿಕೊಂಡೆವು. ಇದರಲ್ಲೂ ದೊಡ್ಡ ಸಂಖ್ಯೆಯ ಜನರು ಭಾಗವಹಿಸಿದ್ದರು’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ರಾಮನಾಥಿಯಲ್ಲಿ ನಡೆದ ಪ್ರತಿಭಟನೆಯಿಂದ ಸಂಸ್ಥೆ ಒಂದು ಹೆಜ್ಜೆ ಹಿಂದಕ್ಕೆ ಸರಿಯಿತು. ಇದನ್ನು ಸ್ಥಳೀಯ ಪತ್ರಿಕೆಗಳು ವಿವರವಾಗಿ ಕವರ್‌ ಮಾಡಿದವು. ಸುಮಾರು ಎರಡು ಮೂರು ವಾರಗಳ ಕಾಲ ಪ್ರತಿ ದಿನ ಪತ್ರಿಕೆಗಳಲ್ಲಿ ಪ್ರತಿಭಟನೆ ಮತ್ತು ಜನರ ವಿರೋಧದ ಬಗ್ಗೆ ಎರಡು ಮೂರು ಸ್ಟೋರಿಗಳು ಬರುತ್ತಿದ್ದವು. ಆದರೆ, ಈ ಮಾಹಿತಿಗಳು ಸನಾತನ ಸಂಸ್ಥೆ ಬಗ್ಗೆ ಮತ್ತು ಅಠಾವಳೆಯ ಧಾರ್ಮಿಕ ಉಪನ್ಯಾಸದಲ್ಲಿರುತ್ತಿದ್ದ ವಿಷಯಗಳ ಬಗ್ಗೆ ಸ್ವಲ್ಪವೇ ವಿವರಗಳನ್ನು ನೀಡುತ್ತಿದ್ದವು. ಆಳಕ್ಕಿಳಿದಾಗ ಅದರ ಕಥೆಗಳೇ ಬೇರೆ ತೆರನಾಗಿದ್ದವು...

(ಇದು ಲೇಖಕ ಧೀರೇಂದ್ರ ಕೆ. ಝಾ ಬರೆದ ‘ಶ್ಯಾಡೋ ಆರ್ಮೀಸ್’ ಪುಸ್ತಕದ ಮೊದಲ ಅಧ್ಯಾಯ. ಇನ್ನೂ ನಾಲ್ಕೂ ಕಂತುಗಳಲ್ಲಿ ‘ಸನಾತನ ಸಂಸ್ಥಾ’ ಬಗೆಗಿನ ಅಧ್ಯಾಯ ಪ್ರಕಟವಾಗಲಿದೆ. )

Also read: ‘ಸ್ಟೋರಿ ಆಫ್‌ ಸನಾತನ ಸಂಸ್ಥಾ’- 2: ಮಡ್ಗಾಂವ್‌ & ಸರಣಿ ಬಾಂಬ್‌ ಸ್ಫೋಟಗಳ ಕರಾಳ ಇತಿಹಾಸ

Also read: ಸ್ಟೋರಿ ಆಫ್‌ ಸನಾತನ ಸಂಸ್ಥಾ- 3: ವಿಷ್ಣುವಿನ ಅವತಾರ ಪುರುಷ ಅಠಾವಳೆ & ಪ್ರಗತಿಪರರ ಬಗ್ಗೆ ಹುಟ್ಟಿಕೊಂಡ ಹಗೆತನ

Also read: ‘ಸ್ಟೋರಿ ಆಫ್‌ ಸನಾತನ ಸಂಸ್ಥಾ’- 4: ದಾಭೋಲ್ಕರ್, ಪನ್ಸಾರೆ, ಕಲ್ಬುರ್ಗಿ ಹತ್ಯೆಗಳು; ಆರೋಪಿ ಸ್ಥಾನದಲ್ಲಿ ಅಠಾವಳೆ ‘ಸಾಧಕರು’!