samachara
www.samachara.com
ರೇವಣ್ಣ ಬಿಸ್ಕೆಟ್ + ಎಚ್‌ಡಿಕೆ ಹೆಲಿಕಾಪ್ಟರ್ + ಪ್ರತಾಪ್ ಸಿಂಹ ಲೈವ್ = ಆಕ್ರೋಶ, ಅಪಪ್ರಚಾರ, ಅನಾಚಾರ!
FEATURE STORY

ರೇವಣ್ಣ ಬಿಸ್ಕೆಟ್ + ಎಚ್‌ಡಿಕೆ ಹೆಲಿಕಾಪ್ಟರ್ + ಪ್ರತಾಪ್ ಸಿಂಹ ಲೈವ್ = ಆಕ್ರೋಶ, ಅಪಪ್ರಚಾರ, ಅನಾಚಾರ!

ಒಂದೆಡೆ ಪರಿಹಾರ ಕಾರ್ಯಾಚರಣೆಗಳು ಚುರುಕಿನಿಂದ ಸಾಗುತ್ತಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿಯೂ ಕೊಡಗಿನ ಪ್ರಾಕೃತಿಕ ವಿಕೋಪ ಚರ್ಚೆಗೆ ಗ್ರಾಸವಾಗಿದೆ.

ಕೊಡಗಿನಲ್ಲಿ ಪ್ರಾಕೃತಿಕ ವಿಕೋಪಕ್ಕೆ ವಾರ ತುಂಬುತ್ತಾ ಬಂದಿದೆ. ಮನೆ ಕಳೆದುಕೊಂಡವರು ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ರಾಜ್ಯದ ವಿವಿಧ ಕಡೆಗಳಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದ್ದು, ಅಗತ್ಯಕ್ಕಿಂತ ಹೆಚ್ಚಿನ ವಸ್ತುಗಳು ಕೊಡಗು ತಲುಪಿವೆ. ಇದೀಗ ‘ವಸ್ತುಗಳ ನೆರವು ಸಾಕು, ಹಣ ನೀಡಿ’ ಎಂಬ ಮನವಿಯನ್ನು ರಾಜ್ಯದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾಡಿದ್ದಾರೆ.

ಒಂದೆಡೆ ಪರಿಹಾರ ಕಾರ್ಯಾಚರಣೆಗಳು ಚುರುಕಿನಿಂದ ಸಾಗುತ್ತಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿಯೂ ಕೊಡಗಿನ ಪ್ರಾಕೃತಿಕ ವಿಕೋಪ ಚರ್ಚೆಗೆ ಗ್ರಾಸವಾಗಿದೆ. ಹಲವರು ಸೋಷಿಯಲ್‌ ಮೀಡಿಯಾಗಳ ಮುಖಾಂತರವೇ ವಸ್ತುಗಳನ್ನು, ಹಣವನ್ನು ಸಂಗ್ರಹಿಸಿದ್ದಾರೆ. ಜತೆಗೆ ಇದೇ ವೇದಿಕೆಯಲ್ಲಿ ಮೂವರ ಬಗ್ಗೆ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಅವುಗಳಲ್ಲಿ ಮೊದಲನೆಯದು ನಿರಾಶ್ರಿತರಿಗೆ ಬಿಸ್ಕೆಟ್‌ ಎಸೆದ ರೇವಣ್ಣ, ಎರಡನೆಯದ್ದು ಹೆಲಿಕಾಪ್ಟರ್‌ನಲ್ಲಿ ಪೇಪರ್‌ ಓದಿದ ಕುಮಾರಸ್ವಾಮಿ ಮತ್ತು ಫೇಸ್‌ಬುಕ್‌ನಲ್ಲಿ ಲೈವ್‌ ಬಂದ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ.

ರೇವಣ್ಣ ಬಿಸ್ಕೆಟ್

ಕೊಡಗಿನಲ್ಲಿ ವಿಕೋಪ ಸಂಭವಿಸಿದ ಹೊತ್ತಲ್ಲೇ ಹಾಸನದ ಅರಕಲಗೂಡಿನಲ್ಲಿಯೂ ನೆರೆ ಬಂದಿತ್ತು. ಇಲ್ಲಿನ ರಾಮನಾಥಪುರದಲ್ಲಿ ನೆರೆಯಿಂದ ಸಂತ್ರಸ್ತರಾದವರಿಗೆ ಗಂಜಿ ಕೇಂದ್ರವನ್ನು ತೆರೆಯಲಾಗಿತ್ತು. ಇಲ್ಲಿಗೆ ಭಾನುವಾರ ಶಾಸಕ ಎ.ಟಿ. ರಾಮಸ್ವಾಮಿಯವರ ಜತೆಗೆ ಸಚಿವ ಎಚ್‌.ಡಿ. ರೇವಣ್ಣ ಆಗಮಿಸಿದ್ದರು.

ಅದಾಗಲೇ ಸಂತ್ರಸ್ತರಿಗೆ ಹಾಸನ ಕೆಎಂಎಫ್‌ನಿಂದ ಉಚಿತವಾಗಿ ಸಾವಿರಾರು ಲೀಟರ್ ಹಾಲು ಮತ್ತು ಬಿಸ್ಕೆಟ್ ಸರಬರಾಜು ಮಾಡಿ ಸುದ್ದಿಯಾಗಿದ್ದ ರೇವಣ್ಣ ಅಂದು ಮಾತ್ರ ಎಡವಟ್ಟು ಮಾಡಿಕೊಂಡರು. ಗಂಜಿ ಕೇಂದ್ರಕ್ಕೆ ಆಗಮಿಸಿದವರೇ ಸಂತ್ರಸ್ತರಿಗೆ ಬಿಸ್ಕೆಟ್‌ ಹಂಚುವ ಕೆಲಸಕ್ಕೆ ಕೈ ಹಾಕಿದರು. ಬಿಸ್ಕೆಟ್‌ ಹಂಚಿದ್ದರೆ ಇಷ್ಟೊತ್ತಿಗೆ ಇದು ಸುದ್ದಿಯೇ ಆಗುತ್ತಿರಲಿಲ್ಲ. ಆದರೆ ನೇರವಾಗಿ ಕಂಬದಂತೆ ನಿಂತ ಎಚ್‌.ಡಿ. ರೇವಣ್ಣ ನಾಯಿಗಳಿಗೆ ಎಸೆಯುವ ಹಾಗೆ ಜನರತ್ತ ಬಿಸ್ಕೆಟ್‌ ಪ್ಯಾಕೆಟ್‌ಗಳನ್ನು ಎಸೆದರು. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ರೇವಣ್ಣ ವಿರುದ್ಧ ಶ್ರೀಸಾಮಾನ್ಯರು ಕಿಡಿಕಾರಿದ್ದು, ಅವರ ದೌಲತ್ತಿನ ನಡವಳಿಕೆಯನ್ನು ಪ್ರಶ್ನಿಸಿದ್ದಾರೆ.

ಹಾಸನ ಭಾಗದಲ್ಲಿ ಜೆಡಿಎಸ್‌ ನೆಲೆ ಭದ್ರವಾಗಿದೆ. ಜನರೇ ಬಂದು ಬಂದು ತೆನೆ ಹೊತ್ತ ಮಹಿಳೆಗೆ ಮತ ಹಾಕುತ್ತಾರೆ. ಹೀಗಿರುವಾಗ ಮತ ಹಾಕಿದ ಜನರನ್ನು ಹೇಗೆ ಕಂಡರೂ ಒಂದೇ ಎಂಬ ತೀರ್ಮಾನಕ್ಕೆ ರೇವಣ್ಣ ಬಂದಂತೆ ಕಾಣುತ್ತದೆ. ಪರಿಣಾಮ ಅವರ ಬಿಸ್ಕೆಟ್‌ ಪ್ರಹಸನ ನಡೆದಿದೆ.

ಒಂದು ಕಡೆ ಕರ್ನಾಟಕದ ಸಚಿವ ರೇವಣ್ಣ ಈ ರೀತಿ ವರ್ತಿಸುತ್ತಿದ್ದರೆ ಪಕ್ಕದ ಪ್ರವಾಹ ಪೀಡಿತ ಕೇರಳದಲ್ಲಿ ತಾವೇ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ಸಚಿವರ ಚಿತ್ರಗಳು ಓಡಾಡುತ್ತಿವೆ. ಸಾಮಾನ್ಯವಾಗಿ ಈ ರೀತಿಯ ಪ್ರಾಕೃತಿಕ ವಿಕೋಪಗಳು ಸಂಭವಿಸಿ ಅಸಹಾಯಕರಾದಾಗ ತಾವು ಗೆಲ್ಲಿಸಿದ ಜನಪ್ರತಿನಿಧಿಗಳು ಸಹಾಯಕ್ಕೆ ಬರಲಿ ಎಂದು ಜನರು ಆಶಿಸುತ್ತಾರೆ. ಕನಿಷ್ಠ ಬಿಸ್ಕೆಟ್‌ ಹಂಚುವಾಗ ತಮ್ಮನ್ನು ಗೌರವಯುತವಾಗಿ ಕಾಣಲಿ ಎಂದುಕೊಳ್ಳುತ್ತಾರೆ. ಆದರೆ ರೇವಣ್ಣ ತರಹದವರು ವರ್ತಿಸುವುದು ಹೀಗೆ. ನಮ್ಮ ಸಚಿವರಿಂದಲೂ ಯಾವತ್ತಾದರೂ ಕೇರಳದ ಮಾದರಿಯನ್ನು ನಿರೀಕ್ಷಿಸಬಹುದೇ? ಉತ್ತರ ಗೊತ್ತಿಲ್ಲ.

ಕುಮಾರಸ್ವಾಮಿ ಹೆಲಿಕಾಪ್ಟರ್‌

ಒಂದು ಕಡೆ ಎಚ್‌.ಡಿ.ರೇವಣ್ಣ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಆಕ್ರೋಶ ಹೊರ ಹಾಕಿದ ಜನರೇ ಇನ್ನೊಂದು ಕಡೆ ಎಡವಿ ಬಿದ್ದಿದ್ದಾರೆ. ಆಗಸ್ಟ್‌ 18ರಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿಕೋಪ ಪೀಡಿತ ಕೊಡಗಿನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಸಮೀಕ್ಷೆಗೆ ಎಂದು ಹತ್ತಿದ್ದ ಹೆಲಿಕಾಪ್ಟರ್‌ನಲ್ಲಿ ಅವರ ಪೇಪರ್‌ ಓದುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳ್ಲಲಿ ವೈರಲ್‌ ಆಗಿತ್ತು. ಬೆನ್ನಿಗೆ ಜನರು ಹಿಂದೆ ಮುಂದೆ ನೋಡದೆ ರಾಜ್ಯದ ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ವೈಮಾನಿಕ ಸಮೀಕ್ಷೆ ನಡೆಸುವ ಬದಲು ಕುಮಾರಸ್ವಾಮಿ ಹೆಲಿಕಾಪ್ಟರ್‌ನಲ್ಲಿ ಪೇಪರ್‌ ಓದುತ್ತಿದ್ದರು ಎಂದು ಜನರು ಕಿಡಿಕಾರಿದ್ದರು.

ಈ ವಿಡಿಯೋಗಳು ಶೇರ್‌ ಆದ ಗ್ರೂಪ್‌ಗಳು, ಪೇಜ್‌ಗಳನ್ನು ತಿರುವಿ ಹಾಕಿದರೆ ಇದರ ಹಿಂದೆ ಸಣ್ಣ ಕುತಂತ್ರ ಕೆಲಸ ಮಾಡಿರುವುದೂ ಕಾಣಿಸುತ್ತದೆ. ಮುಖ್ಯವಾಗಿ 38 ಸೀಟು ಗೆದ್ದು ರಾಜ್ಯದ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಮೇಲೆ ವಿರೋಧ ಪಕ್ಷಗಳ ಹೊಟ್ಟೆಕಿಚ್ಚು ಮುಂದುವರಿದೇ ಇದೆ. ಈ ಸಮುದಾಯ ಅವಕಾಶ ಸಿಕ್ಕಾಗಲೆಲ್ಲಾ ಮುಖ್ಯಮಂತ್ರಿಯನ್ನು ಹೀಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡುತ್ತಲೇ ಬಂದಿದೆ.

ಆದರೆ ಈ ಬಾರಿ ಇವರ ಖೆಡ್ಡಾಗೆ ಸಾಮಾನ್ಯ ಜನರೂ ಬೀಳಬೇಕಾಯಿತು. ನಾನು ಪೇಪರ್‌ ಓದುತ್ತಿದ್ದುದು ಹೌದು, ‘ನಾನು ಮೈಸೂರು, ಪಿರಿಯಾಪಟ್ಟಣ ನಡುವೆ ಪತ್ರಿಕೆ ಓದಿದ್ದೇನೆ’ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದರೂ ಜನರು ಕೇಳಿಸಿಕೊಳ್ಳುವುದಕ್ಕೆ ಸಿದ್ಧವಿರಲಿಲ್ಲ.

ಈ ಮೂಲಕ ಯಾವ ಜನರು ಸಚಿವ ರೇವಣ್ಣ ವರ್ತನೆಯನ್ನು ಟೀಕಿಸುತ್ತಿದ್ದರೋ, ಅದೇ ಜನರು ಕುಮಾರಸ್ವಾಮಿ ವಿರುದ್ಧ ಹಿಂದೆ ಮುಂದೆ ನೋಡದರೆ ಅಪಪ್ರಚಾರವನ್ನು ನಡೆಸಿದರು. ವಿಡಿಯೋ ಹಿಂದಿನ ಅಸಲಿಯತ್ತು, ಅದನ್ನು ಹರಿಯ ಬಿಟ್ಟವರ ಉದ್ದೇಶಗಳನ್ನು ನೋಡುವ ಗೋಜಿಗೆ ಹೋಗದ ಸಂದರ್ಭಗಳಲ್ಲಿ ಉಂಟಾಗುವ ಅವಾಂತರಗಳಿವು.

ಪ್ರತಾಪ್‌ ಸಿಂಹ ಲೈವ್‌

ಆ ಕಡೆ ಅಣ್ಣ ರೇವಣ್ಣ ಮತ್ತು ಈ ಕಡೆ ತಮ್ಮ ಕುಮಾರಸ್ವಾಮಿ ಬೇರೆ ಬೇರೆ ಕಾರಣಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರಸ್ಥಾನದಲ್ಲಿರುವ ಹೊತ್ತಲ್ಲೇ ಇಂಥಹದ್ದೊಂದು ಚರ್ಚೆಗೆ ಲೇಟಾಗಿ ಎಂಟ್ರಿ ಕೊಟ್ಟವರು ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ. ‘ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಪ್ರತಾಪ್‌ ಸಿಂಹ ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿಕೊಡಿ’ ಎಂಬ ಪೋಸ್ಟ್‌ಗಳು ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡಿದ್ದವು.

ಇದಕ್ಕೆ ಭಾನುವಾರ ಫೇಸ್‌ಬುಕ್‌ ಲೈವ್‌ ಮೂಲಕ ಬಂದು ಉತ್ತರಿಸಿದ ಪ್ರತಾಪ್‌ ಸಿಂಹ, ಕೊಡಗಿನಲ್ಲಿ ನಡೆದ ಪರಿಹಾರ ಕಾರ್ಯಾಚರಣೆಗಳಿಗೆಲ್ಲಾ ನಾನೇ ಕಾರಣ. ಇಲ್ಲಿ ನಡೆದ ಪ್ರತಿಯೊಂದು ಗಂಜಿ ಕೇಂದ್ರ, ನಿರಾಶ್ರಿತರ ಶಿಬಿರಗಳ ಹಿಂದಿರುವವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಾರ್ಯಕರ್ತರು ಎಂಬುದಾಗಿ ಭಾಷಣ ಬಿಗಿದು ಹೋಗಿದ್ದಾರೆ. ಎರಡು ಬಾರಿ ರಾಜ್ಯ ಸರಕಾರ ಮತ್ತು ಕೊಡಗು ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ಹೆಸರನ್ನು ಸಂಪ್ರದಾಯವೆಂಬಂತೆ ಪ್ರಸ್ತಾಪಿಸಿದ್ದನ್ನು ಬಿಟ್ಟರೆ ಕೊಡಗಿನ ಮುಂದಿನ ಜವಾಬ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಸಂಘಟನೆ ಸೇವಾ ಭಾರತಿ ನೋಡಿಕೊಳ್ಳಲಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಇದು ಸಹಜವಾಗಿಯೇ ಕೊಡಗಿಗಾಗಿ ರಾಜ್ಯದಾದ್ಯಂತ ಹಣ, ಪರಿಹಾರ ಸಾಮಾಗ್ರಿಗಳನ್ನು ಹಗಲು ರಾತ್ರಿ ಸಂಗ್ರಹಿಸಿದ ಜನರ ಬದ್ಧತೆಯನ್ನು ಪ್ರಶ್ನೆ ಮಾಡಿದೆ; ಜತೆಗೆ ಇವರುಗಳ ಆಕ್ರೋಶಕ್ಕೂ ಕಾರಣವಾಗಿದೆ. ಪ್ರತಾಪ್‌ ಸಿಂಹ ಲೈವ್‌ಗೆ ಫೇಸ್‌ಬುಕ್‌ನಲ್ಲಿ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಪತ್ರಕರ್ತ ಹರ್ಷಕುಮಾರ್‌ ಕುಗ್ವೆ, “ಇವತ್ತು ಕೊಡಗಿನ ನಿರಾಶ್ರಿತರೆಲ್ಲರಿಗೂ ಮನೆ ಕಟ್ಟಿ ಕೊಡುವುದಾಗಿ ಪ್ರತಾಪ್‌ ಸಿಂಹ ಹೇಳಿದ್ದಾರೆ. ಆದರೆ ಇದೇ ಕೊಡಗಿನ ಸಾಮಾಜಿಕ, ಆರ್ಥಿಕ ಬದುಕಿನ ಅವಿಭಾಜ್ಯ ಅಂಗವಾಗಿರುವ ದಿಡ್ಡಳ್ಳಿಯ ಜೇನು ಕುರುಬ, ಬೆಟ್ಟ ಕುರುಬ, ಇರುಳಿಗರ ಸಮುದಾಯದ 700 ಕುಟುಂಬಗಳು ಬೀದಿಗೆ ಬಿದ್ದು ವರ್ಷದ ಮೇಲಾಯಿತು. ದಿಡ್ಡಳ್ಳಿಯಲ್ಲಿ ಅವರು ಮನೆ ಕಟ್ಟಿಕೊಳ್ಳಲು ಬಿಡದೆ ಅವರೆಲ್ಲಾ ಅಸ್ಸಾಂ ನಿವಾಸಿಗಳೆಂದು ಸುಳ್ಳು ಹೇಳಿ ಜಿಲ್ಲಾಧಿಕಾರಿಗಳ ದಿಕ್ಕು ತಪ್ಪಿಸಿದ್ದೂ ಇದೇ ಪ್ರತಾಪ ಸಿಂಹ,” ಎಂದು ಹರಿಹಾಯ್ದಿದ್ದಾರೆ.

ಹೀಗೆ ‘ಕೊಡಗು ಪ್ರಾಕೃತಿಕ ವಿಕೋಪ’ ಎಂಬ ದುರಂತ ಒಂದು ಕಡೆ ಸಾವಿರಾರು ಜನರ ಬದುಕನ್ನು ಅತಂತ್ರವಾಗಿಸಿದ್ದರೆ, ಅದರ ಜತೆಗೇ ರಾಜಕಾರಣಿಗಳ ನಡೆಯ ಬಗ್ಗೆ ಜನರು ತಮ್ಮ ಆಕ್ರೋಶ ಹೊರಹಾಕುವಂತೆ ಮಾಡಿದೆ. ಜನರು ನಿರ್ಗತಿಕರಾದಾಗ ಪ್ರಾಮಾಣಿಕವಾಗಿ ನೆರವಿಗೆ ಧಾವಿಸಬೇಕಾಗಿದ್ದ ಈ ಜನ ಪ್ರತಿನಿಧಿಗಳು ಕೊಡಗು ದುರಂತದ ಮೂಲಕ ‘ತಾವೇನು’ ಎಂಬುದನ್ನು ತೆರೆದಿಟ್ಟಿದ್ದಾರೆ. ಮುಂದಿನ ತೀರ್ಮಾನ ಇವರನ್ನು ಆಯ್ಕೆ ಮಾಡಿದ ಜನರ ಆತ್ಮವಿಮರ್ಶೆಗೆ ಬಿಟ್ಟದ್ದು.