samachara
www.samachara.com
ಬನವಾಸಿಯ ಭತ್ತದ ಗದ್ದೆಗಳು
ಬನವಾಸಿಯ ಭತ್ತದ ಗದ್ದೆಗಳು|ಚಿತ್ರ ಕೃಪೆ: ಟ್ರಿಪೋಟೋ ಡಾಟ್‌ ಕಾಂ
FEATURE STORY

‘ವರದೆಯ ನೆರೆ, ಬಡ ರೈತರಿಗೆ ಬರೆ’; ಶ್ರೀಮಂತ ಸಂಸ್ಕೃತಿಯ ನದಿ ತಟವೊಂದು ಬರಡಾಗಿದ್ದು ಹೇಗೆ?

ಒಂದು ಕಾಲದಲ್ಲಿ ರಾಜಧಾನಿ ನಿರ್ಮಿಸುವಷ್ಟು ಸಮೃದ್ಧವಾಗಿತ್ತು ವರದಾ ನದಿ ತಟ. ಅದೇ ವರದಾ ನದಿ ಇಂದು ನೆರೆ, ಇಲ್ಲವಾದರೆ ಬರ ಎಂಬ ಸ್ಥಿತಿಗೆ ತಲುಪಿದೆ. ಇದಕ್ಕೆ ಕಾರಣಗಳು ಹಲವು. 

ರಮೇಶ್‌ ಹಳೇಕಾನಗೋಡು

ರಮೇಶ್‌ ಹಳೇಕಾನಗೋಡು

ಒಂದು ಕಾಲದಲ್ಲಿ ರಾಜಧಾನಿ ನಿರ್ಮಿಸುವಷ್ಟು ಸಮೃದ್ಧವಾಗಿತ್ತು ವರದಾ ನದಿ ತಟ. ಅದೇ ವರದಾ ನದಿ ಇಂದು ನೆರೆ, ಇಲ್ಲವಾದರೆ ಬರ ಎಂಬ ಸ್ಥಿತಿಗೆ ತಲುಪಿದೆ. ಇದಕ್ಕೆ ಕಾರಣಗಳು ಹಲವು. ಅವುಗಳನ್ನು ತಮ್ಮ ಮುಂದಿಡುವ ಪ್ರಯತ್ನ ‘ಸಮಾಚಾರ’ದ್ದು.

ಈ ವರದಾ ನದಿ ಸಾಗುವ ಹಾದಿ ಬಹಳ ಸೊಗಸಾಗಿದೆ. ವರದಾ ನದಿಯು ‘ವರದ’ ಮೂಲದಲ್ಲಿ ಜನಿಸಿ, ಸಾಗರ ಪಟ್ಟಣ ದಾಟಿ ಬಸವನ ಹೊಳೆ ಅಣೆಕಟ್ಟು ತಲುಪುತ್ತದೆ. ಸಾಗರ ಪಟ್ಟಣದ ಜನ ಕುಡಿಯುವುದು ಇದೇ ವರದಾ ನದಿಯ ನೀರನ್ನು.

ಬಸವನ ಹೊಳೆ ಅಣೆಕಟ್ಟು ದಾಟಿನ ನಂತರ ವರದಾ ನದಿಗೆ ಕೆಳದಿಯ ಸಮೀಪ ಉಪನದಿಯೊಂದು ಸೇರಿಕೊಳ್ಳುತ್ತದೆ. ಮುಂದೆ ಸಾಗರ ತಾಲೂಕಿನ ಬಾಳೆಕೊಪ್ಪ ಸಮೀಪ ಮತ್ತೊಂದು ನದಿ ವರದಾ ಒಡಲನ್ನು ಸೇರುತ್ತದೆ. ಹೀಗೆ ತನ್ನ ಗಾತ್ರ ವೃದ್ಧಿಸಿಕೊಳ್ಳುವ ವರದಾ ನದಿ ಸಿದ್ದಾಪುರ-ಸೊರಬ ರಸ್ತೆ ದಾಟಿ, ಚಿಕ್ಕಮಕೊಪ್ಪ ಬಳಿ ಸೊರಬ-ಚಂದ್ರಗುತ್ತಿ ರಸ್ತೆಯ ಬದಿಯಲ್ಲಿ ಸಾಗುತ್ತದೆ. ಅಲ್ಲಿಂದ ಮುಂದೆ ಚಿಕ್ಕದುಗಲಿ ಎಂಬ ಹಳ್ಳಿಯ ಬಳಿ ಕಾಣಿಸಿಕೊಳ್ಳುವ ನದಿಗೆ ಹಿರೆಕಲಗೋಡು ಎಂಬಲ್ಲಿ ಮತ್ತೊಂದು ಉಪನದಿ ಸೇರಿಕೊಳ್ಳುತ್ತದೆ. ಹೀಗೆ ಉಪನದಿಗಳನ್ನು ಸೇರಿಸಿಕೊಂಡು ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸುವ ವರದಾ ನದಿಗೆ ಬನವಾಸಿಯ ಇತಿಹಾಸದಲ್ಲಿಯೂ ಪ್ರಮುಖ ಸ್ಥಾನವಿದೆ.

ವರದಾ ನದಿಯ ಉಗಮ ಸ್ಥಾನ
ವರದಾ ನದಿಯ ಉಗಮ ಸ್ಥಾನ

ಕದಂಬ ರಾಜಧಾನಿ ರಕ್ಷಕ ವರದಾ

ಕದಂಬರ ರಾಜಧಾನಿ ಬನವಾಸಿಯನ್ನು ‘ಜಲದುರ್ಗ’ ಎಂದು ಕರೆಯಲಾಗುತ್ತಿತ್ತು. ಇದರ ಹಿಂದೆ ಇದ್ದದ್ದು ಇದೇ ವರದಾ ನದಿ. ಪ್ರೀತಿಯಿಂದ ಬನವಾಸಿಯನ್ನು ಮೂರು ದಿಕ್ಕಿನಲ್ಲಿಯೂ ಅಪ್ಪಿಕೊಳ್ಳುವ ವರದಾ ನದಿ ವೈರಿಗಳಿಂದ ಕದಂಬ ರಾಜಧಾನಿಯನ್ನು ಸಂರಕ್ಷಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿತ್ತು. ಶಿವಮೊಗ್ಗ ಜಿಲ್ಲೆ ದಾಟಿ ಬಂದ ವರದಾ ನದಿ ಬನವಾಸಿಯಲ್ಲಿ ಮಧುಕೇಶ್ವರನ ಪಾದ ತೊಳೆದು ಪಾವನಳಾಗುತ್ತಾಳೆ ಎಂಬ ನಂಬಿಕೆ ಇದೆ. ಮುಂದೆ ವರದಾ ಜಡೆಮಾದಾಪುರ ದಾಟಿ ಚಾಗತ್ತೂರು ಗ್ರಾಮದ ಹತ್ತಿರ ಮತ್ತೊಮ್ಮೆ ಶಿವಮೊಗ್ಗ ಜಿಲ್ಲೆ ಪ್ರವೇಶ ಪಡೆಯುತ್ತಾಳೆ. ನಂತರ ವರದಿಕೊಪ್ಪ ದಾಟಿ ಲಕ್ಕವಳ್ಳಿಯಲ್ಲಿ ದಂಡಾವತಿ ನದಿಯನ್ನು ತನ್ನ ಒಡಲೊಳಗೆ ಸೆಳೆದುಕೊಳ್ಳುತ್ತಾಳೆ.

ಹಾನಗಲ್ ತಾಲೂಕಿನ ಮಾಕರವಳ್ಳಿ ಗ್ರಾಮದ ಸಮೀಪ ಹಾವೇರಿ ಜಿಲ್ಲೆ ಪ್ರವೇಶಿಸುವ ವರದಾ ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಯ ಗಡಿಯಂತೆ ಸಾಗುತ್ತದೆ. ಈ ನದಿಯ ಪಥವನ್ನೇ ಎರಡೂ ಜಿಲ್ಲೆಗಳಿಗೆ ಗಡಿಯನ್ನಾಗಿ ಗುರುತಿಸಲಾಗುತ್ತದೆ. ಶಿವಮೊಗ್ಗ ಜಿಲ್ಲೆಯ ಮುಡಿದೋಕೊಪ್ಪ ಗಡಿಯಲ್ಲಿ ಸಾಗಿ, ನಂತರ ಮತ್ತೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮೂಲಕ ಹರಿದು ಇಲ್ಲಿನ ಗಳಗನಾಥ ಎಂಬ ಸುಂದರ ಪ್ರದೇಶದಲ್ಲಿ ತುಂಗಭದ್ರಾ ನದಿಯನ್ನು ಸೇರುತ್ತಾಳೆ. ಅಷ್ಟೊತ್ತಿಗೆ ಆಕೆ ಕ್ರಮಿಸುವ ದೂರ ಸುಮಾರು ಇನ್ನೂರು ಕಿಲೋಮೀಟರುಗಳನ್ನು ಮೀರಿರುತ್ತದೆ.

ಜೀವನದಿ ವರದಾ

ಶಿವಮೊಗ್ಗ ಮತ್ತು ಉತ್ತರ ಕನ್ನಡ ಮಾತ್ರವಲ್ಲದೆ ತಾನು ಹರಿಯುವ ಹಾವೇರಿಯ ಲಕ್ಮಾಪುರ, ಬೈತನಾಳ್, ಬಲಂಬೀಡು, ಶಿಂಗಾಪುರ, ಸಂಗೂರು, ವಾರ್ದಿ, ನಾಗನೂರು, ಹಾವೇರಿ ಪಟ್ಟಣ, ಸವಣೂರು ತಾಲೂಕಿನ ಮೆಲ್ಲಿಗಟ್ಟಿ, ಕಲಸೂರು, ಕೊಲೂರು, ಮಂಟಗಣಿ, ಹಿರೇ ಮುಗದೂರು, ಕಾರ್ಜಗಿ, ಹಾವೇರಿ ತಾಲೂಕಿನ ಕೋಣನ ತಂಬಿಗಿ, ನಂತರ ಮತ್ತೆ ಸವಣೂರು ತಾಲೂಕಿನ ದೊಂಬರಮತ್ತೂರು ಗ್ರಾಮ, ಹಿರೇಮರಳಿ ಹಳ್ಳಿ, ಮಣ್ಣೂರು, ಹಂದಿಗನೂರು, ಹೊಸರಿಟ್ಟಿ, ಮರದೂರ್, ಮರೋಲ್, ಹಲಗಿ, ಗುಡೂರ್, ಬೆಳವಿಗಿ, ಗುಲ್ಲಗುಂಡಿ ಹಳ್ಳಿಯಲ್ಲಿ ಹರಿಯುತ್ತಾ ಇಲ್ಲಿನ ರೈತರ ಪಾಲಿಗೆ ಜೀವನಾಡಿಯಾಗಿದ್ದಾಳೆ.

ಅಷ್ಟೇ ಅಲ್ಲದೆ ತನ್ನ ಹಾದಿಯುದ್ದಕ್ಕೂ ತಟದಲ್ಲಿ ವಿಶೇಷ ಸಂಸ್ಕೃತಿಯನ್ನೇ ವರದಾ ನದಿ ಹುಟ್ಟು ಹಾಕಿದೆ. ಸ್ಥಳೀಯರಿಗೆ ಇದು ದೈವಿಕ ಅಂಶವುಳ್ಳ ನದಿಯಾದರೆ, ರೈತರಿಗೆ ಕೃಷಿಗೆ ಬೇಕಾದ ನೀರು ಮತ್ತು ಜನರಿಗೆ ಬೇಸಿಗೆಯಲ್ಲಿ ಅಗತ್ಯ ಕುಡಿಯುವ ನೀರನ್ನು ಈ ನದಿ ಪೂರೈಸುತ್ತದೆ. ಇದರ ನೀರನ್ನು ಪಡೆಯಲು ಚಿಕ್ಕ ಅಣೆಕಟ್ಟುಗಳನ್ನು ನದಿಗೆ ಕಟ್ಟಲಾಗಿದೆ. ಇದರ ಹೊರತಾಗಿ ವರದಾ ನದಿ ಪಾತ್ರದಲ್ಲಿ ಯಾವುದೇ ಪ್ರಮುಖ ನೀರಾವರಿ ಯೋಜನೆಗಳಿಲ್ಲ. ಕೆಲ ಯೋಜನೆಗಳು ಸರಕಾರದ ಮುಂದಿವೆ.

ಶ್ರೀಮಂತ ಜೀವವೈವಿಧ್ಯದ ಆಗರ

ಹೀಗಿದ್ದೂ ವರದಾ ನದಿ ಪಾತ್ರದಲ್ಲಿ ಕೃಷಿ ಮತ್ತು ಜಾನಪದ ಸಂಸ್ಕೃತಿ ಭದ್ರವಾಗಿ ಬೇರೂರಿತ್ತು. ಒಂದು ಪ್ರದೇಶದಲ್ಲಿ ಕೃಷಿ ಸಂಸ್ಕೃತಿ ಬೇರೂರಬೇಕಾದರೆ ಅಲ್ಲಿನ ಹವಾಗುಣ ಮತ್ತು ಭೌಗೋಳಿಕ ಪರಿಸ್ಥಿತಿಗನುಗುಣವಾಗಿ ಎದುರಾಗಬಹುದಾದ ಆಪತ್ತುಗಳನ್ನು ಸಹಿಸಬಲ್ಲ ಜೀವವೈವಿಧ್ಯಗಳ ಲಭ್ಯತೆ ಪ್ರಮುಖ ಕಾರಣವಾಗುತ್ತವೆ. ವರದಾ ತಟದಲ್ಲೂ ಅಂಥಹ ಜೀವವೈವಿಧ್ಯದ ತಳಿಗಳಿದ್ದವು. ಮತ್ತದು ಬನವಾಸಿ ಎಂಬ ರಾಜಧಾನಿ ಉಗಮವಾಗಲು ಕಾರಣವಾಗಿತ್ತು. 1940-60ರ ದಶಕಗಳಲ್ಲಿ ಈ ಬನವಾಸಿ ಭಾಗದಲ್ಲಿ ಸುಮಾರು 300ಕ್ಕೂ ಹೆಚ್ಚು ಭತ್ತದ ತಳಿಗಳು ಅಸ್ತಿತ್ವದಲ್ಲಿದ್ದವು. ಇವೇ ಇಲ್ಲಿನ ರೈತರ ಆಸ್ತಿಯಾಗಿದ್ದವು.

ಸಾಂಪ್ರದಾಯಿಕ ಕೃಷಿ
ಸಾಂಪ್ರದಾಯಿಕ ಕೃಷಿ
ಚಿತ್ರ ಕೃಪೆ: ರೈಸ್‌ ಔಟ್‌ಲುಕ್

ಇವುಗಳಲ್ಲಿ 60 ದಿನಗಳಿಂದ ಸುಮಾರು 180 ದಿನಗಳಲ್ಲಿ ಕೊಯ್ಲಿಗೆ ಬರುವ ಭತ್ತದ ತಳಿಗಳಿದ್ದವು. ಮಕ್ಕಳಿಗೆ, ಗರ್ಭಿಣಿಯರಿಗೆ, ರೋಗಿಗಳಿಗೆ, ಮುದುಕರಿಗೆ ಪೌಷ್ಟಿಕವಾದ ಮತ್ತು ಕೃಷಿ ಕೆಲಸದಲ್ಲಿ ಮೈಮುರಿದು ದುಡಿಯುವ ರೈತರಿಗೆ ಬೇಗ ಹಸಿವಾಗದಂತೆ ಅವರ ದುಡಿಮೆ ಕ್ಷಮತೆ ಹೆಚ್ಚಿಸುವ ವಿಶೇಷ ಭತ್ತದ ತಳಿಗಳೂ ಸಾಕಷ್ಟಿದ್ದವು. ಇದರ ಜತೆಗೆ ನೆರೆಯನ್ನು ಎದುರಿಸುವ ಅಪರೂಪದ ತಳಿಯ ಭತ್ತವನ್ನು ಇಲ್ಲಿನ ರೈತರು ಬೆಳೆಯುತ್ತಿದ್ದರು.

ವರದೆಯ ನೆರೆ ಸೈರಿಸುವ ತಳಿಗಳು

ವರದಾ ನದಿಗೆ ನೆರೆ ಹೊಸದಲ್ಲ. ಆದರೆ ಇದನ್ನು ಸೈರಿಸುವ ಗುಣದ ವಿಶೇಷ ತಳಿಗಳಾದ ನೆರೆಗೂಳಿ, ಕರಕಂಟ, ಸಿದ್ದೆಸೆಲೆ, ದೊಡ್ಡಿಗ್ಯ, ಏಡಿಕುಣಿ, ಆನೆದಂತ, ಹಳಗ, ಮಟ್ಟಳಗ, ಹೆಗ್ಗೆ, ಕರಿಭತ್ತ, ಸಣ್ಣವಾಳ್ಯ, ಕರಿಜಡ್ಡು, ಸೋಮಸಾಲೆ, ಜೇನುಗೂಡು, ನೆಟ್ಟಿಭತ್ತ, ಕರೆಕಾಳುದಡಿಗ, ದೊಡ್ಡ ಮುಳ್ಳರೆ, ಸಣ್ಣ ಮುಳ್ಳರೆ ಮುಂತಾದ ಸಂರಕ್ಷಿತ ತಳಿಗಳು ರೈತರ ಬಳಿ ಇದ್ದವು. ಇವುಗಳಲ್ಲಿ ಕೆಲವಂತೂ 45 ದಿನಗಳವರೆಗೆ ಪ್ರವಾಹದ ನೀರಿನಲ್ಲಿ ಮುಳುಗಿದ್ದರೂ ನಂತರ ಮತ್ತೆ ಚಿಗುರಿ ಬೆಳೆ ಬರುತ್ತಿದ್ದವು.

ಒಂದೊಮ್ಮೆ ನೆರೆಯಲ್ಲಿ ಭತ್ತದ ಸಸಿಗಳು ಕೊಳೆತರೂ ನೆರೆ ಇಳಿದ ಮೇಲೆ ಕಡಿಮೆ ಅವಧಿಯ ತಳಿಗಳನ್ನು ನಾಟಿಮಾಡಿ ಬೆಳೆ ತೆಗೆಯುತ್ತಿದ್ದರು. ಆ ದಿನಗಳು ವೈಭವಯುತವಾಗಿದ್ದವು. ಆಹಾರ ಭದ್ರತೆ ಇತ್ತು. ರೈತರ ಹೊಟ್ಟೆ ತಣ್ಣಗಿತ್ತು. ಸಂಸ್ಕೃತಿ ಸಮೃದ್ಧವಾಗಿತ್ತು. ಪಶು ಪತ್ತೂ ಆರಾಮವಾಗಿದ್ದವು. ಆ ಕಾಲದಲ್ಲಿ ಹೆಚ್ಚು ಭತ್ತ ಬೆಳೆಯುವ ರೈತನಿಗೆ ಉತ್ತಮ ಮನೆತನದ ಹೆಣ್ಣನ್ನು ಮದುವೆ ಮಾಡಿ ಕೊಡುವ ಪರಿಪಾಟಗಳೂ ಚಾಲ್ತಿಯಲ್ಲಿದ್ದವು. ಆದರೆ ಇದೆಲ್ಲಾ ಇಂದು ನೆನಪು ಮಾತ್ರ.

ವರದಾ ನದಿ ತಟದಲ್ಲಿ ಬೇರೂರಿದ್ದ ಜಗತ್ಪ್ರಸಿದ್ದ ಭತ್ತದ ತಳಿಗಳನ್ನು ಉಳಿಸಿ ಸಂರಕ್ಷಿಸಲು ಹಲವಾರು ಸರಕಾರೇತರ ಸಂಸ್ಥೆಗಳು ಇಂದು ಕೆಲಸ ಮಾಡುತ್ತಿವೆ. ಆದರೆ ಅವುಗಳ ಫಲಿತಾಂಶ ಮಾತ್ರ ಶೂನ್ಯ. ಮಹಾನಗರಗಳಲ್ಲಿ ಶಾಪ್ ಓಪನ್ ಮಾಡಿ ರೈತರಿಂದ ಕಡಿಮೆ ಬೆಲೆಗೆ ಭತ್ತ ಖರೀದಿಸಿ ಅಕ್ಕಿ ಮಾಡಿಸಿ ಅಧಿಕ ಬೆಲೆಗೆ ಮಾರುವುದು ಮತ್ತು ತಮಗೆ ಹಣ ನೀಡುವ ಸಂಸ್ಥೆಗಳ ಕಣ್ಣೊರೆಸಲು ವರದಿಗಳನ್ನು ತಯಾರಿಸಲಷ್ಟೇ ಇವು ಸೀಮಿತವಾಗಿವೆ. ಯಾವ ಗ್ರಾಮೀಣ ಭಾಗದ ರೈತರನ್ನೂ ಇವು ತಲುಪುತ್ತಿಲ್ಲ.

ಹಾದಿ ತಪ್ಪಿಸುವ ಜಾಹೀರಾತು

ಇದೇ ಹೊತ್ತಲ್ಲಿ ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ ಸರಕಾರ ಸಬ್ಸಿಡಿಯಲ್ಲಿ ಭತ್ತದ ಬೀಜಗಳನ್ನು ಪೂರೈಸುತ್ತಿದೆ. ಇದು ಒಳ್ಳೆಯ ಕೆಲಸವಾದರೂ ಹೀಗೆ ನೀಡಲ್ಪಡುವ ಬೀಜದ ಭತ್ತಗಳಿಗೆ ನೆರೆ ತಡೆಯುವ ಗುಣ ಹೊಂದಿಲ್ಲ ಎಂಬುದು ರೈತರ ಆರೋಪ.

ನೆರೆ ತಡೆದುಕೊಳ್ಳಬಲ್ಲ ಭತ್ತದ ತಳಿಗಳು
ನೆರೆ ತಡೆದುಕೊಳ್ಳಬಲ್ಲ ಭತ್ತದ ತಳಿಗಳು
ಚಿತ್ರ ಕೃಪೆ: ರೈಸ್‌ ಲ್ಯಾಂಡ್‌

ಸರಕಾರ ಎಕರೆವಾರು ಹೆಚ್ಚು ಇಳುವರಿ ಮತ್ತು ಲಾಭದ ಬಗ್ಗೆ ಇನ್ನಿಲ್ಲದ ಪ್ರಚಾರ ನೀಡುತ್ತದೆ. ಇದೇ ಪ್ರಚಾರ ರೈತರನ್ನು ಹಾದಿ ತಪ್ಪಿಸುತ್ತಿದೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ರೈತರು ಇಲಾಖೆಯಿಂದ ನೀಡಿದ ಭತ್ತವನ್ನು ಏನೋ ಆಸೆಯಿಂದ ಪಡೆದು ಬೆಳೆಯುತ್ತಾರೆ. ಹೀಗೆ ಮೂರು ವರ್ಷ ಇಲಾಖೆ ನೀಡಿದ ಭತ್ತ ಬಳಸಿದಾಗ ರೈತರಲ್ಲಿದ್ದ ಹಳೆಯ ಬೀಜದ ಭತ್ತಗಳಯ ಮೊಳೆಯುವ ಗುಣ ಕಳೆದು ಕೊಳ್ಳುತ್ತವೆ. ಇದರಿಂದ ಪಾರಂಪರಿಕ ಬೀಜವೇ ನಾಪತ್ತೆಯಾಗುತ್ತದೆ.

ಇಂಥ ಸಮಯದಲ್ಲಿ ನೆರೆ ಬಂದರೆ ಮೊದಲು ನಾಟಿ ಮಾಡಿದ ಸಬ್ಸಿಡಿ ಬೀಜದ ಸಸಿಗಳು ಕೊಳೆತು ಹೋಗುತ್ತವೆ. ಮೊದಲಾದರೆ ಈ ಸನ್ನಿವೇಶದಲ್ಲಿ ನೆರೆ ಇಳಿದ ಬಳಿಕ ತಮ್ಮಲ್ಲಿರುವ 90 ದಿನಗಳ ಬೇರೆ ಭತ್ತವನ್ನು ನಾಟಿ ಮಾಡಿ ಬೆಳೆ ಪಡೆಯುತ್ತಿದ್ದರು. ಈಗ ಇವೆಲ್ಲಾ ಅಸಾಧ್ಯವಾಗಿದೆ. ಇದರಿಂದ ರೈತರಿಗೆ ನೆರೆ ಬರೆಯಾಗಿದೆ. ಎಲ್ಲರ ಹಸಿವು ಕಳೆಯುವ ಭತ್ತ ಬೆಳೆಯುವ ರೈತ ಇಂದು ಕನಿಷ್ಠನಾಗಿದ್ದಾನೆ.

ಕೃಷಿ ವಿಶ್ವವಿದ್ಯಾಲಯಗಳು ಹಾದಿ ತಪ್ಪುತ್ತಿರುವುದೆಲ್ಲಿ?

ಕೃಷಿ ವಿವಿಗಳು ರೈತರಿಂದ ಪಾರಂಪಾರಿಕ ಭತ್ತದ ತಳಿಗಳನ್ನು ಸಂಗ್ರಹಿಸಿ ಅದಕ್ಕೆ ಅಕ್ಷರ ಮತ್ತು ಸಂಖ್ಯೆಗಳನ್ನೊಳಗೊಂಡ ವಿಶೇಷ ಹೆಸರು (ಅಲ್ಫಾ ನ್ಯೂಮರಿಕ್ ಕೋಡ್) ನೀಡಿ ಚಿಕ್ಕ ಚಿಕ್ಕ ತಾಕುಗಳಲ್ಲಿ ಬೆಳೆದು ಸಂರಕ್ಷಿಸುತ್ತವೆ. ಆಧುನಿಕ ರಾಸಾಯನಿಕ ಕೃಷಿಯಲ್ಲಿ ಇದನ್ನು ಬೆಳೆಯಲಾಗುತ್ತದೆ. ಅಲ್ಲದೇ ಆಯ್ದ ರೈತನ ಹೊಲದಲ್ಲಿ ರಾಸಾಯನಿಕ ಕೃಷಿ ಮಾಡಿಸಿ, ಅಧಿಕ ಇಳುವರಿ ತೋರಿಸಿ ವಿವಿಗಳು ಪ್ರಚಾರ ಪಡೆಯುತ್ತವೆ. ಅದೇ ಭತ್ತವನ್ನು ಗ್ರಾಮೀಣ ಭಾಗದ ಬೇರೆ ರೈತರು ಬೆಳೆಯುವಾಗ ಯಾವ ಮಾರ್ಗದರ್ಶನವೂ ದೊರೆಯುತ್ತಿಲ್ಲ. ಇದರಿಂದ ರೈತರು ಉತ್ತಮ ಬೇಳೆ ಪಡೆಯಲು ಅಸಮರ್ಥರಾಗುತ್ತಿದ್ದಾರೆ.

ಇದರ ಜತೆಗೆ ಭತ್ತದ ಡಿಕೋಡಿಂಗ್‌ ವ್ಯವಸ್ಥೆ ರೈತರ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ಒಂದೊಮ್ಮೆ ತನ್ನ ಹೊಲದಲ್ಲಿ ಬೆಳೆದ ಭತ್ತವನ್ನೇ ನೀಡಿದರೂ ಅದನ್ನು ರೈತ ಗುರುತಿಸಲಾರ. ಇದರಿಂದ ಆತ ತನ್ನ ಬೌದ್ಧಿಕ ಆಸ್ತಿ ಹಕ್ಕನ್ನೂ ಕಳೆದುಕೊಳ್ಳುತ್ತಾನೆ. ಜತೆಗೆ ಈ ಭತ್ತಕ್ಕೆ ಯಾರಾದರೂ ಪೇಟೆಂಟನ್ನು ಮಾಡಿಸಿಕೊಳ್ಳಬಹುದಾಗಿದೆ. ಆದ್ದರಿಂದ ರೈತರೆಲ್ಲ ಸಬ್ಸಿಡಿ ಬೀಜಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ಸಬ್ಸಿಡಿ ಭತ್ತ ತಂದು ಬಿತ್ತಿದ ರೈತ ನೆರೆಯ ಬರೆಯನ್ನು ಬೇಡವೆಂದರೂ ಪಡೆಯಬೇಕಾಗುತ್ತದೆ ಎಂಬುದು ಭತ್ತ ಸಂರಕ್ಷಣೆಯಲ್ಲಿ ಕೆಲಸ ಮಾಡುತ್ತಿರುವ ಸರಕಾರೇತರ ಸಂಸ್ಥೆಯೊಂದರ ಅಭಿಪ್ರಾಯ.

ಒಂದು ಸಮಸ್ಯೆಯ ಹಲವು ಮುಖ

ನೆರೆಗೀಡಾದ ಹೊಲದಲ್ಲಿನ ಭತ್ತದ ಪೈರು ಕೊಳೆತು ಕೊಚ್ಚಿಹೋದರೆ ರೈತ ತನ್ನ ಅನ್ನವಷ್ಟೇ ಅಲ್ಲದೇ ವರ್ಷವಿಡೀ ಜಾನುವಾರುಗಳಿಗೆ ಮೇವಾಗುವ ಭತ್ತದ ಹುಲ್ಲನ್ನೂ ಕಳೆದುಕೊಳ್ಳುತ್ತಾನೆ. ಇದರಿಂದ ಪಶು ಸಂಗೋಪನೆಯೂ ಕಷ್ಟವಾಗಿ ಸಂಸಾರ ನಿಭಾಯಿಸಲು ಸಾಲದ ಮೊರೆ ಹೋಗುವುದೇ ಅವನಿಗೆ ಉಳಿಯುವ ದಾರಿಯಾಗುತ್ತದೆ. ಇದೇ ನೆರೆಯ ಕಾರಣಕ್ಕೆ ಈಗಾಗಲೇ ಈ ಭಾಗದ ಜಾನುವಾರುಗಳ ಸಂಖ್ಯೆ ಮೊದಲಿಗಿಂತ ಶೇಕಡಾ 50 ರಷ್ಟು ಇಳಿದಿವೆ. ಜಾನುವಾರುಗಳ ಸಂಖ್ಯೆ ಕಡಿಮೆಯಾಗಿ ಮುಂದಿನ ದಿನಗಳಲ್ಲಿ ದಡ್ಡಿ ಗೊಬ್ಬರದ ಉತ್ಪಾದನೆಯೂ ಕಡಿಮೆಯಾಗಿ ಹೊಲದ ಇಳುವರಿಯೂ ಕಡಿಮೆಯಾಗುತ್ತದೆ. ‘ಭತ್ತದ ಹೊಲಗಳಿಗೆ ಎಕರೆವಾರು ಸಿಗುವ ಸಾಲದ ಸೌಲಭ್ಯವೂ ಕಡಿಮೆ. ಎರಡು ವರ್ಷ ನಿರಂತರ ನೆರೆ ಬಂದರೆ ರೈತ ಆತ್ಮಹತ್ಯೆಯಂಥ ನಿಲುವು ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ,” ಎನ್ನುತ್ತಾರೆ ಬನವಾಸಿ ಸಮೀಪದ ಶಂಕರಪ್ಪ.

ಸಮಸ್ಯೆಗೆ ಪರಿಹಾರವೇನು?

ಪ್ರತಿ ಗ್ರಾಮ ಪಂಚಾಯತ್‌ಗಳಲ್ಲೂ ಜೀವವೈವಿಧ್ಯ ದಾಖಲಾತಿ ಸಮಿತಿಗಳಿವೆ. ಇದರ ಸದಸ್ಯರಿಗೆ ತಾವೇನು ಮಾಡಬೇಕೆಂಬುದೇ ತಿಳಿದಿಲ್ಲ. ಇಲ್ಲಿ ರೈತರ ಪಾರಂಪರಿಕ ತಳಿಗಳ ಹೆಸರನ್ನು ಮೂಲ ಹೆಸರಿನಲ್ಲಿಯೇ ದಾಖಲಿಸಿಡಬೇಕು ಮತ್ತು ಅವುಗಳನ್ನು ಕೃಷಿವಿಶ್ವವಿದ್ಯಾಲಯಗಳು ಅಭಿವೃದ್ಧಿಪಡಿಸಿ ಪಾರಂಪರಿಕ ಮೂಲ ಹೆಸರಿನಲ್ಲಿಯೇ ದಾಖಲು ಮಾಡಿಕೊಳ್ಳಬೇಕು. ನಂತರ ಆಯಾ ಭೌಗೋಳಿಕ ಕ್ಷೇತ್ರಗಳಿಗೆ ಅನುಕೂಲವಾದ ಭತ್ತದ ಬೀಜಗಳನ್ನೇ ರೈತರಿಗೆ ಸಬ್ಸಿಡಿಯಲ್ಲಿ ನೀಡಬೇಕು ಎಂಬುದು ರೈತರ ಅಹವಾಲು.

ನೆರೆಗೂಳಿಗಳೆಂದೇ ಹೆಸರಾದ ನೆರೆಯನ್ನು ತಾಳಿಕೊಳ್ಳಬಲ್ಲ ಸ್ಥಳೀಯ ಭತ್ತದ ತಳಿಗಳ ಸಂರಕ್ಷಣೆ ಮಾಡಿ ವರದಾ ನದಿ ತಟದ ರೈತರಿಗೆ ವಿತರಿಸಬೇಕು. ಇಂಥ ತಳಮಟ್ಟದ ಬೇಡಿಕೆಗೆ ಅನುಗುಣವಾಗಿ ಕೃಷಿ ವಿಜ್ಞಾನಿಗಳು, ವಿದ್ಯಾಲಯಗಳು ಮತ್ತು ಸರಕಾರ ಸ್ಪಂದಿಸಬೇಕು. ಈ ಕೆಲಸ ಮಾಡದೆ ಕೇವಲ ಮೇಲ್ಮಟ್ಟದ ಸಾಲಮನ್ನಾ ಮಾಡಿದರೆ ಅದು ಯಾವ ರೈತನನ್ನೂ ರಕ್ಷಿಸದು ಎನ್ನುತ್ತಾರೆ ವರದಾ ತಟದ ರೈತರು.