ಉಡುಪಿಯ ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ; ಪ್ರಯೋಗದಾಚೆಗೆ ಸಮಸ್ಯೆಯೇ ಹೆಚ್ಚು
FEATURE STORY

ಉಡುಪಿಯ ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ; ಪ್ರಯೋಗದಾಚೆಗೆ ಸಮಸ್ಯೆಯೇ ಹೆಚ್ಚು

ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿಯವರಿಂದ ಸೃಷ್ಟಿಯಾದ ಸವಾಲುಗಳನ್ನು ಎದುರಿಸಲು ಉಡುಪಿಯ ಕೆಲವು ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಕಂಡುಕೊಂಡು ಪರಿಹಾರಗಳು ಇದೀಗ ಹೊಸ ಸಮಸ್ಯೆಗೆ ನಾಂದಿಯಾಗಿವೆ.

ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿಯವರಿಂದ ಸೃಷ್ಟಿಯಾದ ಸವಾಲುಗಳನ್ನು ಎದುರಿಸಲು ಉಡುಪಿಯ ಕೆಲವು ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಕಂಡುಕೊಂಡು ಪರಿಹಾರಗಳು ಇದೀಗ ಹೊಸ ಸಮಸ್ಯೆಗೆ ನಾಂದಿಯಾಗಿವೆ.

ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಎನ್ನುವುದು ನಿತ್ಯ ನಿರಂತರ. ಖಾಸಗಿ ಶಾಲೆಗಳ ಎಲ್‌ಕೆಜಿ ಮತ್ತು ಯುಕೆಜಿ ಆರಂಭವಾದ ನಂತರ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತದ ಸಮಸ್ಯೆ ಆರಂಭವಾಯಿತು. ಇದನ್ನು ಎದುರಿಸಲು ಒಂದಿಷ್ಟು ಹೊಸತನ ಕಾಣಬೇಕೆಂಬ ಆಶಯದಲ್ಲಿ ಉಡುಪಿಯ ಕೆಲವು ಸರಕಾರಿ ಶಾಲೆಗಳು ತಾವೂ ಕಿಂಡರ್‌ಗಾರ್ಟನ್ ಶಾಲೆಗಳನ್ನು ಆರಂಭಿಸಿದವು. ಆರಂಭದಲ್ಲಿ ಪ್ರಯತ್ನ ಯಶಸ್ವಿಯಾಯಿತು. ಬಡ ಪೋಷಕರ ಮಕ್ಕಳು ಮತ್ತು ಒಂದಷ್ಟು ಇತರರೂ ತಮ್ಮ ಮಕ್ಕಳನ್ನು ಸರಕಾರಿ ಶಾಲೆಯ ಎಲ್‌ಕೆಜಿಗಳಿಗೆ ಕಳುಹಿಸಲು ಆರಂಭಿಸಿದರು.

ಸಮಸ್ಯೆ ಆರಂಭವಾಗಿದ್ದೇ ಇಲ್ಲಿ. ಒಂದೆರಡು ಕನ್ನಡ ಮಾಧ್ಯಮದ ಸರಕಾರಿ ಶಾಲೆಗಳ ಅಧ್ಯಾಪಕರು ಮತ್ತು ಶಾಲಾಭಿವೃದ್ಧಿ ಸಮಿತಿಯವರು ಶಾಲೆ ಉಳಿಸಬೇಕು ಮತ್ತು ಮಕ್ಕಳಿಗೆ ಇಂಗ್ಲಿಷ್ ಜ್ಞಾನ ದಕ್ಕುವಂತಾಗಬೇಕು ಎಂಬ ಕಾಳಜಿಯಿಂದ ತಮ್ಮ ಸ್ವಂತ ಹಣ ಮತ್ತು ದಾನಿಗಳ ನೆರವಿನಲ್ಲಿ ಎಲ್‌ಕೆಜಿ ಮತ್ತು ಯುಕೆಜಿಗಳನ್ನು ಆರಂಭಿಸಿದರು. ಇದು ಉಳಿದ ಸರಕಾರಿ ಶಾಲೆಗಳಲ್ಲಿ ಸ್ವಾಭಿಮಾನದ ಪ್ರಶ್ನೆಯನ್ನು ಎಬ್ಬಿಸಿತು. ಅವರು ತಮ್ಮಿಂದ ಸಂಪನ್ಮೂಲ ಸಂಗ್ರಹಿಸಲು ಅಸಾಧ್ಯವಾದರೂ ಈ ಪ್ರಯೋಗಕ್ಕೆ ಕಟ್ಟು ಬಿದ್ದರು. ಖಾಸಗಿ ಶಾಲೆಗಳ ಹೊಡೆತ ತಡೆದುಕೊಳ್ಳುವ ಅನಿವಾರ್ಯತೆ ಮೀರಿ ಅವರು ಈ ರೀತಿ ಪ್ರಯೋಗ ಆರಂಭಿಸಲು ಮುಂದಾಗಿದ್ದು ಸಮಸ್ಯೆಗೆ ನಾಂದಿಯಾಯಿತು.

ಅಂಗನವಾಡಿಗಳಿಗೆ ಸಮಸ್ಯೆ

ಪ್ರತಿ ಸರಕಾರಿ ಶಾಲೆಯ ವಠಾರದಲ್ಲಿ ಅಂಗನವಾಡಿಗಳಿರುತ್ತವೆ. ಮೂರು ವರ್ಷದ ಹಾಗೂ ಸ್ವಲ್ಪ ಆಸುಪಾಸಿನ ವಯಸ್ಸಿನ ಪುಟ್ಟ ಮಕ್ಕಳನ್ನು ಸ್ಥಳೀಯ ಅಂಗನವಾಡಿಗೆ ಕಳುಹಿಸಲಾಗುತ್ತದೆ. ಸರ್ಕಾರವೂ ಕೂಡ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಮಕ್ಕಳಿಗೆ ವಿಶೇಷ ಯೋಜನೆ ರೂಪಿಸಿ ಪ್ರೋತ್ಸಾಹ ನೀಡುತ್ತಿದೆ.

ಉಡುಪಿಯ ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ; ಪ್ರಯೋಗದಾಚೆಗೆ ಸಮಸ್ಯೆಯೇ ಹೆಚ್ಚು

ಇತ್ತೀಚೆಗೆ ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ ಪ್ರಾರಂಭವಾಗುತ್ತಿರುವುದರಿಂದ ಅಂಗನವಾಡಿಯಲ್ಲಿರುವ ಮಕ್ಕಳನ್ನು ಎಲ್.ಕೆ.ಜಿ ಗೆ ಕರೆದುಕೊಂಡು ಹೋಗಲಾಗುತ್ತಿದೆ. “ಇದರಿಂದ ಅಂಗನವಾಡಿಯಲ್ಲಿ ಮಕ್ಕಳ ಕೊರತೆ ಕಾಣಿಸುತ್ತಿದೆ. ಇದಲ್ಲದೆ ಅಂಗನವಾಡಿಯಲ್ಲಿ ಪ್ರತಿ ಮಕ್ಕಳಿಗೆ ಪ್ರತ್ಯೇಕವಾದ ಪೌಷ್ಠಿಕಾಂಶಯುಕ್ತ ಆಹಾರವನ್ನು ನೀಡಲಾಗುತ್ತದೆ. ಆದರೆ ಸರಕಾರಿ ಕನ್ನಡ ಮಾಧ್ಯಮ ಶಾಲೆಯ ಎಲ್.ಕೆ.ಜಿ ಯಲ್ಲಿ ಪ್ರತ್ಯೇಕವಾದ ಊಟದ ವ್ಯವಸ್ಥೆ ಇಲ್ಲ,” ಎನ್ನುತ್ತಾರೆ ಉಡುಪಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯೊಬ್ಬರು.

ಇದೀಗ ಸರಕಾರಿ ಶಾಲೆಗಳಲ್ಲಿ ಇರುವ ಬಿಸಿಯೂಟವನ್ನೇ ಈ ಮಕ್ಕಳಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಸಣ್ಣ ಮಕ್ಕಳಿಗೆ ಬೇಕಾದ ಪೌಷ್ಠಿಕಾಂಶಗಳೇ ಬೇರೆ, ಬಿಸಿಯೂಟದ ಪೌಷ್ಠಿಕಾಂಶಗಳೇ ಬೇರೆ ಇದು ಬಡ ಪೋಷಕರ ಮಕ್ಕಳ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವೂ ಎದುರಾಗಿದೆ.

ಶಿಕ್ಷಣ ಇಲಾಖೆಯ ಅನುಮತಿಯಿಲ್ಲ

ಇನ್ನೊಂದು ಕಡೆ ಈಗಾಗಲೇ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಎಲ್.ಕೆ.ಜಿ ಪ್ರಾರಂಭಿಸಿರುವ ಯಾವುದೇ ಶಾಲೆಗಳಿಗೂ ಶಿಕ್ಷಣ ಇಲಾಖೆಯಿಂದ ಅಧಿಕೃತ ಅನುಮತಿ ಸಿಕ್ಕಿಲ್ಲ. ಸ್ಥಳೀಯ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಒಂದಿಷ್ಟು ಜವಾಬ್ದಾರಿ ತೆಗೆದುಕೊಂಡು ಈ ಪ್ರಯೋಗ ನಡೆಸುತ್ತಿದ್ದಾರೆ. ಇದರಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸದ್ಯಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿರುವುದೇನೋ ಸರಿ. ಆದರೆ ಪರೋಕ್ಷವಾಗಿ ಇವು ಬೀರುವ ಹಾನಿಗಳೇ ಜಾಸ್ತಿ.

ಶಾಲೆಗಳ ಪ್ರಯೋಗ ಅಂಗನವಾಡಿಗಳ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ, ‘ಶಾಲೆಗಳು ಎಲ್.ಕೆ.ಜಿ ಪ್ರಾರಂಭಿಸುವುದಕ್ಕಿಂತ ಅವುಗಳ ವಠಾರದಲ್ಲೇ ಇರುವ ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ಒಂದು ಗಂಟೆ ಇಂಗ್ಲಿಷ್ ಕಲಿಸಿದರೆ ಎಲ್ಲವೂ ಸರಿ ಹೋಗಿತ್ತದೆ. ಇದರಿಂದ ನಮಗೂ ತೊಂದರೆ ಇಲ್ಲ. ಮಕ್ಕಳ ಬೆಳವಣಿಗೆಗೂ ಪೂರಕವಾಗುತ್ತದೆ,’ ಎನ್ನುತ್ತಾರೆ ಉಡುಪಿಯ ಅಂಗನವಾಡಿ ಕಾರ್ಯಕರ್ತೆಯರೊಬ್ಬರು.

ಯಾವುದೇ ಪ್ರಯೋಗಗಳನ್ನು ಮಾಡುವ ಮುನ್ನ ಅದರ ಬಗ್ಗೆ ಕೂಲಂಕಷ ಅಧ್ಯಯನಗಳು ಅಗತ್ಯ. ಅದರಲ್ಲೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಣದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಾಗುತ್ತದೆ. ಆದರೆ, ಇಲ್ಲಿ ಅಂಥಹದ್ದೊಂದು ಅಧ್ಯಯನವೇ ನಡೆದಿಲ್ಲ. ಭವಿಷ್ಯದಲ್ಲಿ ಇದು ಪರಿಹರಿಸಲಾಗದ ಸಮಸ್ಯೆಗೆ ಕಾರಣವಾಗುವ ಮೊದಲು ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.