‘ರಾಜಧರ್ಮ’ವನ್ನು ಭೋದಿಸಿ; ಪಾಲಿಸಲಾಗದ ಅಟಲ್‌ಜಿ ಅಂತ್ಯಸಂಸ್ಕಾರ ಇಂದು...
FEATURE STORY

‘ರಾಜಧರ್ಮ’ವನ್ನು ಭೋದಿಸಿ; ಪಾಲಿಸಲಾಗದ ಅಟಲ್‌ಜಿ ಅಂತ್ಯಸಂಸ್ಕಾರ ಇಂದು...

ಗೋದ್ರಾ ಹತ್ಯಾಕಾಂಡದ ಬಳಿಕ ವಾಜಪೇಯಿ ದೆಹಲಿಯಲ್ಲಿ ನಡೆಸಿದ್ದ ಪತ್ರಿಕಾಗೋಷ್ಠಿಯೊಂದು ‘ರಾಜಧರ್ಮ” ಬೋಧನೆಯ ಕಾರಣದಿಂದಾಗಿ ಇಂದಿಗೂ ಕೂಡ ಚರ್ಚೆಯಲ್ಲಿದೆ. ಆದರೆ ತಾವು ಭೋಧಿಸಿದ ರಾಜಧರ್ಮವನ್ನು ವಾಜಪೇಯಿಯೇ ಪಾಲಿಸಲಿಲ್ಲ ಎಂಬದು ಇತಿಹಾಸದ ಕಹಿ ಸತ್ಯ.

ದೇಶ ಕಂಡ ಹೆಸರಾಂತ ಪ್ರಧಾನಿಗಳ ಪೈಕಿ ಒಬ್ಬರಾಗಿರುವ ಅಟಲ್‌ ಬಿಹಾರಿ ವಾಜಪೇಯಿ ಪಾರ್ಥೀವ ಶರೀರ ಅಂತಿಮ ದರ್ಶನಕ್ಕೆ ಲಭ್ಯ ಇದೆ. ಸಂಜೆ 4 ಗಂಟೆಗೆ ದೆಹಲಿಯ ‘ಸ್ಮೃತಿ ಸ್ಥಲ’ದಲ್ಲಿ ವಾಜಪೇಯಿ ಕಳೇಬರಕ್ಕೆ ಅಂತಿಮ ಸಂಸ್ಕಾರ ನೆರವೇರಲಿದೆ. ಅವರ ಜತೆಗೆ, ಹಿಂದೊಮ್ಮೆ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಭೋದಿಸಿದ ‘ರಾಜಧರ್ಮ’ದ ಪಾಠ ಕೂಡ ಇತಿಹಾಸ ಸೇರಲಿದೆ. 

ಅದು 2002ರ ಏಪ್ರಿಲ್‌ 7ನೇ ತಾರೀಖು. ದೇಶದ ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಸಿಂಗಾಪೂರ್‌ ಮತ್ತು ಕಾಂಬೋಡಿಯಾಗಳಿಗೆ 5 ದಿನದ ಪ್ರವಾಸ ಹೊರಡುವ ತರಾತುರಿಯಲ್ಲಿದ್ದರು. ವಿಮಾನ ಏರುವುದಕ್ಕೂ ಕೆಲವು ಗಂಟೆಗಳ ಮುಂಚೆ ವಾಜಪೇಯಿ ದೆಹಲಿಯಲ್ಲಿ ಪತ್ರಕರ್ತರ ಜತೆ ಸಂವಾದ ನಡೆಸಿದ್ದರು. ವಾಜಪೇಯಿ ಮುಖದಲ್ಲಿ ಚಿಂತೆಯ ಗೆರೆಗಳು ಮೂಡಿದ್ದವು.

ವಿಮಾನ ಆಕಾಶಕ್ಕೆ ಹಾರಿದ ನಂತರವೂ ಕೂಡ ವಾಜಪೇಯಿ ಮುಖದಲ್ಲಿ ಮೂಡಿದ್ದ ಚಿಂತೆ ಹಾಗೆಯೇ ಇತ್ತು. ವಾಜಪೇಯಿಯವರ ಅಳಿಯ ರಂಜನ್‌ ಭಟ್ಟಾಚಾರ್ಯ, ವಾಜಪೇಯಿಯವರ ಸಚಿವ ಸಂಪುಟ ಸದಸ್ಯ ಅರುಣ್‌ ಶೌರಿಯವರ ಬಳಿ ಅಟಲ್‌ಜಿ ಅವರ ಚಿಂತೆಗೆ ಕಾರಣವೇನು ಎಂದು ಕೇಳುವಂತೆ ತಿಳಿಸಿದ್ದರು. ವಾಜಪೇಯಿ ಮನಸ್ಸು ಸರಿ ಇಲ್ಲದಿದ್ದನ್ನು ಮುಂಚೆಯೇ ಗುರುತಿಸಿದ್ದ ಅರುಣ್‌ ಶೌರಿ, ಪ್ರಧಾನಿಗಳು ಅಷ್ಟು ಚಿಂತಾಕ್ರಾಂತರಾಗಲು ಕಾರಣವಾಗಿರುವುದು ‘ಗುಜರಾತಿನ ಗಲಭೆ’ ಎನ್ನುವುದನ್ನು ಅರ್ಥಮಾಡಿಕೊಂಡಂತೆ ಇತ್ತು. ಗಲಭೆಯ ಜತೆಗೆ ತಾವು ಭೋಧಿಸಿದ ‘ರಾಜಧರ್ಮ’ದ ಪಾಠವೂ ಅಟಲ್‌ರನ್ನು ಚುಚ್ಚುತ್ತಿತ್ತು.

ಅದು 2002ರ ಫೆಬ್ರವರಿ 27ನೇ ದಿನ, ಗೋದ್ರಾ ಬಳಿ ಸಬರಮತಿ ಎಕ್ಸ್‌ಪ್ರೆಸ್‌ ರೈಲಿನ ಹಲವು ಬೋಗಿಗಳು ಬೆಂಕಿಗೆ ಆಹುತಿಯಾಗಿದ್ದವು. ಜತೆಗೆ ಹಿಂದುಗಳು ಪವಿತ್ರ ಸ್ಥಳ ಎಂದು ಭಾವಿಸಿದ್ದ ರಾಮ ಜನ್ಮಭೂಮಿ ಅಯೋದ್ಯೆಯಿಂದ ಬರುತ್ತಿದ್ದ ರೈಲು, ಹಿಂದೂ ತೀರ್ಥ ಯಾತ್ರಿಕರನ್ನು ಹೊತ್ತು ಬರುತ್ತಿತ್ತು. ಮುಸ್ಲಿಂ ಬಾಹುಳ್ಯವಿದ್ದ ಗೋದ್ರಾ ಬಳಿಯೇ ರೈಲಿನ ಭೋಗಿಗಳಿಗೆ ಬೆಂಕಿ ಬಿದ್ದದ್ದು ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಇದಾದ ನಂತರ ದೊಡ್ಡ ಮಟ್ಟದ ಹಿಂಸಾಚಾರ ಭುಗಿಲೆದ್ದಿತ್ತು. ಹಲವು ದಿನಗಳಿಂದ ದಾಳಿ ನಡೆಸಲು ಕಾಯುತ್ತಿದ್ದ ಗುಂಪು ಗೋದ್ರಾದ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಬಹುಪಾಲು ಪತ್ರಿಕೆಗಳಲ್ಲಿನ ವರದಿಗಳಾಗಿದ್ದವು. ಸತ್ತ ಸಹಸ್ರಾರು ಸಂಖ್ಯೆಯ ಜನರಲ್ಲಿ ಮುಸ್ಲಿಂಮರ ಸಂಖ್ಯೆಯೇ ಹೆಚ್ಚಿತ್ತು ಎನ್ನುವುದು ನಿರ್ವಿವಾದ. ಜತೆಗೆ ನೂರಾರು ಜನ ತೀವ್ರವಾಗಿ ಗಾಯಗೊಂಡಿದ್ದರು, ತಮ್ಮ ಸೂರುಗಳನ್ನು ಕಳೆದುಕೊಂಡಿದ್ದರು. ಸ್ವತಂತ್ರ ಭಾರತದ ಘೋರ ಹತ್ಯಕಾಂಡಗಳಲ್ಲಿ ಗೋದ್ರಾ ಗಲಭೆಯೂ ಕೂಡ ಜಾಗ ಪಡೆದಿತ್ತು. ಸುಮಾರು ತಿಂಗಳ ಕಾಲ ಹಿಂಸಾಚಾರ ಮುಂದುವರಿದಿತ್ತು.

ಗೋದ್ರಾ ಗಲಭೆಯ ಒಂದು ದೃಶ್ಯ. 
ಗೋದ್ರಾ ಗಲಭೆಯ ಒಂದು ದೃಶ್ಯ. 
/nytimes.com

ಸಹಾಯಕ್ಕಾಗಿ ಕೈ ಚಾಚಿ ಫೋನ್‌ ಮಾಡುತ್ತಿದ್ದ ಮುಸ್ಲಿಂ ನಾಯಕರಿಗೆ ಸಹಾಯ ಮಾಡದೇ ಕೈ ಚೆಲ್ಲಿದ ಮುಖ್ಯಮಂತ್ರಿ ಮೋದಿ ಕಡೆಗೆ ನಿಗಾ ವಹಿಸಲಾಗದ ಪ್ರಧಾನಿ ಎಂದು ವಾಜಪೇಯಿಯ ಮೇಲೆ ಆರೋಪಗಳು ಕೇಳಿಬಂದಿದ್ದವು. ಗಲಭೆ ಆರಂಭಗೊಂಡು ಕೆಲವು ಗಂಟೆಗಳು ಕಳೆಯುವ ಮೊದಲೇ ಆ ಮುಸ್ಲಿಂ ನಾಯಕರು ಕೂಡ ಹತರಾಗಿದ್ದರು. ಗಲಭೆಯನ್ನು ತಡೆಯಬೇಕಿದ್ದ ಮೋದಿ, ಪೋಲಿಸರನ್ನು ಸುಮ್ಮನಿರಿಸಿ ಗಲಭೆ ಮುಂದುವರೆಯುವಂತೆ ಮಾಡಿದ್ದರು ಎಂಬ ಅರೋಪವೂ ಕೇಳಿಬಂದಿತ್ತು.

ದೇಶದ್ಯಾಂತ ಪ್ರಧಾನಿ ವಾಜಪೇಯಿ ಮತ್ತು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ವಿರುದ್ಧ ಹೋರಾಟಗಳು ಆರಂಭಗೊಂಡಿದ್ದವು. ಮುಖ್ಯಮಂತ್ರಿ ಮೋದಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿರುವ ಕಾರಣಕ್ಕಾಗಿ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಹೋರಾಟಗಳು ಅರಂಭವಾಗಿದ್ದವು. ಗುಜರಾತ್‌ ರಾಜ್ಯ ಬಿಜೆಪಿ ಮತ್ತು ಕೇಂದ್ರ ಬಿಜೆಪಿ ಸರಕಾರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದವು.

ಏಪ್ರಿಲ್‌ 7ರಂದು ದೆಹಲಿಯಲ್ಲಿ ಈ ಕುರಿತೇ ಸುದ್ದಿ ಗೋಷ್ಠಿಯನ್ನು ಕರೆಯಲಾಗಿತ್ತು. ಪ್ರಧಾನಿ ವಾಜಪೇಯಿಯವರ ಪಕ್ಕದಲ್ಲೇ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಕೂಡ ಆಸೀನರಾಗಿದ್ದರು. ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಸಾವಧಾನವಾಗಿ ಉತ್ತರಿಸಿದ ವಾಜಪೇಯಿಗೆ ಕೊನೆಯ ಪ್ರಶ್ನೆ ಕೊಂಚ ಕಸಿವಿಸಿಯನ್ನು ಉಂಟುಮಾಡಿತ್ತು. ಗಲಭೆಗೆ ಸಂಬಂಧಿಸಿದಂತೆ ಗುಜರಾತ್‌ ಮುಖ್ಯಮಂತ್ರಿಗೆ ನೀವೇನು ಸಂದೇಶ ನೀಡುತ್ತೀರಿ ಎನ್ನುವುದೇ ಆ ಕೊನೆಯ ಪ್ರಶ್ನೆ.

ಪಕ್ಕದಲ್ಲೇ ಕುಳಿತಿದ್ದ ನರೇಂದ್ರ ಮೋದಿಯನ್ನು ಉದ್ದೇಶಿಸಿ ಶಾಂತಚಿತ್ತದಿಂದಲೇ ಮಾತು ಆರಂಭಿಸಿದ್ದ ವಾಜಪೇಯಿ, ‘ರಾಜಧರ್ಮ’ವನ್ನು ಪಾಲಿಸುವಂತೆ ಮೋದಿಗೆ ಸೂಚಿಸಿದ್ದರು.

ಅಂದು ವಾಜಪೇಯಿ ಹೇಳಿದಂತೆ, ‘ರಾಜಧರ್ಮ’ ಎನ್ನುವುದು ತುಂಬಾ ಅರ್ಥವತ್ತಾದ ಪದ. “ರಾಜಧರ್ಮ ಆಡಳಿತ ವ್ಯಕ್ತಿಗಳಿಗೆ ಸಂಬಂಧಿಸಿದ ವಿಷಯ. ರಾಜಧರ್ಮ ಎಂದರೆ ಜಾತಿ, ಧರ್ಮ, ವರ್ಗ ಯಾವ ಆಧಾರದ ಮೇಲೆಯೂ ಕೂಡ ತಾರತಮ್ಯ ಮಾಡದೇ, ಎಲ್ಲಾ ಜನರನ್ನೂ ಕೂಡ ಸಮಾನವಾಗಿ ನೋಡುವುದು.”

ಪಕ್ಕದಲ್ಲಿದ್ದ ಮೋದಿ ಮಾರ್ಮಿಕವಾಗಿ ನಗುತ್ತಲೇ ಇದ್ದರು. ರಾಜಧರ್ಮದ ಕುರಿತು ವಿವರಣೆ ನೀಡುತ್ತಿದ್ದ ವಾಜಪೇಯಿಯವರು ಇನ್ನು ಹೆಚ್ಚು ಮಾತನಾಡುವ ಮೊದಲೇ ವಾಜಪೇಯಿಯವರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಪ್ರಯತ್ನಿಸಿದ ಮೋದಿ, ನಗುತ್ತಲೇ “ಹಮ್‌ ಬೀ ವಹಿ ಕರ್‌ ರಹೇ ಹೈನ್‌, ಸಾಹೀಬ್‌,” (ನಾವು ಮಾಡುತ್ತಿರುವುದೂ ಕೂಡ ಅದೇ ಅಲ್ಲವೇ ಸಾಹೇಬ್‌?) ಎಂದು ಪ್ರಶ್ನಿಸಿದ್ದರು. ಆ ಮಾತಿನಲ್ಲಿ ಒಂದಷ್ಟು ಕುಹಕವೂ ತುಂಬಿತ್ತು.

ತಕ್ಷಣ ತಮ್ಮ ಮಾತಿನ ದಾಟಿಯನ್ನು ಬದಲಾಯಿಸಿಕೊಂಡಿದ್ದ ವಾಜಪೇಯಿ, “ನನಗೆ ಖಚಿತತೆ ಇದೆ. ನರೇಂದ್ರ ಭಾಯಿ ಮಾಡುತ್ತಿರುವುದೂ ಕೂಡ ಅದನ್ನೇ,” ಎಂದರು. ಒಂದು ಕ್ಷಣ ಎಲ್ಲರಲ್ಲೂ ಪ್ರಶ್ನೆಯೊಂದು ಮೂಡಿತ್ತು. ಹಾಗಾದರೆ ವಾಜಪೇಯಿ ಹೇಳುತ್ತಿರುವ ‘ರಾಜಧರ್ಮ’ ಯಾವ ಅರ್ಥವನ್ನು ಸ್ಪುರಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಸೌಮ್ಯವಾದಿ ಎನಿಸಿಕೊಂಡಿದ್ದ ವಾಜಪೇಯಿಯವರ ಸೌಮ್ಯವಾದ ಮಾತುಗಳು ಅರ್ಥವಾಗದೇ ಉಳಿದುಕೊಂಡಿದ್ದವು.

ಅಂದು 2002ರ ಏಪ್ರಿಲ್‌ 12ನೇ ದಿನ; ತಮ್ಮ ಪ್ರವಾಸವನ್ನು ಮುಗಿಸಿಕೊಂಡು ಭಾರತಕ್ಕೆ ಹಿಂತಿರುಗಿದ ವಾಜಪೇಯಿ ಗೋವಾದಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದರು. ಅದೇ ಸಂಧರ್ಭದಲ್ಲಿ ಸಾರ್ವಜನಿಕರನ್ನು ಕುರಿತು ಮಾತನಾಡಿದ್ದ ವಾಜಪೇಯಿ, ಅವರನ್ನು ಸೌಮ್ಯವಾದಿ ಎಂದು ನಂಬಿದ್ದ ಜನಗಳಲ್ಲಿ ದೊಡ್ಡದೊಂದು ಆಶಾಭಂಗವನ್ನು ಉಂಟುಮಾಡಿದ್ದರು.

“ಜಗತ್ತಿನಲ್ಲಿ ಎಲ್ಲೆಲ್ಲಿ ಮುಸಲ್ಮಾನರು ಹೆಚ್ಚಾಗಿದ್ದಾರೋ ಅಲ್ಲೆಲ್ಲಾ ಜಗಳಗಳಿವೆ. ಭಾರತದಲ್ಲಿನ ಇತರೆ ಧರ್ಮಗಳಿಗೆ ಎಷ್ಟೆಷ್ಟು ಸ್ವಾತಂತ್ರ್ಯ ನೀಡಬೇಕು ಎನ್ನುವುದನ್ನು ನಿರ್ಧರಿಸುವ ಹಕ್ಕು ಹಿಂದೂಗಳಿಗಿದೆ. ಇಸ್ಲಾಂ ಒಂದು ಕಡೆ ಸಹಿಷ್ಣುತೆ ಬಗ್ಗೆ ಮಾತನಾಡಿದರೆ ಮತ್ತೊಂದೆಡೆ ಉಗ್ರವಾದಿತ್ವವನ್ನು ಪ್ರೋತ್ಸಾಹಿಸುತ್ತದೆ. ಮುಸಲ್ಮಾನರಿಗೆ ಶಾಂತಿ ಸಹಬಾಳ್ವೆಯಲ್ಲಿ ನಂಬಿಕೆಯಿಲ್ಲ. ಅವರು ಎಲ್ಲರೊಂದಿಗೆ ಕೂಡಿ ಬದುಕುವುದಿಲ್ಲ,” ಎಂದು ಘರ್ಜಿಸಿದ್ದ ವಾಜಪೇಯಿ, ತಮ್ಮ ಸೌಮ್ಯವಾದದೊಳಗಿನ ಕಟ್ಟರ್‌ ಹಿಂದುತ್ವವಾದವನ್ನು ದೇಶದ ಮುಂದೆ ತೆರೆದಿಟ್ಟಿದ್ದರು.

ಭೀಕರ ನರಮೇಧವನ್ನು ನಡೆಸಲು ಅವಕಾಶ ಮಾಡಿಕೊಟ್ಟ ಅಪಾಧನೆ ಹೊತ್ತಿದ್ದ ನರೇಂದ್ರ ಮೋದಿಗೆ ಬೆಂಬಲವಾಗಿ ನಿಂತಿದ್ದ ವಾಜಪೇಯಿ, “ಮೊದಲು ರೈಲಿನ ಬೋಗಿಗಳಿಗೆ ಬೆಂಕಿ ಹಚ್ಚಿ ಗಲಭೆ ಪ್ರಾರಂಭಿಸಿದ್ದು ಯಾರು? ನಾವು ಸಾಮರಸ್ಯದ ಬದುಕನ್ನು ಬಯಸುತ್ತೇವೆ. ನಮ್ಮ ಜಾತ್ಯಾತೀತೆಯನ್ನು ಯಾರೂ ಪ್ರಶ್ನಿಸಬಾರದು,” ಎಂದು ತಮ್ಮ ಹಿಂದುತ್ವಕ್ಕೆ ಸಹಬಾಳ್ವೆಯ ಬಣ್ಣ ಬಳಿದಿದ್ದರು.

ತಮ್ಮ ಈ ಮಾತುಗಳ ನಂತರ ಸೌಮ್ಯವಾಗಿ ಕೋಮುಗಲಭೆಗಳು ಕೊನೆಗೊಳ್ಳಬೇಕು ಎಂದು ಆಗ್ರಹಿಸಿದ್ದ ವಾಜಪೇಯಿ, ಕೇವಲ ಕೆಲವು ದಿನಗಳ ಹಿಂದೆ ತಾವೇ ಉಚ್ಚರಿಸಿದ್ದ ರಾಜ್ಯಧರ್ಮ ಪಾಲನೆಯನ್ನು ಅದೆಷ್ಟರ ಮಟ್ಟಿಗೆ ಪಾಲಿಸಿದರು ಎಂಬ ಪ್ರಶ್ನೆಯನ್ನು ಉಳಿಸಿದ್ದರು.

ಇಂದು ಅದೇ ವಾಜಪೇಯಿ ಅಂತ್ಯ ಸಂಸ್ಕಾರ. ಅಂದು ವಾಜಪೇಯಿ ತಮ್ಮ ಕಾವ್ಯಗಳಲ್ಲಿ ಭಾರತೀಯರೆಲ್ಲರೂ ಒಂದೇ ಎಂದಿದ್ದರು. ಮಾತಿಗಾದರೂ ಕೂಡ ರಾಜ್ಯಧರ್ಮದ ಹೆಸರಿನಲ್ಲಿ ಜಾತ್ಯಾತೀತತೆಯ ಪ್ರಸ್ತಾಪ ಮಾಡಿದ್ದರು. ಇಂದು ಅದೆಲ್ಲವೂ ಕೂಡ ಘತಕಾಲ ಘಟನೆಗಳಂತಾಗಿವೆ. ಅವರೊಟ್ಟಿಗೆ ಅಂದು ನರೇಂದ್ರ ಮೋದಿಗೆ ನೀಡಿದ್ದ ‘ರಾಜಧರ್ಮ’ದ ಸಂದೇಶವೂ ಕೂಡ ಮಣ್ಣಾಗಲಿದೆ. ಆದರೆ ಬಿಜೆಪಿ ನಾಯಕರು ಅಧಿಕಾರದಲ್ಲಿರುವಷ್ಟು ದಿನ ವಾಜಪೇಯಿ ಅವರ ಪಾಲಿಸಲಾಗದ ರಾಜ್ಯ ಧರ್ಮ ನೆನಪಾಗುತ್ತಲೇ ಇರುತ್ತದೆ.