samachara
www.samachara.com
ಒನ್ ಅಂಡ್ ಓನ್ಲೀ ಇಂದಿರಾ ನೂಯಿ: ಸಿಇಓ ಹುದ್ದೆಯಾಚೆಗೆ ಸದ್ದು ಮಾಡಿದ್ದು ಹೇಗೆ?
ಚಿತ್ರ ಕೃಪೆ: ಯೂಥ್‌ ಇನ್‌ ಕಾರ್ಪೊರೇಟೆಡ್‌
FEATURE STORY

ಒನ್ ಅಂಡ್ ಓನ್ಲೀ ಇಂದಿರಾ ನೂಯಿ: ಸಿಇಓ ಹುದ್ದೆಯಾಚೆಗೆ ಸದ್ದು ಮಾಡಿದ್ದು ಹೇಗೆ?

ಮುಂದೊಂದು ದಿನ ‘ಬ್ಯುಸಿನೆಸ್‌ ಇನ್‌ಸೈಡರ್‌’ಗೆ ನೀಡಿದ ಸಂದರ್ಶನದಲ್ಲಿ ಆಕೆ, ‘ನಾನು ಇವತ್ತು ಈ ಸ್ಥಾನದಲ್ಲಿ ನಿಲ್ಲಲು ನನ್ನ ಪತಿಯೇ ಕಾರಣ’ ಎಂದು ಹೇಳಿದ್ದರು.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಇಂದಿರಾ ನೂಯಿ; ಪೆಪ್ಸಿಕೋ ಎಂಬ ದೈತ್ಯ ಬಹುರಾಷ್ಟ್ರೀಯ ಕಂಪನಿಯನ್ನು 17 ವರ್ಷಗಳ ಕಾಲ ಮುನ್ನಡೆಸಿದ ದಿಟ್ಟ ಮಹಿಳೆ.

ಆರು ತಿಂಗಳು ವರ್ಷಕ್ಕೊಮ್ಮೆ ಉದ್ಯೋಗ ಬದಲಿಸುವ ಈ ಕಾಲಘಟ್ಟದಲ್ಲಿ 24 ವರ್ಷ ಒಂದೇ ಕಂಪನಿಯಲ್ಲಿ, ಅದೂ 17 ವರ್ಷ ಸಿಇಒ ಹುದ್ದೆಯಲ್ಲಿ ಇರುವುದು ಸುಲಭದ ಮಾತಲ್ಲ. ಈ ಅವಧಿಯಲ್ಲಿ ಆಕೆಯ ಮುಂದೆ ಕೌಟುಂಬಿಕ ಉದ್ಯಮ ಮತ್ತು ಉದ್ಯೋಗದ ಸವಾಲುಗಳು ಎಲ್ಲವೂ ಇತ್ತು. ಆಕೆ ಅದೆಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದಳು. ಪರಿಣಾಮ ಇವತ್ತು ಪೆಪ್ಸಿಕೋ ಕಂಪನಿಯಿಂದ ಆಕೆ ನಿರ್ಗಮಿಸುತ್ತಿರುವುದು ಜಾಗತಿಕ ಸುದ್ದಿಯಾಗಿದೆ. ಇದು ಸಿಇಒ ಹುದ್ದೆಯಾಚೆಗಿನ ಮಹಿಳೆಯೊಬ್ಬರ ಯಶಸ್ಸಿನ ಕಥೆ.

ಪುರುಷರು ಮತ್ತು ಮಹಿಳೆಯರು ಸಮಾನ ಎಂಬ ವಾದಗಳೇನೇ ಇರಲಿ, ವಾಸ್ತವ ಪರಿಸ್ಥಿತಿ ಹಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಇದಕ್ಕಿಂತಲೂ ಕೆಟ್ಟ ಕಾಲಘಟ್ಟದಲ್ಲಿ ಹುಟ್ಟಿದಾಕೆ ಇಂದಿರಾ ನೂಯಿ. ಕರುಣಾನಿಧಿಯ ಸಾವಿನ ಸಂತಾಪದಲ್ಲಿರುವಾಗ, ಅದೇ ಚೆನ್ನೈನಲ್ಲಿ ಕರುಣಾನಿಧಿ ಮೊದಲ ಚುನಾವಣೆಯನ್ನು ಎದುರಿಸುವ ಎರಡು ವರ್ಷ ಮೊದಲು ಅಂದರೆ 1955ರ ಅಕ್ಟೋಬರ್‌ 28ರಂದು ಜನಿಸಿದರು ಇಂದಿರಾ ನೂಯಿ. ನೂಯಿಯದ್ದು ಅಪ್ಪಟ ತಮಿಳು ಕುಟುಂಬ. ತಂದೆ ಬ್ಯಾಂಕ್‌ ಒಂದರಲ್ಲಿ ನೌಕರಿಯಲ್ಲಿದ್ದರು, ತಾಯಿ ಗೃಹಿಣಿ.

ಶೈಕ್ಷಣಿಕವಾಗಿ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಾ ಹೊರಟರು ಇಂದಿರಾ ನೂಯಿ. ಶಿಕ್ಷಣಕ್ಕೆ ಪೂರಕ ವಾತಾವರಣ ಮನೆಯಲ್ಲಿತ್ತು. ಆದರೆ 18ನೇ ವಯಸ್ಸಿಗೆ ಮದ್ರಾಸ್‌ ವಿವಿಯಿಂದ ವಿಜ್ಞಾನದಲ್ಲಿ ಪದವಿ ಪಡೆದು ಹೊರಬಿದ್ದ ನೂಯಿಗೆ ಹೊಸ ಸಮಸ್ಯೆ ಆರಂಭವಾಯಿತು. ಐಐಎಂ ಕೊಲ್ಕತ್ತಾದಲ್ಲಿ ಎಂಬಿಎ ಪದವಿ ಪಡೆಯುವುದು ಆಕೆಯ ಉದ್ದೇಶವಾಗಿತ್ತು. ಆದರೆ ಅವತ್ತಿನ ಕಾಲಕ್ಕೆ ಮದುವೆಯಾಗದೆ ಹೆಣ್ಣುಮಕ್ಕಳನ್ನು ಹೊರಗೆ ಕಳುಹಿಸುವ ಪರಿಪಾಠಗಳು ಇರಲಿಲ್ಲ. ಅದರಲ್ಲೂ ಬೇರೊಂದು ರಾಜ್ಯಕ್ಕೆ ಒಂಟಿ ಹೆಣ್ಣನ್ನು ಕಳುಹಿಸಲು ನೂಯಿ ತಾಯಿ ಸುತಾರಾಂ ಒಪ್ಪಲಿಲ್ಲ. ಮದುವೆ ಮಾಡಿ ಆಮೇಲೆ ಆಕೆಯನ್ನು ಉನ್ನತ ವ್ಯಾಸಾಂಗಕ್ಕೆ ಕಳುಹಿಸುವುದು ಅಮ್ಮನ ಉದ್ದೇಶವಾಗಿತ್ತು. ಹೀಗಿದ್ದೂ ತಂದೆ ಮತ್ತು ಕುಟುಂಬದ ಇತರ ಸದಸ್ಯರ ಬೆಂಬಲದಿಂದ ತಮಿಳುನಾಡು ಗಡಿ ದಾಟಿ ಕೊಲ್ಕತ್ತಾಗೆ ಕಾಲಿಟ್ಟರು ನೂಯಿ.

1976ರಲ್ಲಿ ಎಂಬಿಎ ಪದವಿ ಪ್ರಮಾಣಪತ್ರದೊಂದಿಗೆ ಹೊರಬಂದ ನೂಯಿಗೆ ಜಾನ್ಸನ್‌ ಆಂಡ್‌ ಜಾನ್ಸನ್‌ ಕಂಪನಿಯಲ್ಲಿ ಪ್ರೊಡಕ್ಟ್‌ ಮ್ಯಾನೇಜರ್‌ ಹುದ್ದೆ ಸಿಕ್ಕಿತ್ತು. ಅಲ್ಲಿ ಜಾಸ್ತಿ ದಿನ ಉಳಿಯದೆ ದೂರದ ಅಮೆರಿಕಾದ ಯಾಲೆ ಯುನಿವರ್ಸಿಟಿಗೆ ಹೆಚ್ಚಿನ ವ್ಯಾಸಾಂಗಕ್ಕಾಗಿ ಹೊರಟು ನಿಂತರು ನೂಯಿ. ಮುಂದೆ ಆದು ಆಕೆಯ ಬದುಕಿಗೆ ದೊಡ್ಡ ತಿರುವು ನೀಡಿದ ಘಟನೆಯಾಯಿತು. ಯಾಲೆಯಲ್ಲಿ ‘ಸಾರ್ವಜನಿಕ ಮತ್ತು ಖಾಸಗಿ ಆಡಳಿತ’ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನೂಯಿ ಮುಂದೆ ಬೋಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌, ಮೊಟೊರೋಲಾ ಮತ್ತು ಏಷಿಯಾ ಬ್ರೌನ್‌ ಬವೇರಿ ಕಂಪನಿಗಳಲ್ಲಿ ಒಂದಷ್ಟು ಸಮಯ ಕೆಲಸ ಮಾಡಿದರು.

ಪೆಪ್ಸಿಕೋದ ದಿನಗಳು:

ಇದರ ನಡುವೆಯೇ ಆಕೆಗೆ ಮದುವೆಯಾಯಿತು. ರಾಜ್‌. ಕೆ ನೂಯಿ ಎಂಬವರನ್ನು 1981ರಲ್ಲಿ ವರಿಸಿದರು ಇಂದಿರಾ ನೂಯಿ. ಮುಂದಿನದು ಆಕೆಯ ಪಾಲಿಗೆ ಒನ್‌ ಆಂಡ್ ಓನ್ಲಿ ಪೆಪ್ಸಿ ಯುಗ. 1994ರಲ್ಲಿ ಪೆಪ್ಸಿಕೋ ಕಂಪನಿಗೆ ಕಾಲಿಟ್ಟ ನೂಯಿ ಮತ್ತೆಂದೂ ತಿರುಗಿ ನೋಡಲಿಲ್ಲ. 2001ರಲ್ಲಿ ಸಂಸ್ಥೆಯ ಸಿಇಒ ಹುದ್ದೆಗೆ ಏರಿದರು. ಭಾರತೀಯ ಸಂಜಾತ ಮಹಿಳೆಯೊಬ್ಬರು ಖ್ಯಾತ ಬಹುರಾಷ್ಟ್ರೀಯ ಕಂಪನಿಯ ಉನ್ನತ ಹುದ್ದೆಗೇರಿದ ಮೊದಲ ದೃಷ್ಟಾಂತ ಇದಾಗಿತ್ತು. ನೂಯಿ ಎಲ್ಲರ ಹುಬ್ಬೇರಿಸಿದರು.

ಇಂದಿರಾ ನೂಯಿ ಚೆನ್ನೈನ ದಿನಗಳು
ಇಂದಿರಾ ನೂಯಿ ಚೆನ್ನೈನ ದಿನಗಳು

ಹಾಗಂಥ ಇಂದಿರಾ ನೂಯಿಗೆ ಪೆಪ್ಸಿಕೋದ ದಿನಗಳು ಸುಲಭದ್ದಾಗಿರಲಿಲ್ಲ. ಬೃಹತ್‌ ಕಂಪನಿಯ ಜವಾಬ್ದಾರಿ ಆಕೆಯ ಮೇಲಿತ್ತು. ಇಬ್ಬರು ಮಕ್ಕಳು ಬೆಳೆಯುತ್ತಿದ್ದರು. ಅವರಿಗೆ ತಾಯಿಯಾಗಬೇಕಾದ ಹೊಣೆ ಇತ್ತು. ಇದರ ನಡುವೆ ಗಂಡನಿಗೆ ಒಂದಷ್ಟು ಸಮಯವನ್ನು ಮೀಸಲಿಡಬೇಕಿತ್ತು.

ಅದೊಂದು ದಿನ ಆಕೆಯ ಕಚೇರಿಯನ್ನು ನವೀಕರಣ ನಡೆಯುತ್ತಿತ್ತು. ಸಹಜವಾಗಿ ಹಳೆಯ ನೂಯಿ ಟೇಬಲ್‌ ಕಿತ್ತು ಅಲ್ಲಿಗೆ ಆಡಳಿತ ಮಂಡಳಿಯವರು ಹೊಸ ಡೆಸ್ಕ್‌ ತಂದಿಟ್ಟರು. ಅದನ್ನು ನೋಡಿದ ಆಗ ಆಕೆಯ ಸಣ್ಣ ಮಗಳು, ‘ಅಮ್ಮ ಆ ಡೆಸ್ಕ್‌ ಬದಲಿಸಬೇಡ’ ಎಂದು ಬಿಟ್ಟಳು. ನೂಯಿ ಆಶ್ಚರ್ಯದಿಂದ, ‘ಯಾಕೆ?’ ಎಂದು ಪ್ರಶ್ನಿಸಿದರು. ಅದಕ್ಕೆ ಮಗಳು ಕೊಟ್ಟ ಉತ್ತರ, “ನಿನ್ನ ಟೇಬಲ್‌ ಅಡಿಯಲ್ಲಿರುವ ಸಣ್ಣ ಜಾಗದಲ್ಲಿ ನಾನು ಚಿಕ್ಕವಳಾಗಿದ್ದಾಗ ಹೊದ್ದು ಮಲಗಿರುತ್ತಿದ್ದೆ,” ಎಂದಾಗಿತ್ತು. ಆ ಉತ್ತರ ನೂಯಿ ನಡೆದು ಬಂದ ಹಾದಿಯನ್ನು ಆಕೆಗೆ ನೆನಪಿಸುವಂತಿತ್ತು.

ಪೆಪ್ಸಿಕೋದಲ್ಲಿ ನೂಯಿಯ ದಿನಗಳು ಯಾವತ್ತೂ ಒತ್ತಡದಿಂದ ಇರುತ್ತಿದ್ದವು. ಒಮ್ಮೊಮ್ಮೆ ಹೆಚ್ಚಿನ ಕೆಲಸ ಮಧ್ಯ ರಾತ್ರಿವರೆಗೂ ಮುಂದುವರಿಯುತ್ತಿತ್ತು. ಮಗಳಿಗಿನ್ನೂ 18 ತಿಂಗಳಿದ್ದಾಗಲೇ ಆಕೆಯನ್ನು ಕಚೇರಿಗೆ ಕರೆದುಕೊಂಡು ಬರುತ್ತಿದ್ದರು. ಆಗ ಆಕೆ ಟೇಬಲ್‌ ಅಡಿಯಲ್ಲಿ ಮಲಗಿ ನಿದ್ರಿಸುತ್ತಿದ್ದಳು.

ಇನ್ನೊಂದು ದಿನ ಆಕೆ ಫೈಲ್‌ ಒಂದನ್ನು ತೆರೆಯುತ್ತಿರಬೇಕಾದರೆ ಅದರಲ್ಲೊಂದು ಪತ್ರ ಕಾಣಿಸಿತು. ಅದು ಐದು ವರ್ಷದ ಮಗಳು ಬರೆದ ಪತ್ರವಾಗಿತ್ತು. ಅದರಲ್ಲಿ, “ಪ್ರೀತಿಯ ಅಮ್ಮ, ಬೇಗ ಬಾ. ದಯವಿಟ್ಟು ಬೇಗ ಮನೆಗೆ ಬಾ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ,” ಎಂದು ಬರೆದು ಅದನ್ನು ಈ ಫೈಲ್‌ಗಳ ಮಧ್ಯೆ ತುರುಕಿ ಇಟ್ಟಿದ್ದಳು. ಮಕ್ಕಳನ್ನು ನೋಡಿಕೊಳ್ಳುವ ವಿಚಾರದಲ್ಲಿ ಮಾತ್ರವಲ್ಲ ಆಕೆ ಗಂಡನಿಗೆ ಸಮಯ ನೀಡುವ ವಿಚಾರದಲ್ಲಿಯೂ ಜಿಪುಣತನ ತೋರಾಬೇಕಾಗಿತ್ತು.

ಪತಿ ರಾಜ್‌ ನೂಯಿ ಮತ್ತು ಇಬ್ಬರು ಪುತ್ರಿಯರೊಂದಿಗೆ ಇಂದಿರಾ ನೂಯಿ
ಪತಿ ರಾಜ್‌ ನೂಯಿ ಮತ್ತು ಇಬ್ಬರು ಪುತ್ರಿಯರೊಂದಿಗೆ ಇಂದಿರಾ ನೂಯಿ
ಚಿತ್ರ ಕೃಪೆ: ದಿ ಕ್ವಿಂಟ್‌

ಇದಕ್ಕಾಗಿ ಒಮ್ಮೆ ಗಂಡ, ‘ನಾನು ನಿನ್ನ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ’ ಎಂದು ಬೇಸರವನ್ನೂ ವ್ಯಕ್ತಪಡಿಸಿದ್ದರಂತೆ. ‘ನಿನಗೆ ಮೊದಲು ಪೆಪ್ಸಿ, ಆಮೇಲೆ ಇಬ್ಬರು ಮಕ್ಕಳು, ನಂತರ ನಿನ್ನ ತಾಯಿ, ಕೊನೆಗೆ ನಾನು ನಿನ್ನ ಆಯ್ಕೆ’ ಎಂದು ಪತಿ ತಕರಾರು ತೆಗೆದಿದ್ದರಂತೆ. ಆಗ ಆಕೆ ತಣ್ಣಗೆ ‘ಕನಿಷ್ಠ ಪಟ್ಟಿಯಲ್ಲಾದರೂ ಇದ್ದೀರಲ್ಲ’ ಎಂದು ಛೇಡಿಸಿದ್ದರಂತೆ. ಇವತ್ತು ಅವೆಲ್ಲವನ್ನೂ ನೆನಪಿಸಿಕೊಳ್ಳುವ ನೂಯಿ ತಮ್ಮ ಗಂಡನ ಕ್ಷಮೆ ಕೇಳುತ್ತಾರೆ.

ಮುಂದೊಂದು ದಿನ ‘ಬ್ಯುಸಿನೆಸ್‌ ಇನ್‌ಸೈಡರ್‌’ಗೆ ನೀಡಿದ ಸಂದರ್ಶನದಲ್ಲಿ ಆಕೆ, ‘ನಾನು ಇವತ್ತು ಈ ಸ್ಥಾನದಲ್ಲಿ ನಿಲ್ಲಲು ನನ್ನ ಪತಿಯೇ ಕಾರಣ’ ಎಂದು ಹೇಳಿದ್ದರು. ಆಮ್‌ಸಾಫ್ಟ್‌ ಎಂಬ ಕಂಪನಿಯ ಅಧ್ಯಕ್ಷರಾಗಿದ್ದ ರಾಜ್‌ ನೂಯಿಗಿಂತ ಪತ್ನಿ ಉನ್ನತ ಸ್ಥಾನದಲ್ಲಿದ್ದರು. ಹೀಗಿದ್ದೂ, ‘ಯಾರು ಮೇಲು’ ಎಂಬ ಚರ್ಚೆಗೆ ಯಾವತ್ತೂ ಪತಿ ರಾಜ್‌ ನೂಯಿ ಇಳಿದಿರಲಿಲ್ಲ. ಬದಲಿಗೆ ಆಕೆಯ ಎಲ್ಲಾ ಸಂಕಷ್ಟ, ಸವಾಲುಗಳಿಗೆ ಬೆಂಬಲವಾಗಿ ನಿಂತರು. ಪರಿಣಾಮ ಇದೇ ಏಣಿಯಲ್ಲಿ ಮೇಲಕ್ಕೇರಿ ನೂಯಿ ಆಕಾಶದೆತ್ತರಕ್ಕೆ ಬೆಳೆದರು.

ಸತತವಾಗಿ ಫೋರ್ಬ್ಸ್‌ ಜಾಗತಿಕ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದರು. ಪದ್ಮ ಭೂಷಣದಂಥ ಪ್ರಶಸ್ತಿ ಆಕೆಯನ್ನು ಹುಡುಕಿಕೊಂಡು ಬಂತು. ಆಕೆಯ ಅವಧಿಯಲ್ಲಿ ಕಂಪನಿಯ ಷೇರು ಶೇಕಡಾ 78ರಷ್ಟು ಏರಿಕೆ ಕಂಡಿತು. ಕಂಪನಿಯ ಲಾಭವನ್ನು 2.7 ಬಿಲಯನ್‌ ಡಾಲರ್‌ನಿಂದ 6.5 ಬಿಲಯನ್‌ ಡಾಲರ್‌ಗೆ ಏರಿಸಿದರು. ವಾರ್ಷಿಕ ಸುಮಾರು 200 ಕೋಟಿ ಸಂಬಳ ಪಡೆಯುವ ದುಬಾರಿ ಸಿಇಒ ಎಂಬ ಶ್ರೇಯಸ್ಸಿಗೆ ಪಾತ್ರರಾದರು.

ಪೆಪ್ಸಿಕೋಗೆ ಮರುಹುಟ್ಟು:

ಇದರಾಚೆಗೂ ಆಕೆಯ ಚಾಣಾಕ್ಷತೆ ಕೆಲಸ ಮಾಡಿತ್ತು. ಅದಿಲ್ಲದೇ ಇದ್ದಲ್ಲಿ ಇವತ್ತು ಬಹುಶಃ ಪೆಪ್ಸಿಕೋ ಈ ಸ್ವರೂಪದಲ್ಲಿ ಇರುತ್ತಿರಲಿಲ್ಲ. 2000ನೇ ಇಸವಿ ದಾಟುತ್ತಿದ್ದಂತೆ ಅಮೆರಿಕಾದ ಮಾರುಕಟ್ಟೆಯಲ್ಲಿ ಸೋಡಾ ಬೆರೆಸಿದ ತಂಪು ಪಾನೀಯಗಳ ಬಳಕೆಯಲ್ಲಿ ಇಳಿಕೆ ಕಂಡು ಬಂತ್ತು. 2007ರಿಂದ 2013ರ ವೇಳೆಗಾಗುವಾಗ ಅಮೆರಿಕಾ ಮಾರುಕಟ್ಟೆಯಲ್ಲಿ ಸೋಡಾ ಉತ್ಪನ್ನಗಳ ಮಾರಾಟ ಶೇಕಡಾ 20 ಕುಸಿಯಿತು. ಖರ್ಚು ಕಡಿತ, ಉದ್ಯೋಗ ಕಡಿತ ಎಲ್ಲವೂ ಆರಂಭವಾಯಿತು. ಅವತ್ತು ಕಂಪನಿ ತಿರುವು ಹಾದಿಯಲ್ಲಿ ಬಂದು ನಿಂತಿತ್ತು.

ಪೆಪ್ಸಿಕೋದ ಉತ್ಪನ್ನಗಳೊಂದಿಗೆ ಸಿಇಒ ಇಂದಿರಾ ನೂಯಿ
ಪೆಪ್ಸಿಕೋದ ಉತ್ಪನ್ನಗಳೊಂದಿಗೆ ಸಿಇಒ ಇಂದಿರಾ ನೂಯಿ
ಚಿತ್ರ ಕೃಪೆ: ಫಾರ್ಚ್ಯೂನ್

ಈ ಸಂದರ್ಭದಲ್ಲಿ ತನ್ನ ಒಂದು ಆಲೋಚನೆಯ ಮೂಲಕ ಕಂಪನಿಗೆ ಮರು ಜನ್ಮ ನೀಡಿದರು ನೂಯಿ. ಪೆಪ್ಸಿಕೋ ಆಹಾರೋತ್ಪನ್ನಗಳ ಕಡೆಗೆ ಹೊರಳಿಕೊಂಡಿತು. ಲೇಸ್‌, ಕುರ್ಕುರೆ ರೀತಿಯ ಸ್ನಾಕ್ಸ್‌ಗಳನ್ನು, ಸ್ಲೈಸ್‌, ಟ್ರೋಫಿಕಾನಾ ತರಹದ ಹಣ್ಣಿನ ಪಾನೀಯಗಳನ್ನು ಮಾರುಕಟ್ಟೆಗೆ ಪರಿಚಯಿಸಿತು ಪೆಪ್ಸಿಕೋ. ಅದು ಕಂಪನಿಗೆ ಮರು ಹುಟ್ಟು ಸಿಕ್ಕಿದ ಕ್ಷಣ. ಪೆಪ್ಸಿಕೋ ಮತ್ತೆ ಎದ್ದು ನಿಂತಿತು.

ಈ ಗೆಲುವಿನೊಂದಿಗೆ ಇವತ್ತು ಇಂದಿರಾ ನೂಯಿ ಮಹಿಳೆಯೊಬ್ಬರು ಮನಸ್ಸು ಮಾಡಿದರೆ ಏನು ಮಾಡಬಹುದು ಎಂಬುದಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ. ಆಕೆಯೇ ಹೇಳಿದಂತೆ ‘ಮಹಿಳೆಯರು ತಮಗೆ ಸಿಗಬಹುದಾದ ಸಹಾಯವನ್ನು ನಾಚಿಕೆ, ಹಿಂಜರಿಕೆ ಇಲ್ಲದೆ ಬಳಸಿಕೊಂಡರೆ ಯಾವ ಸ್ಥಾನಕ್ಕೂ ಏರಬಹುದು’ ಎಂಬುದನ್ನು ಪ್ರತ್ಯಕ್ಷವಾಗಿ ತೋರಿಸಿಕೊಟ್ಟಿದ್ದಾರೆ. ತಾವು ಉನ್ನತ ಹುದ್ದೆಗೆ ಏರಿದ್ದಲ್ಲದೆ, ಮಹಿಳೆಯರೂ ದೊಡ್ಡ ದೊಡ್ಡ ಜವಾಬ್ದಾರಿಗಳನ್ನು ನಿರ್ವಹಿಸಬಲ್ಲರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದರ ಪರಿಣಾಮ ಹೊಸ ತಲೆಮಾರಿನ ಕಿರಣ್‌ ಮಂಜೂಮ್ದಾರ್‌ ಷಾ, ಶೆರಿಲ್‌ ಸ್ಯಾಂಡ್‌ ಬರ್ಗ್‌ ತರಹದವರು ಇವತ್ತು ದೊಡ್ಡ ಕಂಪನಿಗಳ ಉನ್ನತ ಹುದ್ದೆಗಳಲ್ಲಿ ಬಂದು ಕುಳಿತಿದ್ದಾರೆ.

ಸತತ 24 ವರ್ಷಗಳ ಪೆಪ್ಸಿಕೋ ಓಟದ ನಂತರ ಇದೀಗ ನೂಯಿ ಕಾಲು ಬಸವಳಿದಿದೆ. “ಸಿಇಓ ಆಗಿರುವುದಕ್ಕೆ ಬಲವಾದ ಕಾಲುಗಳು ಬೇಕಾಗುತ್ತವೆ ಮತ್ತು ನಾನು ರಿಲೇ ಓಟವನ್ನು ಎರಡು ಕಾಲುಗಳಲ್ಲಿ ಓಡಿದ್ದೇನೆ ಎಂದು ಅನಿಸುತ್ತಿದೆ. ನಾನು ಬಲವಾದ ಕಾಲುಗಳುಳ್ಳ ತೀಕ್ಷ್ಣ ಕಣ್ಣುಗಳ ಬೇರೊಬ್ಬರು ಬಂದು ಕಂಪನಿಯನ್ನು ಮುನ್ನಡೆಸಲು ಬಯಸುತ್ತೇನೆ,” ಎಂದಿದ್ದಾರೆ ನೂಯಿ. ಹೀಗೆ ಅವರೀಗ ತಮ್ಮ ಬ್ಯಾಟನ್‌ನ್ನು ರಾಮನ್‌ ಲಗರ್ತಾರಿಗೆ ಅಕ್ಟೋಬರ್‌ 3ರಂದು ಹಸ್ತಾಂತರ ಮಾಡಲಿದ್ದಾರೆ.

ಈ ಮೂಲಕ ಬಹುರಾಷ್ಟ್ರೀಯ ಕಂಪನಿಯೊಂದರ ಸಿಇಒ ಹುದ್ದೆಗೆ ಸೆಲೆಬ್ರಿಟಿ ಪಟ್ಟ ತಂದುಕೊಟ್ಟಿದ್ದ ಇಂದಿರಾ ನೂಯಿ ನಿವೃತ್ತ ಜೀವನಕ್ಕೆ ಹೊರಟು ನಿಂತಿದ್ದಾರೆ. ಕಾರ್ಪೊರೇಟ್ ರಂಗದ ಯಶಸ್ಸಿನ ಕತೆಗಳು ಕೂಡ ಕ್ಲೀಶೆಯಾಗಿರುವ ದಿನಗಳು ಇವು. ಆದರೆ, ಅದೇ ಕ್ಷೇತ್ರದಲ್ಲಿ ಅವಿರತ ಶ್ರಮದ ಕಾರಣಕ್ಕೆ ಸುದೀರ್ಘ ಯಶಸ್ಸಿನ ಹಾದಿಯನ್ನು ನಿರ್ಮಿಸಿದ ಇಂದಿರಾ ನೂಯಿ ಬದುಕು ಕೊಂಚ ಭಿನ್ನ ಅಂತ ಅನ್ನಿಸಲು ಪ್ರಬಲವಾದ ಕಾರಣವೊಂದಿದೆ. ಅದು ಆಕೆ ದುಡಿಮೆ ಎಡೆಗೆ ನೀಡಿದ ಶ್ರದ್ಧೆ ಮತ್ತು ಹಾಕಿದ ಶ್ರಮ. ಮಾತಿಗಿಂತ, ಕೆಲಸ ಮುಖ್ಯ ಅಂತ ನೀವು ನಂಬುವುದೇ ಆದರೆ, ಇಂದಿರಾ ನೂಯಿ ಬದುಕಿನಿಂದ ಒಂದಷ್ಟು ಪಾಠಗಳನ್ನು ದಾರಾಳವಾಗಿ ಹೆಕ್ಕಿಕೊಳ್ಳಬಹುದು...