samachara
www.samachara.com
ಬೆಂಗಳೂರಿನ ನಿಧಾನಗತಿಯ ಸಾರಿಗೆ ವ್ಯವಸ್ಥೆಗೆ ಹಾಂಕಾಂಗ್‌ನಲ್ಲಿದೆ ಪರಿಹಾರ!
FEATURE STORY

ಬೆಂಗಳೂರಿನ ನಿಧಾನಗತಿಯ ಸಾರಿಗೆ ವ್ಯವಸ್ಥೆಗೆ ಹಾಂಕಾಂಗ್‌ನಲ್ಲಿದೆ ಪರಿಹಾರ!

ಬೆಂಗಳೂರಿನಲ್ಲಿ ಈ ಪಾಟಿ ವಾಹನ ದಟ್ಟಣೆ ಏರಿಕೆಯಾಗಲು ಕಾರಣ ಇಲ್ಲಿರುವ ಖಾಸಗಿ ವಾಹನಗಳು. ಉಳಿದೆಲ್ಲಾ ನಗರಗಳಿಗೆ ಹೋಲಿಸಿದರೆ ದೊಡ್ಡ ಮಟ್ಟದಲ್ಲಿ ಖಾಸಗಿ ವಾಹನಗಳು ಇಲ್ಲಿ ರಸ್ತೆಗಿಳಿಯುತ್ತವೆ.

ಬಾಂಗ್ಲಾದೇಶದ ರಾಜಧಾನಿ ಢಾಕಾದ ವಿದ್ಯಾರ್ಥಿಗಳ ಪ್ರತಿಭಟನೆ ಅಂತರಾಷ್ಟ್ರೀಯ ಸುದ್ದಿಕೇಂದ್ರದಲ್ಲಿ ಜಾಗ ಪಡೆದುಕೊಂಡಿದೆ. ರಸ್ತೆ ಅಪಘಾತಕ್ಕೆ ಇಬ್ಬರು ಅಪ್ರಾಪ್ತರು ಬಲಿಯಾಗಿದ್ದು ಯುವ ಸಮುದಾಯವನ್ನು ಕೆರಳಿಸಿದೆ. ಪರಿಣಾಮ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಬೀದಿಗೆ ಇಳಿದಿದ್ದಾರೆ. ಪ್ರತಿಭಟನೆ ಹತ್ತಿಕ್ಕಲು ರಬ್ಬರ್‌ ಬುಲೆಟ್‌ ಪ್ರಯೋಗ, ಲಾಠಿ ಚಾರ್ಚ್‌, ಇಂಟರ್‌ನೆಟ್‌ ನಿಷೇಧದಂಥ ಪ್ರಕ್ರಿಯೆಗಳು ನಡೆಯುತ್ತಿದ್ದು ಢಾಕಾ ರಣರಂಗವಾಗಿದೆ.

‘ರಸ್ತೆ ಸುರಕ್ಷತೆ’ ಎಂಬ ವಿಚಾರ ಸೋ ಕಾಲ್ಡ್‌ ಹಿಂದುಳಿದ ದೇಶದಲ್ಲಿ ಉಂಟು ಮಾಡಿದ ಪರಿಣಾಮಗಳಿವು. ಹಾಗೆ ನೋಡಿದರೆ ಭಾರತದ ಯಾವುದೇ ನಗರಗಳ ಟ್ರಾಫಿಕ್‌ ಪರಿಸ್ಥಿತಿಯು ಇದಕ್ಕಿಂತ ಭಿನ್ನವಾಗಿಲ್ಲ. ಅದರಲ್ಲೂ ಬೆಂಗಳೂರು ದೇಶದಲ್ಲಿ ನಿಧಾನಗತಿಯ ನಗರ ಎಂಬ ಕುಖ್ಯಾತಿಯನ್ನು ಪಡೆದುಕೊಂಡಿದೆ.

ಇದೇ ಬೆಂಗಳೂರಿನ ಟ್ರಾಫಿಕ್‌ ಬಗ್ಗೆ ‘ಕ್ವಾರ್ಟ್ಜ್‌’ ವರದಿಗಾರರು ಪ್ರತ್ಯಕ್ಷ ವರದಿ ಮಾಡಿದ್ದು, ಇವತ್ತು ಪ್ರತೀ ಬೆಂಗಳೂರಿಗನಲ್ಲೂ ಒಂದೊಂದು ಟ್ರಾಫಿಕ್‌ ಕಥೆಗಳಿರುತ್ತವೆ. ಒಂದು ಗಂಟೆಯ ವಿಮಾನ ಪ್ರಯಾಣ ಬೆಂಗಳೂರಿನಲ್ಲಿ ನಾಲ್ಕು ಗಂಟೆಗಳಾಗುತ್ತವೆ ಎನ್ನುವ ಹಾಸ್ಯ, ವಿಡಂಬನೆಯನ್ನು ಮಾಡಿದೆ.

ಖಾಸಗಿ ವಾಹನಗಳ ಏರಿಕೆ

ಬೆಂಗಳೂರಿನಲ್ಲಿ ಈ ಪಾಟಿ ವಾಹನ ದಟ್ಟಣೆ ಏರಿಕೆಯಾಗಲು ಕಾರಣ ಇಲ್ಲಿರುವ ಖಾಸಗಿ ವಾಹನಗಳು. ಉಳಿದೆಲ್ಲಾ ನಗರಗಳಿಗೆ ಹೋಲಿಸಿದರೆ ದೊಡ್ಡ ಮಟ್ಟದಲ್ಲಿ ಖಾಸಗಿ ವಾಹನಗಳು ಇಲ್ಲಿ ರಸ್ತೆಗಿಳಿಯುತ್ತವೆ. 2017ರ ಅಂತ್ಯಕ್ಕೆ ಬೆಂಗಳೂರಿನಲ್ಲಿ ಒಟ್ಟು 73 ಲಕ್ಷ ವಾಹನಗಳಿವೆ. 2012ರಿಂದ ವಾಹನಗಳ ಸಂಖ್ಯೆಯಲ್ಲಿ ಬೆಂಗಳೂರಿನಲ್ಲಿ ಶೇಕಡಾ 74 ಏರಿಕೆಯಾಗಿರುವುದನ್ನು ಇದು ಹೇಳುತ್ತಿದೆ. ಇದರಲ್ಲಿ ಹೆಚ್ಚಿನ ಪಾಲು ಕಾರು ಮತ್ತು ಬೈಕ್‌ನಂಥ ಖಾಸಗಿ ವಾಹನಗಳು ಎಂದು ಬಿಡಿಸಿ ಹೇಳಬೇಕಾಗಿಲ್ಲ.

ಬೆಂಗಳೂರಿನಲ್ಲಿ ಏರಿಕೆಯಾದ ತಂತ್ರಜ್ಞಾನ ಸಂಬಂಧಿತ ಉದ್ಯಮಿಗಳು, ಇದನ್ನು ನೆಚ್ಚಿಕೊಂಡು ಬೇರೆ ಬೇರೆ ರಾಜ್ಯದಿಂದ ಬೆಂಗಳೂರಿಗೆ ಬಂದ ಉದ್ಯೋಗಾಕಾಂಕ್ಷಿಗಳು ಬೆಂಗಳೂರಿನ ಜನಸಂಖ್ಯೆಯ ಏರಿಕೆಗೆ ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ. ಪರಿಣಾಮ 2011ರಲ್ಲಿದ್ದ ಬೆಂಗಳೂರಿನ ಜನಸಂಖ್ಯೆ 84 ಲಕ್ಷದಿಂದ ಇಂದು ಸುಮಾರು 1.5 ಕೋಟಿಯ ಸಮೀಪ ಬಂದು ನಿಂತಿದೆ.

ಇವರಿಗಾಗಿ ಸಾರ್ವಜನಿಕ ಸಾರಿಗೆ ಸೇವೆಗಳಾದ ಬಸ್‌, ಬೆಂಗಳೂರಿನ ಹೊರವಲಯದಲ್ಲಿ ಚಲಿಸುವ ರೈಲು, ಕ್ಯಾಬ್‌, ಆಟೋರಿಕ್ಷಾ ಮತ್ತು ಮೆಟ್ರೋ ವ್ಯವಸ್ಥೆಗಳಿವೆ. ಆದರೆ ಗಿಜಿಗುಡುವ ರಸ್ತೆಗಳ ಸ್ಥಿತಿ ಮಾತ್ರ ಬದಲಾಗುತ್ತಿಲ್ಲ. ಕಾರಣ ಇವುಗಳು ಜನರಿಗೆ ಸುಲಭ ಸೇವೆ ನೀಡುವಲ್ಲಿ ಸೋಲುತ್ತಿವೆ.

ಗೋಜಲು ಟ್ರಾಫಿಕ್‌ ವ್ಯವಸ್ಥೆ

ಬೆಂಗಳೂರಿನ ಸಾರಿಗೆಯ ಕೇಂದ್ರ ಭಾಗದಲ್ಲಿರುವುದು ಬಿಎಂಟಿಸಿ. ಸದ್ಯಕ್ಕೆ ಬೆಂಗಳೂರಿನ ರಸ್ತೆಗಳಲ್ಲಿ 6,783 ಬಸ್‌ಗಳು ದಿನ ನಿತ್ಯ 71,673 ಟ್ರಿಪ್‌ಗಳನ್ನು ಹೊಡೆಯುತ್ತವೆ. ಇವುಗಳ ಮೂಲಕ ಪ್ರತಿ ನಿತ್ಯ ಬೆಂಗಳೂರಿನಲ್ಲಿ ಓಡಾಡುವ ಜನರು ಸುಮಾರು 50 ಲಕ್ಷ. ನಂತರದ ಜಾಗವನ್ನು ಆಟೋ ರಿಕ್ಷಾಗಳು ಮತ್ತು ಕ್ಯಾಬ್‌ಗಳು ಪಡೆದುಕೊಂಡಿವೆ. ಸದ್ಯಕ್ಕೆ ಓಲಾ, ಉಬರ್‌ ರೀತಿ ಆಪ್‌ ಮೂಲಕ ಟಾಕ್ಸಿ ಸೇವೆ ನೀಡುವ ಕಂಪನಿಗಳಲ್ಲಿ 1 ಲಕ್ಷ ವಾಹನಗಳು ನೋಂದಣಿಯಾಗಿದ್ದು ಅವುಗಳೆಲ್ಲಾ ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುತ್ತಿವೆ.

ಇದರ ಜತೆಗೆ ಸಾವಿರಾರು ಕೋಟಿ ಸುರಿದು ಕಟ್ಟಿರುವ ಮೆಟ್ರೋ ಜುಲೈ ಅಂತ್ಯಕ್ಕೆ ಪ್ರತಿನಿತ್ಯ ಕೇವಲ 3.6 ಲಕ್ಷ ಜನರಿಗಷ್ಟೇ ಸಾರಿಗೆ ಸೇವೆ ನೀಡುತ್ತಿದೆ.

ಹೀಗಾಗಿ ಉಳಿದವರು ತಮ್ಮ ಖಾಸಗಿ ವಾಹನಗಳನ್ನೇ ರಸ್ತೆಗೆ ಇಳಿಸುತ್ತಿದ್ದಾರೆ. ಇವೆಲ್ಲದರ ಪರಿಣಾಮ ಉದ್ಯಾನ ನಗರಿಯಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ 18 ಕಿಲೋಮೀಟರ್‌ಗೆ ಕುಸಿದಿದೆ. ಇದರಿಂದ ದೇಶದಲ್ಲೇ ಅತೀ ನಿಧಾನಗತಿಯ ಸಾರಿಗೆ ವ್ಯವಸ್ಥೆ ಹೊಂದಿರುವ ನಗರ ಎಂಬ ಕುಖ್ಯಾತಿಗೂ ಬೆಂಗಳೂರು ಪಾತ್ರವಾಗಿದೆ.

ಅದರಲ್ಲೂ ಟೆಕ್‌ ಹಬ್‌ಗಳಿರುವ ಕೋರಮಂಗಲ ಮತ್ತು ಸರ್ಜಾಪುರ ನಡುವಿನ ರಸ್ತೆಗಳಲ್ಲಂತೂ ಇಂದು ಗಂಟೆಗೆ 10 ಕಿಲೋಮೀಟರ್‌ ವೇಗವನ್ನು ದಾಟಲು ಸಾಧ್ಯವಿಲ್ಲ ಎನ್ನುತ್ತಾರೆ ದಿನ ನಿತ್ಯದ ಪ್ರಯಾಣಿಕರು. ಪರಿಸ್ಥಿತಿ ಹೀಗಿರುವಾಗ ಉದ್ಯಾನ ನಗರಿಗೆ ಸಾರಿಗೆ ವ್ಯವಸ್ಥೆಯ ಮಾದರಿಯಾಗಿ ಕಾಣಿಸುತ್ತಿರುವುದು ಹಾಂಕಾಂಗ್‌.

ಹಾಂಕಾಂಗ್ ಮಾದರಿ

ವಿಶ್ವದಲ್ಲೇ ಸಾರಿಗೆ ವಿಚಾರಕ್ಕೆ ಜಗತ್ಪ್ರಸಿದ್ಧವಾದ ನಗರ ಹಾಂಕಾಂಗ್. ಇಲ್ಲಿ 2017ರ ಅಂತ್ಯಕ್ಕೆ 74 ಲಕ್ಷ ಜನರಿದ್ದಾರೆ. ಇವರಲ್ಲಿ ಶೇಕಡಾ 90 ರಷ್ಟು ಜನರು ದಿನನಿತ್ಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ನೆಚ್ಚಿಕೊಂಡಿದ್ದಾರೆ. ಇದೊಂದು ದಾಖಲೆಯೇ ಸರಿ.

ಹಾಂಕಾಂಗ್ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದರೂ ಇಲ್ಲಿ ಅಳವಡಿಸಿಕೊಂಡಿರುವ ಸೃಜನಾತ್ಮಕ ಸಾರಿಗೆ ವ್ಯವಸ್ಥೆಗಳಿಂದಾಗಿ ಪ್ರಯಾಣಿಕ ಸ್ನೇಹಿ ನಗರವಾಗಿ ಬೆಳೆದು ನಿಂತಿದೆ. 24 ಗಂಟೆ ಎಚ್ಚರವಿರುವ ನಗರ ಹಾಂಕಾಂಗ್‌ಗೆ ದಿನ ನಿತ್ಯ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗಿದ್ದು ಪ್ರಯಾಣಿಕರಿಗೆ ಒಂದಿನಿತೂ ತೊಂದರೆಯಾಗದಂತೆ ಇಲ್ಲಿನ ಸಾರಿಗೆ ವ್ಯವಸ್ಥೆಯನ್ನು ವಿನ್ಯಾಸ ಮಾಡಲಾಗಿದೆ.

ಇಲ್ಲಿ ಏನುಂಟು ಏನಿಲ್ಲ ಎಂದು ಕೇಳುವಂತಿಲ್ಲ. ಉದ್ದುದ್ದದ ಎಸ್ಕಲೇಟರ್‌ಗಳು, ರೈಲು, ಮೆಟ್ರೋ, ಟ್ರಾಮ್‌ವೇ, ಬಸ್‌, ಮಿನಿ ಬಸ್‌, ದ್ವೀಪಗಳ ನಡುವೆ ಸಂಚರಿಸುವ ಫೆರ್ರಿ ಸೇವೆ, ಟಾಕ್ಸಿ, ಬೈಸಿಕಲ್‌ ಸೇರಿದಂತೆ ಹಲವಾರು ಸಾರ್ವಜನಿಕ ಸಾರಿಗೆ ಸೇವೆಗಳು ಇಲ್ಲಿವೆ. ಇವೆಲ್ಲದರ ಪರಿಣಾಮ ಇಲ್ಲಿ ವಾರಕ್ಕೆ ಸರಕಾರಿ ವ್ಯಕ್ತಿಯೊಬ್ಬರು ಸಾರ್ವಜನಿಕ ಸಾರಿಗೆಯಲ್ಲಿ ಕೇವಲ 73 ನಿಮಿಷಗಳನ್ನು ಮಾತ್ರ ಕಳೆಯುತ್ತಾರೆ. ಇನ್ನು ಸರಸಾರಿ ವಾಹನವೊಂದಕ್ಕೆ ಪ್ರಯಾಣಿಕರು ಕಾಯಬೇಕಾದ ಅವಧಿ ಕೇವಲ 14 ನಿಮಿಷಗಳು ಮಾತ್ರ.

ಒಂದೊಮ್ಮೆ ಬೆಂಗಳೂರು ಪಾಠ ಕಲಿಯದಿದ್ದರೆ, ಹಾಂಕಾಂಗ್‌ ಮಾದರಿಯಲ್ಲಿ ಜನರ ಅಗತ್ಯಕ್ಕೆ ತಕ್ಕಂತೆ ವೈಜ್ಞಾನಿಕ ರೀತಿಯಲ್ಲಿ ಸಾರ್ವಜನಿಕ ಸಾರಿಗೆಯನ್ನು ಅಭಿವೃದ್ಧಿ ಪಡಿಸದೇ ಹೋದಲ್ಲಿ, ನಿಜವಾಗಿಯೂ ಇಲ್ಲಿನ ಟ್ರಾಫಿಕ್‌ನಿಂದ ಪಾರಾಗಲು ಸಾಧ್ಯವೇ ಇಲ್ಲ.