ಕುಸಿದ ಪಿಯುಸಿ ದಾಖಲಾತಿ; ದಕ್ಷಿಣ ಕನ್ನಡದ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ ಗಂಟೆ
FEATURE STORY

ಕುಸಿದ ಪಿಯುಸಿ ದಾಖಲಾತಿ; ದಕ್ಷಿಣ ಕನ್ನಡದ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ ಗಂಟೆ

ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ದಕ್ಷಿಣ ಕನ್ನಡದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾತಿ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದಕ್ಕಿರುವ ಕಾರಣಗಳೇನು? ವರದಿ ಇಲ್ಲಿದೆ.

ಕಳೆದ ವರ್ಷದವರೆಗೂ ಶಿಕ್ಷಣ ಕ್ಷೇತ್ರದ ಗಮನವನ್ನು ತನ್ನೆಡೆಗೆ ಸೆಳೆದುಕೊಂಡಿದ್ದ ದಕ್ಷಿಣ ಕನ್ನಡ ತನ್ನ ಆಕರ್ಷಣೆ ಕಳೆದುಕೊಂಡಿದೆಯಾ? ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ ವ್ಯವಸ್ಥೆಯ ಕುರಿತು ಹೊರಜಿಲ್ಲೆಗಳ ಪೋಷಕರಿಗೆ ವಿಶ್ವಾಸ ಕಡಿಮೆಯಾಗಿದೆಯಾ? ಇಂತಹ ಪ್ರಶ್ನೆಗಳು ಹುಟ್ಟಲು ಕಾರಣವಾಗಿದೆ, ಈ ಬಾರಿ ದಕ್ಷಿಣ ಕನ್ನಡದ ಪ್ರತಿಷ್ಠಿತ ಕ್ಯಾಂಪಸ್‌ಗಳಲ್ಲಿ ಕಂಡು ಬರುತ್ತಿರುವ ಕಡಿಮೆ ದಾಖಲಾತಿಗಳು.

ಕಳೆದ ವರ್ಷಕ್ಕೆ ಅಥವಾ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ದಕ್ಷಿಣ ಕನ್ನಡದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾತಿ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿದೆ. ಅದು ಎಸ್ಎಸ್ಎಲ್‌ಸಿ, ಪಿಯುಸಿ ಇರಲಿ ಅಥವಾ ಪದವಿ, ಸ್ನಾತ್ತಕೋತ್ತರ ಪದವಿಗಳಿರಲಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ರಾಜ್ಯ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಸರತಿಯಲ್ಲಿ ಮೊದಲ ಸ್ಥಾನದಲ್ಲಿರುತ್ತಿತ್ತು. ಪ್ರತಿಬಾರಿ ರಾಜ್ಯಮಟ್ಟದಲ್ಲಿ ಫಲಿತಾಂಶಗಳು ಘೋಷಣೆಯಾದಾಗಲೂ ಉಡುಪಿ ಅಥವಾ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸುತ್ತಿದ್ದರು. ಈ ಕಾರಣಕ್ಕೆ ನೆರೆಯ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳೂ ಸೇರಿದಂತೆ, ರಾಜ್ಯದ ನಾನಾ ಭಾಗಗಳಿಂದ ಇಲ್ಲಿಗೆ ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ದಾಖಲಾಗುತ್ತಿದ್ದರು. ಇದಕ್ಕೆ ಶತಮಾನಗಳ ಇತಿಹಾಸ ಇರುವ ಇಲ್ಲಿನ ಪ್ರತಿಷ್ಠಿತ ಕಾಲೇಜುಗಳೂ ಕಾರಣವಾಗಿದ್ದವು.

ಆದರೆ, ಬದಲಾದ ಕಾಲಘಟ್ಟದಲ್ಲಿ ನಡೆದ ಬೆಳವಣಿಗೆಗಳು ದೊಡ್ಡ ಪ್ರಮಾಣದಲ್ಲಿ ‘ಶಿಕ್ಷಣದ ವ್ಯಾಪಾರೀಕರಣ’ಕ್ಕೂ ಕಾರಣವಾಗಿತ್ತು. ರಾಜ್ಯದ ದಕ್ಷಿಣ ತುದಿಯಲ್ಲಿರುವ ಈ ಎರಡು ಜಿಲ್ಲೆಗಳ ಕೆಲವು ಕಾಲೇಜುಗಳ ಅನೈತಿಕ ಕಾರಣಗಳಿಗಾಗಿ ಸುದ್ದಿಕೇಂದ್ರಕ್ಕೂ ಬಂದಿದ್ದವು. ಪರಿಣಾಮ ಈಗ ನಿಧಾನವಾಗಿ ಕಾಣಲಾರಂಭಿಸಿದೆ. ಪ್ರಸಕ್ತ ಸಾಲಿನಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ದಾಖಲಾತಿ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಪಿಯುಸಿ ನೀಡಿದ ಮುನ್ಸೂಚನೆ:

“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಪಿಯುಸಿ ದಾಖಲಾತಿ ದೊಡ್ಡ ಮಟ್ಟಕ್ಕೆ ಕುಸಿದಿದೆ. ಇದಕ್ಕೆ ನಮ್ಮ ಶಿಕ್ಷಣ ಸಂಸ್ಥೆ ಮಾತ್ರವಲ್ಲ ಹಲವು ಕಾಲೇಜುಗಳಲ್ಲೂ ಇದೇ ಪರಿಸ್ಥಿತಿ ಇದೆ,” ಎನ್ನುತ್ತಾರೆ ದಕ್ಷಿಣ ಕನ್ನಡದ ಪ್ರತಿಷ್ಠಿತ ಖಾಸಗಿ ಕಾಲೇಜಿನ ಪ್ರಾಂಶುಪಾಲರೊಬ್ಬರು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೂಲ ಶಿಕ್ಷಣವನ್ನು ಹೊರತಾದ ಬೇರೆ ಬೇರೆ ಕೋರ್ಸ್‌ಗಳ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಇದೂ ದಾಖಲಾತಿ ಕಡಿಮೆಯಾಗಲು ಕಾರಣವಾಗಿರಬಹುದು ಎನ್ನುತ್ತಾರೆ ಅವರು.

ಇದು ದಾಖಲಾತಿ ಕಡಿಮೆಯಾಗಲು ಒಂದು ಕಾರಣವಾದರೂ, ಆಳಕ್ಕಿಳಿದಾಗ ಬೇರೆಯದೇ ಕತೆಗಳು ತೆರೆದುಕೊಳ್ಳುತ್ತವೆ. “ದಾಖಲಾತಿ ಕಡಿಮೆಯಾಗಿರುವುದು ದಕ್ಷಿಣ ಕನ್ನಡಕ್ಕೆ ಮಾತ್ರ ಸೀಮಿತವಾದುದಲ್ಲ. ಇದು ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು” ಎನ್ನುತ್ತಾರೆ ಮೋಹನ್‌ ಆಳ್ವ. ಒಂದಿಲ್ಲೊಂದು ಕಾರಣಕ್ಕೆ ಆಗಾಗ್ಗೆ ಸುದ್ದಿ ಕೇಂದ್ರಕ್ಕೆ ಬರುವ ಮೂಡಬಿದಿರೆ ಮೂಲದ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು ಮೋಹನ್ ಆಳ್ವ. ‘ಸಮಾಚಾರ’ ಜತೆ ಮಾತನಾಡಿದ ಅವರು, ಈ ಸಾಲಿನಲ್ಲಿ ಪಿಯುಸಿ ದಾಖಲಾತಿ ಕುಸಿಯಲು ಹಲವು ಕಾರಣಗಳನ್ನು ಮುಂದಿಟ್ಟರು.

ತೊಡಕಾದ ಶಿಕ್ಷಣದ ವ್ಯಾಪಾರೀಕರಣ:

“ಕಾಲದಿಂದ ಕಾಲಕ್ಕೆ ಎಲ್ಲಾ ಕ್ಷೇತ್ರಗಳಲ್ಲಿ ಏರುಪೇರುಗಳು ಇರುವುದು ಸಹಜ. ಅದೇ ರೀತಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿಯೂ ಹೊಸ ಹೊಸ ಸವಾಲುಗಳು ಬರುತ್ತಿವೆ. ಬಹಳ ಮುಖ್ಯವಾಗಿ, ಸುಲಭವಾಗಿ ಹಣ ಮಾಡಬಹುದು ಎಂಬ ಉದ್ದೇಶದಿಂದ ಬೇರೆ ಬೇರೆ ರಾಜ್ಯಗಳ ಕಾರ್ಪೊರೇಟ್‌ ಸಂಸ್ಥೆಗಳು ರಾಜ್ಯದಲ್ಲಿ ಕಾಲೇಜುಗಳನ್ನು ತೆರೆಯುತ್ತಿವೆ. ಟಿವಿ, ಪೇಪರ್‌ಗಳ ಮೂಲಕ ಭರ್ಜರಿ ಮಾರ್ಕೆಟಿಂಗ್‌ಗೆ ಇಳಿಯುತ್ತಿದ್ದಾರೆ. ನಾವು ಪ್ರಯೋಗಾಲಯ, ಪ್ರಾಂಶುಪಾಲರು, ಅಧ್ಯಾಪಕರಿಗೆ ಪ್ರಾಮುಖ್ಯತೆ ನೀಡಿದರೆ, ಇವರುಗಳು ಎಂಬಿಎ ಆದವರನ್ನು ಮೊದಲು ನೇಮಕ ಮಾಡಿಕೊಳ್ಳುತ್ತಾರೆ. ಮಾರ್ಕೆಟಿಂಗ್‌ ಕಡೆಗೆ ಹೆಚ್ಚು ಒತ್ತು ನೀಡುತ್ತಾರೆ. ಇದರಿಂದ ಮೌಲ್ಯಾಧಾರಿತ, ಸಾಂಪ್ರದಾಯಿಕ, ಶಿಸ್ತು ಬದ್ಧ ಶಿಕ್ಷಣ ನೀಡುವ ನಮ್ಮಂತವರಿಗೆ ತೊಂದರೆಯಾಗುತ್ತದೆ,” ಎನ್ನುತ್ತಾರೆ ಆಳ್ವ.

ಮೂಡಬಿದಿರೆಯಲ್ಲಿರುವ ಆಳ್ವಾಸ್‌ ಕ್ಯಾಂಪಸ್‌
ಮೂಡಬಿದಿರೆಯಲ್ಲಿರುವ ಆಳ್ವಾಸ್‌ ಕ್ಯಾಂಪಸ್‌
ಚಿತ್ರ ಕೃಪೆ: ಆಳ್ವಾಸ್‌ ಡಾಟ್‌ ಆರ್ಗ್‌

ರಾಜ್ಯದಲ್ಲಿ ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಮುಗಿಸಿ ಸುಮಾರು 6 ಲಕ್ಷ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣದ ಆಕಾಂಕ್ಷಿಗಳಾಗುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 5,500 ಸಾವಿರದಷ್ಟು ಪದವಿಪೂರ್ವ ಕಾಲೇಜುಗಳಿವೆ. ಇದರಲ್ಲಿ ಸರಾಸರಿ ಒಂದು ಕಾಲೇಜಿಗೆ 120 ರಿಂದ 125 ವಿದ್ಯಾರ್ಥಿಗಳಷ್ಟೇ ಬರುತ್ತಾರೆ. ಇದರ ಜತೆಗೆ ಹೊಸ ಹೊಸ ಕಾಲೇಜುಗಳು ತೆರೆಯಲ್ಪಡುತ್ತಿರುವುದರಿಂದ ದಾಖಲಾತಿಗಳು ಹರಿದು ಹಂಚಿ ಹೋಗುತ್ತಿವೆ.

“ಬೇರೆ ರಾಜ್ಯದಿಂದ ಬರುತ್ತಿರುವ ಶಿಕ್ಷಣ ಸಂಸ್ಥೆಗಳು ಪೂರಕ ಪರೀಕ್ಷಗಳಿಗೇ ಒತ್ತು ನೀಡುತ್ತಿವೆ. ಐಐಟಿ, ಜೆಇಇ, ನೀಟ್‌, ಸಿಇಟಿ ಎಂದೆಲ್ಲಾ ಮಕ್ಕಳು ಮತ್ತು ಪೋಷಕರನ್ನು ಗೊಂದಲಕ್ಕೆ ದೂಡುತ್ತಿದ್ದಾರೆ. ಇಂಟರ್‌ನ್ಯಾಷನಲ್‌, ಸಿಬಿಎಸ್‌ಇ, ಐಸಿಎಸ್‌ಇ ಎಂದೆಲ್ಲಾ ತಪ್ಪು ತಪ್ಪೇ ಹೇಳಿಕೊಂಡು ತಂದೆ ತಾಯಿಯರ, ಮಕ್ಕಳ ದೌರ್ಬಲ್ಯಗಳನ್ನು ಮಾರ್ಕೆಟಿಂಗ್‌ ಮಾಡುತ್ತಿದ್ದಾರೆ. ಇದನ್ನೆಲ್ಲಾ ನೋಡಿಯೂ ಶಿಕ್ಷಣ ಇಲಾಖೆಯವರು ಕಣ್ಣುಚ್ಚಿ ಕುಳಿತಿರುವುದು ಇಷ್ಟೆಲ್ಲಾ ದುರಂತಕ್ಕೆ ಕಾರಣ,” ಎಂಬುದು ಮೋಹನ್ ಆಳ್ವ ದೂರು. ಜತೆಗೆ, ನಮ್ಮ ಶಿಕ್ಷಣ ಸಂಸ್ಥೆಗಳ ಒಳ್ಳೆಯ ಮಾದರಿಗಳನ್ನು ಅನುಸರಿಸಬಹುದೇ ವಿನಃ ಈ ರೀತಿಯ ಮಾದರಿಗಳನ್ನು ಅನುಸರಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಅವರು.

ಇಂತಹ ಅರೋಪಗಳ ನಡುವೆಯೂ ಪ್ರತಿ ವರ್ಷ ಪಿಯುಸಿ ವಿದ್ಯಾರ್ಥಿಗಳನ್ನು ಹೆಚ್ಚಾಗಿ ಆಕರ್ಷಿಸುತ್ತಿದ್ದವು ದಕ್ಷಿಣ ಕನ್ನಡದ ಪದವಿ ಪೂರ್ವ ಕಾಲೇಜುಗಳು. ಈ ಬಾರಿ ಹೊರ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖವಾಗಲು ಚುನಾವಣೆಯೂ ಕಾರಣ ಎನ್ನುತ್ತಾರೆ ಆಳ್ವ. "ಚುನಾವಣೆಯಿಂದಾಗಿ ಕಾಲೇಜುಗಳ ಪ್ರವೇಶಕ್ಕೆ ಕಡಿಮೆ ಸಮಯ ಸಿಕ್ಕಿತ್ತು. ಇದಲ್ಲದೆ ಚುನಾವಣಾ ಸಂದರ್ಭವಾಗಿದ್ದರಿಂದ ಹಣವನ್ನು ಇಟ್ಟುಕೊಂಡು ಪ್ರಯಾಣಿಸುವುದೂ ಜನರಿಗೆ ಪ್ರಯಾಸದಾಯಕವಾಗಿತ್ತು. ನಾವು ಹೊರಗಿನ ಮಕ್ಕಳನ್ನೇ ನಂಬಿಕೊಂಡಿರುವಾಗ ಇದು ಕೂಡ ದಾಖಲಾತಿ ಮೇಲೆ ಪರಿಣಾಮ ಬೀರಿತು,” ಎಂದವರು ವಿವರಿಸುತ್ತಾರೆ.

ಇದಲ್ಲದೆ ಜಾಬ್‌ ಒರಿಯೆಂಟೆಡ್‌ ಕೋರ್ಸ್‌ಗಳ ಬಗ್ಗೆ ವಿದ್ಯಾರ್ಥಿಗಳು ಆಕರ್ಷಿತರಾಗುತ್ತಿದ್ದು, ದೀರ್ಘಕಾಲ ಓದುವುದು ಯಾಕೆ ಎಂಬ ಮನಸ್ಥಿತಿಗಳಿವೆ. ಹೀಗಾಗಿ ಸಾಂಪ್ರದಾಯಿಕ ಶಿಕ್ಷಣದ ಕಡೆಗೆ ಜನರು ಕಡಿಮೆ ಬರುತ್ತಿದ್ದಾರೆ. ಜತೆ ಜತೆಗೆ ಮಕ್ಕಳ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂಬುದು ಅವರ ವಾದ.

ವಿವಾದಗಳ ತವರು:

ಹೊರದೇಶಗಳ ಶಿಕ್ಷಣ ಸಂಸ್ಥೆಗಳು ಮಾತ್ರವೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಹೊಡೆತ ಕೊಡುತ್ತಿವೆ ಎಂಬುದು ಒಂದು ಆಯಾಮ ಅಷ್ಟೆ. ಅದರ ಜತೆಗೆ, ಕರಾವಳಿ ತಡಿಯ ಎರಡು ಜಿಲ್ಲೆಗಳ ರಾಜಕೀಯ ಹಾಗೂ ಸಾಮಾಜಿಕ ಘಟನೆಗಳೂ ಇದರ ಮೇಲೆ ಪರಿಣಾಮ ಬೀರುತ್ತಿವೆ. ಕೋಮು ಗಲಭೆಗಳು ಹುಟ್ಟಿಸಿದ ಆತಂಕಗಳು, ಶಿಕ್ಷಣದ ವ್ಯಾಪಾರೀಕರಣದ ಸುತ್ತ ಹಬ್ಬಿದ ವಿವಾದಗಳೂ ಇಲ್ಲಿನ ಶಿಕ್ಷಣ ಸಂಸ್ಥೆಗಳ ವಿಶ್ವಾಸಾರ್ಹತೆಗೆ ಧಕ್ಕೆ ತಂದಿವೆ. "ಧರ್ಮಾದಾರಿತ ವಿವಾದಗಳು ಬಂದಾಗ ದಕ್ಷಿಣ ಕನ್ನಡ ಟಾರ್ಗೆಟ್‌ ಆಗುತ್ತಿದೆ. ಇದು ಕೂಡ ಪರಿಣಾಮ ಬೀರಿದೆ,” ಎಂದು ಸ್ವತಃ ಮೋಹನ್ ಆಳ್ವ ಒಪ್ಪಿಕೊಳ್ಳುತ್ತಾರೆ.

ಜತೆಗೆ, ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮಂಗಳೂರು ಮೂಲದ ಕಾಲೇಜುಗಳು ಆರೋಪಕ್ಕೆ ಗುರಿಯಾಗಿದ್ದವು. ಇದು ದಕ್ಷಿಣ ಕನ್ನಡ ಜಿಲ್ಲೆಯ ಶೈಕ್ಷಣಿಕ ಸಾಧನೆಗೆ ಕಪ್ಪು ಚುಕ್ಕಿಯನ್ನು ಇಟ್ಟಿತ್ತು. ಇಲ್ಲಿನ ಶಿಕ್ಷಣದ ಗುಣಮಟ್ಟದ ಜತೆ ಜತೆಗೆ ಯಾಂತ್ರಿಕವಾಗಿರುವ ಪದ್ಧತಿಗಳು, ವಿದ್ಯಾರ್ಥಿಗಳ ಮೇಲಿನ ಅತಿ ಒತ್ತಡಗಳು ಚರ್ಚೆಗೆ ಒಳಗಾಗಿದ್ದವು. ಪರಿಣಾಮ ವಿದ್ಯಾರ್ಥಿಗಳು ಹಾಗೂ ಪೋಷಕರು ದಕ್ಷಿಣ ಕನ್ನಡದ ಪ್ರತಿಷ್ಠಿತ ಸಂಸ್ಥೆಗಳ ಬಗೆಗೆ ತಾತ್ಸಾರ ಮನೋಭಾವ ಬೆಳೆಸಿಕೊಂಡಿರುವ ಸಾಧ್ಯತೆಗಳಿವೆ. ಹೀಗಾಗಿ, ಈ ಸಾಲಿನಲ್ಲಿ ಆದ ಕಡಿಮೆ ದಾಖಲಾತಿ ಈ ಭಾಗದ ಶಿಕ್ಷಣ ಕ್ಷೇತ್ರಕ್ಕೆ ಎಚ್ಚರಿಕೆ ಗಂಟೆಯಾಗಿದೆ.