samachara
www.samachara.com
‘ಉದ್ಯಮಿಗಳ ಗೆರಿಲ್ಲಾ ರಾಜಕಾರಣ’: ಇವರಲ್ಲೇ ಒಬ್ಬರೇಕೆ ಭಾರತದ ಪ್ರಧಾನಿಯಾಗಬಾರದು? 
FEATURE STORY

‘ಉದ್ಯಮಿಗಳ ಗೆರಿಲ್ಲಾ ರಾಜಕಾರಣ’: ಇವರಲ್ಲೇ ಒಬ್ಬರೇಕೆ ಭಾರತದ ಪ್ರಧಾನಿಯಾಗಬಾರದು? 

ಒಂದೊಮ್ಮೆ ಟ್ರಂಪ್‌ ರೀತಿಯಲ್ಲಿ ತಮ್ಮ ಹಣವನ್ನು ತಾವೇ ಸುರಿದು ಅದಾನಿ, ಅಂಬಾನಿ, ರಾಮದೇವ್‌ ತರಹದವರು ಪ್ರಧಾನಿಗಳಾದರೆ, ಜನರಿಗೂ ಅವರನ್ನು ಎದುರಿಸುವುದು ಸುಲಭವಾಗುತ್ತದೆ. ಮುಖಾಮುಖಿಯಾಗಿ ಪ್ರಶ್ನೆಗಳನ್ನು ಎಸೆಯಲು ಸಾಧ್ಯವಾಗುತ್ತದೆ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಆಗಾಗ ದೇವೇಗೌಡರು ಹೇಳುವ ಮಾತೊಂದಿದೆ; ‘ಪ್ರಾದೇಶಿಕ ಪಕ್ಷಗಳಿಗೆ ಕಾರ್ಪೊರೇಟ್‌ ಕಂಪನಿಗಳು ಫಂಡ್‌ ಕೊಡುವುದಿಲ್ಲ. ಹಣವಿಲ್ಲದೆ ಚುನಾವಣೆ ನಡೆಸಲು ಸಾಧ್ಯವಿಲ್ಲ’ ಎಂಬುದು ಅವರ ಮಾಮೂಲಿ ಹೇಳಿಕೆ.

ಕಾರ್ಪೊರೇಟ್‌ ಸಂಸ್ಥೆಗಳ ಹಣಬಲವಿಲ್ಲದೆ ಇವತ್ತಿಗೆ ಭಾರತದಲ್ಲಿ ಚುನಾವಣೆ ಎದುರಿಸಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಅದರಲ್ಲೂ ಪ್ರಧಾನಮಂತ್ರಿಯಂಥ ಪ್ರಮುಖ ಹುದ್ದೆಗಳ ಮೇಲೆ ಕಣ್ಣಿಡಬೇಕಾದರೆ ದೊಡ್ಡ ಮಟ್ಟದ ಹೂಡಿಕೆಯನ್ನು ತರುವ ತಾಕತ್ತೂ ಇರಬೇಕು ಎಂಬುದು ರಹಸ್ಯದ ಸಂಗತಿ ಏನಲ್ಲ.

ಇದೇ ಕಾರಣಕ್ಕೆ ಭಾರತದಲ್ಲಿ ಹೆಚ್ಚು ಕಡಿಮೆ ಮುಂದಿನ ಪ್ರಧಾನಿ ಯಾರಾಗಬೇಕು ಎಂಬುದನ್ನು ಉದ್ಯಮ ಸಾಮ್ರಾಜ್ಯ ನಿರ್ಧರಿಸುವ ದಿನಗಳು ಬಂದಾಗಿವೆ. ಈ ದಿಸೆಯಲ್ಲಿ ಕೆಲವು ಕುಟುಂಬಗಳ ಕಾರುಬಾರು ಜೋರಾಗಿಯೇ ಇದೆ. ಅವುಗಳಲ್ಲೊಂದು ಅಂಬಾನಿ ಕುಟುಂಬ. ಇಂದಿರಾಗಾಂಧಿ ಹಾಗೂ ಅವರ ನಂತರ ಅಧಿಕಾರಕ್ಕೇರಿದ ಹೆಚ್ಚು ಕಡಿಮೆ ಎಲ್ಲಾ ಪ್ರಧಾನಿಗಳ ಜೊತೆಗೂ ‘ರಿಲಯನ್ಸ್ ಕುಟುಂಬ’ ಹತ್ತಿರದ ಒಡನಾಟ ಇಟ್ಟುಕೊಂಡೇ ಬಂದಿದೆ. ಇದಕ್ಕೆ ಹೇರಳ ಸಾಕ್ಷಿಗಳು ಸಿಗುತ್ತವೆ. ಈ ವಿಶೇಷ ಸಂಬಂಧ ಪ್ರಧಾನಿ ಮೋದಿ ಕಾಲದಲ್ಲೂ ಮುಂದುವರಿದಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಅದನ್ನವರೀಗ ಬಹಿರಂಗವಾಗಿಯೇ ಒಪ್ಪಿಕೊಳ್ಳುತ್ತಿದ್ದಾರೆ.

ರಾಫೇಲ್‌ ಯುದ್ಧ ವಿಮಾನ ಹೇಳದೇ ಕೇಳದೆ ಎಚ್‌ಎಎಲ್‌ನಿಂದ ಹಾರಿ ಅನಿಲ್‌ ಅಂಬಾನಿಯ ರಿಲಯನ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಲಿ., ಅಂಗಳದಲ್ಲಿ ಹೋಗಿ ಇಳಿದದ್ದು ಇದಕ್ಕೊಂದು ತಾಜಾ ಉದಾಹರಣೆ. ಜಿಯೋ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡಿದ್ದು ಇನ್ನೊಂದು ಉದಾಹರಣೆಯಾಗಬಹುದು. ಹೀಗೆ ಸರಣಿ ಮುಂದುವರಿಯುತ್ತದೆ. ಪರಿಣಾಮ ‘ದಿ ಪ್ರೈಮ್ ಮಿನಿಸ್ಟರ್ಸ್ ಆಫ್ ರಿಲಯನ್ಸ್ ಇಂಡಿಯಾ’ ಎಂಬಂತಾಗಿದೆ ಸದ್ಯದ ಭಾರತದ ಪರಿಸ್ಥಿತಿ. ಪ್ರಧಾನಿ ಯಾವ ಪಕ್ಷದವರೇ ಆದರೂ, ಅವರ ಸೂತ್ರದಾರ ಇದೇ ರಿಲಯನ್ಸ್‌ ಕುಟುಂಬವಾಗಿರುತ್ತದೆ ಎಂಬುದು ಅದರ ತಿರುಳು. ಇವರ ಆರ್ಥಿಕ ಬೆಂಬಲವಿಲ್ಲದೆ ಯಾರೂ ಈ ಉನ್ನತ ಸ್ಥಾನದ ಕನಸು ಕಾಣುವುದೂ ಅಸಾಧ್ಯ ಎಂಬಂತಿದೆ ಪರಿಸ್ಥಿತಿ.

ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿಯ ಕಥೆ ಹೀಗಾದರೆ, ರಾಜಕೀಯದೊಂದಿಗಿನ ನಂಟು ಓರ್ವ ಉದ್ಯಮಿಯನ್ನು ಹೇಗೆ ಹಿಮಾಲಯದೆತ್ತರಕ್ಕೆ ತಂದು ನಿಲ್ಲಿಸುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ಕಾಣಿಸಿಕೊಳ್ಳುತ್ತಾರೆ ಅದಾನಿ ಗ್ರೂಪ್‌ನ ಗೌತಮ್‌ ಅದಾನಿ.

1997ರಲ್ಲಿ ಗ್ಯಾಂಗ್‌ಸ್ಟರ್‌ ಒಬ್ಬನಿಂದ ಗೌತಮ್‌ ಅದಾನಿ ಅಪಹರಣಕ್ಕೆ ಒಳಗಾಗಿದ್ದರು ಎನ್ನುತ್ತದೆ ‘ದಿ ಸಿಟಿಜನ್‌’. ಅದೇ ಅದಾನಿ 2003ರ ಸುಮಾರಿಗೆ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆಪ್ತ ಕೂಟಕ್ಕೆ ಲಗ್ಗೆ ಹಾಕುತ್ತಾರೆ. ಅಲ್ಲಿಂದ ಅದಾನಿ ಮುಟ್ಟಿದ್ದೆಲ್ಲ ಚಿನ್ನವಾಯಿತು. ಹೀಗಿದ್ದೂ 2014ರ ವರೆಗೆ ಅದಾನಿ ಉದ್ಯಮ ರಂಗದ ಕುಳವೇನೂ ಆಗಿರಲಿಲ್ಲ. ಅವತ್ತಿಗೆ ಟಾಟಾ, ರಿಲಯನ್ಸ್‌, ಬಿರ್ಲಾ, ಗೋದ್ರೆಜ್, ಬಜಾಜ್, ಮಿತ್ತಲ್ ಕುಟುಂಬಗಳ ಮಧ್ಯೆ ಅದಾನಿ ಏನಿದ್ದರೂ ಬಚ್ಚಾ.

ಆದರೆ ಯಾವಾಗ ನರೇಂದ್ರ ಮೋದಿ ಎಂಬ ವ್ಯಕ್ತಿ ಪ್ರಧಾನಿ ಹುದ್ದೆಯಲ್ಲಿ ಕುಳಿತರೋ ಅದಾನಿ ಗ್ರಹಗತಿ ಬದಲಾಗಿ ಹೋಯಿತು. ಇವತ್ತು ದೇಶದ ಅತೀ ದೊಡ್ಡ ಬಂದರು ನಿರ್ವಾಹಕ ಕಂಪನಿಯಾಗಿದೆ ಅದಾನಿ ಗ್ರೂಪ್‌. ಜತೆಗೆ ದೇಶದ ಅತೀ ದೊಡ್ಡ ಖಾಸಗಿ ರಂಗದ ವಿದ್ಯುತ್‌ ಉತ್ಪಾದಕ ಕಂಪನಿಯೂ ಹೌದು. ಹೀಗಿದ್ದೂ ಅದಾನಿಯ ನಾಗಾಲೋಟ ನಿಂತಿಲ್ಲ. ಮೋದಿ ಪಿಎಂ ಸ್ಥಾನದಲ್ಲಿ ಕೂರುತ್ತಿದ್ದಂತೆ ಕಲ್ಲಿದ್ದಲು, ಆಯಿಲ್ ಮತ್ತು ಗ್ಯಾಸ್ ಶೋಧನೆ, ಗ್ಯಾಸ್‌ ಹಂಚಿಕೆ, ಅಡುಗೆ ಎಣ್ಣೆ, ಅಂತಾರಾಷ್ಟ್ರೀಯ ವ್ಯಾಪಾರ, ಆಹಾರ ಉತ್ಪನ್ನಗಳ ಸಂಗ್ರಹಗಾರ, ರಿಯಲ್‌ ಎಸ್ಟೇಟ್‌, ಶಿಕ್ಷಣ, ಮೂಲಸೌಕರ್ಯ, ನಿರ್ಮಾಣ… ಹೀಗೆ ಕೈಗೆ ಸಿಕ್ಕಿದ್ದಕ್ಕೆಲ್ಲಾ ಕೈ ಅದಾನಿ ಗ್ರೂಪ್ ಕೈ ಹಾಕಿದೆ. ಅವರೀಗ ಪ್ರಧಾನಿ ಕೋಣೆಗೆ ನಿರ್ಬಂಧ ರಹಿತ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಖಾಸಗಿ ವಿಮಾನದಲ್ಲಿ ಮೋದಿ ಜತೆಗೆ ಒಟ್ಟಿಗೆ ಪ್ರಯಾಣಿಸುತ್ತಾರೆ. ಅಷ್ಟೊಂದು ಆಪ್ತತೆಯನ್ನು ಬೆಳೆಸಿಕೊಂಡಿದ್ದಾರೆ.

ದೇಶದಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿರುವ ಹೊತ್ತಲ್ಲಿ ಅಮೆರಿಕಾ ಮೂಲದ ‘ನ್ಯೂಯಾರ್ಕ್‌ ಟೈಮ್ಸ್‌’ ಬಾಬಾ ರಾಮ್‌ದೇವ್‌ ಕುರಿತು ಸುದೀರ್ಘ ಲೇಖನವೊಂದನ್ನು ಪ್ರಕಟಿಸಿದೆ. ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಏರುವುದರ ಹಿಂದೆ ಬಾಬಾ ರಾಮ್‌ದೇವ್‌ರಂಥ ತಾರಾ ಮೆರುಗಿನ ವ್ಯಕ್ತಿಗಳ ಪಾತ್ರವೂ ಇತ್ತು. ಹಿಂದುತ್ವ ಮತ್ತು ಸ್ವದೇಶಿ ಮಿಶ್ರಣದ ಮೂಲಕ ರಾಮ್‌ದೇವ್‌ ಮೋದಿ ಪ್ರಧಾನಿ ಹುದ್ದೆಗೇರಲು ಕಾರಣರಾದರು. ಇದೀಗ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ ಬಹುರಾಷ್ಟ್ರೀಯ ಕಂಪನಿಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಪತಂಜಲಿ ಬ್ರ್ಯಾಂಡ್‌ ಕಟ್ಟಿ ನಿಲ್ಲಿಸಿದ್ದಾರೆ ಎಂಬುದಾಗಿ ಮ್ಯಾಗಜೀನ್‌ ಹೇಳಿದೆ.

2017-18ನೇ ಆರ್ಥಿಕ ವರ್ಷದಲ್ಲಿ ಅವರ ಕಂಪನಿ ಬರೋಬ್ಬರಿ ಸುಮಾರು 11 ಸಾವಿರ ಕೋಟಿ ವಹಿವಾಟು ನಡೆಸಿದೆ. ರಾಮ್‌ದೇವ್‌ ಹಿಡಿತಗಳು ಎಷ್ಟು ಬಲವಾಗಿವೆ ಎಂದರೆ ಅವರ ಕುರಿತು ಬರೆದ ಪುಸ್ತಕವನ್ನೂ ನಿಷೇಧಿಸಲಾಗಿದೆ. ಅವರ ಶಕ್ತಿ ಯಾವುದೇ ಪ್ರಧಾನ ಮಂತ್ರಿಗಿಂತಲೂ ಕಡಿಮೆಯಾಗಿಲ್ಲ ಎನ್ನುತ್ತದೆ ಈ ವರದಿ.

ಲೇಖನ ಇಷ್ಟಕ್ಕೇ ನಿಲ್ಲದೆ, ರಾಮ್‌ದೇವ್‌ರನ್ನು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆಗೆ ಹೋಲಿಕೆ ಮಾಡಿದೆ. ರಾಮ್‌ದೇವ್‌ ಹೊಸ ತಳಿಯ ಮನುಷ್ಯ. ಟೀಕಾಕಾರರಿಂದಲೂ ರಕ್ಷಣೆ, ಜನಪ್ರಿಯ ತಾರಾಮೆರುಗಿನ ವ್ಯಕ್ತಿತ್ವ, ದೊಡ್ಡ ಸಂಖ್ಯೆಯ ಅಭಿಮಾನಿಗಳ ಹಿಂಡು, ಜತೆಗೆ ಬೃಹತ್‌ ಉದ್ಯಮವನ್ನು ಅವರು ಹೊಂದಿದ್ದಾರೆ ಎನ್ನುತ್ತದೆ ಪತ್ರಿಕೆ. ಟ್ರಂಪ್‌ ರೀತಿಯಲ್ಲಿ ಸಾವಿರಾರು ಕೋಟಿಯ ಉದ್ಯಮ ನಡೆಸುತ್ತ, ಅವರಂತೆಯೇ ಟಿವಿ ಮೂಲಕ ಜನಮನವನ್ನು ಬಾಬಾ ರಾಮ್‌ದೇವ್‌ ತಲುಪಿದ್ದಾರೆ. ಇತ್ತೀಚೆಗೆ ಅವರು ಸ್ವದೇಶಿ ಸಿಮ್‌ಗಳನ್ನು ಬಿಡುಗಡೆ ಮಾಡಲಾಗುವುದು ಎನ್ನುವವರೆಗೆ ಮಾತನಾಡಿದ್ದಾರೆ. ಅದು ಅವರು ಇಡುತ್ತಿರುವ ಹೆಜ್ಜೆಗಳು ಜಾಡನ್ನು ಹೇಳುತ್ತಿದೆ. ಹೀಗಿರುವುವಾಗ ಅವರು ಮುಂದಿನ ದಿನಗಳಲ್ಲಿ ಪ್ರಧಾನಿ ಹುದ್ದೆಗೆ ಸ್ಪರ್ಧೆ ಮಾಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ ಎಂದು ಎನ್‌ವೈಟೈಮ್ಸ್‌ ಅಂದಾಜಿಸಿದೆ.

ಒಂದು ಲೆಕ್ಕದಲ್ಲಿ ನೋಡಿದರೆ ಪ್ರಧಾನಿ ಹುದ್ದೆಗೆ ಏರಲು ಬೇಕಾದ ಎಲ್ಲಾ ‘ಬಲ’ಗಳು ಅವರ ಜತೆಗಿವೆ. ಇನ್ನುಳಿದ ಅದಾನಿ, ಅಂಬಾನಿಗಳಿಗೂ ಆ ಸಾಮರ್ಥ್ಯಗಳಿವೆ. ಸ್ವಲ್ಪ ಹೆಚ್ಚು ಕಡಿಮೆ ಇರಬಹುದಷ್ಟೇ.

ಆದರೆ, ಉದ್ಯಮಿಗಳು ರಾಜಕೀಯ ಪ್ರವೇಶಿಸಲು ಭಾರತದ ಚುನಾವಣಾ ವ್ಯವಸ್ಥೆ ಪೂರಕವಾಗಿಲ್ಲ ಎಂಬ ಅಭಿಪ್ರಾಯವನ್ನು ಮುಂದಿಡುತ್ತಾರೆ ಇಂಡಿಯನ್‌ಮನಿ ಡಾಟ್‌ ಕಾಂನ ಸಂಸ್ಥಾಪಕ ಸಿ. ಎಸ್‌. ಸುಧೀರ್‌. “ಭಾರತದ ರಾಜಕಾರಣದ ಪರಿಸ್ಥಿತಿ ಭಿನ್ನವಾಗಿದೆ. ಇಲ್ಲಿ ವ್ಯಕ್ತಿಯೊಬ್ಬರಿಗೆ ಮತಗಳನ್ನು ಹಾಕುವುದಿಲ್ಲ. ಪಕ್ಷ ಇಲ್ಲಿ ಮುಖ್ಯವಾಗುತ್ತದೆ,” ಎನ್ನುತ್ತಾರೆ ಅವರು.

ಒಂದೊಮ್ಮೆ ರತನ್‌ ಟಾಟಾನೆ ಪ್ರಧಾನಿ ಆಗಬೇಕು ಎಂದು ಬಯಸಿದರೂ, ಅವರನ್ನು ಪ್ರಧಾನಿಯಾಗಿ ಬಿಂಬಿಸಲು ಪಕ್ಷವೊಂದು ಸಿದ್ಧವಿರಬೇಕಾಗುತ್ತದೆ. ಮತ್ತು ಒಂದಷ್ಟು ಸಂಸದರೂ ಅವರನ್ನು ಹಿಂಬಾಲಿಸಬೇಕಾಗುತ್ತದೆ...
ಸಿ. ಎಸ್. ಸುಧೀರ್, ಸಂಸ್ಥಾಪಕ, ಸಿಇಓ, ಇಂಡಿಯನ್ ಮನಿ. 

ಇದರ ಜತೆಗೆ ಅವರು ಕೆಲವು ವಾಸ್ತವ ಸಮಸ್ಯೆಗಳತ್ತಲೂ ಅವರು ಬೆಳಕು ಚೆಲ್ಲುತ್ತಾರೆ. “ಭಾರತದಲ್ಲಿ ಯಾವುದೇ ಉದ್ಯಮಿ ರಾಜಕಾರಣಕ್ಕೆ ಬರಬೇಕು ಎಂದು ಯೋಚನೆ ಮಾಡಿದ ತಕ್ಷಣ ಆತನ ಉದ್ಯಮವನ್ನು ರಾಜಕಾರಣಿಗಳು ಹೊಸಕಿ ಹಾಕುತ್ತಾರೆ. ಇದರಿಂದ ದಶಕಗಳ ಕಾಲ ಕಟ್ಟಿದ ಉದ್ಯಮಕ್ಕೆ ಹೊಡೆತ ಬೀಳುತ್ತದೆ. ಹೀಗಾಗಿ ಇದರತ್ತ ಯಾರೂ ಆಸಕ್ತಿ ತೋರಿಸುವುದಿಲ್ಲ” ಎಂಬುದು ಅವರ ವಿಶ್ಲೇಷಣೆ.

ಇದಲ್ಲದೆ, ಉದ್ಯಮಿಗಳಿಗೆ ರಾಜಕಾರಣಕ್ಕೆ ಬರಬೇಕಾದ ಯಾವ ಅಗತ್ಯವೂ ಇಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಕೆ. ಸಿ. ರಘು. “ಅವರ (ಉದ್ಯಮಿ) ಬಳಿ ನಾಯಿ (ರಾಜಕಾರಣಿ) ಇರುವಾಗ ಅವರು ಯಾಕೆ ಬೊಗಳಬೇಕು.’’ ಎಂದು ಮಾರ್ಮಿಕವಾಗಿ ಪ್ರಶ್ನಿಸುತ್ತಾರೆ ರಘು.

ಉದ್ಯಮಿಗಳು ತಾವೇ ಓಡುವ ಕುದುರೆಯಾಗುವುದಕ್ಕಿಂತ, ಓಡುವ ಕುದುರೆ ಮೇಲೆ ಬೆಟ್‌ ಮಾಡುವುದಕ್ಕೆ ಇಷ್ಟಪಡುತ್ತಾರೆ. ಇವತ್ತು ಉದ್ಯಮದಲ್ಲಿ ರಾಜಕಾರಣವಿಲ್ಲ, ಬದಲಿಗೆ ರಾಜಕಾರಣದಲ್ಲಿ ಉದ್ಯಮ ಬೆರೆತು ಹೋಗಿದೆ. ಹಾಗಾಗಿ ರಾಜಕಾರಣಕ್ಕೆ ಬಂದು ರಿಸ್ಕ್‌ ತೆಗೆದುಕೊಳ್ಳುವುದು ಯಾಕೆ ಎಂದು ಉದ್ಯಮಿಗಳು ದೂರವೇ ಉಳಿದಿದ್ದಾರೆ. ಮತ್ತು ರಾಜಕಾರಣಕ್ಕೆ ಬರುವುದು ಉದ್ಯಮಿಗಳ ಪಾಲಿಗೆ ಆದರ್ಶವೂ ಅಲ್ಲ ಎನ್ನುತ್ತಾರೆ ರಘು.

ಹೀಗೆ, ಇಲ್ಲಿಯವರೆಗೂ ರಾಜಕಾರಣದಿಂದ ದೂರವೇ ಉಳಿದು ಪ್ರಧಾನಿಗಳನ್ನು ಮಾತ್ರ ತಮ್ಮ ಅಂಕೆಯಲ್ಲಿ ಇಟ್ಟುಕೊಂಡು ಬಂದಿದ್ದಾರೆ ಉದ್ಯಮಿಗಳು. ಪರಿಣಾಮ ಆಯಾ ಕಾಲದ ಟೀಕೆ, ವಿರೋಧಗಳಿಂದ ಪರೋಕ್ಷವಾಗಿ ದೂರವೇ ಉಳಿದಿದ್ದಾರೆ. ಟೀಕೆಗಳನ್ನು ಪ್ರಧಾನಿ ಎದುರಿಸುತ್ತಿದ್ದರೆ, ಇವರೆಲ್ಲಾ ಅವರ ಹಿಂದೆ ಅವಿತುಕೊಂಡೇ ಇರುತ್ತಾರೆ.

ಒಂದೊಮ್ಮೆ ಟ್ರಂಪ್‌ ರೀತಿಯಲ್ಲಿ ತಮ್ಮ ಹಣವನ್ನು ತಾವೇ ಸುರಿದು ಅದಾನಿ, ಅಂಬಾನಿ, ರಾಮದೇವ್‌ ತರಹದವರು ಪ್ರಧಾನಿಗಳಾದರೆ, ಜನರಿಗೂ ಅವರನ್ನು ಎದುರಿಸುವುದು ಸುಲಭವಾಗುತ್ತದೆ. ಮುಖಾಮುಖಿಯಾಗಿ ಪ್ರಶ್ನೆಗಳನ್ನು ಎಸೆಯಲು ಸಾಧ್ಯವಾಗುತ್ತದೆ. ಎಷ್ಟರ ಮಟ್ಟಿಗೆ ಉತ್ತರದಾಯಿಗಳಾಗಿರುತ್ತಾರೆ ಎಂಬುದು ಬೇರೆ ಮಾತು. ಕನಿಷ್ಠ ಉತ್ತರದಾಯಿಯಾಗುವ ಹೊಣೆಗಳಾದರೂ ಅವರ ಮೇಲೆ ಬಂದು ಬೀಳುತ್ತಿವೆ.

ಹಾಗಿದ್ದರೆ, ಈ ಗೆರಿಲ್ಲಾ ಮಾದರಿ ತಂತ್ರಗಾರಿಕೆಯಿಂದ ಉದ್ಯಮಿಗಳು ನಿಜಕ್ಕೂ ಹೊರಗೆ ಬರುತ್ತಾರಾ? ಟ್ರಂಪ್ ತೋರಿದ ಧೈರ್ಯ ಇವರಿಗಿದೆಯಾ? ಅದಕ್ಕೆ ಕಾಲವೇ ಉತ್ತರಿಸಬೇಕು.