samachara
www.samachara.com
ರಾಜಕಾರಣದಲ್ಲಿ ಜಾತಿ ಪ್ರಭಾವ: ಜನರ ಮನಸ್ಥಿತಿಯನ್ನು ಬಿಚ್ಚಿಟ್ಟ ಹೊಸ ಅಧ್ಯಯನ
FEATURE STORY

ರಾಜಕಾರಣದಲ್ಲಿ ಜಾತಿ ಪ್ರಭಾವ: ಜನರ ಮನಸ್ಥಿತಿಯನ್ನು ಬಿಚ್ಚಿಟ್ಟ ಹೊಸ ಅಧ್ಯಯನ

ರಾಜಕಾರಣ ಎಂದರೆ ಜಾತಿ ಆಧಾರದ ಮೇಲೆ ನಡೆಯುವ ಆಯ್ಕೆ ಪ್ರಕ್ರಿಯೆ. ಇವತ್ತಿನ ದಿನಗಳಲ್ಲಿ ಕ್ಲೀಷೆಯಂತಾಗಿ ಹೋಗಿರುವ ಈ ಆರೋಪಕ್ಕೆ ಈಗ ಅಧ್ಯಯನಕಾರರು ಅಂಕಿ ಅಂಶಗಳ ಸಾಕ್ಷಿ ಒದಗಿಸಿದ್ದಾರೆ. 

Summary

ಭಾರತೀಯರು ತಮ್ಮ ಜಾತಿಯ, ಧರ್ಮ ಅಥವಾ ಬುಡಕಟ್ಟಿನ ವ್ಯಕ್ತಿಯೇ ತಮ್ಮ ಜನಪ್ರತಿನಿಧಿಯಾಗಬೇಕು ಎಂದು ಬಯಸುತ್ತಾರೆ. ಇದು ಜನಕ್ಕೆ ಗೊತ್ತಿರುವ ವಿಷಯವೇ ಆದರೂ ಇತ್ತೀಚಿಗೆ ಬಿಡುಗಡೆಗೊಂಡ ವರದಿಯೊಂದು ಅಂಕಿ ಅಂಶಗಳ ಸಮೇತ, ಹೀಗೆ ರಾಜಕೀಯದಲ್ಲಿ ಜಾತಿ, ಧರ್ಮ, ಕುಲಗಳು ಕೆಲಸ ಮಾಡುತ್ತಿವೆ ಎಂದು ಮಾಹಿತಿ ನೀಡಿದೆ. ವಿಧಾನಸಭೆ ಅಥವಾ ಲೋಕಸಭಾ ಚುನಾವಣೆಗಳಲ್ಲಿ ಜಾತಿ, ಧರ್ಮಗಳು ಹೇಗೆಲ್ಲಾ ಕೆಲಸ ಮಾಡುತ್ತವೆ ಎಂಬುದರ ಮೇಲೆ ವರದಿ ಬೆಳಕು ಚೆಲ್ಲಿದೆ.

ಅಜೀಮ್‌ ಪ್ರೇಮ್‌ಜಿ ವಿಶ್ವವಿದ್ಯಾಲಯ ಮತ್ತು ಲೋಕನೀತಿ(ಸಿಎಸ್‌ಡಿಎಸ್‌) ಒಟ್ಟಾಗಿ ಸೇರಿ “Politics and Society between elections 2018” ಹೆಸರಿನಲ್ಲಿ ನಡೆಸಿದ ಅಧ್ಯಯನದ ವರದಿ ಇದು.

ಭಾರತದ ಆಂಧ್ರ ಪ್ರದೇಶ, ಬಿಹಾರ್‌, ಮಧ್ಯ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ತೆಲಂಗಾಣಗಳಲ್ಲಿ ಅಧ್ಯಯನ ನಡೆಸಿದ್ದು, 16,680 ಜನರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಸಂಗ್ರಹಿಸಿದ ಮಾಹಿತಿಗಳು ಹೇಳುವಂತೆ ಈ ರಾಜ್ಯಗಳ ಶೇ.55ರಷ್ಟು ಜನ ತಮ್ಮದೇ ಜಾತಿಯ, ಧರ್ಮದ ವ್ಯಕ್ತಿ ತಮ್ಮ ರಾಜಕೀಯ ನಾಯಕನಾಗಬೇಕು ಎಂದು ಬಯಸುತ್ತಾರೆ ಎಂದು ವರದಿ ಹೇಳಿದೆ.

ನಮ್ಮ ಜಾತಿಯವರಿಗಿಂತ, ಬೇರೆ ಜಾತಿಯವರು ನಮ್ಮ ನಾಯಕರಾದರೆ ಚಂದ ಎಂದು ಹೇಳಿರುವವರ ಸಂಖ್ಯೆ ಕೇವಲ ಶೇ.10ರಷ್ಟು ಮಾತ್ರ. ಬೇರೆ ಧರ್ಮದವರೇ ನಮ್ಮ ನಾಯಕರಾಗಬೇಕು ಎಂದಿರುವುದು ಶೇ.9ರಷ್ಟು ಜನ. ರಾಜಕೀಯ ನಾಯಕರ ಜಾತಿ ಮುಖ್ಯವಲ್ಲ ಎಂದು ಶೇ.35ರಷ್ಟು ಜನ ಹೇಳಿದರೆ, ನಮಗೆ ಧರ್ಮ ಮುಖ್ಯವಲ್ಲ ಎಂದಿರುವವರು ಶೇ.37ರಷ್ಟು ಮಂದಿ ಎಂದು ವರದಿಯ ಅಂಕಿ ಅಂಶಗಳು ತಿಳಿಸುತ್ತವೆ.

ಎಲ್ಲಾ ವರ್ಗದ ಜನರಲ್ಲೂ ಕೂಡ ತಮ್ಮ ಸಮುದಾಯದವರನ್ನು ಬಿಟ್ಟು ಇತರರ ಮೇಲೆ ನಂಬಿಕೆಯಿಲ್ಲ. ಜಾತಿ, ವರ್ಗ, ಒಳಪಂಗಡಗಳಲ್ಲೂ ಕೂಡ ಇದೇ ಮನಸ್ಥಿತಿ ಮುಂದುವರೆಯುತ್ತದೆ. ಸಾಮಾನ್ಯವಾಗಿ ಉತ್ತಮ ಜಾತಿ ಎಂದು ಗುರುತಿಸಿಕೊಂಡಿರುವ ಜನರು ಹೆಚ್ಚಾಗಿ ಇತರೆ ಸಮುದಾಯದ ರಾಜಕೀಯ ನಾಯಕರ ಮೇಲೆ ನಂಬಿಕೆ ಇರಿಸಿಲ್ಲ ಎಂದು ವರದಿ ತಿಳಿಸುತ್ತದೆ.

ಜಾತಿಯನ್ನು ಆಪ್ತವಾಗಿಸಿಕೊಂಡವರಲ್ಲಿ ಅನಕ್ಷರಸ್ಥರೇ ಹೆಚ್ಚು:

ವರದಿ ಹೇಳುವಂತೆ, ಉನ್ನತ ಶಿಕ್ಷಣವನ್ನು ಪಡೆದವರಲ್ಲಿ ಹೆಚ್ಚು ಜನ, ಯಾವ ಜಾತಿಯ ನಾಯಕರಾದರೂ ಪರವಾಗಿಲ್ಲ ಎಂಬ ಅಭಿಪ್ರಾಯವನ್ನು ಹೊಂದಿದ್ದಾರೆ. ಹಲವಾರು ಸಮುದಾಯಗಳಲ್ಲಿ ನಮ್ಮ ಜಾತಿಯ ಜನರೇ ನಮ್ಮ ರಾಜಕೀಯ ನಾಯಕರಾಗಬೇಕು ಎಂದು ಬಯಸುವ ಉನ್ನತ ವಿದ್ಯಾಭ್ಯಾಸ ಪಡೆದವರ ಸಂಖ್ಯೆ ಶೇ.47ರಷ್ಟಿದೆ. ಇದೇ ವೇಳೆ ನಮ್ಮ ಜಾತಿಯವರೇ ಬೇಕು ಎನ್ನುವ ಶಾಲಾ ಶಿಕ್ಷಣ ಪೂರೈಸಿದವರ ಸಂಖ್ಯೆ ಶೇ.56 ಇದ್ದರೆ, ಅನಕ್ಷರಸ್ಥರ ಸಂಖ್ಯೆ ಶೇ.63ರಷ್ಟಿದೆ.

ಹೀಗೆ ಇತರೆ ಜಾತಿಯವರ ನಾಯಕತ್ವವನ್ನು ಒಪ್ಪದ ಮೇಲು ಜಾತಿಗಳ ಜನ ಹೆಚ್ಚಿನದಾಗಿ ಅನಕ್ಷರಸ್ಥರೇ ಆಗಿದ್ದಾರೆ. ಶೇ.68ರಷ್ಟು ಮೇಲು ಜಾತಿಗಳಲ್ಲಿನ ಅನಕ್ಷರಸ್ಥ ಜನ ‘ನಮಗೆ ಇತರೆ ಸಮುದಾಯಗಳ ನಾಯಕರ ಮೇಲೆ ಹೆಚ್ಚಿನ ನಂಬಿಕೆ ಇಲ್ಲ’ ಎಂಬ ಅಭಿಪ್ರಾಯವನ್ನು ವ್ಯಕ್ತಿಪಡಿಸಿದ್ದಾರೆ. ಇಂತಹ ಮನಸ್ಥಿಯನ್ನೇ ಹೊಂದಿರುವ ಮೇಲು ವರ್ಗದ, ಶಾಲಾ ಶಿಕ್ಷಣ ಪೂರೈಸಿರುವವರ ಸಂಖ್ಯೆ ಶೇ.56 ಇದ್ದರೆ, ಕಾಲೇಜು ಹಂತ ತಲುಪಿರುವ ಶೇ.46ರಷ್ಟಿದೆ.

ಕಾಲೇಜು ಶಿಕ್ಷಣದ ಹಂತವನ್ನು ತಲುಪಿರುವವರಲ್ಲಿ ನಮ್ಮದೇ ಸಮುದಾಯದ ವ್ಯಕ್ತಿ ರಾಜಕೀಯ ನಾಯಕನಾಗಬೇಕು ಎಂದಿರುವವರಲ್ಲಿ ಆದಿವಾಸಿಗಳು ಅಥವಾ ಪರಿಶಿಷ್ಟ ಪಂಗಡದವರ ಸಂಖ್ಯೆಯೇ ಹೆಚ್ಚು. ಶೇ.60ರಷ್ಟು ಕಾಲೇಜು ಹಂತ ತಲುಪಿರುವ ಆದಿವಾಸಿ ಅಥವಾ ಪರಿಶಿಷ್ಟ ಜನಾಂಗದ ವ್ಯಕ್ತಿಗಳು ತಮ್ಮದೇ ಸಮುದಾಯದ ನಾಯಕ ಬೇಕು ಎಂದಿದ್ದಾರೆ. ಸಾಮಾಜಿಕ ಸಂರಚನೆಯಲ್ಲಿ ಕೆಳಭಾಗದಲ್ಲಿ ಗುರುತಿಸಿಕೊಳ್ಳುವ ಆದಿವಾಸಿ ಅಥವಾ ಪರಿಶಿಷ್ಟ ಪಂಗಡದ ಅನಕ್ಷರಸ್ಥ ವ್ಯಕ್ತಿಗಳ ಪೈಕಿ ಶೇ.66 ಜನ ತಮ್ಮ ಜನಾಂಗದ ನಾಯಕನನ್ನು ಬಯಸುತ್ತಾರೆ.

ನಮ್ಮ ಧರ್ಮದವರೇ ಬೇಕು ಎನ್ನುವವರೆಷ್ಟು ಮಂದಿ?:

ನಮ್ಮ ಧರ್ಮದವರೇ ನಮ್ಮ ರಾಜಕೀಯ ಪ್ರತಿನಿಧಿ ಆಗಬೇಕು ಎಂದು ಬಯಸುವ ಕಾಲೇಜ ಹಂತ ತಲುಪಿರುವ ಹಿಂದೂಗಳ ಸಂಖ್ಯೆ ಶೇ.48 ಆದರೆ ಮುಸಲ್ಮಾನರ ಸಂಖ್ಯೆ ಶೇ.48ರಷ್ಟಿದೆ. ಕಾಲೇಜು ಹಂತ ತಲುಪಿದ ಕ್ರೈಸ್ತ ಸಮುದಾಯದ ಶೇ.56ರಷ್ಟು ಜನ ತಮ್ಮದೇ ಸಮುದಾಯಯ ನಾಯಕನನ್ನು ಹೊಂದಲು ಇಚ್ಚಿಸಿದ್ದಾರೆ.

ಶಾಲಾ ವಿದ್ಯಾಭ್ಯಾಸ ಪೂರೈಸಿರುವ ಹಿಂದೂಗಳ ಪೈಕಿ ಶೇ.57, ಮುಸಲ್ಮಾನರ ಪೈಕಿ ಶೇ.51 ಹಾಗೂ ಕ್ರೈಸ್ತರ ಪೈಕಿ ಶೇ.47 ಜನ ಅವರವರ ಸಮುದಾಯದ ನಾಯಕರನ್ನೇ ಹೊಂದಲು ಬಯಸಿದ್ದಾರೆ. ಅನಕ್ಷರಸ್ಥರ ಪೈಕಿ ಶೇ.62ರಷ್ಟು ಹಿಂದೂಗಳು, ಶೇ.57ರಷ್ಟು ಮುಸಲ್ಮಾನರು ಮತ್ತು ಶೇ.56ರಷ್ಟು ಕ್ರೈಸ್ತರು ತಮ್ಮ ಧರ್ಮದ ನಾಯಕರೇ ಬೇಕು ಎಂದಿದ್ದಾರೆ.

ಮಧ್ಯ ಪ್ರದೇಶ ಮುಂದೆ:

ತಮ್ಮದೇ ಜಾತಿ ಮತ್ತು ಸಮುದಾಯದವರು ನಮ್ಮ ನಾಯಕರಾಗಬೇಕು ಎಂಬ ಪೂರ್ವಾಗ್ರಹ ಹೊಂದಿರುವವರ ಪೈಕಿ ಮಧ್ಯ ಪ್ರದೇಶದ ಜನರೇ ಮುಂದಿದ್ದಾರೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಕೊನೆಯ ಸ್ಥಾನದಲ್ಲಿವೆ.

ಮಧ್ಯ ಪ್ರದೇಶದ ಶೇ.65ರಷ್ಟು ಜನರು ತಮ್ಮದೇ ಜಾತಿಯ ನಾಯಕನನ್ನು ಹೊಂದಲು ಬಯಸಿದರೆ, ಶೇ.64ರಷ್ಟು ಮಂದಿ ತಮ್ಮ ಧರ್ಮದ ನಾಯಕ ಬೇಕು ಎಂದಿದ್ದಾರೆ ಎಂದು ವರದಿ ಹೇಳುತ್ತದೆ.

ಜಾತಿ ಧರ್ಮದ ಪೂರ್ವಾಗ್ರಗಳ ಪೈಕಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಕೊನೆ ಸ್ಥಾನದಲ್ಲಿವೆ. ಆಂಧ್ರದ ಶೇ.43ರಷ್ಟು ಜನ ತಮ್ಮದೇ ಜಾತಿಯ ನಾಯಕನನ್ನು ಮತ್ತು ಶೇ.38ರಷ್ಟು ಮಂದಿ ತಮ್ಮದೇ ಧರ್ಮದ ನಾಯಕಯನ್ನು ಹೊಂದಲು ಇಚ್ಚಿಸಿದ್ದಾರೆ. ತೆಂಗಾಣದ ಶೇ.48ರಷ್ಟು ಜನ ತಮ್ಮ ಜಾತಿಯ ಪ್ರತಿನಿಧಿ ಮತ್ತು ಶೇ.46ರಷ್ಟು ಜನ ತಮ್ಮ ಧರ್ಮದ ಪ್ರತಿನಿಧಿಯನ್ನು ಇಚ್ಚಿಸಿರುವುದಾಗಿ ಹೇಳಿದ್ದಾರೆ ಎಂದು ವರದಿಯ ಅಂಕಿ ಅಂಶಗಳು ತಿಳಿಸುತ್ತವೆ.

ತಮ್ಮ ಜಾತಿ ಧರ್ಮಗಳನ್ನು ಬಿಟ್ಟು ಇತರೆ ಜಾತಿ ಧರ್ಮಗಳ ನಾಯಕರನ್ನು ಬಯಸುತ್ತೇವೆ ಎಂದು ಹೇಳಿರುವವರ ಪೈಕಿ ಜಾರ್ಖಂಡ್‌ ಮತ್ತು ರಾಜಸ್ಥಾನ ರಾಜ್ಯಗಳಿವೆ. ಈ ರಾಜ್ಯಗಳ ಶೇ.10ರಷ್ಟು ಮಂದಿ ಜಾತಿ ಧರ್ಮಗಳ ಪೂರ್ವಾಗ್ರಹಗಳನ್ನು ಬಿಟ್ಟು ಹೊರಬಂದಿದ್ದಾರೆ.

ರಾಜಕಾರಣದಲ್ಲಿ ಜಾತಿ ಪ್ರಭಾವ: ಜನರ ಮನಸ್ಥಿತಿಯನ್ನು ಬಿಚ್ಚಿಟ್ಟ ಹೊಸ ಅಧ್ಯಯನ
ರಾಜಕಾರಣದಲ್ಲಿ ಜಾತಿ ಪ್ರಭಾವ: ಜನರ ಮನಸ್ಥಿತಿಯನ್ನು ಬಿಚ್ಚಿಟ್ಟ ಹೊಸ ಅಧ್ಯಯನ

ಭಾರತದ ರಾಜಕಾರಣದಲ್ಲಿ ಜಾತಿ ಧರ್ಮಗಳ ಪ್ರಭಾವ ಏನು ಎನ್ನುವುದಕ್ಕೆ ಸದ್ಯದ ಈ ವರದಿ ನೀಡಿರುವ ಅಂಕಿ ಅಂಶಗಳು ಬೆಳಕು ಚೆಲ್ಲಿವೆ. ರಾಜಕಾರಣಿಗಳ ಸ್ವಜಾತಿ ಪ್ರೇಮ ಮತ್ತು ಇತರೆ ಸಮುದಾಯಗಳ ಕಡೆಗಣನೆ ಕೂಡ ಜನರ ಜಾತಿ ಧರ್ಮಗಳ ಕುರಿತಾದ ಪ್ರಜ್ಞೆ ಗಟ್ಟಿಯಾಗುವುದಕ್ಕೆ ಕಾರಣವಾಗುತ್ತಿದೆ ಎನ್ನುವುದಕ್ಕೆ ಯಾವ ಅಡ್ಡಿಯೂ ಇಲ್ಲ.

ಮಾಹಿತಿ ಮೂಲ: ಇಂಡಿಯಾಸ್ಪೆಂಡ್‌