samachara
www.samachara.com
ಇಮ್ರಾನ್ ಖಾನ್: ಮೇಕಿಂಗ್ ಆಫ್ ಪಾಕಿಸ್ತಾನ್ ‘ಪ್ಲೇಬಾಯ್’ ಪ್ರೈಮ್‌ ಮಿನಿಸ್ಟರ್!
FEATURE STORY

ಇಮ್ರಾನ್ ಖಾನ್: ಮೇಕಿಂಗ್ ಆಫ್ ಪಾಕಿಸ್ತಾನ್ ‘ಪ್ಲೇಬಾಯ್’ ಪ್ರೈಮ್‌ ಮಿನಿಸ್ಟರ್!

ಸೇನೆ, ಬಂಡುಕೋರರು ಹಾಗೂ ಜನ ಎಂಬ ಮೂರು ಅಗತ್ಯ ಹಕ್ಕಿಗಳನ್ನು ಒಂದೇ ಕಲ್ಲಿನಲ್ಲಿ ಹೊಡೆದ ಇಮ್ರಾನ್‌ ಖಾನ್‌, ರಾಜಕೀಯದಲ್ಲಿ ಗೆಲುವಿನ ಜಾಡವನ್ನು ಗುರುತಿಸಿಕೊಳ್ಳಲು ತೆಗೆದುಕೊಂಡ ಸಮಯ ಎರಡು ದಶಕ!

ಅದೊಂದು ಹಳೆ ಲಾಹೋರ್‌ ನಗರದ ಮೈದಾನ. ಅಲ್ಲಿ ಅವತ್ತು ಗಡಿಬಿಡಿಯಲ್ಲಿ ಜನ ಸೇರುತ್ತಿದ್ದರು. ಅವರ ಮುಂದೆ ಆಳೆತ್ತರದ ವೇದಿಕೆ ಹಾಕಲಾಗಿತ್ತು. ಆ ವೇದಿಕೆ ಮೇಲೆ ಇಬ್ಬರ ಫೋಟೋಗಳು ನೇತಾಡುತ್ತಿದ್ದವು. ಒಂದರಲ್ಲಿ ಪಾಕಿಸ್ಥಾನದ ಸಂಸ್ಥಾಪಕ ಮಹಮ್ಮದ್‌ ಅಲಿ ಜಿನ್ನಾ; ಮತ್ತೊಂದರಲ್ಲಿ ಇಮ್ರಾನ್‌ ಖಾನ್‌.

ಸ್ವಲ್ಪ ಹೊತ್ತಿನಲ್ಲಿ ಮೈದಾನ ತುಂಬಿ ಜನರ ನೂಕಾಟ, ತಲ್ಳಾಟ ಆರಂಭವಾಯಿತು. ಅಷ್ಟೊತ್ತಿಗೆ, ‘ಪಾಕಿಸ್ತಾನವನ್ನು ಉಳಿಸುವವರು ಯಾರು?’ ಎಂಬ ಧ್ವನಿ ಮೊಳಗಿತು. ಹಿಂದೆಯಿಂದ “ಇಮ್ರಾನ್‌ ಖಾನ್.. ಇಮ್ರಾನ್‌ ಖಾನ್” ಎಂಬ ಘೋಷಣೆ. ಆಗ ಅಪ್ಪಟ ಸಿನಿಮಾ ಹೀರೋನಂತೆ ವೇದಿಕೆ ಪ್ರವೇಶಿಸಿದರು ಕ್ರಿಕೆಟಿಗ, ರಾಜಕಾರಣಿ, ‘ಪ್ಲೇಬಾಯ್‌’ ಇಮ್ರಾನ್‌ ಖಾನ್‌.

ಒಂದು ಕೈಯಲ್ಲಿ ಮೈಕು, ಇನ್ನೊಂದು ಕೈಯಲ್ಲಿ ಸಣ್ಣ ಪುಸ್ತಕ ಹಿಡಿದುಕೊಂಡು ಬಂದ ಖಾನ್, “ಪಾಕಿಸ್ತಾನದ ಮೇಲೆ ವಿಶ್ವಾಸವಿಡಿ,” ಎಂದರು. ಜನರ ಕರತಾಡನ ಮುಗಿಲು ಮುಟ್ಟಿತ್ತು. ಇದೆಲ್ಲಾ ನಡೆದಿದ್ದು 1998ರಲ್ಲಿ. ಅದು ಖಾನ್‌ ತಮ್ಮ ತವರು ಲಾಹೋರ್‌ನಲ್ಲಿ ಹಮ್ಮಿಕೊಂಡಿದ್ದ ಮೊತ್ತ ಮೊದಲ ಬೃಹತ್‌ ರಾಜಕೀಯ ಸಮಾವೇಶ.

ಅವತ್ತು ಆ ಸಮಾವೇಶ ಕಂಡವರು ಇಮ್ರಾನ್ ಖಾನ್‌ ಏನೋ ಮಾಡಿ ಬಿಡುತ್ತಾನೆ ಎಂದುಕೊಂಡಿದ್ದರು. ಆದರೆ, ಹಾಗೇನೂ ಆಗಲಿಲ್ಲ. ಯಾವುದೂ ರಾತ್ರೋ ರಾತ್ರಿ ಬದಲಾಗಲು ಭಾರತ- ಪಾಕಿಸ್ತಾನದಂತಹ ಉಪಖಂಡದ ದೇಶಗಳಲ್ಲಿ ಸಾಧ್ಯವಿಲ್ಲ ಕೂಡ.

ಇಮ್ರಾನ್ ಖಾನ್ ರಾಜಕೀಯ ಪ್ರವೇಶದ ಬೆನ್ನಲ್ಲೇ ಸರಣಿ ಸಮಾವೇಶಗಳೇನೋ ಒಂದರ ಹಿಂದೆ ಒಂದು ಆಯೋಜನೆಯಾದವು. ಎಲ್ಲಾ ಸಮಾವೇಶಗಳಲ್ಲೂ ‘ಪಾಕಿಸ್ತಾನ್ ತೆಹ್ರೀಕ್‌-ಇ-ಇನ್ಸಾಫ್‌ (ಪಿಟಿಐ)’ ಪಕ್ಷದ ಕೆಂಪು ಮತ್ತು ಹಸಿರು ಬಣ್ಣದ ಧ್ವಜ, ವೇದಿಕೆ ಮೇಲೆ ನೇತಾಡುವ ಖಾನ್‌ ಮತ್ತು ಜಿನ್ನಾರ ಫೋಟೋಗಳು ಇರುತ್ತಿದ್ದವು. ಸಮಾವೇಶ ಸ್ಥಳ ಬದಲಾದರೂ ಮುಖಗಳು ಬದಲಾಗುತ್ತಿರಲಿಲ್ಲ.

ಇಮ್ರಾನ್‌ ಖಾನ್‌ ರಾಜಕೀಯದ ಆರಂಭಿಕ ದಿನಗಳು
ಇಮ್ರಾನ್‌ ಖಾನ್‌ ರಾಜಕೀಯದ ಆರಂಭಿಕ ದಿನಗಳು
ಚಿತ್ರ ಕೃಪೆ: ಡಾನ್‌

ಜತೆಗೆ ಇಲ್ಲಿಗೆ ಒಂದಷ್ಟು ಪತ್ರಕರ್ತರು ಬರುತ್ತಿದ್ದರು. ಸ್ಥಳೀಯ ಮತ್ತು ಅಂತರಾಷ್ಟ್ರೀಯ ಪತ್ರಕರ್ತರ ಅದೇ ಮುಖಗಳು ಯಾವಾಗಲೂ ಕಾಣಿಸುತ್ತಿದ್ದವು. ಅವರೂ ಕೂಡ ವರದಿಗಾರಿಕೆ ತಮ್ಮ ರಿವಾಜು ಎಂಬಂತೆ ಕೆಲಸ ಮುಗಿಸುತ್ತಿದ್ದರು.

ಏಷಿಯಾ ಬಹುತೇಕ ದೇಶಗಳಲ್ಲಿ ಕಾಣಿಸುವಂತೆ, ಪಾಕಿಸ್ತಾನದ ರಾಜಕೀಯ ಸಮಾವೇಶಗಳಲ್ಲಿ ಟಿಪಿಕಲ್ ಅನ್ನಿಸುವ ಪಟಾಕಿ, ಬ್ಯಾಂಡ್‌ ಸಂಗೀತದ ಅಬ್ಬರ ಇರುತ್ತದೆ. ಇಮ್ರಾನ್ ಖಾನ್ ಸಮಾವೇಶಗಳೂ ಇದಕ್ಕೆ ಹೊರತಾಗಿರಲಿಲ್ಲ. ಇಷ್ಟರ ಆಚೆಗೆ ಎರಡು ದಶಕದ ಹಿಂದೆ ಪಾಕಿಸ್ತಾನದ ರಾಜಕೀಯದಲ್ಲಿ ಇಮ್ರಾನ್ ಖಾನ್ ಹೆಚ್ಚಿನದ್ದೇನನ್ನೂ ಸಾಧಿಸಿ ತೋರಿಸಲಿಲ್ಲ. ಇವುಗಳ ಜತೆಗೆ ‘ಅದೇ ರಾಗ ಅದೇ ಹಾಡು’ ಎಂಬಂತೆ ಆಂಗ್ಲ ಪತ್ರಿಕೆಯೊಂದರಲ್ಲಿ ‘ಐಯಾಮ್‌ ಡಿಮ್‌’ ಹೆಸರಿನಲ್ಲಿ ಕಾಲಂ ಬರೆದುಕೊಂಡು ಬರುತ್ತಿದ್ದರು.

ಹೀಗಿದ್ದೂ ಛಲ ಬಿಡದ ತ್ರಿವಿಕ್ರಮನಂತೆ ರಾಜಕೀಯ, ಬದಲಾವಣೆ ಎಂದು ಮಾತನಾಡಿಕೊಂಡು ಬಂದರು ಇಮ್ರಾನ್‌ ಖಾನ್. ಅವರ ಈ ರಾಜಕೀಯ ವರಸೆ ಹೇಗಿರುತ್ತಿತ್ತು ಎಂದರೆ, ಸೋಲಲೇಬೇಕು ಎಂದು ನಿರ್ಧಾರ ತೆಗೆದುಕೊಂಡ ಸೈನಿಕನೊಬ್ಬನ ಕೆಚ್ಚೆದೆಯ ಹೋರಾಟದಂತೆ ಕಾಣಿಸುತ್ತಿತ್ತು. ಅವತ್ತಿಗೆ ಒಂದು ದಿನ ಇಮ್ರಾನ್‌ ಖಾನ್‌ ಪಾಕಿಸ್ತಾನದಂಥ ವಿಲಕ್ಷಣ ದೇಶದ ಪ್ರಧಾನಿಯಾಗುತ್ತಾರೆ ಎಂದು ಊಹಿಸಲು ಸಾಧ್ಯವಿರಲಿಲ್ಲ. ಬಹುಶಃ ಅವರಿಗೂ ಆ ನಂಬಿಕೆ ಇತ್ತೋ ಇಲ್ಲವೋ.

ಹೀಗಿದ್ದ ‘ಇಮ್ರಾನ್‌ ಖಾನ್‌’ ಹೆಸರು ಮೊದಲ ಬಾರಿಗೆ 2013ರ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ವೇಳೆ ಗಂಭೀರವಾಗಿ ಚರ್ಚೆಗೆ ಬಂತು. ಅದು ಒಂದು ರೀತಿಯಲ್ಲಿ ಖಾನ್‌ ರಾಜಕೀಯದ ಹೊರಳು ಹಾದಿ. ಅವತ್ತು 59 ವರ್ಷದ ಇಮ್ರಾನ್‌ ಖಾನ್‌ ನಡೆದು ಬರುತ್ತಿದ್ದರೆ ಹಿಂದೆ ಸಾವಿರಾರು ಜನ ಬರುತ್ತಿದ್ದರು. 2012ರ ಅಕ್ಟೋಬರ್‌ನಲ್ಲಿ ಅವರು ಹಮ್ಮಿಕೊಂಡಿದ್ದ ಲಾಹೋರ್‌ ಸಮಾವೇಶಕ್ಕೆ 1 ಲಕ್ಷಕ್ಕೂ ಅಧಿಕ ಜನರ ಹರಿದು ಬಂದಾಗಲಂತೂ ಇಸ್ಲಾಮಾಬಾದ್‌ನಲ್ಲಿ ಇಮ್ರಾನ್‌ ಹೆಸರು ಗಟ್ಟಿಯಾಗಿ ಕೇಳಿ ಬರಲು ಆರಂಭಿಸಿತು.

ಮೇಲ್ಮಧ್ಯಮ ವರ್ಗ, ಶ್ರೀಮಂತ ಮನೆತನದ ಹೆಂಗಸರು, ಕಾರ್ಮಿಕರು, ವರ್ತಕರು, ಶಿಕ್ಷಕರೆಲ್ಲಾ ಖಾನ್‌ ಸಮಾವೇಶಗಳಿಗೆ ಹರಿದು ಬರಲಾರಂಭಿಸಿದರು. ಮೊದಲ ಬಾರಿಗೆ ಹೊಸ ಖಾನ್‌ ಮುಂದೆ ಹೊಸ ಮುಖಗಳು ಕಾಣುತ್ತಿದ್ದವು. ಜತೆಗೆ ಪಾಕಿಸ್ತಾನದ ಬಹುಸಂಖ್ಯಾತ 30ರ ಆಸುಪಾಸಿನ ಯುವಕ- ಯುವತಿಯರಿಗೆ ಖಾನ್‌ ರಾಜಕೀಯ ಹಾಗೂ ಭಾಷಣಗಳಲ್ಲಿ ಹೊಸ ಭರವಸೆ ಹುಟ್ಟಿತ್ತು.

ಏರಿಳಿತದ ಬದುಕು:

ಇಂತಹ ಏರಿಳಿತ ಇಮ್ರಾನ್‌ ಖಾನ್‌ ರಾಜಕೀಯ ಜೀವನಕ್ಕೆ ಮಾತ್ರವೇ ಸೀಮಿತವಾಗಿಲ್ಲ ಎಂಬುದನ್ನು ಗಮನಿಸಬೇಕಿದೆ. ಅವರ ಕ್ರಿಕೆಟ್‌ ಜೀವನ ಮತ್ತು ವೈಯಕ್ತಿಕ ಬದುಕಲ್ಲೂ ಇಂತಹ ಏರಿಳಿತಗಳು ದಾಖಲಾಗಿವೆ.

25 ನವೆಂಬರ್ 1952ರಲ್ಲಿ ಲಾಹೋರ್‌ನ ಶ್ರೀಮಂತ ಪಠಾನ್‌ ಮನೆತನದಲ್ಲಿ ಹುಟ್ಟಿದವರು ಇಮ್ರಾನ್‌ ಖಾನ್‌. ಅವರ ತಂದೆ ಇಕ್ರಾಮುಲ್ಲಾಹ್‌ ಖಾನ್ ನಿಯಾಜಿ ಆ ಕಾಲಕ್ಕೇ ಇಂಜಿನಿಯರ್‌. ಶ್ರೀಮಂತ ಮನೆತನಕ್ಕೆ ತಕ್ಕಂತೆ ಅವರ ಶಿಕ್ಷಣವೂ ಸಿಕ್ಕಿತ್ತು. ಖಾನ್‌ ಪದವಿ ಪುರ್ಣಗೊಳಿಸುವ ಮೊದಲೇ, 18ನೇ ವಯಸ್ಸಿಗೆ ಪಾಕಿಸ್ತಾನ ಪರ ಟೆಸ್ಟ್‌ ಕ್ರಿಕೆಟ್‌ ಆಡಲು ಅಖಾಡಕ್ಕೆ ಇಳಿದರು. ನಂತರ ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯದ ಪದವಿಯೊಂದಿಗೆ 1976ರಲ್ಲಿ ಪೂರ್ಣ ಪ್ರಮಾಣದಲ್ಲಿ ಪಾಕಿಸ್ತಾನ ಕ್ರಿಕೆಟ್‌ ಆಟಗಾರರಾದರು. 1982ರ ಹೊತ್ತಿಗೆ ಪಾಕಿಸ್ತಾನದ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ಕ್ಯಾಪ್‌ ಧರಿಸಿದರು ಖಾನ್.

ಕ್ರಿಕೆಟಿಗ ಇಮ್ರಾನ್‌ ಖಾನ್
ಕ್ರಿಕೆಟಿಗ ಇಮ್ರಾನ್‌ ಖಾನ್

ಕ್ರಿಕೆಟ್‌ನಲ್ಲಿ ವಿಶ್ವದ ಅತ್ಯುತ್ತಮ ಆಲ್‌ರೌಂಡರ್‌ ಎಂಬ ಹೆಸರು ಸಂಪಾದಿಸಿದ ಖಾನ್‌ರ ಕ್ರೀಡಾ ಬದುಕಿನ ವೃತ್ತಾಂತಗಳನ್ನು ಅವರ ‘ಆಲ್‌ ರೌಂಡ್‌ ವ್ಯೂ’ ಪುಸ್ತಕ ತೆರೆದಿಡುತ್ತದೆ. ಅವತ್ತಿಗೆ ಕ್ರಿಕೆಟ್‌ ಮೈದಾನದಲ್ಲಿ ಬ್ಯಾಟ್‌ ಬೀಸುತ್ತಾ, ವಿಕೆಟ್‌ ಕೀಳುತ್ತಿದ್ದ ಇಮ್ರಾನ್‌ ಖಾನ್ 1987ರಲ್ಲಿ ನಿವೃತ್ತಿ ಘೋಷಿಸಿದರು. ಹೀಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರವೂ ತನ್ನ ದೇಶಕ್ಕಾಗಿ ವಿಶ್ವಕಪ್ ಗೆದ್ದುಕೊಟ್ಟ ವಿಚಿತ್ರ ವ್ಯಕ್ತಿಯೊಬ್ಬರು ಇದ್ದರೆ ಅದು ಇಮ್ರಾನ್ ಖಾನ್ ಮಾತ್ರ. 1992ರಲ್ಲಿ ಪಾಕಿಸ್ತಾನ ವಿಶ್ವಕಪ್ ಕ್ರಿಕೆಟ್‌ನ ಕಿರೀಟ ತೊಟ್ಟಾಗ ತಂಡವನ್ನು ಮುನ್ನಡೆಸಿದ್ದು ಇದೇ ಇಮ್ರಾನ್ ಖಾನ್. ಮತ್ತು ಅದರ ಹಿಂದೆಯೂ ಒಂದು ಇಂಟೆರೆಸ್ಟಿಂಗ್ ಆದ ಕತೆಯೊಂದಿದೆ.

ನಿವೃತ್ತಿ ಘೋಷಿಸಿದ ಐದು ವರ್ಷಗಳ ನಂತರ ಖಾನ್‌ಗೆ ತಮ್ಮ ನಿರ್ಧಾರ ಹಿಂತೆಗೆದುಕೊಳ್ಳುವಂತೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮನವಿ ಮಾಡಿತು. ಅಭಿಮಾನಿಗಳು ಅವರ ಮನೆ ಮುಂದೆ ಧರಣಿ ಕೂತರು. ಆದರೂ ಖಾನ್‌ ತಮ್ಮ ನಿರ್ಧಾರ ಬದಲಿಸಲಿಲ್ಲ. ಕೊನೆಗೆ ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೂ ಮುನ್ನ ಪಾಕಿಸ್ತಾನ ಅಧ್ಯಕ್ಷ ಜನರಲ್‌ ಜಿಯಾ ಉಲ್‌ ಹಕ್‌ ಕ್ರಿಕೆಟ್‌ಗೆ ಮರಳುವಂತೆ ಒತ್ತಾಯಿಸಿದರು. ಹಾಗೆ ಮತ್ತೆ ಕ್ಯಾಪ್‌ ತೊಟ್ಟು ಅಂಗಳಕ್ಕೆ ಇಳಿದರು ಖಾನ್.

ತಂಡದ ನೇತೃತ್ವದ ವಹಿಸಿದ ಖಾನ್ 1992ರಲ್ಲಿ ಪಾಕಿಸ್ತಾನಕ್ಕೆ ಮೊದಲ ವಿಶ್ವಕಪ್‌ ಗೆಲ್ಲಿಸಿಕೊಟ್ಟರು. ಪಾಕಿಸ್ತಾನ ಗೆದ್ದ ಏಕೈಕ ವಿಶ್ವಕಪ್‌ ಇದಾಗಿತ್ತು. ಆಗ ಅವರಿಗೆ 39 ವರ್ಷ ವಯಸ್ಸಾಗಿತ್ತು. ವಿಶ್ವಕಪ್‌ ಗೆಲುವು ಖಾನ್‌ಗೆ ಇನ್ನಿಲ್ಲದ ಜನಪ್ರಿಯತೆ ತಂದು ಕೊಟ್ಟಿತು.

‘ಪ್ಲೇಬಾಯ್‌’ ಪಟ್ಟ:

ಇಮ್ರಾನ್‌ ಖಾನ್‌ ತನ್ನ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದಾಗ ಅವರ ಸುತ್ತ ಅಫೇರ್‌ಗಳ ಸುದ್ದಿಗಳು ಪ್ರೇಮಿಗಳ ನಗರ ಪ್ಯಾರಿಸ್‌ನ ಬೀದಿಗಳ ತುಂಬಾ ಓಡಾಡುತ್ತಿದ್ದವು. ಹಾಗೆ ಅವರ ಜತೆ ತಳಕು ಹಾಕಿಕೊಂಡಿದ್ದ ಹೆಸರು ಬ್ರಿಟನ್‌ನ ಶ್ರೀಮಂತ ಉದ್ಯಮಿ ಸರ್‌ ಜೇಮ್ಸ್‌ ಗೋಲ್ಡ್‌ಸ್ಮಿತ್‌ ಪುತ್ರಿ ಜೆಮೀಮಾ ಗೋಲ್ಡ್‌ಸ್ಮಿತ್‌ರದ್ದಾಗಿತ್ತು. ಮುಂದೆ ಇವರಿಬ್ಬರು ಪ್ಯಾರಿಸ್‌ನಲ್ಲಿ ಮತ್ತು ಬ್ರಿಟನ್‌ನಲ್ಲಿ ಎರಡು ಬಾರಿ ವಿವಾಹವಾದರು. ಗೋಲ್ಡ್‌ಸ್ಮಿತ್‌ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಪಾಕಿಸ್ತಾನಕ್ಕೆ ಬಂದು ನೆಲೆಸಿದರು. ಇವರಿಗೆ ಸುಲೈಮನ್‌ ಇಸಾ ಮತ್ತು ಕಾಸಿಂ ಎಂಬ ಇಬ್ಬರು ಗಂಡು ಮಕ್ಕಳಾದರು.

ಒಂದು ಕಡೆ ಸುಂದರ ಹೆಂಡತಿಯೊಂದಿಗೆ ಸುಖ ದಾಂಪತ್ಯ ನಡೆಯುತ್ತಿತ್ತು. ಹೀಗಿರುವಾಗ ಅವರ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿಯೊಂದು ಬೀಸಿತು. 13 ಆಗಸ್ಟ್‌ 1997ರಂದು ಲಾಸ್‌ ಏಂಜಲೀಸ್‌ ಕೋರ್ಟ್‌ ನೀಡಿದ ತೀರ್ಪು ಖಾನ್ ಮುಖಕ್ಕೆ ಮಸಿ ಬಳೆಯಿತು. ಸಿಟಾ ವೈಟ್‌ ಎಂಬ ಮಹಿಳೆ ಖಾನ್‌ ಜೊತೆ ತಮಗೆ ಸಂಬಂಧವಿತ್ತು. ಇದು ಆಕೆಯ ಪುತ್ರಿ ಎಂದು 5 ವರ್ಷದ ಹುಡುಗಿಯ ಹೆಸರಿನ ಜತೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ತೀರ್ಪು ನೀಡಿದ ನ್ಯಾಯಾಲಯ ಮಗುವಿಗೆ ಖಾನ್‌ ಅಪ್ಪ ಎಂದು ಘೋಷಿಸಿತು. ಅಂದರೆ ಖಾನ್‌ಗೆ ವೈಟ್‌ ಜತೆ ಮದುವೆಗೂ ಮೊದಲೇ ಸಂಬಂಧವಿತ್ತು.

ಜೆಮೀಮಾ ಗೋಲ್ಡ್‌ಸ್ಮಿತ್‌ ಮತ್ತು ಇಮ್ರಾನ್‌ ಖಾನ್
ಜೆಮೀಮಾ ಗೋಲ್ಡ್‌ಸ್ಮಿತ್‌ ಮತ್ತು ಇಮ್ರಾನ್‌ ಖಾನ್
ಚಿತ್ರ ಕೃಪೆ: ಅಲ್-ಅರೇಬಿಯಾ

ಈ ಬೆಳವಣಿಗೆ ನಂತರ ಎಲ್ಲರ ಸಂಸಾರಗಳಲ್ಲಿ ಸಾಮಾನ್ಯವಾಗಿ ಏನು ನಡೆಯುತ್ತದೆಯೋ ಅದು ಇಲ್ಲೂ ನಡೆಯಿತು. ಗೋಲ್ಡ್‌ಸ್ಮಿತ್‌ ಮತ್ತು ಖಾನ್‌ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗಳು ಓಡಾಡಲು ಆರಂಭಿಸಿತು. ಆಗ ಗೋಲ್ಡ್‌ಸ್ಮಿತ್‌ ನಮ್ಮ ನಡುವೆ ಎಲ್ಲ ಸರಿ ಇದೆ ಎಂದು ಪಾಕಿಸ್ತಾನ ಪತ್ರಿಕೆಯಲ್ಲಿ ಜಾಹೀರಾತು ನೀಡುವ ವಿಲಕ್ಷಣ ಘಟನೆಯೂ ನಡೆಯಿತು. ಆದರೆ, ಸಂಸಾರದ ಗುಟ್ಟು ತುಂಬಾ ದಿನ ಉಳಿಯಲಿಲ್ಲ. 22 ಜೂನ್ 2004ರಂದು ದಂಪತಿ ಬೇರೆ ಬೇರೆಯಾದರು.

ಮುಂದೆ 2015ರ ಜನವರಿಯಲ್ಲಿ ಬ್ರಿಟಿಷ್ ಪಾಕಿಸ್ತಾನಿ ಪತ್ರಕರ್ತೆ ರೆಹಮ್‌ ಖಾನ್‌ರನ್ನು ಇಮ್ರಾನ್‌ ವರಿಸಿದರು. ಅದೇ ವರ್ಷದ ಅಕ್ಟೋಬರ್‌ನಲ್ಲಿ ಈ ಸಂಬಂಧ ಮುರಿದು ಬಿತ್ತು. ಅದಾದ ಬಳಿಕ ಖಾನ್‌ ಆಧ್ಯಾತ್ಮಿಕ ಸಲಹೆಗಾರ್ತಿ ಬುಶ್ರಾ ಮನಿಕಾ ಜತೆ ಸಂಬಂಧ ಹೊಂದಿದ್ದಾರೆ ಎಂಬ ಸುದ್ದಿ ಪಾಕಿಸ್ತಾನ ಮಾಧ್ಯಮಗಳಲ್ಲಿ ನಿರಂತರವಾಗಿ ಕೇಳಿ ಬರುತ್ತಿತ್ತು. ಈ ಸುದ್ದಿಯನ್ನು ಖಾನ್ ಮತ್ತು ಮನಿಕಾ ಕುಟುಂಬದವರು ತಳ್ಳಿ ಹಾಕುತ್ತಲೇ ಬಂದರು. ಕೊನೆಗೆ 2018ರ ಫೆಬ್ರವರಿಯಲ್ಲಿ ಖಾನ್‌ 3ನೇ ಮದುವೆ ಅಧಿಕೃತವಾಯಿತು.

ಮೂರು ಮೂರು ಮದುವೆ, ಒಂದು ಸಂಬಂಧ, ಆಗಾಗಾ ತೇಲಿ ಬರುತ್ತಿದ್ದ ಅಫೇರ್‌ಗಳ ಸುದ್ದಿಗಳು ‘ಪ್ಲೇಬಾಯ್‌’ ಎಂಬ ಹಣೆಪಟ್ಟಿಯನ್ನು ಖಾನ್‌ ಹೆಸರಿಗೆ ಅಂಟಿಸಿಬಿಟ್ಟವು. ಒಂದು ಕಡೆ ವೈಯಕ್ತಿಕ ಜೀವನ ಹೀಗೆ ಸಾಗುತ್ತಿದ್ದರೆ ಅತ್ತ ಅವರ ಬದುಕಿಗೆ ಮತ್ತೊಂದು ಮುಖವಿತ್ತು. ಅದು ಸಮಾಜಸೇವೆ ಮತ್ತು ರಾಜಕೀಯ.

ತಾಯಿ ಸಾವು ಮತ್ತು ಕ್ಯಾನ್ಸರ್‌ ಆಸ್ಪತ್ರೆ:

ಇಮ್ರಾನ್‌ ಖಾನ್‌ ವ್ಯಕ್ತಿತ್ವವೇ ಹಾಗಿದೆ. ಅದಕ್ಕೆ ನಾನಾ ಮುಖಗಳಿವೆ. ಕ್ರಿಕೆಟ್‌, ರಾಜಕೀಯ, ವೈಯಕ್ತಿಕ ಬದುಕಿನಾಚೆ ಖಾನ್‌ ಸಮಾಜ ಸೇವೆಯ ಮೂಲಕವೂ ಗುರುತಿಸಿಕೊಂಡಿದ್ದರು. ಈ ಸಮಾಜ ಸೇವೆಗೆ ಇಳಿಯಲು ಕಾರಣರಾಗಿದ್ದು ಅವರ ತಾಯಿ ಶೌಕತ್ ಖನುಮ್.

ಮೈದಾನದಲ್ಲಿ ಇಮ್ರಾನ್‌ ಖಾನ್‌ ಕ್ರಿಕೆಟ್‌ ಆಡುತ್ತಿದ್ದಾಗಲೇ 1990ರಲ್ಲಿ ಅವರ ತಾಯಿ ತೀರಿಕೊಂಡರು. ಅವರು ಕ್ಯಾನ್ಸರ್‌ಖಾಯಿಲೆಗೆ ಒಳಗಾಗಿ ಮೃತಪಟ್ಟಿದ್ದರು. ಅವತ್ತಿಗೆ ತಾಯಿಗೆ ಚಿಕಿತ್ಸೆ ಕೊಡಿಸಲು ಖಾನ್‌ಗೆ ಪಾಕಿಸ್ತಾನದಲ್ಲಿ ಒಂದೇ ಒಂದು ಕ್ಯಾನ್ಸರ್‌ ಆಸ್ಪತ್ರೆಯೂ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ಖಾನ್‌ ತಮ್ಮ ತಾಯಿ ನೆನಪಿಗೆ ಆಸ್ಪತ್ರೆ ಕಟ್ಟಲು ಮುಂದಾದರು. ಅದಕ್ಕಾಗಿ ತಮ್ಮ ಕ್ರಿಕೆಟ್ ಟ್ರೋಫಿಗಳನ್ನೆಲ್ಲಾ ಗುಡ್ಡೆ ಹಾಕಿ ಹರಾಜು ಹಾಕಿದರು. ಅದರಿಂದ ಬಂದ ಹಣವನ್ನೆಲ್ಲಾ ಆಸ್ಪತ್ರೆಗೆ ಎತ್ತಿಟ್ಟರು. ದೊಡ್ಡ ದೊಡ್ಡ ಸಮಾವೇಶಗಳನ್ನು ನಡೆಸಿ ಜನರಿಂದ ಹತ್ತು, ಇಪ್ಪತ್ತು ರೂಪಾಯಿಯೆಲ್ಲಾ ಒಟ್ಟುಗೂಡಿಸಿ ‘ಶೌಕತ್‌ ಖನುಮ್‌ ಮೆಮೋರಿಯಲ್‌ ಕ್ಯಾನ್ಸರ್‌ ಆಸ್ಪತ್ರೆ’ ತೆರೆದರು.

ಬಡವರ ಆರೋಗ್ಯ ಸೇವೆಗೆ ಖಾನ್‌ ನೀಡಿದ ಕೊಡುಗೆ ಇದಾಗಿತ್ತು. ಮತ್ತು ಅದರಲ್ಲೊಂದು ಪ್ರಾಮಾಣಿಕ ಜನ ಗುರುತಿಸುವ ಹಾಗಿತ್ತು.
ಅಮ್ಮನ ನೆನಪಿಗೆ ಮಗ ಇಮ್ರಾನ್‌ ಖಾನ್‌ ಕಟ್ಟಿಸಿದ ಕ್ಯಾನ್ಸರ್‌ ಆಸ್ಪತ್ರೆ
ಅಮ್ಮನ ನೆನಪಿಗೆ ಮಗ ಇಮ್ರಾನ್‌ ಖಾನ್‌ ಕಟ್ಟಿಸಿದ ಕ್ಯಾನ್ಸರ್‌ ಆಸ್ಪತ್ರೆ
ಚಿತ್ರ ಕೃಪೆ: ಡೈಲಿ ಪಾಕಿಸ್ತಾನ್

ಸೇವೆಯಿಂದ ರಾಜಕಾರಣಕ್ಕೆ:

ಹೀಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಖಾನ್ 1996ರಲ್ಲಿ ಧುತ್ತೆಂದು ಪಕ್ಷವೊಂದನ್ನು ಸ್ಥಾಪನೆ ಮಾಡಿದರು. ಸಂಘಟನೆ ಬಲ, ಹಣ ಬಲ, ತೋಳ್ಬಲ ಯಾವುದೂ ಇಲ್ಲದೆ ರಾಜಕೀಯ ಅಖಾಡಕ್ಕೆ ಧುಮುಕಿದ್ದರು ಇಮ್ರಾನ್‌ ಖಾನ್‌. ಆಗ ಅವರ ಬಳಿ ಇದ್ದದ್ದು ಕ್ರಿಕೆಟ್‌ ಮತ್ತು ಸಮಾಜಸೇವೆಯಿಂದ ಬಂದ ಜನಪ್ರಿಯತೆ ಮಾತ್ರ.

ಹೀಗಾಗಿ ಆರಂಭದ ದಶಕದ ರಾಜಕಾರಣ ಹೆಚ್ಚಿನದೇನನ್ನೂ ಮರಳಿ ಕೊಡಲಿಲ್ಲ. 1999ರ ಸುಮಾರಿಗೆ ‘ದಿ ಗಾರ್ಡಿಯನ್‌’ ಪತ್ರಿಕೆ ವರದಿಗಾರನ ಜತೆಗೆ ಮಾತನಾಡಿದ್ದ ಅಂದಿನ ಪಾಕಿಸ್ತಾನ ಪ್ರಧಾನಿ ಬೆನೆಜೀರ್‌ ಭುಟ್ಟೋ, “ಇಮ್ರಾನ್? ನನ್ನನ್ನು ಜನ ಇಷ್ಟಪಟ್ಟಷ್ಟು ಆತನನ್ನು ಪ್ರೀತಿಸಲಾರರು” ಎಂದಿದ್ದರು. “ಒಂದೊಮ್ಮೆ ಆತ ಬಂದರೆ ನಾನು ಕ್ಯಾಬಿನೆಟ್‌ ಸಚಿವ ಸ್ಥಾನ ನೀಡಬಹುದು ಅಷ್ಟೇ,” ಎಂದು ಹೇಳಿದ್ದರು. ಪಾಕ್ ರಾಜಕಾರಣದಲ್ಲಿ ಇಮ್ರಾನ್‌ ಖಾನ್‌ಗೆ ಅವತ್ತಿಗೆ ಅದಕ್ಕಿಂತ ಹೆಚ್ಚು ಬೆಲೆಯೇನೂ ಇರಲಿಲ್ಲ.

ಭುಟ್ಟೊ ಹಾಗೆ ಹೇಳಿದ ಕೆಲವೇ ದಿನಗಳಲ್ಲಿ ದೇಶದಿಂದ ಗಡಿಪಾರಾಗಿ ಹೋದರು. ಖಾನ್‌ ಮಾತ್ರ ಪಾಕಿಸ್ತಾನದಲ್ಲೇ ಉಳಿದುಕೊಂಡರು. 1997ರಲ್ಲಿ ಮೊದಲ ಚುನಾವಣೆಯಲ್ಲಿ ಶೂನ್ಯ ಸುತ್ತಿದ ಖಾನ್, 2002ರ ಚುನಾವಣೆಯಲ್ಲಿ ತಾವು ಮಾತ್ರ ಗೆದ್ದರು. 2008ರ ಚುನಾವಣೆಯನ್ನು ಖಾನ್ ಅವರಾಗಿಯೇ ಬಹಿಷ್ಕರಿಸಿದ್ದರು.

ಹೀಗೆ, ಬರೀ ರಾಜಕೀಯ ಬದುಕಿನಲ್ಲಿ ಸೋಲುಗಳನ್ನೇ ಬೆನ್ನಿಗೆ ಕಟ್ಟಿಕೊಂಡು ಬಂದಿದ್ದ ಖಾನ್‌ 2013ರ ಚುನಾವಣೆ ಬಂದಾಗ ಸ್ವಲ್ಪ ಮಟ್ಟಿಗಿನ ಪ್ರಸ್ತುತತೆ ಪಡೆದುಕೊಂಡರು. ಲಕ್ಷ ಲಕ್ಷ ಜನ ಅವರ ಸಮಾವೇಶಗಳಿಗೆ ಹರಿದು ಬರಲಾರಂಭಿಸಿದರು. ಖಾನ್‌ ಪಕ್ಷ ಪಿಟಿಐ ಚುನಾವಣಾ ಕಣದಲ್ಲಿರುವ ಪ್ರಮುಖ ಪಕ್ಷವಾಗಿ ಗುರುತಿಸಿಕೊಂಡಿತು. ಇಂಥಹದ್ದೊಂದು ಯಶಸ್ಸಿಗೆ ಖಾನ್‌ ವಿಚಿತ್ರ ನಡವಳಿಕೆಗಳು ಮತ್ತು ರಾಜಕೀಯವಾಗಿ ಅವರು ಉರುಳಿಸಿದ ದಾಳಗಳು ಕಾರಣವಾಗಿದ್ದವು.

ಇಮ್ರಾನ್‌ ಅಲ್ಲ ‘ತಾಲಿಬಾನ್‌ ಖಾನ್':

ರಾಜಕೀಯ ಜೀವನದುದ್ದಕ್ಕೂ ವಿಚಿತ್ರ ನಡೆಗಳನ್ನು ಇಟ್ಟುಕೊಂಡು ಬಂದಿದ್ದರು ಖಾನ್. ಅದು ಆರಂಭದಲ್ಲಿ ಫಲ ನೀಡಲಿಲ್ಲವಾದರೂ 2013ರ ಹೊತ್ತಿಗೆ ಬೆಳೆ ಬರಲಾರಂಭಿಸಿತು.

ಅವರು 1999ರಲ್ಲಿ ದೇಶದಲ್ಲಿ ನಡೆದ ಸೇನಾ ಕ್ರಾಂತಿಯನ್ನು ಬೆಂಬಲಿಸಿದ್ದರು. ಇದರಿಂದ ಸೇನೆಯ ಕೃಪಾ ಕಟಾಕ್ಷವನ್ನು ಗಿಟ್ಟಿಸಿಕೊಂಡರು. ಹಾಗಂಥ ಜನರ ಕಣ್ಣಲ್ಲೂ ವಿಲನ್‌ ಆಗಲಿಲ್ಲ. ಪಾಕಿಸ್ತಾನದ ಪ್ರಜಾಪ್ರಭುತ್ವದ ಪರ ಮಾತನಾಡುತ್ತಲೇ ಸೇನಾ ಕ್ರಾಂತಿಯನ್ನು ಖಾನ್‌ ಬೆಂಬಲಿಸಿದ್ದರು. ಸೋತರೂ ಗೆದ್ದರೂ ತನ್ನ ಸುತ್ತಮುತ್ತಲಿದ್ದ ನಿಲಯ ಕಲಾವಿದರನ್ನು ಕಟ್ಟಿಕೊಂಡು ನಿರಂತರ ಪ್ರಚಾರ ನಡೆಸುತ್ತಲೇ ಇದ್ದರು. ಹೀಗಿರುವಾಗಲೇ 2013ರ ಚುನಾವಣೆಗೂ ಮುನ್ನ ಇಮ್ರಾನ್‌ ಖಾನ್‌ ಮತ್ತೊಂದು ವಿಚಿತ್ರ ದಾಳ ಉರುಳಿಸಿದರು. ಅದು ಅವರ ರಾಜಕೀಯ ಬದುಕಿನ ಚಹರೆ ಬದಲಿಸಿದ ನಿರ್ಧಾರವಾಗಿ ಗುರುತಿಸಿಕೊಂಡಿತು.

ಬಂದೂಕು ಮತ್ತು ಇಮ್ರಾನ್‌ ಖಾನ್‌
ಬಂದೂಕು ಮತ್ತು ಇಮ್ರಾನ್‌ ಖಾನ್‌

2013ರ ಚುನಾವಣೆಗೆ ಮೊದಲು ಅಮೆರಿಕಾ ಜತೆಗಿನ ಪಾಕಿಸ್ತಾನದ ಸಂಬಂಧವನ್ನು ಟೀಕಿಸಲು ಆರಂಭಿಸಿದರು ಇಮ್ರಾನ್‌ ಖಾನ್. ಪಾಕಿಸ್ತಾನದ ನೆಲೆದ ಮೇಲೆ ಹಾರಿ ಬರುತ್ತಿದ್ದ ಅಮೆರಿಕಾದ ಡ್ರೋನ್‌ಗಳು ಬಂಡುಕೋರರನ್ನು ಸಾಯುಸುತ್ತಿದ್ದುದನ್ನು ಖಾನ್‌ ಕಟುವಾಗಿ ವಿರೋಧಿಸಿದರು. ಅಮೆರಿಕಾ ಅಫ್ಘಾನಿಸ್ತಾನದ ಗಡಿಯಲ್ಲಿ ಒಸಾಮಾ ಬಿನ್‌ ಲಾಡನ್‌ನನ್ನು ಇದೇ ವೇಳೆ ಕೊಂದು ಹಾಕಿತು. ಇನ್ನೊಂದು ಕಡೆ ಪಾಕಿಸ್ತಾನ ಸೈನಿಕರನ್ನು ನ್ಯಾಟೋ ಪಡೆಗಳು ಬಲಿ ಪಡೆದವು. ಅಮೆರಿಕಾದ ಈ ಕಾರ್ಯಾಚರಣೆಯನ್ನು ವಿರೋಧಿಸಿದ ಖಾನ್‌, ಬಂಡುಕೋರರ ಕಣ್ಣಲ್ಲಿಯೂ ಹೀರೋ ಆದರು. 2013ರಲ್ಲಿ ನಡೆದ ಒಂದು ಡ್ರೋನ್‌ ದಾಳಿಯಲ್ಲಿ ತಾಲಿಬಾನ್‌ ಕಮಾಂಡರ್ ವಲಿ ಉರ್‌ ರೆಹಮಾನ್‌ ಸತ್ತಾಗ, ಆತನನ್ನು ‘ಶಾಂತಿಯ ಪ್ರತಿಪಾದಕ’ ಎಂದು ಬಣ್ಣಿಸಿದರು ಖಾನ್. ಇದರಿಂದ ಇಮ್ರಾನ್‌ಗೆ ‘ತಾಲಿಬಾನ್‌ ಖಾನ್' ಎಂಬ ಅಡ್ಡ ಹೆಸರು ಬಂತು.

ಇನ್ನೊಂದು ಕಡೆ ಸೇನೆಯ ಜತೆಗಿನ ಸಂಬಂಧವನ್ನೂ ಅವರು ಜತನದಿಂದ ಕಾಪಿಟ್ಟುಕೊಂಡರು. ಸ್ವಾವಲಂಬಿ, ಸಾರ್ವಭೌಮ ಪಾಕಿಸ್ತಾನ ಮತ್ತು ದೇಶದ ರಕ್ತ ಹೀರುವ ಭ್ರಷ್ಟಾಚಾರದ ವಿರುದ್ಧ ಮಾತನಾಡಿ ಜನರ ಕಣ್ಣಲ್ಲಿ ದೇಶಭಕ್ತರಾದರು. ಹೀಗೆ ರಾಜಕೀಯಕ್ಕೆ ಬಂದು ಸುಮಾರು 17 ವರ್ಷಗಳ ನಂತರ ಇಮ್ರಾನ್ ಖಾನ್ ನಿಧಾನವಾಗಿ ‘ಪಾಲಿಟಿಕ್ಸ್’ ಅರ್ಥ ಮಾಡಿಕೊಂಡಂತೆ ಕಾಣಿಸಿದರು. ಸೇನೆ, ಬಂಡುಕೋರರು ಹಾಗೂ ಜನ ಎಂಬ ಮೂರು ಅಗತ್ಯ ಹಕ್ಕಿಗಳನ್ನು ಒಂದೇ ಕಲ್ಲಿನಲ್ಲಿ ಹೊಡೆದ ಇಮ್ರಾನ್‌ ಖಾನ್‌ ರಾಜಕೀಯದಲ್ಲಿ ಗೆಲುವಿನ ಜಾಡವನ್ನು ಗುರುತಿಸಿಕೊಂಡರು.

‘ಮೇಕಿಂಗ್ ಆಫ್ ಇಮ್ರಾನ್‌ ಖಾನ್’:

ಜನ ಸಾಗರದ ಮಧ್ಯೆ ಜನ ನಾಯಕ ಇಮ್ರಾನ್‌ ಖಾನ್‌
ಜನ ಸಾಗರದ ಮಧ್ಯೆ ಜನ ನಾಯಕ ಇಮ್ರಾನ್‌ ಖಾನ್‌
ಚಿತ್ರ ಕೃಪೆ: ಡಾನ್

2013ರ ಚುನಾವಣೆಯಲ್ಲಿ 35 ಸ್ಥಾನ ಗೆದ್ದು 76 ಲಕ್ಷ ಮತಗಳನ್ನು ಪಡೆದಿದ್ದ ಇಮ್ರಾನ್‌ ಖಾನ್‌ 2018ರ ಚುನಾವಣೆಗೆ ವೇಳೆಗೆ ಬೇಕಾದ ಎಲ್ಲಾ ಸಿದ್ಧತೆಯನ್ನೂ ಮಾಡಿಕೊಂಡರು. ಸೇನೆ ಜತೆ ಉತ್ತಮ ಬಾಂಧವ್ಯ, ಬಂಡುಕೋರರೊಂದಿಗಿನ ಸ್ನೇಹ ಮತ್ತು ಜನರನ್ನು ಸೆಳೆಯುವ ಕೆಲಸಕ್ಕೂ ಕೈ ಹಾಕಿದರು. ಪ್ರಧಾನಿಯಾಗಿದ್ದ ನವಾಜ್‌ ಷರೀಫ್‌ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗ, ಅದರ ವಿರುದ್ಧ ದೊಡ್ಡ ಮಟ್ಟಕ್ಕೆ ಧ್ವನಿ ಎತ್ತಿದರು. ಧಾರ್ಮಿಕ ಮುಖಂಡ ತಾಹಿರ್ ಉಲ್ ಕ್ವಾದ್ರಿಯನ್ನು ಜತೆಗೆ ಕಟ್ಟಿಕೊಂಡು ಇಸ್ಲಮಾಬಾದ್ ಬೀದಿಗೆ ಧುಮುಕಿದರು.

ಕ್ವಾದ್ರಿ ಜತೆಗಿನ ಆಪ್ತತೆಯಿಂದಾಗಿ ಧಾರ್ಮಿಕ ಕಟ್ಟರ್‌ವಾದಿಗಳೂ ಖಾನ್‌ ಜತೆಗೆ ಬಂದರು. ಅಭಿವೃದ್ಧಿಗೆ ತೆರೆದುಕೊಂಡ ಪಾಕಿಸ್ತಾನದಲ್ಲಿ ಹುಟ್ಟಿದ ಹೊಸ ಮಧ್ಯಮವರ್ಗಕ್ಕೆ ಇಮ್ರಾನ್‌ ಖಾನ್‌ ಹೊರಡಿಸುತ್ತಿದ್ದ ಭ್ರಷ್ಟಾಚಾರ ವಿರೋಧಿ ದನಿ ಆಕರ್ಷಕವಾಗಿ ಕಂಡಿತು. ಇದರ ಜತೆಗೆ ನವಾಜ್‌ ಷರೀಫ್‌ ಅಧಿಕಾರಕ್ಕೇರುವುದನ್ನು ತಡೆಯಲು ಅಲ್ಲಿನ ಸೇನೆ ಮತ್ತು ನ್ಯಾಯಾಂಗ ಒಟ್ಟಾಗಿ ಖಾನ್‌ ಪರವಾಗಿ ನಿಂತಿದೆ ಎಂಬ ಆರೋಪಗಳಿವೆ.

ಇವೆಲ್ಲವುಗಳ ಒಟ್ಟು ಪ್ರತಿರೂಪವಾಗಿ ಪಾಕಿಸ್ತಾನಕ್ಕೊಬ್ಬ ಹೊಸ ರಾಜಕೀಯ ನಾಯಕ ಸಿಕ್ಕಿದ್ದಾನೆ. ಆತ ಇಮ್ರಾನ್‌ ಖಾನ್. ಮತ್ತು ಇದಿಷ್ಟು ಆತನ ಈವರೆಗಿನ ಬದುಕಿನ ಕತೆ.