samachara
www.samachara.com
ಸೋಲಿಗರ ಹೊಸ ಸವಾಲ್: ಮೊಬೈಲ್ ಸಂಗ; ಭವಿಷ್ಯಕ್ಕೆ ಭಂಗ?
FEATURE STORY

ಸೋಲಿಗರ ಹೊಸ ಸವಾಲ್: ಮೊಬೈಲ್ ಸಂಗ; ಭವಿಷ್ಯಕ್ಕೆ ಭಂಗ?

ಜಗತ್ತು ಮೊಬೈಲ್ ಬಳಕೆ, ಅದರಲ್ಲೂ ವಿಶೇಷವಾಗಿ ಅಂತರ್ಜಾಲ ಬಳಕೆ ಚಟವಾಗುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಸುತ್ತಿದೆ. ನೊಮೊಫೋಬಿಯಾ ಎಂಬ ಹೊಸ ಹೆಸರನ್ನೂ ಇದಕ್ಕೆ ನೀಡಲಾಗಿದೆ.

'ಮೊಬೈಲ್ ಬಂದ ಮೇಲೆ ಓದುವ ಮಕ್ಕಳು ಹಾಳಾದರು'...

ಹೀಗೊಂದು ದೂರು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಕೇಳಿಬರಲು ಆರಂಭಿಸಿ ಐದಾರು ವರ್ಷಗಳು ಕಳೆದಿವೆ. ಆದರೆ, ಇದೊಂದು ಸಾಮುದಾಯಿಕ ಸಮಸ್ಯೆ ಎಂದು ಪರಿಗಣಿಸಿರುವುದು ಚಾಮರಾಜನಗರ ಜಿಲ್ಲೆಯ ಸೋಲಿಗರು.

ಕಳೆದ ಶನಿವಾರ ಮತ್ತು ಭಾನುವಾರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ (ವಿಜಿಕೆಕೆ)ದಲ್ಲಿ ಸೋಲಿಗ ಸಮುದಾಯ ವಿದ್ಯಾರ್ಥಿಗಳಿಗಾಗಿ ಪ್ರೇರಣಾ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಗಿರಿಜನ ಅಭಿವೃದ್ಧಿ ಸಂಘ ಆಯೋಜಿಸಿದ್ದ ಎರಡು ದಿನಗಳ ಕಾರ್ಯಗಾರದಲ್ಲಿ ಜಿಲ್ಲಾಧಿಕಾರಿ ಕಾವೇರಿ ಸೇರಿದಂತೆ ಹಲವು ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡಿದ್ದರು. ಸುಮಾರು 200ರಷ್ಟಿದ್ದ ಸೋಲಿಗ ಸಮುದಾಯದ ಕಾಲೇಜು ವಿದ್ಯಾರ್ಥಿಗಳಿಗೆ ಭವಿಷ್ಯದ ಕುರಿತು ಮಾಹಿತಿ ನೀಡುವ ಕೆಲಸ ಇಲ್ಲಿ ನಡೆಯಿತು. ವಿಶೇಷ ಅಂದರೆ, ಹೆಚ್ಚು ಕಡಿಮೆ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆಯನ್ನು ನಿಯಂತ್ರಿಸುವ ಕುರಿತು ಒಂದಿಲ್ಲೊಂದು ಆಯಾಮದಲ್ಲಿ ಪ್ರಸ್ತಾಪಿಸಿದ್ದು.

“ತಂದೆ ತಾಯಿಗಳಿಗೆ ಒತ್ತಡ ಹೇರಿ ದುಬಾರಿ ಮೊಬೈಲ್ ಖರೀದಿಸಬೇಡಿ” ಎಂಬಲ್ಲಿಂದ ಆರಂಭವಾದ ಹಿತನುಡಿಗಳು “ಮೊಬೈಲ್ ಹೆಚ್ಚು ಬಳಕೆ ಆರೋಗ್ಯಕ್ಕೆ ಹಾನಿಕರ” ಎಂಬಲ್ಲಿವರೆಗೆ, ನಾನಾ ರೀತಿಯಲ್ಲಿ ಆಧುನಿಕ ಆವಿಷ್ಕಾರವೊಂದನ್ನು ಅಲ್ಲಗೆಳೆಯುವ ಮಾತುಗಳು ಶಿಬಿರದ ಎರಡೂ ದಿನವೂ ಕೇಳಿಬಂತು.

ಸದ್ಯ ಜಗತ್ತು ಮೊಬೈಲ್ ಬಳಕೆ, ಅದರಲ್ಲೂ ವಿಶೇಷವಾಗಿ ಅಂತರ್ಜಾಲ ಬಳಕೆ ಚಟವಾಗುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಸುತ್ತಿದೆ. ನೊಮೊಫೋಬಿಯಾ ಎಂಬ ಹೊಸ ಹೆಸರನ್ನೂ ಇದಕ್ಕೆ ನೀಡಲಾಗಿದೆ. ಅಂತರ್ಜಾಲದ ಸಂಪರ್ಕ ಹೊಂದಿರುವ ಮೊಬೈಲ್‌ ನಿಧಾನವಾಗಿ ಹೊರಜಗತ್ತಿನೊಂದಿಗೆ ಸಂಪರ್ಕವನ್ನು ಕಡಿಮೆಮಾಡುತ್ತದೆ. ವ್ಯಕ್ತಿಗಳ ನಡುವಿನ ಸಂವಹನದ ಮಾದರಿಯನ್ನೇ ಬದಲಿಸುತ್ತಿದೆ. ಇದೊಂದು ಮಾನಸಿಕ ಕಾಯಿಲೆಯಾಗಿ ಬದಲಾಗುವ ಅಪಾಯವನ್ನೂ ತಜ್ಞರು ಮುಂದಿಟ್ಟಿದ್ದಾರೆ.

ಇಂತಹ ಸಮಯದಲ್ಲಿ ಬುಡಕಟ್ಟು ಸಮುದಾಯವೊಂದು ತನ್ನ ಹೊಸ ತಲೆಮಾರಿನ ಯುವಕ, ಯುವತಿಯರಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದು ಗಮನಾರ್ಹ ಬೆಳವಣಿಗೆಯಾಗಿ ಕಾಣಿಸುತ್ತಿದೆ.

ಯಾರೂ ಈ ಸೋಲಿಗರು?:

ಚಾಮರಾಜನಗರ ಜಿಲ್ಲೆಯ ಐದು ತಾಲೂಕುಗಳಲ್ಲಿ ಹೆಚ್ಚಾಗಿ ಕಾಣಸಿಗುವ ಸೋಲಿಗರು ಒಂದು ಕಾಲದಲ್ಲಿ ದಟ್ಟ ಕಾನನಗಳಲ್ಲಿ ಬದುಕು ಕಟ್ಟಿಕೊಂಡರು. ಅವರು ವಾಸಿಸುವ ಪ್ರದೇಶಗಳನ್ನು ಪೋಡುಗಳು ಎಂದು ಕರೆಯಲಾಗುತ್ತದೆ. ಬಿಳಿಗಿರಿರಂಗನ ಬೆಟ್ಟ ಹಾಗೂ ಅಲ್ಲಿ ನೆಲೆಗೊಂಡಿರುವ ಬಿಳಿಗಿರಿ ರಂಗನಾಥ ಸ್ವಾಮಿ ಜತೆಗೆ ಪೌರಾಣಿಕ ಸಂಬಂಧವೊಂದನ್ನು ಹೊಂದಿರುವ ಸಮುದಾಯ ಇದು. ತಮ್ಮದೇ ಭಾಷೆ, ಸಂಸ್ಕೃತಿಗಳನ್ನು ಹೊಂದಿದ್ದ ಈ ಸಮುದಾಯಗಳ ಅಭಿವೃದ್ಧಿಗಾಗಿ 1979ರ ಸುಮಾರಿಗೆ ವೈದ್ಯ ಡಾ. ಎಚ್. ಸುದರ್ಶನ್ ಬಿಳಿಗಿರಿರಂಗ ಬೆಟ್ಟಕ್ಕೆ ಕಾಲಿಟ್ಟರು.

“ಡಾಕ್ಟರ್ ನಮ್ಮ ತರಹ ಬಟ್ಟೆ ಹಾಕುತ್ತಿದ್ದರು. ನಾವು ತಿನ್ನುತ್ತಿದ್ದ ಗೆಡ್ಡೆ ಗೆಣಸುಗಳನ್ನೇ ತಿನ್ನುತ್ತಾ ನಮ್ಮಲ್ಲಿ ಒಬ್ಬರಾಗಿ ಬದುಕು ಆರಂಭಿಸಿದರು. ಅವರಿಂದಾಗಿ ನಮ್ಮ ಸಮುದಾಯ ಮಕ್ಕಳು ವಿದ್ಯಾಭ್ಯಾಸದ ಕಡೆ ಮುಖಮಾಡಿದರು,’’ ಎನ್ನುತ್ತಾರೆ ಮಾದಮ್ಮ.

ಬಿಳಿಗಿರಿರಂಗನ ಬೆಟ್ಟದಲ್ಲಿರುವ ಮುತ್ತುಗದ ಗದ್ದೆಪೋಡಿನಲ್ಲಿ ವಾಸಿಸುವ ಇವರ ಮಕ್ಕಳು ಇವತ್ತು ಕಾಲೇಜು ಶಿಕ್ಷಣಕ್ಕೆ ಕಾಲಿಟ್ಟಿದ್ದಾರೆ. ಬದಲಾದ ಸೋಲಿಗರ ಜೀವನಶೈಲಿಯನ್ನು ಇವರು ಪ್ರತಿನಿಧಿಸುತ್ತಾರೆ.

ಸೋಲಿಗ ಸಮುದಾಯದ ಮಹಿಳೆ ಮಾದಮ್ಮ. 
ಸೋಲಿಗ ಸಮುದಾಯದ ಮಹಿಳೆ ಮಾದಮ್ಮ. 
/ಸಮಾಚಾರ. 

ಡಾ. ಎಚ್. ಸುದರ್ಶನ್ 1981ರ ಸುಮಾರಿಗೆ ಬಿಆರ್‌ ಹಿಲ್ಸ್‌ನಲ್ಲಿ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಹೆಸರಿನಲ್ಲಿ ಸಂಸ್ಥೆಯೊಂದನ್ನು ಹುಟ್ಟುಹಾಕಿದರು. ಮೊದಲು ಕಾಡಿನ ಮಕ್ಕಳ ಆರೋಗ್ಯ ಸೇವೆ ಆರಂಭಿಸಿದ ಅವರು ಕಾನನದ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಯೊಂದನ್ನು ಆರಂಭಿಸಿದರು. ಹಾಗೆ, ಡಾ. ಸುದರ್ಶನ್ ಆರಂಭಿಸಿದ ಶಾಲೆಗೆ ದಾಖಲಾದ ಮೊದಲ ಬ್ಯಾಚ್‌ ವಿದ್ಯಾರ್ಥಿಗಳಲ್ಲಿ ಒಬ್ಬರು ಸಿ. ಮಾದೇಗೌಡರು. ಅವರೀಗ ಸಮುದಾಯದ ಮುಖಂಡರು ಹಾಗೂ ಉನ್ನತ ಶಿಕ್ಷಣ ಪಡೆದ ಕೆಲವೇ ಸೋಲಿಗರ ಪೈಕಿ ಒಬ್ಬರು.

“ಶಿಕ್ಷಣದಿಂದಾಗಿ ಸೋಲಿಗರ ಬದುಕು ಬದಲಾಗಿದೆ. ಈಗ ಕನಿಷ್ಟ 200 ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕೆ ಕಾಲಿಟ್ಟಿದ್ದಾರೆ. ಐದಾರು ಜನ ಉನ್ನತ ಶಿಕ್ಷಣವನ್ನೂ ಮುಗಿಸಿದ್ದಾರೆ. ಹೊಸ ತಲೆಮಾರಿನ ಈ ವಿದ್ಯಾರ್ಥಿಗಳಿಗೆ ಧನ ಸಹಾಯವನ್ನು ನಾವು ಮಾಡುತ್ತಿದ್ದೇವೆ. ಸಮಸ್ಯೆ ಎಂದರೆ ಮೊಬೈಲ್ ಬಳಕೆ. ಇದರಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ,’’ ಎನ್ನುತ್ತಾರೆ ಮಾದೇಗೌಡ.

ಹಿಂದೆ, ದೊಡ್ಡ ಸಂಪಿಗೆಯಂತಹ ದಟ್ಟ ಕಾಡಿನ ನಡುವೆ ಬದುಕುತ್ತಿದ್ದ ಸೋಲಿಗರನ್ನು ಇವತ್ತು ಟಾರು ರಸ್ತೆ ಸಂಪರ್ಕಿಸುವ ಪ್ರದೇಶಗಳಿಗೆ ತಂದು ಬಿಡಲಾಗಿದೆ. ಬುಡಕಟ್ಟು ಸಮುದಾಯದ ಗುಣಲಕ್ಷಣಗಳು ಇಲ್ಲೀಗ ಮರೆಯಾಗಿದೆ. ಕಾಡು ಉತ್ಪನ್ನಗಳ ಸಂಗ್ರಹದ ಜತೆಗೆ ಕಾಫಿ, ಕಾಳು ಮಣಸಿನ ಕೃಷಿಯನ್ನೂ ಸೋಲಿಗರು ಮಾಡುತ್ತಿದ್ದಾರೆ. ಹೊಸ ತಲೆಮಾರು ಶಿಕ್ಷಣಕ್ಕೆ ತೆರೆದುಕೊಂಡಿದೆ. ಬದಲಾದ ಜೀವನಶೈಲಿ ಮೊಬೈಲ್‌ ಪ್ರಪಂಚವನ್ನೂ ಪರಿಚಯಿಸಿದೆ.

“ಮೊಬೈಲ್‌ ಬಂದ ನಂತರ ಸಂಪರ್ಕ ಸುಲಭವಾಗಿದೆ. ಅದರ ಜತೆಗೆ ಅದರ ದುರ್ಬಳಕೆಯೂ ಹೆಚ್ಚಿದೆ. ಬೇಡದ ಸಿನೆಮಾಗಳನ್ನು ವಾಟ್ಸ್‌ಆಪ್‌ಗಳಲ್ಲಿ ಇನ್ನೊಬ್ಬರಿಗೆ ಕಳುಹಿಸುತ್ತಾರೆ. ಇದರ ಪರಿಣಾಮಗಳನ್ನು ನೀವೇ ಊಹಿಸಿ,’’ ಎನ್ನುತ್ತಾರೆ ಸ್ನಾತ್ತಕೋತ್ತರ ಶಿಕ್ಷಣದ ಕೊನೆಯ ವರ್ಷದಲ್ಲಿರುವ ಸೋಲಿಗ ವಿದ್ಯಾರ್ಥಿಯೊಬ್ಬರು. ಎರಡು ದಿನಗಳ ಶಿಬಿರದಲ್ಲಿ ಪಾಲ್ಗೊಂಡ ಅವರು ಮೊಬೈಲ್ ಸುತ್ತ ನಡೆದ ಚರ್ಚೆಗಳು ಸಕಾಲಿಕ ಮತ್ತು ಅಗತ್ಯ ಎನ್ನುತ್ತಾರೆ.

ಸೋಲಿಗ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜನೆಗೊಂಡ ಕಾರ್ಯಗಾರದ ಒಂದು ನೋಟ. 
ಸೋಲಿಗ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜನೆಗೊಂಡ ಕಾರ್ಯಗಾರದ ಒಂದು ನೋಟ. 
/ಸಮಾಚಾರ. 

ಸೋಲಿಗರದಲ್ಲಿ ಮದುವೆ ಎಂಬ ಪರಿಕಲ್ಪನೆಯೇ ಇಲ್ಲ. ರೊಟ್ಟಿ ಹಬ್ಬದಂತಹ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಯುವಕ ಯುವತಿಯರು ಒಬ್ಬರನ್ನೊಬ್ಬರು ಇಷ್ಟಪಟ್ಟರೆ ಜತೆಗೆ ಬದುಕಲು ಅವಕಾಶ ನೀಡಲಾಗುತ್ತಿತ್ತು. ಇದೀಗ ಶಿಕ್ಷಣದ ಕಾರಣಕ್ಕೆ ಪೋಡುಗಳನ್ನು ಬಿಟ್ಟು ಹೊರಬಂದ ಯುವಕರು ಸಮುದಾಯದ ಆಚೆಗೂ ಸಂಬಂಧ ಹಾಗೂ ಸಂಪರ್ಕಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಆದರೆ ಇದನ್ನು ಸಮುದಾಯ ಹಿರಿಯರು ಒಪ್ಪಲು ಸಿದ್ಧರಿಲ್ಲ.

“ಸೋಲಿಗರ ಹುಡುಗ ಹುಡುಗಿಯರು ಒಬ್ಬರನ್ನೊಬ್ಬರು ಇಷ್ಟಪಟ್ಟರೆ ಸಮಸ್ಯೆ ಇಲ್ಲ. ಆದರೆ ಹೊರಗಿನರ ಜತೆ ಸಂಬಂಧ ಬೆಳೆಸಿಕೊಂಡರೆ ಪೋಡುಗಳಲ್ಲಿ ಬಂದು ನೆಲೆಸಲು ಅವಕಾಶ ಇರುವುದಿಲ್ಲ. ಹೀಗಾಗಿ ಸಾಕಷ್ಟು ಜನ ಹೊರಗಿನ ಜನರನ್ನೇ ಮದುವೆಯಾಗಿ ನಗರಗಳಲ್ಲಿ ನೆಲೆಸುತ್ತಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿರುವುದು ಮೊಬೈಲ್ ಸಂಪರ್ಕಗಳು,’’ ಎನ್ನುತ್ತಾರೆ ಮಾದಮ್ಮ.

ಹೀಗೆ, ಆಧುನಿಕತೆಗೆ ತೆರೆದುಕೊಂಡ ಬುಡಕಟ್ಟು ಸಮುದಾಯವೊಂದು ಮೊಬೈಲ್‌ ಎಂಬ ಆವಿಷ್ಕಾರವನ್ನು ಸವಾಲು ಎಂಬಂತೆ ನೋಡುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಇದೊಂದು ಸಮಸ್ಯೆಯಾಗಿದೆ ಎಂದು ಆತಂಕಗೊಂಡಿದೆ. ಈ ಕಾರಣಕ್ಕೆ ಕಳೆದ ವಾರ ನಡೆದ ಕಾರ್ಯಗಾರದಲ್ಲಿ ಮೊಬೈಲ್ ಸುತ್ತ ಚರ್ಚೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಗಿದೆ.

ಜಾಗತಿಕ ಮಟ್ಟದಲ್ಲಿ ಮೊಬೈಲ್‌ ತಂದಿಟ್ಟಿರುವ ಫಜೀತಿಗಳು ಒಂದು ಕಡೆಗಾದರೆ, ಕಾಡಿನಿಂದ ನಾಡಿಗೆ ತೆರೆದುಕೊಂಡಿರುವ ಸಮುದಾಯ ಎದುರುಗೊಳ್ಳುತ್ತಿರುವ ಸವಾಲು ಮತ್ತೊಂದು ಕಡೆಗಿದೆ. ಆಧುನಿಕತೆಗೆ ತೆರೆದುಕೊಳ್ಳುವ ಬುಡಕಟ್ಟು ಸಮುದಾಯವೊಂದು ಸಾಧ್ಯತೆಗಳ ಜತೆಗೆ ಸವಾಲುಗಳನ್ನೂ ಹೇಗೆ ಎದುರಿಸುತ್ತದೆ ಎಂಬುದಕ್ಕೆ ಸೋಲಿಗ ಯುವಜತೆಗೆ ಮತ್ತು ಅವರ ಮೊಬೈಲ್ ಬಳಕೆ ಕುರಿತು ಸಮುದಾಯದ ಮುಖಂಡರು ವ್ಯಕ್ತಪಡಿಸಿವ ಆತಂಕಗಳು ಸಾಕ್ಷಿಯಾಗಿವೆ.