‘ಸರಕಾರದ ಸುಪರ್ದಿಯಲ್ಲೇ ಮಹಾಬಲೇಶ್ವರ’: ಗೋಕರ್ಣ ದೇವಸ್ಥಾನ ವಿವಾದಕ್ಕೆ ಹೊಸ ತಿರುವು
EXCLUSIVE

‘ಸರಕಾರದ ಸುಪರ್ದಿಯಲ್ಲೇ ಮಹಾಬಲೇಶ್ವರ’: ಗೋಕರ್ಣ ದೇವಸ್ಥಾನ ವಿವಾದಕ್ಕೆ ಹೊಸ ತಿರುವು

ಗೋಕರ್ಣ ದೇವಸ್ಥಾನ ಮತ್ತೆ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಆಗಲಿದೆ ಎಂಬ ಸುದ್ದಿ ನೀಡಿದ್ದೇವೆ, ಮತ್ತು ಇದು ಸತ್ಯವಲ್ಲ!

“ಸುಪ್ರೀಂ ಕೋರ್ಟ್‌ ಆದೇಶವಿನ್ನೂ ಕೈಗೆ ಬಂದಿಲ್ಲ. ಆದೇಶ ನೋಡಿದ ನಂತರ ವಿಶ್ಲೇಷಿಸಿ ನಾನು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ. ಸದ್ಯಕ್ಕೆ ಗೋಕರ್ಣ ದೇವಸ್ಥಾನ ನನ್ನ (ಸಮಿತಿ) ಸುಪರ್ದಿಯಲ್ಲಿದೆ.” -ಹೀಗಂದವರು ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್‌. ಎಸ್‌. ನಕುಲ್‌.

‘ಸಮಾಚಾರ’ವೂ ಒಳಗೊಂಡಂತೆ ಬಹುತೇಕ ಮಾಧ್ಯಮಗಳು ಬುಧವಾರ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಹಸ್ತಾಂತರ ಕುರಿತು ಸಲ್ಲಿಕೆಯಾದ ಮಧ್ಯಂತರ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್ ನೀಡಿದ ತೀರ್ಪನ್ನು ಅಪಾರ್ಥ ಮಾಡಿಕೊಂಡಿವೆ. ದೇವಸ್ಥಾನ ಮತ್ತೆ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಆಗಲಿದೆ ಎಂಬ ಸುದ್ದಿ ನೀಡಿದ್ದೇವೆ; ಮತ್ತು ಇದು ಸತ್ಯವಲ್ಲ! ನ್ಯಾಯಾಲಯದ ಆದೇಶವನ್ನು ಇಟ್ಟುಕೊಂಡು ಇನ್ನಷ್ಟು ಆಳಕ್ಕಿಳಿದರೆ, ಒಟ್ಟಾರೆ ಪ್ರಕರಣಕ್ಕೆ ಬೇರೆಯದೇ ತಿರುವು ಸಿಗುತ್ತಿದೆ.

ಆದೇಶದಲ್ಲಿ ನಿಜಕ್ಕೂ ಏನಿದೆ?:

ಸುಪ್ರೀಂ ಕೋರ್ಟ್‌ನ ನ್ಯಾ. ಕುರಿಯನ್‌ ಜೋಸೆಫ್‌ ಮತ್ತು ನ್ಯಾ. ಎ.ಎಂ. ಖನ್ವಿಲ್ಕರ್‌ ನ್ಯಾಯಪೀಠ ತನ್ನ ಬುಧವಾರದ ತೀರ್ಪಿನಲ್ಲಿ ತನ್ನ ಹಳೆಯ ಆದೇಶವನ್ನು ಎತ್ತಿ ಹಿಡಿದಿದೆ. ಜತೆಗೆ, ಸ್ಪಷ್ಟೀಕರಣ ರೂಪದಲ್ಲಿ ನ್ಯಾಯಾಲಯ ‘7/09/2018ರಂದು ನೀಡಿದ ಆದೇಶದಂತೆ ಅಂದಿನ ದಿನಾಂಕದಂದು ದೇವಸ್ಥಾನದ ಆಡಳಿತದಲ್ಲಿ ಇದ್ದ ಯಥಾಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗುವಂತೆ’ ಹೇಳಿದೆ. ಇದನ್ನು ಮತ್ತಷ್ಟು ವಿವರಿಸಿರುವ ನ್ಯಾಯಾಲಯ, “18/9/2018 ರಂದು ದೇವಸ್ಥಾನದ ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ನೇತೃತ್ವದ ಮೇಲುಸ್ತುವಾರಿ ಸಮಿತಿಗೆ ಸರಕಾರ ನೀಡಿದ್ದ ಆದೇಶ ರದ್ದಾಗುತ್ತದೆ,” ಎಂದು ಹೇಳಿದೆ.

ಸುಪ್ರೀಂ ಕೋರ್ಟ್‌ ಬುಧವಾರ ನೀಡಿದ ಆದೇಶದ ಭಾಗ. 
ಸುಪ್ರೀಂ ಕೋರ್ಟ್‌ ಬುಧವಾರ ನೀಡಿದ ಆದೇಶದ ಭಾಗ. 

ಸುಪ್ರೀಂ ಕೋರ್ಟ್‌ ಇಷ್ಟು ಹೇಳುತ್ತಿದ್ದಂತೆ ‘ಮಾಧ್ಯಮ ಸಂಭಾಳಿಕೆ’ಯಲ್ಲಿ ತಂತ್ರದ ನಡೆಯನ್ನು ಅನುಸರಿಸುತ್ತಾ ಬಂದಿರುವ ರಾಮಚಂದ್ರಾಪುರ ಮಠದವರು ‘ದೇವಸ್ಥಾನ ನಮ್ಮ ವಶಕ್ಕೆ ಬಂತು’ ಎಂದು ಸಾರಿಸಿದ್ದಾರೆ.

ಆದರೆ ಯಾವುದೇ ಮಾಧ್ಯಮಗಳು ಸೆಪ್ಟೆಂಬರ್‌ 7ರಂದು ಸುಪ್ರೀಂ ಕೋರ್ಟ್‌ ನೀಡಿದ ಆದೇಶದ ಬಗ್ಗೆ ಪ್ರಸ್ತಾಪಿಸಿಲ್ಲ. ಜತೆಗೆ ಆಗಸ್ಟ್‌ 10ರಂದು ಹೈಕೋರ್ಟ್‌ ನೀಡಿದ ಆದೇಶ ಮತ್ತು ಸೆಪ್ಟೆಂಬರ್‌ 7ರಂದು ಗೋಕರ್ಣ ದೇವಸ್ಥಾನ ಯಾರ ಚುಕ್ಕಾಣಿಯಲ್ಲಿ ಇತ್ತು ಎಂಬುದನ್ನೂ ತಿಳಿಸಿಲ್ಲ ಎಂಬುದು ಗಮನಾರ್ಹ.

ಸೆಪ್ಟೆಂಬರ್‌ 7ರಂದು ಸುಪ್ರೀಂ ಕೋರ್ಟ್‌ ನೀಡಿದ ಆದೇಶ.
ಸೆಪ್ಟೆಂಬರ್‌ 7ರಂದು ಸುಪ್ರೀಂ ಕೋರ್ಟ್‌ ನೀಡಿದ ಆದೇಶ.

ವಾಸ್ತವದಲ್ಲಿ ಸೆಪ್ಟೆಂಬರ್‌ 7ರ ಆದೇಶದಲ್ಲಿ ಸುಪ್ರೀಂ ಕೋರ್ಟ್‌, “ಆಗಸ್ಟ್ 10 ರಂದು ಹೈಕೋರ್ಟ್‌ ತನ್ನ ಅಂತಿಮ ಆದೇಶ ನೀಡಿದ ನಂತರ ನೀಡಿರುವ ಮಧ್ಯಂತರ ಆದೇಶ ಮುಂದುವರಿಯುತ್ತದೆ," ಎಂದು ಸ್ಪಷ್ಟವಾಗಿ ಹೇಳಿದೆ. ಇಲ್ಲಿ ಹೈಕೋರ್ಟ್ ಅಂತಿಮ ಆದೇಶ ನೀಡಿದ ನಂತರವೂ ಮತ್ತೊಂದು ಮಧ್ಯಂತರ ಆದೇಶ ನೀಡಿದೆ ಎಂಬುದನ್ನು ಗಮನಿಸಬೇಕಿದೆ.

ಆಗಸ್ಟ್‌ 10 ರಂದು ಕರ್ನಾಟಕ ರಾಜ್ಯ ಹೈಕೋರ್ಟ್‌ ನೀಡಿದ ಆದೇಶವನ್ನು ನೋಡಿದರೆ ಅಲ್ಲಿ ಸ್ಪಷ್ಟವಾಗಿ ಸೆಪ್ಟೆಂಬರ್ 10ರ ನಂತರ ದೇವಸ್ಥಾನದ ಆಡಳಿತವನ್ನು ನೋಡಿಕೊಳ್ಳಲು ಮೇಲುಸ್ತುವಾರಿ ಸಮಿತಿಯನ್ನು ರಚಿಸಬೇಕು ಎಂದು ಹೇಳಿದೆ. ಅದಕ್ಕೂ ಮೊದಲು ದೇವಸ್ಥಾನವನ್ನು ತನ್ನ ವಶಕ್ಕೆ ಸರಕಾರ ಪಡೆದುಕೊಳ್ಳಬಾರದು ಎಂಬುದಾಗಿ ಹೇಳಿಲ್ಲ.

ಆಗಸ್ಟ್‌ 10ರಂದು ಕರ್ನಾಟಕ ಹೈಕೋರ್ಟ್‌ ನೀಡಿದ ಮಧ್ಯಂತರ ಆದೇಶ. 
ಆಗಸ್ಟ್‌ 10ರಂದು ಕರ್ನಾಟಕ ಹೈಕೋರ್ಟ್‌ ನೀಡಿದ ಮಧ್ಯಂತರ ಆದೇಶ. 

ಇಲ್ಲಿಯೂ ಮಠದ ಕಡೆಯವರು, ‘ಸೆಪ್ಟೆಂಬರ್‌ 10ರ ಮೊದಲು ದೇವಸ್ಥಾನದ ಆಡಳಿತವನ್ನು ಮಠದ ಕೈಯಿಂದ ಸರಕಾರ ವಹಿಸಿಕೊಳ್ಳುವಂತಿಲ್ಲ’ ಎಂದು ವಾದಿಸಿದ್ದರು. ವಾಸ್ತವದಲ್ಲಿ ಸೆಪ್ಟೆಂಬರ್‌ 10ರ ನಂತರ ಮೇಲುಸ್ತುವಾರಿ ಸಮಿತಿ ರಚಿಸಬೇಕು ಎಂದು ಹೈಕೋರ್ಟ್‌ ಹೇಳಿತ್ತೇ ಹೊರತು ದೇವಸ್ಥಾನವನ್ನು ಸೆಪ್ಟೆಂಬರ್‌ 10ರವರೆಗೆ ಸರಕಾರ ತನ್ನ ವಶಕ್ಕೆ ಪಡೆದುಕೊಳ್ಳಬಾರದು ಎಂದಿರಲಿಲ್ಲ.

ಆಗಸ್ಟ್‌ 30ರಂದೇ ಸರಕಾರದ ವಶಕ್ಕೆ:

ಟ್ಟಿಸ್ಟ್‌ ಇರುವುದೇ ಇಲ್ಲಿ. ಆಗಸ್ಟ್‌ 12, 2008ರಂದು ಅಂದಿನ ಯಡಿಯೂರಪ್ಪ ಸರಕಾರ ಗೋಕರ್ಣ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದ್ದನ್ನು ಆಗಸ್ಟ್‌ 10, 2018ರ ಅಂತಿಮ ಆದೇಶದಲ್ಲಿ ಕರ್ನಾಟಕ ಹೈಕೋರ್ಟ್‌ ರದ್ದುಗೊಳಿಸಿತ್ತು. ಹೈಕೋರ್ಟ್‌ ಈ ಆದೇಶ ನೀಡುತ್ತಿದ್ದಂತೆ ಚುರುಕಾದ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ದೇವಸ್ಥಾನವನ್ನು ಸರಕಾರದ ವಶಕ್ಕೆ ಪಡೆಯಲು ಸಿದ್ಧರಾದರು. ಅದಕ್ಕಾಗಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದ ಕೆಎಎಸ್‌ ಅಧಿಕಾರಿ ಎಚ್‌. ಹಾಲಪ್ಪರನ್ನು ಆಗಸ್ಟ್‌ 28ರಂದೇ ಗೋಕರ್ಣ ದೇವಸ್ಥಾನಕ್ಕೂ ಕಾರ್ಯ ನಿರ್ವಹಣಾಧಿಕಾರಿಯಾಗಿ ನೇಮಿಸಿದ್ದರು.

“ನಾನು ಆಗಸ್ಟ್‌ 30ರಂದು ಹೋಗಿ ಚಾರ್ಜ್‌ ತೆಗೆದುಕೊಂಡೆ. ಅಂದಿನಿಂದ ದೇವಸ್ಥಾನ ಸರಕಾರದ ವಶದಲ್ಲೇ ಇತ್ತು. ಸಂಪೂರ್ಣ ಅಧಿಕಾರವನ್ನು ಜಿಲ್ಲಾಧಿಕಾರಿಗಳು (ಅವರ ನೇತೃತ್ವದ ಮೇಲುಸ್ತುವಾರಿ ಸಮಿತಿ) ತೆಗೆದುಕೊಂಡಿದ್ದು ಮಾತ್ರ ಸೆಪ್ಟೆಂಬರ್‌ 18ರಂದು," ಎಂದು ‘ಸಮಾಚಾರ’ಕ್ಕೆ ಮಾಹಿತಿ ನೀಡಿದರು ಹಾಲಪ್ಪ. ಈ ಮೂಲಕ ದೇವಸ್ಥಾನ ಸರಕಾರದ ವಶಕ್ಕೆ ಬಂದಿದ್ದು, ಸಮಿತಿಗೆ ಹಸ್ತಾಂತರವಾಗಿದ್ದು ನಂತರ ಎಂಬುದನ್ನುಅಧಿಕಾರಿ ಸ್ಪಷ್ಟಪಡಿಸುತ್ತಾರೆ.

ಹೀಗಾಗಿ ಸುಪ್ರೀಂ ಕೋರ್ಟ್‌ ಆದೇಶದಂತೆ, ‘ಸೆಪ್ಟೆಂಬರ್ 7, 2018ರಂದು ಇದ್ದ ಯಥಾಸ್ಥಿತಿಯನ್ನು ಮುಂದುವರಿಸಿ ಎಂದರೆ ದೇವಸ್ಥಾನ ಸರಕಾರದ ವಶದಲ್ಲೇ ಉಳಿದುಕೊಳ್ಳುತ್ತದೆ’ ಎನ್ನುತ್ತಾರೆ ಉಪಾಧಿವಂತರ ಪರ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ ಹಿರಿಯ ವಕೀಲ ಎಸ್‌. ಎಸ್‌. ನಾಗಾನಂದ್. ಇದರಿಂದ ದೇವಸ್ಥಾನ ಮತ್ತೆ ಮಠದ ಸುಪರ್ದಿಗೆ ಹೋಗುವುದಿಲ್ಲ.

ವಿಪರ್ಯಾಸ ಏನೆಂದರೆ, ಸರಕಾರ ದೇವಸ್ಥಾನದ ಆಡಳಿತವನ್ನು ಆಗಸ್ಟ್‌ 30ರಂದು ತನ್ನ ವಶಕ್ಕೆ ಪಡೆದುಕೊಂಡಿದೆ. ಇದು ಹೊರ ಜಗತ್ತಿನ ಗಮನ ಸೆಳೆದಿಲ್ಲ. ಇದೀಗ ಸುಪ್ರಿಂ ಕೋರ್ಟ್ ಆದೇಶದ ವಿಚಾರವನ್ನು ಸಾರುವ ಸಮಯದಲ್ಲಿ ಈ ಬೆಳವಣಿಗೆಯ ಬಗ್ಗೆ ಜಾಣ ಮೌನವಹಿಸುವ ಮಠದ ವಕ್ತಾರರು, ಆದೇಶವನ್ನು ತಮಗೆ ಬೇಕಾದ ಹಾಗೆ ಅರ್ಥೈಸುವ ಕೆಲಸ ಮಾಡುತ್ತಿದ್ದಾರೆ ಎಂಬುದು ಗೋಕರ್ಣ ದೇವಸ್ಥಾನದ ಮೇಲುಸ್ತುವಾರಿ ಸಮಿತಿ ಪರವಾಗಿರುವವರ ಆರೋಪ.

“ಸುಪ್ರೀಂ ಕೋರ್ಟ್‌ ದೇವಸ್ಥಾನವನ್ನು ಮತ್ತೆ ಮಠಕ್ಕೆ ನೀಡಿ ಎಂದು ಹೇಳಿಲ್ಲ. ಜತೆಗೆ ಕೆಲಸ ನಿರ್ವಹಿಸದಂತೆ ಕಾರ್ಯ ನಿರ್ವಹಣಾಧಿಕಾರಿಗೂ ಸೂಚಿಸಿಲ್ಲ” ಎನ್ನುತ್ತಾರೆ ನಾಗಾನಂದ್. ಹೀಗಾಗಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್‌. ಹಾಲಪ್ಪ ದೇವಸ್ಥಾನದ ಉಸ್ತುವಾರಿಯನ್ನು ಮುಂದುವರಿಸಲಿದ್ದಾರೆ. ಗೋಕರ್ಣ ಸಂಸ್ಥಾನ ಮಹಾಬಲೇಶ್ವರ ದೇವಸ್ಥಾನ ಸರಕಾರದ ಬಳಿಯಲ್ಲೇ ಉಳಿದಿದೆ. ಮತ್ತು ಮುಂದಿನ ಆದೇಶದವರೆಗೂ ಉಳಿಯಲಿದೆ.