samachara
www.samachara.com
CBI FILES| ಡಿವೈಎಸ್‌ಪಿ ಗಣಪತಿ ಸಾವಿಗೂ ಮುನ್ನ ‘ಆ ಮೂರು ದಿನಗಳು’
EXCLUSIVE

CBI FILES| ಡಿವೈಎಸ್‌ಪಿ ಗಣಪತಿ ಸಾವಿಗೂ ಮುನ್ನ ‘ಆ ಮೂರು ದಿನಗಳು’

ಸಾವಿಗೆ 72 ಗಂಟೆಗಳ ಮೊದಲು ಗಣಪತಿ ಬೆಂಗಳೂರು ಕಮಿಷನರ್ ಕಚೇರಿಯ ಸಿಬ್ಬಂದಿಯೊಬ್ಬರಿಗೆ ಪದೇ ಪದೇ ಕರೆ ಮಾಡಿರುವುದನ್ನು ‘ಕಾಲ್‌ ರೆಕಾರ್ಡ್‌’ ಬಿಚ್ಚಿಟ್ಟಿದೆ.

ಪ್ರಶಾಂತ್ ಹುಲ್ಕೋಡು

ಪ್ರಶಾಂತ್ ಹುಲ್ಕೋಡು

ಕರ್ನಾಟಕ ಪೊಲೀಸ್‌ ಇಲಾಖೆಯ ಮಧ್ಯಮ ವರ್ಗದ ಅಧಿಕಾರಿಗಳ ಮನಸ್ಸನ್ನು ಕಲಕಿದ್ದು ಮಡಿಕೇರಿ ಮೂಲದ ಡಿವೈಎಸ್‌ಪಿ ಗಣಪತಿ ಸಾವಿನ ಸುದ್ದಿ. ಮುಂದಿನ ತಿಂಗಳು ಜುಲೈ 7ಕ್ಕೆ ಆರು ಅಡಿ ಉದ್ದದ ಅಧಿಕಾರಿ ಸಾವಿಗೀಡಾಗಿ ಎರಡು ವರ್ಷ ತುಂಬುತ್ತದೆ.

ಗಣಪತಿ ಸಾವು ಆತ್ಮಹತ್ಯೆ ಎಂದು ಸಿಐಡಿ ತನಿಖೆಯಲ್ಲಿ ಹೇಳಿತು. ನಂತರ, ನಿವೃತ್ತ ನ್ಯಾಯಮೂರ್ತಿ ಕೆ. ಎನ್. ಕೇಶವನಾರಾಯಣ ಏಕಸದಸ್ಯ ವಿಚಾರಣಾ ಆಯೋಗವನ್ನು ಅಂದಿನ ಸಿದ್ದರಾಮಯ್ಯ ಸರಕಾರ ರಚಿಸಿತು. ಆಯೋಗ ವರದಿ ನೀಡಿದ್ದು, ಈವರೆಗೆ ಎಲ್ಲಿಯೂ ಬಹಿರಂಗಗೊಂಡಿಲ್ಲ. ಇದರ ಮೇಲೆ ಕುಟುಂಬದವರ ಮನವಿ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದೆ. 2017ರ ನವೆಂಬರ್‌ ತಿಂಗಳಿಂದ ಈಚೆಗೆ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ.

ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ, ಅಂದು ಬೆಂಗಳೂರು ಅಭಿವೃದ್ದಿ ಸಚಿವರಾಗಿದ್ದ ಕೆ. ಜೆ. ಜಾರ್ಜ್‌ ರಾಜೀನಾಮೆಗೆ ಕಾರಣವಾಗಿದ್ದ ಗಣಪತಿ ಸಾವಿನ ಪ್ರಕರಣ ಇವತ್ತಿಗೆ ಬೂದಿ ಮುಚ್ಚಿದ ಕೆಂಡ. ರಾಜ್ಯ ಪೊಲೀಸ್ ಇಲಾಖೆಯೊಳಗೆ ಇದು ನಾನಾ ರೀತಿಯಲ್ಲಿ ಕಂಪನಗಳನ್ನು ಎಬ್ಬಿಸುತ್ತಲೇ ಇದೆ. ಹಲವು ಕಿರಿಯ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಬರೆಯುತ್ತಿರುವ ಪತ್ರದಲ್ಲಿ ಗಣಪತಿ ಪ್ರಕರಣವೂ ಸೇರಿದಂತೆ ಆತ್ಮಹತ್ಯೆ ಮಾಡಿಕೊಂಡ ಹಾಗೂ ಸ್ವಯಂ ನಿವೃತ್ತಿ ತೆಗೆದುಕೊಂಡ ಮಧ್ಯಮ ವರ್ಗದ ಅಧಿಕಾರಿಗಳ ಹೆಸರುಗಳು ಪ್ರಸ್ತಾಪವಾಗುತ್ತಿವೆ.

ನ್ಯಾ. ಕೇಶವನಾರಾಯಣ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗದ ಕಚೇರಿ ಹೀಗಿತ್ತು. ಸದ್ಯ ಅದಕ್ಕೆ ಬೀಗ ಬಿದ್ದಿದ್ದು, ಖರೀದಿಸಿದ ಸುಮಾರು 2 ಕೋಟಿ ಅಂದಾಜಿನ ಪೀಠೋಪಕರಣಗಳ ಸ್ಥಳಾಂತರಕ್ಕೆ ಪತ್ರ ಸಮರ ನಡೆಯುತ್ತಿದೆ. 
ನ್ಯಾ. ಕೇಶವನಾರಾಯಣ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗದ ಕಚೇರಿ ಹೀಗಿತ್ತು. ಸದ್ಯ ಅದಕ್ಕೆ ಬೀಗ ಬಿದ್ದಿದ್ದು, ಖರೀದಿಸಿದ ಸುಮಾರು 2 ಕೋಟಿ ಅಂದಾಜಿನ ಪೀಠೋಪಕರಣಗಳ ಸ್ಥಳಾಂತರಕ್ಕೆ ಪತ್ರ ಸಮರ ನಡೆಯುತ್ತಿದೆ. 
ಸಮಾಚಾರ. 

ಪತ್ರ ಪ್ರಸ್ತಾಪ:

ಗಣಪತಿ ಸಾವಿನ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಸಿಬಿಐ, ಸಾವಿಗೂ ಮುನ್ನ ಮೂರು ದಿನಗಳ ಕಾಲ ನಡೆದ ಘಟನಾವಳಿಗಳ ದಾಖಲೆ ಕಲೆ ಹಾಕಿದೆ. ಆ ಮಾಹಿತಿ ಕರ್ನಾಟಕ ಪೊಲೀಸ್ ಇಲಾಖೆಯ ‘ಆಂತರಿಕ ವರ್ಗ ಸಂಘರ್ಷ’ದ ಹೊಸ ಅಧ್ಯಾಯವನ್ನೇ ಬಿಚ್ಚಿಡುತ್ತಿದೆ. ‘ಸಮಾಚಾರ’ಕ್ಕೆ ಲಭ್ಯವಾಗಿರುವ ಉನ್ನತ ಮೂಲಗಳ ಮಾಹಿತಿ ಪ್ರಕಾರ, ಗಣಪತಿ ಸಾವಿಗೂ ಮುನ್ನ ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ತಯಾರಾಗುತ್ತಿದ್ದ ‘ವರದಿ’ಯೊಂದು ಅವರನ್ನು ಉದ್ವಿಗ್ನಗೊಳ್ಳುವಂತೆ ಮಾಡಿತ್ತು. ಈ ಸಮಯದಲ್ಲಿ ಗಣಪತಿ ಕಮಿಷನರ್ ಕಚೇರಿಯ ಸಿಬ್ಬಂದಿಯೊಬ್ಬರಿಗೆ ಪದೇ ಪದೇ ಕರೆ ಮಾಡಿರುವುದು ‘ಕಾಲ್‌ ರೆಕಾರ್ಡ್‌’ ಬಿಚ್ಚಿಟ್ಟಿದೆ.

ಗಣಪತಿ ಆತಂಕಕ್ಕೆ ಕಾರಣವಾಗಿದ್ದು ಜುಲೈ. 24, 2016ರಂದು ಅಂದಿನ ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರು ಪೊಲೀಸ್ ಕಮಿಷನರ್‌ಗೆ ಬರೆದ ಪತ್ರ. ಅದರಲ್ಲಿ ಮಡಿವಾಳ ಠಾಣೆಯಲ್ಲಿ ಗಣಪತಿ ಕಾರ್ಯನಿರ್ವಹಿಸುತ್ತಿದ್ದಾಗ ನಡೆದ ಕರ್ತವ್ಯಲೋಪ ಪ್ರಕರಣವೊಂದರ ಬಗೆಗೆ ‘ಕ್ರಮದ ವರದಿ’ ನೀಡಲು ಆದೇಶಿಸಲಾಗಿತ್ತು.

ಮಂಗಳೂರಿನ ದಕ್ಷಿಣ ಐಜಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಗಣಪತಿಯವರಿಗೆ ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ಅದನ್ನು ಅವರ ಆಪ್ತರ ಬಳಿಯೂ ಹೇಳಿಕೊಂಡಿದ್ದರು.

“ಅವರು (ಗಣಪತಿ) ಅಲ್ಲೆಲ್ಲೋ ಬೆಂಗಳೂರಿನಲ್ಲಿ ಹಳೆಯ ಪ್ರಕರಣ ಇಟ್ಟುಕೊಂಡು ತನ್ನನ್ನು ತುಳಿಯಲು ಹಿರಿಯ ಅಧಿಕಾರಿಗಳು ಪ್ರಯತ್ನ ಪಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇನ್‌ ಫ್ಯಾಕ್ಟ್‌ ಅದನ್ನೇ ಕೊನೆಯ ವಿಡಿಯೋದಲ್ಲೂ ಹೇಳಿದರು. ಆದರೆ ಅದಕ್ಕಾಗಿ ಅವರು ಅಷ್ಟು ಚಿಂತೆಗೆ ಬಿದ್ದಿದ್ದಾರೆ ಅಂತ ಅನ್ನಿರಲಿಲ್ಲ,’’ ಎನ್ನುತ್ತಾರೆ ‘ಕೊಡಗು ಟಿವಿ 1’ ಮುಖ್ಯಸ್ಥ ಪ್ರಸಾದ್. ಗಣಪತಿ ಸಾವಿಗೂ ಮುನ್ನ ಇವರ ವಾಹಿನಿಯ ಸ್ಟುಡಿಯೋದಲ್ಲಿ ಕೊನೆಯ ಬಾರಿಗೆ ಆಕ್ರೋಶದ, ಅಸಮಾಧಾನದ ಮಾತುಗಳನ್ನು ಆಡಿದ್ದರು.

Also read: ಸಾವಿಗೂ ಮುನ್ನ ಡಿವೈಎಸ್ಪಿ ಗಣಪತಿ ನೀಡಿದ Exclusive ಟಿವಿ ಸಂದರ್ಶನದ 'ಮಿಸ್ಟರಿ' ಬಯಲು!

‘ಜು. 4 ಹಾಗೂ 5 ಹಾಗೂ 6ರಂದು ಗಣಪತಿ ಸಾವಿಗೆ ಮೂರು ದಿನ ಮೊದಲು ಕಮಿಷನರ್ ಕಚೇರಿಯಲ್ಲಿರುವ ರೈಟರ್ ಒಬ್ಬರಿಗೆ ಕರೆಮಾಡಿದ್ದರು. ಆ ಸಮಯದಲ್ಲಿ ಗಣಪತಿ ಬಗೆಗೆ ಕಮಿಷನರ್ ಕಚೇರಿಯಿಂದ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಕಳಿಹಿಸಲು ವರದಿ ತಯಾರಾಗುತ್ತಿತ್ತು. ಈ ಮಾಹಿತಿ ಪಡೆದುಕೊಂಡ ಗಣಪತಿ ರೈಟರ್ ಬಳಿಯೂ ಸಹಾಯ ಯಾಚಿಸಿದ್ದರು. ಅದಕ್ಕೆ ರೈಟರ್ ಕಡೆಯಿಂದ ಸ್ಪಂದನೆ ಸಿಗಲಿಲ್ಲ. ‘ದೊಡ್ಡವರ ವಿಚಾರ’ ಎಂದ ಅವರು ಕೈ ತೊಳೆದುಕೊಂಡಿದ್ದರು. ಆ ನಂತರವೇ ಗಣಪತಿ ಅಸಹಾಯಕರಾಗಿ ಮಡಿಕೇರಿಯ ವಿನಾಯಕ ಲಾಡ್ಜ್‌ಗೆ ಬಂದು ರೂಮು ಪಡೆದುಕೊಂಡರು,’ ಎಂಬುದನ್ನು ಸಿಬಿಐ ತನಿಖೆ ವೇಳೆ ಕಂಡುಕೊಳ್ಳಲಾಗಿದೆ.

CBI FILES| ಡಿವೈಎಸ್‌ಪಿ ಗಣಪತಿ ಸಾವಿಗೂ ಮುನ್ನ ‘ಆ ಮೂರು ದಿನಗಳು’

ಅಂತಿಮ ಕ್ಷಣಗಳು:

ಮೂರು ದಿನಗಳ ಕಾಲ ಹಳೆಯ ಪ್ರಕರಣದ ತೂಗುಗತ್ತಿಯನ್ನು ಮಾನಸಿಕವಾಗಿ ಅನುಭವಿಸಿದ ಗಣಪತಿ ಕೊಡಗು ಟಿವಿ 1 ಕಚೇರಿಗೆ ಭೇಟಿ ನೀಡಿದರು. ಅಲ್ಲಿ ಹಿರಿಯ ಅಧಿಕಾರಿಗಳ ಮೇಲೆ, ಸಚಿವರ ಮೇಲೆ ಆರೋಪ ಮಾಡಿದರು. ಅವೆಲ್ಲವೂ ಚಿತ್ರೀಕರಣಗೊಂಡವು. ನಂತರ ವಿನಾಯಕ ಲಾಡ್ಜ್‌ನಲ್ಲಿ ಸಿಕ್ಕಿದ್ದು ನೇತಾಡುವ ಸ್ಥಿತಿಯಲ್ಲಿದ್ದ ಗಣಪತಿ ದೇಹ.

ಗಮನಿಸಬೇಕಾದ ಸಂಗತಿ ಏನೆಂದರೆ, ಸಾವಿಗೂ ಮುನ್ನ ಯಾವ ವಿಚಾರಕ್ಕೆ ಗಣಪತಿ ಮೂರು ದಿನಗಳ ಕಾಲ ಮಾನಸಿಕ ಕ್ಷೋಭೆಗೆ ಒಳಗಾದರೋ, ಅದು ಅವರ ಸಾವಿನ ನಂತರ ಬದಲಾಗಿ ಹೋಗಿತ್ತು. ಹಿರಿಯ ಅಧಿಕಾರಿಗಳು ಗಣಪತಿ ಆತ್ಮಕ್ಕೆ ಶಾಂತಿ ನೀಡುವ ರೀತಿಯಲ್ಲಿ ನಡೆದುಕೊಂಡರು. ಜು. 7ರಂದು ಗಣಪತಿ ಆತ್ಮಹತ್ಯೆ ಮಾರನೇ ದಿನವೇ ಜು. 8ರಂದು ಕಮಿಷನರ್ ಕಚೇರಿಯಿಂದ ಗಣಪತಿ ಹೆಸರಿನಲ್ಲಿ ‘ಕ್ಲೀನ್ ಚಿಟ್’ ವರದಿಯೊಂದು ಐಜಿ ಕಚೇರಿಗೆ ಕಳುಹಿಸಲಾಯಿತು. ಬಹುಶಃ ಎರಡು ದಿನ ಮುಂಚೆಯೇ ಈ ನಿಟ್ಟಿನಲ್ಲಿ ಸಂಯಮದ ಹೆಜ್ಜೆಯೊಂದನ್ನು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ತೋರಿಸಿದ್ದರೆ, ಗಣಪತಿ ಬದುಕುಳಿಯುವ ಸಾಧ್ಯತೆ ಇತ್ತು ಎನ್ನುತ್ತಿವೆ ಸಿಬಿಐ ಫೈಲ್ಸ್.