‘ಸತ್ಯ ಸಾರಲು ಎಚ್ಚರಿಕೆಯಿಂದ ಕೆಲಸ ಮಾಡಿ’: ಕೋಬ್ರಾಪೋಸ್ಟ್‌ ಸಂಪಾದಕ ಅನಿರುದ್ಧ ಬಹಾಲ್ ಸಂದರ್ಶನ
EXCLUSIVE

‘ಸತ್ಯ ಸಾರಲು ಎಚ್ಚರಿಕೆಯಿಂದ ಕೆಲಸ ಮಾಡಿ’: ಕೋಬ್ರಾಪೋಸ್ಟ್‌ ಸಂಪಾದಕ ಅನಿರುದ್ಧ ಬಹಾಲ್ ಸಂದರ್ಶನ

ಕೋಬ್ರಾ ಪೋಸ್ಟ್ ನಡೆಸಿದ ಆಪರೇಷನ್ 136 ಕುರಿತು ಸ್ವತಃ ಅನಿರುದ್ಧ ಬಹಾಲ್ ‘ಸಮಾಚಾರ’ದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅದರ ಆಯ್ದ ಭಾಗಗಳು ಇಲ್ಲಿವೆ.

ಅನಿರುದ್ಧ ಬಹಾಲ್, ಭಾರತದ ತನಿಖಾ ಪತ್ರಿಕೋದ್ಯಮ ಬಲ್ಲವರಿಗೆ ಚಿರಪರಿಚಿತ ಹೆಸರು.

ಇಂಡಿಯಾ ಟುಡೆ, ಔಟ್‌ ಲುಕ್‌, ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಬಹಾಲ್, ತೆಹಲ್ಕಾ ಮ್ಯಾಗ್ಸೀನ್‌ನ ಸಂಸ್ಥಾಪಕ ಸದಸ್ಯರು ಕೂಡ. ಎನ್‌ಡಿಎ ಸರಕಾರದಲ್ಲಿ ಸೈನಿಕರ ಶವಪೆಟ್ಟಿಗೆ ವಿಚಾರದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಹೊರಗೆಳೆಯುವಲ್ಲಿ ಬಹಾಲ್ ಪಾತ್ರವಿತ್ತು. ಕ್ರಿಕೆಟ್ ಮ್ಯಾಚ್‌ ಫಿಕ್ಸಿಂಗ್ ಹಗರಣವನ್ನು ಭಾರತದಲ್ಲಿ ಹೊರತರುವ ಮೂಲಕ ಬಹಾಲ್ ಹೆಸರು ತನಿಖಾ ಪತ್ರಿಕೋದ್ಯಮದಲ್ಲಿ ಅಚ್ಚಳಿಯದೆ ಉಳಿದು ಹೋಗುವಂತಾಯಿತು.

2003ರಲ್ಲಿ ತೆಹಲ್ಕಾದಿಂದ ಹೊರಬಂದ ಅನಿರುದ್ಧ ಸ್ಥಾಪಿಸಿದ್ದು ‘ಕೋಬ್ರಾ ಪೋಸ್ಟ್’. ಕಳೆದ 24 ಗಂಟೆಗಳಲ್ಲಿ ಭಾರತದ ಪ್ರಮುಖ ಮಾಧ್ಯಮ ಸಂಸ್ಥೆಗಳ ಅಂತರಂಗದ ಹಸೀ ವ್ಯಾಪಾರಿ ಮನೋಭಾವ ಹಾಗೂ ಹಿಂದುತ್ವದ ಅಮಲನ್ನು ಜಾಹೀರು ಮಾಡುವ ಮೂಲಕ ಕೋಬ್ರಾ ಪೋಸ್ಟ್ ಮತ್ತೊಮ್ಮೆ ಸುದ್ದಿ ಕೇಂದ್ರಕ್ಕೆ ಬಂದಿದೆ.

ಹೀಗೆ, ಮಾಧ್ಯಮ ಸಂಸ್ಥೆಗಳನ್ನು ಬಯಲಿಗೆಳೆದಿರುವ ‘ಕೋಬ್ರಾ ಪೋಸ್ಟ್‌’ 2006ರಲ್ಲಿ ತನ್ನ ಮೊದಲ ತನಿಖಾ ವರದಿಯನ್ನು ಪ್ರಕಟಿಸಿತ್ತು. ‘ಆಪರೇಷನ್ ದುರ್ಯೋದನ್’ ಹೆಸರಿನಲ್ಲಿ ನಡೆದ ಈ ಕುಟುಕು ಕಾರ್ಯಾಚರಣೆ ಸಂಸದರು ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದುಕೊಳ್ಳುವ ವೈಖರಿಯನ್ನು ಬಯಲಿಗೆಳೆದಿತ್ತು. ಅದಾದ ನಂತರ ಹತ್ತು ಹಲವು ತನಿಖಾ ವರದಿಗಳು ‘ಕೋಬ್ರಾ ಪೋಸ್ಟ್‌’ ಹೆಸರಿನಲ್ಲಿ ದೇಶದಲ್ಲಿ ಸಂಚಲನ ಮೂಡಿಸಿದ್ದವು. ಈಗ ‘ಆಪರೇಷನ್ 136’ ಸರದಿ ಅಷ್ಟೆ.

‘ಆಪರೇಷನ್ 136’ ಹೆಸರಿನಲ್ಲಿ ನಡೆಸಿದ ಕುಟುಕು ಕಾರ್ಯಾಚರಣೆ ಟೈಮ್ಸ್‌ ಗ್ರೂಪ್‌, ಇಂಡಿಯಾ ಟುಡೆ ಸೇರಿದಂತೆ ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳ ಪ್ರಮುಖರ ಆಷಾಡಭೂತಿತನಗಳನ್ನು, ಲಾಭಕೋರ ಮನಸ್ಥಿತಿಯನ್ನು ಜನರೆದುರು ತೆರೆದಿಟ್ಟಿದೆ. ಕರ್ನಾಟಕದಲ್ಲಿ ಸಂಸದ, ಕೇರಳ ಮೂಲದ ಉದ್ಯಮಿ ರಾಜೀವ್ ಚಂದ್ರಶೇಖರ್ ಒಡೆತನದ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ಪತ್ರಿಕೆಗಳ ‘ಸಂಪಾದಕೀಯ’ ಹಾಗೂ ಮಾರುಕಟ್ಟೆ ಮನಸ್ಥಿತಿಯನ್ನು ತೆರೆದಿಡುವ ವರದಿಯನ್ನು ಇದು ಒಳಗೊಂಡಿದೆ.

ಕೋಬ್ರಾ ಪೋಸ್ಟ್ ಪ್ರಕಟಿಸಿರುವ ವರದಿಯಲ್ಲಿ, ಜ್ಯುಪಿಟರ್ ಕ್ಯಾಪಿಟಲ್ ಒಡೆತನದ ಕರ್ನಾಟಕದ ಮಾಧ್ಯಮ ಸಂಸ್ಥೆಗಳು ಹಾಗೂ ಅವುಗಳ ವ್ಯವಸ್ಥಾಪಕರು, ವ್ಯಾಪಾರ ವಿಭಾಗದ ಪ್ರತಿನಿಧಿ ಹಾಗೂ ಸ್ವತಃ ಪ್ರಧಾನ ಸಂಪಾದಕರ ‘ಹಿಂದುತ್ವ’ ಪರವಹಿಸುವ ಮಾತುಗಳಿವೆ. ಸಹಜವಾಗಿಯೇ ಇದು ಸುವರ್ಣ ವಾಹಿನಿ ಕಡೆಯಿಂದ ಪ್ರತಿಕ್ರಿಯೆ ಪಡೆದುಕೊಂಡಿದೆ. ‘ಕೋಬ್ರಾ ಪೋಸ್ಟ್‌’ ವೃತಾ ಆರೋಪ ಮಾಡಿದೆ ಎನ್ನುವ ಮೂಲಕ ತನಿಖಾ ವರದಿಯನ್ನು ಸುವರ್ಣ ವಾಹಿನಿ ಸಂಪಾದಕೀಯ ವಿಭಾಗ ಅಲ್ಲಗೆಳೆದಿದೆ.

Also read: ‘ಕೋಬ್ರಾ ಪೋಸ್ಟ್‌’ ಖೆಡ್ಡಾದಲ್ಲಿ ಸುವರ್ಣ ನ್ಯೂಸ್: ರವಿ ಹೆಗಡೆಗಿದು ಆತ್ಮವಿಮರ್ಶೆಯ ಸಮಯ

ಇದನ್ನೂ ಸೇರಿದಂತೆ ಒಟ್ಟಾರೆ, ಕೋಬ್ರಾ ಪೋಸ್ಟ್ ನಡೆಸಿದ ಆಪರೇಷನ್ 136 ಕುರಿತು ಸ್ವತಃ ಅನಿರುದ್ಧ ಬಹಾಲ್ ‘ಸಮಾಚಾರ’ದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅದರ ಆಯ್ದ ಭಾಗಗಳು ಇಲ್ಲಿವೆ.

ಸಮಾಚಾರ: ಕೋಬ್ರಾ ಪೋಸ್ಟ್ ಹೊಸ ತನಿಖಾ ವರದಿ ದೇಶಾದ್ಯಂತ ಸಂಚಲನ ಹುಟ್ಟುಹಾಕಿದೆ. ಯಾಕೆ ಈ ಬಾರಿ ಮಾಧ್ಯಮ ಸಂಸ್ಥೆಗಳನ್ನೇ ನಿಮ್ಮ ತನಿಖೆಯ ವಿಷಯವಾಗಿ ಆಯ್ಕೆ ಮಾಡಿಕೊಂಡಿರಿ?

ಅನಿರುದ್ಧ: ವರದಿಗಾರ ಪುಷ್ಪ್‌ ಶರ್ಮಾ ಕಳೆದ ಆರು ತಿಂಗಳಿನಿಂದ ಈ ವರದಿಯ ಮೇಲೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ಎಲ್ಲವೂ ಮಾಧ್ಯಮ ಮಧ್ಯಸ್ಥಿಕೆಯಲ್ಲಿಯೇ ನಡೆಯುತ್ತಿರುವ ದಿನಗಳಲ್ಲಿ ನಾವು ಬದುಕುತ್ತಿದ್ದೇವೆ. ಮಾಧ್ಯಮಗಳನ್ನು ತಮ್ಮದೇ ಆದ ಆರ್ಥಿಕ ಹಿತಾಸಕ್ತಿಗಳನ್ನು ಹೊಂದಿರುವ ದೊಡ್ಡ ದೊಡ್ಡ ಕಾರ್ಪೋರೇಟ್ ಸಂಸ್ಥೆಗಳು ನಿಯಂತ್ರಿಸುತ್ತಿವೆ. ಅದರಲ್ಲೂ ‘ಕಾಸಿಗಾಗಿ ಸುದ್ದಿ’ ಎಂಬುದು ಭಾರತದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಹೀಗಾಗಿ ನಮ್ಮ ವರದಿಗಾರ ಇದನ್ನೇ ತನ್ನ ತನಿಖೆಯ ವಸ್ತುವಾಗಿ ಆಯ್ಕೆ ಮಾಡಿಕೊಂಡಾಗ ನಾವು ಅದಕ್ಕೆ ಬೆಂಬಲ ನೀಡಿದೆವು.

ಸಮಾಚಾರ: ಆಪರೇಷನ್ 136 ಬಗ್ಗೆ ಇನ್ನಷ್ಟು ಮಾಹಿತಿಯನ್ನು ಹಂಚಿಕೊಳ್ಳಬಹುದಾ?

ಅನಿರುದ್ಧ: ಈ ವರದಿ ಮೊದಲ ಭಾಗದಲ್ಲಿ ಒಟ್ಟು 17 ಮಾದ್ಯಮಗಳನ್ನು ತನಿಖೆಗೆ ಒಳಪಡಿಸಿದ್ದೆವು. ಈ ಬಾರಿ 2 ಡಜನ್‌ಗೂ ಹೆಚ್ಚು ಮಾಧ್ಯಮಗಳ ಸಂಸ್ಥೆಗಳ ಬಗೆಗೆ ತನಿಖಾ ವರದಿ ಪ್ರಕಟಿಸಿದ್ದೇವೆ. ಇಷ್ಟು ಪ್ರಮಾಣದ ಮಾಧ್ಯಮಗಳ ಪೈಕಿ ಎರಡೇ ಎರಡು ಮಾಧ್ಯಮಗಳು ನಕಾರಾತ್ಮಕ ಅಭಿಯಾನ ನಡೆಸಲು ನಾವು ಮುಂದಿಟ್ಟ ಆಫರ್‌ನ್ನು ತಿರಸ್ಕರಿಸಿವೆ. ಇಷ್ಟು ದೊಡ್ಡ ದೇಶದಲ್ಲಿ, ತನಿಖಾ ವರದಿಗಳ ಅಗತ್ಯವಿರುವ ಈ ಸಮಯದಲ್ಲಿ ಇದೊಂದು ಎಚ್ಚರಿಕೆ ಗಂಟೆಯಾಗಿದೆ. ನಮಗೆ ಈ ಮಾಧ್ಯಮಗಳು ನೀಡುತ್ತಿರುವುದನ್ನು ಅನುಮಾನದಿಂದ ನೋಡುವಂತಾದರೆ ಅಂತಿಮವಾಗಿ ಪ್ರಜಾಪ್ರಭುತ್ವವೇ ಸತ್ವಹೀನವಾಗುತ್ತದೆ.

ಸಮಾಚಾರ: ಕರ್ನಾಟಕದಲ್ಲಿ ನಿಮ್ಮ ವರದಿಗಾರ ಪುಷ್ಪ್‌ ಶರ್ಮಾ ಸುವರ್ಣ ವಾಹಿನಿಯನ್ನು ತನಿಖೆಗೆ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಅವರ ಭೇಟಿ ನಂತರ ವಾಹಿನಿ ಅನುಮಾನಗೊಂಡು ದೂರು ದಾಖಲಿಸಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಅನಿರುದ್ಧ: ನಾವಿಟ್ಟ ಆಫರ್‌ಗೆ ಸುವರ್ಣ ವಾಹಿನಿಯ ಸಿಬ್ಬಂದಿ ಹೇಗೆ ನಡೆದುಕೊಂಡರು ಎಂಬುದನ್ನು ವಿಡಿಯೋ ಸ್ಪಷ್ಟವಾಗಿ ನಿರೂಪಿಸುತ್ತಿವೆ. ಈಗ ಜನರನ್ನು ತಪ್ಪು ದಾರಿಗೆ ಎಳೆಯಲು ಸುಳ್ಳಿನ ಪರದೆಯೊಂದನ್ನು ಎಳೆಯುವ ಪ್ರಯತ್ನ ಮಾಡುತ್ತಿರಬಹುದು. ಸದ್ಯಕ್ಕೆ ನನ್ನ ಬಳಿ ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲ.

ಸಮಾಚಾರ: ಒಂದು ಕಡೆ ಮಾಧ್ಯಮ ಸಂಸ್ಥೆಗಳ ಮಾಲೀಕರು, ಆಡಳಿತ ಮಂಡಳಿಗಳಲ್ಲಿನ ಪ್ರಮುಖರು ಹಣಕ್ಕಾಗಿ ಏನನ್ನೂ ಬೇಕಾದರೂ ಮಾಡಲು ತಯಾರಾಗಿದ್ದಾರೆ. ಇನ್ನೊಂದೆಡೆ, ಅವುಗಳಲ್ಲಿ ಕೆಲಸ ಮಾಡುವ ಕೆಳಹಂತದ ಪತ್ರಕರ್ತರೂ ವಸ್ತುನಿಷ್ಟತೆಯಿಂದ ದೂರ ಸರಿಯುತ್ತಿದ್ದಾರೆ. ಕೋಬ್ರಾ ಪೋಸ್ಟ್ ತನಿಖೆಯಿಂದ ಈ ಮನಸ್ಥಿತಿಯನ್ನು ಬದಲಾವಣೆ ಮಾಡಲು ಸಾಧ್ಯ ಅಂತ ಅನ್ನಿಸುತ್ತಾ?

ಅನಿರುದ್ಧ: ಮಾಧ್ಯಮ ಸಂಸ್ಥೆಗಳಲ್ಲಿ ನಾಯಕತ್ವ ಎಂಬುದು ಮಾಲೀಕರ ಕೈಲಿರುತ್ತದೆ. ಒಂದು ಹಂತದಲ್ಲಿ ಅದನ್ನು ಸಂಪಾದಕರಿಗೆ ಒಂದಷ್ಟು ವರ್ಗಾವಣೆ ಮಾಡುತ್ತಾರೆ. ಆದರೆ ಕೆಳಹಂತದ ಪತ್ರಕರ್ತರಿಗೆ ಕೇವಲ ಮಾರ್ಗದರ್ಶನ ಹಾಗೂ ಕೆಲಸವನ್ನು ಹೇಳಲಾಗುತ್ತದೆ ಅಷ್ಟೆ. ಹೀಗಾಗಿ, ಸಂಸ್ಥೆಗಳಲ್ಲಿ ಕೆಳಹಂತದಲ್ಲಿ ಕೆಲಸ ಮಾಡುವವರ ಮೇಲೆ ಹೆಚ್ಚು ಆರೋಪ ಮಾಡುವ ಅಗತ್ಯವಿಲ್ಲ.

ಸಮಾಚಾರ: ಕೋಬ್ರಾ ಪೋಸ್ಟ್ ಹೊಸ ತನಿಖಾ ವರದಿಯ ಕುರಿತು ಹೆಚ್ಚು ಕಡಿಮೆ ಎಲ್ಲಾ ಪ್ರಮುಖ ಮಾಧ್ಯಮಗಳು ಜಾಣ ಮೌನವನ್ನು ವಹಿಸಿವೆ. ಅವರಿಗೆ ನೀವು ಏನನ್ನು ಹೇಳಲು ಬಯಸುತ್ತೀರಿ?

ಅನಿರುದ್ಧ: ಮುಖ್ಯವಾಹಿನಿಯ ಮಾಧ್ಯಮಗಳನ್ನು ‘ಮೂಕವಾದ’ ದೇಶವೊಂದು ಸೃಷ್ಟಿಸಲು ಬಯಸುತ್ತಿವೆ. ಒಬ್ಬರ ಬಗ್ಗೆ ಸುದ್ದಿ ಮಾಡುವುದನ್ನು ಇನ್ನೊಬ್ಬರು ಬಯಸುವುದಿಲ್ಲ. ಒಂದು ವೇಳೆ, ಇವತ್ತು ನಾವು ಅವರ ಕೆಟ್ಟತನಗಳ ಬಗ್ಗೆ ವರದಿ ಮಾಡಿದರೆ, ನಾಳೆ ನಮ್ಮ ಕೆಟ್ಟದ್ದನ್ನು ಅವರು ಸುದ್ದಿ ಮಾಡುತ್ತಾರೆ ಎಂಬ ಭಯ ಅವುಗಳಲ್ಲಿದೆ. ನಾವು ಅವುಗಳಿಗೆ ಹೇಳಲು ಬಯಸುವುದು ಇಷ್ಟೆ, ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳಿ, ನಿಮ್ಮ ಸಂಸ್ಥೆಯೊಳಗೆ ಹೊಸ ಉತ್ಸಾಹ ತುಂಬುವಂತೆ ಮಾಡಿ. ಲಾಭವೇ ಮಾಧ್ಯಮಗಳ ಸಂಸ್ಥೆಗಳ ಪ್ರಮುಖ ಆದ್ಯತೆ ಆಗಬಾರದು.

ಸಮಾಚಾರ: ‘ಆಪರೇಷನ್ 136’ ಹೆಸರಿನಲ್ಲಿ ತನಿಖಾ ವರದಿ ಮಾಡಿದ ವರದಿಗಾರ ಪುಷ್ಪ್‌ ಶರ್ಮಾ ವಿರುದ್ಧ ಹಲವು ಆರೋಪಗಳಿವೆ, ದೂರುಗಳು ದಾಖಲಾಗಿವೆ. ಏನವು?

ಅನಿರುದ್ಧ: ಈ ಬಗ್ಗೆ ನಾನು ಕೂಲಂಕಷವಾಗಿ ಪರೀಕ್ಷೆ ನಡೆಸಿದ್ದೇನೆ ಮತ್ತು ಅವುಗಳಲ್ಲಿ ಹುರುಳಿಲ್ಲ ಎಂಬುದನ್ನು ಕಂಡುಕೊಂಡಿದ್ದೇನೆ.

ಸಮಾಚಾರ: ಕೊನೆಯದಾಗಿ, ಇವತ್ತು ಕೋಬ್ರಾ ಪೋಸ್ಟ್‌ ತನಿಖಾ ವರದಿಯನ್ನು ಜನರಿಗೆ ತಲುಪಿಸುವ ಕೆಲಸವನ್ನು ಕ್ರೀಯಾಶೀಲವಾಗಿ ಮಾಡುತ್ತಿರುವವರು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವವರು. ಅವರಿಗೆ ಏನನ್ನು ಹೇಳಲು ಬಯಸುತ್ತೀರಿ?

ಅನಿರುದ್ಧ: ಸತ್ಯವನ್ನು ಸಾರಲು ಎಚ್ಚರಿಕೆಯಿಂದ ಕೆಲಸ ಮಾಡಿ. ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ತಪ್ಪುಗಳು ಕಂಡು ಬಂದಾಗ ಎತ್ತಿ ತೋರಿಸಿ. ಅವುಗಳನ್ನು ಅಜೆಂಡಾಗಳನ್ನು ಬೆತ್ತಲು ಮಾಡಿ. ಇಷ್ಟು ಮಾಡುವಾಗ ಸತ್ಯಕ್ಕೆ ಆದ್ಯತೆ ನೀಡಿ, ಊಹಾಪೋಹಗಳಿಗಲ್ಲ.