‘ಕೋಟಿ ವೀರ’ರಿವರು; ಸ್ವಂತ ಮನೆ ಇದ್ದರೂ ವಸತಿ ಭತ್ಯೆ ಬಿಡಲೊಲ್ಲರು!
EXCLUSIVE

‘ಕೋಟಿ ವೀರ’ರಿವರು; ಸ್ವಂತ ಮನೆ ಇದ್ದರೂ ವಸತಿ ಭತ್ಯೆ ಬಿಡಲೊಲ್ಲರು!

ಹಣಕ್ಕಾಗಿ ರಾಜಕಾರಣಿಗಳು ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಉದಾಹರಣೆಗಳು ಇಲ್ಲಿವೆ. ನಾಡಿನ ಮಾಜಿ ಸಚಿವರ ವಸತಿ ಭತ್ಯೆಯ ಲೆಕ್ಕಾಚಾರವನ್ನು ನೀವೇ ನೋಡಿ.

ರಾಜ್ಯದಲ್ಲಿ ಈ ಹಿಂದಿನ ಸರಕಾರದಲ್ಲಿ ಸಚಿವರಾಗಿದ್ದವರ ಪೈಕಿ ಕೆಲವರು ಸ್ವಂತ ಮನೆಗೆ ವಸತಿ ಭತ್ಯೆ ಪಡೆದಿದ್ದಾರೆ. ಸ್ವಂತ ಮನೆಗೆ ಎಚ್‌ಆರ್‌ಎ ಪಡೆಯುವುದು ನಿಯಮಗಳ ಪ್ರಕಾರ ತಪ್ಪಲ್ಲದಿದ್ದರೂ ನೈತಿಕತೆಯನ್ನು ಬದಿಗಿಟ್ಟು ಈ ಹಿಂದಿದ್ದ ಸಚಿವರು ಲಕ್ಷಗಟ್ಟಲೆ ಎಚ್‌ಆರ್‌ಎ ಪಡೆದಿರುವ ಮಾಹಿತಿ ‘ಸಮಾಚಾರ’ಕ್ಕೆ ಲಭ್ಯವಾಗಿದೆ.

ಮುಖ್ಯಮಂತ್ರಿ ಹುದ್ದೆಗೇರುವ ಮುನ್ನವೇ ಕುಮಾರಸ್ವಾಮಿ ತಾವು ಸರಕಾರಿ ಬಂಗಲೆ ಬಳಸುವುದಿಲ್ಲ ಎಂದು ಹೇಳಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕುಮಾರಸ್ವಾಮಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ತಾವು ಸರಕಾರಿ ಬಂಗಲೆ ಬಳಸದಿರಲು ನಿರ್ಧರಿಸಿರುವುದಾಗಿ ಹೇಳಿರುವ ಅವರು, ಉಳಿದ ಸಚಿವರೂ ಇದೇ ಮಾದರಿಯನ್ನು ಅನುಸರಿಸಲಿ ಎಂದು ತಮ್ಮ ಬಯಕೆ ವ್ಯಕ್ತಪಡಿಸಿದ್ದಾರೆ.

ಆದರೆ, ಕುಮಾರಸ್ವಾಮಿ ಸರಕಾರಿ ಬಂಗಲೆ ಬಳಸದಿರಲು ಕಾರಣವೇ ಬೇರೆ ಇದೆ. ದೈವ ನಂಬಿಕೆಯ ಜತೆಗೆ ಅತಿಯಾಗಿ ವಾಸ್ತು ನಂಬುವ ಕುಮಾರಸ್ವಾಮಿಗೆ ಸರಕಾರಿ ಬಂಗಲೆ ‘ಆಗಿ ಬರುವುದಿಲ್ಲ’ ಎಂದು ಜ್ಯೋತಿಷಿಗಳು ಕಿವಿ ಊದಿದ್ದಾರೆ. ಆಗಿಬಾರದ ಸರಕಾರಿ ಬಂಗಲೆಗೆ ವಾಸ್ತು ಪರಿಹಾರ ಮಾಡಿಸುವ ಉಸಾಬರಿಗೆ ಮುಂದಾಗದ ಕುಮಾರಸ್ವಾಮಿ, ಮುಖ್ಯಮಂತ್ರಿಯಾದ ಮೇಲೂ ಜೆ.ಪಿ. ನಗರದ ತಮ್ಮ ನಿವಾಸದಲ್ಲೇ ಇರುವುದಾಗಿ ಹೇಳಿದ್ದಾರೆ.

ಒಂದು ಕಡೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ವಾಸ್ತು ಕಾರಣಕ್ಕೆ ದುಂದು ವೆಚ್ಚದ ನೆಪವನ್ನು ಮುಂದೆ ಮಾಡಿಕೊಂಡು ಸರಕಾರಿ ಬಂಗಲೆಯನ್ನು ನಿರಾಕರಿಸುತ್ತಿದ್ದರೆ, ಈ ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಕೆಲ ಸಚಿವರು ಬೆಂಗಳೂರಿನಲ್ಲಿರುವ ಸ್ವಂತ ನಿವಾಸಕ್ಕೇ ಸರಕಾರದಿಂದ ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿವರೆಗೆ ಮನೆ ಭತ್ಯೆ ಪಡೆದುಕೊಂಡಿದ್ದಾರೆ.

ಹಿಂದಿನ ಸಚಿವರ ಮನೆ ಭತ್ಯೆಯ ಲೆಕ್ಕಾಚಾರದ ದಾಖಲೆಗಳು ‘ಸಮಾಚಾರ’ಕ್ಕೆ ಲಭ್ಯವಾಗಿವೆ. ಸ್ವಂತ ಮನೆ ಇರುವ ಸಚಿವರು ಸರಕಾರದಿಂದ ಮನೆ ಭತ್ಯೆ ಪಡೆಯಬಾರದೆಂಬ ನಿಯಮ ಇಲ್ಲದಿದ್ದರೂ ನೈತಿಕತೆಯ ದೃಷ್ಟಿಯಿಂದ ನೋಡಿದರೆ ರಾಜಕಾರಣಿಗಳ ಆಸೆ ಬುರುಕತನ ಮನೆ ಭತ್ಯೆಯನ್ನೂ ಬಿಡುವುದಿಲ್ಲ ಎಂಬುದು ಮೇಲ್ನೋಟಕ್ಕೇ ಎದ್ದು ಕಾಣುತ್ತದೆ.

 ಸ್ವಂತ ಮನೆಗೆ ಎಚ್‌ಆರ್‌ಎ ಪಡೆದಿರುವ ದಾಖಲೆ. 
ಸ್ವಂತ ಮನೆಗೆ ಎಚ್‌ಆರ್‌ಎ ಪಡೆದಿರುವ ದಾಖಲೆ. 
ಸ್ವಂತ ಮನೆಗೆ ಎಚ್‌ಆರ್‌ಎ ಪಡೆದಿರುವ ದಾಖಲೆ. 
ಸ್ವಂತ ಮನೆಗೆ ಎಚ್‌ಆರ್‌ಎ ಪಡೆದಿರುವ ದಾಖಲೆ. 
ಸ್ವಂತ ಮನೆಗೆ ಎಚ್‌ಆರ್‌ಎ ಪಡೆದಿರುವ ದಾಖಲೆ. 
ಸ್ವಂತ ಮನೆಗೆ ಎಚ್‌ಆರ್‌ಎ ಪಡೆದಿರುವ ದಾಖಲೆ. 
ಸ್ವಂತ ಮನೆಗೆ ಎಚ್‌ಆರ್‌ಎ ಪಡೆದಿರುವ ದಾಖಲೆ. 
ಸ್ವಂತ ಮನೆಗೆ ಎಚ್‌ಆರ್‌ಎ ಪಡೆದಿರುವ ದಾಖಲೆ. 

ಸದ್ಯ ಉಪ ಮುಖ್ಯಮಂತ್ರಿಯಾಗಿರುವ ಡಾ. ಜಿ. ಪರಮೇಶ್ವರ್‌ ಹಿಂದಿನ ಸರಕಾರದ ಅವಧಿಯಲ್ಲಿ ತಮ್ಮ ಸ್ವಂತ ಮನೆಗೆ ಪ್ರತಿ ತಿಂಗಳು 1 ಲಕ್ಷ ರೂಪಾಯಿವರೆಗೆ ಎಚ್‌ಆರ್‌ಎ ಪಡೆದಿದ್ದಾರೆ. ಪರಮೇಶ್ವರ್‌ ಸೇರಿದಂತೆ 13 ಮಂದಿ ಮಾಜಿ ಸಚಿವರು ತಮ್ಮ ಸ್ವಂತ ಮನೆಗೆ ಸರಕಾರದಿಂದ ಪ್ರತಿ ತಿಂಗಳೂ ಎಚ್‌ಆರ್‌ಎ ಪಡೆದಿದ್ದಾರೆ.

ಸಚಿವರಾಗಿದ್ದ ಡಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ, ಎಂ.ಬಿ. ಪಾಟೀಲ್, ಆರ್. ರೋಷನ್ ಬೇಗ್, ಉಮಾಶ್ರೀ, ಕೆ.ಆರ್. ರಮೇಶ್ ಕುಮಾರ್, ಎಂ.ಆರ್. ಸೀತಾರಾಮ್, ಬಸವರಾಜ ರಾಯರೆಡ್ಡಿ, ಪ್ರಿಯಾಂಕ್ ಖರ್ಗೆ, ರುದ್ರಪ್ಪ ಮಾನಪ್ಪ ಲಮಾಣಿ, ಈಶ್ವರ ಖಂಡ್ರೆ ಮತ್ತು ಪ್ರಮೋದ್ ಮಧ್ವರಾಜ್ ಸ್ವಂತ ಮನೆಗೆ ಎಚ್‌ಆರ್‌ಎ ಪಡೆದವರು.

‘ಕೋಟಿ ವೀರ’ರಿವರು; ಸ್ವಂತ ಮನೆ ಇದ್ದರೂ ವಸತಿ ಭತ್ಯೆ ಬಿಡಲೊಲ್ಲರು!
ಸಚಿವರು ಕಾನೂನಿನ ಪ್ರಕಾರವೇ ದುಬಾರಿ ಭತ್ಯೆ ಪಡೆಯುತ್ತಿದ್ದರೂ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದು. ಸಚಿವರಿಗೆ ಒಂದು ಲಕ್ಷದಷ್ಟು ಮನೆ ಭತ್ಯೆ ಕೊಡುವ ಅಗತ್ಯವೇನಿದೆ?, ಜನರ ಸೇವೆಯ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ಜನಪ್ರತಿನಿಧಿಗಳಿಗೆ ಅಷ್ಟು ದುಬಾರಿ ಭತ್ಯೆ ಏಕೆ? ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ.
- ಬಸವ, ವಕೀಲರು 

ಕೃಷ್ಣ ಬೈರೇಗೌಡರ ಕರಾರು ಪತ್ರಕ್ಕೆ ಪತ್ನಿ ಸಹಿ:

ಕೃಷಿ ಸಚಿವರಾಗಿದ್ದ ಕೃಷ್ಣ ಬೈರೇಗೌಡ ವಾಸವಿದ್ದ ಸಹಕಾರ ನಗರ ನಿವಾಸದ ಕರಾರು ಪತ್ರಕ್ಕೆ ಅವರ ಪತ್ನಿ ಮೀನಾಕ್ಷಿ ಶೇಷಾದ್ರಿ ಮಾತ್ರ ಸಹಿ ಹಾಕಿದ್ದಾರೆ. ಎಚ್‌ಆರ್‌ಎ ಪಡೆಯಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸಲ್ಲಿಸಿರುವ ಅಧಿಕೃತ ಕರಾರು ಪತ್ರದಲ್ಲಿ ಕೃಷ್ಣ ಬೈರೇಗೌಡರ ಹೆಸರಿನ ಜತೆಗೆ ಮೀನಾಕ್ಷಿ ಶೇಷಾದ್ರಿ ಅವರ ಹೆಸರೂ ಇದೆ. ಆದರೆ, ಕರಾರು ಪತ್ರದಲ್ಲಿ ಕೃಷ್ಣ ಬೈರೇಗೌಡರ ಸಹಿಯೇ ಇಲ್ಲ.

ಕರಾರು ಪತ್ರದಲ್ಲಿ ಕೃಷ್ಣ ಬೈರೇಗೌಡರ ಸಹಿ ಇಲ್ಲ. 
ಕರಾರು ಪತ್ರದಲ್ಲಿ ಕೃಷ್ಣ ಬೈರೇಗೌಡರ ಸಹಿ ಇಲ್ಲ. 

ಕೃಷ್ಣ ಬೈರೇಗೌಡ ವಾಸವಿದ್ದ ಸಹಕಾರ ನಗರದ ರವಿಶಂಕರ್ ರೆಡಿಡೆನ್ಸಿ, ನಂ.3ರ ನಿವಾಸಕ್ಕೆ ಸರಕಾರದಿಂದ ಪ್ರತಿ ತಿಂಗಳು ಸಂದಾಯವಾಗುತ್ತಿದ್ದ ಒಟ್ಟು ಬಾಡಿಗೆ 76,665 ರೂಪಾಯಿ. ಇದರಲ್ಲಿ ಶೇಕಡ 10ರಷ್ಟು ಟಿಡಿಎಸ್ ಕಡಿತಗೊಳಿಸಿ ಉಳಿದ ಹಣವನ್ನು (68.998.5 ರೂ.) ಮನೆಯ ಮಾಲೀಕರಿಗೆ ಸಂದಾಯ ಮಾಡಲಾಗುತ್ತಿತ್ತು ಎನ್ನುತ್ತವೆ ದಾಖಲೆಗಳು.

“ಸಚಿವರು ಸಂಬಳ, ಸಾರಿಗೆ, ಮನೆ ಭತ್ಯೆಗಳನ್ನು ವಿಶೇಷ ಅವಕಾಶದಡಿ ಪಡೆಯುತ್ತಿರುತ್ತಾರೆ. ಸ್ವಂತ ಮನೆಗೂ ಸಚಿವರು ಮನೆ ಭತ್ಯೆ ಪಡೆಯಲು ಕಾನೂನಿನಲ್ಲಿ ಅವಕಾಶವಿದ್ದರೆ ಅದನ್ನು ಪಡೆಯಲು ಯಾವುದೇ ಕಾನೂನಿನ ತೊಡಕಿಲ್ಲ. ಒಂದು ಲಕ್ಷದವರೆಗೆ ಭತ್ಯೆ ಪಡೆಯುವುದು ತೆರಿಗೆ ಉಳಿಸುವ ಮಾರ್ಗವೂ ಅಲ್ಲ,” ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಚಾರ್ಟೆಡ್‌ ಅಕೌಂಟಂಟ್‌ ಒಬ್ಬರು.

ಸದ್ಯ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರಿ ವ್ಯವಸ್ಥೆಯ ದುಂಡು ವೆಚ್ಚಗಳಿಗೆ ಕಡಿವಾಣ ಹಾಕುವ ಮಾತನ್ನಾಡುತ್ತಿದ್ದಾರೆ. ಆದರೆ, ಈ ಹಿಂದಿನ ಸಚಿವರ ಎಚ್‌ಆರ್‌ಎ ಲೆಕ್ಕಾಚಾರಗಳನ್ನು ನೋಡಿದರೆ ಸಚಿವರ ಭತ್ಯೆಗಳಿಗೆ ಕತ್ತರಿ ಹಾಕುವುದು ಅಷ್ಟು ಸುಲಭವಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಬೆಂಗಳೂರಿನಲ್ಲಿ ಸ್ವಂತ ಮನೆ ಇದ್ದರೂ, ಸಚಿವ ಸ್ಥಾನದಲ್ಲಿದ್ದರೂ ವಸತಿ ಭತ್ಯೆ ಪಡೆಯುತ್ತಿದ್ದ ಈ ‘ಗಣ್ಯ’ರಲ್ಲಿ ಕೆಲವರು ಮಾಜಿಗಳಾಗಿದ್ದರೆ ಕೆಲವರು ಹೊಸ ಸರಕಾರದಲ್ಲೂ ಸಚಿವರಾಗುವವರು. ಹೊಸ ಸರಕಾರದಲ್ಲೂ ಅವರ ಎಚ್‌ಆರ್‌ಎ ಲೆಕ್ಕಾಚಾರ ಹೀಗೆಯೇ ಮುಂದುವರಿಯುತ್ತದೆಯೇ ಅಥವಾ ಇನ್ನಷ್ಟು ಹೆಚ್ಚಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.