ಅಭಿಷೇಕ್
EXCLUSIVE

ಗುಬ್ಬಿಯಲ್ಲಿ ನಡೆದ ದಲಿತ ದೌರ್ಜನ್ಯ: ವರ್ಷ ಕಳೆದರೂ ಮಾಯದ ಗಾಯ...

ಕಳೆದ ವರ್ಷ ಜನವರಿ 17ರಂದು ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಜಾತಿ ದೌರ್ಜನ್ಯ ಪ್ರಕರಣವೊಂದಕ್ಕೆ ಸಾಕ್ಷಿಯಾಗಿತ್ತು. ವರ್ಷ ಕಳೆದ ನಂತರ ಅಲ್ಲಿನ ತಳಮಟ್ಟದ ಪರಿಸ್ಥಿತಿಗಳಿಗೆ ‘ಸಮಾಚಾರ’ ಇಲ್ಲಿ ಕನ್ನಡಿ ಹಿಡಿಯುತ್ತಿದೆ. 

Summary

ಗುಬ್ಬಿ ಅಭಿಷೇಕ್ ಪ್ರಕರಣ ನಡೆದು ಒಂದು ವರ್ಷ, ಎರಡು ತಿಂಗಳು ಕಳೆದಿದೆ. ಜನಸಾಮಾನ್ಯರಷ್ಟೇ ಅಲ್ಲ ಮುಖ್ಯವಾಹಿನಿ ಮಾಧ್ಯಮಗಳೂ ಈ ಘಟನೆಯನ್ನು ಮರೆತಿವೆ. ಪ್ರಕರಣ ಈಗ ಯಾವ ಹಂತದಲ್ಲಿದೆ? ತೀವ್ರ ಹಲ್ಲೆಗೊಳಗಾದ ಅಭಿಷೇಕ್ ಈಗ ಹೇಗಿದ್ದಾರೆ? ಅಭಿಷೇಕ್ ಕುಟುಂಬದ ಈಗಿನ ಪರಿಸ್ಥಿತಿ ಏನು? ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಯಿತೇ? ಎಂಬೆಲ್ಲಾ ಪ್ರಶ್ನೆಗಳೊಂದಿಗೆ ‘ಸಮಾಚಾರ’ ಪ್ರತಿನಿಧಿ ಗುಬ್ಬಿಯ ಅಭಿಷೇಕ್ ಮನೆಗೆ ಭೇಟಿ ನೀಡಿದಾಗ ಕಂಡ ಸಾಕ್ಷಾತ್ ವರದಿ ಇಲ್ಲಿದೆ…

ರಾಜ್ಯದ ರಾಜಧಾನಿ ಬೆಂಗಳೂರಿನಿಂದ 90 ಕಿ. ಮೀ ದೂರದಲ್ಲಿರುವ ತಾಲೂಕು ಗುಬ್ಬಿ. ಇಲ್ಲಿ 405 ದಿನಗಳ ಹಿಂದೆ ನಡೆದ ಘಟನೆ ಅವತ್ತಿಗೆ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಮನುಷ್ಯ ಮನುಷ್ಯನೊಂದಿಗೆ ಹೀಗೆ ನಡೆದುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿಸಿದ್ದ ಅಮಾನವೀಯ ಘಟನೆ ಅದು. ಇವತ್ತು ಬಹುತೇಕರು ಮರೆತಿದ್ದಾರೆ. ಅದರಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ತೀವ್ರ ಹಲ್ಲೆಗೆ ಒಳಗಾಗಿದ್ದ ಆ ಯುವಕ ಮಾತ್ರ ಆಘಾತದಿಂದ ಹೊರಬಂದಿಲ್ಲ; ಮರೆಯುವ ಪ್ರಯತ್ನ ಮಾಡುತ್ತಾನಾದರೂ, ದುಃಸ್ವಪ್ನದಂತೆ ಆ ದೃಶ್ಯಗಳು ಆತನಿಗೆ ಕಾಡುತ್ತಲೇ ಇವೆ. ತಮ್ಮ ಮಗನನ್ನು ಈ ಸ್ಥಿತಿಗೆ ತಂದವರಿಗೆ ಯಾವಾಗ ಶಿಕ್ಷೆಯಾಗುತ್ತದೆ, ಯಾವಾಗ ನಮಗೆ ನ್ಯಾಯ ಸಿಗುತ್ತದೆ ಎಂದು ಆ ಯುವಕನ ಕುಟುಂಬದವರು ದಿನ ಎಣಿಸುತ್ತಿದ್ದಾರೆ.

ಗುಬ್ಬಿ ಪ್ರಕರಣ, ಗುಬ್ಬಿ ಅಭಿಷೇಕ್ ಪ್ರಕರಣ ಎಂದರೆ ಕಣ್ಣಮುಂದೆ ಬರುವುದು ಬೆತ್ತಲಾಗಿ ಕೊರಳಿಗೆ ಚಪ್ಪಲಿ ಹಾರ ಹಾಕಿರುವ, ಕೈಯಲ್ಲಿ ಸ್ಲೇಟ್ ಹಿಡಿದಿರುವ ಯುವಕನ ಚಿತ್ರ. ಗುಬ್ಬಿ ಎಂಬ ಪುಟ್ಟ ಊರು ಸುದ್ದಿಯಾಗಿದ್ದು ಈ ಅಮಾನವೀಯ ಘಟನೆಯ ಕಾರಣಕ್ಕೇ.

ಈ ಘಟನೆಗೂ ಮುನ್ನಾ ಗುಬ್ಬಿ ಎಂದರೆ ನೆನಪಾಗುತ್ತಿದ್ದುದು ರಂಗಭೂಮಿಯ ದಂತಕಥೆ ಗುಬ್ಬಿ ವೀರಣ್ಣ. ರಂಗಭೂಮಿಯನ್ನು ಕಂಪೆನಿಯ ಮಟ್ಟಕ್ಕೆ ವೃತ್ತಿಪರವಾಗಿ ಕಟ್ಟಿದ ವೀರಣ್ಣನವರ ಊರೂ ಇದೇ ಗುಬ್ಬಿ. ಹೇಮಾವತಿಯ ನೀರಿನಿಂದ ಸಮೃದ್ಧವಾಗಿರುವ ತೆಂಗು, ಅಡಿಕೆ, ಭತ್ತದ ಗದ್ದೆಗಳ ನಡುವೆ ಇರುವ ಪುಟ್ಟ ಊರು ಗುಬ್ಬಿ. ಪಾವಗಡದಂಥ ಪ್ರದೇಶವನ್ನು ಹೊಂದಿರುವ ತುಮಕೂರು ಜಿಲ್ಲೆಯಲ್ಲೇ ಗುಬ್ಬಿಯಂಥ ಹಸಿರು ನಾಡೂ ಇದೆ. ಒಂದು ಕಡೆಗೆ ಚನ್ನಬಸವೇಶ್ವರ ದೇವಾಲಯ, ಶತಮಾನದಷ್ಟು ಹಳೆಯದಾದ ವಿಲಿಯಂ ಆರ್ಥರ್ ಮೆಮೋರಿಯಲ್ ಚರ್ಚ್, ಊರಾಚೆಗೆ ಸಿಐಟಿ ಎಂಜಿನಿಯರಿಂಗ್ ಕಾಲೇಜು, ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಹೆಚ್ಚೂಕಡಿಮೆ ಎರಡು ಕಿಲೋಮೀಟರ್ಗಿಂತ ಹೆಚ್ಚಿಗಿಲ್ಲ ಗುಬ್ಬಿ ಎಂಬ ಪಟ್ಟಣದ ವಿಸ್ತೀರ್ಣ.

ರೈತ ಪ್ರತಿಭಟನೆಗಳು, ಅಡಿಕೆ, ಕೊಬ್ಬರಿ ಬೆಲೆ, ಹೇಮಾವತಿ ನೀರಿಗಾಗಿ ಜಗಳ – ಇಂಥ ಸುದ್ದಿಗಳನ್ನು ಬಿಟ್ಟರೆ ಈ ಗುಬ್ಬಿ ದೊಡ್ಡ ಸುದ್ದಿ ಮಾಡಿದ್ದು ಅಭಿಷೇಕ್ ಪ್ರಕರಣದಲ್ಲೇ. ಅಭಿಷೇಕ್ ಪ್ರಕರಣ ಇಡೀ ರಾಷ್ಟ್ರವೇ ಗುಬ್ಬಿಯ ಕಡೆಗೆ ನೋಡುವಂತೆ ಮಾಡಿತು. ಗುಬ್ಬಿ ವೀರಣ್ಣನವರ ಹೆಸರಿನಿಂದ ಖ್ಯಾತಿ ಪಡೆದಿದ್ದ ಗುಬ್ಬಿ, ಅಭಿಷೇಕ್ ಮೇಲಿನ ಹಲ್ಲೆಯ ಬಳಿಕ ಕುಖ್ಯಾತಿಗೆ ಒಳಗಾಯಿತು. ಗುಬ್ಬಿ ಎಂಬ ಪದ ಈಗ ಕಿವಿ ಮೇಲೆ ಬಿದ್ದರೆ ಗುಬ್ಬಿ ವೀರಣ್ಣನವರ ಹೆಸರಿನ ಜತೆಗೆ ಅಭಿಷೇಕ್ ಮೇಲಿನ ಅಮಾನವೀಯ ಹಲ್ಲೆಯೂ ನೆನಪಾಗದೆ ಇರದು.

ಯಾರು ಅಭಿಷೇಕ್?:

ಗುಬ್ಬಿಯ ವಿಲಿಯಂ ಆರ್ಥರ್ ಮೆಮೋರಿಯಲ್ ಚರ್ಚ್ ಸಮೀಪದ ಎ.ಕೆ. ಕಾಲೋನಿ ನಿವಾಸಿಗಳಾದ ಬಸ್ತಿ ಕುಮಾರ್ ಮತ್ತು ನೇತ್ರಾವತಿ ಅವರ ಎರಡನೇ ಮಗ ಅಭಿಷೇಕ್. 9ನೇ ತರಗತಿವರೆಗೆ ಓದಿರುವ ಅಭಿಷೇಕ್ ಅಲ್ಲಿಂದ ಮುಂದೆ ಶಾಲೆಗೆ ಹೋಗಲಿಲ್ಲ. ಕಾರ್ ಡ್ರೈವಿಂಗ್, ಆಟೊ ಡ್ರೈವಿಂಗ್, ಕೋಳಿ ಫಾರ್ಮ್ – ಹೀಗೆ ಯಾವ ಕೆಲಸ ಸಿಗುತ್ತದೋ ಆ ಕೆಲಸ ಮಾಡಿ ಮನೆಗೆ ನೂರೋ ಇನ್ನೂರೋ ತಂದು ಕೊಡುತ್ತಿದ್ದ ಅಭಿಷೇಕ್. ಮಗ ಓದದಿದ್ದರೂ ಅಷ್ಟೋ ಇಷ್ಟೋ ದುಡಿದು ತಂದುಕೊಡುತ್ತಾನೆ ಎಂಬ ಸಮಾಧಾನ ತಂದೆತಾಯಿಗಿತ್ತು. ತಮ್ಮಪಾಡಿಗೆ ತಾವಿದ್ದ ಕುಟುಂಬಕ್ಕೆ ಮುಂದೊಂದು ದಿನ ಮಗ ಹೀಗೆ ಏಟು ತಿಂದು ಮನೆಯಲ್ಲಿ ಮಂಕಾಗಿ ಕೂರುತ್ತಾನೆ ಎಂಬ ಎಣಿಕೆಯೂ ಇರಲಿಲ್ಲ.

ಮಾನವೀಯತೆ ಮೇಲಿನ ಹಲ್ಲೆ:

ಅದು 2017ರ ಜನವರಿ 17. ಶಬರಿಮಲೆ ಯಾತ್ರೆಗೆ ಹೋಗಿ ಊರಿಗೆ ವಾಪಾಸಾಗಿದ್ದರು ಅಭಿಷೇಕ್. ಗೆಳೆಯನೊಬ್ಬ ಫೋನ್ ಮಾಡಿ ಕರೆದ ಎಂದು ಮನೆಯಿಂದ ಹೊರಟ ಅಭಿಷೇಕ್‌ಗೆ ತನ್ನದೇ ಊರಿನ ಜನ ತನ್ನೊಂದಿಗೆ ಆ ಮಟ್ಟಿಗೆ ಅಮಾನವೀಯವಾಗಿ ನಡೆದುಕೊಳ್ಳುತ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ. ಗುಬ್ಬಿಯ ಕಾಡು ಪ್ರಕಾಶ್ ಎಂಬ ತಿಗಳರ ಸಮುದಾಯಕ್ಕೆ ಸೇರಿದ ಪ್ರಭಾವಿ ವ್ಯಕ್ತಿ, ಅಭಿಷೇಕ್ ತನ್ನ ಮಗಳ ಸಹವಾಸಕ್ಕೆ ಬರಬಾರದು ಎಂಬ ಕಾರಣಕ್ಕೆ ನಡೆಸಿದ ಅಮಾನವೀಯ ಹಲ್ಲೆ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿತ್ತು.

ಅಭಿಷೇಕ್ ಹೇಳುವ ಪ್ರಕಾರ, 2017ರ ಜನವರಿ 17ರಂದು ಗೆಳೆಯನ ಜತೆಗೆ ಬೈಕ್ ಏರಿ ಹೊರಟ ಅಭಿಷೇಕ್ ಗುಬ್ಬಿ ಹೊರವಲಯಕ್ಕೆ ಹೋಗುತ್ತಿದ್ದಂತೆ ಅವರನ್ನು ಬಲವಂತವಾಗಿ ಕಾರಿಗೆ ಹಾಕಿಕೊಂಡ ಕಾಡು ಪ್ರಕಾಶ್ ಮತ್ತು ಆತನ ಬೆಂಬಲಿಗರು ಅಭಿಷೇಕ್‌ನನ್ನು ತಮ್ಮ ತೋಟದ ಮನೆಗೆ ಕರೆದುಕೊಂಡು ಹೋಗಿ ಬಟ್ಟೆ ಬಿಚ್ಚಿಸಿ ತೀವ್ರ ಹಲ್ಲೆ ನಡೆಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ, ಕೈಗೆ ‘ಗುಬ್ಬಿ ಹುಡುಗಿಯರನ್ನು ಕೆಣಕಿದರೆ ಇದೇ ಗತಿ’ ಎಂದು ಬರೆದ ಸ್ಲೇಟ್ ಹಿಡಿಸಿ, ಹಲ್ಲೆಯ ವಿಡಿಯೊ ಮತ್ತು ಈ ಸ್ಲೇಟ್ ಹಿಡಿಸಿದ ಫೋಟೊ ಅನ್ನು ವಾಟ್ಸಾಪ್ನಲ್ಲಿ ಹರಿಬಿಟ್ಟಿದ್ದರು. ದಿನಕಳೆಯುವುದರೊಳಗೆ ಈ ವಿಡಿಯೊ ಮತ್ತು ಫೋಟೊ ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಬಟ್ಟೆ ಬಿಚ್ಚಿಸಿ ಅಮಾನುಷವಾಗಿ ಹಲ್ಲೆ ನಡೆಸಿದ್ದ ವಿಡಿಯೊ ವೈರಲ್ ಆದ ಬಳಿಕ ಈ ಸುದ್ದಿ ರಾಷ್ಟ್ರದ ಗಮನ ಸೆಳೆಯಿತು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ದಲಿತ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿದ್ದವು.

ಹಲ್ಲೆಕೋರರು ಮೊಬೈಲ್‌ನಲ್ಲಿ ಚಿತ್ರಿಕರಿಸಿದ ಅಭಿಷೇಕ್. 
ಹಲ್ಲೆಕೋರರು ಮೊಬೈಲ್‌ನಲ್ಲಿ ಚಿತ್ರಿಕರಿಸಿದ ಅಭಿಷೇಕ್. 

ನಡೆದಿದ್ದೇನು?:

ಗುಬ್ಬಿ ಎಂಬ ಪುಟ್ಟ ಊರಿನಲ್ಲಿ ಅಡಿಕೆ ತೋಟ, ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ಸ್ಥಳೀಯ ರಾಜಕಾರಣದಿಂದ ಪ್ರಭಾವಿ ವ್ಯಕ್ತಿಯಾಗಿದ್ದ ಕಾಡು ಪ್ರಕಾಶ್. ಮಾದಿಗ ಸಮುದಾಯದ ಅಭಿಷೇಕ್ ತನ್ನ ಮಗಳಿಗೆ ಫೋನ್ ಮಾಡುತ್ತಾನೆ ಎಂಬ ವಿಷಯಕ್ಕೆ ಆತ ಅಭಿಷೇಕ್ ಮೇಲೆ ಕೋಪಗೊಂಡಿದ್ದ. ಘಟನೆ ನಡೆದಾಗ ಅಭಿಷೇಕ್ಗೆ 19 ವರ್ಷ, ಕಾಡು ಪ್ರಕಾಶ್ ಮಗಳಿನ್ನೂ 9ನೇ ತರಗತಿ ಓದುತ್ತಿದ್ದಳು. ಅಭಿಷೇಕ್ ಹೇಳುವ ಪ್ರಕಾರ, ಕಾಡು ಪ್ರಕಾಶ್ ಮಗಳೇ ಅಭಿಷೇಕ್ ಹಿಂದೆ ಬಿದ್ದು ತನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದಳು. ಆದರೆ, ಜಾತಿ ಹಾಗೂ ಅಂತಸ್ತಿನ ಕಾರಣಕ್ಕೆ ಹೆದರಿದ್ದ ಅಭಿಷೇಕ್, ‘ಇದೆಲ್ಲಾ ಬೇಡ’ ಎಂದು ಸುಮ್ಮನಾಗಿದ್ದ.

“ಗಣೇಶನ ಹಬ್ಬದಲ್ಲಿ ಮೆರವಣಿಗೆ ಹೋಗುವಾಗ ನಾನು ಮೆರವಣಿಗೆ ಮುಂದೆ ಕುಣಿಯುತ್ತಾ ಹೋಗುತ್ತಿದ್ದೆ. ಆಗ ಸಿಕ್ಕ ‘ಆ ಹುಡುಗಿ’, ‘ನೀವು ಚೆನ್ನಾಗಿ ಡ್ಯಾನ್ಸ್ ಮಾಡ್ತೀರ’ ಎಂದು ಹೇಳಿ ಅವಳ ಫೋನ್ ನಂಬರ್ ಕೊಟ್ಟಿದ್ದಳು. ಮೊದಲು ಪರಿಚಯವಾಗಿದ್ದು ಅಲ್ಲಿಂದ. ಆ ಮೇಲೆ ಆ ಹುಡುಗಿ ಪದೇ ಪದೇ ಫೋನ್ ಮಾಡುತ್ತಿದ್ದಳು. ಪ್ರೀತಿ ಮಾಡುವಂತೆ ಒತ್ತಾಯ ಮಾಡುತ್ತಿದ್ದಳು. ಆದರೆ ನಾನು ನಮ್ಮ ಜಾತಿ ಬೇರೆ ನಿಮ್ಮ ಜಾತಿ ಬೇರೆ. ನೀವು ಶ್ರೀಮಂತರು, ನಾವು ಬಡವರು. ನಮ್ಮ ಪ್ರೀತಿಗೆ ಮನೆಯವರು ಒಪ್ಪುವುದಿಲ್ಲ. ಇದೆಲ್ಲಾ ನಮಗೆ ಬೇಡ ಎಂದು ಹೇಳಿದ್ದೆ. ಆದರೆ, ಆ ಹುಡುಗಿ ನನ್ನ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ” ಎನ್ನುತ್ತಾರೆ ಅಭಿಷೇಕ್.

“ಈ ಮಧ್ಯೆ ಆ ಹುಡುಗಿ ತನ್ನ ಎರಡು ಫೋಟೊಗಳನ್ನು ನನಗೆ ಕೊಟ್ಟಿದ್ದಳು. ಆದರೆ, ಇದೆಲ್ಲಾ ಚೆನ್ನಾಗಿರುವುದಿಲ್ಲ ಎಂದು ಹೇಳಿದ್ದರೂ ಆಕೆ ಕೇಳುವ ಸ್ಥಿತಿಯಲ್ಲಿರಲಿಲ್ಲ. ನಾನು ಶಬರಿಮಲೆಯಿಂದ ವಾಪಸ್ ಬರುತ್ತಿದ್ದಾಗಲೂ ಆ ಹುಡುಗಿ ನನಗೆ ಫೋನ್ ಮಾಡಿ, ‘ಗುಬ್ಬಿಗೆ ಬರಬೇಡ. ನಿನಗೆ ಹೊಡೆಯಲು ನಮ್ಮಪ್ಪ ಪ್ಲಾನ್ ಮಾಡಿದ್ದಾರೆ, ನೀನು ಎಲ್ಲಾದರೂ ದೂರ ಹೋಗಿಬಿಡು. ಇಲ್ಲಿಗೆ ಬಂದರೆ ನಿನ್ನ ಜೀವ ಉಳಿಸುವುದಿಲ್ಲ’ ಎಂದು ಹೇಳಿದ್ದಳು. ‘ನಾನೇನೂ ತಪ್ಪು ಮಾಡಿಲ್ಲ, ನಾನ್ಯಾಕೆ ತಲೆಮರೆಸಿಕೊಳ್ಳಲಿ’ ಎಂದು ನಾನು ಹೇಳಿದ್ದೆ. ಆದರೆ, ಶಬರಿಮಲೆಯಿಂದ ಬಂದ ಮೇಲೆ ಅವರು ಯಾಮಾರಿಸಿ ನನ್ನ ಮೇಲೆ ಹಲ್ಲೆ ನಡೆಸಿದರು” ಎಂದು ಘಟನೆಯನ್ನು ಬಿಚ್ಚಿಡುತ್ತಾರೆ ಅಭಿಷೇಕ್.

ಅಭಿಷೇಕ್‌ನನ್ನು ಅಪಹರಿಸಿದ್ದ ಕಾಡು ಪ್ರಕಾಶ್, ಆತನ ಮಗ ಮತ್ತು ಅವರ ಸಂಬಂಧಿಕರು ಗುಬ್ಬಿಯ ತೋಟದ ಮನೆಯಲ್ಲಿ ತೀವ್ರವಾಗಿ ಹಲ್ಲೆ ನಡೆಸಿ, ಬಟ್ಟೆ ಬಿಚ್ಚಿಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ, ಕೈಯಲ್ಲಿ ಸ್ಲೇಟ್ ಹಿಡಿಸಿ ಫೋಟೊ ತೆಗೆದು, ಹಲ್ಲೆಯ ವಿಡಿಯೊ ಮಾಡಿ ಅದನ್ನು ವಾಟ್ಸಾಪ್ನಲ್ಲಿ ಹರಿಬಿಟ್ಟಿದ್ದರು.

“ಒಂದು ವೇಳೆ ನನ್ನ ಮಗ ತಪ್ಪು ಮಾಡಿದ್ದೇ ನಿಜವಾಗಿದ್ದರೆ ಅವನನ್ನು ಕರೆಸಿ ಬುದ್ಧಿ ಹೇಳಬಹುದಿತ್ತು, ಪಂಚಾಯ್ತಿ ಮಾಡಿಸಬಹುದಿತ್ತು ಇಲ್ಲವೇ ಪೊಲೀಸರಿಗೆ ದೂರು ನೀಡಬಹುದಿತ್ತು. ಆದರೆ, ಮಗನನ್ನು ಅಪಹರಿಸಿ ಹೀಗೆ ಅಮಾನುಷವಾಗಿ ಹಲ್ಲೆ ಮಾಡುವ ಅಧಿಕಾರ ಇವರಿಗೆ ಕೊಟ್ಟವರು ಯಾರು? ದುಡ್ಡು, ರಾಜಕೀಯ ಪ್ರಭಾವ ಇದ್ದವರು ಏನು ಬೇಕಾದರೂ ಮಾಡಬಹುದೇ?” ಎಂಬ ಪ್ರಶ್ನೆ ಅಭಿಷೇಕ್ ತಂದೆ ಬಸ್ತಿ ಕುಮಾರ್ ಅವರದ್ದು.

ಇವತ್ತು ಏನೇ ಹೇಳಿದರು, ಕಾಡು ಪ್ರಕಾಶ್ ತನ್ನ ಮಗಳ ಕಾರಣಕ್ಕೆ ತೆಗೆದುಕೊಂಡ ಒಂದು ನಿರ್ಧಾರ ಒಂದಿಡೀ ಕುಟುಂಬವನ್ನೇ ಜರ್ಜರಿತವಾಗಿಸಿದೆ. ಕಳೆದ ಒಂದು ವರ್ಷದಲ್ಲಿ ಅಭಿಷೇಕ್‌ ಕುಟುಂಬ ದಾಟಿಕೊಂಡ ಬಂದ ಸಂಕಷ್ಟಗಳು, ಅನುಭವಿಸಿದ ಯಾತನೆ, ಸಾಮಾಜಿಕ ಅವಹೇಳನಗಳ ಪಟ್ಟಿ ದೊಡ್ಡದಿದೆ. ಇದರ ಜತೆಗೆ, ರಾಜ್ಯದಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯಗಳದ್ದೇ ಒಂದು ದೊಡ್ಡ ಕತೆ ಇದೆ. ಇವೆಲ್ಲವನ್ನೂ ‘ಸಮಾಚಾರ’ ಸರಣಿ ರೂಪದಲ್ಲಿ ನಿಮ್ಮ ಮುಂದಿಡಲಿದೆ.

(ಮುಂದುವರಿಯುವುದು)