samachara
www.samachara.com
ELECTION TOUR: ಬಣರಾಜಕೀಯದಲ್ಲಿ ಉತ್ತರ ಹುಡುಕುತ್ತಿರುವ ಉತ್ತರ ಕನ್ನಡ
ಎಲೆಕ್ಷನ್ ಟೂರ್ 2018

ELECTION TOUR: ಬಣರಾಜಕೀಯದಲ್ಲಿ ಉತ್ತರ ಹುಡುಕುತ್ತಿರುವ ಉತ್ತರ ಕನ್ನಡ

ಉತ್ತರಕನ್ನಡ ಜಿಲ್ಲೆ 6 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಬೌಗೋಳಿಕವಾಗಿ ಕರಾವಳಿ, ಮಲೆನಾಡು ಮತ್ತು ಅರೆಮಲೆನಾಡನ್ನು ಹೊಂದಿದೆ. ಇಲ್ಲಿನ ವಿವಿಧ ಭಾಗಗಳ ಬೇಡಿಕೆಗಳೇ ಬೇರೆ ಬೇರೆಯಾಗಿವೆ.

ರಮೇಶ್‌ ಹಳೇಕಾನಗೋಡು

ರಮೇಶ್‌ ಹಳೇಕಾನಗೋಡು

ಉತ್ತರಕನ್ನಡ ಜಿಲ್ಲೆ ವೈವಿಧ್ಯಮಯ ಪರಿಸರ ಮತ್ತು ಸಂಸ್ಕೃತಿಗಳನ್ನು ಹೊಂದಿರುವ ಮಲೆನಾಡಿನ ಹಸಿರು ಜಿಲ್ಲೆಗಳಲ್ಲೊಂದು. ಇಲ್ಲಿನ ರಾಜಕೀಯ ಲೆಕ್ಕಾಚಾರವೂ ಅಷ್ಟೇ ವೈವಿಧ್ಯತೆ ಪಡೆದಿದೆ. ಕಾಲೆಳೆಯುವ ಬಣ ರಾಜಕೀಯವಂತೂ ಗ್ರಾಮ ಗ್ರಾಮಗಳಲ್ಲೂ ಬೇರೂರುರಿದೆ. ಚುನಾವಣೆ ಸಮೀಪಿಸಿದೆ, ಬಿಸಿಯೇರುತ್ತಿದೆ.

ಉತ್ತರಕನ್ನಡ ಜಿಲ್ಲೆ 6 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಬೌಗೋಳಿಕವಾಗಿ ಕರಾವಳಿ, ಮಲೆನಾಡು ಮತ್ತು ಅರೆಮಲೆನಾಡನ್ನು ಹೊಂದಿದೆ. ಇಲ್ಲಿನ ವಿವಿಧ ಭಾಗಗಳ ಬೇಡಿಕೆಗಳೇ ಬೇರೆ ಬೇರೆಯಾಗಿವೆ.

ಅಂಕೋಲ-ಕಾರವಾರ

ಕಾರವಾರ ವಿಧಾನಸಭಾ ಕ್ಷೇತ್ರವು ಅಂಕೋಲ ಮತ್ತು ಕಾರವಾರ ತಾಲೂಕುಗಳ ವ್ಯಾಪ್ತಿ ಹೊಂದಿದೆ. ಗುಡ್ಡಗಾಡಿನ ಸೆರಗು ಮತ್ತು ಕರಾವಳಿಯನ್ನು ಹೊಂದಿರುವ ಈ ಕ್ಷೇತ್ರ ಹಲವಾರು ರಾಷ್ಟ್ರೀಯ ಯೋಜನೆಗಳಿಗೆ ತನ್ನನ್ನು ತೆರೆದುಕೊಂಡಿದೆ.

ಕಳೆದಬಾರಿ ಬಿಜೆಪಿ. ಮತ್ತು ಯಡಿಯೂರಪ್ಪರ ಕೆಜೆಪಿಗಳ ಪೈಪೋಟಿಯಲ್ಲಿ ಮತಗಳು ಹಂಚಿಹೋಗಿ ಕಾಂಗ್ರೆಸ್‌ನ ಸತೀಶ್ ಸೈಲ್ ಆಯ್ಕೆಗೊಂಡಿದ್ದರು. ಈ ಬಾರಿ ಬಿಜೆಪಿ. ಟಿಕೆಟನ್ನು ಕೇಂದ್ರ ಮಂತ್ರಿ ಹಾಗೂ ಸ್ಥಳೀಯ ಸಂಸದ ಅನಂತಕುಮಾರ ಹೆಗಡೆ ಮುತುವರ್ಜಿ ವಹಿಸಿ ರೂಪಾಲಿ ಸಂತೋಷ ನಾಯ್ಕರಿಗೆ ಕೊಡಿಸಿದ್ದಲ್ಲದೇ, ಖುದ್ದು ತಾವೇ ಪ್ರಚಾರವನ್ನೂ ಮಾಡುತ್ತಿದ್ದಾರೆ. ಇದು ನೂರಾರು ಅಂಬಿಗ ಸಮುದಾಯದವರು ಪಕ್ಷಬಿಡುವಂತೆ ಮಾಡಿದೆ.

ಹಿಂದೆ ಬಿಜೆಪಿಯಿಂದ ಆಯ್ಕೆಯಾಗಿ ಮಂತ್ರಿಯೂ ಆಗಿ, ನಂತರದ ಚುನಾವಣೆಯಲ್ಲಿ ಸೋತು ಮರೆಯಾಗಿದ್ದ ಆನಂದ ಅಸ್ನೋಟಿಕರ ದಿಢೀರನೆ ಜೆಡಿಎಸ್ ಸೇರಿ ಪುನರಾಯ್ಕೆ ಬಯಸಿದ್ದಾರೆ. ಹಾಲಿ ಶಾಸಕ ಕಾಂಗ್ರೆಸ್‌ನ ಸತೀಶ್ ಕೃಷ್ಣ ಸೈಲ್ ಉತ್ತಮ ಕೆಲಸದಿಂದ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದಾರೆ. ಇನ್ನಳಿದಂತೆ ಮಾಧವ ನಾಯ್ಕ, ಕುಂದಾಬಾಯಿ ಪುರಳೇಕರ, ಕಿಶೋರ ಸಾವಂತ್ ಕಣದಲ್ಲಿದ್ದಾರೆ. ಆದರೆ ಇಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಇದೆ.

ಕುಮಟ:

ಈಗಿದ್ದ ಕಾಂಗ್ರೆಸ್ ಶಾಸಕರು ನಮ್ಮ ಊರಲ್ಲಿ ಏನೇನೂ ಅಭಿವೃದ್ಧಿ ಮಾಡಿಲ್ಲ ಆದ್ದರಿಂದ ಅವರು ಪ್ರಚಾರಕ್ಕೆ ಬಂದರೆ ನಾವೂ ಮಾತಾಡ್ಸುದಿಲ್ಲ. 
ಶಿವಪ್ಪ ಕೃಷ್ಣ ಗೌಡ, ಕುಮಟ

ಕುಮಟ ಕ್ಷೇತ್ರವು ಕುಮಟಾ ಮತ್ತು ಹೊನ್ನಾವರ ತಾಲೂಕಿನ ಕೆಲವು ಭಾಗಗಳನ್ನು ಹೊಂದಿದೆ. ಈ ಹಿಂದೆ ಜೆಡಿಎಸ್ ನಿಂದ ಆಯ್ಕೆಯಾಗಿದ್ದ ದಿನಕರ ಕೇಶವ ಶೆಟ್ಟಿ ರಾಜಕೀಯ ನೇಪಥ್ಯಕ್ಕೆ ಸರಿಯುತ್ತಿದ್ದರೂ, ಅನಂತ್ ಕುಮಾರ್ ಹೆಗಡೆ ಕೃಪೆಯಿಂದ ಬಿಜೆಪಿ ಟಿಕೆಟ್ ಗಿಟ್ಟಿಸಿದ್ದಾರೆ. ಇದು ಮೂಲ ಬಿಜೆಪಿಗರಲ್ಲಿ ಆಕ್ರೋಶ ಉಂಟುಮಾಡಿದೆ.

ಕುಮಟಾದಲ್ಲಿ ಬಿ.ಜೆ.ಪಿಯನ್ನು ತಳದಿಂದ ಕಟ್ಟಿ ಮುಂಚೂಣಿಗೆ ತರಲು ಶ್ರಮಿಸಿದ್ದ ಸೂರಜ ನಾಯ್ಕ ಸೋನಿ ಕೊನೆಯ ಕ್ಷಣದಲ್ಲಿ ಪಕ್ಷದ ಟಿಕೆಟ್ ತಪ್ಪಿ ದುರಂತ ನಾಯಕರಾಗಿದ್ದಾರೆ. ಅವರೀಗ ಪಕ್ಷೇತರನಾಗಿ ಸ್ಪರ್ಧಿಸಿದ್ದಾರೆ.

ಜಿಲ್ಲೆಯ ಇನ್ನೂ ಕೆಲವುಕಡೆ ಇದೇ ಪರಿಸ್ಥಿತಿ. ಇದು ಬಿಜೆಪಿಗೆ ಹೊಡೆತ ಕೊಡುತ್ತದೆ ಎಂಬುದನ್ನು ಪರಿಗಣಿಸಿದ ವರಿಷ್ಠರು, ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದ ಸಂಸದ ಅನಂತಕುಮಾರ ಹೆಗಡೆಯನ್ನು 26ನೇ ಸ್ಥಾನಕ್ಕೆ ತಳ್ಳಿದ್ದಾರೆ ಎಂಬ ಗುಸುಗುಸು ಕ್ಷೇತ್ರದಲ್ಲಿದೆ.

ಈ ಮೊದಲು ಸಿಂಪತಿ ಅಲೆಯಲ್ಲಿ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ಶಾರದಾ ಮೋಹನ ಶೆಟ್ಟಿ, ಉತ್ತಮವಾಗಿ ಕೆಲಸ ಮಾಡಿದ್ದರು. ಪರೇಶ ಮೇಸ್ತ ಸಾವು ಮುಂತಾದ ಸನ್ನಿವೇಶಗಳಲ್ಲಿ ಸರಿಯಾಗಿ ಸ್ಪಂದಿಸದಿರುವುದು ಹಿಂದೂ ಮತದಾರರು ಅವರ ವಿರುದ್ಧ ಒಗ್ಗಟ್ಟಿನ ನಿಲುವು ತಳೆಯುವಂತೆ ಮಾಡಿದೆ. ಜೆಡಿಎಸ್‌ನ ಪ್ರದೀಪ ದಯಾನಂದ ನಾಯ್ಕ ಗೋಕರ್ಣದಿಂದ ಮಿರ್ಜಾನದವರೆಗೂ ಜನಪ್ರಿಯತೆ ಹೊಂದಿದ್ದರೂ ಗೆಲುವು ಸಾಧಿಸುವಷ್ಟು ಜನಬಲವಿಲ್ಲ.

ಕ್ಷೇತ್ರದ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಉದ್ಯಮಿ ಯಶೋಧರ ನಾಯ್ಕ ಸ್ವತಂತ್ರವಾಗಿ ಸ್ಪರ್ಧಿಸಿದ್ದಾರೆ. ಇವರ ಸಂಸ್ಥೆಯಿಂದ ಅಂದಾಜು 40, 000 ಕುಟುಂಬಗಳಿಗೆ ಆರ್ಥಿಕ ಅನುಕೂಲವಾಗಿದೆ ಎನ್ನಲಾಗಿದೆ.

ಇನ್ನಳಿದಂತೆ ನಾಗರಾಜ ನಾಯಕ, ನಾಗರಾಜ ಶೇಟ್, ಮೋಹನ ಪಟಗಾರ, ಕೃಷ್ಣ ಗೌಡ, ಗಣೇಶ ಗೌಡ, ಪ್ರಶಾಂತ ನಾಯ್ಕ, ಸುಮನಾ ಹೆಗಡೆ ಇವರುಗಳು ಕಣದಲ್ಲಿದ್ದರೂ ನೇರ ಹಣಾಹಣಿ ಬಿಜೆಪಿಯ ದಿನಕರ ಶೆಟ್ಟಿ ಮತ್ತು ಯಶೋಧರ ನಾಯ್ಕ ಮಧ್ಯೆ ಎಂಬುದು ಜನಾಭಿಪ್ರಾಯ.

ಕುಮುಟಾ ಹೆದ್ದಾರಿ ನವೀಕರಣ. 
ಕುಮುಟಾ ಹೆದ್ದಾರಿ ನವೀಕರಣ. 

ಭಟ್ಕಳ:

ಭಟ್ಕಳ ಕ್ಷೇತ್ರವು ಭಟ್ಕಳ ಮತ್ತು ಹೊನ್ನಾವರ ತಾಲೂಕಿನ ಕೆಲವು ಭಾಗಗಳನ್ನು ಹೊಂದಿದೆ. ಹಾಲಿ ಶಾಸಕ ಮಂಕಾಳು ವೈದ್ಯ ಪಕ್ಷೇತರರಾಗಿ ಆಯ್ಕೆಯಾಗಿ ನಂತರ ಕಾಂಗ್ರೆಸ್ ಬೆಂಬಲಿಸಿದ್ದರು. ಈಗ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿ ಕಣಕ್ಕೆ ಧುಮುಕಿದ್ದಾರೆ. ಹಲವಾರು ಕಾಮಗಾರಿಗಳನ್ನು ತಂದು ಉತ್ತಮ ಅಭಿವೃದ್ಧಿ ಮಾಡಿದ್ದಾರೆ.

ಆದರೆ ಪರೇಶ ಮೇಸ್ತ ಮತ್ತು ಮಾಗೋಡು ಪ್ರಕರಣ ನಿರ್ವಹಣೆಯಲ್ಲಿ ಎಡವಿದ್ದಾರೆನ್ನಲಾದ ಮಂಕಾಳು ವೈದ್ಯಗೆ, ಹಿಂದೂ ಮತದಾರ ಮಣೆಹಾಕುತ್ತಿಲ್ಲ. ಜತೆಗೆ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಮತದಾರ ತಿರಸ್ಕರಿಸಿದ್ದರೂ ವೈದ್ಯರು ಆರಿಸಿಬಂದ ಮೇಲೆ ಕಾಂಗ್ರೆಸ್ ಪಾಳೆಯ ಹೊಕ್ಕಿದ್ದು ಮತದಾರರಲ್ಲಿ ಬೇಸರ ಮೂಡಿಸಿದೆ.

ಬಿಜೆಪಿ ಟಿಕೆಟ್ ಪಡೆದ 35ರ ಸುನೀಲ ನಾಯ್ಕರು ಶ್ರೀಮಂತರು. ಸ್ವತಃ ತಾವೇ ವಾಲಿಬಾಲ್ ಆಟಗಾರರಾಗಿದ್ದು, ಸಂಘ-ಸಂಸ್ಥೆಗಳು ಮತ್ತು ಜನರ ಜತೆ ಉತ್ತಮವಾಗಿ ಬೆರೆಯುತ್ತಾರೆಂಬುದು ಜನಾಭಿಪ್ರಾಯ.

ಕ್ಷೇತ್ರದ ನಗರೆ, ಹೊನ್ನಾವರದ ಸ್ವಲ್ಪ ಭಾಗ ಬಿಟ್ಟರೆ ಇನ್ನುಳಿದ ಕಡೆ ಬಿಜೆಪಿ ಉತ್ತಮವಾಗಿದೆ. ಕಣದಲ್ಲಿರುವ ಇತರರೆಂದರೆ ಸಾಬ್ ಗಫೂರ್ ಸಂತೆಗುಳಿ, ಎನ್.ಇ.ಪಿ., ಅಬ್ದುರ್ರೆಹಮಾನ್, ಪ್ರಕಾಶ ಪಿಂಟೋ ಮತ್ತು ರಾಜೇಶ ನಾಯ್ಕ ಪಕ್ಷೇತರರಾಗಿದ್ದಾರೆ.

ಶಿರಸಿ-ಸಿದ್ದಾಪುರ:

ಬಿಜೆಪಿಯಿಂದ ಹಾಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ 1994ರಿಂದಲೂ ನಿರಂತರವಾಗಿ ಒಂದಿಲ್ಲೊಂದು ಕ್ಷೇತ್ರದಿಂದ ಆಯ್ಕೆಯಾಗುತ್ತಲೇ ಬಂದಿದ್ದಾರೆ. ಆದರೂ ಕ್ಷೆತ್ರದಲ್ಲಿ ಗುರುತಿಸುವಂಥ ಅಭಿವೃದ್ಧಿಯಾಗದಿರುವುದನ್ನು ಮತದಾರ ಬೇಸರದಿಂದ ನೆನೆಯುತ್ತಾನೆ.

ಜೆಡಿಸ್‌ನಿಂದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕುಟುಂಬದ ಕುಡಿ ಡಾ. ಶಶಿಭೂಷಣ ಹೆಗಡೆಗೆ ಟಿಕೆಟ್ ಸಿಕ್ಕದೆ. ಶಿರಸಿಯ ರಾಮಕೃಷ್ಣ ಹೆಗಡೆ ಪ್ರತಿಮೆ ಮಾಲಾರ್ಪಣೆ ಮಾಡಿದ ಕಾಗೇರಿ, ಮುತ್ಸದ್ಧಿ ರಾಮಕೃಷ್ಣ ಹೆಗಡೆಗೆ ಅನ್ಯಾಯ ಮಾಡಿದ ಪಕ್ಷದಿಂದಲೇ ಟಿಕೆಟ್ ಪಡೆದು ಶಶಿಭೂಷಣ ಸ್ಪರ್ಧಿಸಿರುವುದು ಖೇದಕರ ಎಂಬ ಸಂದೇಶ ನೀಡಿದ್ದು ಕ್ಷೇತ್ರದೆಲ್ಲೆಡೆ ಚರ್ಚಿತವಾಗುತ್ತಿದೆ. ಎಂದೂ ಇಲ್ಲದಿದ್ದ ರಾಮಕೃಷ್ಣ ಹೆಗಡೆ ಪ್ರೇಮ ಇಂದೇಕೆ? ಎಂಬ ಪ್ರಶ್ನೆಯೂ ಎದ್ದಿದೆ.

ಸೌಮ್ಯ ಸ್ವಭಾವದ ಶಶಿಭೂಷಣ ಹೆಗಡೆ ಕ್ಷೇತ್ರದಲ್ಲೆಲ್ಲ ಒಂದು ಸುತ್ತು ಬೇಟಿ ನೀಡಿದ್ದಾರೆ. ಆದರೆ ಮೊದಲ ಸುತ್ತಿನಲ್ಲಿ ಕೆಲವು ಪ್ರಮುಖರ ಮನೆಗಳಿಗೆ ಮಾತ್ರ ಭೇಟಿ ನೀಡಿದ್ದು ಇತರರನ್ನು ಕೆರಳಿಸಿದೆ.

ಅಂತಿಮವಾಗಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿದ ಭೀಮಣ್ಣ ನಾಯ್ಕ ಕ್ಷೇತ್ರದ ಪ್ರಭಲ ಸಮುದಾಯಕ್ಕೆ ಸೇರಿದವರು. ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಗರಡಿಯಲ್ಲಿ ಬೆಳೆದವರು. ಆದರೆ ಕಾಂಗ್ರೆಸ್ ಬಣ ರಾಜಕೀಯ ಜನರನ್ನು ಬೇಸರಗೊಳ್ಳುವಂತೆ ಮಾಡಿದೆ.

ಇನ್ನುಳಿದಂತೆ ಎಂಇಪಿಯಿಂದ ಅಬ್ದುಲ್ ರಜಾಕ್, ಶಿವಸೇನೆಯಿಂದ ಅಣ್ಣಪ್ಪ ಮಡಿವಾಳ ಮತ್ತು ಪಕ್ಷೇತರರಾಗಿ ರಮಾನಂದ ನಾಯ್ಕ ಕಣದಲ್ಲಿದ್ದಾರೆ. ಭೀಮಣ್ಣ ಪಾಲಾಗಬಹುದಾದ ನಾಮಧಾರಿ ಸಮುದಾಯದ ಮತಗಳನ್ನು ಛಿದ್ರಗೊಳಿಸಲು ಜೆಡಿಎಸ್ ರಮಾನಂದ ನಾಯ್ಕರನ್ನು ಮಂದಿಟ್ಟು ದಾಳ ಉರುಳಿಸಿದೆ.

ಆದರೆ ಬಿಜೆಪಿಯಲ್ಲಿ ಪ್ರಮುಖರಾಗಿದ್ದ ಕೆ. ಜಿ. ನಾಯ್ಕ ಹಸವಂತೆ ಭೀಮಣ್ಣರನ್ನು ಬೆಂಬಲಿಸಿ ಕಾಂಗ್ರೆಸ್ ಸೇರಿದ್ದು ಕೈ ಬಲಪಡಿಸಿದೆ ಎನ್ನುತ್ತಾರೆ ಕ್ಷೇತ್ರದ ಜನತೆ.

ELECTION TOUR: ಬಣರಾಜಕೀಯದಲ್ಲಿ ಉತ್ತರ ಹುಡುಕುತ್ತಿರುವ ಉತ್ತರ ಕನ್ನಡ

ಯಲ್ಲಾಪುರ-ಮುಂಡಗೋಡ:

ಕಾಂಗ್ರೆಸ್‍ನಿಂದ ಹಾಲಿ ಶಾಸಕ ಶಿವರಾಮ ಹೆಬ್ಬಾರ ಸ್ಪರ್ಧಿಸಿದ್ದಾರೆ. ಉತ್ತಮ ಕೆಲಸಗಳಿಂದ ಮತ್ತು ನರಂತರ ಜನಸಂಪರ್ಕದಿಂದ ಹೆಸರು ಕಾಯ್ದುಕೊಂಡಿದ್ದಾರೆ ಹೆಬ್ಬಾರ್. ಬಿಜೆಪಿಯ ವಿ. ಎಸ್. ಪಾಟೀಲ ಈ ಹಿಂದೆ ಶಾಸಕರಾಗಿಯೂ ಅನುಭವಿ ಮತ್ತು ಇಂದಿನ ಮೋದಿ ಹವಾದಲ್ಲಿ ಗೆಲ್ಲುವ ಭರವಸೆ ಹೊಂದಿದ್ದಾರೆ.

ಅಗತ್ಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಲ್ಲಿ ಹೆಬ್ಬಾರರೇ ಒಂದು ಕೈ ಮೇಲೆನ್ನುತ್ತಾರೆ ಕ್ಷೇತ್ರದ ಜನತೆ. ಹಿಂದಿನ ಚುನಾವಣೆಯಲ್ಲಿ ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ರವೀಂದ್ರ ನಾಯ್ಕ ಅತಿಕ್ರಮಣ ಹೋರಾಟಗಾರರ ಪರ ತಾವೆಂದು ಬಿಂಬಿಸಿದ್ದರೂ, ಫಲಿತಾಂಶ ಕಾಣದ ಮತದಾರ ಸೋಲಿನ ಕಹಿ ಉಣಿಸಿರುವುದು ಇನ್ನೂ ಮಾಸಿಲ್ಲ. ಜೆಡಿಎಸ್‌ ಇತ್ತೀಚೆಗೆ ಸೇರಿದ ಇದೇ ರವೀಂದ್ರ ನಾಯ್ಕರನ್ನು ಸ್ಪರ್ಧೆಗಿಳಿಸಿದ್ದು ಮೂಲ ಜೆಡಿಎಸ್ಸಿಗರನ್ನು ಕೆರಳಿಸಿದೆ. ಇದರಿಂದ ಸಿಡಿದೆದ್ದ ಮೆಹಬೂಬ ಅಲಿ ಜಮಖಂಡಿ ಪಕ್ಷೇತರರಾಗಿ ಕಣಕ್ಕಿಳಿದಿದ್ದು ಜೆಡಿಎಸ್‍ಗೆ ಮುಸ್ಲಿಮ್ ಬಲ ಕುಗ್ಗಿಸಿದೆ.

ಇನ್ನುಳಿದಂತೆ ಶಿವಸೇನೆಯ ಸಚಿನ್ ನಾಯ್ಕ, ಭಾರತೀಯ ಬಹುಜನ ಕ್ರಾಂತಿದಳದಿಂದ ನೀಲಪ್ಪ ಲಮಾಣಿ ಮತ್ತು ಇನ್ನೋರ್ವ ಪಕ್ಷೇತರ ನಾಗೇಶ ಬೋವಿ ವಡ್ಡರ ಕಣದಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಎಂದೇ ಜನರ ಅಭಿಪ್ರಾಯವಿದೆ.

ಹಳಿಯಾಳ- ಜೋಯಿಡಾ:

ಕಾಂಗ್ರೆಸ್‍ನ ಆರ್. ವಿ. ದೇಶಪಾಂಡೆ ಹಾಲಿ ಮಂತ್ರಿಗಳಾದ್ದರಿಂದ ಅವರಿಗೆ ಪ್ರತಿಷ್ಠೆಯ ಕಣವಾಗಿದೆ. ಚುನಾವಣೆಯಲ್ಲಿ ಪಳಗಿದ ಹುಲಿಯಾದರೂ ಈ ಹಿಂದೆ ಸೋಲಿನ ಕಹಿಯುಂಡ ಅನುಭವವೂ ಇದೆ.

ಈ ಮೊದಲು ದೇಶಪಾಂಡೆ ಗರಡಿಯಲ್ಲೇ ತಯಾರಾದ ಸುನೀಲ ಹೆಗಡೆ, ಬಿಜೆಪಿಯಿಂದ ಸ್ಫರ್ಧಿಸಿದ್ದಲ್ಲದೇ ಬಹಳ ಮೊದಲಿನಿಂದಲೇ ಚುನಾವಣೆ ತಯಾರಿ ನಡೆಸುತ್ತಿದ್ದಾರೆ.

ಇದಕ್ಕೆ ಸಂಸದ ಪ್ರಹ್ಲಾದ್ ಜೋಷಿ ಅಭಯವೂ ಇದೆ. ಬೂತ್ ಮಟ್ಟದಿಂದಲೇ ಕಾರ್ಯಕರ್ತರ ಪಡೆ ಆಯೋಜಿಸಿ ತಳ ಮಟ್ಟದಿಂದಲೇ ಪಕ್ಷ ಬಲವರ್ಧನೆ ಮಾಡಿದ್ದಾರೆ, ಇಂಥ ಸಂದರ್ಭಗಳಲ್ಲಿ ಖುದ್ದು ಜೋಷಿಯೇ ಬೆಂಬಲಕ್ಕೆ ನಿಂತಿದ್ದಾರೆ. ಇಂದಿನ ಎಲ್ಲ ಆಧುನಿಕ ತಂತ್ರಜ್ಞಾನಗಳನ್ನೂ ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದ್ದಾರೆ.

ಅಭಿವೃದ್ಧಿ ಯೋಜನೆಗಳಲ್ಲಿನ ಪರಿಹಾರ ವಂಚಿತರ ಧ್ವನಿಯಾಗಿ ಯಮುನಾ ಗಾಂವ್ಕರ ಸಿಪಿಐನಿಂದ ಸ್ಪರ್ಧಿಸಿದ್ದಾರೆ. ಕೆ. ಆರ್. ರಮೇಶ ಜೆಡಿಎಸ್‍ನಿಂದ ಸ್ಪರ್ಧಿಸಿ ಉತ್ತಮ ಪ್ರಚಾರದಲ್ಲಿ ತೊಡಗಿದ್ದಾರಾದರೂ ನೇರ ಹಣಾಹಣಿ ಕಾಂಗ್ರೆಸ್ ಮತ್ತು ಬಿಜೆಪಿ. ಮಧ್ಯೆ ಕಾಣಿಸುತ್ತಿದೆ.

ಇನ್ನುಳಿದಂತೆ ಬಡೇಸಾಬ ಕಕ್ಕೇರಿ ಎಐಡಬ್ಲುಎ, ಜಹಾಂಗೀರ ಬಾಬಾ ಖಾನ್, ಶಂಕರ ಫಾಕ್ರಿ, ಮತ್ತು ಟಿ.ಆರ್.ಚಂದ್ರಶೇಖರ್ ಹಾಗೂ ಇಲಿಯಾಸ್ ಕಾಟಿ ಪಕ್ಷೇತರರಾಗಿ ಕಣದಲ್ಲಿದ್ದಾರೆ.