samachara
www.samachara.com
ಪ್ರತಿಮೆಗಳ ಭಂಜನೆಗೆ ಪ್ರತಿಮೆ ಸ್ಥಾಪನೆ ಉತ್ತರ ಆಗುತ್ತಾ ಕಾಮ್ರೇಡ್ಸ್‌? 
DEBATE

ಪ್ರತಿಮೆಗಳ ಭಂಜನೆಗೆ ಪ್ರತಿಮೆ ಸ್ಥಾಪನೆ ಉತ್ತರ ಆಗುತ್ತಾ ಕಾಮ್ರೇಡ್ಸ್‌? 

ಮಂಜುನಾಥ ಎಂ. ಆನೇಕಲ್

ಮಂಜುನಾಥ ಎಂ. ಆನೇಕಲ್

ಪ್ರತಿಮಾ ಭಂಜನೆಯ ಘಟನೆಗಳು ತೀವ್ರ ಚರ್ಚೆಗೆ ಒಳಗಾದವು. ತ್ರಿಪುರಾದಲ್ಲಿ ಗೆದ್ದ ಬಿಜೆಪಿ,‌ ಲೆನಿನ್ ಪ್ರತಿಮೆಯನ್ನು ಉರುಳಿಸಿತು. ಇತ್ತ ದ್ರಾವಿಡರ ನಾಡಲ್ಲಿ ನೇರವಾಗಿ ಪೆರಿಯಾರ್ ಪ್ರತಿಮೆಯ ಮೇಲೆಯೇ ಕಲ್ಲುಗಳು ತೂರಿ ಹೋದವು. ಮತ್ತೊಂದೆಡೆ ಅಂಬೇಡ್ಕರ್ ಪ್ರತಿಮೆಯನ್ನು ಉರುಳಿಸಲಾಯಿತು. ವರ್ಗ, ಜಾತಿ ಮತ್ತು ಅಂಧಾನುಕರಣೆಗಳೂ ಮೂರು ಮೇಳೈಸಿ ರೂಪುಗೊಂಡಿರುವ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ, ಮೂರ್ತಿ ಭಂಜನೆ ಪ್ರಕ್ರಿಯೆ ಮತ್ತು ಅದರ ಸುತ್ತ ನಡೆದ/ ನಡೆಯುತ್ತಿರುವ ಈ ಚರ್ಚೆಯೇ ದುರಾದೃಷ್ಟಕರ.

ಗೆದ್ದವರು ಬರೆಯುವ ಚರಿತ್ರೆಯ ಫಲವೇ ಈ ಪ್ರತಿಮಾ ಸೃಷ್ಟಿ ಮತ್ತು ಪ್ರತಿಮಾ ನಾಶಗಳ‌ ಅಭಿವ್ಯಕ್ತಿ‌‌. ಪ್ರಜಾಪ್ರಭುತ್ವದಲ್ಲೂ ಇದು ಮುಂದುವರೆಯುತ್ತಿದೆ ಎಂಬುದೇ ಹಾಸ್ಯಾಸ್ಪದ. ಹಸಿವಿನಿಂದ‌ ನರಳುವವರ ಪ್ರಮಾಣದಲ್ಲಿ ಇಥಿಯೋಪಿಯಕ್ಕಿಂತಲೂ ಹೆಚ್ಚಿರುವ ಈ ದೇಶದಲ್ಲಿ, ಮೂರು ಸಾವಿರ ಕೋಟಿ ಖರ್ಚಿನ ಪಟೇಲ್ ಪ್ರತಿಮೆ, ಎರಡುವರೆ ಸಾವಿರ ಕೋಟಿ ಖರ್ಚಿನ ಶಿವಾಜಿ ಪ್ರತಿಮೆ, ಸಾವಿರಾರು ಕೋಟಿಗಳ ಆನೆಯ ಪ್ರತಿಮೆಗಳನ್ನು ಜನರ ದುಡ್ಡಲ್ಲಿ ಪ್ರಭುತ್ವಗಳೇ‌ ನಿರ್ಮಿಸುವುದು ಯಾರನ್ನು ಮೆಚ್ಚಿಸಲು ಅಂದುಕೊಂಡಿದ್ದೀರಾ?

ಅಂಬೇಡ್ಕರ್ ಭಾರತದ ಎಲ್ಲ ಬಗೆಯ ಅಸಮಾನತೆಯನ್ನು ಬೋಧಿಸುವ ಮನುಸ್ಮೃತಿಯನ್ನು ಪ್ರಜ್ಞಾವಂತ ಬ್ರಾಹ್ಮಣನ ಕೈಯಿಂದಲೇ‌ ಸುಟ್ಟು, ವರ್ತಮಾನಕ್ಕೆ ಮುಖಾಮುಖಿಯಾದರು. ರಾಜಸ್ಥಾನದ ಬಿಜೆಪಿ ಸರಕಾರ ಅಲ್ಲಿನ ಉಚ್ಚನ್ಯಾಯಲಯದ ಮುಂದೆ ಅದೇ ಮನುವಿನ ಪ್ರತಿಮೆಯನ್ನು ಈಗ ನಿಲ್ಲಿಸಿದೆ.‌ ಭಾರತದ ಸಂವಿಧಾನದ ಘನತೆಯನ್ನು ಮನುಸ್ಮೃತಿಯ ಅಮಾನವೀಯತೆಯನ್ನು ಜೊತೆಯಲ್ಲಿಟ್ಟು ಊಹಿಸಿಕೊಳ್ಳಲು ಪ್ರತಿಮಾ ರಾಜಕೀಯ ಮುಂದಾಗಿದೆ. ಇದೇ ಪ್ರಜಾಪ್ರಭುತ್ವದ ಸೋಲು. 
ಪ್ರತಿಮೆಗಳ ಭಂಜನೆಗೆ ಪ್ರತಿಮೆ ಸ್ಥಾಪನೆ ಉತ್ತರ ಆಗುತ್ತಾ ಕಾಮ್ರೇಡ್ಸ್‌? 

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎನ್ನುವುದು ಬಸವಣ್ಣನಾದಿಯಾಗಿ ಎಲ್ಲ ವಿವೇಕವಂತರ‌ ತಿಳಿವಾಗಿದೆ. ಇದೇ‌ ವಿವೇಕವು 'ತಳಸಂಸ್ಕೃತಿ ಪ್ರಜ್ಞೆ'ಯ ಹೋರಾಟದ ಅಸ್ತ್ರವೂ ಕೂಡ. ಆದರೆ ಇಂತಹ ಪ್ರಜ್ಞಾವಂತರ ತಿಳಿವನ್ನೆ ತಮ್ಮ ರಾಜಕೀಯ ಸಿದ್ಧಾಂತಗಳನ್ನಾಗಿಸಿ ಕೊಂಡವರೂ ಕೂಡ ಸ್ಥಾವರಗಳನ್ನು ಕಟ್ಟುತ್ತಲೆ ಬರುತ್ತಿರುವುದು ಏನನ್ನು ಸೂಚಿಸಬಹುದು? ಉತ್ತರಪ್ರದೇಶದಲ್ಲಿ ಮಾಯವತಿ ಕೋಟಿಗಳ ಲೆಕ್ಕದಲ್ಲಿ ಖರ್ಚು ಮಾಡಿ ಅಂಬೇಡ್ಕರ್‌ ವಿವೇಕವನ್ನು ಪ್ರತಿಮಾ ಪ್ರೇಮದಲ್ಲಿಯೆ ಸ್ಥಾವರಿಕರಿಸಿಕೊಂಡದ್ದು ಇದಕ್ಕೆ ದೊಡ್ಡ ಉದಾಹರಣೆ.

ಈಗ ಲೆನಿನ್ ಪ್ರತಿಮೆಯ ಮೇಲಿನ ದಾಳಿಯ ನಂತರ ಕಾಂಮ್ರೆಡ್‌ಗಳು ಪ್ರತಿಕ್ರಿಯೆಗಳಲ್ಲೂ ಸ್ಥಾವರಪ್ರೇಮದ‌ ಭಾವವೇಶ ವ್ಯಕ್ತವಾಗುತ್ತಿದ್ದೆ. ಇನ್ನು ಜೀವಮಾನವಿಡಿ ಪ್ರತಿಮಾ ಭಂಜನೆಯ ಮೂಲಕವೇ ಬ್ರಾಹ್ಮಣವಾದಕ್ಕೆ ಮುಖಾಮುಖಿಯಾಗಿದ್ದ ಪೆರಿಯಾರ್‌ ಪ್ರತಿಮಾ ಭಂಜನೆಗೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳಲ್ಲೂ ಇದು ಪುನರಾವರ್ತನೆಯಾಗುತ್ತಿದೆ.‌ ತಾವು ಜೀವಮಾನವಿಡಿ‌ ವಿರೋಧಿಸಿದ್ದ ಪ್ರತಿಮಾ ರಾಜಕಾರಣಕ್ಕೆ, ತಾವೇ ಪ್ರತಿಮೆಗಳಾಗುವ ವಿರೋಧಭಾಸವನ್ನು ಕಾಣಿತ್ತಿರುವ ದಿನಗಳು ಇವು.

ಹಾಗೇ ನೋಡಿದರೇ ಭಾರತದಲ್ಲಿ ಪ್ರತಿಮೆಗಳನ್ನು ಕೆತ್ತಿ ನಿಲ್ಲಿಸಿ, ಅವನ್ನು ದೇವರನ್ನಾಗಿಸಿ ಪೂಜಿಸುವ ಮತ್ತು ದ್ವೇಷಾಭಿವ್ಯಕ್ತಿಯ ವಿಕಾರ ರೂಪಗಳನ್ನು ತೋರಿಸಿಕೊಳ್ಳಲು ಬಳಸುವ ದೊಡ್ಡ ಚರಿತ್ರೆಯೆ ಇದೆ. ಭಾರತದಲ್ಲಿ ಮೊದಲ ಬಾರಿಗೆ ಮನುಷ್ಯನೊಬ್ಬ ಪ್ರತಿಮೆಯಾಗಿ ಕೆತ್ತಲ್ಪಟ್ಟದ್ದು ಬುದ್ಧ ಮತ್ತು ಹೆಚ್ಚು ಭಂಜನೆಗೊಳಗಾದ ಪ್ರತಿಮೆಗಳೂ ಬುದ್ಧನವೇ ಎನ್ನುತ್ತದೆ ಚರಿತ್ರೆ.

ಸ್ಥಾವರಿಕೃತ ವ್ಯವಸ್ಥೆಯನ್ನು, ಬ್ರಾಹ್ಮಣ ಯಜಮಾನಿಕೆಯನ್ನು ವಿರೋಧಿಸಿದ್ದ ಬುದ್ಧ ಧಮ್ಮವನ್ನು ಸಾವಿರ ವರ್ಷಗಳ ಬೌದ್ಧಿಕ ಮತ್ತು ಭೌತಿಕ ಹಿಂಸೆಯ ಮೂಲಕ ಗೆದ್ದ ಬ್ರಾಹ್ಮಣ ಧರ್ಮದ ಮೊದಲ ಟಾರ್ಗೆಟ್ ಆಗಿದ್ದದ್ದು ಬುದ್ಧನ ಗುರುತುಗಳೇ ಆಗಿತ್ತು. ಹಾಗಾಗಿ ಹಲವು ಬುದ್ಧ ಮೂರ್ತಿಗಳನ್ನು,‌ ಅವನ ಸಂಕೇತಗಳನ್ನು‌ ನಾಶಗೊಳಿಸಿದರು. ನಾಶ ಮಾಡಲಾಗದ ಕೆಲವನ್ನು ಬ್ರಾಹ್ಮಣೀಕರಿಸಿಕೊಂಡರು. ಚರಿತ್ರೆಯೆಂದರೆ ಗೆದ್ದವರು ಬರೆಯುವ ನಿರೂಪಣೆ ಎಂಬ ಹಳೆ ಮಾತೊಂದಿದೆ. ಭಾರತದ ಮಟ್ಟಿಗೆ ಇದು ಪುನರಾವರ್ತನೆಯಾಗುತ್ತಲೇ ಇರುತ್ತದೆ.

ಸಾಮಾನ್ಯವಾಗಿ ಪ್ರತಿಮಾ ಭಂಜನೆಗೆ ಚರಿತ್ರೆಯಲ್ಲಿ ಹೆಚ್ಚು ದೂಷಣೆಗೆ ಒಳಗಾಗಿರುವುದು ಮುಸ್ಲಿಂ ಸಮುದಾಯ. ಕೆಲವು ಮುಸ್ಲಿಂ ರಾಜರು ಮೂರ್ತಿ ಭಂಜನೆ ಮತ್ತು ಲೂಟಿ ಮಾಡಿದ್ದರ ಫಲವಾಗಿ, ವರ್ತಮಾನದ ಮುಸ್ಲಿಂರನ್ನು ಹೊಣೆಗಾರನ್ನಾಗಿಸುವ 'ಚಾರಿತ್ರಿಕ ಕ್ರೌರ್ಯ ನೀತಿ’ಯನ್ನು ಭಿತ್ತುವ ಕೆಲಸ ನಡೆಯುತ್ತಿದೆ. ಆದೇ ಸಂದರ್ಭದಲ್ಲಿ ಮುಸ್ಲಿಂರಲ್ಲದ, ಇನ್ನೂ ಹಿಂದೂ ಎಂದು ಕರೆಯಿಸಿಕೊಂಡವರು ಅದೇ ಹಿಂದೂ ದೇವಾಲಯಗಳ ಮೇಲೆ ನಡೆಸಿದ ಲೂಟಿ ಮತ್ತು ಪ್ರತಿಮಾ ಭಂಜನೆಯ ಕಥೆಗಳನ್ನು ನಮ್ಮ ಓದುವ ಚರಿತ್ರೆಯಿಂದ ಮಾಯ ಮಾಡಲಾಗುತ್ತದೆ. ಹಾಗಾಗಿಯೇ ಗೆದ್ದವರು ಬರೆಯುವ ಚರಿತ್ರೆಯ ಫಲ ವರ್ತಮಾನದ ಹುಣ್ಣುಗಳು.

ಯಾರ ಪ್ರತಿಮೆಗಳು ಯಾಕಾಗಿ ನಿರ್ಮಾಣಗೊಳ್ಳುತ್ತವೇ? ಯಾಕಾಗಿ ಯಾರು ನಾಶ ಮಾಡುತ್ತಾರೆ? ಲೆನಿನ್, ಪೆರಿಯಾರ್, ಅಂಬೇಡ್ಕರ್, ಗಾಂಧಿ ಇಂತಹವರ ಪ್ರತಿಮೆಗಳನ್ನು ಧ್ವಂಸಗೈಯುವುದು ಒಂದು ಕಡೆ ನಡೆಯುತ್ತಿದೆ. ಮತ್ತೊಂದೆಡೆ ಗೂಡ್ಸೆಯಂತಹವರ, ಮನುವಿನಂತಹವರ ಪ್ರತಿಮೆಗಳು, ದೇವಾಲಯಗಳು ತಲೆ ಎತ್ತುವುದು, ಸ್ಪಷ್ಟವಾಗಿ ಫ್ಯಾಸಿಸಂನ ಅನ್ವಯದ ಆರಂಭದ ಸೂಚನೆಗಳು. ಪ್ರತಿಮೆಗಳನ್ನು ಹೊಡೆದು ನಾಶಗೈಯ್ಯುವ ಮೂಲಕ ಆ ಸಿದ್ಧಾಂತವನ್ನು, ಅದನ್ನು ಒಪ್ಪುವವರನ್ನೂ ಇಲ್ಲವಾಗಿಸುವ ಪ್ರಕ್ರಿಯೆಯ ಮುನ್ಸೂಚನೆ ಕಾಣಿಸುತ್ತಿದೆ‌‌. ಈ ಧ್ವಂಸಗೈಯ್ಯುವ ಪ್ರಕ್ರಿಯೆಯಲ್ಲಿ ಪ್ರಭುತ್ವವೇ ಪಾಲುದಾರನಾಗಿದೆ.

ಚಿತ್ರ ಸಾಂದರ್ಭಿಕ. 
ಚಿತ್ರ ಸಾಂದರ್ಭಿಕ. 

ಕೊನೆಯದಾಗಿ, ಝೆನ್ ಕಥೆಯೊಂದರ ಮೂಲಕ ಪ್ರತಿಮಾ ಭಂಜನೆಗಳ‌‌ ಮತ್ತೊಂದು ಆಯಾಮವನ್ನು ಎದುರು ನೋಡಬಹುದು ಅನ್ನಿಸುತ್ತದೆ.

ಝೆನ್ ಗುರು ತೆಂಕಾ ಒಂದು ರಾತ್ರಿ, ವಿಪರೀತ ಚಳಿ ಮತ್ತು ಮಳೆಯಿಂದಾಗಿ ತನಗೆ ಹತ್ತಿರವಿದ್ದ ಬುದ್ಧನ ದೇವಾಲಯ ಹೊಕ್ಕುತ್ತಾನೆ. ಚಳಿ ತಡೆಯಲಾಗದೆ ಅಲ್ಲೇ ಪೂಜಿಸ್ಪಡುತ್ತಿದ್ದ ಬುದ್ಧನ ಮರದ ಮೂರ್ತಿಯೊಂದನ್ನು ನೋಡಿ ಅದನ್ನೇ ಚಳಿಗೆ ಬೆಂಕಿಯಿಟ್ಟು ತನ್ನ ದೇಹ ಕಾಯಿಸಿಕೊಳ್ಳತೊಡಗುತ್ತಾನೆ. ಮುಂಜಾನೆ ಪೂಜಾರಿ ಬಂದು ನೋಡುವಾಗ ಬುದ್ಧನ ಮರದ ಮೂರ್ತಿ ಬೂದಿರಾಶಿಯಾಗಿರುತ್ತದೆ. ಅಲ್ಲೇ ಇದ್ದ ತೆಂಕನಿಗೆ ಪೂಜಾರಿ ಸಿಟ್ಟಿನಿಂದ "ನೀನು ಬುದ್ಧನ ಮೂರ್ತಿಗೆ ಬೆಂಕಿಯಿಟ್ಟು ಸುಟ್ಟಿದ್ದೀ," ಎಂದು ಅರಚುತ್ತಾನೆ.

ತೆಂಕ ಸಮಾಧಾನವಾಗಿ ಕೈಯಲ್ಲಿ ಕಡ್ಡಿಯೊಂದನ್ನಿಡಿದು ಬೂದಿರಾಶಿಯಲ್ಲಿ ಕೆದಕತೊಡಗುತ್ತಾನೆ‌‌. ಇದರಿಂದ‌ ಮತ್ತಷ್ಟು ಕೋಪಗೊಳ್ಳುವ ಪೂಜಾರಿ ಸಿಟ್ಟಿನಿಂದ "ಬೂದಿಯಲ್ಲಿ ಏನು ಹುಡುಕುತ್ತಿರುವೆ" ಎನ್ನುತ್ತಾನೆ. ಅದೇ ಸಮಾಧಾನದಲ್ಲಿ ತೆಂಕಾ "ಬುದ್ದನ ಚಿತಾಬಸ್ಮ ಎನ್ನುತ್ತಾನೆ‌." ಇದರಿಂದ ಮತ್ತಷ್ಟು ಕಸಿವಿಸಿಗೊಂಡ ಪೂಜಾರಿ "ಅದರಲ್ಲಿ ಬುದ್ಧನ‌‌ ಚಿತಾಬಸ್ಮವೆಲ್ಲಿದೆ‌, ಅದು ಮರದ‌ ಮೂರ್ತಿ‌" ಅನ್ನುತ್ತಾನೆ. "ಹಾಗಿದ್ದರೆ ಉಳಿದ ಆ ಎರಡು ಮರದ ಮೂರ್ತಿಗಳನ್ನೂ ಕೊಡು ಚಳಿಕಾಯಿಸಿಕೊಳ್ಳುತ್ತೇನೆ" ಎನ್ನುತ್ತಾನೆ ತೆಂಕಾ.

ಇದೇ ಸ್ಥಾವರ ನಾಶದ ಬಿಡುಗಡೆಯ ಹಾದಿ. ಹಲವು ಅಸಮಾನತೆಗಳ ಗರ್ಭದ ಮೇಲಿರುವ ಪೊರೆಯಂತಿರುವ ಪ್ರಜಾಪ್ರಭುತ್ವಕ್ಕೀಗ ಪರೀಕ್ಷೆಯ ಕಾಲ. ಅವರು ಸ್ಥಾವರಗಳನ್ನು ಭಂಜಿಸುತ್ತಿದ್ದಾರೆ, ಮುಂದುವರೆದು ಸಂವಿಧಾನವನ್ನು ಬಂಜಿಸ ಹೊರಡುತ್ತಿದ್ದಾರೆ. ಅನಿವಾರ್ಯವಾಗಿ ಸೃಷ್ಟಿಯಾಗಿರುವ ಈ ಚಾರಿತ್ರಿಕ ಒತ್ತಡಗಳನ್ನು ಇಂದು ಮುಖಾಮುಖಿಯಾಗಲೇ‌ಬೇಕಿದೆ. ಅದಕ್ಕೆ ಅದೇ ಹಾದಿಯನ್ನು ಬಿಟ್ಟು, ಹೊಸ ಹಾದಿಯನ್ನು ಹುಡುಕಬೇಕಿದೆ.

ಪ್ರತಿಮೆ ಭಂಜನೆಗೆ, ಮತ್ತೊಂದು ಪ್ರತಿಮೆ ಸ್ಥಾಪನೆ ಪರಿಹಾರ ಅಲ್ಲ. ಬದಲಿಗೆ ಇಲ್ಲಿನ ಸಂಕೀರ್ಣ ಜಾತಿ ವ್ಯವಸ್ಥೆ, ಅದರ ಹುಳುಕುಗಳು, ಜನರ ಹಸಿವು, ಬಡತನಗಳನ್ನೇ ಪ್ರತಿಮೆಗಳಾಗಿ ಮುಂದಿಡಬೇಕಿದೆ. ಅವುಗಳನ್ನು ಯಾರು ಬೇಕಾದರು ಒಡೆದುಹಾಕಲಿ, ಹೊಸ ಚರಿತ್ರೆ ಸೃಷ್ಟಿಸಲಿ. ಏನಂತೀರಾ?