samachara
www.samachara.com
ಗೌರಿ ಟ್ರಸ್ಟ್‌ ಬಗೆಗಿನ ಟೀಕೆಯೂ, ಆಶಯಗಳ ಬಗೆಗಿನ ಟಿಪ್ಪಣಿಗಳೂ...
DEBATE

ಗೌರಿ ಟ್ರಸ್ಟ್‌ ಬಗೆಗಿನ ಟೀಕೆಯೂ, ಆಶಯಗಳ ಬಗೆಗಿನ ಟಿಪ್ಪಣಿಗಳೂ...

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಾಗಿ ಐದು ತಿಂಗಳು ಕಳೆದಿವೆ. ಗೌರಿ ಆಶಯಗಳ ಸಾಕಾರದ ಉದ್ದೇಶವನ್ನಿಟ್ಟುಕೊಂಡು ಗೌರಿ ಟ್ರಸ್ಟ್‌ ಕೂಡಾ ಅಸ್ತಿತ್ವಕ್ಕೆ ಬಂದಿದೆ. ಗೌರಿ ಟ್ರಸ್ಟ್‌ನ ಹಣಕಾಸಿನ ಮೂಲ, ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಕೆಲ ಪ್ರಶ್ನೆಗಳು ಎದ್ದಿವೆ. ಇವು ಗೌರಿ ಟ್ರಸ್ಟ್‌ ಒಳಗಿರುವ ಕೆಲವರ ಬಗ್ಗೆ ಹಾಗೂ ಟ್ರಸ್ಟ್‌ ಸಾಗುತ್ತಿರುವ ದಾರಿಯ ಬಗ್ಗೆಯೂ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿವೆ. ಗೌರಿ ಲಂಕೇಶ್‌ ಸಹೋದ್ಯೋಗಿಯಾಗಿದ್ದ ಪತ್ರಕರ್ತ ಪಾರ್ವತೀಶ್‌ ಬಿಳಿದಾಳೆ ಫೇಸ್‌ಬುಕ್‌ನಲ್ಲಿ ಎತ್ತಿರುವ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ಕಾವನ್ನು ಹುಟ್ಟು ಹಾಕಿದೆ. 

ಟ್ರಸ್ಟ್‌ನ ಹಣಕಾಸಿನ ಪಾರದರ್ಶಕತೆ ಹಾಗೂ ಹಣದ ಮೂಲದ ಬಗ್ಗೆ ಪಾರ್ವತೀಶ್‌ ಎತ್ತಿರುವ ಪ್ರಶ್ನೆಗಳ ಬಗ್ಗೆ ಹಲವರು ಫೇಸ್‌ಬುಕ್‌ನಲ್ಲಿ ದನಿಗೂಡಿಸಿದ್ದಾರೆ. ಕೆಲವರು ಈಗಲೇ ಇಂಥ ನಿರ್ಧಾರಕ್ಕೆ ಬರುವುದು ಬೇಡ ಎಂದಿದ್ದರೆ, ಕೆಲವರು ಟ್ರಸ್ಟ್‌ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಪಾರ್ವತೀಶ್‌ ಎತ್ತಿರುವ ಪ್ರಶ್ನೆಗಳೇನು?

“ಗೌರಿ ಟ್ರಸ್ಟ್‌ನ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹಮೂರ್ತಿ, ಹೊಸ ಪತ್ರಿಕೆ ನಡೆಸಲು 1.5 ಕೋಟಿ ರೂಪಾಯಿಗಳು ಬೇಕು ಎಂದು ಭಾಷಣ ಮಾಡಿದ್ದೇ ಅಲ್ಲದೆ ಈಗ ಆ ಹಣ ಸಂಗ್ರಹಿಸಲು ನೆಪಮಾತ್ರಕ್ಕೆ ಜನರ ಬಳಿಯೂ, ನಿಜರೂಪದಲ್ಲಿ ರಾಜಕಾರಣಿಗಳ ಹತ್ತಿರವೂ ಎಡತಾಕುತ್ತಿರುವ ಸುದ್ದಿಗಳು ಹರಿದಾಡುತ್ತಿವೆ. ಇವರೊಂದಿಗೆ ಟ್ರಸ್ಟ್‌ನ ಇನ್ನೂ ಒಂದಿಬ್ಬರು ಜೊತೆಯಾಗಿದ್ದಾರೆ. ಇದು ನಿಜಕ್ಕೂ ಗಾಭರಿ ಹುಟ್ಟಿಸುವ ಬೆಳವಣಿಗೆಯಾಗಿದೆ. ಮೊದಲನೆಯದಾಗಿ ಒಂದು ವಾರಪತ್ರಿಕೆ ನಡೆಸಲು ಒಂದೂವರೆ ಕೋಟಿ ರೂಪಾಯಿಗಳು ಯಾಕೆ ಬೇಕು?” ಎಂಬ ಪ್ರಶ್ನೆ ಎತ್ತಿರುವ ಪಾರ್ವತೀಶ್‌ ಮುಂದುವರಿದು, “ರಾಜಕಾರಣಿಗಳ ನೆರವು (ಹಣ) ಕೇಳಲು ಹೋಗುತ್ತಿರುವವರು, ನಮ್ಮ ಹೊಸ ಪತ್ರಿಕೆಯು ನಿಮ್ಮ ಪರವಾಗಿಯೂ, ಬಿಜೆಪಿ ವಿರುದ್ಧ ಜನಾಭಿಪ್ರಾಯ ರೂಪಿಸುವಂತೆ ಇರುತ್ತದೆ ಎಂಬುದಾಗಿಯೂ ಚಾಕಲೇಟ್ ತೋರಿಸುತ್ತಿದ್ದಾರೆ..” ಎಂಬ ಆರೋಪ ಮಾಡಿದ್ದಾರೆ.

ಫೇಸ್‌ಬುಕ್‌ನ ಈ ಸ್ಟೇಟಸ್‌ಗೆ ಕಮೆಂಟ್‌ ಮಾಡಿರುವ ಸಾಮಾಜಿಕ ಹೋರಾಟಗಾರ ಜಿ.ಎನ್‌. ನಾಗರಾಜ್‌, “ಈ ಪರಿಸ್ಥಿತಿಯನ್ನು ಗಮನಿಸಿದ ನಂತರ ಈ ಎಲ್ಲಾ ಪ್ರಕ್ರಿಯೆಗಳಿಂದ ದೂರ ಉಳಿದಿದ್ದೇವೆ. ಮತ್ತು ಗೌರಿಯವರ ಕೊಲೆ ವಿರುದ್ಧ ನಡೆದ ಪ್ರತಿಭಟನೆಗಳು ರಾಜ್ಯದ,ದೇಶದ ಪ್ರಜಾಪ್ರಭುತ್ವಪರ ಶಕ್ತಿಗಳ ಪ್ರಜಾಪ್ರಭುತ್ವ ಪ್ರೇಮದ ಅಭಿವ್ಯಕ್ತಿ . ಆದರೆ ಅದರ ಮಾಲೀಕತ್ವವನ್ನು ಕೆಲವರು ವಹಿಸಿಕೊಂಡಿದ್ದಾರೆ. ಈ ವಿಶಾಲ ಪ್ರಜಾಪ್ರಭುತ್ವ ಧಾರೆಗಳನ್ನು ದೂರವಿರಿಸಲಾಗಿದೆ.ಇನ್ನು accountability ವಿಷಯ ಕೂಡಾ ಮುಖ್ಯ” ಎಂದಿದ್ದಾರೆ.

“ಮಾಲೀಕತ್ವ ಸ್ಥಾಪನೆಯಾದ ಖಚಿತ ಸೂಚನೆಗಳು ಕಂಡ ಕೂಡಲೆ ನಮ್ಮ ಭಾಗವಹಿಸುವಿಕೆ ನಿಲ್ಲಿಸಿದೆವು ಎಂದು ಹೇಳಿದ್ದೇನೆ. ಆದರೆ ಗೌರಿಯವರು ಮತ್ತು ಅವರ ಕೊಲೆಯ ವಿರುದ್ಧ ಪ್ರತಿಭಟಿಸಿದ ಪ್ರಜಾಪ್ರಭುತ್ವ ಪ್ರೇಮಿಗಳ ಮೇಲಿನ ಗೌರವದಿಂದ ಬಹಿರಂಗ ವೇದಿಕೆಗಳಲ್ಲಿ ಜನರ ಮುಂದಿಡುವುದಕ್ಜೆ ಹೋಗಿಲ್ಲ. ಆ ಅಭಿಪ್ರಾಯಕ್ಕೆ ನಾವು ಬಂದಿರುವುದು ಕೊಲೆಯ ನಂತರದ ಪ್ರತಿಭಟನೆಗಳ ನಂತರದ ಯಾವ ಪ್ರಕ್ರಿಯೆಯಲ್ಲಿಯೂ ಭಾಗವಹಿಸಿಲ್ಲ ಎಂಬುದರಿಂದ ಈಗಾಗಲೇ ತಿಳಿಯಬಯಸುವವರು ತಿಳಿದುಕೊಂಡಿರಬಹುದು. ಈ ನಮ್ಮ ಅಭಿಪ್ರಾಯವನ್ನು ಮತ್ತಷ್ಟು ಬಲಪಡಿಸುವ ಬೆಳವಣಿಗೆಗಳಾಗುತ್ತಿವೆಯೇ ಹೊರತು ಬದಲಾಯಿಸುವಂತಹ ಬೆಳವಣಿಗೆಗಳೇನು ನಡೆಯುತ್ತಿಲ್ಲ” ಎಂದು ನಾಗರಾಜ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬೆಳವಣಿಗೆಗಳ ಬಗ್ಗೆ ‘ಸಮಾಚಾರ’ದೊಂದಿಗೆ ಮಾತನಾಡಿದ ಗೌರಿ ಟ್ರಸ್ಟ್‌ನ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹಮೂರ್ತಿ, “ಇದೆಲ್ಲಾ ದುರುದ್ದೇಶದಿಂದ ಮಾಡಿರುವ ಆರೋಪ. ನಾವು ಕಾಂಗ್ರೆಸ್‌ನವರ ಬಳಿ ಹಣ ಕೇಳಿದ್ದೇವೆ ಎಂಬುದಕ್ಕೆ ಆಧಾರವಿದ್ದರೆ ಆರೋಪ ಮಾಡುತ್ತಿರುವವರು ಅದನ್ನು ಸಾಬೀತುಪಡಿಸಲಿ. ಗೌರಿ ಕಣ್ಣಲ್ಲಿ ಪ್ರತಿವಾರ ಕಣ್ಣೀರು ಹಾಕಿಸಿದ ವ್ಯಕ್ತಿ ಈಗ ಗೌರಿ ಹೆಸರಿನ ಟ್ರಸ್ಟ್‌ನ ಪಾರದರ್ಶಕತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಆರೋಪ ಮಾಡುತ್ತಿರುವವರ ಬಗ್ಗೆ ಹೇಳುತ್ತಾ ಹೋದರೆ ಅದು ದೊಡ್ಡದಾಗುತ್ತದೆ. ಅವರು ಫೇಸ್‌ಬುಕ್‌ನಲ್ಲಿ ಹಾಕಿರುವ ಸ್ಟೇಟಸ್‌ ದುರುದ್ದೇಶಪೂರಿತವಾದುದು” ಎಂದು ಹೇಳಿದ್ದಾರೆ.

“ಮಾರ್ಚ್‌ 8ರಂದು ‘ಗೌರಿ ಪತ್ರಿಕೆ’ ತರುವ ಯೋಜನೆ ಹಾಕಿಕೊಂಡಿದ್ದೆವು. ಅದರ ಕೆಲಸಗಳು ಇನ್ನೂ ಬಾಕಿ ಇವೆ. ಗೌರಿ ಟ್ರಸ್ಟ್‌, ಗೌರಿ ಪತ್ರಿಕೆ ಹಾಗೂ ಟ್ರಸ್ಟ್‌ ಹಾಕಿಕೊಂಡಿರುವ ಕಾರ್ಯಕ್ರಮಗಳೆಲ್ಲಾ ಸುಮಾರು 1.5 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಹೇಳಿದ್ದೆವು. ಗೌರಿ ಪತ್ರಿಕೆಗೆಂದೇ 1. 5 ಕೋಟಿ ರೂಪಾಯಿ ಅಲ್ಲ. ಈವರೆಗೆ ಟ್ರಸ್ಟ್‌ನಲ್ಲಿ 5.5 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಒಂದು ಒಳ್ಳೆಯ ಉದ್ದೇಶದ ಟ್ರಸ್ಟ್‌ ಬಗ್ಗೆ ದುರುದ್ದೇಶದಿಂದ ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ” ಎನ್ನುತ್ತಾರೆ ಅವರು.

ಈ ಮಧ್ಯೆ ಪಾರ್ವತೀಶ್‌ ತಮ್ಮ ಸ್ಟೇಟಸ್‌ನಲ್ಲಿ ಪ್ರಸ್ತಾಪಿಸಿರುವ, ಕೋಮು ಸೌಹಾರ್ದ ವೇದಿಕೆ ಹಾಗೂ ಮಾಜಿ ನಕ್ಸಲರ ವಿಷಯವನ್ನೂ ಗಮನಿಸಬೇಕಾಗುತ್ತದೆ. “ಕೋಮು ಸೌಹಾರ್ದ ವೇದಿಕೆ ಹಾಗೂ ಮಾಜಿ ನಕ್ಸಲರು ಅವಶ್ಯಕತೆಗಿಂತಾ ಹೆಚ್ಚಾಗಿ ಹಾಗೂ ಹಲವು ಸಾರಿ ಅನಗತ್ಯವಾಗಿಯೂ ಗೌರಿಯವರ ಇಮೇಜ್ ಅನ್ನು, ಪ್ರಭಾವ ಹಾಗೂ ಪತ್ರಿಕೆಯನ್ನು ತಮ್ಮ ಉದ್ದೇಶಗಳಿಗಾಗಿ ಬಳಸಿಕೊಂಡಿದ್ದು, ಇತರ ಪ್ರಗತಿಪರರಿಂದ ಗೌರಿಯವರನ್ನು ಪ್ರತ್ಯೇಕಗೊಳಿಸಿದಂತಾಗಿತ್ತು. ‘ಇದೆಲ್ಲಾ ಒಂದು ಮಿತಿಯಲ್ಲಿರಲಿ’ ಎಂದು ನಾನು ಹಲವು ಬಾರಿ ಎಚ್ಚರಿಸಿದ್ದನ್ನು ಗ್ರಹಿಸುವ ತಾಳ್ಮೆ ಇಬ್ಬರಲ್ಲೂ ಇರಲಿಲ್ಲ” ಎಂದು ಪಾರ್ವತೀಶ್‌ ಬರೆದುಕೊಂಡಿದ್ದಾರೆ.

2005ರ ನಂತರದ ಕರ್ನಾಟಕದ ನಕ್ಸಲ್‌ ಬೆಳವಣಿಗೆಗಳ ಬಗ್ಗೆ ಪಾರ್ವತೀಶ್‌ ಬರಹ ಗಮನ ಸೆಳೆಯುತ್ತದೆ. ಶಸ್ತ್ರಾಸ್ತ್ರ ಹೋರಾಟ ಹಾಗೂ ಪ್ರಜಾತಾಂತ್ರಿಕ ಹೋರಾಟದ ವಿಷಯವಾಗಿ ಮಲೆನಾಡು ಭಾಗದ ನಕ್ಸಲ್‌ ಸಂಘಟನೆಯಲ್ಲಿ ಸೈದ್ಧಾಂತಿಕ ಬಿರುಕು ಕಾಣಿಸಿಕೊಂಡು ನಕ್ಸಲ್‌ ಸಂಘಟನೆ ಎರಡು ಹೋಳಾಗಿದ್ದನ್ನು ಪಾರ್ವತೀಶ್‌ ಮಾತುಗಳು ನೆನಪಿಸುತ್ತವೆ. ಶಸ್ತ್ರಾಸ್ತ್ರ ಹೋರಾಟ ಕೈಬಿಟ್ಟು ನೂರ್‌ ಶ್ರೀಧರ್‌, ಸಿರಿಮನೆ ನಾಗರಾಜ್‌ ಮೊದಲಾದವರು ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳಲು ಗೌರಿ ಲಂಕೇಶ್‌ ಪ್ರಯತ್ನ ಮುಖ್ಯವಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಗೌರಿ ಲಂಕೇಶ್‌ ಸರಕಾರದೊಂದಿಗೆ ಮಾತುಕತೆ ನಡೆಸಿ ಈ ನಕ್ಸಲ್‌ ಹೋರಾಟಗಾರರನ್ನು ಮುಖ್ಯವಾಹಿನಿಗೆ ಕರೆತರಲು ಶ್ರಮಿಸಿದ್ದರು.

ಎಡವಟ್ಟಾಗಿದ್ದೆಲ್ಲಿ?

2017ರ ಸೆಪ್ಟೆಂಬರ್‌ 5ರಂದು ಗೌರಿ ಹತ್ಯೆಯಾಯಿತು. ಗೌರಿ ಮೃತದೇಹದ ಅಂತ್ಯಕ್ರಿಯೆಗೂ ಮುನ್ನವೇ ಅಸ್ತಿತ್ವಕ್ಕೆ ಬಂದ ‘ಗೌರಿ ಹತ್ಯೆ ವಿರೋಧಿ ವೇದಿಕೆ’ ಗೌರಿ ಹತ್ಯೆ ತನಿಖೆಯನ್ನು ಸಿಬಿಐ ಬದಲಿಗೆ ಎಸ್‌ಐಟಿ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿತ್ತು. ವೇದಿಕೆಯು ಈ ಅವಸರ ಪ್ರಕಟಿಸಿದ್ದೇಕೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸರ್ಕಾರದೊಳಗಿರುವವರೇ ಈ ವೇದಿಕೆಯಲ್ಲಿದ್ದುಕೊಂಡು ಸರ್ಕಾರದ ಮೇಲೆ ಒತ್ತಡ ತರುವ ಮಾತನ್ನಾಡಿದ್ದು, ‘ಹಾವೂ ಸಾಯಬಾರದು ಕೋಲೂ ಮುರಿಯಬಾರದು’ ಎಂಬಂತಾಗಿತ್ತು.

ಇದೆಲ್ಲದರ ಮಧ್ಯೆ ಗೌರಿ ಹಂತಕರನ್ನು ಬಂಧಿಸಲು ಇನ್ನೂ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಗೌರಿ ಹಂತಕರ ಬಂಧನದ ವಿಚಾರವಾಗಿ ಗೃಹ ಸಚಿವರು ಹಾಗೂ ಗೌರಿ ಆಪ್ತರು ಹಿಂದಿನಿಂದಲೂ ಕಾಗಕ್ಕಗುಬ್ಬಕ್ಕನ ಕಥೆಯನ್ನೇ ಹೇಳುತ್ತಾ ಬಂದಿದ್ದಾರೆ. ಗೌರಿ ಹಂತಕರನ್ನು ಬಂಧಿಸುವ ಹೋರಾಟದ ಬಗ್ಗೆ ಸದ್ಯ ಮೌನ ವಹಿಸಿರುವ ಗೌರಿ ಆಪ್ತರು ಟ್ರಸ್ಟ್‌ನ ಪಾರದರ್ಶಕತೆಯ ಬಗ್ಗೆಯೂ ಮೌನ ಮುಂದುವರಿಸುತ್ತಾರೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಗೌರಿ ಹಂತಕರ ಬಂಧನದ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರವುದನ್ನು ಸಂಪೂರ್ಣವಾಗಿ ಮರೆತಂತೆ ಭಾಸವಾಗುತ್ತಿರುವ ಸಮಯದಲ್ಲಿ, ಟ್ರಸ್ಟ್‌ ರಚಿಸಿಕೊಂಡು ಗೌರಿ ಆಶಯಗಳನ್ನು ಈಡೇರಿಸುತ್ತೇವೆ ಎಂದು ಹೊರಟಿದ್ದು ಸಹಜ ಪ್ರಶ್ನೆಗಳನ್ನು ಹುಟ್ಟುಹಾಕಿರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ, ಗೌರಿ ಸ್ಮರಣ ಟ್ರಸ್ಟ್ ಮುಂದಿನ ದಿನಗಳ ಕೆಲಸ ಮಾತ್ರವೇ ಹಲವು ಪ್ರಶ್ನೆಗಳಿಗೆ ಉತ್ತರ ನೀಡಬಲ್ಲದು.