samachara
www.samachara.com
ದೇಶ ವರ್ಸಸ್‌ ಮೋದಿ-ಶಾ: ಬಿಜೆಪಿ ಜೋಡೆತ್ತಿನ  ನಿದ್ದೆಗೆಡಿಸಿದ ರಾಜ್‌ ಠಾಕ್ರೆ ‘ಡಿಜಿಟಲ್‌’ ಭಾಷಣ
COVER STORY

ದೇಶ ವರ್ಸಸ್‌ ಮೋದಿ-ಶಾ: ಬಿಜೆಪಿ ಜೋಡೆತ್ತಿನ ನಿದ್ದೆಗೆಡಿಸಿದ ರಾಜ್‌ ಠಾಕ್ರೆ ‘ಡಿಜಿಟಲ್‌’ ಭಾಷಣ

ಕೇಂದ್ರ ಸರಕಾರದ ಸಾಧನೆಗಳ ಅಂಕಿ ಅಂಶಗಳು, ಪ್ರಧಾನಿ ನರೇಂದ್ರ ಮೋದಿ ಹಳೆ ಭಾಷಣಗಳ ವಿಡಿಯೋಗಳ ಸಮೇತ ವೇದಿಕೆ ಏರುತ್ತಿರುವ ರಾಜ್‌ ಠಾಕ್ರೆ ಅಕ್ಷರಶಃ ನೆರೆದಿದ್ದ ಜನಸ್ತೋಮವನ್ನು ಮೋಡಿಗೆ ಕೆಡವುತ್ತಿದ್ದಾರೆ. ರಾಜಕೀಯ ಭಾಷಣಗಳ ಹೊಸ ಪ್ರಯೋಗ ಇದು.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಏಪ್ರಿಲ್‌ 6; ಶನಿವಾರ ಸಂಜೆ ದಾದರ್‌ನಲ್ಲಿರುವ ಶಿವಾಜಿ ಪಾರ್ಕ್‌ನಲ್ಲಿ ಗುಡಿ ಪಡ್ವ ರ್ಯಾಲಿ ಹೆಸರಿನಲ್ಲಿ ಮಹರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್‌ಎಸ್‌) ವಾರ್ಷಿಕ ಸಭೆ ಆಯೋಜಿಸಿತ್ತು. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದ, ಕಾಂಗ್ರೆಸ್‌-ಎನ್‌ಸಿಪಿ ಜತೆ ಮೈತ್ರಿಯಲ್ಲೂ ಇಲ್ಲ ಎಂದಿದ್ದ ಎಂಎನ್‌ಎಸ್‌ ರ್ಯಾಲಿಗೆ ಅಕ್ಷರಶಃ ಜನರು ಸಮರೋಪಾದಿಯಲ್ಲಿ ಹರಿದು ಬಂದಿದ್ದು ಹಲವರನ್ನು ಅಚ್ಚರಿಗೆ ತಳ್ಳಿತ್ತು.

ಅಂದು ಕೇಂದ್ರ ಸರಕಾರದ ಸಾಧನೆಗಳ ಅಂಕಿ ಅಂಶಗಳು, ಪ್ರಧಾನಿ ನರೇಂದ್ರ ಮೋದಿ ಹಳೆ ಭಾಷಣಗಳ ವಿಡಿಯೋಗಳ ಸಮೇತ ವೇದಿಕೆ ಏರಿದ ರಾಜ್‌ ಠಾಕ್ರೆ ಅಕ್ಷರಶಃ ನೆರೆದಿದ್ದ ಜನಸ್ತೋಮವನ್ನು ಮೋಡಿಗೆ ಕೆಡವಿದರು; ಮೋದಿ ಬಂಡವಾಳವನ್ನು ಬಟಾ ಬಯಲಿನಲ್ಲಿ ಬಿಚ್ಚಿಟ್ಟರು.

ಕಾಲಘಟ್ಟದ ತಂತ್ರಜ್ಞಾನಗಳನ್ನು ಅತ್ಯುತ್ತಮವಾಗಿ ಬಳಸಿಕೊಂಡ ಠಾಕ್ರೆ ಭಾಷಣದ ಮಧ್ಯ ಮಧ್ಯದಲ್ಲಿ ಎಲ್‌ಇಡಿ ಸ್ಕೀನ್‌ ಮೂಲಕ ಮೋದಿ ಭಾಷಣಗಳ ವಿಡಿಯೋಗಳನ್ನು ಪ್ಲೇ ಮಾಡುತ್ತಾ ಅದಕ್ಕೆ ತಮ್ಮ ಪ್ರತಿಕ್ರಿಯೆ, ಟೀಕೆಗಳನ್ನು ಸೇರಿಸುತ್ತಾ ಪ್ಯಾಕೇಜ್‌ ರೂಪದ ಮಾತುಗಳನ್ನು ಜನರ ಮುಂದಿಟ್ಟರು. ಸಹಜವಾಗಿಯೇ ಇದಕ್ಕೆ ಪ್ರತಿಕ್ರಿಯೆಯೂ ಅತ್ಯುತ್ತಮವಾಗಿತ್ತು.

ಈ ಮೂಲಕ ಮೋದಿ ಎಂಬ ಅಪ್ಪಟ ಭಾಷಣಕಾರನನ್ನು ಅವರದ್ದೇ ದಾಟಿಯಲ್ಲಿ ನೀವಾಳಿಸಿ ಬಿಸಾಕಿದರು ರಾಜ್‌ ಠಾಕ್ರೆ.

ಮೋದಿ-ಶಾಗೆ ವಿರೋಧ, ಮೈತ್ರಿಯಿಂದ ದೂರ:

ಮುಂದೆ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ರಾಜ್‌ ಠಾಕ್ರೆ, “ಗುಡಿ ಪಡ್ವಾ ರ್ಯಾಲಿಯಲ್ಲಿ ನನಗೆ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಇಚ್ಛೆ ಇಲ್ಲ. ಆದರೆ ನನ್ನ ಎಲ್ಲಾ ನಡವಳಿಕೆಗಳು ನಿಮಗೆ ಸಹಾಯಕವಾಗಲಿವೆ ಎಂಬುದನ್ನು ಕಾಂಗ್ರೆಸ್‌ ಮತ್ತು ಎನ್‌ಸಿಪಿಯವರಿಗೆ ಹೇಳಿದ್ದೇನೆ. ಕಾಂಗ್ರೆಸ್‌, ಎನ್‌ಸಿಪಿ ಯಾರಿಗೆ ಸೇರಿದ್ದು ಎಂಬುದು ನನಗೆ ಬೇಕಾಗಿಲ್ಲ. ಆದರೆ ಮೋದಿ ಮುಕ್ತ ಭಾರತಕ್ಕಾಗಿ ಎಲ್ಲರೂ ಕೈ ಜೋಡಿಸಬೇಕಿದೆ," ಎಂದು ಗುಡುಗಿದ್ದರು. ನನ್ನ ರ್ಯಾಲಿಗಳು ಮೋದಿ-ಶಾ ವಿರುದ್ಧ ಮಾತ್ರ ಎಂಬ ಸ್ಪಷ್ಟನೆಯನ್ನು ನೀಡಿದ್ದರು.

ಬಹುಶಃ ಚುನಾವಣಾ ರಾಜಕಾರಣದಿಂದ ರಾಜ್‌ ಠಾಕ್ರೆ ದೂರ ಇರುವುದಾಗಿ ಹೇಳಿದ್ದರಿಂದ ಇಲ್ಲಿಗೆ ಎಲ್ಲವೂ ನಿಲ್ಲುತ್ತದೆ ಎಂದು ಬಿಜೆಪಿ ಅಂದುಕೊಂಡಿತ್ತೇನೋ. ಆದರೆ ತಮಗೆ ಸಿಕ್ಕಿದ ಪ್ರತಿಕ್ರಿಯೆಯಿಂದ ಮತ್ತಷ್ಟು ಉತ್ತೇಜಿತರಾದ ರಾಜ್‌ ಠಾಕ್ರೆ ಇನ್ನೊಂದಷ್ಟು ರ್ಯಾಲಿಗಳನ್ನು ನಡೆಸಿದ್ದಾರೆ; ನಡೆಸುತ್ತಿದ್ದಾರೆ. ಇದು ಬಿಜೆಪಿಯ ನಿದ್ದೆಗೆಡಿಸಿದೆ.

ಗುಡಿ ಪಡ್ವಾ ರ್ಯಾಲಿಯ ನಂತರ ರಾಜ್‌ ಠಾಕ್ರೆ ನಾಂದೇಡ್‌, ಸೋಲಾಪುರಗಳಲ್ಲಿಯೂ ಬಹಿರಂಗ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಎರಡೂ ಸಮಾವೇಶಗಳಿಗೆ ಲಕ್ಷಾಂತರ ಜನರು ಹರಿದು ಬಂದಿದ್ದಾರೆ. ಅದರಲ್ಲೂ ನಾಂದೇಡ್‌ ಸಮಾವೇಶದಿಂದ ದಿಕ್ಕು ಕಾಣದಾಗಿರುವ ಬಿಜೆಪಿ ಚುನಾವಣಾಧಿಕಾರಿಗೆ ಠಾಕ್ರೆ ವಿರುದ್ಧ ದೂರನ್ನು ನೀಡಿತ್ತು.

ಠಾಕ್ರೆ ರ್ಯಾಲಿ ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿಯ ಅಭ್ಯರ್ಥಿ ಪರವಾಗಿದೆ ಎಂಬುದಾಗಿ ಬಿಜೆಪಿ ತಕರಾರು ತೆಗೆದಿತ್ತು. ಹೀಗಾಗಿ ನಾಂದೇಡ್‌ ರ್ಯಾಲಿಯ ಖರ್ಚು ವೆಚ್ಚಗಳನ್ನು ಇಲ್ಲಿನ ಸ್ಥಳೀಯ ಅಭ್ಯರ್ಥಿ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಚವಾಣ್‌ ಲೆಕ್ಕಕ್ಕೆ ಸೇರಿಸಬೇಕು ಎಂದು ಬೇಡಿಕೆ ಇಟ್ಟಿತ್ತು.

ಆದರೆ ದೂರಿನ ಹಿನ್ನೆಲೆಯಲ್ಲಿ ಭಾಷಣದ ಧ್ವನಿ ಮುದ್ರಣವನ್ನು ಆಲಿಸಿದ ಜಿಲ್ಲಾಧಿಕಾರಿ ಅರುಣ್‌ ದೋಂಗ್ರೆ ಇದರಲ್ಲಿ ಯಾವುದೇ ಪಕ್ಷದ ಪರವಾದ ಪ್ರಚಾರ ಇಲ್ಲ ಎಂದು ಷರಾ ಬರೆದಿದ್ದಾರೆ. ಇದು ಬಿಜೆಪಿಯನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ. ಕಾರಣ ಠಾಕ್ರೆ ಮತ್ತಷ್ಟು ಆಕ್ರಮಣಕಾರಿಯಾಗಿ ರಾಜ್ಯ ಪ್ರವಾಸ ಮಾಡುತ್ತಾ ಬಿಜೆಪಿ ಮತ್ತು ಮೋದಿಗೆ ಮತ ಹಾಕದಂತೆ ಮನವಿ ಮಾಡುತ್ತಿದ್ದಾರೆ.

ಇದೀಗ ಹತಾಷರಾಗಿರುವ ಬಿಜೆಪಿಗರು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ರಾಜ್‌ ಠಾಕ್ರೆಗೆ ಭಾಷಣ ಬರೆದುಕೊಡುತ್ತಿದ್ದಾರೆ ಎಂಬುದಾಗಿ ರಾಜ್ಯ ಶಿಕ್ಷಣ ಸಚಿವ ವಿನೋದ್‌ ತಾವ್ಡೆ ಆರೋಪಿಸಿದ್ದಾರೆ. ಠಾಕ್ರೆ ತಮ್ಮ ಬೆಂಬಲ ಯಾರಿಗೆ ಎಂಬುದನ್ನು ಖಚಿತ ಪಡಿಸಬೇಕು ಎಂಬುದಾಗಿಯೂ ಅವರು ಒತ್ತಾಯಿಸಿದ್ದಾರೆ.

ಆದರೆ ಇದ್ಯಾವುದಕ್ಕೂ ಜಗ್ಗದ ಠಾಕ್ರೆ ಮೋದಿ-ಶಾ ಮೇಲಿನ ತಮ್ಮ ದಾಳಿಯನ್ನು ಮುಂದುವರಿಸಿದ್ದಾರೆ.

2014ರಲ್ಲಿ ಮೋದಿ ಬೆಂಬಲಿಗ:

ಹಾಗೆ ನೋಡಿದರೆ ಇದೇ ರಾಜ್‌ ಠಾಕ್ರೆ ಒಂದು ಕಾಲದಲ್ಲಿ ಮೋದಿ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದರು. 2014ರ ಚುನಾವಣೆಗೂ ಮುನ್ನ ಪಕ್ಷಾತೀತವಾಗಿ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಹೇಳಿದವರಲ್ಲಿ ರಾಜ್‌ ಠಾಕ್ರೆ ಮೊದಲಿಗರಾಗಿ ಕಾಣಿಸಿಕೊಂಡಿದ್ದರು.

ನರೇಂದ್ರ ಮೋದಿ-ರಾಜ್‌ ಠಾಕ್ರೆ ಒಂದು ಹಳೆಯ ಚಿತ್ರ.
ನರೇಂದ್ರ ಮೋದಿ-ರಾಜ್‌ ಠಾಕ್ರೆ ಒಂದು ಹಳೆಯ ಚಿತ್ರ.
/ಇಂಡಿಯನ್‌ ಎಕ್ಸ್‌ಪ್ರೆಸ್‌

ಇದೇ ರೀತಿ ಮೋದಿ ಪ್ರಧಾನಿಯಾಗಬೇಕು ಎಂಬುದಾಗಿ ಮೊದಲ ಧ್ವನಿ ಎತ್ತಿದ್ದ ಯಶವಂತ್‌ ಸಿನ್ಹಾ, ಶತ್ರುಘ್ನ ಸಿನ್ಹಾ, ರಾಮ್‌ ಜೇಠ್ಮಲಾನಿ ಇವತ್ತು ಬಿಜೆಪಿ ಪಕ್ಷವನ್ನೇ ತೊರೆದಿದ್ದಾರೆ. ಇನ್ನೋರ್ವ ಹಿರಿಯ ನಾಯಕ ಅರುಣ್‌ ಶೌರಿ ಮೋದಿ ವಿರುದ್ಧ ಕೋರ್ಟ್‌ಗಳಲ್ಲಿ ಬಡಿದಾಡುತ್ತಿದ್ದಾರೆ.

ಇತ್ತ ರಾಜ್‌ ಠಾಕ್ರೆ ಮೋದಿ ವಿರುದ್ಧ ಆರ್ಭಟಿಸಲು ಆರಂಭಿಸಿದ್ದಾರೆ. ಮೊದಲಿಗೆ ಪುಲ್ವಾಮ ದಾಳಿ ಹಿನ್ನೆಲೆಯಲ್ಲಿ ಮಾತನಾಡಿದ್ದ ಅವರು, “ಅಜಿತ್‌ ದೋವಲ್‌ರನ್ನು ತನಿಖೆಗೆ ಒಳಪಡಿಸಿದರೆ ಪುಲ್ವಾಮ ದಾಳಿಯ ಸತ್ಯ ಹೊರ ಬರುತ್ತದೆ,” ಎಂದು ವಾದಿಸಿದ್ದರು. “ಪುಲ್ವಾಮ ದಾಳಿಯಾಗುವಾಗ ಜಿಮ್‌ ಕಾರ್ಬೆಟ್‌ ಉದ್ಯಾನದಲ್ಲಿ ಮೋದಿ ಸಿನಿಮಾ ಶೂಟಿಂಗ್‌ ಮಾಡುತ್ತಿದ್ದರು. ದಾಳಿಯ ಸುದ್ದಿ ಬಂದಾಗಲೂ ಶೂಟಿಂಗ್‌ ಮುಂದುವರಿಸಿದ್ದರು,” ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ಸಂವಾದ, ಸಂದರ್ಶನಗಳಲ್ಲಷ್ಟೇ ಮೋದಿ ವಿರುದ್ಧ ಮಾತನಾಡುತ್ತಿದ್ದ ರಾಜ್‌ ಠಾಕ್ರೆ ಇದೀಗ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ. ಮೂರು ನಾಲ್ಕು ರ್ಯಾಲಿಗಳ ನಂತರ ಇನ್ನೂ ಅನೇಕ ಬಹಿರಂಗ ಸಮಾವೇಶಗಳನ್ನು ಉದ್ದೇಶಿಸಿ ಅವರು ಮಾತನಾಡಲಿರುವುದು ಬಿಜೆಪಿ ಪಾಲಿಗೆ ಚುನಾವಣಾ ರಾಜಕಾರಣದಲ್ಲಿ ಉದ್ಭವಿಸಿರುವ ಹೊಸ ಸಮಸ್ಯೆಯಂತೆ ಕಾಣಿಸುತ್ತಿದೆ.

ಮರಾಠಿ ಅಸ್ಮಿತೆ:

ಚುನಾವಣೆಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಗಳು ಕಡಿಮೆ ಇರುವುದರಿಂದ ಸ್ಪರ್ಧೆಯಿಂದ ದೂರ ಉಳಿದು ಕೇವಲ ಮೋದಿ ವಿರೋಧಿ ಭಾಷಣಗಳಿಗೆ ಠಾಕ್ರೆ ಸೀಮಿತಗೊಂಡಿದ್ದಾರೆ. ಆದರೆ ಇದೇ ಅವಧಿಯಲ್ಲಿ ಮರಾಠಿ ಅಸ್ಮಿತೆಯ ರಾಜಕಾರಣವನ್ನು ಕೈ ವಶ ಮಾಡಿಕೊಳ್ಳುವ ಸೂಚನೆಗಳನ್ನು ಅವರು ನೀಡಿದ್ದಾರೆ.

ಐತಿಹಾಸಿಕವಾಗಿ ಮುಂಬೈ ಮಹಾನಗರದಲ್ಲಿ ಅಸ್ತಿತ್ವಕ್ಕಾಗಿ ಮರಾಠಿಗರು ಮತ್ತು ಗುಜರಾತಿಗಳು ಹೋರಾಡುತ್ತಾ ಬಂದಿದ್ದಾರೆ. ಈ ಕಾದಾಟದಲ್ಲಿ ಮರಾಠಿಗರ ಪರ ನಿಂತು ಶಿವಸೇನೆ ರಾಜಕೀಯ ಅಸ್ತಿತ್ವ ಪಡೆದುಕೊಂಡಿತ್ತು. ಹೀಗಿರುವಾಗ ಯಾವಾಗ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ರಚನೆಯಾಗಿ, ಅಮಿತ್‌ ಶಾ ಬಿಜೆಪಿ ಅಧ್ಯಕ್ಷರಾದರೋ ಅಲ್ಲಿಂದ ಮುಂಬೈನಲ್ಲಿ ಗುಜರಾತಿ ಬನಿಯಾಗಳಿಗೆ ಹೊಸ ಬಲ ಬಂದಂತಾಯ್ತು.

ಇದೇ ಕಾರಣಕ್ಕೆ ಕಳೆದ ಐದು ವರ್ಷಗಳಲ್ಲಿ ಶಿವಸೇನೆ ಕೇಂದ್ರ ಸರಕಾರ ಮತ್ತು ಬಿಜೆಪಿ ವಿರುದ್ಧ ಕೆಂಡ ಕಾರುತ್ತಲೇ ಬಂದಿತ್ತು. ಆದರೆ ಕೊನೆ ಕ್ಷಣದಲ್ಲಿ ಉದ್ಧವ್‌ ಠಾಕ್ರೆ ಬಿಜೆಪಿ ಜತೆ ಕೈ ಮಿಲಾಯಿಸಿದ್ದರಿಂದ ಮರಾಠ ಅಸ್ಮಿತೆಯ ಹೋರಾಟ ಅನಾಥವಾಗಿತ್ತು. ಅದನ್ನೀಗ ಠಾಕ್ರೆ ಕೈಗೆತ್ತಿಕೊಳ್ಳುವ ಸೂಚನೆ ನೀಡಿದ್ದಾರೆ.

ಆಗಿರುವ ಬದಲಾವಣೆ ಏನೆಂದರೆ ಅವರು ಈ ಹಿಂದಿನ ಹಿಂಸಾತ್ಮಕ ಮನಸ್ಥಿತಿಯಿಂದ ಹೊರ ಬಂದು ಎಲ್ಲರನ್ನೂ ಒಳಗೊಳ್ಳುವತ್ತ ಹೊರಟಿದ್ದಾರೆ. ಅದೆಲ್ಲದಕ್ಕೂ ಈ ಚುನಾವಣೆಯನ್ನು ಅವರು ಮೆಟ್ಟಿಲಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ಸಹಜ ಮರಾಠ ರಾಜಕಾರಣ.

ಆದರೆ ರಾಜ್‌ ಠಾಕ್ರೆ ಏನಾದರೂ ಮಾಡಿಕೊಳ್ಳಲಿ ಎನ್ನುವ ಪರಿಸ್ಥಿಯಲ್ಲಿ ಬಿಜೆಪಿ ಇಲ್ಲ. ಕಾರಣ ಬಿಸಿ ನೀರು ನರೇಂದ್ರ ಮೋದಿ-ಅಮಿತ್‌ ಶಾ ಜೋಡಿಯ ಕಾಲ ಬುಡಕ್ಕೆ ಬೀಳುತ್ತಿದೆ.