samachara
www.samachara.com
‘ಬಡವರು ಏಕೆ ಬಡವರಾಗಿಯೇ ಇರುತ್ತಾರೆ?’: ಉಪಯೋಜನೆ ಹೆಸರಿನಲ್ಲಿ ನಿಧಿ ನುಂಗಿದವರ ಕತೆ...
ದೇಶ

‘ಬಡವರು ಏಕೆ ಬಡವರಾಗಿಯೇ ಇರುತ್ತಾರೆ?’: ಉಪಯೋಜನೆ ಹೆಸರಿನಲ್ಲಿ ನಿಧಿ ನುಂಗಿದವರ ಕತೆ...

ಇದನ್ನು ಮಾನವೀಯ ನಡೆ ಎಂದು ಪರಿಗಣಿಸಬಹುದೇ? ಒಂದು ಚಟುವಟಿಕೆಗಾಗಿ ಮೀಸಲಿಟ್ಟ ಹಣವನ್ನು ಅದಕ್ಕೆ ತದ್ವಿರುದ್ಧವಾದ ಯೋಜನೆಗಳಿಗೆ ಬಳಸುವುದು ಎಷ್ಟು ಸರಿ? ಇದನ್ನು ನೈತಿಕ ಅಪರಾಧ ಎಂದು ಕರೆಯಬೇಕೇ ಅಥವಾ ಭ್ರಷ್ಟಾಚಾರ ಎನ್ನಬೇಕೇ? 

Team Samachara

ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ ಮತ್ತು ಗಣಿಗಾರಿಕೆಯಿಂದ ತೊಂದರೆಗೊಳಗಾದ ಸಮುದಾಯಗಳ ಸಹಾಯಕ್ಕೆಂದು ‘ಬುಡಕಟ್ಟು ಉಪ ಯೋಜನೆ’ಯನ್ನು ಯೋಜನಾ ಆಯೋಗ ಪ್ರಸ್ತಾಪಿಸಿತ್ತು. ಈ ಉಪ ಯೋಜನೆಗೆ ಎಲ್ಲಾ ಇಲಾಖೆಗಳು ತಮ್ಮ ಪಾಲಿನ ಸಣ್ಣ ಪಾಲಿನ ಹಣವನ್ನು ನೀಡಬೇಕಾಗಿತ್ತು. ಕಳೆದ ಕೆಲವು ವರ್ಷಗಳಲ್ಲಿ ಹೀಗೆ ನೀಡಿದ ಹಣವೇ ನೂರಾರು ಕೋಟಿಗಳಷ್ಟಾಗಿವೆ. ಮತ್ತು ಇದನ್ನು ಖರ್ಚು ಕೂಡ ಮಾಡಲಾಗಿದೆ. ಎಲ್ಲಿ?

ಎಲ್ಲಿ ಖರ್ಚು ಮಾಡಲಾಗಿದೆ ಎಂಬ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಹೊರಟಾಗ ಆಸಕ್ತಿಕರ ಅಂಶಗಳು ಕಾಣಸಿಗುತ್ತವೆ.

ಆರ್‌ಟಿಐನಲ್ಲಿ ಪಡೆದುಕೊಂಡಿರುವ ಮಾಹಿತಿಗಳ ಪ್ರಕಾರ, ಬುಡಕಟ್ಟು ಜನಾಂಗಗಳ ಅಭಿವೃದ್ಧಿಗೆಂದು ಮೀಸಲಾಗಿದ್ದ ಹಣವನ್ನು ಅವರ ಸ್ಥಳಾಂತರಕ್ಕೆ ಬಳಸಲಾಗಿದೆ. ಹೀಗೆ ಅಭಿವೃದ್ಧಿಗೆ ಮೀಸಲಾದ ಹಣವನ್ನು ಇನ್ನಿತರ ಉದ್ದೇಶಗಳಿಗೆ ಬಳಕೆ ಮಾಡಿರುವುದಲ್ಲದೆ ಇವು ಅವರಿಗೆ ಮತ್ತಷ್ಟು ಸಮಸ್ಯೆಯನ್ನೇ ಸೃಷ್ಟಿಸಿದೆ.

ಯೋಜನಾ ಆಯೋಗದ ಜಾಗದಲ್ಲಿ ಸದ್ಯ ಅಸ್ತಿತ್ವದಲ್ಲಿರುವ ನೀತಿ ಆಯೋಗದ ಪ್ರಕಾರ ಈ ಹಣದಲ್ಲಿ ಬುಡಕಟ್ಟು ಸಮುದಾಯಗಳಿಗೆ ನೇರವಾಗಿ ಪ್ರಯೋಜನಕ್ಕೆ ಬರುವ ಯೋಜನೆಗಳನ್ನು ರೂಪಿಸಬೇಕಾಗಿತ್ತು. ಇದಕ್ಕಾಗಿ ಕಲ್ಲಿದ್ದಲು ಇಲಾಖೆಯ ಬಜೆಟ್‌ನ ಶೇಕಡಾ 8.2ರಷ್ಟು ಹಣ ಮತ್ತು ಗಣಿ ಇಲಾಖೆಯ ಬಜೆಟ್‌ನ ಶೇಕಡಾ 4ರಷ್ಟು ಹಣವನ್ನು ಪ್ರತ್ಯೇಕವಾಗಿ ತೆಗೆದಿಡುವಂತೆ ಆಯೋಗ ಸೂಚಿಸಿತ್ತು. ಈ ಹಣವನ್ನು ಎರಡೂ ಇಲಾಖೆಗಳು ಪ್ರತಿ ವರ್ಷ ಫಿಕ್ಸೆಡ್‌ ಡೆಪಾಸಿಟ್‌ ರೂಪದಲ್ಲಿ ಇಡಬೇಕಾಗಿತ್ತು. ಹೀಗೆ ಇಟ್ಟ ಹಣವನ್ನು ನಿಜವಾಗಿಯೂ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಬಳಸಲಾಯಿತೇ?

ಆರ್‌ಟಿಐ ಉತ್ತರಗಳನ್ನು ಕೆದಕುತ್ತಾ ಹೋದಂತೆ ಆಘಾತಕಾರಿ ಅಂಶಗಳು ಬಿಡಿಸಿಕೊಳ್ಳಲು ಆರಂಭಿಸಿದವು.

ಅಭಿವೃದ್ಧಿ ಅಥವಾ ವಿನಾಶ?

ನಿಯಮದಂತೆ ಹಣವನ್ನೇನೋ ಸುರಿಯಲಾಯಿತು. ಆದರೆ ಸುರಿದ ಹಣ ಬುಡಕಟ್ಟು ಸಮುದಾಯಗಳನ್ನು ಅಭಿವೃದ್ಧಿ ಮಾಡುವ ಬದಲು ಅವುಗಳನ್ನು ಮತ್ತಷ್ಟು ತೊಂದರೆಗೇ ಸಿಲುಕಿಸುತ್ತಿದ್ದವು. ಕಲ್ಲಿದ್ದಲು ಇಲಾಖೆ ಮತ್ತು ಗಣಿ ಇಲಾಖೆ ನೀಡಿದ ಮಾಹಿತಿಗಳನ್ನು ನೋಡಿದರೆ ಉಪ ಯೋಜನೆಯ ಚಟುವಟಿಕೆಗಳು ಬುಡಕಟ್ಟು ಸಮುದಾಯದ ಪರವಾಗಿಲ್ಲ ಎಂಬುದು ಸ್ಪಷ್ಟವಾಗುತ್ತವೆ.

ದಾಖಲೆಗಳ ಪ್ರಕಾರ, ಕಲ್ಲಿದ್ದಲು ಇಲಾಖೆ ಹಣವನ್ನು ಸರಕಾರಿ ಕಲ್ಲಿದ್ದಲು ಕಂಪನಿಗಳಾದ ಸಿಸಿಎಲ್‌, ಎಸ್‌ಸಿಸಿಎಲ್ ಮತ್ತು ಎಂಸಿಎಲ್‌ಗೆ ಹಸ್ತಾಂತರಿಸಿದೆ. ಈ ಹಣವನ್ನು ಈ ಕಂಪನಿಗಳು ಜನರ ಅಭಿವೃದ್ಧಿಗೆ ಬಳಸುವುದರ ಬದಲು ಅದಿರಿನ ಹುಡುಕಾಟಕ್ಕೆ, ಭೂಮಿ ಕೊರೆಯಲು ಮತ್ತು ಗಣಿಗಳ ಅಭಿವೃದ್ಧಿಗೆ ಬಳಸಿವೆ.

ಹೀಗೆ ಅನುದಾನವನ್ನು ಬುಡಕಟ್ಟು ಸಮುದಾಯಗಳಿಗೆ ಸಹಾಯವಾಗುವ ಹಾಗೆ ಬಳಸುವುದರ ಬದಲು ಅವುಗಳಿಗೆ ಮತ್ತಷ್ಟು ತೊಂದರೆ ನೀಡುವ ಮುಂದಿನ ಯೋಜನೆಗಳ ಹುಡುಕಾಟಕ್ಕೆ ಬಳಸಲಾಗಿದೆ.

ಇದು ಆದಿವಾಸಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣ, ಬಳಕೆಯಾಗಿದ್ದು ಅದಿರು ಕಂಪನಿಗಳ ಅಭಿವೃದ್ಧಿಗೆ. 
ಇದು ಆದಿವಾಸಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣ, ಬಳಕೆಯಾಗಿದ್ದು ಅದಿರು ಕಂಪನಿಗಳ ಅಭಿವೃದ್ಧಿಗೆ. 

ಇನ್ನೊಂದು ಕಡೆ 2010-11 ಮತ್ತು 2017-18ರ ನಡುವೆ ಗಣಿ ಇಲಾಖೆ ಅಡಿಯಲ್ಲಿ ಬರುವ ಜಿಯಾಗ್ರಫಿಕಲ್‌ ಸರ್ವೆ ಆಫ್‌ ಇಂಡಿಯಾ ಬುಡಕಟ್ಟು ಉಪ ಯೋಜನೆ ಅಡಿಯಲ್ಲಿ 66.21 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿತ್ತು. ಈ ಹಣವನ್ನು ಕೊಲ್ಕೊತ್ತಾ, ನಾಗ್ಪುರ, ಜೈಪುರ, ಹೈದರಾಬಾದ್‌, ಲಕ್ನೋ ಮತ್ತು ಶಿಲ್ಲಾಂಗ್‌ನಲ್ಲಿ ಖನಿಜ ಸಂಪತ್ತಿನ ಶೋಧನೆಗೆ ಜಿಯಾಲಾಜಿಕಲ್‌ ಸರ್ವೆ ಸಂಸ್ಥೆ ಬಳಸಿತ್ತು.

ಈ ಸಂಬಂಧ ಕೇಳಲಾದ ಪ್ರಶ್ನೆಗೆ ಫೆಬ್ರವರಿ 26, 2018ರಂದು ಉತ್ತರಿಸಿರುವ ಕಲ್ಲಿದ್ದಲು ಇಲಾಖೆ, ಬುಡಕಟ್ಟು ಉಪ ಯೋಜನೆಯಡಿಯಲ್ಲಿ ರಾಜ್ಯಗಳಿಗೆ ಹಣ ನೀಡಿಲ್ಲ, ಬದಲಿಗೆ ಸರ್ಕಾರಿ ಗಣಿ ಕಂಪನಿಗಳು ಮತ್ತು ‘ಕೇಂದ್ರ ಗಣಿ ಯೋಜನೆ ಮತ್ತು ವಿನ್ಯಾಸ ಸಂಸ್ಥೆ (ಸಿಎಂಪಿಡಿಐಎಲ್‌)‘ಗೆ ನೀಡಲಾಗಿದೆ ಎಂದು ಹೇಳಿತ್ತು.

ಈ ಕಾರಣಕ್ಕೆ 2011-12 ರಿಂದ 2017-18ರ ಅವಧಿಯಲ್ಲಿ ಇಲಾಖೆ 205 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿತ್ತು. ಗಣಿ ಕಂಪನಿಗಳು ಮತ್ತು ಸಿಎಂಪಿಡಿಐಎಲ್‌ ಈ ಹಣವನ್ನು ಕಲ್ಲಿದ್ದಲು ನಿಕ್ಷೇಪಗಳ ಶೋಧನೆ, ಉತ್ಖನನ, ಗಣಿ ಸಂರಕ್ಷಣೆ ಮತ್ತು ಗಣಿಗಳ ರಕ್ಷಣೆಗೆ ಬಳಸಿತ್ತು.

ಸಿಎಂಪಿಡಿಐಎಲ್‌ನಿಂದ ಪಡೆದುಕೊಂಡ ಉತ್ತರದ ಪ್ರಕಾರ 2011-12 ರಿಂದ 2017-18ರವರೆಗೆ 41.59 ಕೋಟಿ ರೂಪಾಯಿಗಳನ್ನು ಪ್ರಾದೇಶಿಕ ಕಲ್ಲಿದ್ದಲು ಪರಿಶೋಧನೆಗೆ ಖರ್ಚು ಮಾಡಲಾಗಿದೆ. ಡ್ರಿಲ್ಲಿಂಗ್‌ಗಾಗಿಯೇ 83.32 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದ್ದ ಸಿಎಂಪಿಡಿಐಎಲ್‌ ಈ ಹಣವನ್ನು ಛತ್ತೀಸ್‌ಗಢ, ಆಂಧ್ರ ಪ್ರದೇಶ, ಮಧ್ಯ ಪ್ರದೇಶ ಮತ್ತು ಒಡಿಶಾದ 20 ಬ್ಲಾಕ್‌ಗಳಲ್ಲಿ ಕಲ್ಲಿದ್ದಲು ಸಂಗ್ರಹಗಾರಗಳಿಗೆ ಬಳಸಿತ್ತು.

ಹೆಸರಿಗೆ ಇದು ಉಪಯೋಜನೆ. ಬಳಕೆ ನೋಡಿದರೆ ಆದಿವಾಸಿಗಳ ವಿನಾಶಕ್ಕೆ ಟೊಂಕ ಕಟ್ಟಿ ನಿಂತ ಹಾಗಿದೆ. 
ಹೆಸರಿಗೆ ಇದು ಉಪಯೋಜನೆ. ಬಳಕೆ ನೋಡಿದರೆ ಆದಿವಾಸಿಗಳ ವಿನಾಶಕ್ಕೆ ಟೊಂಕ ಕಟ್ಟಿ ನಿಂತ ಹಾಗಿದೆ. 

ಖನಿಜಗಳ ನಿಕ್ಷೇಪ ಪತ್ತೆಗೆ 122.87 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಸಿಎಂಪಿಡಿಐಎಲ್‌ ಬಳಕೆ ಮಾಡಿದ್ದು ಇದರಲ್ಲಿ 41.59 ಕೋಟಿ ರೂಪಾಯಿಗಳು ಬುಡಕಟ್ಟು ಉಪ ಯೋಜನೆಯಿಂದ ಪಡೆದುಕೊಂಡ ಹಣ ಎಂಬುದನ್ನು ಗಮನಿಸಬೇಕಿದೆ.

ಕೊಲ್ಕತ್ತಾ ಕೋಲ್‌ ಕಂಟ್ರೋಲರ್‌ ಪ್ರಕಾರ ಬುಡಕಟ್ಟು ಉಪ ಯೋಜನೆಯ ಈ ಹಣವನ್ನು ಸೆಂಟ್ರಲ್‌ ಕೋಲ್‌ಫೀಲ್ಡ್ಸ್‌ (ಸಿಸಿಎಲ್‌), ಸಿಂಗರೇಣಿ ಕೊಲ್ಲರೀಸ್‌ ಕಂಪನಿ ಲಿ. (ಎಸ್‌ಸಿಸಿಎಲ್‌) ಮತ್ತು ಮಹಾನದಿ ಕೋಲ್‌ಫೀಲ್ಡ್ಸ್‌ ಲಿ. (ಎಂಸಿಎಲ್‌) ಗೆ ನೀಡಲಾಗಿತ್ತು.

ಈ ಕಂಪನಿಗಳು ಜಾರ್ಖಂಡ್‌, ಆಂಧ್ರ ಪ್ರದೇಶ, ಒಡಿಶಾ ಮತ್ತು ತೆಲಂಗಾಣದ ಗಣಿಗಳಲ್ಲಿ ಒತ್ತಡವನ್ನು ಕಡಿತಗೊಳಿಸುವ ಕೆಲಸಕ್ಕೆ ಬಳಕೆ ಮಾಡಿವೆ. ಆರ್‌ಟಿಐ ದಾಖಲೆಗಳ ಪ್ರಕಾರ ಈ ಸರಕಾರಿ ಕಂಪನಿಗಳು 2012-13ರಲ್ಲಿ 12.71 ಕೋಟಿ ರೂ., 2013-14ರಲ್ಲಿ 13.10 ಕೋಟಿ ರೂ., 2014-15ರಲ್ಲಿ 15.17 ಕೋಟಿ ರೂ., 2015-16ರಲ್ಲಿ 13.94 ಕೋಟಿ ರೂ. 2016-17ರಲ್ಲಿ 16.53 ಕೋಟಿ ರೂ ಮತ್ತು 2017-18ರಲ್ಲಿ 16.40 ಕೋಟಿ ರೂಪಾಯಿಗಳನ್ನು ಇಂಥಹ ಚಟುವಟಿಕೆಗಳ ಮೇಲೆ ಖರ್ಚು ಮಾಡಿವೆ.

ಹೀಗಿರುವಾಗ ಇಲ್ಲಿ ಉದ್ಭವಿಸುವ ಕಟ್ಟಕಡೆಯ ಪ್ರಶ್ನೆ ಇಷ್ಟೇ; ಇಷ್ಟೊಂದು ದೊಡ್ಡ ಮೊತ್ತದ ಹಣದಿಂದ ಬುಡಕಟ್ಟು ಸಮುದಾಯಗಳಿಗೆ ಆದ ಲಾಭವಾದರೂ ಏನು?

ಬುಡಕಟ್ಟು ಉಪ ಯೋಜನೆಗಳು ಮತ್ತು ಇತರ ಇಲಾಖೆಗಳು:

ಬುಡಕಟ್ಟು ಉಪ ಯೋಜನೆಯಲ್ಲಿ ಹಣ ಪಡೆದುಕೊಳ್ಳುವ ಇಲಾಖೆಗಳು ಅದನ್ನು ಬಳಕೆಯಲ್ಲಿ ವಿಚಿತ್ರ ಧೋರಣೆಗಳನ್ನು ಅನುಸರಿಸಿವೆ. 2011ರ ಜನಗಣತಿ ಪ್ರಕಾರ ಬುಡಕಟ್ಟು ಸಮುದಾಯಗಳೇ ಇಲ್ಲದ ಪ್ರದೇಶಗಳಲ್ಲಿ ಕಾರ್ಯಚರಿಸುವ ಇಲಾಖೆಗಳೂ ಬುಡಕಟ್ಟು ಉಪ ಯೋಜನೆಯಡಿಯಲ್ಲಿ ಹಣ ಪಡೆದುಕೊಂಡಿವೆ ಎಂಬ ಅಚ್ಚರಿಯ ಮಾಹಿತಿಯನ್ನು 2015ರ ಸಿಎಜಿ ವರದಿ ಹೊರಹಾಕಿದೆ.

ಒಂದೊಮ್ಮೆ ಈ ಹಣವನ್ನು ಆಯಾ ಇಲಾಖೆ ಬಳಕೆ ಮಾಡಿಕೊಳ್ಳದೇ ಇದ್ದಲ್ಲಿ ಇದು ಬುಡಕಟ್ಟು ವ್ಯವಹಾರ ಇಲಾಖೆಗೆ ಹೋಗುತ್ತದೆ ಎಂಬುದಾಗಿ 2010ರಲ್ಲೇ ಯೋಜನಾ ಆಯೋಗ ಹೇಳಿದೆ. ಆದರೆ ಸದರಿ ಪ್ರಕರಣಗಳಲ್ಲಿ ಇದನ್ನು ಅನುಸರಿಸಿಲ್ಲ.

ಉದಾಹರಣೆಗೆ ಇಲ್ಲಿ ಜವಳಿ ಖಾತೆಯನ್ನು ತೆಗೆದುಕೊಂಡರೆ ಈ ಇಲಾಖೆ ಕಳೆದ ಎಂಟು ವರ್ಷಗಳಲ್ಲಿ ತನ್ನ ಬಜೆಟ್‌ನ ಶೇಕಡಾ 1.2 ರಷ್ಟು ಹಣವನ್ನು ಪಕ್ಕಕ್ಕೆ ಎತ್ತಿಟ್ಟಿದೆ. ಇದೇ ಇಲಾಖೆ 2017-18ರಲ್ಲಿ ಶೇಕಡಾ 6.2ರಷ್ಟು ಹಣವನ್ನು ಅಂದರೆ 61.82 ಕೋಟಿ ರೂಪಾಯಿಗಳನ್ನು ಬುಡಕಟ್ಟು ಉಪಯೋಜನೆಗೆ ಮೀಸಲಿಟ್ಟಿತ್ತು.

ಇದರಲ್ಲಿ 30 ಕೋಟಿ ರೂಪಾಯಿಗಳನ್ನು ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ (ಎನ್‌ಎಚ್‌ಡಿಸಿಎಲ್‌)ಕ್ಕೆ ನೀಡಲಾಗಿದೆ. ಆದರೆ ಇದೇ ನಿಗಮಕ್ಕೆ ಆರ್‌ಟಿಐ ಮೂಲಕ ಪ್ರಶ್ನೆ ಕೇಳಿದಾಗ ಈ ಯೋಜನೆಯಡಿಯಲ್ಲಿ ಯಾವುದೇ ಅನುದಾನ ಬಂದಿಲ್ಲ ಎಂಬ ಉತ್ತರವನ್ನು ಜುಲೈ 26-2016ರಲ್ಲಿ ನೀಡಿದೆ.

ಇನ್ನೊಂದು ಕಡೆ ಆಗಸ್ಟ್‌ 7, 2018ರಂದು ಆರ್‌ಟಿಐಗೆ ನೀಡಿದ ಇನ್ನೊಂದು ಉತ್ತರದಲ್ಲಿ ಜವಳಿ ಇಲಾಖೆ ಅಭಿವೃದ್ಧಿ ಆಯುಕ್ತರು (ಕೈಮಗ್ಗ) 2017-18ರಲ್ಲಿ ಬುಡಕಟ್ಟು ಉಪ ಯೋಜನೆ ನಿಧಿಯಲ್ಲದೆ 2012-13ರಿಂದ 115.59 ಕೋಟಿ ರೂಪಾಯಿಗಳ ಹೆಚ್ಚುವರಿ ಹಣವನ್ನು ನೀಡಲಾಗಿದೆ ಎಂದಿದ್ದಾರೆ. ಇದೇ ಆಯುಕ್ತರು ಆಗಸ್ಟ್‌ 13, 2018ರಲ್ಲಿ ನೀಡಿದ ಇನ್ನೊಂದು ಉತ್ತರದಲ್ಲಿ, ಬುಡಕಟ್ಟು ಉಪಯೋಜನೆಯಡಿಯಲ್ಲಿ ಬ್ಲಾಕ್‌ ಲೆವಲ್‌ ಕ್ಲಸ್ಟರ್‌ ಡೆವಲಪ್‌ಮೆಂಟ್‌ ಯೋಜನೆಗೆ ಬಜೆಟ್‌ನಲ್ಲಿ ಮೀಸಲಾಗಿಟ್ಟ ಹಣವನ್ನು ರಾಷ್ಡ್ರೀಯ ಕೈಮಗ್ಗ ಅಭಿವೃದ್ಧಿ ನಿಗಮದ ಮೂಲಕ ಖರ್ಚು ಮಾಡಲಾಗಿದ್ದು 2012-13ರ ಅವಧಿಯಲ್ಲಿ 4 ರಾಜ್ಯಗಳಲ್ಲಿ 40 ಲಕ್ಷ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ.

ಉಪಯೋಜನೆ ಹಳ್ಳ ಹಿಡಿದಿರುವುದಕ್ಕೆ ಸಾಕ್ಷಿ ಒದಗಿಸುವ ಇನ್ನೊಂದು ದಾಖಲೆ.
ಉಪಯೋಜನೆ ಹಳ್ಳ ಹಿಡಿದಿರುವುದಕ್ಕೆ ಸಾಕ್ಷಿ ಒದಗಿಸುವ ಇನ್ನೊಂದು ದಾಖಲೆ.

ಈ ಯೋಜನೆಗಳಿಗಾಗಿ 2013-14ರ ಬಜೆಟ್‌ನಲ್ಲಿ 68.27 ಲಕ್ಷ ರೂಪಾಯಿಗಳನ್ನು ಮೀಸಲಿಟ್ಟಿದ್ದರೆ 2017-18ರಲ್ಲಿ ಇದು 18.19 ಲಕ್ಷ ರೂಪಾಯಿಗೆ ಇಳಿಕೆ ಕಂಡಿದೆ. ನೀತಿ ಆಯೋಗದ ವೆಬ್‌ಸೈಟ್‌ ಪ್ರಕಾರ 20 ಸಂಸ್ಥೆಗಳು 1.47 ಕೋಟಿ ರೂಪಾಯಿಗಳನ್ನು 2017-18ರಲ್ಲಿ ಪಡೆದುಕೊಂಡಿವೆ. ಆದರೆ ಆರ್‌ಟಿಐಗೆ ಸಿಕ್ಕಿದ ಉತ್ತರದ ಪ್ರಕಾರ ಕೇವಲ 4 ಸಂಸ್ಥೆಗಳು 18.19 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿವೆ.

ಹೀಗೆ ಒಂದಕ್ಕೊಂದು ತಾಳೆಯಾಗದ ಮಾಹಿತಿಗಳು ಎಲ್ಲೆಲ್ಲೂ ಸಿಗುತ್ತಿವೆ.

ಇನ್ನೊಂದು ವಿಚಿತ್ರವೆಂದರೆ ಇದರಲ್ಲಿ ಯಾವ ಸಂಸ್ಥೆಗಳೂ 2014-15ರ ನಂತರ ತಮ್ಮ ನಿಧಿ ಬಳಕೆಯ ಪ್ರಮಾಣ ಪತ್ರವನ್ನು ಕಳುಹಿಸಿಲ್ಲ. ಇನ್ನೊಂದು ಆರ್‌ಟಿಐಗೆ ಆಗಸ್ಟ್‌ 8, 2018ರಲ್ಲಿ ನೀಡಿದ ಉತ್ತರದ ಪ್ರಕಾರ ಕೈಮಗ್ಗ ನೇಕಾರರು ಸಮಗ್ರ ಕಲ್ಯಾಣ ಯೋಜನೆಯಡಿಯಲ್ಲಿ ಉಪ ಯೋಜನೆಯ ಹಣವನ್ನು ಎಲ್ಐಸಿ ಮತ್ತು ಐಸಿಐಸಿಐ ಲೊಂಬಾರ್ಟ್‌, ಮುಂಬೈಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಪರಿಶಿಷ್ಟ ಜಾತಿಯ ನೇಕಾರರಿಗೆ ಆರೋಗ್ಯ ಸೌಲಭ್ಯಗಳು ಸಿಗುತ್ತವೆ. ಆದರೆ ಇದರಲ್ಲಿರುವ ಲೆಕ್ಕ ಗಾಬರಿ ಹುಟ್ಟಿಸುತ್ತದೆ. ಕಾರಣ 2013-14ರಲ್ಲಿ 1.61 ಕೋಟಿ ರೂಪಾಯಿಗಳನ್ನು ಇನ್‌ಶೂರೆನ್ಸ್‌ಗೆ ನೀಡಲಾಗಿದ್ದರೆ 2017-18ರಲ್ಲಿ ಕೇವಲ 32 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ.

ಇದರಿಂದ ಅರ್ಥವಾಗುವುದೇನೆಂದರೆ ಅಂತಿಮವಾಗಿ ಫಲಾನುಭವಿಗಳ ಸಂಖ್ಯೆಯಲ್ಲಿ ಕುಸಿತವಾಗಿದೆ. ಅಥವಾ ಶೇಕಡಾ 80ರಷ್ಟು ಫಲಾನುಭವಿಗಳು ನಿರುದ್ಯೋಗಿಗಳಾಗಿದ್ದಾರೆ, ಇಲ್ಲದಿದ್ದಲ್ಲಿ ಯೋಜನೆಯಿಂದ ಅವರನ್ನು ಹೊರಗಿಡಲಾಗಿದೆ.

ಇನ್ನು ಸಮಗ್ರ ಕೈಮಗ್ಗ ಕ್ಲಸ್ಟರ್ ಅಭಿವೃದ್ಧಿ ಯೋಜನೆಯಡಿಯಲ್ಲಿ 2015-16ರ ಬಜೆಟ್‌ನಲ್ಲಿ ಬುಡಕಟ್ಟು ಉಪ ಯೋಜನೆಗೆ ಯಾವುದೇ ಹಣವನ್ನು ಮೀಸಲಿಟ್ಟಿಲ್ಲ. ಇದು ಬುಟಕಟ್ಟು ಸಮುದಾಯದ ಬಗ್ಗೆ ಕೇಂದ್ರ ಸರಕಾರಕ್ಕಿರುವ ಕಾಳಜಿಯನ್ನು ಎತ್ತಿ ತೋರಿಸುತ್ತಿದೆ.

ಇವೆಲ್ಲದರ ಮಧ್ಯೆ ಅತ್ಯಂತ ಕುತೂಹಲಕಾರಿ ಉತ್ತರ ನೀಡಿರುವ ಕೇಂದ್ರ ಉಣ್ಣೆ ಅಭಿವೃದ್ಧಿ ಮಂಡಳಿ (ಸಿಡಬ್ಲ್ಯೂಡಿಬಿ) 2010-11 ರಿಂದ 2017-18ರ ನಡುವೆ 7 ಕೋಟಿ ರೂಪಾಯಿ ಹಣ ಪಡೆದುಕೊಂಡು ಅದರಲ್ಲಿ 6.63 ಕೋಟಿ ರೂಪಾಯಿಗಳನ್ನು ವೈಯಕ್ತಿಕ ವ್ಯಕ್ತಿಗಳ ಬದಲು ಸಂಘ ಸಂಸ್ಥೆಗಳಿಗೆ ನೀಡಿದೆಯಂತೆ. ಆದರೆ ಯಾರಿಗೆ ಹಣ ನೀಡಿದ್ದೇವೆ ಎಂಬ ವಿವರಗಳು ಮಂಡಳಿಯ ಬಳಿಯಲ್ಲಿ ಇಲ್ಲವಂತೆ!

ಬುಡಕಟ್ಟು ವ್ಯವಹಾರ ಸಚಿವಾಲಯದ ಪಾತ್ರ:

ನಮ್ಮ ದೇಶದಲ್ಲಿ ಬುಡಕಟ್ಟು ಸಮುದಾಯಗಳಿಗೆ ಮೀಸಲಾದ ಇಲಾಖೆಯೇ ಇದೆ. ಆದರೆ ಇದು ಏನು ಮಾಡುತ್ತಿದೆ ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.

2015ರಲ್ಲೊಮ್ಮೆ ಇಲಾಖೆ ಬುಡಕಟ್ಟು ಉಪ ಯೋಜನೆಯ ಹಣವನ್ನು ಬೇರೆ ಚಟುವಟಿಕೆಗಳಿಗೆ ಬಳಸುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ನಂತರವೂ ಯದ್ವಾ ತದ್ವಾ ಹಣ ಬಳಕೆ ಮಾಡುವುದು ಮುಂದುವರಿದಿದೆ.

ಇಲಾಖೆ ಪ್ರಕಾರ 37 ಇಲಾಖೆಗಳು ಬುಡಕಟ್ಟು ಉಪ ಯೋಜನೆಗೆ ಹಣ ನೀಡುತ್ತವೆ. ಇದಕ್ಕಾಗಿ 289 ಸ್ಕೀಂಗಳಿವೆ. ಆದರೆ ಹಣವನ್ನು ಎಲ್ಲಿ ಖರ್ಚು ಮಾಡಲಾಗಿದೆ ಎಂಬುದು ಮಾತ್ರ ಇಂದಿಗೂ ನಿಗೂಢವಾಗಿದೆ.

ಒಂದೊಮ್ಮೆ ಈ ಬಗ್ಗೆ ಪ್ರಶ್ನೆ ಕೇಳಿದರೂ ಈ ಯೋಜನೆಗೆ ಸಾಂವಿಧಾನಿಕ ಅಥವಾ ಕಾನೂನಾತ್ಮಕ ಯೋಜನೆಯಲ್ಲ ಎಂದು ಹೇಳಬಹುದು. ಈ ಕಾರಣಕ್ಕೆ ಈ ಹಣವನ್ನು ಬೇರೆ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗಿದೆ ಎಂದು ವಾದಿಸಬಹುದು.

ಆದರೆ ಇದನ್ನು ಮಾನವೀಯ ನಡೆ ಎಂದು ಪರಿಗಣಿಸಬಹುದೇ? ಒಂದು ಚಟುವಟಿಕೆಗಾಗಿ ಮೀಸಲಿಟ್ಟ ಹಣವನ್ನು ಅದಕ್ಕೆ ತದ್ವಿರುದ್ಧವಾದ ಯೋಜನೆಗಳಿಗೆ ಬಳಸುವುದು ಎಷ್ಟು ಸರಿ? ಇದನ್ನು ನೈತಿಕ ಅಪರಾಧ ಎಂದು ಕರೆಯಬೇಕೇ ಅಥವಾ ಭ್ರಷ್ಟಾಚಾರ ಎನ್ನಬೇಕೇ? ಉತ್ತರ ನಿಮಿಗೆ ಬಿಟ್ಟದ್ದು.

(ಸಂಜಯ್‌ ಬಸು, ನೀರಜ್‌ ಕುಮಾರ್‌ ಮತ್ತು ಶಶಿ ಶೇಖರ್‌ ಬರೆದ ವಾದ ಪರಮೋಶಿ ಪುಸ್ತಕದ ಅಧ್ಯಾಯವೊಮದರ ಸಂಕ್ಷಿಪ್ತ ಅನುವಾದವಿದು. ಕೃಪೆ: ದಿ ವೈರ್‌)