samachara
www.samachara.com
ಲೋಕ ಸಮರದ ವಿಧ್ಯುಕ್ತ ಆರಂಭ: 20 ರಾಜ್ಯಗಳ 91 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ
COVER STORY

ಲೋಕ ಸಮರದ ವಿಧ್ಯುಕ್ತ ಆರಂಭ: 20 ರಾಜ್ಯಗಳ 91 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ

ಒಟ್ಟು 91 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು 3 ರಾಜ್ಯಗಳ ವಿಧಾನಸಭೆಗಳಿಗೂ ಮತದಾನ ಜಾರಿಯಲ್ಲಿದೆ. ಆಂಧ್ರ ಪ್ರದೇಶ ವಿಧಾನಸಭೆಯ 175 ಸ್ಥಾನಗಳು, ಸಿಕ್ಕಿಂನ 32 ಮತ್ತು ಒಡಿಶಾದ 147ರಲ್ಲಿ 28 ಅಸೆಂಬ್ಲಿ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

Team Samachara

ಬಿರುಸಿನ ಪ್ರಚಾರ, ಸೋಲು ಗೆಲುವಿನ ಲೆಕ್ಕಾಚಾರ ಮತ್ತು ಆಯಾ ಪಕ್ಷಗಳ ಅಪಾರ ನಿರೀಕ್ಷೆಯ ನಡುವೆ ಜಗತ್ತಿನ ಅತೀ ದೊಡ್ಡ ಚುನಾವಣೆಗೆ ಮತದಾನ ಆರಂಭಗೊಂಡಿದೆ.

ಒಟ್ಟು ಏಳು ಹಂತಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಗುರುವಾರ) 18 ರಾಜ್ಯ ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿದೆ.

ಒಟ್ಟು 91 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು 3 ರಾಜ್ಯಗಳ ವಿಧಾನಸಭೆಗಳಿಗೂ ಮತದಾನ ಜಾರಿಯಲ್ಲಿದೆ. ಆಂಧ್ರ ಪ್ರದೇಶ ವಿಧಾನಸಭೆಯ ಎಲ್ಲಾ 175 ಸ್ಥಾನಗಳು, ಸಿಕ್ಕಿಂನ 32 ಮತ್ತು ಒಡಿಶಾದ 147ರಲ್ಲಿ 28 ಅಸೆಂಬ್ಲಿ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

ಭಯೋತ್ಪಾದನೆಯಿಂದ ನಲುಗಿರುವ ಜಮ್ಮು ಮತ್ತು ಕಾಶ್ಮೀರ ಹಾಗೂ ನಕ್ಸಲ್‌ ಪೀಡಿತ ಛತ್ತೀಸ್‌ಗಢದಲ್ಲಿಯೂ ಇಂದು ಮತದಾನ ನಡೆಯುತ್ತಿದ್ದು, ಎರಡು ದಿನದ ಹಿಂದೆ ಇಲ್ಲಿನ ದಾಂತೆವಾಡದಲ್ಲಿ ಬಿಜೆಪಿ ಶಾಸಕರೊಬ್ಬರನ್ನು ನಕ್ಸಲರು ಕೊಂದು ಹಾಕಿರುವ ಹಿನ್ನೆಲೆಯಲ್ಲಿ ಇಲ್ಲಿನ ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಇನ್ನು ಈಶಾನ್ಯ ಭಾರತದ 25 ಲೋಕಸಭಾ ಕ್ಷೇತ್ರಗಳ ಪೈಕಿ 14ರಲ್ಲಿ ಇಂದು ಮತದಾನ ನಡೆಯುತ್ತಿದ್ದು, ಇದರಲ್ಲಿ ಅರುಣಾಚಲ ಪ್ರದೇಶದ 2, ಅಸ್ಸಾಂ 5, ನಾಗಾಲ್ಯಾಂಡ್‌, ಮಣಿಪುರ, ಮಿಜೋರಾಂ, ಸಿಕ್ಕಿಂ, ಮೇಘಾಲಯ, ತ್ರಿಪುರದ ತಲಾ 1 ಕ್ಷೇತ್ರಗಳು ಸೇರಿವೆ. ಆಂಧ್ರ ಪ್ರದೇಶದ 25, ತೆಲಂಗಾಣದ 17, ಬಿಹಾರದ 4, ಮಹಾರಾಷ್ಟ್ರದ 7, ಒಡಿಶಾದ 4, ಪಶ್ಚಿಮ ಬಂಗಾಳದ 2, ಛತ್ತೀಸ್‌ಗಢ, ಲಕ್ಷದ್ವೀಪ ಮತ್ತು ಅಂಡಮಾನ್‌ ನಿಕೋಬಾರ್‌ನ ತಲಾ 1, ಜಮ್ಮು ಮತ್ತು ಕಾಶ್ಮೀರದ 2, ಉತ್ತರಾಖಂಡ್‌ನ 5 ಸ್ಥಾನಗಳಿಗೆ ಮತ ಚಲಾವಣೆ ಜಾರಿಯಲ್ಲಿದೆ.

ಮೊದಲ ಹಂತದ ಚುನಾವಣೆ ನಡೆಯುತ್ತಿರುವ ಸ್ಥಳಗಳು.
ಮೊದಲ ಹಂತದ ಚುನಾವಣೆ ನಡೆಯುತ್ತಿರುವ ಸ್ಥಳಗಳು.
/ಎನ್‌ಡಿಟಿವಿ

ಪಶ್ಚಿಮ ಉತ್ತರ ಪ್ರದೇಶದ 8 ಲೋಕಸಭಾ ಸ್ಥಾನಗಳಲ್ಲಿ ಇಂದು ಚುನಾವಣೆ ನಡೆಯುತ್ತಿದ್ದು, ಅತ್ಯಂತ ಕುತೂಹಲದಿಂದ ಇದನ್ನು ಗಮನಿಸಲಾಗುತ್ತಿದೆ.

ಮೂವರು ಕೇಂದ್ರ ಸಚಿವರಾದ ವಿ.ಕೆ. ಸಿಂಗ್‌ (ಗಾಜಿಯಾಬಾದ್‌), ಮಹೇಶ್‌ ಶರ್ಮಾ (ಗೌತಮ್‌ ಬುದ್ಧ ನಗರ) ಮತ್ತು ಸತ್ಯಪಾಲ್‌ ಸಿಂಗ್‌ (ಬಗ್ಫಟ್‌) ಇಲ್ಲಿ ಸ್ಪರ್ಧಿಸುತ್ತಿದ್ದಾರೆ. ಜತೆಗೆ ಇದು ಮಹಾಘಟಬಂಧನ್‌ ಮೈತ್ರಿಕೂಟ ಕಟ್ಟಿಕೊಂಡಿರುವ ಮಯಾವತಿಯವರ ಬಿಎಸ್‌ಪಿ, ಅಖಿಲೇಶ್‌ ಯಾದವ್‌ರ ಎಸ್‌ಪಿ ಮತ್ತು ಅಜಿತ್‌ ಸಿಂಗ್‌ರ ಆರ್‌ಎಲ್‌ಡಿ ಪಾಲಿಗೆ ಮೊದಲ ಅಗ್ನಿ ಪರೀಕ್ಷೆಯಾಗಿದೆ.

ಕಣದಲ್ಲಿ ಇನ್ನೂ ಕೆಲವು ಘಟಾನುಘಟಿಗಳಿದ್ದು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಹೈದರಾಬಾದ್‌ನಿಂದ ಸ್ಪರ್ಧಿಸುತ್ತಿದ್ದರೆ, ನಿತಿನ್‌ ಗಡ್ಕರಿ ನಾಗಪುರದಿಂದ ಕಣಕ್ಕಿಳಿದಿದ್ದಾರೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್‌ ಚಂದ್ರಬಾಬು ನಾಯ್ಡು ಕುಪ್ಪಮ್‌ನಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಭಾವಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎಂದೇ ಬಿಂಬಿಸಲ್ಪಿಟ್ಟಿರುವ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಪುಲಿವೆಂದುಲ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ ಬಯಸಿದ್ದಾರೆ.

ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಪುತ್ರ ಚಿರಾಗ್‌ ಪಾಸ್ವಾನ್‌ ಜಮೂಯಿನಿಂದ ಸ್ಪರ್ಧಿಸುತ್ತಿದ್ದರೆ, ಕೇಂದ್ರ ಸಚಿವ ಕಿರಣ್‌ ರಿಜಿಜು ಅರುಣಾಚಲ ಪಶ್ಚಿಮದಿಂದ, ಆರ್‌ಎಲ್‌ಡಿಯ ಅಜಿತ್‌ ಸಿಂಗ್‌ ಮುಜಫ್ಫರ್‌ ನಗರದಿಂದ ಲೋಕಸಭೆಗೆ ಪ್ರವೇಶ ಗಿಟ್ಟಿಸಲು ಮುಂದಾಗಿದ್ದಾರೆ.

ಇದು ಇಂದಿನ ಮತದಾನವಾದರೆ ಎರಡನೇ ಹಂತದ ಮತದಾನ ಕರ್ನಾಟಕದಲ್ಲಿ ನಡೆಯಲಿದೆ. ರಾಜ್ಯದಲ್ಲಿ ಮೊದಲ ಹಂತದ ಮತದಾನ ದಕ್ಷಿಣದ 14 ಕ್ಷೇತ್ರಗಳಲ್ಲಿ ಏಪ್ರಿಲ್‌ 18ರಂದು ನಡೆಯಲಿದೆ. ಇನ್ನುಳಿದ 14 ಕ್ಷೇತ್ರಗಳಲ್ಲಿ ಏಪ್ರಿಲ್‌ 23ರಂದು ಜನರು ಮತ ಚಲಾಯಿಸಲಿದ್ದಾರೆ ನಡೆಯಲಿದೆ.

ಒಟ್ಟಾರೆ ಮೇ 19ರಂದು 7ನೇ ಹಂತದ ಮತದಾನ ಪೂರ್ಣಗೊಳ್ಳಲಿದ್ದು ಮೇ 23ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.