samachara
www.samachara.com
ಉಗಾದಿಗೆ ಸದ್ದು ಮಾಡಿದ ಮಾರ್ಗದರ್ಶಕ; 40ರ ಹರೆಯದ ಬಿಜೆಪಿಗೆ ಅರ್ಥವಾಗುತ್ತಾ ‘ನೀತಿಪಾಠ’?
COVER STORY

ಉಗಾದಿಗೆ ಸದ್ದು ಮಾಡಿದ ಮಾರ್ಗದರ್ಶಕ; 40ರ ಹರೆಯದ ಬಿಜೆಪಿಗೆ ಅರ್ಥವಾಗುತ್ತಾ ‘ನೀತಿಪಾಠ’?

ಮೌನ ಮುರಿದಿರುವ ಭೀಷ್ಮ, ಇದು ಬಿಜೆಪಿಯ ಸಿದ್ಧಾಂತವಲ್ಲ ಎಂಬುದಾಗಿ ಯುಗಾದಿಯಂದೇ 40ನೇ ವಸಂತಕ್ಕೆ ಕಾಲಿಡಲಿರುವ ಬಿಜೆಪಿ ಮತ್ತು ಅದರ ನಾಯಕರಿಗೆ ತುಸು ಖಾರವಾಗಿಯೇ ಬುದ್ಧಿ ಹೇಳಿದ್ದಾರೆ. ಆದರೆ

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಕಳೆದ 24 ಗಂಟೆಗಳಲ್ಲಿ ಈ ದೇಶದಲ್ಲಿ ಇಬ್ಬರು ‘ಇನ್ನೂ ಜೀವಂತವಾಗಿದ್ದೇವೆ’ ಎಂಬುದನ್ನು ತೋರಿಸಿಕೊಂಡಿದ್ದಾರೆ. ಅಕ್ಷರಶಃ ತಾನೇ ಕಟ್ಟಿ ಬೆಳೆಸಿದ ಬಿಜೆಪಿ ಪಕ್ಷದಲ್ಲಿ ಮೂಲೆಗುಂಪಾಗಿದ್ದ ಎಲ್‌. ಕೆ. ಅಡ್ವಾಣಿ ಬ್ಲಾಗ್‌ ಬರವಣಿಗೆ ಮೂಲಕ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಈ ಮೂಲಕ ಹೆಚ್ಚು ಕಡಿಮೆ ಮುಗಿದೇ ಹೋಗಿದ್ದ ‘ಬ್ಲಾಗ್‌’ ಎಂಬ ವೇದಿಕೆ ಯುಗಾದಿಗೂ ಮುನ್ನ ಸುದ್ದಿ ಮಾಧ್ಯಮಗಳಿಗೆ ಭೂರಿ ಭೋಜನ ನೀಡಿದೆ.

ಕಾಂಗ್ರೆಸ್‌ ಪ್ರಣಾಳಿಕೆಯನ್ನು ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಸ್ವತಃ ಹಾಲಿ ಪ್ರಧಾನಿ ನರೇಂದ್ರ ಮೋದಿ ದೇಶದ್ರೋಹಿಗಳು ಎಂದು ಜರೆಯುತ್ತಿರುವಾಗ, ಮಾರ್ಗದರ್ಶಕ (ಮಂಡಳಿ ಸದಸ್ಯ) ಅಡ್ವಾಣಿ ಬ್ಲಾಗ್‌ನಲ್ಲಿ ನೀತಿ ಪಾಠ ಹೇಳಿದ್ದಾರೆ. “ರಾಜಕೀಯವಾಗಿ ನಮ್ಮ ವಿಚಾರಧಾರೆಗಳನ್ನು ಒಪ್ಪದವರನ್ನು ಬಿಜೆಪಿ ಎಂದೂ ದೇಶದ್ರೋಹಿಗಳು, ಶತ್ರುಗಳು ಎಂಬುದಾಗಿ ನೋಡಿಲ್ಲ,” ಎಂಬುದನ್ನು ಜ್ಞಾಪಿಸಿದ್ದಾರೆ.

“ವಿಶಾಲ ರಾಷ್ಟ್ರೀಯ ವ್ಯವಸ್ಥೆಯಲ್ಲಿ ಮತ್ತು ಪಕ್ಷದೊಳಗೆ ಪ್ರಜಾಪ್ರಭುತ್ವ ಹಾಗೂ ಪ್ರಜಾಪ್ರಭುತ್ವದ ಸಂಪ್ರದಾಯಗಳ ರಕ್ಷಣೆ ಬಿಜೆಪಿಯ ಹೆಮ್ಮೆಯ ಹೆಗ್ಗುರುತು,” ಎಂಬುದನ್ನು ಹೊಸ ಜಮಾನದ ಬಿಜೆಪಿ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ನೆನಪಿಸಿದ್ದಾರೆ.

ಅಂದ ಹಾಗೆ ಬಿಜೆಪಿಯ ಉಕ್ಕಿನ ಮನುಷ್ಯ ಎಂದು ಕರೆಸಿಕೊಳ್ಳುತ್ತಿದ್ದ ಎಲ್‌. ಕೆ. ಅಡ್ವಾಣಿ ಭಾರತೀಯ ಜನತಾ ಪಕ್ಷ ಮತ್ತು ಅದರ ಹಿಂದಿನ ಸ್ವರೂಪ ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದವರು. 2009ರಲ್ಲಿ ಕಮಲ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿದ್ದವರು. ಆದರೆ 2014ರ ಹೊತ್ತಿಗೆ ಅಡ್ವಾಣಿ ನೀಲಿ ಕಣ್ಣಿನ ಹುಡುಗ ನರೇಂದ್ರ ಮೋದಿ ಅವರಿಗೆ ನಿರ್ಗಮನದ ಬಾಗಿಲು ತೆರೆದಿಟ್ಟರು. ಅಲ್ಲಿಂದ ನಂತರ ಬಿಜೆಪಿಯೊಳಗೆ ಅವರು ಇದ್ದೂ ಇಲ್ಲದಾದರು.

ಆದರೆ ಇದಕ್ಕಿಂತ ಮೊದಲು ಅಡ್ವಾಣಿ ಹೀಗಿರಲಿಲ್ಲ. 2014ರ ವರೆಗೂ ಅಟಲ್ ಬಿಹಾರಿ ವಾಜಪೇಯಿ ಬಿಟ್ಟರೆ ಬಿಜೆಪಿ ನಾಯಕರು, ಕಾರ್ಯಕರ್ತರಿಗೆ ಮೇರು ನಾಯಕರಾಗಿದ್ದವರು ಇದೇ ಎಲ್‌. ಕೆ. ಅಡ್ವಾಣಿ. ಅವರ ಬಗ್ಗೆ ಅಪವಾದಗಳೇನೇ ಇರಬಹುದು; ಬಿಜೆಪಿ ಪಾಲಿಗೆ ಅವರೊಬ್ಬ ಅತ್ಯುತ್ತಮ ಸಂಘಟಕ ಎಂಬುದರಲ್ಲಿ ಎರಡು ಮಾತಿಲ್ಲ.

ಈ ದೇಶದಲ್ಲಿ ಎಮ್ಮೆ, ಕತ್ತೆಯನ್ನು ನಿಲ್ಲಿಸಿದರೂ ಕಾಂಗ್ರೆಸ್‌ ಗೆಲ್ಲುತ್ತದೆ ಎಂಬ ಸ್ಥಿತಿಯಲ್ಲಿ ಪಕ್ಷವೊಂದನ್ನು ಹುಟ್ಟುಹಾಕಿ ಕೇವಲ 15 ವರ್ಷದಲ್ಲಿ ಅಧಿಕಾರಕ್ಕೇರಿಸಿದವರು ಅವರು. 1984ರಲ್ಲಿ ಎರಡೇ ಎರಡು ಲೋಕಸಭಾ ಸ್ಥಾನಗಳಿಂದ ಆರಂಭವಾದ ಬಿಜೆಪಿಯ ಯಾತ್ರೆಯನ್ನು ತಮ್ಮ ಅವಧಿಯಲ್ಲಿ 1998 ಮತ್ತು 1999ರಲ್ಲಿ ಗರಿಷ್ಠ 182 ಸ್ಥಾನಗಳವರೆಗೆ ತಂದು ನಿಲ್ಲಿಸಿದ್ದರು.

ಹೀಗೆ 1999ರಲ್ಲಿ ಪಕ್ಷ ಅಧಿಕಾರಕ್ಕೇರಿದಾಗ ಅವರು ಉಪ ಪ್ರಧಾನಿಯಾಗಿದ್ದರು. ಆದರೆ 2004ರ ಮೇನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅನಿರೀಕ್ಷಿತ ಸೋಲು ಅವರನ್ನು ಅಧಿಕಾರದಿಂದ ಶಾಶ್ವತವಾಗಿ ಕೆಳಗಿಳಿಸಿತು.

ಕರಾಚಿಯಿಂದ ದೆಹಲಿವರೆಗೆ:

ಈಗಿನ ಪಾಕಿಸ್ತಾನದ ಕರಾಚಿಯಲ್ಲಿ ಹುಟ್ಟಿ ಅಲ್ಲಿಂದ ದೆಹಲಿ ಗದ್ದುಗೆ ಸಮೀಪದವರೆಗೆ ಬಂದ ಎಲ್‌.ಕೆ. ಅಡ್ವಾಣಿ ಹಾದಿ ಸುಲಭದ್ದೇನೂ ಆಗಿರಲಿಲ್ಲ.

ಕರಾಚಿಯಲ್ಲಿರುವಾಗಲೇ 1941ರಲ್ಲಿ ಅಡ್ವಾಣಿ ತಮ್ಮ 14ನೇ ವಯಸ್ಸಿನಲ್ಲಿ ಆರ್‌ಎಸ್‌ಎಸ್‌ ಸೇರಿದ್ದರು. ಅಲ್ಲಿ ಪೂರ್ಣ ಕಾಲಿಕ ಕಾರ್ಯಕರ್ತರಾಗಿ ಭಡ್ತಿ ಪಡೆದವರು ಕರಾಚಿ ಪ್ರದೇಶದಲ್ಲಿ ಶಾಖೆಗಳನ್ನು ನಡೆಸುತ್ತಿದ್ದರು.

1947ರಲ್ಲಿ ದೇಶ ವಿಭಜನೆಯಾದಾಗ ಅವರ ಕುಟುಂಬ ಭಾರತಕ್ಕೆ ವಲಸೆ ಬಂತು. ಭಾರತಕ್ಕೆ ಬಂದ ನಂತರವೂ ತಮ್ಮ ಕೆಲಸ ಮುಂದುವರಿಸಿದ ಅವರು ರಾಜಸ್ಥಾನದ ಮಸ್ತ್ಯ-ಅಲ್ವಾರ್‌ನಲ್ಲಿ ಪ್ರಚಾರಕರಾಗಿ ನೇಮಕಗೊಂಡರು. ಸಂಘದಲ್ಲಿ ತಮ್ಮ ಸಾಮರ್ಥ್ಯಗಳನ್ನು ಒರೆಗೆ ಹಚ್ಚಿದ ಅಡ್ವಾಣಿ ಮುಂದೆ ಸಕ್ರಿಯ ರಾಜಕೀಯಕ್ಕೆ ಧುಮುಕಿದ್ದು 1952ರಲ್ಲಿ.

1951ರಲ್ಲಿ ದೇಶದ ಮೊದಲ ಪ್ರಧಾನಿ ಜವಹರ್‌ ಲಾಲ್‌ ನೆಹರೂ ಸಂಪುಟದಲ್ಲಿ ಸಚಿವರಾಗಿದ್ದ ಶ್ಯಾಮ್‌ ಪ್ರಸಾದ್‌ ಭಾರತೀಯ ಜನಸಂಘ ಸ್ಥಾಪಿಸಿದಾಗ ಅಡ್ವಾಣಿ ಹೋಗಿ ಅದರಲ್ಲಿ ಸೇರಿಕೊಂಡರು. ಪಕ್ಷದ ಅಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಸ್‌. ಎಸ್‌. ಭಂಡಾರಿಗೆ ಕಾರ್ಯದರ್ಶಿಯಾಗಿ ಅಡ್ವಾಣಿಯವರನ್ನು ನೇಮಿಸಲಾಯಿತು. ಹಾಗೆ ಅವರು ದೆಹಲಿ ರೈಲು ಹತ್ತಿದರು. ಅಲ್ಲಿಂದ ಅವರು ದೆಹಲಿ ಬಿಟ್ಟು ಕದಲಲೇ ಇಲ್ಲ.

1957ರಲ್ಲಿ ದೆಹಲಿಗೆ ಬಂದವರು ಪಕ್ಷದ ಸಂಸದೀಯ ವ್ಯವಹಾರಗಳ ಉಸ್ತುವಾರಿ ಹೊತ್ತುಕೊಂಡರು. ಮುಂದೆ ದೆಹಲಿ ಜನಸಂಘದ ಅಧ್ಯಕ್ಷರಾದರು. 1967 ಚುನಾವಣೆ ನಂತರ ದೆಹಲಿ ಮಹಾನಗರ ಪಾಲಿಕೆ ಮುಖ್ಯಸ್ಥರಾದರು. ಈ ಎಲ್ಲಾ ಹಾದಿಯಲ್ಲೂ ಅವರು ತಮ್ಮ ಮಾತೃ ಸಂಸ್ಥೆಯ ಜತೆಗಿನ ನಂಟನ್ನು ಕಳೆದುಕೊಂಡಿರಲಿಲ್ಲ. ದೆಹಲಿಯಲ್ಲಿದ್ದಾಗಲೇ ಆರ್‌ಎಸ್‌ಎಸ್‌ ಮುಖವಾಣಿ ‘ಆರ್ಗನೈಸರ್‌’ ಸಂಪಾದನೆಯ ಕೆಲಸವನ್ನು ನಿರ್ವಹಿಸುತ್ತಿದ್ದರು.

ಇಲ್ಲಿಯವರೆಗೆ ಅಧಿಕಾರದಿಂದ ದೂರವೇ ಉಳಿದ ಅಡ್ವಾಣಿಗೆ ಮುಂದೆ ಅದೂ ಒದಗಿ ಬಂತು. 1966ರಲ್ಲಿ ಜನಸಂಘದ ರಾಷ್ಟ್ರೀಯ ಕಾರ್ಯಕಾರಿಣಿಯೊಳಕ್ಕೆ ಅಡ್ವಾಣಿಯನ್ನು ಸೇರಿಸಿಕೊಳ್ಳಲಾಯಿತು. ಇದಾಗಿ ನಾಲ್ಕೇ ವರ್ಷಕ್ಕೆ 1970ರಲ್ಲಿ ಅವರು ದೆಹಲಿಯಿಂದ ರಾಜ್ಯಸಭೆ ಪ್ರವೇಶಿಸಿದರು. ಅಧಿಕಾರದೊಂದಿಗೆ ಪಕ್ಷದಲ್ಲಿ ಮತ್ತಷ್ಟು ಬೆಳೆದ ಅಡ್ವಾಣಿ 73ರಲ್ಲಿ ಜನಸಂಘದ ಅಧ್ಯಕ್ಷರಾದರು. 76ರಲ್ಲಿ ಮತ್ತೊಮ್ಮೆ ಗುಜರಾತ್‌ನಿಂದ ರಾಜ್ಯಸಬೆ ಪ್ರವೇಶಿಸಿದ ಅವರಿಗೆ ಮುಂದೆ ಜೈಲು ವಾಸ ಕಾದು ಕುಳಿತಿತ್ತು.

ತುರ್ತು ಪರಿಸ್ಥಿತಿಯಲ್ಲಿ ಜೈಲು ವಾಸ ಅನುಭವಿಸಿ ಬೆಂಗಳೂರು ಜೈಲಿನಿಂದ ಹೊರ ಬರುತ್ತಿರುವ ಅಡ್ವಾಣಿ ಮತ್ತು ಕರ್ನಾಟಕ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ.
ತುರ್ತು ಪರಿಸ್ಥಿತಿಯಲ್ಲಿ ಜೈಲು ವಾಸ ಅನುಭವಿಸಿ ಬೆಂಗಳೂರು ಜೈಲಿನಿಂದ ಹೊರ ಬರುತ್ತಿರುವ ಅಡ್ವಾಣಿ ಮತ್ತು ಕರ್ನಾಟಕ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ.
/ಡೆಕ್ಕನ್‌ ಕ್ರಾನಿಕಲ್‌

1975ರಲ್ಲಿ ಇಂದಿರಾ ಗಾಂಧಿ ಸರಕಾರ ತುರ್ತು ಪರಿಸ್ಥಿತಿ ಹೇರಿದಾಗ ಅಡ್ವಾಣಿ ಜೈಲು ಪಾಲಾದರು. ಸುಮಾರು 19 ತಿಂಗಳ ಕಾಲ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಅವರನ್ನು ಬಂಧಿಸಿಡಲಾಯಿತು. 1977ರಲ್ಲಿ ತುರ್ತು ಪರಿಸ್ಥಿತಿ ಕೊನೆಯಾದಾಗ ತಮ್ಮ ಸಹವರ್ತಿ ಅಟಲ್‌ ಬಿಹಾರಿ ವಾಜಪೇಯಿ ಜತೆ ಸೇರಿ 1977ರಲ್ಲಿ ಜನತಾ ಪಕ್ಷದಿಂದ ಚುನಾವಣೆಗೆ ಧುಮುಕಿದರು. ಚುನಾವಣೆ ಗೆದ್ದ ಅಡ್ವಾಣಿ ಮೊದಲ ಯತ್ನದಲ್ಲೇ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರೂ ಆದರು.

ಜನತಾ ಪಕ್ಷದಿಂದ ಜನಸಂಘ ಹೊರ ಬಂದು 1980ರಲ್ಲಿ ಹೊಸ ಪಕ್ಷ ಸ್ಥಾಪನೆಯಾಯಿತು. ಅದರ ಹೆಸರೇ ಭಾರತೀಯ ಜನತಾ ಪಾರ್ಟಿ (ಬಿಜೆಪಿ). ಅಟಲ್‌ ಬಿಹಾರಿ ವಾಜಪೇಯಿ ಇದರ ಮೊದಲ ಅಧ್ಯಕ್ಷರಾದರೆ ಇದರಲ್ಲಿ ಅಡ್ವಾಣಿ ಹಿಡಿತ ಪ್ರಬಲವಾಗಿತ್ತು. 1982ರಲ್ಲಿ ಬಿಜೆಪಿಯಿಂದ ಮಧ್ಯ ಪ್ರದೇಶ ರಾಜ್ಯದ ಮೂಲಕ ರಾಜ್ಯಸಭೆ ಪ್ರವೇಶಿಸಿದ ಅವರು ಪಕ್ಷ ಕಟ್ಟುವುದರಲ್ಲೇ ಅವಿರತ ತೊಡಗಿಸಿಕೊಂಡರು.

ಹೀಗಿದ್ದೂ 1984ರ ಚುನಾವಣೆಯಲ್ಲಿ ಪಕ್ಷ ಕೇವಲ ಎರಡು ಸ್ಥಾನಗಳನ್ನು ಮಾತ್ರ ಗೆದ್ದಿತು. ಎಲ್ಲರನ್ನೂ ಒಳಗೊಳ್ಳುವ ಅಟಲ್‌ ಚಿಂತನೆ ಚುನಾವಣೆಯಲ್ಲಿ ಫಲ ನೀಡಲಿಲ್ಲ. ಕೊನೆಗೆ ಅವರ ಸ್ಥಾನಕ್ಕೆ ಅಡ್ವಾಣಿ ನೇಮಕಗೊಂಡರು. ಪಕ್ಷದ ಅಧ್ಯಕ್ಷರಾದ ಅಡ್ವಾಣಿ ಆಕ್ರಮಣಕಾರಿ ನೀತಿಗೆ ಒತ್ತು ನೀಡಿದರು.

ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ತಮ್ಮ ಪಕ್ಷದ ಅಜೆಂಡಾವನ್ನಾಗಿ ಮಾಡಿಕೊಂಡರು. ಇದೇ ಉದ್ದೇಶದಿಂದ 1990ರ ಸೆಪ್ಟೆಂಬರ್‌ನಿಂದ ಅಕ್ಟೋಬರ್‌ವರಗೆ ದೇಶದಾದ್ಯಂತ ‘ರಾಮ ರಥ ಯಾತ್ರೆ’ ಕೈಗೊಂಡರು. ಇದು ಅಡ್ವಾಣಿ ಮತ್ತು ಬಿಜೆಪಿ ಪಾಲಿನ ಮೈಲುಗಲ್ಲಿನ ಘಟನೆಯಾಯಿತು.

ರಾಮ ರಥ ಯಾತ್ರೆಯಲ್ಲಿ ಅಡ್ವಾಣಿಗೆ ಮೈಕು ಹಿಡಿದಿರುವ ಹಾಲಿ ಪ್ರಧಾನಿ ನರೇಂದ್ರ ಮೋದಿ.
ರಾಮ ರಥ ಯಾತ್ರೆಯಲ್ಲಿ ಅಡ್ವಾಣಿಗೆ ಮೈಕು ಹಿಡಿದಿರುವ ಹಾಲಿ ಪ್ರಧಾನಿ ನರೇಂದ್ರ ಮೋದಿ.
/guruprasad.net

ಈ ರಥ ಯಾತ್ರೆ ಪರಿಣಾಮ ದೇಶದಲ್ಲಿ ಬಾಬರಿ ಮಸೀದಿ ವಿರುದ್ಧ ಹುಟ್ಟಿಕೊಂಡ ಆಕ್ರೋಶದ ಕಿಡಿ 1993ರ ಡಿಸೆಂಬರ್‌ 6ರಂದು ಬಾಬ್ರಿ ಮಸೀದಿ ಧ್ವಂಸದೊಂದಿಗೆ ಹೊಸ ಎತ್ತರವನ್ನು ಮುಟ್ಟಿತು. ಬೆನ್ನಿಗೆ ದೇಶದಲ್ಲಿ ಹಿಂದೂ-ಮುಸ್ಲಿಂ ಕೋಮು ದಳ್ಳುರಿ ಹುಟ್ಟಿಕೊಂಡಿತು.

ಅತ್ತ ಬಾಬರಿ ಮಸೀದಿ ಪತನವಾದರೆ ಅಡ್ವಾಣಿ ಬಿದ್ದ ಇಟ್ಟಿಗೆಗಳ ಮೇಲೆ ಮತಗಳನ್ನು ಜೋಡಿಸುತ್ತಾ ಹೋದರು. ಅವರ ಲೆಕ್ಕಾಚಾರ ತಪ್ಪಾಗಲಿಲ್ಲ. 1996ರಲ್ಲಿ ಬಿಜೆಪಿ ಅಧಿಕಾರದ ರುಚಿ ಅನುಭವಿಸಿತು. ಕೊನೆಗೆ 1998ರ ಪೂರ್ಣ ಪ್ರಮಾಣದ ಭೋಜನವೇ ಸಿಕ್ಕಿತು. ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ರಚನೆಯಾಯಿತು. ಅದರಲ್ಲಿ ಅಡ್ವಾಣಿ ನಂಬರ್‌ 2 ನಾಯಕನಾಗಿ ಗೃಹ ಸಚಿವರಾದರು. ಉಪ ಪ್ರಧಾನಿ ಹುದ್ದೆಯನ್ನೂ ಸೃಷ್ಟಿಸಿಕೊಂಡರು.

ಈ ವೇಳೆ ನಡೆದ ಗೋಧ್ರಾ ಗಲಭೆ ಸಂದರ್ಭದಲ್ಲಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯ ರಾಜೀನಾಮೆ ಪಡೆಯುವಂತೆ ಅಟಲ್‌ ಬಿಹಾರಿ ವಾಜಪೇಯಿ ಅಡ್ವಾಣಿಯನ್ನು ಅಹಮದಾಬಾದ್‌ಗೆ ಅಟ್ಟಿದರು. ಆದರೆ ಗುಜರಾತ್‌ ರಾಜಧಾನಿಯಲ್ಲಿ ಇಳಿದ ಅಡ್ವಾಣಿ ರಾಜೀನಾಮೆ ಪಡೆಯುವ ಬದಲು ಶಿಷ್ಯನಿಗೆ ಬುದ್ಧಿ ಮಾತು ಹೇಳಿ ದೆಹಲಿಗೆ ಮರಳಿದರು. ಮುಂದೊಂದು ದಿನ ಇದೇ ಶಿಷ್ಯ ತನ್ನನ್ನು ಮೂಲೆಗುಂಪು ಮಾಡುತ್ತಾನೆ ಎಂಬ ಅರಿವು ಅವತ್ತು ಅವರಿಗೆ ಇರಲಿಲ್ಲ.

2004-2019:

2004ರ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡು ಅಟಲ್ ಬಿಹಾರಿ ವಾಜಪೇಯಿ ತೆರೆ ಮರೆಗೆ ಸರಿದ ನಂತರ ಅಡ್ವಾಣಿ 2009ರಲ್ಲಿ ಪ್ರಧಾನಿ ರೇಸ್‌ಗೆ ಇಳಿದರು.

ಬಿಜೆಪಿಯ ಮೇರು ನಾಯಕರಾದ ಮುರಳಿ ಮನೋಹರ್‌ ಜೋಷಿ, ಲಾಲ್‌ ಕೃಷ್ಣ ಅಡ್ವಾಣಿ ಮತ್ತು ಅಟಲ್‌ ಬಿಹಾರಿ ವಾಜಪೇಯಿ. ಇವರಲ್ಲಿ ವಾಜಪೇಯಿ ಅಸುನೀಗಿದ್ದರೆ, ಜೋಷಿ ಮತ್ತು ಅಡ್ವಾಣಿಗೆ ಶಾ-ಮೋದಿ ಗ್ಯಾಂಗ್‌ ಜೀವಂತ ರಾಜಕೀಯ ಸಮಾಧಿ ತೋಡಿದೆ.
ಬಿಜೆಪಿಯ ಮೇರು ನಾಯಕರಾದ ಮುರಳಿ ಮನೋಹರ್‌ ಜೋಷಿ, ಲಾಲ್‌ ಕೃಷ್ಣ ಅಡ್ವಾಣಿ ಮತ್ತು ಅಟಲ್‌ ಬಿಹಾರಿ ವಾಜಪೇಯಿ. ಇವರಲ್ಲಿ ವಾಜಪೇಯಿ ಅಸುನೀಗಿದ್ದರೆ, ಜೋಷಿ ಮತ್ತು ಅಡ್ವಾಣಿಗೆ ಶಾ-ಮೋದಿ ಗ್ಯಾಂಗ್‌ ಜೀವಂತ ರಾಜಕೀಯ ಸಮಾಧಿ ತೋಡಿದೆ.
/ಐಬಿ ಟೈಮ್ಸ್‌

1998 ಮತ್ತು 99ರ ಚುನಾವಣೆಯಲ್ಲಿ ಏನೇ ತಿಪ್ಪರಲಾಗ ಹಾಕಿದರೂ ಬಿಜೆಪಿ ಸ್ಥಾನಗಳು 182ನ್ನು ಮೀರಿರಲಿಲ್ಲ. ಹಾಗಾಗಿ ಉಗ್ರ ಹಿಂದುತ್ವ ಪೂರ್ಣ ಪ್ರಮಾಣದ ಅಧಿಕಾರವನ್ನು ಬಿಜೆಪಿಗೆ ತಂದು ಕೊಡದು ಎಂಬುದು ಅಡ್ವಾಣಿಗೆ ಅರ್ಥವಾಗಿತ್ತು. ಹೀಗಾಗಿ ಈ ಬಾರಿ ಅವರ ವರಸೆಗಳು ಪೂರ್ತಿ ಬದಲಾಗಿದ್ದವು. ಮೊದಲಿನ ಉಗ್ರ ಮಾತುಗಳ ಜಾಗದಲ್ಲಿ ಮೃದು ಸ್ವಭಾವದ ಅಡ್ವಾಣಿ ನಿಂತಿದ್ದರು. ಅದಕ್ಕೆ ಉದಾಹರಣೆಯೇ 2005ರ ಜೂನ್‌ನಲ್ಲಿ ಅವರು ಕೈಗೊಂಡ ಪಾಕಿಸ್ತಾನ ಪ್ರವಾಸ.

ತಮ್ಮ ತವರು ಪಾಕಿಸ್ತಾನಕ್ಕೆ ಹೋದ ಅಡ್ವಾಣಿ ದೇಶದ ಸಂಸ್ಥಾಪಕ ಮಹಮ್ಮದ್‌ ಅಲಿ ಜಿನ್ನಾರನ್ನು ಬಾಯ್ತುಂಬ ಹಾಡಿ ಹೊಗಳಿದ್ದರು. ಜಾತ್ಯಾತೀತ ನಾಯಕ ಎಂದು ಬಿಚ್ಚು ಮಾತುಗಳನ್ನಾಡಿದರು. ಈ ಮೂಲಕ ಇಷ್ಟರವರೆಗೆ ಬಿಜೆಪಿ ನಿರ್ಲಕ್ಷ್ಯ ತಾಳುತ್ತಾ ಬಂದಿದ್ದ ಮತದಾರರತ್ತೂ ಒಲವಿನ ನೋಟ ಬೀರಲು ಯತ್ನಿಸಿದರು.

ಅಲ್ಲಿಂದ ಬಿಜೆಪಿಯ ಚಹರೆಯೇನೋ ಒಂದಷ್ಟು ಬದಲಾಯಿತು. ಆದರೆ ಪಕ್ಷದೊಳಗೆ ಅವರ ವಿರುದ್ಧ ಅಪಸ್ವರ ಕೇಳಿ ಬಂತು. ತಮ್ಮದೇ ಪಕ್ಷದಲ್ಲಿ ಅವರು ಮೂಲೆಗುಂಪಾದರು. ಪರಿಣಾಮ ಅಧ್ಯಕ್ಷರ ಹುದ್ದೆಯಿಂದ ಅನಿವಾರ್ಯವಾಗಿ ಕೆಳಗಿಳಿಯಬೇಕಾಗಿ ಬಂತು.

ಇದರ ನಡುವೆಯೂ ಹೊಸ ಉತ್ಸಾಹದಲ್ಲಿ ಅವರು 2009ರ ಪ್ರಧಾನಿ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದರು. ಇದಕ್ಕೊಂದು ರಥ ಯಾತ್ರೆ ಮಾಡಿದರು. ಯುವಕರನ್ನು ಸೆಳೆಯಲು ಒಂದಷ್ಟು ಸರ್ಕಸ್‌ ಮಾಡಿದರು. ಜಿಮ್‌ನಲ್ಲಿ ಬೆವರು ಹರಿಸಿದರು. ಆದರೆ 2009 ಚುನಾವಣೆ ಫಲಿತಾಂಶ ಬಂದಾಗ ಬಿಜೆಪಿ ಗ್ರಾಫ್‌ ಮತ್ತಷ್ಟು ಕೆಳಕ್ಕಿಳಿದಿತ್ತು. ಆ ಸೋಲು ಅಡ್ವಾಣಿ ರಾಜಕೀಯ ಭವಿಷ್ಯಕ್ಕೆ ಪೂರ್ಣ ಗ್ರಹಣ ಹಿಡಿಯುವಂತೆ ಮಾಡಿತು.

ಪ್ರಚಾರ ಸಭೆಯೊಂದರಲ್ಲಿ ಲಾಲ್‌ ಕೃಷ್ಣ ಅಡ್ವಾಣಿ.
ಪ್ರಚಾರ ಸಭೆಯೊಂದರಲ್ಲಿ ಲಾಲ್‌ ಕೃಷ್ಣ ಅಡ್ವಾಣಿ.
/ಸ್ಕ್ರಾಲ್‌ ಡಾಟ್‌ ಇನ್

ಅಲ್ಲಿಂದ ನಂತರ ಪಕ್ಷದ ಯುವ ಕಾರ್ಯಕರ್ತರ ಮೇಲೆ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿಯ ಪ್ರಭಾವ ಹೆಚ್ಚಾಗತೊಡಗಿತು. ಆ ಪ್ರಭಾವ ಹೆಚ್ಚಾದಷ್ಟು ಅಡ್ವಾಣಿ ಒಂದೊಂದೇ ಹೆಜ್ಜೆ ಹಿಂದೆ ಸರಿಯುತ್ತಿದ್ದರು.

ಅದು 2013ರ ಜೂನ್‌ ತಿಂಗಳ ಮೊದಲ ವಾರ...

ಗೋವಾದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಆರಂಭವಾಗಲು ಕೆಲವೇ ದಿನಗಳು ಬಾಕಿ ಇತ್ತು. ಮಾಜಿ ಬಿಜೆಪಿ ಅಧ್ಯಕ್ಷ ಮುರಳಿ ಮನೋಹರ್‌ ಜೋಶಿ ತುರ್ತಾಗಿ ಫೋನೆತ್ತಿಕೊಂಡು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎರಡನೇ ಪ್ರಭಾವಿ ನಾಯಕ ಸುರೇಶ್‌ ಭಯ್ಯಾಜಿ ಜೋಶಿಗೆ ಕರೆ ಮಾಡಿದರು. ಅವರಿಗೆ ನರೇಂದ್ರ ಮೋದಿಯನ್ನು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಸಂಬಂಧ ಅಡ್ವಾಣಿ ಹೊಂದಿದ್ದ ಅಸಮಧಾನವನ್ನು ಆರ್‌ಎಸ್‌ಎಸ್‌ಗೆ ತಿಳಿಸುವುದಿತ್ತು.

ಕರೆ ಮಾಡಿದವರೇ, "ಅಡ್ವಾಣಿ ಜತೆಗೆ ಮಾತನಾಡಿ. ನಡೆಯುತ್ತಿರುವ ಬೆಳವಣಿಗೆಯೆಲ್ಲಾ ಒಳ್ಳೆಯದಲ್ಲ," ಎಂಬ ಸಂದೇಶ ನೀಡಿದ್ದರು.

ಕಾರಣ ಇಷ್ಟೇ. ಮೋದಿಗೆ ಭಡ್ತಿ ನೀಡುತ್ತಿದ್ದಂತೆ ಅಡ್ವಾಣಿ ಬಂಡೇಳುತ್ತಾರೆ ಎಂಬುದು ಬಿಜೆಪಿ ನಾಯಕರ ಹೆದರಿಕೆಯಾಗಿತ್ತು. ಅದಕ್ಕೆ ಕಾರಣವೂ ಇತ್ತು. ಕೆಲವು ದಿನಗಳ ಮುಂಚೆ ಮಧ್ಯ ಪ್ರದೇಶದಲ್ಲಿ ಮಾತನಾಡಿದ್ದ ಅವರು ಅಲ್ಲಿನ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ರನ್ನು ಹಾಡಿ ಹೊಗಳಿದ್ದರು. ‘ವಿಧೇಯ, ಅಹಂಕಾರ ಗುಣವಿಲ್ಲದ ನಾಯಕ’ ಎಂಬುದಾಗಿ ಅವರನ್ನು ವಾಜಪೇಯಿ ಜತೆ ಹೋಲಿಸಿದ್ದರು.

ಹೀಗಾಗಿ ಜೋಶಿ ಸಂದೇಶದ ಗಂಭೀರತೆ ಅರಿತ ಭಯ್ಯಾಜಿ ಮರುದಿನವೇ ಅಂದರೆ ಜೂನ್‌ 7ರಂದು ದೆಹಲಿಯಲ್ಲಿ ಬಂದಿಳಿದರು. ಸಂಧಾನಕ್ಕೆ ಯತ್ನಿಸಿದರು.

ಅಷ್ಟೊತ್ತಿಗೆ ಮೋದಿ ಬಿಜೆಪಿ ಒಳಗೆ ತಮ್ಮ ಪ್ರಭಾವ ಬೆಳೆಸಿಯಾಗಿತ್ತು. ಪಕ್ಷಾಧ್ಯಕ್ಷ ರಾಜನಾಥ್‌ ಸಿಂಗ್‌ ಏನು ಮಾಡುವಂತಿರಲಿಲ್ಲ. ಗೋವಾ ಕಾರ್ಯಕಾರಣಿ ಆರಂಭವಾಗುತ್ತಿದ್ದಂತೆ ಮೋದಿ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡರು. ಅದು ಮುಂದಿನ ದಿನಗಳಲ್ಲಿ ಮೋದಿ ಪ್ರಧಾನಿ ಅಭ್ಯರ್ಥಿಯಾಗುವ ಸೂಚನೆ ಎಂಬುದು ಅಡ್ವಾಣಿಗೆ ಗೊತ್ತಿತ್ತು.

ಅಡ್ವಾಣಿ ಬಂಡಾಯವೆದ್ದು ಪಕ್ಷಕ್ಕೆ ರಾಜೀನಾಮೆ ಬಿಸಾಕಿದರು. ಅಷ್ಟೊತ್ತಿಗೆ ಕಾಲ ಮೀರಿಯಾಗಿತ್ತು. ಅಡ್ವಾಣಿ ಬಗ್ಗೆ ಕಾಳಜಿ ವಹಿಸುವವರು ಯಾರೂ ಇರಲಿಲ್ಲ. ನೋಡ ನೋಡುತ್ತಲೇ ಅಡ್ವಾಣಿ ಮೂಲೆಗುಂಪಾದರು. ಮೊದಲಿಗೆ ಬಿಜೆಪಿ ಮೇಲೆ ಮೋದಿ ಅಲೆ ಅಪ್ಪಳಿಸಿತು.

2014ರ ಚುನಾವಣೆ ಮುಗಿದಾಗ ಬಿಜೆಪಿ ಸ್ಪಷ್ಟ ಬಹುಮತ ಪಡೆದು ನರೇಂದ್ರ ಮೋದಿ ಪ್ರಧಾನಿಯಾದರು. ಅಷ್ಟರವರೆಗೆ ಅಡ್ವಾಣಿಗೆ ಸ್ವಲ್ಪವಾದರೂ ಗೌರವ ನೀಡುತ್ತಿದ್ದ ಮೋದಿ ಅಲ್ಲಿಂದ ನಂತರ ಅವರನ್ನು ಕಾಲ ಕಸಕ್ಕಿಂತ ಕೀಳಾಗಿ ನೋಡಲು ಆರಂಭಿಸಿದರು. ನೂರಾರು ಕ್ಯಾಮೆರಾಗಳ ಮುಂದೆಯೇ ತಮ್ಮ ಗುರುವಿಗೆ ಅವಮಾನಿಸಿದರು.

ಅಷ್ಟು ಮಾತ್ರವಲ್ಲ ಅಡ್ವಾಣಿಯಂಥ ಉಗ್ರ ಹಿಂದುತ್ವ ಪ್ರತಿಪಾದಕರೇ ಕಟ್ಟಿ ಬೆಳೆಸಿದ್ದ ಪಕ್ಷದ ಚಹರೆಯನ್ನೂ ಮೋದಿ ಮತ್ತು ಅವರ ಬಲಗೈ ಬಂಟ ಅಮಿತ್‌ ಶಾ ಬದಲಿಸಿದರು. ಯಾವ ಸರ್ವಾಧಿಕಾರಿ ಧೋರಣೆಯ ಇಂದಿರಾ ಗಾಂಧಿ ತಮ್ಮ ವಿರೋಧಿಗಳಾದ ಅಡ್ವಾಣಿ, ವಾಜಪೇಯಿಯನ್ನು ದೇಶದ್ರೋಹಿಗಳು ಎನ್ನುತ್ತಿದ್ದರೋ ಅದೇ ಪದಪುಂಜಗಳು ಅಪೂರ್ವ ಜೋಡಿಗಳ ಬಾಯಲ್ಲೂ ಕೇಳಿ ಬರಲು ಆರಂಭಿಸಿತು.

ಕೊನೆಗೆ ತಾಳ್ಮೆಯ ಕಟ್ಟೆಯೊಡೆದು ಮೌನ ಮುರಿದಿರುವ ಭೀಷ್ಮ, ಇದು ಬಿಜೆಪಿಯ ಸಿದ್ಧಾಂತವಲ್ಲ ಎಂಬುದಾಗಿ ಯುಗಾದಿಯಂದೇ 40ನೇ ವಸಂತಕ್ಕೆ ಕಾಲಿಡಲಿರುವ ಬಿಜೆಪಿ ಮತ್ತು ಅದರ ನಾಯಕರಿಗೆ ತುಸು ಖಾರವಾಗಿಯೇ ಬುದ್ಧಿ ಹೇಳಿದ್ದಾರೆ. ಆದರೆ ‘ಮನ್‌ ಕೀ ಬಾತ್‌’ ಖ್ಯಾತಿಯ ‘ಟ್ರಾನ್ಸಿಮಿಟರ್‌’ ನರೇಂದ್ರ ಮೋದಿ ಮತ್ತವರ ಗ್ಯಾಂಗ್‌ ಈ ಮಾತನ್ನು ‘ರಿಸೀವ್‌’ ಮಾಡಿಕೊಳ್ಳುವ ಬಗ್ಗೆ ಯಾರಿಗೂ ನಿರೀಕ್ಷೆಗಳಿಲ್ಲ ಎಂಬುದು ಬೇರೆ ಮಾತು.

ಚಿತ್ರ ಕೃಪೆ: ಹಿಂದೂಸ್ಥಾನ ಟೈಮ್ಸ್‌