samachara
www.samachara.com
ಸಂದಿಯಲ್ಲಿ ಮೀಸೆ ತೂರಿಸಿದ ‘ನಮೋ ಟಿವಿ’; ನೀತಿ ಸಂಹಿತೆ ಪರದೆ ಮೇಲೆ ಮೋದಿ ದರ್ಶನ! 
COVER STORY

ಸಂದಿಯಲ್ಲಿ ಮೀಸೆ ತೂರಿಸಿದ ‘ನಮೋ ಟಿವಿ’; ನೀತಿ ಸಂಹಿತೆ ಪರದೆ ಮೇಲೆ ಮೋದಿ ದರ್ಶನ! 

ದೇಶದಲ್ಲಿ ಒಂದು ವಾಹಿನಿ ಆರಂಭಿಸಬೇಕಿದ್ದರೆ ಅದಕ್ಕೊಂದಿಷ್ಟು ನಿಯಮಗಳಿವೆ; ಕೆಲವು ಪ್ರಕ್ರಿಯೆಗಳಿವೆ. ಕನಿಷ್ಟ ಇವುಗಳನ್ನು ಮುಗಿಸಲು ಒಂದಷ್ಟು ಸಮಯ ಬೇಕು. ಜತೆಗೆ ಈ ದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಎಂಬುದೊಂದು ಜಾರಿಯಲ್ಲಿದೆ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಈ ನಡುವೆ ಕಳೆದ ಕೆಲವು ದಿನಗಳಿಂದ ಹಲವರ ಮನೆಯ ಟಿವಿಗಳಲ್ಲಿ ಹೊಸ ವಾಹಿನಿಯೊಂದು ಕಾಣಿಸಿಕೊಳ್ಳಲು ಆರಂಭಿಸಿದೆ. ಅದರ ಹೆಸರು ‘ನಮೋ ಟಿವಿ’. ಹೆಸರಿಗೆ ತಕ್ಕಂತೆ ವಾಹಿನಿಯಲ್ಲಿ 24 ಗಂಟೆ ಮೋದಿ ಭಜನೆ/ ಭಾಷಣಗಳು ಪ್ರಸಾರವಾಗುತ್ತಿವೆ.

ದೇಶದಲ್ಲಿ ಒಂದು ವಾಹಿನಿ ಆರಂಭಿಸಬೇಕಿದ್ದರೆ ಅದಕ್ಕೊಂದಿಷ್ಟು ನಿಯಮಗಳಿವೆ; ಕೆಲವು ಪ್ರಕ್ರಿಯೆಗಳಿವೆ. ಅವುಗಳನ್ನು ಮುಗಿಸಲು ಒಂದಷ್ಟು ಸಮಯ ಬೇಕು. ಜತೆಗೆ ಈ ದೇಶದ ಮೇಲೆ ಚುನಾವಣಾ ನೀತಿ ಸಂಹಿತೆ ಎಂಬ ಅರೆ ಪಾರದರ್ಶಕ ಪರದೆಯೊಂದರ ಹೊದಿಕೆಯನ್ನು ಚುನಾವಣಾ ಆಯೋಗ ಹಾಸಿದೆ. ಇವೆಲ್ಲದರ ನಡುವೆ ಈ ವಾಹಿನಿ ಆರಂಭಗೊಂಡಿದ್ದು ಹೇಗೆ? ಇದೀಗ ರಾಷ್ಟ್ರದ ಚರ್ಚೆಯ ವಸ್ತು.

ಈ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಇದಕ್ಕೆ ಉತ್ತರ ಕಂಡುಕೊಳ್ಳಲು ಆಮ್‌ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್‌ ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು. ಈ ದೂರಿನ ಕಾರಣಕ್ಕೆ ಆಯೋಗ ದೇಶದಲ್ಲಿ ವಾಹಿನಿಗಳ ಮೇಲುಸ್ತುವಾರಿ ವಹಿಸುವ ಮಾಹಿತಿ ಮತ್ತು ಪ್ರಸಾರ ಇಲಾಖೆ (ಎಂಐಬಿ) ಯಿಂದ ಸ್ಪಷ್ಟನೆ ಕೇಳಿತ್ತು.

ಸ್ಪಷ್ಟನೆಯಲ್ಲಿ ಇಲಾಖೆ, ‘ಈ ಹೊಸ ವಾಹಿನಿ ಪರವಾನಿಗೆ ಇರುವ ಚಾನಲ್‌ ಅಲ್ಲ. ಬದಲಿಗೆ ಇದು ಬಿಜೆಪಿಯ ಜಾಹೀರಾತು ವೇದಿಕೆ’ ಎಂಬ ಸ್ಪಷ್ಟನೆ ನೀಡಿದೆ.

ಇದು ಹೇಗೆ?

ಡಿಟಿಎಚ್‌ (ಡೈರೆಕ್ಟ್‌ ಟು ಹೋಮ್‌) ಮತ್ತು ಕೇಬಲ್‌ ಮೂಲಕ ಕೇಂದ್ರ ಸರಕಾರದ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳದ ವಾಹಿನಿಯನ್ನು ಪ್ರಸಾರ ಮಾಡುವಂತಿಲ್ಲ. ಹೀಗಂಥ ಎಂಐಬಿಯ ವೆಬ್‌ಸೈಟ್‌ ಹೇಳುತ್ತದೆ.

ಹಾಗಿರುವಾಗ ಬಿಜೆಪಿ ಒತ್ತಾಯಪೂರ್ವಕವಾಗಿ ಡಿಟಿಎಚ್‌, ಕೇಬಲ್‌ ವಾಹಿನಿಗಳ ಮೂಲಕ ತನ್ನ ವಾಹಿನಿಯನ್ನು ಪ್ರಸಾರ ಮಾಡಿತೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಆದರೆ ಬಿಜೆಪಿ ಹಾಗೇನೂ ಮಾಡಿಲ್ಲ. ಬದಲಿಗೆ ನಿಯಮಾವಳಿಗಳಲ್ಲಿರುವ ನ್ಯೂನ್ಯತೆಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿತು.

ಸಾಮಾನ್ಯವಾಗಿ ಈ ದೇಶದಲ್ಲಿ ವಾಹಿನಿಯೊಂದರ ಪ್ರಸಾರ ಹೀಗಿರುತ್ತದೆ. ಮೊದಲಿಗೆ ವಾಹಿನಿ ತನ್ನಲ್ಲಿರುವ ಸರಕನ್ನು ಟೆಲಿಪೋರ್ಟ್‌ಗಳೆಂಬ ತಂತ್ರಜ್ಞಾನದ ಮೂಲಕ ಉಪಗ್ರಹಗಳಿಗೆ ಅಪ್‌ಲಿಂಕ್‌ ಮಾಡುತ್ತದೆ. ಅದನ್ನು ಡಿಟಿಎಚ್‌, ಕೇಬಲ್‌ನವರು ಡೌನ್‌ಲಿಂಕ್‌ ಮಾಡಿ ಮನೆ ಮನೆಗಳಿಗೆ ಹಂಚುತ್ತಾರೆ. ಇಲ್ಲಿ ವಾಹಿನಿಯನ್ನು ಎಂಬಿಐಯಲ್ಲಿ ನೋಂದಣಿ ಮಾಡಿಕೊಂಡಿರಬೇಕು ಜತೆಗೆ ಅಪ್‌ಲಿಂಕ್‌ ಮತ್ತು ಡೌನ್‌ಲಿಂಕ್‌ಗೆ ಪ್ರತ್ಯೇಕ ಅನುಮತಿಗಳನ್ನು ಪಡೆದುಕೊಂಡಿರಬೇಕು. ಇದಕ್ಕೆ ಅದರದ್ದೇ ಆದ ಕಠಿಣ ನಿಯಮಾವಳಿಗಳಿವೆ.

ಆದರೆ ಅಸಲಿ ವಿಚಾರ ಇರುವುದು ಇಲ್ಲಿ. ಡಿಟಿಎಚ್‌ ಮತ್ತು ಕೇಬಲ್‌ ಸೇವೆ ನೀಡುವವರಿಗೆ ‘ವ್ಯಾಲ್ಯೂ ಆಡೆಡ್‌ ಸರ್ವಿಸ್‌ (ಬೇಡಿಕೆ ಆಧರಿತ ಮೌಲ್ಯಯುತ ಸೇವೆ)‘ ಹೆಸರಿನಲ್ಲಿ ವಾಹಿನಿ ನಡೆಸಲು ಅವಕಾಶವಿದೆ. ಇದಕ್ಕೆ ಯಾವುದೇ ಅನುಮತಿಗಳು ಬೇಕಾಗಿಲ್ಲ. ಉದಾಹರಣೆಗೆ, “ನೀವು ಟಾಟಾ ಸ್ಕೈ ಆರಂಭಿಸಿದರೆ ಅಲ್ಲಿ ಶೋಕೇಸ್‌ ಎಂಬ ಐಕಾನ್‌ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಅಡುಗೆಯಿಂದ ಹಿಡಿದು ಸಿನಿಮಾ ಮೊದಲಾದ ಬೇಡಿಕೆಯ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಇದಕ್ಕೆ ಲೈಸನ್ಸ್‌ ಇಲ್ಲ. ಈ ಮಾಹಿತಿಯನ್ನು ಡಿಟಿಎಚ್‌ನವರೇ ಪ್ರಸಾರ ಮಾಡುತ್ತಾರೆ. ಇದೇ ವರ್ಗದಲ್ಲಿ ‘ನಮೋ ಟಿವಿ’ಯೂ ಪ್ರಸಾರವಾಗುತ್ತಿದೆ. ನಮೋ ಟಿವಿಯ ತನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಉಪಗ್ರಹವನ್ನು ಅವಲಂಬಿಸಿಲ್ಲ. ಬದಲಿಗೆ ಇಂಟರ್ನೆಟ್‌ ಮೂಲಕ ತಲುಪಿಸಲಾಗುತ್ತದೆ. ಹೀಗಾಗಿ ಇದಕ್ಕೆ ಲೈಸನ್ಸ್‌ ಬೇಕಾಗಿಲ್ಲ,” ಎನ್ನುತ್ತಾರೆ ‘ಬಿಸಿನೆಸ್‌ ಟುಡೆ’ಗೆ ಪ್ರತಿಕ್ರಿಯೆ ನೀಡಿರುವ ಓರ್ವ ಬ್ರಾಡ್‌ಕಾಸ್ಟಿಂಗ್‌ ವೃತ್ತಿಪರರು.

ಹಿಂದೆಲ್ಲ ಇಂಟರ್ನೆಟ್‌ ಇಲ್ಲದ ಜಮಾನದಲ್ಲಿ ಈ ಅವಕಾಶ ಇರಲಿಲ್ಲ. ಬೇರೆ ಬೇರೆ ಡಿಟಿಎಚ್‌, ಕೇಬಲ್‌ಗಳಲ್ಲಿ ಏಕಕಾಲದಲ್ಲಿ ಒಂದೇ ರೀತಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕಿದ್ದರೆ ಉಪಗ್ರಹದ ಸೇವೆಯನ್ನು ಪಡೆಯಲೇಬೇಕಾಗಿತ್ತು. ಮತ್ತು ಇದಕ್ಕಾಗಿ ಸರಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಹೀಗಾಗಿ ನಿಯಮಗಳು ಇಷ್ಟಕ್ಕೆ ಮಾತ್ರ ಸೀಮಿತವಾಗಿವೆ.

ಆದರೆ ಬದಲಾದ ಕಾಲಘಟ್ಟದಲ್ಲಿ ಈಗ ಯಾವುದೇ ಸರಕನ್ನು ಉಪಗ್ರಹದ ಸಹಾಯವಿಲ್ಲದೆ ಬೇರೆ ಬೇರೆ ಕಡೆಗಳಿಗೆ ಏಕಕಾಲಕ್ಕೆ ತಲುಪಿಸಬಹುದು. ಅಂತರ್ಜಾಲ ಅಂಥಹದ್ದೊಂದು ವ್ಯವಸ್ಥೆಯನ್ನು ಜನ ಸಾಮಾನ್ಯರ ಮನೆ ಬಾಗಿಲಿಗೆ ತಂದಿಟ್ಟಿದೆ. ನಮೋ ಟಿವಿ ಬಳಸುತ್ತಿರುವುದೂ ಇದನ್ನೇ. ಒಂದೇ ವಿಷಯ ವಸ್ತುವನ್ನು ಬೇರೆ ಬೇರೆ ಡಿಟಿಎಚ್‌, ಕೇಬಲ್‌ ಆಪರೇಟರ್‌ಗಳಿಗೆ ಏಕಕಾಲಕ್ಕೆ ತಲುಪಿಸಲಾಗುತ್ತಿದೆ. ಅವರು ಅದನ್ನು ತಮ್ಮದೇ ವೇದಿಕೆಗಳಲ್ಲಿ ಅಂದರೆ ಕೇಬಲ್‌, ಡಿಟಿಎಚ್‌ಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ.

ವಿಶೇಷವೆಂದರೆ ಇಂತಹದ್ದೊಂದು ಸನ್ನಿವೇಶ ಸೃಷ್ಟಿಯಾಗಬಹುದು ಎಂಬುದಾಗಿ ಟ್ರಾಯ್‌ (ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ) ಇದಕ್ಕೂ ಮೊದಲೇ ಅಂದಾಜಿಸಿತ್ತು. ಈ ಕಾರಣಕ್ಕೆ 2015ರಲ್ಲೇ ‘ವ್ಯಾಲ್ಯೂ ಆಡೆಡ್ ಸೇವೆ’ಗಳನ್ನು ನೀಡುವ ವಾಹಿನಿಗಳಿಗೂ ಸರಕಾರ ಅನುಮತಿ ನೀಡುವ ನಿಯಮವಿರಬೇಕು ಎಂಬುದಾಗಿ ಅದು ಎಂಐಬಿಗೆ ಶಿಫಾರಸ್ಸು ಮಾಡಿತ್ತು. ಆದರೆ ಅದನ್ನು ಇಲಾಖೆ ಜಾರಿಗೆ ತಂದಿರಲಿಲ್ಲ.

ಈಗ ಇದೇ ಸಂದಿಯನ್ನು ಬಳಸಿಕೊಂಡು ನಮೋ ಟಿವಿ ಮನೆ ಮನೆಗಳಲ್ಲಿ ಪ್ರಸಾರವಾಗುತ್ತಿದೆ. ಹಾಗಂತ ಈ ಬೆಳವಣಿಗೆ ಹೊಸದೇನೂ ಅಲ್ಲ. ‘ರಾಜಕೀಯ ಪಕ್ಷಗಳು ಚುನಾವಣೆ ಹತ್ತಿರ ಬಂದಾಗ ತಮ್ಮ ಸಿದ್ಧಾಂತ ಮತ್ತು ಪ್ರಾಣಾಳಿಕೆಗಳನ್ನು ಜನರಿಗೆ ತಲುಪಿಸಲು ಸ್ಥಳೀಯ ಕೇಬಲ್‌ಗಳಲ್ಲಿ ಚಾನಲ್‌ ಆರಂಭಿಸುವುಸು ಸಾಮಾನ್ಯ. ಈ ಹಿಂದೆ 2012ರ ಗುಜರಾತ್‌ ಚುನಾವಣೆ ಸಂದರ್ಭದಲ್ಲಿ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಇದೇ ರೀತಿ ಮಾಡಿದ್ದರು’ ಎನ್ನುತ್ತಾರೆ ಆ ವಾಹಿನಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಮಯಾಂಕ್‌ ಜೈನ್‌.

ಇದೀಗ ಬದಲಾದ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಅವರು ಇದನ್ನು ಮತ್ತಷ್ಟು ಮುಂದುವರಿಸಿ ದೇಶವ್ಯಾಪಿ ವಿಸ್ತರಿಸಿದ್ದಾರೆ. ಪರಿಣಾಮ ಏಕಕಾಲದಲ್ಲಿ ಹಲವು ಡಿಟಿಎಚ್‌, ಕೇಬಲ್‌ಗಳಲ್ಲಿ ಮೋದಿಯ ಸಂದರ್ಶನ, ಪ್ರಚಾರ, ಸಾಧನೆಗಳು ಅನಾವರಣಗೊಳ್ಳುತ್ತಿವೆ.

ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಅವರ ಕೈ ಕೆಳಗೆ ಕೆಲಸ ಮಾಡಿದ್ದ ಪರಾಗ್‌ ಶಾ ಎಂಬ ಐಟಿ ತಜ್ಞರು ಈ ವಾಹಿನಿ ನಡೆಸುತ್ತಿದ್ದಾರೆ.

ಅಂದ ಹಾಗೆ,

ಝೀ ನ್ಯೂಸ್‌, ರಿಪಬ್ಲಿಕ್‌ ಟಿವಿ ಸೇರಿದಂತೆ ನೂರಾರು ವಾಹಿನಿಗಳಿರುವಾಗ ಮೋದಿ ಮಂತ್ರ ಪಠಣೆಗಾಗಿ ಹೊಸ ವಾಹಿನಿ ಯಾಕೆ? ಎಂಬ ಮೀಮ್ಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇಂತಹ ತಮಾಷೆಗಳ ಆಚೆಗೆ ಇರುವ ಗಂಭೀರವಾದ ಪ್ರಶ್ನೆ ಏನೆಂದರೆ, ನೀತಿ ಸಂಹಿತೆ ಎಂಬ ಪುಸ್ತಕದ ಬದನೆಕಾಯಿಯನ್ನು ಪಾಲಿಸುವುದಷ್ಟೇ ಚುನಾವಣಾ ಆಯೋಗದ ಕೆಲಸವೇ? ಎಂಬುದು.

ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ಹಬ್ಬಗಳು ಎಂದು ಕರೆಯುವ ಚುನಾವಣೆಗಳನ್ನು ಕಾರ್ಯರೂಪಕ್ಕೆ ಇರುವ ಹೊಣೆ ಹೊತ್ತಿರುವ ಅಯೋಗ ಈಗ ಅಪನಂಬಿಕೆಗೆ ಗುರಿಯಾಗಿದೆ. ದೇಶದ ಬಹುತೇಕ ಸಂಸ್ಥೆಗಳು ತಮ್ಮ ಪಾವಿತ್ರ್ಯತೆ ಕಳೆದುಕೊಂಡ ಹಾಗೆಯೇ ಚುನಾವಣಾ ಆಯೋಗ ಕೂಡ ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡಿತಾ? ಇದಕ್ಕೆ ಉತ್ತರ ಸಿಗಲು ಹೆಚ್ಚು ದಿನಗಳು ಕಾಯಬೇಕಿಲ್ಲ.