samachara
www.samachara.com
ಸಿದ್ದರಾಮಯ್ಯ-ದೇವೇಗೌಡ ಜಂಟಿ ಪ್ರಚಾರ; ಸಂವಾದದಲ್ಲಿ ಮಾಜಿ ಸಿಎಂ ‘ಸಂಘರ್ಷ ನಿವಾರಣೆ ಸೂತ್ರ’
COVER STORY

ಸಿದ್ದರಾಮಯ್ಯ-ದೇವೇಗೌಡ ಜಂಟಿ ಪ್ರಚಾರ; ಸಂವಾದದಲ್ಲಿ ಮಾಜಿ ಸಿಎಂ ‘ಸಂಘರ್ಷ ನಿವಾರಣೆ ಸೂತ್ರ’

ಸಂವಾದದಲ್ಲಿ ಭವಿಷ್ಯ ನುಡಿದ ಸಿದ್ದರಾಮಯ್ಯ, ದೇಶದ ಜನರ ನಿರೀಕ್ಷೆಯನ್ನು ಹುಸಿಗೊಳಿಸಿರುವ ನರೇಂದ್ರಮೋದಿ ಪುನ: ಈ ದೇಶದ ಪ್ರಧಾನಿಯಾಗುವುದಿಲ್ಲ ಎಂದು ಹೇಳಿದರು.

Team Samachara

ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್- ಕಾಂಗ್ರೆಸ್ ನಡುವೆ ಸಣ್ಣಪುಟ್ಟ ಕಿರಿಕಿರಿಗಳಿವೆ. ನಾನು ಮತ್ತು ದೇವೇಗೌಡರು ಜಂಟಿಯಾಗಿ ಪ್ರಚಾರಕ್ಕೆ ಹೋದರೆ ಅದು ನಿವಾರಣೆಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪ್ರೆಸ್ ಕ್ಲಬ್‍ನಲ್ಲಿಂದು ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಮತ್ತು ಜೆಡಿಎಸ್‍ ಮಧ್ಯೆ ಒಳ್ಳೆಯ ಸಮನ್ವಯತೆ ಇದೆ. ಕಳೆದ 10 ತಿಂಗಳಿನಿಂದಲೂ ಸರ್ಕಾರ ಈಗ ಬೀಳುತ್ತೆ ಆಗ ಬೀಳುತ್ತೆ ಎಂದು ಹೇಳುತ್ತಲೇ ಬಂದಿದ್ದಾರೆ. ಸರ್ಕಾರವನ್ನು ಕೆಡವಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಆದರೆ ಅದು ಯಶಸ್ವಿಯಾಗಿಲ್ಲ,” ಎಂದು ತಿಳಿಸಿದರು.

ಸರ್ಕಾರ ಪತನಗೊಳಿಸಲು ಬಿಜೆಪಿ ಆಕಾಶ-ಭೂಮಿ ಒಂದು ಮಾಡಿ ಪ್ರಯತ್ನಪಟ್ಟರೂ ಅದು ಯಶಸ್ವಿಯಾಗುವುದಿಲ್ಲ. ಕೋಮುವಾದಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಬಿಜೆಪಿಯವರು ನನಗೆ ರಾಜಕೀಯವಾಗಿ ವೈರಿಗಳು. ವೈಯಕ್ತಿಕವಾಗಿ ಅವರ ಬಗ್ಗೆ ಯಾವುದೇ ದ್ವೇಷವಿಲ್ಲ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಎರಡು ಲೋಕಸಭಾ ಕ್ಷೇತ್ರಗಳನ್ನು ಮತ್ತು ಎರಡು ವಿಧಾನಸಭಾ ಕ್ಷೇತ್ರಗಳನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದಿವೆ. ಶಿವಮೊಗ್ಗದಲ್ಲಿ ಸ್ವಲ್ಪ ಪ್ರಯತ್ನ ಪಟ್ಟಿದ್ದರೂ ಗೆಲ್ಲುವ ಸಾಧ್ಯತೆ ಇತ್ತು ಎಂಬುದಾಗಿ ಹೇಳಿದ ಅವರು ಮೈತ್ರಿಯಿಂದ ಲಾಭವಿದೆ ಎಂಬುದನ್ನು ಮನದಟ್ಟು ಮಾಡುವ ಪ್ರಯತ್ನ ಮಾಡಿದರು.

ಮೋದಿ ಮತ್ತೆ ಪ್ರಧಾನಿಯಾಗಲ್ಲ:

ಸಂವಾದದಲ್ಲಿ ಭವಿಷ್ಯ ನುಡಿದ ಸಿದ್ದರಾಮಯ್ಯ, ದೇಶದ ಜನರ ನಿರೀಕ್ಷೆಯನ್ನು ಹುಸಿಗೊಳಿಸಿರುವ ನರೇಂದ್ರಮೋದಿ ಪುನ: ಈ ದೇಶದ ಪ್ರಧಾನಿಯಾಗುವುದಿಲ್ಲ ಎಂದು ಹೇಳಿದರು.

ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮೂರರಲ್ಲಿ ಕಾಂಗ್ರೆಸ್ ಗೆದ್ದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಿಹಾರ ಮತ್ತು ಉತ್ತರಪ್ರದೇಶದಲ್ಲಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು. ಗುಜರಾತ್‍ನಲ್ಲಿ 26ಕ್ಕೆ 26ರಲ್ಲೂ ಗೆದ್ದಿತ್ತು. ಆದರೆ ಈ ಬಾರಿ ಅದು ಸಾಧ್ಯವಿಲ್ಲ ಎಂದರು.

ಮೋದಿಯವರು ಹಿಂದಿನ ಚುನಾವಣೆಯಲ್ಲಿ ನೀಡಿದ್ದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ಜನರ ಖಾತೆಗೆ 15 ಲಕ್ಷ ರೂಪಾಯಿ ಹಾಕುವುದು ಸೇರಿದಂತೆ ಅವರು ನೀಡಿದ ಹಲವಾರು ಭರವಸೆಗಳು ಹುಸಿಯಾಗಿವೆ. ಯಾವುದೇ ಸರ್ಕಾರ ತಾನು ಮಾಡಿದ ಅಭಿವೃದ್ದಿ ವಿಷಯಗಳನ್ನು ಇಟ್ಟುಕೊಂಡು ಚುನಾವಣೆ ಪ್ರಚಾರ ಮಾಡಬೇಕು. ಆದರೆ ಮೋದಿಯವರು ರಾಮಮಂದಿರ, ದೇಶಭಕ್ತಿ, ಚೌಕಿದಾರ್ ಎಂಬ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ರೈತರ ಸಾಲಮನ್ನಾವನ್ನು ಲಾಲಿಪಪ್ ಎಂದು ಜರಿಯುತ್ತಾರೆ. ಆದರೆ ಶ್ರೀಮಂತರ ಸಾಲವನ್ನು ಮನ್ನಾ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, “ವಾಜಪೇಯಿ ಸರ್ಕಾರದಲ್ಲಿ ಇಂಡಿಯಾ ಶೈನಿಂಗ್ ಎಂದಿದ್ದರು. ತದನಂತರ ಅದು ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ,” ಎಂದರು.

ರಾಹುಲ್ ಗಾಂಧಿ ಘೋಷಿಸಿರುವ ಕನಿಷ್ಟ ಮಾಸಿಕ ಆದಾಯ ಯೋಜನೆ ಹೆಚ್ಚು ಜನಪ್ರಿಯವಾಗಿದೆ. ಆದರೆ ಬಿಜೆಪಿಯವರು ಸಮಾನತೆ ಮತ್ತು ಪ್ರಜಾಪ್ರಭುತ್ವದ ವಿರೋಧಿಗಳು. ಸಂವಿಧಾನ ಬದಲಾಯಿಸುವುದಾಗಿ ಹೇಳುತ್ತಾರೆ, ಅಭಿವೃದ್ದಿ ವಿಷಯಗಳನ್ನು ಚರ್ಚೆ ಮಾಡುವ ಬದಲಿಗೆ ಪುಲ್ವಾಮ ದಾಳಿ, ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಭಾಷಣ ಮಾಡುತ್ತಾರೆ ಎಂದು ಕಿಡಿಕಾರಿದರು.

ಈ ಹಿಂದೆ ಕೂಡ ಸಾಕಷ್ಟು ಸರ್ಜಿಕಲ್ ಸ್ಟ್ರೈಕ್‍ಗಳಾಗಿವೆ. ಆದರೆ ಅವುಗಳನ್ನು ಯಾರೂ ರಾಜಕೀಯಕ್ಕೆ ಬಳಸಿಕೊಂಡಿರಲಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಮೋದಿ ಅವರು ಚೌಕಿದಾರ್ ಎಂದು ಹೇಳಿಕೊಳ್ಳುತ್ತಿರುವ ಬಗ್ಗೆ ಲೇವಡಿ ಮಾಡಿದ ಸಿದ್ದರಾಮಯ್ಯ, ಜನ ಮತ ಹಾಕಿ ಆಯ್ಕೆ ಮಾಡಿದ ಮೇಲೆ ಪ್ರತಿಯೊಬ್ಬರೂ ದೇಶದ ಕಾವಲುಗಾರರೇ. ಆದರೆ ಮೋದಿ ಅವರ ಪ್ರಚಾರದಲ್ಲಿ ಯಡಿಯೂರಪ್ಪ, ಸದಾನಂದಗೌಡ, ಈಶ್ವರಪ್ಪ ಅವರಂತವರೂ ಚೌಕಿದಾರರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಜತೆಗೆ ಪುಲ್ವಾಮಾ ದಾಳಿಯಲ್ಲಿ 44 ಯೋಧರು ಹುತಾತ್ಮರಾದಾಗ ಕೇಂದ್ರ ಸರ್ಕಾರದ ಸಂಸ್ಥೆಗಳು ಸತ್ತು ಹೋಗಿದ್ದವೇ ಎಂದು ಪ್ರಶ್ನಿಸಿದರು. ಅಲ್ಲದೆ “ಚುನಾವಣೆ ಸಂದರ್ಭದಲ್ಲಿ ಲೋಕಪಾಲ ರಚಿಸುವುದು, ರೈತರಿಗೆ ವರ್ಷಕ್ಕೆ 6 ಸಾವಿರ ನೀಡುವುದಾಗಿ ಘೋಷಿಸಿದರು. ಇದೆಲ್ಲ ಗಿಮಿಕ್‍ಗಳು ಎಂದು ಜನರಿಗೆ ಅರ್ಥವಾಗುತ್ತದೆ. ಜನ ಭಾವನಾತ್ಮಕವಾಗಿ ಮರುಳಾಗುವುದಿಲ್ಲ. ಕಾಂಗ್ರೆಸ್‍ಗೆ ವೋಟ್ ಹಾಕುತ್ತಾರೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಎಸ್‍ವೈ ಡೈರಿ ತನಿಖೆ ಮುಗಿದಿಲ್ಲ:

ಇತ್ತೀಚೆಗೆ ಕಾಂಗ್ರೆಸ್ ಬಿಡುಗಡೆ ಮಾಡಿದ ಯಡಿಯೂರಪ್ಪನವರ ಡೈರಿ ಕುರಿತು ಜಾರಿ ನಿರ್ದೇಶನಾಲಯದ ಅಧಿಕಾರಿ ಬಾಲಕೃಷ್ಣ ಅವರು ಹೇಳಿಕೆ ನೀಡಿ ಅದು ನಕಲಿ ಎಂದಿದ್ದಾರೆ. “ತನಿಖೆ ನಡೆದು ಸಾಬೀತಾಗುವವರೆಗೂ ಅಧಿಕಾರಿಗಳು ಹೇಳಿಕೆ ನೀಡುವಂತಿಲ್ಲ. ಡೈರಿಯಲ್ಲಿ ಯಡಿಯೂರಪ್ಪನವರ ಸಹಿ ಇದೆ. ಅದು ಅಸಲಿಯೋ, ನಕಲಿಯೋ ಎಂಬ ಬಗ್ಗೆ ತನಿಖೆ ನಡೆಸಲು ಫೋರೆನ್ಸಿಕ್‌ ಲ್ಯಾಬ್‍ಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬರುವ ಮೊದಲೇ ಅಧಿಕಾರಿ ಹೇಳಿಕೆ ನೀಡಿದ್ದು ಹೇಗೆ? ಅವರ ಮೇಲೆ ಯಾರ ಒತ್ತಡವಿದೆ,” ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಗೋವಿಂದರಾಜು ಅವರ ಡೈರಿ ಪ್ರಕರಣ ತನಿಖೆಯಾಗಿದೆ. ಡೈರಿ ಗೋವಿಂದರಾಜು ಅವರಿಗೆ ಸೇರಿದ್ದಲ್ಲ ಎಂಬುದು ಇತ್ಯರ್ಥವಾಗಿದೆ. ಆದರೆ ಯಡಿಯೂರಪ್ಪ ಅವರ ಡೈರಿಯ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ವಿವರಿಸಿದರು.

ಇನ್ನು ಇತ್ತೀಚೆಗೆ ನಡೆದ ಐಟಿ ದಾಳಿ ಬಗ್ಗೆ ಪ್ರಸ್ತಾಪಿಸಿದ ಅವರು, “ಐಟಿ ದಾಳಿಗಾಗಲಿ, ಸಿಬಿಐ ತನಿಖೆಗಾಗಲಿ ನನ್ನ ವಿರೋಧವಿಲ್ಲ. ದಾಳಿಗೆ ಒಳಗಾದವರ ಪರವಾಗಿ ವಕಾಲತ್ತನ್ನು ವಹಿಸುವುದಿಲ್ಲ. ಈ ಸಂಸ್ಥೆಗಳಿರುವುದೇ ತೆರಿಗೆ ತಪ್ಪಿಸುವವರನ್ನು, ಅಕ್ರಮ ಮಾಡುವವರನ್ನು ತನಿಖೆಗೊಳಪಡಿಸಲು. ಆದರೆ ಕೇಂದ್ರ ಸರ್ಕಾರ ಇವುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಕಾಂಗ್ರೆಸ್-ಜೆಡಿಎಸ್ ಮೇಲೆ ಮಾತ್ರ ದಾಳಿ ನಡೆಯುತ್ತಿದೆ. ಯುಡಿಯೂರಪ್ಪ ಮತ್ತು ಬಿಜೆಪಿಯವರ ಮನೆ ಮೇಲೆ ಏಕೆ ದಾಳಿಯಾಗುತ್ತಿಲ್ಲ,” ಎಂದು ಕೇಳಿದರು.

ಇದೇ ಸಂದರ್ಭದಲ್ಲಿ, “ಕುಟುಂಬ ರಾಜಕಾರಣವನ್ನು ಜನರೇ ಒಪ್ಪಿಕೊಂಡಿದ್ದಾರೆ. ಜನ ಒಪ್ಪಿದ ಮೇಲೆ ಅದನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ,” ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಿಜೆಪಿಗೆ ಭ್ರಮೆ:

ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಲೋಕಸಭಾ ಚುನಾವಣೆಯ ನಂತರವೂ ಸುಭದ್ರವಾಗಿರಲಿದೆ ಎಂದು ಅವರು ಸಂವಾದದಲ್ಲಿ ಆಶಾವಾದ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ಬರಬೇಕೆಂದು ಕನಸು ಕಾಣುತ್ತಿರುವ ಬಿಜೆಪಿ ಭ್ರಮಾಲೋಕದಲ್ಲಿ ಇರಲಿದೆ ಎಂದು ವ್ಯಂಗ್ಯವಾಡಿದ ಅವರು, “ಚುನಾವಣೆ ನಂತರ ಸರ್ಕಾರ ಬೀಳಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಸರ್ಕಾರ ಸುಭದ್ರವಾಗಿರಲಿದೆ. ಯಡಿಯೂರಪ್ಪನವರಿಗೆ ಪ್ರತಿದಿನವೂ ವಿಧಾನಸೌಧದ ಮೂರನೇ ಮಹಡಿಯ ಮುಖ್ಯಮಂತ್ರಿ ಕುರ್ಚಿ ಮಾತ್ರ ಕನಸಿಗೆ ಬರುತ್ತದೆ. ಆದರೆ ಅದು ಈಡೇರುವುದಿಲ್ಲ,” ಎಂದರು.

ಪಕ್ಷಾಂತರ ಮಾಡುವವರ ಬಗ್ಗೆ ಸಂವಾದದಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್‍ನ್ನು ಯಾವ ಶಾಸಕರು ಬಿಟ್ಟು ಹೋಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಆಯಾ ರಾಮ್, ಗಯಾ ರಾಮ್ ಇದ್ದದ್ದೇ. 1952ರಿಂದಲೂ ಇದನ್ನು ನೋಡಿಕೊಂಡು ಬಂದಿದ್ದೇವೆ. ಸಿದ್ದಾಂತಗಳಿಲ್ಲದವರು ಪಕ್ಷಾಂತರ ಮಾಡುತ್ತಾರೆ. ಕಾಂಗ್ರೆಸ್‍ನ ಕೆಲವರು ಬಿಜೆಪಿಗೆ ಹೋದಂತೆ ಬಿಜೆಪಿಯ ಬಹಳಷ್ಟು ಮಂದಿ ಕಾಂಗ್ರೆಸ್‍ಗೆ ಬಂದಿದ್ದಾರೆ. ಇದೆಲ್ಲ ಸಾಮಾನ್ಯ,” ಎಂದರು.

ಬಿಜೆಪಿಗೆ ಗುಲ್ಬರ್ಗದಲ್ಲಿ ಅಭ್ಯರ್ಥಿಗಳಿಲ್ಲ. ಹಾಗಾಗಿ ನಮ್ಮ ಪಕ್ಷದ ಶಾಸಕರಾಗಿದ್ದ ಉಮೇಶ್ ಜಾಧವ್ ಅವರಿಗೆ ಭಾರಿ ಆಸೆ ತೋರಿಸಿ ಕರೆದುಕೊಂಡು ಹೋಗಿ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಸ್ಪರ್ಧೆಗಿಳಿಸಿದ್ದಾರೆ. ಅದೇ ರೀತಿ ಹಾಸನದಲ್ಲಿ ನಮ್ಮ ಪಕ್ಷದ ಮಾಜಿ ಶಾಸಕ ಎ.ಮಂಜು ಅವರಿಗೆ ಸಂಸದರನ್ನಾಗಿ ಮಾಡುವ ಆಸೆ ತೋರಿಸಿ ಕರೆದುಕೊಂಡು ಹೋಗಿದ್ದಾರೆ ಎಂಬುದಾಗಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಎಸ್‍ಐಟಿ ರಚನೆ:

ಯಡಿಯೂರಪ್ಪ ಆಪರೇಷನ್ ಕಮಲದ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದ ಎಸ್‍ಐಟಿ ತನಿಖೆ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಅಧಿವೇಶನದಲ್ಲಿ ಎಸ್‌ಐಟಿ ತನಿಖೆ ನಡೆಸುವಂತೆ ಸ್ಪೀಕರ್ ರಮೇಶ್‍ ಕುಮಾರ್ ಅವರು ಸಲಹೆ ನೀಡಿದರು. ನಾನು ಅದನ್ನು ಒಪ್ಪಿದ್ದೇನೆ. ಮುಖ್ಯಮಂತ್ರಿಯವರು ಒಪ್ಪಿದ್ದಾರೆ. ಶೀಘ್ರವೇ ಎಸ್‍ಐಟಿ ರಚನೆಯಾಗಲಿದೆ. ನಾನು ಆ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡುತ್ತೇನೆ,” ಎಂದರು.

ಯಡಿಯೂರಪ್ಪ ಅವರನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾದ ನಂತರ ನಾನು ಮೃದು ಧೋರಣೆ ಅನುಸರಿಸಿದ್ದೇನೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, “ಇದೆಲ್ಲಾ ಸುಳ್ಳು. ಎದುರಿಗೆ ಸಿಕ್ಕಾಗ ಮಾತನಾಡಿಸುವುದು, ಆರೋಗ್ಯ ವಿಚಾರಿಸುವುದು ಮಾನವೀಯತೆ. ಅದರ ಹೊರತಾಗಿ ನಾನು ಯಡಿಯೂರಪ್ಪನವರೊಂದಿಗೆ ಯಾವುದೇ ವಿಷಯ ಚರ್ಚೆ ಮಾಡಿಲ್ಲ,” ಎಂದು ತಿಳಿಸಿದರು.

ಇನ್ನು ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಪ್ರಚಾರದಿಂದು ದೂರ ಉಳಿದಿರುವ ಬಗ್ಗೆ ಸಿದ್ಧರಾಮಯ್ಯನವರಿಗೆ ಸಂವಾದದಲ್ಲಿ ಪ್ರಶ್ನೆ ಎದುರಾಯಿತು. ಅದಕ್ಕೆ ಉತ್ತರಿಸಿದ ಅವರು, “ಸಚಿವ ಜಿ.ಟಿ.ದೇವೇಗೌಡರು ಊರಿನಲ್ಲಿ ಇಲ್ಲದೇ ಇದ್ದುದರಿಂದ ಮೈಸೂರು ಲೋಕಸಭಾ ಕ್ಷೇತ್ರದ ಪ್ರಚಾರಕ್ಕೆ ಬಂದಿರಲಿಲ್ಲ. ಮುಂದೆ ಬರುತ್ತಾರೆ. ಸಚಿವ ಸಾ.ರಾ.ಮಹೇಶ್ ತಮ್ಮೊಂದಿಗೆ ಪ್ರಚಾರಕ್ಕೆ ಬಂದಿದ್ದಾರೆ,” ಎಂದು ಹೇಳಿದರು.

“ಸಿದ್ದರಾಮಯ್ಯನವರೊಂದಿಗೆ ನಾನು ಕಣ್ಣಿನಲ್ಲೇ ಮಾತನಾಡುತ್ತೇನೆ,” ಎಂಬ ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಅವರು ಸಾಹಿತಿ. ಕಾವ್ಯಗಳಲ್ಲಿ ಕಣ್ಣಿನಲ್ಲೇ ಮಾತನಾಡುವ ಪ್ರಸಂಗಗಳಿವೆ. ಆ ಕಾರಣಕ್ಕೆ ಹೇಳಿರಬಹುದು,” ಎಂದು ಅಭಿಪ್ರಾಯಪಟ್ಟರು.