samachara
www.samachara.com
ಕರ್ನಾಟಕದ ಮದರಸಾಗಳ ಸಮೀಕ್ಷೆಗೆ ಸೇನೆ ಬಳಕೆ; ಹೊರಬಿದ್ದ ಸ್ಫೋಟಕ ಮಾಹಿತಿ
COVER STORY

ಕರ್ನಾಟಕದ ಮದರಸಾಗಳ ಸಮೀಕ್ಷೆಗೆ ಸೇನೆ ಬಳಕೆ; ಹೊರಬಿದ್ದ ಸ್ಫೋಟಕ ಮಾಹಿತಿ

ರಾಜ್ಯ ಗೃಹ ಇಲಾಖೆಗೆ ಬಂದಿದ್ದ ಫ್ಯಾಕ್ಸ್‌ ಸಂದೇಶ ಆಧರಿಸಿ ಇಲಾಖೆಯ ಉಪ ಕಾರ್ಯದರ್ಶಿಮದರಸ ಮತ್ತು ಮಸೀದಿಗಳಲ್ಲಿನ ಮಾಹಿತಿಗಳನ್ನು ಸಂಗ್ರಹಿಸಲು ಸೂಚಿಸಿದ್ದರು ಎಂಬುದು ಲಭ್ಯ ಇರುವ ದಾಖಲೆಯಿಂದ ಗೊತ್ತಾಗಿದೆ.

Team Samachara

ಮುಸ್ಲಿಂ ವಿರೋಧಿ ನಿಲುವುಗಳನ್ನು ಪ್ರಕಟಿಸುತ್ತಲೇ ಇರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡು ವರ್ಷಗಳ ಹಿಂದೆಯೇ ಗೌಪ್ಯವಾಗಿ ಮುಸ್ಲಿಂ ಭಾವನೆಗಳನ್ನು ಕೆರಳಿಸುವ ರೀತಿಯಲ್ಲಿ ಮದರಸಗಳತ್ತ ಕೆಂಗಣ್ಣು ಬೀರಿತ್ತು ಎಂಬುದಕ್ಕೀಗ ದಾಖಲೆ ಲಭ್ಯವಾಗಿದೆ.

‘ಡೆಕ್ಕನ್ ನ್ಯೂಸ್’ ಸುದ್ದಿತಾಣ ಪ್ರಕಟಿಸಿರುವ ವರದಿ, ಖುದ್ದು ಭಾರತೀಯ ಸೇನೆಗೆ ಕರ್ನಾಟಕದಲ್ಲಿರುವ ಮದರಸಾಗಳ ಸೈದ್ಧಾಂತಿಕ ನಿಲುವು, ಅವುಗಳು ಹೊಂದಿರಬಹುದಾದ ವಿದೇಶಿ ಸಂಬಂಧಗಳು, ಒಂದು ವೇಳೆ ಅವು ಯುವಕರಿಗೆ ‘ರ್ಯಾಡಿಕಲ್’ ವಿಚಾರಗಳನ್ನು ತುಂಬುತ್ತಿದ್ದರೆ ಅದರ ಬಗ್ಗೆ ದಾಖಲೆಗಳನ್ನು ಒದಗಿಸುವಂತೆ ತಿಳಿಸಿರುವ ವಿಚಾರವನ್ನು ಬಯಲು ಮಾಡಿದೆ.

ಹಿನ್ನೆಲೆ:

ಮದರಸಗಳ ಸುಧಾರಣೆ ಹೆಸರಿನಲ್ಲಿ ಅವುಗಳನ್ನು ಕೇಂದ್ರೀಕೃತ ವ್ಯವಸ್ಥೆಗೆ ಒಳಪಡಿಸಲು ಕೇಂದ್ರ ಸರ್ಕಾರ ಆಗಿಂದಾಗ್ಗೆ ಪ್ರಯತ್ನಿಸುತ್ತಲೇ ಇದೆ.

ಮದರಸಗಳ ನಿಯಂತ್ರಣ ಮತ್ತು ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ರದ್ದುಪಡಿಸಲು ಬಿಜೆಪಿ ಅಧಿಕಾರ ಇರುವ ಬಹುತೇಕ ರಾಜ್ಯ ಸರ್ಕಾರಗಳು ನಿರ್ಧರಿಸಿರುವ ಬೆನ್ನಲ್ಲೇ, ಬೇರೊಂದು ನೆಲೆಯಲ್ಲಿ ಕರ್ನಾಟಕದಲ್ಲಿರುವ ಮದರಸ ಮತ್ತು ಮಸೀದಿಗಳ ಚಟುವಟಿಕೆ ಕುರಿತುರಹಸ್ಯವಾಗಿ ಸಮೀಕ್ಷೆ ನಡೆಸಲು ಖುದ್ದು ಭಾರತೀಯ ಸೇನೆಯೇ ಮುಂದಾಗಿತ್ತು.

ಆಗಿದ್ದಿಷ್ಟು; ಭಾರತೀಯ ಮದರಸಗಳು ಮತ್ತು ಮೂಲಭೂತೀಕರಣ ಕುರಿತ ಸಮೀಕ್ಷೆ ನಡೆಸಲು ಭಾರತೀಯ ಸೇನೆ ಉದ್ದೇಶಿಸಿತ್ತೆನ್ನುವುದು ಕರ್ನಾಟಕ ಮತ್ತು ಕೇರಳ ವ್ಯಾಪ್ತಿಯ ಕೇಂದ್ರ ಕಚೇರಿ ಜನರಲ್‌ ಕಮಾಂಡಿಂಗ್‌ ಆಫೀಸರ್‌ ವಿಕ್ರಂ ಅಯ್ಯಂಗಾರ್‌ 4-2-2017ರಂದು ಗೃಹಇಲಾಖೆ (ಒಳಾಡಳಿತ, ಕಾನೂನು ಸುವ್ಯವಸ್ಥೆ)ಗೆ ಫ್ಯಾಕ್ಸ್‌ ಮೂಲಕ ಕಳಿಸಿದ್ದ ಸಂದೇಶದಿಂದ ಗೊತ್ತಾಗಿದೆ.

ಆದರೆ ಗೌಪ್ಯತೆ ಕಾಪಾಡುವ ಹಿನ್ನೆಲೆಯಲ್ಲಿ ಈ ಕುರಿತು ವಿವರ ಒದಗಿಸಲು ರಾಜ್ಯದ ಒಳಾಡಳಿತ ಇಲಾಖೆ ನಿರಾಕರಿಸಿದೆ. 'ಈ ಕಡತವು ರಾಜ್ಯ ಗುಪ್ತವಾರ್ತೆ ಅವರಿಗೂ ಗೌಪ್ಯವಾಗಿದ್ದು, ಮಾಹಿತಿ ನೀಡಲಾಗುವುದಿಲ್ಲ,' ಎಂದು ಇಲಾಖೆ 15-2-2019 ರಂದು ಲಿಖಿತ ಮಾಹಿತಿ ನೀಡಿದೆ.

ಫ್ಯಾಕ್ಸ್‌ ಸಂದೇಶದಲ್ಲೇನಿತ್ತು?

“ಮದರಸಗಳ ಆರ್ಥಿಕ ನೆರವಿನ ಮೂಲ, ಅವುಗಳ ಮಾತೃಸಂಸ್ಥೆ, ಜಾತ್ಯತೀತ ನಿಲುವು, ಕೋಮುವಾದ, ಪ್ರತ್ಯೇಕತಾವಾದ ಅಥವಾ ಹಿಂಸಾತ್ಮಕ ಚಟುವಟಿಕೆಗಳು ಒಳಗೊಂಡಂತೆ ಮದರಸಗಳು ಹೇಳಿಕೊಳ್ಳುವ ಸಿದ್ಧಾಂತದಲ್ಲಿನ ಸುಳ್ಳು ಮಾಹಿತಿ, ಮೂಲಭೂತವಾದದತ್ತ ಕರೆದೊಯ್ಯುವ ಚಟುವಟಿಕೆಗಳಲ್ಲಿ ಅವುಗಳ ಪಾತ್ರ, ಮದರಸಗಳಿಗೆ ವಿದೇಶಿ ನೆರವು ಮತ್ತು ಸಂಪರ್ಕಗಳು, ರಾಜ್ಯ ಶಿಕ್ಷಣ ಪದ್ಧತಿಯ ಪರಿಸ್ಥಿತಿ ಮತ್ತುಸೌಲಭ್ಯವಂಚಿತರಿಗೆ ಇರುವ ಪರ್ಯಾಯ ಶಿಕ್ಷಣ ಸಂಸ್ಥೆಗಳ ಕುರಿತು ಮಾಹಿತಿ ಒದಗಿಸಬೇಕು,” ಎಂದು ಕರ್ನಾಟಕ, ಕೇರಳ ಉಪ ವಿಭಾಗಕೇಂದ್ರ ಕಚೇರಿಯ ಜನರಲ್‌ ಕಮಾಂಡಿಂಗ್‌ ಆಫೀಸರ್‌ ವಿಕ್ರಂ ಅಯ್ಯಂಗಾರ್‌ ರಾಜ್ಯ ಗೃಹ ಇಲಾಖೆಯ ಉಪ ಕಾರ್ಯದರ್ಶಿಗೆ ಫೆಬ್ರವರಿ 2017ರಲ್ಲಿ ಫ್ಯಾಕ್ಸ್‌ ಸಂದೇಶ ಕಳಿಸಿದ್ದರು.

<em>ಕೇರಳ ಉಪ ವಿಭಾಗ ಕೇಂದ್ರ ಕಚೇರಿಯ ಜನರಲ್‌ ಕಮಾಂಡಿಂಗ್‌ ಆಫೀಸರ್‌ ವಿಕ್ರಂ ಅಯ್ಯಂಗಾರ್‌ ಕಳಿಸಿದ್ದ ಫ್ಯಾಕ್ಸ್‌ ಸಂದೇಶದ ಪ್ರತಿ</em>
ಕೇರಳ ಉಪ ವಿಭಾಗ ಕೇಂದ್ರ ಕಚೇರಿಯ ಜನರಲ್‌ ಕಮಾಂಡಿಂಗ್‌ ಆಫೀಸರ್‌ ವಿಕ್ರಂ ಅಯ್ಯಂಗಾರ್‌ ಕಳಿಸಿದ್ದ ಫ್ಯಾಕ್ಸ್‌ ಸಂದೇಶದ ಪ್ರತಿ

ಕರ್ನಾಟಕ ಸರ್ಕಾರದ ಗೃಹ ಇಲಾಖೆಗೆ ಬಂದಿದ್ದ ಫ್ಯಾಕ್ಸ್‌ ಸಂದೇಶ ಆಧರಿಸಿ ಇಲಾಖೆಯ ಉಪ ಕಾರ್ಯದರ್ಶಿ, ಅದನ್ನು ರಾಜ್ಯ ಗುಪ್ತವಾರ್ತೆ ಐಜಿಪಿ ಅವರಿಗೆ ರವಾನಿಸಿ ಮದರಸ ಮತ್ತು ಮಸೀದಿಗಳಲ್ಲಿನ ಮಾಹಿತಿಗಳನ್ನು ಸಂಗ್ರಹಿಸಲು ಸೂಚಿಸಿದ್ದರು ಎಂಬುದು ಲಭ್ಯ ಇರುವ ದಾಖಲೆಯಿಂದ ಗೊತ್ತಾಗಿದೆ.

ಗೃಹ ಇಲಾಖೆಯ ಸೂಚನೆ ಮೇರೆಗೆ ರಾಜ್ಯ ಗುಪ್ತವಾರ್ತೆಯ ಪೊಲೀಸ್‌ ಮಹಾ ನಿರೀಕ್ಷಕರು ರಾಜ್ಯದ ಎಲ್ಲ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಿಗೆ ಮಾಹಿತಿ ಸಂಗ್ರಹಿಸುವಂತೆ 15-4-2017 ಮತ್ತು 11-5-2017 ರಂದು ಫ್ಯಾಕ್ಸ್‌ ಸಂದೇಶ ಕಳಿಸಿದ್ದರು.

“ನಿಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮದರಸ ಮತ್ತು ಮಸೀದಿಗಳ ಕುರಿತು ಲಭ್ಯ ಇರುವ ವಿವರವಾದ ಮಾಹಿತಿಯನ್ನು ಗೊತ್ತುಪಡಿಸಿರುವ ನಮೂನೆಯಲ್ಲಿ ಒದಗಿಸಬೇಕು. ಈ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸುವ ಅಗತ್ಯ ಇರುವುದಿಲ್ಲ. ಆದ್ಯತೆ ಮೇರೆಗೆ ತುರ್ತಾಗಿ ಈ ಮಾಹಿತಿಯನ್ನು ಒದಗಿಸಬೇಕು,” ಎಂದು ಈ ಫ್ಯಾಕ್ಸ್ ಸಂದೇಶದಲ್ಲಿ ಸೂಚಿಸಿದ್ದರು.

ಆದರೆ ಭಾರತೀಯ ಸೇನೆಯ ಈ ಪ್ರಯತ್ನ ಫಲ ನೀಡಲಿಲ್ಲ. ಮದರಸ ಮತ್ತು ಮಸೀದಿಗಳಿಗೆಸಂಬಂಧಿಸಿದ ವಿವರಗಳನ್ನು ಕಲೆ ಹಾಕಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಮುಂದಾಗಿದ್ದ ಸಂದರ್ಭದಲ್ಲೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಮಧ್ಯ ಪ್ರವೇಶಿಸಿದ್ದರು. ಕಾನೂನು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಿಗೆ 10-5-2017 ರಂದು ಪತ್ರ ಬರೆದು ಗುಪ್ತಚರ ವಿಭಾಗ ಹೊರಡಿಸಿದ್ದ ನಿರ್ದೇಶನಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು.

ರಾಜ್ಯ ಗುಪ್ತವಾರ್ತೆ ಪೊಲೀಸ್ ಮಹಾ ನಿರೀಕ್ಷಕರು 6-­10-2017 ರಂದು ಕಾನೂನು ಸುವ್ಯವಸ್ಥೆಯ ಎಡಿಜಿಪಿಗೆ ಬರೆದ ಪತ್ರದಲ್ಲಿ “ಒಳಾಡಳಿತಇಲಾಖೆಯ ಉಪ ಕಾರ್ಯದರ್ಶಿಯ ಸೂಚನೆಯ ಮೇರೆಗೆ ಮಾಹಿತಿ ಸಂಗ್ರಹಿಸಲು ನಿರ್ದೇಶನ ಹೊರಡಿಸಲಾಗಿತ್ತೇ ವಿನಾ ಬೇರೆ ಯಾವುದೇ ಉದ್ದೇಶವಿರುವುದಿಲ್ಲ. ಈ ಆದೇಶವನ್ನು ರಾಜ್ಯ ಗುಪ್ತವಾರ್ತೆ ಕಚೇರಿ ಸ್ವಯಂಪ್ರೇರಿತವಾಗಿ ಹೊರಡಿಸಿಲ್ಲ,” ಎಂದು ಸ್ಪಷ್ಟೀಕರಣ ನೀಡಿದ್ದರು.

ತೊಂಬತ್ತರ ದಶಕದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದ ಅರ್ಜುನ್‌ ಸಿಂಗ್‌ ಅವಧಿಯಲ್ಲಿ ಮದರಸಗಳ ಕುರಿತು ಸಮೀಕ್ಷೆ ನಡೆದಿತ್ತು. ಇದನ್ನು ಹೊರತುಪಡಿಸಿದರೆ ಈಗಿನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್ ಅವರು ಮದರಸಗಳ ಸುಧಾರಣೆ ಕುರಿತು ಮತ್ತು ಅವುಗಳನ್ನು ಕೇಂದ್ರೀಯ ನಿಯಂತ್ರಣ ವ್ಯವಸ್ಥೆಗೆ ಒಳಪಡಿಸುವ ಸಂಬಂಧ ಅಲ್ಪಸಂಖ್ಯಾತ ಕಲ್ಯಾಣ ಸಚಿವಾಲಯನೇತೃತ್ವದಲ್ಲಿ 2017 ರಲ್ಲಿ ಸಮಿತಿ‌ ರಚಿಸಿದ್ದರು.

ಜಮ್ಮು ಕಾಶ್ಮೀರಕ್ಕೆ ಎರಡು ತಿಂಗಳ ಹಿಂದೆ ಭೇಟಿ ನೀಡಿದ್ದ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್‌, ಮದರಸ ಮತ್ತು ಮಸೀದಿಗಳನ್ನು ನಿಯಂತ್ರಣಕ್ಕೆ ಒಳಪಡಿಸಬೇಕು ಎಂದು ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದನ್ನುಇಲ್ಲಿ ಸ್ಮರಿಸಬಹುದು.

ಬೆಳವಣಿಗೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಒಂದಷ್ಟು ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಂಡಿವೆ.

ದೇಶದ ಸೇನೆ ಸ್ವತಂತ್ರವಾಗಿ ಇಂಥ ಒಂದು ನಿರ್ಧಾರ ಕೈಗೊಳ್ಳುವುದು ಸಾಧ್ಯವಿದೆಯೇ? ಈ ಅತಿ ಸೂಕ್ಷ್ಮ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಅಥವಾ ಸಮ್ಮತಿ ಇಲ್ಲದೇ ಭಾರತೀಯ ಸೇನೆ ಮದರಸಗಳ ಚಟುವಟಿಕೆಗಳ ಕುರಿತು ಸಮೀಕ್ಷೆ ನಡೆಸಬಹುದೇ? ಅದಕ್ಕೆ ರಕ್ಷಣಾ ಸಚಿವಾಲಯದ ಒಪ್ಪಿಗೆ ಅಥವಾ ಮದರಸಗಳಿಂದ ದೇಶದಲ್ಲಿ ಗಂಭೀರ ಪರಿಸ್ಥಿತಿ ಎದುರಾಗಿದೆ ಎಂದು ಗೃಹ ಸಚಿವಾಲಯವೇನಾದರೂ ರಕ್ಷಣಾ ಸಚಿವಾಲಯಕ್ಕೆ ಟಿಪ್ಪಣಿಯನ್ನೇನಾದರೂ ರವಾನಿಸಿದೆಯೇ? ಇಲ್ಲಿ ಪ್ರಸ್ತಾಪಿಸಿರುವ ಯಾವುದೇ ಅಂಶಗಳು ಸಮೀಕ್ಷೆ ಎಂಬ ಪ್ರಕ್ರಿಯೆಯ ಭಾಗವಾಗಿದ್ದರೆ ಅದನ್ನು ಗುಪ್ತವಾಗಿ ಇರಿಸುವ ಅಗತ್ಯವಾದರೂ ಏನು? ಒಂದು ಧಾರ್ಮಿಕ ಸಂಸ್ಥೆಯ ಮೇಲೆ ಅನಗತ್ಯವಾಗಿ ಕಳಂಕ ಹೊರಿಸುವಂಥ ಪ್ರಕ್ರಿಯೆಗೆ ಕಾರಣವಾಗಿರುವುದಾದರೂ ಏನು? ಭಾರತೀಯ ಸೇನೆಯೇ? ಸಂಘ ಪರಿವಾರವೇ? ಪ್ರಧಾನಿ ನರೇಂದ್ರ ಮೋದಿಯೇ?

ಕಳೆದ ಐದು ವರ್ಷಗಳಲ್ಲಿ ಯಾವ ಪ್ರಶ್ನೆಗಳಿಗೂ ಸೂಕ್ತ ಉತ್ತರ ನೀಡದ ಸರಕಾರ ಹಾಗೂ ಅದರ ಮುಖ್ಯಸ್ಥರಿಂದ ಇಂತಹದೊಂದು ಸೂಕ್ಷ್ಮ ವಿಚಾರದಲ್ಲಿ ಉತ್ತರಗಳನ್ನು ನಿರೀಕ್ಷಿಸಲು ಹೇಗೆ ಸಾಧ್ಯ?

ಮೂಲ ವರದಿ: ಡಿ ಡೆಕ್ಕನ್ ನ್ಯೂಸ್