samachara
www.samachara.com
ಡಾ. ರಾಜ್ ಅಭಿಮಾನಿ, ಬಂಗಾರಪ್ಪ ಅನುಯಾಯಿ, ಪೌರಾಡಳಿತ ಸಚಿವ ಸಿ. ಎಸ್. ಶಿವಳ್ಳಿ ಇನ್ನಿಲ್ಲ
COVER STORY

ಡಾ. ರಾಜ್ ಅಭಿಮಾನಿ, ಬಂಗಾರಪ್ಪ ಅನುಯಾಯಿ, ಪೌರಾಡಳಿತ ಸಚಿವ ಸಿ. ಎಸ್. ಶಿವಳ್ಳಿ ಇನ್ನಿಲ್ಲ

ಡಾ.ರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಶಿವಳ್ಳಿ ಓದುವ ಕಾಲದಲ್ಲೇ ಡಾ.ರಾಜ್ ಅಭಿಮಾನಿ ಬಳಗವನ್ನು ಸ್ಥಾಪಿಸಿ 10 ವರ್ಷ ಅವರೇ ಅಧ್ಯಕ್ಷರಾಗಿಯೂ ಮುಂದುವರೆದಿದ್ದರು. ಕ್ರಮೇಣ ಬಂಗಾರಪ್ಪನವರ ದೆಸೆಯಿಂದ ರಾಜಕೀಯದತ್ತಲೂ ಮುಖಮಾಡಿದ್ದರು.

Team Samachara

ಇಂದು ಮಧ್ಯಾಹ್ನ 1.30 ರ ಸುಮಾರಿಗೆ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಕುಂದಗೋಳ ಕ್ಷೇತ್ರದ ಶಾಸಕ ರಾಜ್ಯ ಪೌರಾಡಳಿತ ಸಚಿವ ಸಿ. ಎಸ್. ಶಿವಳ್ಳಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ.

ಸಚಿವ ಶಿವಳ್ಳಿಯವರು ಈ ಹಿಂದೆಯೇ ಒಮ್ಮೆ ಬೈಪಾಸ್ ಸರ್ಜರಿ ಮಾಡಿಸಿಕೊಂಡಿದ್ದರು. ನಿನ್ನೆ ಧಾರವಾಡದಲ್ಲಿ ನಡೆದ ಕಟ್ಟಡ ದುರಂತ ಸ್ಥಳಕ್ಕೆ ಆಗಮಿಸಿ ದಿಗ್ಭ್ರಮೆ ವ್ಯಕ್ತಪಡಿಸಿದ್ದರು. ಅಲ್ಲದೆ ನಿನ್ನೆ ಮಧ್ಯರಾತ್ರಿವರೆಗೂ ದುರಂತ ಸ್ಥಳದಲ್ಲಿದ್ದು ಪರಿಹಾರ ಕಾರ್ಯದಲ್ಲಿ ಭಾಗವಹಿಸಿದ್ದರು. ಆದರೆ, ಇಂದು ಮಧ್ಯಾಹ್ನ ದಿಢೀರೆಂದು ಹೃದಯಾಘಾತವಾಗಿದೆ. ಕೂಡಲೇ ಅವರನ್ನು ನಗರದ ಲೈಫ್‌ಲೈನ್ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ರಾಜ್ ಅಭಿಮಾನಿ ಸಂಘದಿಂದ ಸಚಿವ ಸ್ಥಾನದ ವರೆಗೆ

ಸಿ.ಎಸ್. ಶಿವಳ್ಳಿ ಎಂದೇ ಜನಪ್ರಿಯರಾಗಿದ್ದ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ ಹುಟ್ಟಿದ್ದು ಧಾರವಾಡ ಜಿಲ್ಲೆ ಕುಂದಗೋಳದ ಯರಗುಪ್ಪಿ ಗ್ರಾಮದಲ್ಲಿ. ನಾಲ್ವರು ಸಹೋದರರು ಹಾಗೂ ಮೂವರು ಸಹೋದರಿಯರ ತುಂಬು ಕುಟುಂಬದ ಜೊತೆಗೆ ಬಡತನವೂ ಹಾಸಿ ಮಲಗಿತ್ತು. ಆದರೆ, ಇದು ಶಿವಳ್ಳಿಯವರ ಸಾಧನೆಯ ಹಾದಿಗೆ ಮುಳ್ಳಲಾಗಲಿಲ್ಲ.

ಶಿಕ್ಷಣವೇ ಅಭಿವೃದ್ಧಿಯ ಕೀಲಿ ಕೈ ಎಂದು ಅರಿತಿದ್ದ ಶಿವಳ್ಳಿ ಕಡು ಬಡತನದ ನಡುವೆಯೂ ಶಿಕ್ಷಣವನ್ನು ಮುಂದುವರೆಸಿದರು. ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಬಿಎ ಪದವಿ ಪಡೆದ ಶಿವಳ್ಳಿ ಓದುವ ಕಾಲದಿಂದಲೂ ರಾಜಕೀಯದ ಗೀಳು ಬೆಳೆಸಿಕೊಂಡಿದ್ದರು. ಅಲ್ಲದೆ ಮಾಜಿ ಮುಖ್ಯಮಂತ್ರಿ ದಿವಂಗತ ಸಾರೆಕೊಪ್ಪ ಬಂಗಾರಪ್ಪನವರ ಅನುಯಾಯಿಯಾಗಿದ್ದರು ಎಂಬುದು ವಿಶೇಷ.

ವರನಟ ಡಾ.ರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿಯೂ ಆಗಿದ್ದ ಶಿವಳ್ಳಿ ಓದುವ ಕಾಲದಲ್ಲಿ ವಿದ್ಯಾರ್ಥಿ ಸಂಘಟನೆ ಕಟ್ಟಿದ್ದರು ಅಲ್ಲದೆ ಯರಗುಪ್ಪಿ ಗ್ರಾಮದಲ್ಲಿ 1985ರಲ್ಲಿ ಡಾ.ರಾಜ್ ಅಭಿಮಾನಿ ಬಳಗವನ್ನು ಸ್ಥಾಪಿಸಿ 10 ವರ್ಷ ಅವರೇ ಬಳಗದ ಅಧ್ಯಕ್ಷರಾಗಿಯೂ ಮುಂದುವರೆದಿದ್ದರು.

ವಿದ್ಯಾರ್ಥಿ ಸಂಘಟನೆ, ಬಂಗಾರಪ್ಪ ಒಡನಾಟ ಹಾಗೂ ಡಾ. ರಾಜ್ ಅಭಿಮಾನಿ ಬಳಗ ಸೇರಿದಂತೆ ಜನರ ನಡುವೆ ಕೆಲಸ ಮಾಡುವುದನ್ನೇ ಇಷ್ಟಪಟ್ಟಿದ್ದ ಶಿವಳ್ಳಿ ಅವರಿಗೆ 1994ರಲ್ಲಿ ಬಂಗಾರಪ್ಪ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ವಿಧಾನಸಭೆ ಟಿಕೆಟ್ ತಾನಾಗಿಯೇ ಅರಸಿ ಬಂದಿತ್ತು. ಆದರೆ, ಈ ಚುನಾವಣೆಯಲ್ಲಿ ಕೇವಲ 19,700 ಮತಗಳಿಂದ ಸೋಲನುಭವಿಸಿದ ಅವರು ಸೋಲಿಗೆ ಮರುಗಿ ಸುಮ್ಮನೆ ಕೂರಲಿಲ್ಲ.

ಮತ್ತೆ ಗೆದ್ದು ಬಂದ ಹೋರಾಟಗಾರ

1994ರ ಸೋಲಿಗೆ ಶಿವಳ್ಳಿ ಮರುಗಿರಲಿಲ್ಲ. ಬದಲಿಗೆ ರಾಜಕೀಯ ಪಯಣದಲ್ಲಿ ದೊರೆಯ ಮೊದಲ ಸೋಲನ್ನು ಅವರು ಬಹಳ ಆಪ್ತವಾಗಿಯೇ ಸ್ವೀಕಾರ ಮಾಡಿದ್ದರು ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು.

ಆದರೆ, ಈ ಸೋಲಿನಿಂದಾಗಿ 1999ರ ವಿಧಾನ ಸಭೆ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ಲಭ್ಯವಾಗಿರಲಿಲ್ಲ. ಆದರೂ ಪಕ್ಷೇತರರಾಗಿ ಚುನಾವಣಾ ಕಣಕ್ಕೆ ಪ್ರವೇಶಿಸಿದ ಅವರು 11,000 ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದರು. ಅಲ್ಲದೆ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

2003 ಹಾಗೂ 2008ರ ಚುನಾವಣೆಗಳಲ್ಲಿ ಸತತ ಸೋಲನುಭವಿಸಿದ್ದ ಶಿವಳ್ಳಿ 2013 ಹಾಗೂ 2018ರ ಚುನಾವಣೆಯಲ್ಲಿ ಮತ್ತೆ ಗೆಲ್ಲುವ ಮೂಲಕ ಮೈತ್ರಿ ಸರಕಾರದಲ್ಲಿ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಜನಪರ ಶಾಸಕ

ಕ್ಷೇತ್ರದಲ್ಲಿ ಜನಪರ ಶಾಸಕರಾಗಿದ್ದ ಶಿವಳ್ಳಿ ನೆರವು ಕೇಳಿ ಬರುವ ಬಡವರಿಗೆ ವ್ಯಯಕ್ತಿಕವಾಗಿ ಸಹಾಯ ಮಾಡುತ್ತಿದ್ದರು. ಬಡವರಿಗೆ ಆಶ್ರಯಮನೆ, ಕುಡಿಯುವ ನೀರಿನ ಸೌಲಭ್ಯ, ಶುದ್ಧ ನೀರಿನ ಘಟಕ, ರಸ್ತೆ ನಿರ್ಮಾಣ ಸೇರಿದಂತೆ ಜನರಿಗೆ ಬೇಕಾದ ಎಲ್ಲಾ ಮೂಲಸೌಲಭ್ಯಗಳನ್ನು ಮಾಡಿಕೊಡಲು ಯಾವಾಗಲೂ ಮುಂದಿರುತ್ತಿದ್ದರು.

ಬಡ ಜನರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸಹಾಯ ಕೊಡಿಸುವ ಮೂಲಕ ಬಡವರ ಬಂಧು ಎಂದು ಹೆಸರಾಗಿದ್ದ ಶಿವಳ್ಳಿ ಮಹದಾಯಿ ನೀರಿಗಾಗಿ ದೆಹಲಿಯ ಜಂತರ್-ಮಂತರ್‌ನಲ್ಲಿ ಕ್ಷೇತ್ರದ ಜನರನ್ನು ಕರೆದೊಯ್ದು ಹೋರಾಟ ಮಾಡಿದ್ದರು. ಜನರ ಪರ ಹೋರಾಟಕ್ಕೆ ಯಾವಾಗಲೂ ಮುಂದಿರುತ್ತಿದ್ದ ಅವರು ಕೊನೆಗೂ ಈ ಲೋಕದ ಯಾತ್ರೆ ಮುಗಿಸಿದ್ದಾರೆ.

ಸಿ.ಎಸ್. ಶಿವಳ್ಳಿ ಅವರ ಪಾರ್ಥೀವ ಶರೀರರವನ್ನು ಇಂದು ಸಂಜೆಯ ವೇಳೆಗೆ ಕುಂದಗೋಳದಲ್ಲಿ ಜನರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ ನಾಳೆ ಅವರ ಹುಟ್ಟೂರು ಯರಗುಪ್ಪೆಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.