samachara
www.samachara.com
ಬೆಂಗಳೂರು ಕೇಂದ್ರದಲ್ಲಿ ತಮಿಳು ಭಾಷಿಕರೇ ನಿರ್ಣಾಯಕ; ಯಾವ ಅಂಕೆಗೂ ಸಿಗದ ಮತಕ್ಷೇತ್ರದ ಪರಿಚಯ
COVER STORY

ಬೆಂಗಳೂರು ಕೇಂದ್ರದಲ್ಲಿ ತಮಿಳು ಭಾಷಿಕರೇ ನಿರ್ಣಾಯಕ; ಯಾವ ಅಂಕೆಗೂ ಸಿಗದ ಮತಕ್ಷೇತ್ರದ ಪರಿಚಯ

ಈ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಗೆಲ್ಲಬೇಕು ಎಂದು ನಿರ್ಧರಿಸುವುದು ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತರ ಮತಗಳೇ. ಅದರಲ್ಲೂ ತಮಿಳರು ಹಾಗೂ ತೆಲುಗು ಭಾಷಿಕರ ಮತಗಳು ಈ ಭಾಗದಲ್ಲಿ ನಿರ್ಣಾಯಕ ಎನ್ನಲಾಗುತ್ತದೆ.

ಅಶೋಕ್ ಎಂ ಭದ್ರಾವತಿ

ಅಶೋಕ್ ಎಂ ಭದ್ರಾವತಿ

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಅತ್ಯಂತ ವೈವಿಧ್ಯಮಯ ಹಾಗೂ ಎಲ್ಲಕ್ಕಿಂತ ವಿಭಿನ್ನ ಲೋಕಸಭಾ ಕ್ಷೇತ್ರ ಎಂದರೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲೇ ಇದ್ದಾಗ್ಯೂ ಮಿನಿ ಭಾರತದಂತೆ ಗೋಚರಿಸುವ ಈ ಕ್ಷೇತ್ರ ಎಲ್ಲಾ ಭಾಷಿಕರಿಗೆ ಹಾಗೂ ಎಲ್ಲಾ ಧರ್ಮದವರಿಗೂ ಬದುಕಲು ನೆಲೆ ಕೊಟ್ಟಿದೆ.

ಈ ಎಲ್ಲಾ ವಿಚಾರಗಳಿಗಿಂತ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಈ ಭಾರಿ ಹೆಚ್ಚು ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಚಿತ್ರ ನಟ ಪ್ರಕಾಶ್ ರಾಜ್. ರಾಜಕೀಯ ಪಕ್ಷಗಳು ಇನ್ನೂ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ಮುನ್ನವೇ ಕಣ ಪ್ರವೇಶಿಸಿರುವ ಪ್ರಕಾಶ್ ರಾಜ್ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಹೀಗಾಗಿ ಈ ಕ್ಷೇತ್ರ ಬಿಜೆಪಿ, ಕಾಂಗ್ರೆಸ್-ಜೆಡಿಎಸ್ ಹಾಗೂ ಪ್ರಕಾಶ್ ರಾಜ್ ಅವರ ತ್ರಿಕೋನ ಸ್ಪರ್ಧೆಗೆ ಅಣಿಯಾಗಿದೆ.

ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಎಂಬುದರ ಸ್ಪಷ್ಟತೆ ಮತದಾರರಿಗೆ ಇದೆ. ಆದರೆ, ಕಾಂಗ್ರೆಸ್ ಈವರೆಗೆ ಅಭ್ಯರ್ಥಿಯನ್ನು ಘೋಷಿಸದೆ ಕಾಲಹರಣ ಮಾಡುತ್ತಿದ್ದು, ಚುನಾವಣಾ ಪ್ರಚಾರ ಇನ್ನೂ ಕಾವು ಪಡೆಯುತ್ತಿಲ್ಲ. ಈ ನಡುವೆ ಕ್ಷೇತ್ರದಲ್ಲಿ ಸಮಾಚಾರತಂಡ ನಡೆಸಿದ ಸಮೀಕ್ಷೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ:

ಬೆಂಗಳೂರಿನ ಹೃದಯ ಭಾಗದಲ್ಲಿರುವ ಈ ಕ್ಷೇತ್ರದಲ್ಲಿ ಕನ್ನಡಿಗರಿಗಿಂತ ಅನ್ಯ ಭಾಷಿಕರ ಸಂಖ್ಯೆಯೇ ಅಧಿಕ. ಸುಮಾರು 22 ಲಕ್ಷ ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಸುಮಾರು 5.5 ಲಕ್ಷ ತಮಿಳರು, 2 ಲಕ್ಷಕ್ಕೂ ಅಧಿಕ ತೆಲುಗು ಭಾಷಿಕರಿದ್ದಾರೆ. 1.5 ಲಕ್ಷ ಕೈಸ್ತರೂ ಹಾಗೂ 4 ಲಕ್ಷಕ್ಕೂ ಅಧಿಕ ಮುಸ್ಲಿಂ ಮತದಾರರಿದ್ದಾರೆ. ಇನ್ನೂ ಮಾರ್ವಾಡಿಗಳು ಹಾಗೂ ಜೈನ ಸಮುದಾಯದವರು ಗಣನೀಯ ಸಂಖ್ಯೆಯಲ್ಲಿದ್ದಾರೆ.

ಈ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಗೆಲ್ಲಬೇಕು ಎಂದು ನಿರ್ಧರಿಸುವುದು ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತರ ಮತಗಳೇ. ತಮಿಳರು ಹಾಗೂ ತೆಲುಗು ಭಾಷಿಕರ ಮತಗಳು ಈ ಭಾಗದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.

2014ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಪಿ. ಸಿ. ಮೋಹನ್ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ರಿಜ್ವಾನ್ ಅರ್ಷದ್‌ ವಿರುದ್ಧ 1.38 ಲಕ್ಷ ಮತಗಳ ಅಂತರದಲ್ಲಿ ಗೆಲುವು ದಾಖಲಿಸುವ ಮೂಲಕ ಈ ಕ್ಷೇತ್ರದಲ್ಲಿ ಎರಡು ಭಾರಿ ಗೆಲುವು ದಾಖಲಿಸಿದ ಶ್ರೇಯಕ್ಕೆ ಪಾತ್ರರಾಗಿದ್ದರು.

ಈ ಚುನಾವಣೆಯಲ್ಲಿ ಸುಮಾರು ಶೇ.90 ರಷ್ಟು ತಮಿಳರ ಹಾಗೂ ದಲಿತರ ಮತಗಳು ಪಿ. ಸಿ. ಮೋಹನ್ ಪಾಲಾಗಿತ್ತು. ಇದೇ ಕಾರಣಕ್ಕೆ ಮೋಹನ್ ಸುಲಭದಲ್ಲಿ ಗೆಲುವು ಸಾಧಿಸಿದ್ದರು ಎನ್ನಲಾಗಿತ್ತು. ಬಹುತೇಕ ಈ ಬಾರಿಯ ಚುನಾವಣೆಯಲ್ಲೂ ಪಿ.ಸಿ. ಮೋಹನ್ ಹಾಗೂ ರಿಜ್ವಾನ್ ಅರ್ಷದ್ ಮುಖಾಮುಖಿಯಾಗುವ ಸಾಧ್ಯತೆ ಇದೆ. ಇವರ ನಡುವೆ ಚಿತ್ರನಟ ಪ್ರಕಾಶ್ ರಾಜ್ ಸಹ ಸ್ಪರ್ಧೆ ನಡೆಸುತ್ತಿದ್ದು ಇದೇ ಕಾರಣಕ್ಕೆ ಈ ಕ್ಷೇತ್ರ ಇಡೀ ರಾಜ್ಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಕ್ಷೇತ್ರವಾರು ಮತಗಳ ಲೆಕ್ಕಾಚಾರ

ಗಾಂಧಿನಗರ, ಸರ್ವಜ್ಞ ನಗರ, ಸಿ.ವಿ. ರಾಮನ್ ನಗರ, ಶಿವಾಜಿನಗರ, ಶಾಂತಿನಗರ, ರಾಜಾಜಿನಗರ, ಚಾಮರಾಜಪೇಟೆ ಹಾಗೂ ಮಹದೇವಪುರ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿಯ ಮೂವರು ಶಾಸಕರಿದ್ದರೆ, ಕಾಂಗ್ರೆಸ್‌ನ ಐದು ಜನ ಶಾಸಕರಿದ್ದಾರೆ.

ಬೆಂಗಳೂರು ಕೇಂದ್ರದಲ್ಲಿ ತಮಿಳು ಭಾಷಿಕರೇ ನಿರ್ಣಾಯಕ; ಯಾವ ಅಂಕೆಗೂ ಸಿಗದ ಮತಕ್ಷೇತ್ರದ ಪರಿಚಯ
/ವಿಜಯ ಕರ್ನಾಟಕ

ಸಾಮಾನ್ಯವಾಗಿ ಈ ಕ್ಷೇತ್ರ ಅಲ್ಪಸಂಖ್ಯಾತ ಮತದಾರರ ಕ್ಷೇತ್ರ. ಹೀಗಾಗಿ ಇಲ್ಲಿ ಯಾವಾಗಲೂ ಕಾಂಗ್ರೆಸ್‌ನದ್ದೇ ಮೇಲುಗೈ ಎಂದು ಬಿಂಬಿಸಲಾಗುತ್ತದೆ. ಆದರೆ ಈ ಎಲ್ಲಾ ಲೆಕ್ಕಾಚಾರಗಳನ್ನು ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿ ಬುಡಮೇಲು ಮಾಡಿದೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಎಂದರೆ ಅಲ್ಪಸಂಖ್ಯಾತ ಮುಸ್ಲಿಂ ಮತಗಳೇ ನಿರ್ಣಾಯಕ ಎನ್ನುವ ವಾದವಿದೆ. ಆದರೆ, ಇದು ಸತ್ಯವಲ್ಲ. ಶಿವಾಜಿನಗರದ ಹೊರತಾಗಿ ಬೇರೆಲ್ಲೂ ಅಧಿಕ ಮುಸ್ಲಿಮರಿಲ್ಲ ಇಡೀ ಕ್ಷೇತ್ರದಲ್ಲಿರುವುದು ಕೇವಲ 4 ಲಕ್ಷ ಮುಸ್ಲಿಮರು. ತಮಿಳರ ಸಂಖ್ಯೆ ಇದಕ್ಕಿಂತ ಅಧಿಕವಿದೆ. ತಮಿಳರ ಒಲವು ಯಾವಾಗಲೂ ಮೋಹನ್ ಪರವಾಗಿಯೇ ಇದ್ದು, ಈ ಬಾರಿಯೂ ಅವರೇ ಗೆಲ್ಲುವ ಸಾಧ್ಯತೆ ಇದೆ. 
ರಿಜ್ವಾನ್ದಿ, ‘ಸಿಯಾಸತ್ ಡೈಲಿ’ ಉರ್ದು ಪತ್ರಿಕೆಯ ಸಂಪಾದಕರು.

ಕ್ಷೇತ್ರದ ಮತದಾರರ ಸಂಖ್ಯೆಯ ಕಡೆಗೆ ಒಮ್ಮೆ ಕಣ್ಣಾಯಿಸಿದರೆ ಇಲ್ಲಿ ಅಲ್ಪಸಂಖ್ಯಾತರ ಮತಗಳಿಗಿಂತ ತಮಿಳು, ತೆಲುಗು, ದಲಿತರ ಮತಗಳೇ ನಿರ್ಣಾಯಕ ಎಂಬುದು ಸ್ಪಷ್ಟವಾಗುತ್ತದೆ.

ಗಾಂಧಿನಗರ, ಶಾಂತಿನಗರ, ಸರ್ವಜ್ಞನಗರ ಹಾಗೂ ಸಿ.ವಿ ರಾಮನ್ ನಗರಗಳಲ್ಲಿ ತಮಿಳು, ತೆಲುಗು ಹಾಗೂ ದಲಿತರ ಮತಗಳು ಅಧಿಕವಿದೆ. ಕಳೆದ ಮೂರು ದಶಕಗಳಿಂದ ಈ ಭಾಗದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತ್ತು. ಆದರೆ. ಕಳೆದ ಒಂದು ದಶಕದಿಂದ ಪರಿಸ್ಥಿತಿ ಬದಲಾಗಿದೆ.

2008ರಲ್ಲಿ ಯಡಿಯೂರಪ್ಪ ಹಾಗೂ ಅಂದಿನ ತಮಿಳುನಾಡಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಎರಡೂ ರಾಜ್ಯಗಳ ಸಾಮರಸ್ಯಕ್ಕಾಗಿ ಸರ್ವಜ್ಞನಗರದಲ್ಲಿ ತಮಿಳಿನ ದಾರ್ಶನಿಕ ತಿರುವಳ್ಳುವರ್ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಈ ಐತಿಹಾಸಿಕ ಘಟನೆಯಿಂದಾಗಿ ಈ ಭಾಗದ ಬಹುಸಂಖ್ಯಾತ ತಮಿಳರ ಮತಗಳು ಬಿಜೆಪಿ ಪಾಲಾಗಿವೆ ಎನ್ನುತ್ತಿವೆ ಸಮೀಕ್ಷೆಗಳು. ಕಳೆದ 10 ವರ್ಷಗಳ ಅವಧಿಯಲ್ಲಿ ಈ ಭಾಗದಲ್ಲಿ ಶೇ.90 ರಷ್ಟು ತಮಿಳರ ಮತಗಳನ್ನು ಬಿಜೆಪಿಯೇ ಪಡೆದಿರುವುದು ಇದಕ್ಕೆ ಪುಷ್ಠಿ ನೀಡುತ್ತಿದೆ.

ತಿರುವಳ್ಳುವರ್‌ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಂದಿನ ಕರ್ನಾಟಕ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ತಮಿಳುನಾಡು ಸಿಎಂ ಎಂ. ಕರುಣಾನಿಧಿ.
ತಿರುವಳ್ಳುವರ್‌ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಂದಿನ ಕರ್ನಾಟಕ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ತಮಿಳುನಾಡು ಸಿಎಂ ಎಂ. ಕರುಣಾನಿಧಿ.
/ದಿ ಹಿಂದೂ

ಇದಲ್ಲದೆ ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷ ಬಿಜೆಪಿಯ ಜೊತೆಗೆ ಮೈತ್ರಿ ಸಾಧಿಸಿರುವುದರಿಂದ ಕರ್ನಾಟಕದಲ್ಲಿ ಬಿಜೆಪಿಗೆ ಮತ್ತಷ್ಟು ಮತಗಳು ಹರಿದುಬರಲಿದೆ ಎನ್ನುತ್ತಿದ್ದಾರೆ ಬಿಜೆಪಿ ನಾಯಕರು.

ಇನ್ನೂ ಅಧಿಕ ಕನ್ನಡಿಗರು ವಾಸಿಸುವ ರಾಜಾಜಿನಗರ ಹಾಗೂ ಮಹದೇವಪುರ ಬಿಜೆಪಿ ಭದ್ರಕೋಟೆಗಳೇ. ಮಾಜಿ ಸಚಿವ ಎಸ್‌. ಸುರೇಶ್ ಕುಮಾರ್ ಪ್ರತಿನಿಧಿಸುವ ರಾಜಾಜಿನಗರದ ಮತದಾರರ ಸಂಖ್ಯೆ ಸುಮಾರು 2.8 ಲಕ್ಷ. ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಈ ಭಾಗದಲ್ಲಿ ಸುಮಾರು 2 ಲಕ್ಷ ಮತಗಳು ದಾಖಲಾಗಿದ್ದವು. ಈ ಪೈಕಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟಾಗಿ 45 ಸಾವಿರ ಮಾತ್ರಗಳನ್ನು ಗಳಿಸಿದ್ದರೆ, ಬಿಜೆಪಿ ಸುಮಾರು 1.3 ಲಕ್ಷ ಮತಗಳನ್ನು ಪಡೆಯುವ ಮೂಲಕ 90 ಸಾವಿರ ಮತಗಳ ಲೀಡ್ ಸಾಧಿಸಿತ್ತು.

ಬೆಂಗಳೂರಿನಲ್ಲಿಯೇ ಬಿಜೆಪಿಗೆ ಅತ್ಯಂತ ಹೆಚ್ಚು ಲೀಡ್ ಕೊಟ್ಟ ಕ್ಷೇತ್ರ ಇದಾಗಿದೆ. ಹೀಗಾಗಿ ಈ ಕ್ಷೇತ್ರವನ್ನು ಬಿಜೆಪಿ ಪಾಲಿನ ನೆಚ್ಚಿನ ಕ್ಷೇತ್ರ ಎಂದೇ ಬಿಂಬಿಸಲಾಗುತ್ತದೆ.

ಇನ್ನೂ ಮಹದೇವಪುರದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನು ಇಲ್ಲ. ಬಿಜೆಪಿಯ ಶಾಸಕ ಅರವಿಂದ ಲಿಂಬಾವಳಿ ಪ್ರತಿನಿಧಿಸುವ ಮಹದೇವಪುರದಲ್ಲಿ 2.7 ಲಕ್ಷ ಮತದಾರರಿದ್ದು, ಕಳೆದ ಮೂರು ಚುನಾವಣೆಗಳಿಂದ ಬಿಜೆಪಿ ಈ ಭಾಗದಲ್ಲಿ ಸುಮಾರು 40 ಸಾವಿರಕ್ಕಿಂತ ಅಧಿಕ ಮತಗಳ ಲೀಡ್ ಪಡೆಯುತ್ತಿದೆ. ಹೀಗಾಗಿ ಈ ಬಾರಿಯೂ ಈ ಭಾಗದಿಂದ ಅಧಿಕ ಮತ ಪಡೆಯುವ ನಿರೀಕ್ಷೆಯಲ್ಲಿದೆ.

ಕಾಂಗ್ರೆಸ್ ಪಾಲಿನ ಮತಗಳೆಷ್ಟು?

ಬೆಂಗಳೂರು ಕೇಂದ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಾಲಿಗೆ ಪೂರಕವಾಗಿರುವುದು ಎರಡು ಕ್ಷೇತ್ರಗಳು ಮಾತ್ರ; ಚಾಮರಾಜಪೇಟೆ ಹಾಗೂ ಶಿವಾಜಿನಗರ.

ಶೇ.70 ರಷ್ಟು ಅಲ್ಪ ಸಂಖ್ಯಾತರನ್ನು ಹೊಂದಿರುವ ಈ ಕ್ಷೇತ್ರದ ಮೇಲೆ ದಶಕಗಳಿಂದ ಕಾಂಗ್ರೆಸ್‌ಗೆ ಹಿಡಿತವಿದೆ. ಶಿವಾಜಿನಗರದಲ್ಲಿ ರೋಷನ್ ಬೇಗ್ ಹಾಗೂ ಚಾಮರಾಜಪೇಟೆಯಲ್ಲಿ ಸಚಿವ ಜಮಿರ್ ಅಹ್ಮದ್‌ ಹೆಸರಿನಲ್ಲಿ ಒಂದಷ್ಟು ಶಾಶ್ವತ ಮತಗಳಿವೆ. ಹೀಗಾಗಿ ಎಂಟು ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಲೀಡ್ ಪಡೆಯುವ ಸಾಧ್ಯತೆ ಇರುವುದು ಕೇವಲ ಈ ಎರಡು ಕ್ಷೇತ್ರಗಳಲ್ಲಿ ಮಾತ್ರ ಎಂಬುದು ಚುನಾವಣಾ ವಿಶ್ಲೇಷಕರ ಅಭಿಪ್ರಾಯ. ಕಳೆದ ಚುನಾವಣೆಗಳಲ್ಲೂ ಈ ಭಾಗದಿಂದಲೇ ಕಾಂಗ್ರೆಸ್‌ಗೆ ಹೆಚ್ಚು ಮತ ಹರಿದು ಬಂದಿತ್ತು.

ಸಂಸದ ಪಿ.ಸಿ. ಮೋಹನ್ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಕ್ಷೇತ್ರದ ಜನರಿಗೆ ಅವರ ಮೇಲೆ ಅಸಮಾಧಾನವಿದೆ. ಕೇವಲ ಮೋದಿ ಅಲೆಯಲ್ಲೇ ಗೆದ್ದುಬಿಡಬಹುದು ಎಂಬ ಭ್ರಮೆ ಅವರಲ್ಲಿದೆ. ಆದರೆ, ಬಹುಪಾಲು ಕೂಲಿ ಕೆಲಸಗಾರರೆ ಇರುವ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಮೋದಿ ಅಲೆ ಇಲ್ಲ. ಹೀಗಾಗಿ ರಿಜ್ವಾನ್ ಅರ್ಷದ್‌ಗೆ ಟಿಕೆಟ್ ಘೋಷಣೆಯಾದರೆ ಕಾಂಗ್ರೆಸ್ ಗೆಲುವು ಖಚಿತ.
ಸೂರ್ಯನಾರಾಯಣ ಮುಕುಂದರಾಜ್, ಕಾಂಗ್ರೆಸ್ ನಾಯಕ.
ವಿಧಾನ ಪರಿಷತ್‌ ಸದಸ್ಯ ರಿಜ್ವಾನ್ ಅರ್ಷದ್.
ವಿಧಾನ ಪರಿಷತ್‌ ಸದಸ್ಯ ರಿಜ್ವಾನ್ ಅರ್ಷದ್.

ಕಳೆದ 2014ರ ಚುನಾವಣೆಯಲ್ಲಿ ಶಿವಾಜಿನಗರ ಹಾಗೂ ಚಾಮರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸುಮಾರು 80 ಸಾವಿರ ಮತಗಳ ಲೀಡ್‌ ಪಡೆದಿತ್ತು. ಆದರೆ, ಬಿಜೆಪಿ ಪಕ್ಷವು ಕೇವಲ ರಾಜಾಜಿನಗರದಲ್ಲೇ 90 ಸಾವಿರ ಮತಗಳ ಲೀಡ್ ಪಡೆದಿತ್ತು. ಹೀಗಾಗಿ ಅಲ್ಪ ಸಂಖ್ಯಾತರು ಅಧಿಕವಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಪಡೆಯುವ ಮತಗಳನ್ನು ರಾಜಾಜಿನಗರದ ಒಂದೇ ಕ್ಷೇತ್ರದಲ್ಲಿ ಬಿಜೆಪಿ ಸರಿಗಟ್ಟುತ್ತದೆ ಎಂಬುದು ಪಕ್ಷದ ಅಭಿಮತ.

ಅರ್ಥವಾಗದ ಜನರ ಮನಸ್ಥಿತಿ

ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಬೇಕು ಆದರೆ, ಲೋಕಸಭೆಗೆ ಕಮಲವೇ ಅಚ್ಚುಮೆಚ್ಚು ಎಂಬುದು ಈ ಕ್ಷೇತ್ರದ ಮತದಾರರ ಮನಸ್ಥಿತಿ. ಇದನ್ನು ಕಳೆದ ಹಲವು ಚುನಾವಣೆಗಳು ಸಾಬೀತು ಮಾಡಿವೆ. ಗಾಂಧಿನಗರ ಕಳೆದ ಹಲವು ದಶಕಗಳಿಂದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೆಬ್ಬಾಗಿಲು ಎಂದೇ ಗುರುತಿಸಲಾಗುತ್ತದೆ.

ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಪುತ್ರ ದಿನೇಶ್ ಗುಂಡೂರಾವ್ ಗಾಂಧಿನಗರದಲ್ಲಿ ಸ್ಪರ್ಧಿಸಿ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. ಪ್ರಸ್ತುತ ಕೆಪಿಸಿಸಿ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಇಲ್ಲಿನ ಎಲ್ಲಾ ವಿಧಾನಸಭೆ ಚುನಾವಣೆಯಲ್ಲಿ ದಿನೇಶ್ ಗುಂಡೂರಾವ್ ಅವರಿಗೆ ಮತ ಚಲಾಯಿಸುವ ಮತದಾರರು ಲೋಕಸಭೆಯಲ್ಲಿ ಮಾತ್ರ ಬಿಜೆಪಿಗೆ ಮತ ಚಲಾಯಿಸುವ ಮೂಲಕ ತಮ್ಮ ಮನಸ್ಥಿತಿಯಲ್ಲಿನ ಭಿನ್ನತೆಯನ್ನು ತೋರಿಸುತ್ತಿದ್ದಾರೆ.

2013ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ನ ದಿನೇಶ್ ಗುಂಡೂರಾವ್ ಎದುರು ಇಂದಿನ ಬಿಜೆಪಿಯ ಸಂಸದ ಇದೇ ಪಿ.ಸಿ. ಮೋಹನ್ ಸ್ಫರ್ಧಿಸಿ ಸೋಲನುಭವಿಸಿದ್ದರು. ಆದರೆ, 2014ರ ಲೋಕಸಭೆ ಚುನಾವಣೆಯಲ್ಲಿ ಪಿ.ಸಿ. ಮೋಹನ್ ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ವಿರುದ್ಧ 1.4 ಲಕ್ಷ ಮತಗಳ ದಾಖಲೆಯ ಅಂತರದಲ್ಲಿ ಗೆಲುವು ಸಾಧಿಸಿ ಎರಡನೇ ಬಾರಿ ಲೋಕಸಭೆ ಪ್ರವೇಶಿಸಿದ್ದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಈ ಭಾಗದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದಾಗ್ಯೂ ಬಿಜೆಪಿ ಈ ಕ್ಷೇತ್ರದಿಂದ 50 ಸಾವಿರಕ್ಕೂ ಅಧಿಕ ಮತಗಳ ಲೀಡ್ ಪಡೆದಿತ್ತು. ಇನ್ನೂ ಕೆ.ಜೆ. ಜಾರ್ಜ್ ಪ್ರತಿನಿಧಿಸುವ ಸರ್ವಜ್ಞನಗರ ಹಾಗೂ ಶಾಸಕ ಎನ್‌.ಎ. ಹ್ಯಾರಿಸ್ ಪ್ರತಿನಿಧಿಸುವ ಶಾಂತಿನಗರದ ಕಥೆಯೂ ಇದಕ್ಕಿಂತ ಭಿನ್ನವಾಗೇನು ಇಲ್ಲ.

ಕೆ.ಜೆ.ಜಾರ್ಜ್ ಹಾಗೂ ಎನ್‌.ಎ. ಹ್ಯಾರಿಸ್ ಕಳೆದ ಮೂರು ಅವಧಿಯಿಂದ ಕ್ರಮವಾಗಿ ಸರ್ವಜ್ಞ ನಗರ ಹಾಗೂ ಶಾಂತಿನಗರವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ ಕಳೆದ ಮೂರೂ ಲೋಕಸಭಾ ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಅತಿ ಹೆಚ್ಚು ಮತ ಪಡೆದಿತ್ತು ಎಂಬುದು ಉಲ್ಲೇಖಾರ್ಹ.

ಇವನ್ನೆಲ್ಲ ಗಮನಿಸಿದರೆ ಈ ಭಾಗದಲ್ಲಿ ವಿಧಾನಸಭೆಗೆ ಕಾಂಗ್ರೆಸ್ ಪಕ್ಷವನ್ನು ಲೋಕಸಭೆಗೆ ಬಿಜೆಪಿಯನ್ನು ಆಯ್ಕೆ ಮಾಡುವ ಜನರ ಮನಸ್ಥಿತಿ ಅರ್ಥವಾಗುತ್ತದೆ. ಅಲ್ಲದೆ ಈ ಬಾರಿಯ ಚುನಾವಣೆಯಲ್ಲೂ ಇದು ಪುನರಾವರ್ತನೆಯಾಗುವ ಸಾಧ್ಯತೆ ಇದೆ.

ಮೈತ್ರಿಗಿಲ್ಲ ಕಿಮ್ಮತ್ತು

ಪ್ರಸ್ತುತ ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟಾಗಿ ರಾಜ್ಯದಲ್ಲಿ ಸರಕಾರ ನಡೆಸುತ್ತಿದೆ. ಅಲ್ಲದೆ ಒಗ್ಗಟ್ಟಾಗಿಯೇ ಚುನಾವಣೆಯನ್ನು ಎದುರಿಸುವ ಘೋಷಣೆಯನ್ನೂ ಹೊರಡಿಸಿದೆ. ಮೈತ್ರಿ ಸೂತ್ರದ ಅನ್ವಯ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಕಾಂಗ್ರೆಸ್‌ಗೆ ಬಿಟ್ಟು ಕೊಟ್ಟಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಒಗ್ಗಟ್ಟಾಗಿರುವ ಕಾರಣ ಬೆಂಗಳೂರು ಕೇಂದ್ರದಲ್ಲಿ ಕಾಂಗ್ರೆಸ್‌ ಪಕ್ಷದ ಬಲ ಹೆಚ್ಚಾಗಲಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಅದರೆ, ಅಸಲಿಗೆ ಈ ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ ನೆಲೆಯೇ ಇಲ್ಲ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಬೆಂಗಳೂರು ಕೇಂದ್ರದಿಂದ ಸ್ಪರ್ಧಿಸಿದ್ದ ನಂದಿನಿ ಆಳ್ವಾ ಗಳಿಸಿದ್ದು ಕೇವಲ 20 ಸಾವಿರ ಮತಗಳು ಮಾತ್ರ.

ಈ ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ ಸಂಘಟನೆಯಾಗಲಿ ಗಣನೀಯ ಸಂಖ್ಯೆಯಲ್ಲಿ ಕಾರ್ಯಕರ್ತರಾಗಲಿ ಇಲ್ಲ. ಹೀಗಾಗಿ ಪ್ರತಿ ಚುನಾವಣೆಯಲ್ಲೂ ಬಿಜೆಪಿ ಪಕ್ಷದ ನೇರ ಎದುರಾಳಿ ಕಾಂಗ್ರೆಸ್ ಪಕ್ಷವೇ ಆಗಿತ್ತು. ಈ ಬಾರಿಯೂ ಇದು ಪುನರಾವರ್ತನೆಯಾಗಲಿದ್ದು, ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವ ಲಾಭವೂ ಇಲ್ಲ ಎನ್ನಲಾಗುತ್ತಿದೆ.

ಕೈ ಮತಕ್ಕೆ ಕೈ ಹಾಕಿದ ಪ್ರಕಾಶ್ ರಾಜ್

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ನಂತರ #JustAsking ಸಂಘಟನೆ ಮೂಲಕ ಕೇಂದ್ರ ಸರಕಾರವನ್ನು ಪ್ರಶ್ನೆ ಮಾಡುತ್ತಾ ಬಿಜೆಪಿ ನಾಯಕರ ಬೆವರಿಳಿಸಿದವವರು ಚಿತ್ರನಟ ಪ್ರಕಾಶ್ ರಾಜ್. ಸಂಸತ್ ಪ್ರವೇಶಿಸುವ ಮೂಲಕ ಸದನದಲ್ಲೂ ತಾವು ಅಧಿಕಾರದಲ್ಲಿರುವವರನ್ನು ಪ್ರಶ್ನೆ ಮಾಡುತ್ತೇನೆ ಎಂದು ಘೋಷಿಸಿರುವ ಅವರು ಚುನಾವಣಾ ಕಣಕ್ಕೆ ಧುಮುಕಿದ್ದಾರೆ.

ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸುಮಾರು 180 ಕ್ಕೂ ಅಧಿಕ ಸ್ಲಂಗಳಿದ್ದು ಈ ಭಾಗದಲ್ಲಿ ಸುಮಾರು 7 ಲಕ್ಷಕ್ಕೂ ಅಧಿಕ ಬಡ ತಮಿಳರ, ಕ್ರೈಸ್ತರ ಹಾಗೂ ದಲಿತರ ಮತಗಳಿವೆ. ಈ ಮತಗಳ ಮೇಲೆ ಕಣ್ಣಿಟ್ಟಿರುವ ಪ್ರಕಾಶ್ ರಾಜ್ ಪ್ರತಿದಿನ ಸ್ಲಂಗಳಿಗೆ ಭೇಟಿ ನೀಡಿ ಸಿನಿಮಾ ಶೈಲಿಯಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುತ್ತಿದ್ದಾರೆ.

ಅಲ್ಲದೆ “ಈ ಭಾಗದಲ್ಲಿ ವಾಸಿಸುತ್ತಿರುವ ಬಡಜನರಿಗೆ ಈವರೆಗೆ ಸರಕಾರ ಹಕ್ಕುಪತ್ರ ನೀಡಿಲ್ಲ. ತಾನು ಗೆದ್ದರೂ ಸೋತರು ನಿಮ್ಮ ಹಕ್ಕುಪತ್ರ ಕೊಡಿಸುವ ಹೋರಾಟವನ್ನು ನಿರಂತರವಾಗಿ ಮಾಡುತ್ತೇನೆ” ಎಂದು ಆಶ್ವಾಸನೆ ನೀಡುತ್ತಿದ್ದಾರೆ.

ಪ್ರಕಾಶ್ ರಾಜ್ ಜನರ ಸಮಸ್ಯೆಗಳಿಗಾಗಿ ಹೋರಾಡಲು ಸಿದ್ದರಾಗಿದ್ದಾರೆ. ಪ್ರತಿದಿನ ಸ್ಲಂ ಭಾಗಗಳಿಗೆ ಭೇಟಿ ಕೊಟ್ಟು ಜನರ ಜೊತೆಗೆ ಬೆರೆಯುತ್ತಿದ್ದಾರೆ. ಜನರೂ ಸಹ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಈ ಸ್ಲಂ ಭಾಗದಲ್ಲಿ ಅಧಿಕವಾಗಿರುವ ತಮಿಳು ಹಾಗೂ ತೆಲುಗು ಭಾಷಿಕರ ಮತ ಪಡೆದರೂ ಪ್ರಕಾಶ್ ರಾಜ್ ಗೆಲ್ಲುವುದು ಖಚಿತ.
ಜಗದೀಶ್ ವಿ- ಮಾಧ್ಯಮ ವಕ್ತಾರರು ಜಸ್ಟ್ ಆಸ್ಕಿಂಗ್

ಸ್ಲಂ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿರುವ ತಮಿಳು, ತೆಲುಗು ಜನ ಹಾಗೂ ಕ್ರೈಸ್ತರು ತಮ್ಮ ಕೈ ಹಿಡಿಯುತ್ತಾರೆ. ಈ ಮೂಲಕ ಸುಮಾರು 5 ಲಕ್ಷ ಮತಗಳನ್ನು ಪಡೆದರೆ ತಾವು ಸುಲಭವಾಗಿ ಗೆಲುವು ಸಾಧಿಸಬಹುದು ಎಂಬುದು ನಟ ಪ್ರಕಾಶ್ ರಾಜ್ ಅವರ ಲೆಕ್ಕಾಚಾರ.

ಬೆಂಗಳೂರು ಕೇಂದ್ರಲೋಕಸಭಾ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿರುವ ಪ್ರಕಾಶ್‌ ರೈ.
ಬೆಂಗಳೂರು ಕೇಂದ್ರಲೋಕಸಭಾ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿರುವ ಪ್ರಕಾಶ್‌ ರೈ.
/ಟ್ಟಿಟ್ಟರ್

ಆದರೆ, “ಚುನಾವಣೆ ಸಿನಿಮಾಗಿಂತ ಭಿನ್ನವಾಗಿದ್ದು, ಭಾಷಣ ಕೇಳಿದವರೆಲ್ಲರೂ ಮತಹಾಕಲಾರರು. ಇನ್ನೂ ಸ್ಲಂ ಭಾಗದ ಮತಗಳ ಪೈಕಿ ಬಹುಪಾಲು ಮತ ಕಾಂಗ್ರೆಸ್ ನ ಮತಗಳಾಗಿದ್ದು ಪ್ರಕಾಶ ರಾಜ್ ಈ ಮತಗಳನ್ನು ಒಡೆದರೆ ತಮಗೆ ಲಾಭವಾಗುತ್ತದೆ. ಅಲ್ಲದೆ ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷದ ಜೊತೆಗಿನ ಮೈತ್ರಿಯೂ ಬಿಜೆಪಿಗೆ ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡಿದೆ. ಹೀಗಾಗಿ ಬಿಜೆಪಿ ಈಬಾರಿ ಹಿಂದೆಂದಿಗಿಂತಲೂ ಸುಲಭವಾಗಿ ಗೆಲುವು ಸಾಧಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಬಿಜೆಪಿ ಯುವ ಘಟಕದ ಕಾರ್ಯದರ್ಶಿ ಮಂಜುನಾಥ್.

ಮೋದಿ ಅಲೆಯಲ್ಲಿ ಮೋಹನ್ ಬಜಾವ್

ಹಾಗೆ ನೋಡಿದರೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಗೆಲುವು ಸಾಧಿಸಿರುವ ಸಂಸದ ಪಿ.ಸಿ. ಮೋಹನ್‌ಗೆ ಕ್ಷೇತ್ರದಲ್ಲಿ ಒಳ್ಳೆಯ ಹೆಸರಿಲ್ಲ ಆದರೆ, ಕೆಟ್ಟ ಹೆಸರೂ ಇಲ್ಲ ಎಂಬುದು ಅಷ್ಟೇ ನಿಜ.

ಮಹದೇವಪುರ ಹಾಗೂ ರಾಜಾಜಿನಗರದಲ್ಲಿ ಕಿರು ಅರಣ್ಯ ಹಾಗೂ ಪಾರ್ಕ್ ಅಭಿವೃದ್ಧಿಯ ಹೊರತಾಗಿ ಅವರು ಕ್ಷೇತ್ರಕ್ಕಾಗಿ ಬೇರೇನೂ ಕೆಲಸ ಮಾಡಿಲ್ಲ. ತಮ್ಮ ಸಂಸದರ ನಿಧಿಯನ್ನು ಸಮರ್ಪಕವಾಗಿ ಬಳಸಿಲ್ಲ ಎಂಬ ಆರೋಪ ಅವರ ಮೇಲಿದೆ. ಆದರೆ, ಬಿಜೆಪಿ ಪಕ್ಷಕ್ಕೆ ಕೋಮುವಾದಿ ಹಣೆಪಟ್ಟಿ ಇದ್ದಾಗ್ಯೂ ಸಂಸದ ಪಿ.ಸಿ. ಮೋಹನ್ ಎಂದಿಗೂ ಹೀಗೆ ನಡೆದುಕೊಂಡವರಲ್ಲ. ಎಲ್ಲರನ್ನೂ ಸಮಾನವಾಗಿಯೇ ಕಾಣುತ್ತಿದ್ದರು ಎಂಬುದು ಅವರ ಬಗ್ಗೆ ಕೇಳಿ ಬರುತ್ತಿರುವ ಕೆಲವು ಒಳ್ಳೆಯ ಮಾತುಗಳು.

ಇನ್ನೂ ಬಹುಪಾಲು ದಲಿತರು ಹಾಗೂ ಕೂಲಿ ಕಾರ್ಮಿಕರೆ ಇರುವ ಸ್ಲಂ ಭಾಗಗಳಲ್ಲಿ ಈಗಲೂ ಮೋದಿ ಪರ ಅಲೆ ಇದೆ. ರಾಜಾಜಿನಗರ, ಮಹದೇವಪುರ ಹಾಗೂ ಸರ್ವಜ್ಞನಗರದಲ್ಲಿ ಬಿಜೆಪಿ ಗೆಲ್ಲಲು ಮೋದಿ ಅಲೆಯೇ ಕಾರಣ ಎಂದೂ ವ್ಯಾಖ್ಯಾನಿಸಲಾಗುತ್ತಿದೆ. ಹಾಗಾಗಿ ಈ ಭಾರಿಯೂ ಮೋದಿಯ ಅಲೆಯಲ್ಲೇ ತೇಲುತ್ತಾ ಮೂರನೇ ಬಾರಿ ಸಂಸತ್ ಪ್ರವೇಶಿಸುವ ಉಮೇದಿನಲ್ಲಿದ್ದಾರೆ ಪಿ.ಸಿ. ಮೋಹನ್.

ಕಾಂಗ್ರೆಸ್‌ಗೆ ಸಮರ್ಥ ಕ್ಯಾಂಡಿಡೇಟ್ ಇಲ್ಲ:

ಬಿಜೆಪಿಯ ಪಿ.ಸಿ. ಮೋಹನ್ ಎದುರು ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಪ್ರಸ್ತುತ ಸಮರ್ಥ ಅಭ್ಯರ್ಥಿಯೇ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಲೋಕಸಭಾ ಚುನಾವಣಾ ಇತಿಹಾಸದ ಕಡೆಗೆ ಒಮ್ಮೆ ಕಣ್ಣಾಯಿಸಿದರೆ ಬೆಂಗಳೂರು ಕೇಂದ್ರಕ್ಕೆ ಸಮರ್ಥ ಅಭ್ಯರ್ಥಿಯ ಆಯ್ಕೆಯಲ್ಲಿ ಕಾಂಗ್ರೆಸ್ ಎಡವಿರುವುದು ಗೋಚರಿಸುತ್ತದೆ.

2004ರ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಮಾಜಿ ಹಿರಿಯ ಪೊಲೀಸ್ ಅಧಿಕಾರಿ ಹೆಚ್‌.ಟಿ. ಸಾಂಗ್ಲಿಯಾನ ಇದೇ ಪಿ.ಸಿ. ಮೋಹನ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದರು. ಆದರೆ, 2009ರಲ್ಲಿ ಪರಿಸ್ಥಿತಿ ಬದಲಾಗಿತ್ತು.

2009ರ ಚುನಾವಣೆಯಲ್ಲೂ ಸ್ಪರ್ಧಿಸಿದ್ದ ಸಾಂಗ್ಲಿಯಾನ ಕೇವಲ 36 ಸಾವಿರ ಮತಗಳ ಅಂತರದಿಂದ ಪಿ.ಸಿ. ಮೋಹನ್ ವಿರುದ್ಧ ಸೋಲನುಭವಿಸಿದ್ದರು. ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಜಮೀರ್ ಅಹಮದ್ ಖಾನ್ 1.6 ಲಕ್ಷ ಮತಗಳನ್ನು ಪಡೆದಿದ್ದರು. ಇದು ಕಾಂಗ್ರೆಸ್ ಸೋಲಿಗೆ ಕಾರಣವಾಗಿತ್ತು ಎಂದು ವ್ಯಾಖ್ಯಾನಿಸಲಾಗಿತ್ತು.

ಆದರೆ, 2014ರ ವೇಳೆ ಪರಿಸ್ಥಿತಿ ಸಂಪೂರ್ಣ ಬದಲಾಗಿತ್ತು. ಬಿಜೆಪಿ ಕ್ಷೇತ್ರದಲ್ಲಿ ಸಂಪೂರ್ಣ ಹಿಡಿತ ಸಾಧಿಸಿತ್ತು. ಪರಿಣಾಮ 2009ರ ಚುನಾವಣೆಯಲ್ಲಿ ಕೇವಲ 36 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಬಿಜೆಪಿಯ ಮೋಹನ್ 2014ರಲ್ಲಿ ಕಾಂಗ್ರೆಸ್‌ ಪಕ್ಷದ ರಿಜ್ವಾನ್ ಅರ್ಷದ್ ವಿರುದ್ಧ ಬರೋಬ್ಬರಿ 1.4 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಎನ್‌ಎಸ್‌ಯುಐ ಕಾಲೇಜು ಅಧ್ಯಕ್ಷನಾಗುವ ಮೂಲಕ ತನ್ನ ರಾಜಕೀಯ ಪಯಣ ಆರಂಭಿಸಿದ್ದ ರಿಜ್ವಾನ್ ಅರ್ಷದ್ ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ನೇಮಕವಾಗಿದ್ದರು. ಯೂತ್ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯದರ್ಶಿಯಾಗುತ್ತಿದ್ದಂತೆ ಲೋಕಸಭಾ ಚುನಾವಣಾ ಟಿಕೆಟ್ ಅವರನ್ನು ಅರಸಿ ಬಂದಿತ್ತು. ಆದರೆ, ಜನರ ನಡುವೆ ಅವರಿಗೆ ಪರಿಚಯವಿರಲಿಲ್ಲ. ಪರಿಣಾಮ 2014ರ ಚುನಾವಣೆಯಲ್ಲಿ ಸೋಲನುಭವಿಸಬೇಕಾಯಿತ್ತು.

ಸೋಲಿನ ನಂತರ ಅವರು ಮತ್ತೆ ಕ್ಷೇತ್ರಕ್ಕೆ ಭೇಟಿ ಕೊಟ್ಟು ಕಾರ್ಯಕರ್ತರನ್ನು ಸಂಘಟಿಸಿ ಪ್ರಬಲರಾಗುವ ಕೆಲಸಕ್ಕೆ ಮುಂದಾಗಬೇಕಿತ್ತು. ಆದರೆ, ಸೋತ ನಂತರ ಅರ್ಷದ್ ಕ್ಷೇತ್ರದ ಕಡೆಗೆ ತಲೆಹಾಕಿಯೇ ಇಲ್ಲ ಎಂಬುದು ಅವರ ಮೇಲಿನ ಮೊದಲ ಆರೋಪ.

ಹೀಗಾಗಿ ಪ್ರಸ್ತುತ ಕ್ಷೇತ್ರದ ಶೇ.70 ರಷ್ಟು ಜನರಿಗೆ ರಿಜ್ವಾನ್ ಅರ್ಷದ್ ಎಂದರೆ ಯಾರೂ ಎಂಬುದು ಸಹ ತಿಳಿದಿಲ್ಲ. ಇನ್ನು ಕಾಂಗ್ರೆಸ್ ಈವರೆಗೆ ಟಿಕೆಟ್ ಘೋಷಿಸದ ಪರಿಣಾಮ ಈ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಇನ್ನೂ ಅಪರಿಚಿತನಾಗಿಯೇ ಉಳಿದಿರುವುದು ಬಿಜೆಪಿಗೆ ದೊಡ್ಡ ಲಾಭವಾಗಿ ಪರಿಣಮಿಸಿದೆ. ಒಂದು ವೇಳೆ ರಿಜ್ವಾನ್ ಅರ್ಷದ್ ಅವರಿಗೆ ಈ ಬಾರಿಯೂ ಟಿಕೆಟ್ ಘೋಷಣೆಯಾದರೆ ಬಿಜೆಪಿಯ ಗೆಲುವು ಇನ್ನೂ ಸುಲಭವಾಗಲಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ಒಟ್ಟಾರೆ ಸಮೀಕ್ಷೆಗಳು ಏನೇ ಹೇಳಿದರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಜಿದ್ದಾ ಜಿದ್ದಿ ಹೋರಾಟಕ್ಕೆ ಸಾಕ್ಷಿಯಾಗುವುದಂತೂ ನಿಜ. ಇನ್ನೂ ಪ್ರಕಾಶ್ ರಾಜ್ ಪ್ರವೇಶದಿಂದ ಈ ಕ್ಷೇತ್ರಕ್ಕೆ ತಾರಾ ಮೆರುಗು ಬಂದಿದೆ. ಚುನಾವಣೆಗೆ ಇನ್ನೂ ಒಂದು ತಿಂಗಳು ಬಾಕಿ ಇದ್ದು ಅಷ್ಟರೊಳಗೆ ಇಂದಿನ ಪರಿಸ್ಥಿತಿಯೂ ಬದಲಾಗಿ ಸಮೀಕ್ಷೆಗಳು ಉಲ್ಟಾ ಹೊಡೆಯುವ ಸಾಧ್ಯತೆಯೂ ಇದೆ.