samachara
www.samachara.com
ಟಿಕೆಟ್ ಹಂಚಿಕೆಗೂ ಮುನ್ನವೇ ಬಿಜೆಪಿಯೊಳಗೆ ಭಿನ್ನಮತ; ನಾಯಕರ ನಡುವೆ ಹಗ್ಗ ಜಗ್ಗಾಟ
COVER STORY

ಟಿಕೆಟ್ ಹಂಚಿಕೆಗೂ ಮುನ್ನವೇ ಬಿಜೆಪಿಯೊಳಗೆ ಭಿನ್ನಮತ; ನಾಯಕರ ನಡುವೆ ಹಗ್ಗ ಜಗ್ಗಾಟ

ಅನಂತಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ ಮತ್ತು ನಳಿನ್‍ ಕುಮಾರ್ ಕಟೀಲ್‌ಗೆ ಟಿಕೆಟ್‌ ನೀಡುವ ವಿಚಾರದಲ್ಲಿ ಪಕ್ಷ ಮತ್ತು ಆರ್‌ಎಸ್‌ಎಸ್‌ನೊಳಗೆ ಎರಡು ಬಣ ಸೃಷ್ಟಿಯಾಗಿದೆ. ಇದು ಟಿಕೆಟ್ ಹಂಚಿಕೆ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ನಡೆದ ಬೆಳವಣಿಗೆ.

Team Samachara

ಮಿಷನ್-22 ಗುರಿಯೊಂದಿಗೆ ಲೋಕಸಭಾ ಚುನಾವಣೆಗೆ ಧುಮುಕಲು ಸಜ್ಜಾಗಿರುವ ಬಿಜೆಪಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮುನ್ನವೇ ಭಿನ್ನಮತ ಸ್ಫೋಟಗೊಂಡಿದೆ.

ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರಕನ್ನಡ, ಬೆಳಗಾವಿ, ಬಳ್ಳಾರಿ, ವಿಜಯಪುರ, ತುಮಕೂರು ಸೇರಿದಂತೆ ಒಟ್ಟು 8ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಹಾಲಿ ಸಂಸದರು ಸೇರಿದಂತೆ ಸಂಭವನೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಕ್ಕೆ ಶಾಸಕರು ಹಾಗೂ ಪಕ್ಷದ ಮುಖಂಡರಿಂದಲೇ ವಿರೋಧ ವ್ಯಕ್ತವಾಗಿದೆ.

ಹಲವರು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿ ಭಿನ್ನಮತ ಸಾರುವ ಮುನ್ಸೂಚನೆ ನೀಡಿದ್ದು, ಇದು ಪಕ್ಷದಲ್ಲಿ ಇನ್ನೊಂದು ರೀತಿಯ ಸಮಸ್ಯೆಯನ್ನು ಸೃಷ್ಟಿಸಿದೆ. ಪಕ್ಷದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.

ಪಕ್ಷದ ಮೂಲಗಳ ಪ್ರಕಾರ, “ನಾಲ್ವರು ಹಾಲಿ ಸಂಸದರಾದ ಶೋಭಾ ಕರಂದ್ಲಾಜೆ, ಅನಂತ್‌ ಕುಮಾರ್‌ ಹೆಗಡೆ, ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಪಿ. ಸಿ. ಗದ್ದಿಗೌಡರ್‌ಗೆ ಟಿಕೆಟ್‌ ನೀಡುವುದಕ್ಕೆ ಅಮಿತ್‌ ಶಾ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದೆ. ಆದರೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮಾತ್ರ ಇವರಿಗೆ ಟಿಕೆಟ್‌ ಕೊಡಿಸಲೇಬೇಕೆಂದು ಪಟ್ಟು ಹಿಡಿದು ಕೂತಿದ್ದಾರೆ.”

ಹಾಗಂತ ಭಿನ್ನಮತೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ನಿರೀಕ್ಷಿತ ಗುರಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂಬ ವಾಸ್ತವವೂ ರಾಜ್ಯಾಧ್ಯಕ್ಷರು ಗಮನಿಸಿದ್ದಾರೆ. ಹೀಗಾಗಿ ಮುನಿಸಿಕೊಂಡಿರುವ ಶಾಸಕರು, ಜಿಲ್ಲಾಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳಿಗೆ ಕರೆ ಮಾಡಿ ಮನವೊಲಿಸುವ ಕಸರತ್ತಿಗೆ ಯಡಿಯೂರಪ್ಪ ಕೈ ಹಾಕಿದ್ದಾರೆ. ಬಿಎಸ್‌ವೈ ಕಡೆಯಿಂದ ಈ ಹಿನ್ನೆಲೆಯಲ್ಲಿ ಕರೆಗಳು ಹೋಗಿರುವುದನ್ನು ಕೆಲವು ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

"ಕೆಲವು ಸಂಸದರಿಗೆ ಟಿಕೆಟ್ ನೀಡಲು ನಮಗೂ ಕೂಡ ನಿಮ್ಮಂತೆ ಇಷ್ಟವಿಲ್ಲ. ಆದರೆ ಈಗ ಹೊಸ ಅಭ್ಯರ್ಥಿಗಳನ್ನು ಹುಡುಕಿ, ಅವರನ್ನು ಪಕ್ಷಕ್ಕೆ ತಂದು ಅಭ್ಯರ್ಥಿಯನ್ನಾಗಿ ಮಾಡಿ, ಕ್ಷೇತ್ರದಲ್ಲಿ ಮತದಾರರಿಗೆ ಮುಖ ಪರಿಚಯ ಮಾಡಿಕೊಡುವಷ್ಟರಲ್ಲಿ ಮತದಾನವೇ ಮುಗಿಯುತ್ತದೆ. ಇಷ್ಟವೋ ಕಷ್ಟವೋ ಇದೊಂದು ಬಾರಿ ಸಹಿಸಿಕೊಂಡು ಇರಿ. ಎಲ್ಲವನ್ನು ಸರಿಪಡಿಸುತ್ತೇನೆ," ಎಂಬ ಆಶ್ವಾಸನೆಯನ್ನು ಬಿಎಸ್‌ವೈ ವ್ಯಕ್ತಪಡಿಸಿದ್ದಾರೆ.

ಎಲ್ಲೆಲ್ಲಿ ಭಿನ್ನಮತ?

ತುಮಕೂರಿನಲ್ಲಿ ಮಾಜಿ ಸಂಸದ ಜಿ. ಎಚ್. ಬಸವರಾಜ್‍ಗೆ ಟಿಕೆಟ್ ನೀಡುವುದು ಜಿಲ್ಲಾ ಮುಖಂಡರಿಗೆ ಸುತಾರಾಂ ಇಷ್ಟವಿಲ್ಲ. ಯಾವುದೇ ಶಾಸಕರನ್ನು ಅವರು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬ ಆರೋಪ ಬಿಜೆಪಿಗೆ ಸೇರ್ಪಡೆಯಾದ ದಿನದಿಂದಲೂ ಕೇಳಿಬರುತ್ತಿದೆ.

ಬಸವರಾಜ್‍ಗೆ ಟಿಕೆಟ್ ನೀಡಬಾರದೆಂದು ಮಾಜಿ ಸಚಿವ ಸೊಗಡು ಶಿವಣ್ಣ, ಸುರೇಶ್‍ಗೌಡ ಸೇರಿದಂತೆ ಅನೇಕರು ಪಟ್ಟು ಹಿಡಿದಿದ್ದಾರೆ. ಜತೆಗೆ ಹಾಲಿ ಶಾಸಕರಾದ ಮಾಧುಸ್ವಾಮಿ, ಬಿ.ಸಿ.ನಾಗೇಶ್, ಮಸಾಲೆ ಜಯರಾಂ ಕೂಡ ವಿರೋಧ ಹೊರ ಹಾಕಿದ್ದಾರೆ.

ಆದರೆ ಯಡಿಯೂರಪ್ಪ ಮಾತ್ರ ಇದೊಂದು ಬಾರಿ ಬಸವರಾಜ್‍ಗೆ ಟಿಕೆಟ್ ಕೊಡಲೇಬೇಕು. ಇದು ಅವರ ಕೊನೆಯ ಚುನಾವಣೆಯಾಗಿರುವುದರಿಂದ ಹೊಂದಿಕೊಂಡು ಹೋಗುವಂತೆ ಜಿಲ್ಲಾ ಮುಖಂಡರಿಗೆ ಸೂಚಿಸಿದ್ದಾರೆ.

ಕೋಟೆ ನಾಡು ಚಿತ್ರದುರ್ಗದಲ್ಲಿ ಮಾಜಿ ಸಚಿವ ಎ. ನಾರಾಯಣ ಸ್ವಾಮಿಗೆ ಟಿಕೆಟ್ ಕೊಡುವುದಕ್ಕೆ ಜಿಲ್ಲಾ ಮುಖಂಡರು ವಿರೋಧಿಸಿದ್ದಾರೆ. ಅದರಲ್ಲೂ ಶಾಸಕರಾದ ಗೂಳಿಹಟ್ಟಿ ಶೇಖರ್, ಚಂದ್ರಪ್ಪ ಸೇರಿದಂತೆ ಮತ್ತಿತರರು ಬೇರೊಬ್ಬರಿಗೆ ಟಿಕೆಟ್ ನೀಡುವಂತೆ ರಾಜ್ಯ ನಾಯಕರಿಗೆ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಭೋವಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭೋವಿ ಮತ್ತು ನಾಯಕ ಸಮುದಾಯ ನಮ್ಮನ್ನು ಕೈ ಹಿಡಿದಿದ್ದರಿಂದ ಆರು ಕ್ಷೇತ್ರಗಳಲ್ಲಿ ನಾವು 5 ಕ್ಷೇತ್ರಗಳನ್ನು ಗೆದ್ದಿದ್ದೇವೆ. ಹೀಗಾಗಿ ಜನಾರ್ಧನ ಸ್ವಾಮಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಒಂದು ವೇಳೆ ನಾರಾಯಣಸ್ವಾಮಿಗೆ ಟಿಕೆಟ್ ನೀಡಿದರೆ ಅವರನ್ನು ಬೆಂಬಲಿಸುವ ಬಗ್ಗೆ ನಾವು ಮರು ಚಿಂತನೆ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.

ಗಡಿ ಜಿಲ್ಲೆ ಬಳ್ಳಾರಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಜಿಲ್ಲೆಯ ಒಂದು ಗುಂಪು ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾದ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರ ಸಹೋದರ ವೆಂಕಟೇಶ್ ಪ್ರಸಾದ್‍ಗೆ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದೆ.

ಆದರೆ ಜಿಲ್ಲೆಯ ಇನ್ನೊಂದು ಗುಂಪು ದೇವೇಂದ್ರಪ್ಪನವರಿಗೆ ಟಿಕೆಟ್ ನೀಡುವಂತೆ ಒತ್ತಡ ಹಾಕುತ್ತಿದೆ. ಈ ಬೆಳವಣಿಗೆ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತವನ್ನು ಹುಟ್ಟುಹಾಕಿದ್ದು, ರಾಜ್ಯ ನಾಯಕರನ್ನು ಹೈರಾಣಾಗಿಸಿದೆ.

ರಾಯಚೂರಿನಲ್ಲೂ ಕೂಡ ಕಮಲದ ಪರಿಸ್ಥಿತಿ ಇದೇ ಹಾದಿಯಲ್ಲಿದೆ. ಶಾಸಕ ಶಿವನಗೌಡ ನಾಯಕ್ ತಮ್ಮ ತಾಯಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಆದರೆ ಪಕ್ಷದ ವರಿಷ್ಠರು ಅಮರೇಶ್ ನಾಯಕ್‍ಗೆ ಮಣೆ ಹಾಕಲು ಮುಂದಾಗಿರುವುದು ಶಿವನಗೌಡ ನಾಯಕ್ ಅವರ ಕಣ್ಣು ಕೆಂಪಾಗಿಸಿದೆ.

ಹಾಲಿ ಸಂಸದರಿಗೂ ಭಿನ್ನಮತದ ಬಿಸಿ:

ವಿಜಯಪುರದಲ್ಲಿ ಸಚಿವ ರಮೇಶ್ ಜಿಗಜಿಣಗಿಗೆ ಟಿಕೆಟ್ ನೀಡದಂತೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿಯೇ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಹಾಲಿ ಸಂಸದರಾದ ಅನಂತ್‌ಕುಮಾರ್‌ ಹೆಗಡೆ, ಪಿ.ಸಿ. ಗದ್ದಿಗೌಡರ್‌, ಶೋಭಾ ಕರಂದ್ಲಾಜೆ, ನಳಿನ್‌ ಕುಮಾರ್‌ ಕಟೀಲ್‌
ಹಾಲಿ ಸಂಸದರಾದ ಅನಂತ್‌ಕುಮಾರ್‌ ಹೆಗಡೆ, ಪಿ.ಸಿ. ಗದ್ದಿಗೌಡರ್‌, ಶೋಭಾ ಕರಂದ್ಲಾಜೆ, ನಳಿನ್‌ ಕುಮಾರ್‌ ಕಟೀಲ್‌

ಇನ್ನು ಬೆಳಗಾವಿಯಲ್ಲಿ ಸುರೇಶ್ ಅಂಗಡಿ, ಧಾರವಾಡದಲ್ಲಿ ಪ್ರಹ್ಲಾದ್ ಜೋಶಿ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೂ ಟಿಕೆಟ್ ಕೊಡುವುದರ ಬಗ್ಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದೆ.

ಅದರಲ್ಲೂ ಅನಂತಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ ಮತ್ತು ನಳಿನ್‍ ಕುಮಾರ್ ಕಟೀಲ್ ವಿಚಾರದಲ್ಲಿ ಪಕ್ಷ ಮತ್ತು ಆರ್‌ಎಸ್‌ಎಸ್‌ನೊಳಗೇ ಎರಡು ಬಣ ಸೃಷ್ಟಿಯಾಗಿದೆ. ಸದ್ಯಕ್ಕೆ ಸೂಕ್ತ ಅಭ್ಯರ್ಥಿಗಳ ಕೊರತೆಯ ನೆಪದಲ್ಲಿ ಅನಂತ್‌ಕುಮಾರ್‌ ಹೆಗಡೆ ಮತ್ತು ನಳಿನ್‌ ಕುಮಾರ್‌ ಕಟೀಲ್‌ ಟಿಕೆಟ್‌ ಪಡೆಯುವ ಸಾಧ್ಯತೆ ಇದೆ.

ಆದರೆ ಉಡುಪಿ ಚಿಕ್ಕಮಗಳೂರಿನಲ್ಲಿ ಮಾತ್ರ ಶೋಭಾ ಕರಂದ್ಲಾಜೆ ಭಾರಿ ವಿರೋಧ ಎದುರಿಸುತ್ತಿದ್ದಾರೆ. ಜಯಪ್ರಕಾಶ್‌ ಹೆಗ್ಡೆ ಎಂಬ ಚಿರಪರಿಚಿತ ಹೆಸರು ಇಲ್ಲಿ ಪರ್ಯಾಯ ನಾಯಕನ ಆಯ್ಕೆಯನ್ನು ಪಕ್ಷಕ್ಕೆ ನೀಡಿದೆ. ಹೀಗಾಗಿ ಇಲ್ಲಿನ ಹೆಚ್ಚಿನ ಸ್ಥಳೀಯ ಬಿಜೆಪಿ ನಾಯಕರು ಹೆಗ್ಡೆಯನ್ನೇ ಅಭ್ಯರ್ಥಿ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.

ಹೀಗೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿ ಪಕ್ಷದೊಳಗೆ ಹುಟ್ಟಿಕೊಂಡಿರುವ ವಿರೋಧ, ನರೇಂದ್ರ ಮೋದಿ ಅಲೆಯಲ್ಲಿ ಗೆದ್ದೇ ಬಿಡುತ್ತೇವೆ ಎಂಬ ಅದಮ್ಯ ವಿಶ್ವಾಸದಲ್ಲಿದ್ದ ಬಿಜೆಪಿ ನಾಯಕರಿಗೆ ದಿಗಿಲು ಹುಟ್ಟಿಸಿದೆ. ಸ್ಥಳೀಯರ ವಿರೋಧವನ್ನು ಲೆಕ್ಕಿಸದೆ ಪುನಃ ಹಳೆ ಮುಖಗಳಿಗೆ ಮಣೆ ಹಾಕಿ ಲೆಕ್ಕಾಚಾರ ತಪ್ಪಾದರೆ ಎಂಬ ಆತಂಕ ಕೇಂದ್ರದ ನಾಯಕರನ್ನು ಕಾಡುತ್ತಿದೆ. ಸಾಮಾನ್ಯವಾಗಿ ಚುನಾವಣೆಗೆ ಉಳಿದವರಿಗಿಂತ ಮುಂಚೆಯೇ ಅಖಾಡಕ್ಕೆ ಇಳಿಸುವ ಬಿಜೆಪಿ ಇದೇ ಕಾರಣಕ್ಕೆ ಈ ಬಾರಿ ಕರ್ನಾಟಕ ಸೀಟು ಹಂಚಿಕೆ ಮಾಡಲು ಹಗ್ಗ ಜಗ್ಗಾಡುತ್ತಿದೆ ಎನ್ನುತ್ತಿದ್ದಾರೆ ಪಕ್ಷದ ನಾಯಕರು.