samachara
www.samachara.com
ದೇವೇಗೌಡ, ಸಿದ್ದರಾಮಯ್ಯ ಜಂಟಿ ಪತ್ರಿಕಾಗೋಷ್ಠಿ: ಬಿಜೆಪಿ ವಿರುದ್ಧ ಮೈತ್ರಿ ಪಕ್ಷಗಳ ಕಹಳೆ
COVER STORY

ದೇವೇಗೌಡ, ಸಿದ್ದರಾಮಯ್ಯ ಜಂಟಿ ಪತ್ರಿಕಾಗೋಷ್ಠಿ: ಬಿಜೆಪಿ ವಿರುದ್ಧ ಮೈತ್ರಿ ಪಕ್ಷಗಳ ಕಹಳೆ

ಕೋಮುವಾದಿಗಳ ಆಟಕ್ಕೆ ಕಡಿವಾಣ ಹಾಕುವ ಸಲುವಾಗಿ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಲಿದ್ದು ಈ ಬಾರಿ ರಾಜ್ಯದಲ್ಲಿ ಬಿಜೆಪಿ ಒಂದಂಕಿಯನ್ನೂ ದಾಟಲು ಬಿಡುವುದಿಲ್ಲ ಎಂದು ಹೆಚ್‌.ಡಿ. ದೇವೇಗೌಡ ಗುಡುಗಿದ್ದಾರೆ.

Team Samachara

ಕೋಮುವಾದಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ತಕ್ಕ ಪಾಠ ಕಲಿಸುವ ಸಲುವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಮೈತ್ರಿ ಸಾಧಿಸಿದ್ದು, ಎಲ್ಲರೂ ಒಗ್ಗೂಡಿಯೇ ಜನತಾ ನ್ಯಾಯಾಲಯಕ್ಕೆ ಹೋಗಲು ತೀರ್ಮಾನಿಸಿದ್ದೇವೆ ಎಂದು ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ತಿಳಿಸಿದ್ದಾರೆ.

ಎರಡೂ ಪಕ್ಷದ ನಾಯಕರು ಒಟ್ಟಾಗಿ ಚುನಾವಣೆ ಎದುರಿಸುವ ಕುರಿತು ಮಾಹಿತಿ ನೀಡುವ ಸಲುವಾಗಿ ಮಂಗಳವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಉಬಯ ಪಕ್ಷಗಳ ಪತ್ರಿಕಾಗೋಷ್ಠಿ ನಡೆಸಲಾಯಿತು. ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ, ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಉಭಯ ಪಕ್ಷದ ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಹೆಚ್‌. ಡಿ. ದೇವೇಗೌಡ, “ದೇಶದಲ್ಲಿ ಕೋಮುವಾದಿಗಳ ಆಟಕ್ಕೆ ಕಡಿವಾಣ ಹಾಕುವ ಸಲುವಾಗಿ ಜಾತ್ಯಾತೀತ ಪಕ್ಷಗಳು ಒಗ್ಗಟ್ಟಾಗಿವೆ. ರಾಜ್ಯದಲ್ಲೂ ಕಾಂಗ್ರೆಸ್-ಜೆಡಿಎಸ್ ಒಂದಾಗಿದ್ದು ಒಟ್ಟಾಗಿಯೇ ಚುನಾವಣೆ ಎದುರಿಸಲು ನಿರ್ಧರಿಸಿದ್ದೇವೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಒಂದಂಕಿಯನ್ನೂ ದಾಟಲು ಬಿಡುವುದಿಲ್ಲ. ಈ ಸಂಬಂಧ ಮಾರ್ಚ್ 31 ರಂದು ರಾಹುಲ್‍ಗಾಂಧಿ ನೇತೃತ್ವದಲ್ಲಿ ಐತಿಹಾಸಿಕ ಜಂಟಿ ಸಮಾವೇಶ ನಡೆಸುವ ಮೂಲಕ ಮೈತ್ರಿ ಪಕ್ಷಗಳ ಚುನಾವಣೆ ಪ್ರಚಾರಕ್ಕೆ ವಿದ್ಯುಕ್ತವಾಗಿ ರಣಕಹಳೆ ಮೊಳಗಿಸಲು ತೀರ್ಮಾನಿಸಲಾಗಿದೆ,” ಎಂದು ಅವರು ಮಾಹಿತಿ ನೀಡಿದರು.

“ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಭಿನ್ನಾಭಿಪ್ರಾಯವಿದೆ. ಹೀಗಾಗಿ ಹಾಸನದಲ್ಲಿ ಹಾಗಾಗುತ್ತದೆ. ಮೈಸೂರಿನಲ್ಲಿ ಹೀಗಾಗುತ್ತದೆ ಎಂದೆಲ್ಲ ಊಹಾಪೋಹಗಳು ಹರಿದಾಡುತ್ತಿವೆ. ಈ ಊಹಾಪೋಹಗಳಿಗೆ ತೆರೆ ಎಳೆಯುವ ಸಲುವಾಗಿ ಇಂದು ಉಭಯ ಪಕ್ಷಗಳ ನಾಯಕರು ಸಭೆ ನಡೆಸಿದ್ದು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯಲಾಗಿದೆ” ಎಂದು ಸ್ಪಷ್ಟೀಕರಣ ನೀಡಿದರು.

“ಮಾರ್ಚ್ 31ರ ಉಭಯ ಪಕ್ಷಗಳ ನಾಯಕರು ರಾಜ್ಯಾದ್ಯಂತ ಚುನಾವಣಾ ಪ್ರಚಾರ ನಡೆಸಲಿದ್ದು ಯಾವ ನಾಯಕರು ಎಲ್ಲಿಗೆ ಹೋಗಬೇಕು ಎಂಬ ಕುರಿತು ಸಧ್ಯದಲ್ಲೇ ತೀರ್ಮಾನಿಸಲಾಗುವುದು. ನಾಯಕರು ಎಲ್ಲೇ ಹೋದರೂ ಇಂತಹ ಪಕ್ಷದ ಅಭ್ಯರ್ಥಿ ಎನ್ನುವ ಬದಲು ಮೈತ್ರಿಕೂಟದ ಅಭ್ಯರ್ಥಿ ಎಂದು ಹೇಳಲು ತೀರ್ಮಾನಿಸಲಾಗಿದೆ. ಯಾವ ಕಾರಣಕ್ಕೂ ನಮ್ಮಲ್ಲಿ ಗೊಂದಲಗಳಿಲ್ಲ” ಎಂದರು.

ಮಹಾಘಟಬಂಧನ್‌ ಬಗ್ಗೆ ಲಘುವಾಗಿ ಪರಿಗಣಿಸದಿರಿ

ಬಿಜೆಪಿ ವಿರುದ್ಧ ವಿರೋಧ ಪಕ್ಷಗಳೆಲ್ಲಾ ಒಂದಾಗಿರುವ ಮಹಾಘಟಬಂಧನ್ ಬಗ್ಗೆ ಇತ್ತೀಚೆಗೆ ಪ್ರಧಾನಿ ‘ಅದೊಂದು ಕಳ್ಳರ ಗುಂಪು’ ಎಂದು ಲಘುವಾಗಿ ಮಾತನಾಡಿದ್ದರು. ಈ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿರುವ ಹೆಚ್‌.ಡಿ. ದೇವೇಗೌಡ, “ಮಹಾಘಟಬಂಧನ್ ಬಗ್ಗೆ ಪ್ರಧಾನಿಯವರ ಶಬ್ಧ ಪ್ರಯೋಗ ಸರಿ ಇಲ್ಲ. ಮಹಾಘಟಬಂಧನ್ ಬಗ್ಗೆ ಮಾತನಾಡುವ ಮುನ್ನ ದೇಶದ 15 ರಾಜ್ಯಗಳಲ್ಲಿ ಬಿಜೆಪಿ ಮೈತ್ರಿ ಪಕ್ಷಗಳ ಜತೆಗೂಡಿ ಅಧಿಕಾರ ನಡೆಸುತ್ತಿದೆ ಎಂಬುದನ್ನು ಅವರು ಮೊದಲು ನೆನಪು ಮಾಡಿಕೊಳ್ಳಲಿ” ಎಂದು ವ್ಯಂಗ್ಯವಾಡಿದರು.

ಇದೇ ಸಂದರ್ಭದಲ್ಲಿ ತಮ್ಮ ಚುನಾವಣಾ ಕಣದ ಬಗ್ಗೆ ಮಾಹಿತಿ ನೀಡಿದ ಅವರು, “ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ? ಎಂಬ ಕುರಿತು ಮಾಧ್ಯಮಗಳು ತುಂಬ ಕುತೂಹಲ ತೋರಿಸುತ್ತಿವೆ. ನಮ್ಮ ರಾಜ್ಯದಿಂದ ಸ್ಪರ್ಧಿಸಿ ಎಂದು ಬೇರೆ ರಾಜ್ಯಗಳ ನಾಯಕರೂ ಕೋರಿದ್ದಾರೆ. ಆದರೆ ಎಲ್ಲಿಂದ ಸ್ಪರ್ಧಿಸಬೇಕು ಅನ್ನುವ ಕುರಿತು ಯೋಚಿಸಲು ಅವಕಾಶ ನೀಡಿ. ಇನ್ನೆರಡು ತಿಂಗಳು ಕಳೆದರೆ ನನಗೆ ಎಂಭತ್ತಾರು ವರ್ಷ ತುಂಬುತ್ತದೆ. ಹೀಗಾಗಿ ಮೂರು ವರ್ಷಗಳ ಹಿಂದೆಯೇ ನಾನು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ನಿರ್ಧರಿಸಿದ್ದೆ.

ಇದೇ ಕಾರಣಕ್ಕಾಗಿ ಹಾಸನದಿಂದ ಸ್ಪರ್ಧಿಸುವಂತೆ ಪ್ರಜ್ವಲ್‍ಗೆ ಹೇಳಿದ್ದೆ. ಈಗ ಒತ್ತಡ ಹೆಚ್ಚಾದ ಕಾರಣ ಮತ್ತೆ ಚುನಾವಣೆ ಕಣಕ್ಕೆ ಬರಲು ನಿಶ್ಚಯಿಸಿದ್ದೇನೆ. ಆದರೆ, ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಕುರಿತು ತೀರ್ಮಾನ ತೆಗೆದುಕೊಂಡಿಲ್ಲ. ಈ ಕುರಿತು ಯೋಚಿಸಿ ಶೀಘ್ರ ಒಂದು ತೀರ್ಮಾನಕ್ಕೆ ಬರುವುದಾಗಿ” ತಿಳಿಸಿದ್ದಾರೆ.

ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ, “ಯಾವ ಕ್ಷೇತ್ರಗಳ ವಿಚಾರದಲ್ಲೂ ಮೈತ್ರಿ ಪಕ್ಷಗಳ ನಡುವೆ ಗೊಂದಲವಿಲ್ಲ. ಚುನಾವಣೆ ಸಲುವಾಗಿ ಪ್ರತಿಯೊಂದು ಲೋಕಸಭಾ ಕ್ಷೇತ್ರಕ್ಕೂ ಉಭಯ ಪಕ್ಷಗಳ ವತಿಯಿಂದ ತಲಾ ಇಬ್ಬರು ವೀಕ್ಷಕರನ್ನು ನೇಮಕ ಮಾಡುತ್ತೇವೆ. ಉಭಯ ಪಕ್ಷಗಳ ಸ್ಥಳೀಯ ನಾಯಕರು, ಕಾರ್ಯಕರ್ತರು ಒಗ್ಗೂಡಿ ಮೈತ್ರಿ ಕೂಟದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಒಟ್ಟಾರೆ ಮೈತ್ರಿ ಪಕ್ಷಗಳ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಊಹಾಪೋಹ ರಾಜಕೀಯ ಪಡಸಾಲೆಯಲ್ಲಿ ಚಾಲ್ತಿಯಲ್ಲಿರುವಾಗಲೇ ಇಂದು ಸುದ್ದಿಗೋಷ್ಠಿ ನಡೆಸಿದ ಮೈತ್ರಿ ಪಕ್ಷಗಳು ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದೆ. ಉಬಯ ಪಕ್ಷಗಳೂ ಒಟ್ಟಾಗಿಯೇ ಚುನಾವಣೆ ಕಣದಲ್ಲಿ ಬಿಜೆಪಿ ಎದುರು ಸೆಣಸುವುದಾಗಿ ಘೋಷಿಸಿದ್ದಾರೆ. ಅತ್ತ ಬಿಜೆಪಿಯಲ್ಲಿಯೂ ಚುನಾವಣಾ ಪ್ರಚಾರಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು ಎರಡೂ ಬಣಗಳ ಚುನಾವಣಾ ಪ್ರಚಾರ ಎಷ್ಟರ ಮಟ್ಟಿಗೆ ಕಾವು ಪಡೆಯಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.